ಬಡರೋಗಿಗಳ ಆಶಾಕಿರಣ ಕೊಡಗಿನ ‘ಸೇವ್ ದಿ ಡ್ರೀಮ್ಸ್’

Update: 2024-10-28 07:25 GMT

ಮಡಿಕೇರಿ: ಒಂದು ವರ್ಷದ ಹಿಂದೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೊಕ್ಲುವಿನಲ್ಲಿ ‘ಮಾನವೀಯತೆಗಿಂತ ಅತೀ ದೊಡ್ಡ ಧರ್ಮ ಮತ್ತೊಂದಿಲ್ಲ’ ಎಂಬ ಧ್ಯೇಯವಾಕ್ಯದಿಂದ ಆರಂಭಗೊಂಡ ‘ಸೇವ್ ದಿ ಡ್ರೀಮ್ಸ್’ ಎಂಬ ಸಂಸ್ಥೆಯು ಬಡರೋಗಿಗಳ ಆಶಾಕಿರಣವಾಗಿದೆ. ಸಮಾಜದಲ್ಲಿ ಮಾರಕರೋಗಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯಲು ಆರ್ಥಿಕ ಬಲವಿಲ್ಲದ ಕುಟುಂಬಗಳಿಗೆ ಸೇವ್ ದಿ ಡ್ರೀಮ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಹಣ ಸಂಗ್ರಹಿಸಿ, ಬಡರೋಗಿಗಳ ಬೆಳಕಾಗಿ ಕಾರ್ಯ ನಿರ್ವಹಿಸುತ್ತಿದೆ. ಸಾಮಾಜಿಕ ಜಾಲತಾಣವನ್ನು ಬಡರೋಗಿಗಳ ಚಿಕಿತ್ಸೆಗೆ ನೆರವಾಗಲು ಆರ್ಥಿಕ ಸಂಪನ್ಮೂಲವನ್ನು ಕ್ರೋಡೀಕರಿಸಲೂ ಬಳಸಬಹುದಾಗಿದೆ ಎಂಬುದಕ್ಕೆ ಕೊಡಗಿನ ಸೇವ್ ದಿ ಡ್ರೀಮ್ಸ್ ಸಂಸ್ಥೆ ಪ್ರಮುಖ ನಿದರ್ಶನವಾಗಿದೆ. ಕ್ಯಾನ್ಸರ್, ಕಿಡ್ನಿ ಫೇಲ್ಯೂರ್, ಬ್ರೈನ್ ಟ್ಯೂಮರ್ ಹೀಗೆ ಮಾರಕ ರೋಗಗಳಿಗೆ ತುತ್ತಾಗಿದ್ದ ಅದೆಷ್ಟೋ ಬಡರೋಗಿಗಳು, ಜಾತಿ, ಮತ, ಭೇದವಿಲ್ಲದೆ, ಸೇವ್ ದಿ ಡ್ರೀಮ್ಸ್ ನೆರವಿನ ಮೂಲಕ ಚಿಕಿತ್ಸೆ ಪಡೆದು ಜೀವನಕ್ಕೆ ಮರಳಿದ್ದಾರೆ.

<ಎಲ್ಲವೂ ಪಾರದರ್ಶಕ, ಎಲ್ಲರಿಗೂ ಮಾದರಿ: ಮಾರಕ ಕಾಯಿಲೆಗೆ ತುತ್ತಾಗಿ ಚಿಕಿತ್ಸೆ ಪಡೆಯಲು ಆರ್ಥಿಕವಾಗಿ ದುರ್ಬಲವಾಗಿರುವ ರೋಗಿ ಅಥವಾ ರೋಗಿಯ ಸಂಬಂಧಿಕರು ಸೇವ್ ದಿ ಡ್ರೀಮ್ಸ್ ಸಂಸ್ಥೆಯೊಂದಿಗೆ ನೆರವಿಗೆ ಸಂಪರ್ಕಿಸಿದರೆ ಸೇವ್ ದಿ ಡ್ರೀಮ್ಸ್ ತಂಡ ರೋಗಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತರವೇ ವೀಡಿಯೊ ಮಾಡಿ ಹಣ ಸಂಗ್ರಹಿಸಿ ರೋಗಿಗೆ ನೆರವಾಗುತ್ತದೆ.

ರೋಗಿಯ ಕುಟುಂಬಸ್ಥರ ಹಿನ್ನೆಲೆ, ರೋಗಿಯ ಆರ್ಥಿಕ ಪರಿಸ್ಥಿತಿ, ರೋಗಿಯು ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದಾರೆ ರೋಗಿ ವಾಸ ಮಾಡುತ್ತಿರುವ ಊರಿನ ದೇವಸ್ಥಾನ ಆಡಳಿತ ಮಂಡಳಿಯ ಪತ್ರ, ಮುಸ್ಲಿಮ್ ಆಗಿದ್ದರೆ ಮಸೀದಿ ಸಮಿತಿ ಹಾಗೂ ಕ್ರಿಶ್ಚಿಯನ್ ಆಗಿದ್ದರೆ ಚರ್ಚ್ ಕಮಿಟಿ ಪತ್ರದೊಂದಿಗೆ ಸ್ಥಳೀಯ ಗ್ರಾಪಂ ಪತ್ರ ಕೂಡ ಸೇವ್ ದಿ ಡ್ರೀಮ್ಸ್ ಸಂಸ್ಥೆಗೆ ನೀಡಬೇಕು.

ಅದಲ್ಲದೆ ರೋಗಿ ಯಾವ ಕಾಯಿಲೆಯಿಂದ ಬಳಲುತ್ತಿದ್ದಾರೆ?, ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು?, ಅದರೊಂದಿಗೆ ಚಿಕಿತ್ಸೆ ಪಡೆಯಲು ಎಷ್ಟು ಹಣ ವೆಚ್ಚವಾಗಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಸೇವ್ ದಿ ಡ್ರೀಮ್ಸ್ ತಂಡವು ಆಸ್ಪತ್ರೆಯಿಂದ ಪಡೆಯುತ್ತದೆ. ಅದಾದ ನಂತರ ರೋಗಿಯ ಊರಿನವರು ವೀಡಿಯೊ ಮುಖಾಂತರ ರೋಗಿಯು ಯಾವ ರೋಗಕ್ಕೆ ತುತ್ತಾಗಿದ್ದಾನೆ?, ಎಷ್ಟು ಹಣ ಬೇಕಾಗಬಹುದು? ಹೀಗೆ ಸಂಪೂರ್ಣ ಮಾಹಿತಿಯನ್ನು ಜನರ ಮುಂದಿಟ್ಟು ನೇರವಾಗಿ ರೋಗಿಯ ಬ್ಯಾಂಕ್ ಖಾತೆಯನ್ನು ನೀಡಿ ಪಾರದರ್ಶಕತೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಣ ಸಂಗ್ರಹಿಸಿ ರೋಗಿಗಳಿಗೆ ಸೇವ್ ದಿ ಡ್ರೀಮ್ಸ್ ನೆರವಾಗುತ್ತದೆ. ರೋಗಿಯ ಚಿಕಿತ್ಸೆಗೆ ಆಸ್ಪತ್ರೆ ನೀಡಿದ ಒಟ್ಟು ವೆಚ್ಚ ಸಂಗ್ರಹವಾದರೆ ತಕ್ಷಣವೇ ಅಕೌಂಟ್ ಬಂದ್ ಮಾಡಲಾಗುತ್ತದೆ.

ಹೆಚ್ಚು ಹಣ ಸಂಗ್ರಹವಾಗಿದ್ದರೆ ಬೇರೆ ಬಡರೋಗಿಗಳಿಗೆ ನೆರವು ನೀಡುತ್ತಿದ್ದಾರೆ. ಅದಲ್ಲದೆ ಎಷ್ಟು ಹಣ ಸಂಗ್ರಹವಾಗಿದೆ?, ಆಸ್ಪತ್ರೆ ಬಿಲ್ ಎಷ್ಟು ? ಸೇರಿ ಎಲ್ಲ ಸಂಪೂರ್ಣ ಬ್ಯಾಂಕ್ ದಾಖಲೆಯೊಂದಿಗೆ ಊರಿನವರ ಮುಂದೆ ಲೆಕ್ಕವನ್ನು ಮಂಡಿಸಲಾಗುತ್ತದೆ. ಒಂದು ವರ್ಷದಿಂದ ದಕ್ಷಿಣ ಭಾರತದ ವಿವಿಧ ಭಾಗಗಳಲ್ಲಿ ಬಡರೋಗಿಗಳಿಗೆ ಸಾಮಾಜಿಕ ಜಾಲತಾಣಗಳ ಮುಖಾಂತರ ನೆರವು ನೀಡುತ್ತಿದೆ.

<64 ಬಡರೋಗಿಗಳಿಗೆ ನೆರವು: ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯದಲ್ಲಿ ಮಾರಕ ರೋಗಗಳಿಂದ ಬಳಲುತ್ತಿರುವ, ಚಿಕಿತ್ಸೆ ಪಡೆಯಲು ಲಕ್ಷಾಂತರ ರೂ. ವೆಚ್ಚ ಭರಿಸಲು ಸಾಧ್ಯವಿಲ್ಲದ 64ಕ್ಕೂ ಹೆಚ್ಚು ರೋಗಿಗಳಿಗೆ ಸೇವ್ ದಿ ಡ್ರೀಮ್ಸ್ ಒಂದೂವರೆ ವರ್ಷದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಮುಖಾಂತರ ಕೋಟ್ಯಂತರ ರೂ. ಸಂಗ್ರಹಿಸಿ ಬಡರೋಗಿಗಳನ್ನು ಜೀವನಕ್ಕೆ ಮರಳಿ ತಂದಿದೆ. ಮಾರಕವಾದ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯಲು ಆರ್ಥಿಕವಾಗಿ ಯಾವುದೇ ಮಾರ್ಗವಿಲ್ಲದ ಭದ್ರಾವತಿಯ ಪುಟ್ಟ ಬಾಲಕಿಗೆ ಒಂದು ಕೋಟಿ ರೂ. ಅಗತ್ಯವಿತ್ತು. ತಕ್ಷಣ ಸೇವ್ ದಿ ಡ್ರೀಮ್ಸ್ ತಂಡವು ಸ್ಪಂದಿಸಿ ವೀಡಿಯೊ ಮುಖಾಂತರ ಒಂದು ಕೋಟಿ ರೂ. ಸಂಗ್ರಹಿಸಿದ್ದು, ಇದೀಗ ಬಾಲಕಿ ಜೀವನಕ್ಕೆ ಮರಳಿದ್ದಾಳೆ. ಕೊಡಗು ಜಿಲ್ಲೆಯ ಗೋಣಿಕೊಪ್ಪಲಿನ ಇಬ್ಬರು ಮಕ್ಕಳ ಚಿಕಿತ್ಸೆಗೆ ಕೇವಲ ಎರಡು ದಿನಗಳಲ್ಲಿ 84 ಲಕ್ಷ ರೂ., ಕೇರಳ ಕಾಸರಗೋಡಿನ ರೋಗಿಯೊಬ್ಬರಿಗೆ 84 ಲಕ್ಷ ರೂ. ಹಾಗೂ ತಮಿಳುನಾಡಿನಲ್ಲಿ ಕೇವಲ ಎರಡು ದಿನಗಳಲ್ಲಿ ರೋಗಿಯೊಬ್ಬರಿಗೆ 32 ಲಕ್ಷ ರೂ. ಸಂಗ್ರಹಿಸಿ ನೆರವಾಗಿತ್ತು. ಜೊತೆಗೆ ನೆರವು ನೀಡಿದ್ದ ರೋಗಿಗಳ ಚಿಕಿತ್ಸೆ ನಂತರವೂ ನಿರಂತರವಾಗಿ ರೋಗಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ವೈದ್ಯರೊಂದಿಗೆ ಸಂಪರ್ಕಿಸಿ ರೋಗಿ ಸಂಪೂರ್ಣ ಗುಣಮುಖವಾಗುವವರೆಗೆ ರೋಗಿ ಮತ್ತು ಅವರ ಕುಟುಂಬದೊಂದಿಗೆ ಸಂಸ್ಥೆಯು ನಿರಂತರವಾಗಿ ಸಂಪರ್ಕದಲ್ಲಿರುತ್ತದೆ. ಸೇವ್ ದಿ ಡ್ರೀಮ್ಸ್ ಕೇವಲ ರೋಗಿಗಳಿಗೆ ನೆರವು ನೀಡುವುದಲ್ಲದೆ ಯಾವುದೇ ಪ್ರಚಾರವಿಲ್ಲದೆ ಬಡ ಹೆಣ್ಣುಮಕ್ಕಳ ಮದುವೆಗೆ ಆರ್ಥಿಕವಾಗಿ ನೆರವು ನೀಡುತ್ತಾ ಬಂದಿದೆ. ಒಂದೂವರೆ ವರ್ಷದಲ್ಲಿ ಕೊಡಗು ಜಿಲ್ಲೆ ಸೇರಿದಂತೆ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯದ ವಿವಿಧ ಭಾಗಗಳಲ್ಲಿ ಯಾವುದೇ ಜಾತಿ, ಧರ್ಮ ನೋಡದೆ ಬಡ ಹೆಣ್ಣುಮಕ್ಕಳ ಮದುವೆಗೆ 50ಕ್ಕೂ ಹೆಚ್ಚು ಪವನ್ ಚಿನ್ನಾಭರಣವನ್ನು ನೀಡಲಾಗಿದೆ. ಅದಲ್ಲದೆ ಸರಕಾರಿ ಶಾಲೆಯಲ್ಲಿ ಓದಿ ಅತೀ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಬಡಕುಟುಂಬಗಳಿಗೆ ತಿಂಗಳಿಗೆ ಆಹಾರದ ಕಿಟ್, ಇದುವರೆಗೆ ಸೂರಿಲ್ಲದ ಮೂವರು ಬಡವರಿಗೆ ಮನೆ ನಿರ್ಮಿಸಿಕೊಟ್ಟಿದೆ.

ಸೇವ್ ದಿ ಡ್ರೀಮ್ಸ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ನಾಪೊಕ್ಲುವಿನ ಜಾಬಿರ್ ನಿಝಾಮಿ, ರೋಗಿ ಯಾವ ಕಾಯಿಲೆಯಿಂದ ಬಳಲುತ್ತಿದ್ದಾನೆ?, ಎಷ್ಟು ಹಣ ಬೇಕಾಗುತ್ತದೆ?, ರೋಗಿಯ ಪ್ರಸಕ್ತ ಸ್ಥಿತಿಗತಿ ಹೀಗೆ ಎಲ್ಲವನ್ನೂ ಅಚ್ಚುಕಟ್ಟಾಗಿ ವಿವರಿಸಿ ನೆರವು ನೀಡಿದ ದಾನಿಗಳ ಮುಂದಿಡುತ್ತಾರೆ. ಸೇವ್ ದಿ ಡ್ರೀಮ್ಸ್‌ನಲ್ಲಿ ನೋಂದಾಯಿತ 7 ಮಂದಿಯ ಸಮಿತಿ ಇದ್ದು, 24 ಗಂಟೆಯೂ ಯಾವುದೇ ಫಲಾಪೇಕ್ಷೆ ಇಲ್ಲದೆ ಬಡರೋಗಿಗಳಿಗಾಗಿ ದುಡಿಯುವ 25ಕ್ಕೂ ಹೆಚ್ಚು ಮಂದಿ ಸದಸ್ಯರೂ ಇದ್ದಾರೆ. ಅದಲ್ಲದೆ ಕರ್ನಾಟಕ, ತಮಿಳುನಾಡು, ಕೇರಳ ಸೇರಿ 3,000ಕ್ಕೂ ಅಧಿಕ ಮಂದಿ ಸದಸ್ಯರೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಮೂರು ರಾಜ್ಯಗಳಲ್ಲಿ ಸೇವ್ ದಿ ಡ್ರೀಮ್ಸ್ ಸದಸ್ಯತ್ವ ಅಭಿಯಾನ ಆರಂಭಿಸಲಾಗಿದೆ. ಸದಸ್ಯತ್ವ ಪಡೆಯಲು ಇಚ್ಛಿಸುವವರು ಮೊಬೈಲ್ ಸಂಖ್ಯೆ 8147449744, 99011 94727 ನ್ನು ಸಂಪರ್ಕಿಸಬಹುದಾಗಿದೆ.

ಸೇವ್ ದಿ ಡ್ರೀಮ್ಸ್ ಒಂದೂವರೆ ವರ್ಷದಲ್ಲಿ 64ಕ್ಕೂ ಹೆಚ್ಚು ಬಡರೋಗಿಗಳಿಗೆ, ಬಡ ಹೆಣ್ಣುಮಕ್ಕಳ ಮದುವೆ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ, ಸೂರಿಲ್ಲದವರಿಗೆ ಮನೆ ನಿರ್ಮಿಸಿ ಸಮಾಜದಲ್ಲಿ ಜಾತಿ,ಮತ ಧರ್ಮ ಭೇದವಿಲ್ಲದೆ ಕಾರ್ಯ ನಿರ್ವಹಿಸುತ್ತಿದೆ. ವೀಡಿಯೊ ಮುಖಾಂತರ ರೋಗಿಗಳಿಗೆ ಹಣ ಸಂಗ್ರಹಿಸುವಾಗ ಎಲ್ಲವನ್ನೂ ಪಾರದರ್ಶಕತೆಯಿಂದ ಮಾಡುತ್ತಾ ಬಂದಿದ್ದು, ದ. ಭಾರತದಲ್ಲಿ ಬಡರೋಗಿಗಳ ಆಶಾಕಿರಣವಾಗಿ ಕಾರ್ಯ ನಿರ್ವಹಿಸುತ್ತಿದೆ.

-ಬಶೀರ್ ಈಶ್ವರಮಂಗಲ, ಅಧ್ಯಕ್ಷರು, ಸೇವ್ ದಿ ಡ್ರೀಮ್ಸ್ ಸಂಸ್ಥೆ

ಸೇವ್ ದಿ ಡ್ರೀಮ್ಸ್ ಒಂದೂವರೆ ವರ್ಷದಿಂದ ಹಲವು ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ಜಾತಿ, ಮತ, ಧರ್ಮ ಹಾಗೂ ಯಾವುದೇ ರಾಜಕೀಯ ಪಕ್ಷದ ಪರವಾಗಿ ಇರದೆ ನಿಷ್ಪಕ್ಷವಾಗಿ ಬಡರೋಗಿಗಳಿಗೆ ನೆರವು ನೀಡುತ್ತಾ ಬಂದಿದ್ದೇವೆ. ಸೇವ್ ದಿ ಡ್ರೀಮ್ಸ್ ಸಂಸ್ಥೆಯನ್ನು ಸಂಪರ್ಕಿಸಲು ನಾಪೊಕ್ಲುವಿನಲ್ಲಿ ಕಚೇರಿಯನ್ನೂ ತೆರೆಯಲಾಗಿದೆ.

-ಜಾಬಿರ್ ನಿಝಾಮಿ, ಡೈರೆಕ್ಟರ್, ಸೇವ್ ದಿ ಡ್ರೀಮ್ಸ್.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಕೆ.ಎಂ ಇಸ್ಮಾಯಿಲ್ ಕಂಡಕರೆ

contributor

Similar News