ಗಬ್ಬರ್ ವಿದಾಯ
ಭಾರತದ ಕ್ರಿಕೆಟ್ ಇತಿಹಾಸದಲ್ಲಿನ ಆಯಾ ಕಾಲಘಟ್ಟಗಳಲ್ಲಿ ಅತ್ಯಂತ ಉನ್ನತಿಯಲ್ಲಿದ್ದ ಅಥವಾ ಜನಪ್ರಿಯತೆಯನ್ನು ಹೊಂದಿದ್ದ ಕ್ರಿಕೆಟ್ ತಾರೆಯರು ತಮ್ಮ ಕ್ರಿಕೆಟ್ ಕೆರಿಯರ್ ನಲ್ಲಿ ಏರಿಳಿತಗಳನ್ನು ಕಂಡಿದ್ದು ಕ್ರಿಕೆಟ್ ಇತಿಹಾಸಕ್ಕೆ ಹೊಸತೇನಲ್ಲ.
ಸುನಿಲ್ ಗವಾಸ್ಕರ್, ಕಪಿಲ್ ದೇವ್, ಸಚಿನ್ ತೆಂಡುಲ್ಕರ್ ಅಝರುದ್ದೀನ್, ಅಜಯ್ ಜಡೇಜಾ, ಸೌರವ್ ಗಂಗುಲಿ, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ವಿ.ವಿ.ಎಸ್. ಲಕ್ಷ್ಮಣ್, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಯುವರಾಜ್ ಸಿಂಗ್, ಮಹೇಂದ್ರ ಸಿಂಗ್ ಧೋನಿ, ಪ್ರಸಕ್ತ ವಿಶ್ವ ಕ್ರಿಕೆಟ್ ನ ಅತಿದೊಡ್ಡ ಹೆಸರುಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇವರೆಲ್ಲರೂ ತಮ್ಮ ತಮ್ಮ ಕ್ರಿಕೆಟ್ ಕೆರಿಯರ್ ನಲ್ಲಿ ಸದಾ ಏರಿಳಿತಗಳನ್ನು ಕಂಡವರೇ.
ಇವಿಷ್ಟೂ ಹೆಸರುಗಳ ಮಧ್ಯೆ ತನ್ನದೇ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ಬರೆದಿಟ್ಟು ಪ್ರತಿಭೆಯಿದ್ದರೂ ಅವಕಾಶ ವಂಚಿತರಾಗಿ ತಂಡದಿಂದ ಹೊರಬಿದ್ದ ಮಿಸ್ಟರ್ ಐ.ಸಿ.ಸಿ. ಗಬ್ಬರ್ ಖ್ಯಾತಿಯ ಶಿಖರ್ ಧವನ್ ನಿನ್ನೆ ಅಂತರ್‌ರಾಷ್ಟ್ರೀಯ ಎಲ್ಲಾ ಮಾದರಿಯ ಕ್ರಿಕೆಟಿಗೆ ಅಧಿಕೃತವಾಗಿ ನಿವೃತ್ತಿಯನ್ನು ಘೋಷಿಸಿದ್ದಾರೆ.
ಅದು ಭಾರತ ಕ್ರಿಕೆಟ್ ನ ಸುವರ್ಣ ಯುಗ.ಧೋನಿ ನಾಯಕತ್ವದಲ್ಲಿ 2007ರ ಟಿ20 ಹಾಗೂ 2011ರ ಏಕದಿನ ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗಿ ಭಾರತ ವಿಶ್ವ ಶ್ರೇಷ್ಠ ಕ್ರಿಕೆಟ್ ನ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿತ್ತು.
ಭಾರತ ವಿಶ್ವ ಶ್ರೇಷ್ಠ ಕಿರೀಟವನ್ನು ತನ್ನದಾಗಿಸಿಕೊಂಡಿದ್ದರೂ ಭಾರತ ಕ್ರಿಕೆಟ್ ತಂಡದಲ್ಲಿ ಕಿರಿಯ ಆಟಗಾರರ ಕೊರತೆಯಿತ್ತು.
ನಾಯಕ ಧೋನಿ 2011ರ ವಿಶ್ವಕಪ್ ಮುಡಿಗೇರಿಸಿಕೊಂಡ ನಂತರ ಭಾರತ ಕಿರಿಯ ಆಟಗಾರರ ಹುಡುಕಾಟದಲ್ಲಿತ್ತು.
2011ರ ವಿಶ್ವಕಪ್ ನಂತರ ಭಾರತದ ಕ್ರಿಕೆಟ್ ದಿಗ್ಗಜ ‘ದಿ ಲೆಜೆಂಡ್’ ಸಚಿನ್ ತೆಂಡುಲ್ಕರ್ ಕ್ರಿಕೆಟ್ ಜೀವನದಿಂದ ನಿವೃತ್ತಿ ಹೊಂದಿದ್ದರು ಹಾಗೂ ಭಾರತದ ಮತ್ತೊಬ್ಬ ಹಿರಿಯ ಆಟಗಾರ ವಿರೇಂದ್ರ ಸೆಹ್ವಾಗ್ ಫಾರ್ಮ್ ಕಳೆದುಕೊಂಡಿದ್ದರಿಂದ ಆ ಜಾಗಕ್ಕೆ ಒಬ್ಬ ಉತ್ತಮ ಆಟಗಾರನ ಹುಡುಕಾಟದಲ್ಲಿದ್ದ ನಾಯಕ ಮಹೇಂದ್ರ ಸಿಂಗ್ ಧೋನಿ ಕಣ್ಣಿಗೆ ಆಗ ಕಂಡವರೇ ಈ ‘ಮಿಸ್ಟರ್ ಐಸಿಸಿ’ ಹಾಗೂ ‘ಗಬ್ಬರ್’ ಖ್ಯಾತಿಯ ಶಿಖರ್ ಧವನ್.
ಹೌದು, ಶಿಖರ್ ಧವನ್ ಸೆಹ್ವಾಗ್ ಅವರಂತಹ ಮಾಸ್ ಆಟಗಾರರಲ್ಲದಿದ್ದರೂ ಅವರೊಬ್ಬ ಕ್ಲಾಸಿಕ್ ಬ್ಯಾಟ್ಸ್ ಮ್ಯಾನ್. ಮುನ್ನುಗ್ಗಿ ಬರುವ ಚೆಂಡನ್ನು ಅಷ್ಟೇ ವೇಗದಲ್ಲಿ ಬೌಂಡರಿಗಳತ್ತ ಅಟ್ಟಿಸಿಬಿಡುತ್ತಿದ್ದರು.
ಧವನ್ ಬ್ಯಾಟಿಂಗ್ ಸ್ಟ್ರೆಂತ್ (Sಣಡಿeಟಿgಣh) ಡೀಪ್ ಎಕ್ಸ್‌ಸ್ಟ್ರಾ ಕವರ್ ಆಗಿದ್ದು ಡೀಪ್
ಎಕ್ಸ್‌ಸ್ಟ್ರಾ ಕವರ್ ನತ್ತ ಬ್ಯಾಟ್ ಬೀಸುವುದನ್ನು ನೋಡುವುದೇ ಒಂದು ಚೆಂದ.
ಶಿಖರ್ ಧವನ್ ಅಂಡರ್-19 ವಿಶ್ವಕಪ್ ನಲ್ಲಿ ಬೆಳಗಿದ ಮಹೋನ್ನತ ಪ್ರತಿಭೆ.ಧವನ್ 2014ರ ಅಂಡರ್-19 ವಿಶ್ವಕಪ್ ನಲ್ಲೇ ಭಾರತದ ಅಂತರ್‌ರಾಷ್ಟ್ರೀಯ ಕ್ರಿಕೆಟ್ ನಲ್ಲಿ ತನ್ನ ಛಾಪನ್ನು ಮೂಡಿಸಬಲ್ಲರೆಂದು ಭರವಸೆಯಿತ್ತ ಆಟಗಾರ.
ಶಿಖರ್ 2010ರಲ್ಲಿ ಭಾರತ ಕ್ರಿಕೆಟ್ ತಂಡದ ಕ್ಯಾಪ್ ಧರಿಸಿದರಾದರೂ ಅಂದಿನ ಎದುರಾಳಿ ಆಸ್ಟ್ರೇಲಿಯ ತಂಡದೆದುರು ಧವನ್ ಬ್ಯಾಟಿನಿಂದ ಆ ಪಂದ್ಯದಲ್ಲಿ ರನ್ ಬಂದಿರಲಿಲ್ಲ.
ಅಂದು ಧವನ್ ಶೂನ್ಯಕ್ಕೆ ಪೆವಿಲಿಯನ್ ದಾರಿ ಹಿಡಿಯಬೇಕಾಯಿತು. ಧವನ್ ನಂತರದಲ್ಲಿ, ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಾಟದಲ್ಲಿ ನಾಲ್ಕು ಪಂದ್ಯಗಳನ್ನು ಆಡಿದ್ದರೂ ಅವರ ಬ್ಯಾಟ್ ನಿಂದ ಬಂದ ಒಟ್ಟು ಮೊತ್ತ 51 ರನ್ ಮಾತ್ರ.
ತನ್ನ ಸ್ಥಾನವನ್ನು ಭದ್ರಪಡಿಸಲು ಪರದಾಡುತ್ತಿದ್ದ ಧವನ್ ಕೈ ಹಿಡಿದದ್ದು ಮಾತ್ರ ಬಾರ್ಡರ್ ಗವಾಸ್ಕರ್ ಟ್ರೋಫಿ ಪಂದ್ಯಾವಳಿ. ಅಂದು ತನ್ನ ಮೊದಲ ಟೆಸ್ಟ್ ಪಂದ್ಯಾಟವನ್ನಾಡಿದ್ದ ಧವನ್ ಬ್ಯಾಟ್ ನಿಂದ ನೂರರ ಸಂಖ್ಯೆಯನ್ನು ಬರೀ 85 ಎಸೆತಗಳಲ್ಲೇ ಚಚ್ಚಿಬಿಟ್ಟಿದ್ದರು. ಇದು ಟೆಸ್ಟ್ ಕ್ರಿಕೆಟಿಗನೊಬ್ಬ ಮೊದಲ ಟೆಸ್ಟ್ ಪಂದ್ಯದಲ್ಲಿ ದಾಖಲಿಸಿದ ಮೊದಲ ವೇಗದ ಶತಕ ಎಂಬ ಹಿರಿಮೆಯನ್ನು ತನ್ನದಾಗಿಸಿಕೊಂಡಿತು.
ನಂತರದ ಕ್ರಿಕೆಟ್ ದಿನಗಳಲ್ಲಿ ಶಿಖರ್ ಧವನ್ ಮತ್ತೆ ಹಿಂದಿರುಗಿ ನೋಡಿದ್ದೇ ಇಲ್ಲ. ತನ್ನದೇ ದಾಖಲೆಗಳನ್ನು ರೂಪಿಸುವಲ್ಲಿ ಧವನ್ ಯಶಸ್ವಿಯಾಗುತ್ತಾ ಬಂದರು.
ಇದಷ್ಟೇ ಅಲ್ಲದೆ ಅಂಡರ್-19 ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದವರು.
ಹೀಗೇ ಧವನ್ ಭಾರತ ಕ್ರಿಕೆಟ್ ಇತಿಹಾಸದಲ್ಲಿ ತನ್ನ ನೆಲೆಯನ್ನು, ತನ್ನ ಸ್ಥಾನವನ್ನು ತನ್ನ ಪ್ರತಿಭೆಯನ್ನು ಬೆಳಗಿಸುವಲ್ಲಿ ಯಶಸ್ವಿಯಾದರು.
ಧವನ್ ಕೌಟುಂಬಿಕ ಕಲಹಗಳೇನೇ ಇದ್ದರು ಮೈದಾನದಲ್ಲಿ ಅವರೊಬ್ಬ ಸ್ನೇಹಜೀವಿ. ತನ್ನ ಕುಚೇಷ್ಟೆಗಳಿಂದ ಸಹ ಆಟಗಾರರನ್ನು ರಂಜಿಸುತ್ತಿದ್ದ ಧವನ್ ಸಾಮಾಜಿಕ ಜಾಲತಾಣಗಳಲ್ಲೂ ತನ್ನ ಹಾಸ್ಯಮಯ ನಡವಳಿಕೆಯಿಂದ ಅಪಾರ ಸಂಖ್ಯೆಯ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.
2021ರಲ್ಲಿ ಕ್ರೀಡೆಯಲ್ಲಿ ಅರ್ಜುನ ಪ್ರಶಸ್ತಿಗೂ ಭಾಜನರಾಗಿದ್ದರು.
ಕ್ಯಾಚ್ ಹಿಡಿಯಲಿ ಅಥವಾ ಶತಕವೇ ಬಾರಿಸಲಿ ತೊಡೆ ತಟ್ಟಿ ಮೀಸೆ ತಿರುವುತ್ತಿದ್ದ ಧವನ್ ‘ಗಬ್ಬರ್’ ಎಂಬ ಖ್ಯಾತಿಯನ್ನು ಹೊಂದಿದ್ದರು.
ಬದುಕಿನಲ್ಲಿ ತಿರುವುಗಳು ಬೇಕೇ ಬೇಕು. ಅದು ಸಹಜ ಕೂಡಾ.
ಸದ್ಯ ಭಾರತ ಕ್ರಿಕೆಟ್ ನಲ್ಲಿ ಶುಭಮನ್ ಗಿಲ್ ಒಳಗೊಂಡಂತೆ ಅನೇಕ ಆರಂಭಿಕ ದಾಂಡಿಗರಿದ್ದರೂ ಭಾರತದ ಕ್ರಿಕೆಟ್ ಇತಿಹಾಸಕ್ಕೆ ಇವರೊಬ್ಬರೇ ‘ಗಬ್ಬರ್’.
ಧವನ್ ಮುಂದಿನ ಐಪಿಎಲ್‌ನಲ್ಲಿ ಲಭ್ಯವಾಗಬಹುದು ಎನ್ನುವುದು ಅಭಿಮಾನಿಗಳ ಆಶಯ.
ವಿದಾಯದೊಂದಿಗೆ ಜೀವನ ಸುಖಕರವಾಗಿರಲಿ.