ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಮುಂದುವರಿದ ಜಾತಿಗಳು ಬೇಕೇ?

ಹಿಂದುಳಿದ ವರ್ಗಗಳ ವ್ಯವಸ್ಥೆಯ ದೊಡ್ಡ ಪ್ರಮಾದವೆಂದರೆ ಒಮ್ಮೆ ಜಾತಿಯನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿ ಬಿಟ್ಟರೆ ಮೀಸಲಾತಿ ನೀತಿಯನ್ನು ಮತ್ತು ಅದಕ್ಕೆ ವಿಸ್ತರಿಸಿದ ಪ್ರಾಶಸ್ತ್ಯದ ಪ್ರಯೋಜನಗಳ ಪ್ರಭಾವವನ್ನು ಅಳೆಯಲು ಅದರ ಸಾಮಾಜಿಕ, ಶೈಕ್ಷಣಿಕ ಅಥವಾ ಆರ್ಥಿಕ ಅಂಶಗಳ ಮೌಲ್ಯಮಾಪನ ಇಲ್ಲ. ಆದ್ದರಿಂದ ನಿಯತಕಾಲಿಕ ಪರಿಶೀಲನೆ ಮತ್ತು ಹಿಂದುಳಿದ ವರ್ಗಗಳ ಪಟ್ಟಿಗಳ ಪರಿಷ್ಕರಣೆಯ ಪ್ರಯೋಜನಗಳು ಉದ್ದೇಶಿತ ಫಲಾನುಭವಿಗಳಿಗೆ ತಲುಪುವುದನ್ನು ಖಚಿತಪಡಿಸಿ ಕೊಳ್ಳುವುದು ಅತ್ಯಂತ ನಿರ್ಣಾಯಕವಾಗಿದೆ ಮತ್ತು ಗಣನೀಯ ಪ್ರಯೋಜನಗಳನ್ನು ಪಡೆದ ಜಾತಿಗಳನ್ನು ತೆಗೆದುಹಾಕಬೇಕಾಗುತ್ತದೆ.

Update: 2024-01-18 05:40 GMT

ಹಿಂದುಳಿದ ವರ್ಗಗಳ ಮೀಸಲಾತಿ ನೀತಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ನಮ್ಮ ಸಂವಿಧಾನವು ಪ್ರತಿಪಾದಿಸಿರುವ ಸಮಾನತೆಯ ಅವಕಾಶದ ಆದರ್ಶಕ್ಕಾಗಿ ಮೀಸಲಾತಿ ವಿರುದ್ಧ ಹೋಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಕೆಲವು ಕ್ರಮಗಳನ್ನು ಅನುಸರಿಸುವ ಅವಶ್ಯಕತೆ ಇದೆ.

ಜಾತಿಯು ಈಗ ಹಲವಾರು ವರ್ಷಗಳಿಂದ ಹಿಂದುಳಿದ ವರ್ಗಗಳನ್ನು ಗುರುತಿಸುವುದರೊಂದಿಗೆ ಆಳವಾಗಿ ಹೆಣೆದುಕೊಂಡಿದೆ ಮತ್ತು ಯಾವುದೇ ತೀವ್ರವಾದ ಬದಲಾವಣೆಯೂ ಸಂಭವಿಸುವ ಸಾಧ್ಯತೆ ಕಡಿಮೆ. ಏಕೆಂದರೆ ಯಾವುದೇ ಪರ್ಯಾಯ ಮಾನದಂಡಗಳು ಸುಲಭವಾಗಿ ಲಭ್ಯವಿಲ್ಲ. ಹಿಂದುಳಿದ ವರ್ಗವನ್ನು ನಿರ್ಣಯಿಸುವ ಹಾಗೂ ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನು ಗಮನಿಸಿದರೆ, ಹಿಂದುಳಿದ ವರ್ಗಗಳ ಜನಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡುವುದು ಅತ್ಯಂತ ತೋರಿಕೆ ಹೆಜ್ಜೆ ಆಗಿದೆ.

ಹಿಂದುಳಿದ ವರ್ಗಗಳ ವ್ಯವಸ್ಥೆಯ ದೊಡ್ಡ ಪ್ರಮಾದವೆಂದರೆ ಒಮ್ಮೆ ಜಾತಿಯನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿ ಬಿಟ್ಟರೆ ಮೀಸಲಾತಿ ನೀತಿಯನ್ನು ಮತ್ತು ಅದಕ್ಕೆ ವಿಸ್ತರಿಸಿದ ಪ್ರಾಶಸ್ತ್ಯದ ಪ್ರಯೋಜನಗಳ ಪ್ರಭಾವವನ್ನು ಅಳೆಯಲು ಅದರ ಸಾಮಾಜಿಕ, ಶೈಕ್ಷಣಿಕ ಅಥವಾ ಆರ್ಥಿಕ ಅಂಶಗಳ ಮೌಲ್ಯಮಾಪನ ಇಲ್ಲ. ಆದ್ದರಿಂದ ನಿಯತಕಾಲಿಕ ಪರಿಶೀಲನೆ ಮತ್ತು ಹಿಂದುಳಿದ ವರ್ಗಗಳ ಪಟ್ಟಿಗಳ ಪರಿಷ್ಕರಣೆಯ ಪ್ರಯೋಜನಗಳು ಉದ್ದೇಶಿತ ಫಲಾನುಭವಿಗಳಿಗೆ ತಲುಪುವುದನ್ನು ಖಚಿತಪಡಿಸಿ ಕೊಳ್ಳುವುದು ಅತ್ಯಂತ ನಿರ್ಣಾಯಕವಾಗಿದೆ ಮತ್ತು ಗಣನೀಯ ಪ್ರಯೋಜನಗಳನ್ನು ಪಡೆದ ಜಾತಿಗಳನ್ನು ತೆಗೆದುಹಾಕಬೇಕಾಗುತ್ತದೆ.

ಹಿಂದಿನ ರಾಷ್ಟ್ರೀಯ ಹಿಂದುಳಿದ ವರ್ಗಗಳ ಕಾಯ್ದೆ, 1993 ಕಲಂ 11ರಡಿಯಲ್ಲಿ ಪಟ್ಟಿಯ ಪರಿಷ್ಕರಣೆಯ ಕರ್ತವ್ಯವನ್ನು ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ವಹಿಸಲಾಗಿತ್ತು. ಕಾಯ್ದೆಯನ್ನು ರದ್ದುಗೊಳಿಸಿದ ನಂತರ ಆಯೋಗದ ಕರ್ತವ್ಯಗಳನ್ನು ಸಂವಿಧಾನದ ಅನುಚ್ಛೇದ 338 ಬಿ ಯಲ್ಲಿ ಪಟ್ಟಿ ಮಾಡಲಾಗಿದೆ. ಹಿಂದಿನ ಕಾಯ್ದೆಯಲ್ಲಿದ್ದ ಪರಿಶೀಲನೆಯ ನಿಯಮವನ್ನು ಸಂವಿಧಾನದ ನಿಯಮದೊಳಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿಲ್ಲ. ಆಯೋಗದ ಕರ್ತವ್ಯಗಳ ಪಟ್ಟಿಯ ಪರಿಶೀಲನೆ/ ಪರಿಷ್ಕರಣೆಯನ್ನು ಸೇರಿಸಲು ಅವಕಾಶವಿದ್ದರೂ ಸ್ಪಷ್ಟವಾದ ನಿಯಮ ಇಲ್ಲದಿರುವುದು ಹಿಂದುಳಿದ ವರ್ಗಗಳ ಪಟ್ಟಿಯನ್ನು ಪರಿಶೀಲಿಸುವ ಯಾವುದೇ ಸಾಂವಿಧಾನಿಕ ಕರ್ತವ್ಯದಿಂದ ಸರಕಾರವನ್ನು ವಿಮುಖಗೊಳಿಸುತ್ತದೆ. ಸ್ಪಷ್ಟವಾದ ಶಾಸನಬದ್ಧ ಬಾಧ್ಯತೆಯ ಹೊರತಾಗಿಯೂ ಹಿಂದಿನ ಕಾಯ್ದೆಯಲ್ಲಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಯಾವುದೇ ಜಾತಿಯನ್ನು ಪಟ್ಟಿಯಿಂದ ಹೊರಹಾಕುವ ಕಸರತ್ತನ್ನು ಕೈಗೊಳ್ಳಲು ವಿಫಲವಾಗಿದೆ.

ಮಂಡಲ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಕೆಲವು ನಿರ್ದೇಶನಗಳನ್ನು ಸರಕಾರಗಳಿಗೆ ನೀಡಿತ್ತು. ಅವುಗಳಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು, ತಮ್ಮ ತಮ್ಮ ವ್ಯಾಪ್ತಿಯಲ್ಲಿ ಸೂಕ್ತ ಕಾಯ್ದೆ ರಚಿಸಿ ಆ ಮೂಲಕ ಹಿಂದುಳಿದ ವರ್ಗಗಳ ಆಯೋಗವನ್ನು ನೆಲೆ ಗೊಳಿಸುವುದೂ ಒಂದು. ಸಂವಿಧಾನದ 102ನೇ ತಿದ್ದುಪಡಿಯಿಂದಾಗಿ ಕೇಂದ್ರ ಸರಕಾರದ ಆಯೋಗದ ಕಾಯ್ದೆ ರದ್ದಾಯಿತು. ಆದರೆ ರಾಜ್ಯಗಳಿಗೆ ಸಂಬಂಧಿಸಿದಂತೆ ಕಾಯ್ದೆ ರದ್ದಾಗಿರುವುದಿಲ್ಲ. ಹಾಗಾಗಿ ರಾಜ್ಯಗಳ ಕಾಯ್ದೆ ಕಲಂ 11ರಲ್ಲಿ ಹಿಂದುಳಿದ ವರ್ಗಗಳ ಪಟ್ಟಿಗೆ ಜಾತಿಗಳನ್ನು ಸೇರಿಸುವ ಅಥವಾ ಕೈ ಬಿಡುವ ಅವಕಾಶ ಸರಕಾರಕ್ಕಿದೆ. ಆದರೆ ಕರ್ನಾಟಕ ಸರಕಾರ ಮಾತ್ರ ಈಗಿರುವ ಪಟ್ಟಿಯನ್ನು ಸುಮಾರು 30 ವರ್ಷಗಳಿಂದಲೂ ಒಮ್ಮೆಯೂ ಪರಿಷ್ಕರಣೆ ಮಾಡುವ ಕಾರ್ಯಕ್ಕೆ ಕೈ ಹಾಕಿಲ್ಲ. ಮೀಸಲಾತಿಯಿಂದ ಸಾಕಷ್ಟು ಪ್ರಯೋಜನ ಪಡೆದಿರುವ ಜಾತಿಗಳೂ ಪಟ್ಟಿಯಲ್ಲಿ ಮುಂದುವರಿದು, ಪ್ರಯೋಜನ ಪಡೆಯಲು ಪಟ್ಟಿಯಲ್ಲಿ ಉಳಿದುಕೊಳ್ಳುವ ಅತ್ಯಂತ ಹಿಂದುಳಿದ ಜಾತಿಗಳಿಗೆ ದಕ್ಕಬೇಕಾದ ಪ್ರಯೋಜನಗಳಿಗೆ ಬಲವಾದ ಪೆಟ್ಟು ಕೊಡುವುದೂ ಶತಸ್ಸಿದ್ಧ.

ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿಯ ಪರಿಷ್ಕರಣೆಗೆ ಸಂಬಂಧಿಸಿದಂತೆ ಸ್ಪಷ್ಟವಾದ ನಿಯಮವನ್ನು ರೂಪಿಸಲು ಅನುಚ್ಛೇದ 338 ಬಿ ಅನ್ನು ತಿದ್ದುಪಡಿ ಮಾಡಬೇಕು. ಮೇಲಾಗಿ ಪಟ್ಟಿಯ ಪರಿಷ್ಕರಣೆಯೂ ಜಾತಿಗಳನ್ನು ಹೊರಗಿಡುವ ನಿಟ್ಟಿನಲ್ಲಿ ವಿವರಣೆ ಇರಬೇಕು. ಪಟ್ಟಿಯ ಪರಿಷ್ಕರಣೆ ಎಂದರೆ ಪಟ್ಟಿಗೆ ಜಾತಿಗಳ ಸೇರ್ಪಡೆ ಮಾಡುವುದು ಮಾತ್ರವಲ್ಲದೆ ಅದರ ಪರಿಣಾಮವಾಗಿ ಹೊರಗಿಡುವಿಕೆಯೂ ಆಗಬೇಕು.

ಹಿಂದುಳಿದವರಲ್ಲದವರನ್ನು ಹೊರಗಿಡಲು ಹಿಂದುಳಿದ ವರ್ಗಗಳ ಪಟ್ಟಿಯ ನಿಯತಕಾಲಿಕ ಪರೀಕ್ಷಣೆಗಾಗಿ ನ್ಯಾಯಾಂಗವು ಹಲವಾರು ತೀರ್ಪುಗಳಲ್ಲಿ ಸಲಹೆ ನೀಡಿದೆ. ಆದರೂ ಸರಕಾರವು ಸರ್ವೋಚ್ಚ ನ್ಯಾಯಾಲಯದ ಶಿಫಾರಸಿನ ಮೇರೆಗೆ ಕಾರ್ಯನಿರ್ವಹಿಸಲು ವಿಫಲವಾಗಿದೆ ಮತ್ತು ಈ ವರೆಗೂ ಯಾವುದೇ ಜಾತಿಯನ್ನು ಹೊರ ಹಾಕಿಲ್ಲ. ಇತ್ತೀಚಿನ ಚೆಬ್ರೊಲು ಲೀಲಾ ಪ್ರಸಾದ್ v/s ಆಂಧ್ರ ಪ್ರದೇಶ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಮತ್ತೊಮ್ಮೆ ಪಟ್ಟಿಗಳ ಪರಿಷ್ಕರಣೆಯ ಅಗತ್ಯವನ್ನು ಒತ್ತಿ ಹೇಳಿದೆ. ಆ ತೀರ್ಪು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮಸ್ಯೆಗೆ ಸಂಬಂಧಿಸಿದ್ದರೂ, ಆ ಅಭಿಪ್ರಾಯವನ್ನು ಹಿಂದುಳಿದ ವರ್ಗಗಳಿಗೂ ವಿಸ್ತರಿಸಬಹುದು. ಮ್ಯಾಂಡಮಸ್ ರಿಟ್ ಮೂಲಕ ಪರಿಹಾರ ಕೋರಿ ನ್ಯಾಯಾಲಯಗಳನ್ನು ಸಂಪರ್ಕಿಸುವುದು ಅಗತ್ಯವಾಗಬಹುದು. ಹೆಗ್ಗುರುತಾಗಿರುವ ತೀರ್ಪೊಂದರಲ್ಲಿ ಸರ್ವೋಚ್ಚ ನ್ಯಾಯಾಲಯ ಹೀಗೆ ಹೇಳಿದೆ-ನ್ಯಾಯಾಂಗವು ಮಾತ್ರ ಜಾತಿ ಆಧಾರಿತ ಮೀಸಲಾತಿಗೆ ಕಡಿವಾಣ ಹಾಕಬಹುದು ಎಂಬುದನ್ನು ಗಮನಿಸಲು ಮೀಸಲಾತಿ ಮೇಲಿನ ಕಾಲ ಮಿತಿಗಳನ್ನು ವಿಸ್ತರಿಸುವ ಹಿಂದಿನ ಸಂಸತ್ತಿನ ಕಲಾಪಗಳನ್ನು ಗಮನಿಸ ಬೇಕಾಗಿಲ್ಲ. ಇತಿಹಾಸವೇ ಅದನ್ನು ತೋರಿಸಿದೆ. ಮೀಸಲಾತಿಗೆ ‘ಇಲ್ಲ’ ಎಂದು ಹೇಳುವುದು ಸಂಸತ್ತಿಗೆ ರಾಜಕೀಯವಾಗಿ ಕಾರ್ಯ ಸಾಧ್ಯವಲ್ಲ-ವಿಶೇಷವಾಗಿ ಜಾತಿ ಒಳಗೊಂಡಾಗ.

ಜಾತಿಗಳನ್ನು ಪಟ್ಟಿಯಿಂದ ಹೊರಗಿಡುವ ಮೂಲಕ ಸರಕಾರವು ತನ್ನ ರಾಜಕೀಯ ಲಾಭವನ್ನು ತಾನೇ ಕಳೆದು ಕೊಳ್ಳಲು ಇಚ್ಛಿಸುವುದಿಲ್ಲ ಎಂಬುದೇನೋ ಸರಿ. ಆದರೆ ಈ ಕಾರ್ಯವನ್ನು ರಾಜ್ಯಗಳು ಶ್ರದ್ಧೆಯಿಂದ ನಿರ್ವಹಿಸಲು ನ್ಯಾಯಾಂಗವು ನಿರ್ದೇಶನ ನೀಡುವುದಕ್ಕಾಗಿ ಹೆಜ್ಜೆ ಇಡಬೇಕಾಗುತ್ತದೆ.

ಜಾತಿಗಳನ್ನು ಹೊರಹಾಕುವ ಮಾನದಂಡಗಳು:

ನ್ಯಾಯಾಂಗದ ಹಲವು ನಿರ್ದೇಶನಗಳ ಹೊರತಾಗಿಯೂ ಸರಕಾರಗಳು ಹಿಂದುಳಿದ ಜಾತಿಗಳ ಪಟ್ಟಿಯಿಂದ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿಯದ ಜಾತಿಗಳನ್ನು ಹೊರಗಿಡಲು ವಿಫಲವಾಗಿವೆ. ಕೇಂದ್ರ ಮತ್ತು ರಾಜ್ಯಮಟ್ಟದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯು ವಿವಿಧ ಜಾತಿಗಳನ್ನು ಒಳಗೊಂಡಿದೆ. ಸಾಮಾಜಿಕ ವ್ಯವಸ್ಥೆಯಲ್ಲಿ ಅವುಗಳ ಸ್ಥಾನದಿಂದಾಗಿ ಮೀಸಲಾತಿ ನೀತಿಯ ಅನಗತ್ಯ ಲಾಭವನ್ನು ಅವು ಪಡೆಯುತ್ತವೆ. ಮೀಸಲಾತಿಯ ಫಲಾನುಭವಿಗಳಲ್ಲಿ ಹೆಚ್ಚಿನವರು ಆಯ್ದ ಕೆಲವು ಜಾತಿಗಳಿಂದ ಬಂದವರು ಎಂದು ಪದೇಪದೇ ವರದಿಯಾಗಿದೆ. ರಾಜ್ಯಗಳು ಈ ವರ್ಗಗಳ ಸ್ಥಿತಿಯನ್ನು ನಿಯತಕಾಲಿಕವಾಗಿ ಪರಿಶೀಲಿಸಬೇಕು ಮತ್ತು ಅದರ ಪರಿಣಾಮವಾಗಿ ಈಗಾಗಲೇ ಮೀಸಲಾತಿ ವ್ಯವಸ್ಥೆಯ ಪ್ರಯೋಜನಗಳನ್ನು ಪಡೆದಿರುವವುಗಳನ್ನು ತೆಗೆದು ಹಾಕಬೇಕು.

ಹಿಂದುಳಿದ ವರ್ಗಗಳ ಆಯೋಗಗಳೊಂದಿಗೆ ಸರಕಾರಗಳು ಸಮಾಲೋಚಿಸಿ ಜಾತಿಯನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆದು ಹಾಕುವ ಮಾನದಂಡಗಳನ್ನು ವ್ಯಾಖ್ಯಾನಿಸುವ ನಿಯಮಗಳನ್ನು ನಿಬಂಧನೆಗಳೊಂದಿಗೆ ರೂಪಿಸಬೇಕು. ಮಾನದಂಡವು ವಸ್ತುನಿಷ್ಠತೆಯನ್ನು ಆಧರಿಸಿರಬೇಕು ಮತ್ತು ಅಂತಹ ಮಾನದಂಡಗಳ ಆಧಾರದ ಮೇಲೆ ಮೀಸಲಾತಿ ನೀತಿಯಿಂದ ಒಂದು ಜಾತಿಯು ಗಣನೀಯವಾಗಿ ಪ್ರಯೋಜನ ಪಡೆದಿದೆ ಎಂದು ಕಂಡುಬಂದರೆ ಅದನ್ನು ಪಟ್ಟಿಯಿಂದ ತೆಗೆದು ಹಾಕಬೇಕು. ಅಂತಹ ಮಾನದಂಡಗಳನ್ನು ರೂಪಿಸಲು ಈ ಕೆಳಗಿನ ಅಂಶಗಳನ್ನು ಪರಿಗಣಿಸಬಹುದು

* ಶಿಕ್ಷಣ ಸಂಸ್ಥೆಗಳು ಮತ್ತು ಸೇವೆಗಳಲ್ಲಿ ಜಾತೀಯ ಪ್ರಾತಿನಿಧ್ಯ.

* ಒಬಿಸಿಗಳು ತೆಗೆದುಕೊಳ್ಳುವ ಒಟ್ಟು ಮೀಸಲಾತಿ ಪ್ರಯೋಜನಗಳಲ್ಲಿ ಜಾತಿಯ ಪಾಲು.

* ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಾಯ್ದಿರಿಸದ ಮೆರಿಟ್ ಪಟ್ಟಿಯಲ್ಲಿ ಅದರ ಪಾಲು.

* ಜಾತಿಯ ನಗರ /ಗ್ರಾಮೀಣ ಜನಸಂಖ್ಯೆಯಿಂದ ಪಡೆದ ಪ್ರಯೋಜನಗಳ ವಿಂಗಡಣೆಯ ಶೇಕಡಾವಾರು.

* ಜಾತಿಯ ಒಟ್ಟಾರೆ ಆರ್ಥಿಕ ಹಿನ್ನೆಲೆ

* ಜಾತಿಯ ಒಟ್ಟಾರೆ ಶೈಕ್ಷಣಿಕ ಹಿನ್ನೆಲೆ

* ಪಟ್ಟಿಯೊಳಗೆ ಜಾತಿಯನ್ನು ಎಷ್ಟು ವರ್ಷಗಳಿಂದ ಸೇರಿಸಲಾಗಿದೆ.

* ಆರ್ಥಿಕ ಸ್ಥಿತಿಯ ದೃಷ್ಟಿಯಿಂದ ಜಾತಿಯ ಸದಸ್ಯರ ನಡುವೆ ಏಕರೂಪತೆ/ವಿಜಾತೀಯತೆ.

* ಮೀಸಲಾತಿಗೆ ಒಳಪಟ್ಟ ನಂತರದಲ್ಲಿ ಸರಕಾರ ಮತ್ತು ಸರಕಾರದ ಅಧೀನ ಸಂಸ್ಥೆಗಳಲ್ಲಿ ಗಳಿಸಿರುವ ಹುದ್ದೆಗಳ ವಿವರ.

ಈ ಅಂಶಗಳು ಮೀಸಲಾತಿ ನೀತಿಯಿಂದ ಒಂದು ಜಾತಿಗೆ ಲಾಭವಾಗಿದೆಯೇ ಅಥವಾ ಇಲ್ಲವೇ ಮತ್ತು ಅಂಥ ನೀತಿಗಳಿಂದ ಅದು ಲಾಭ ಪಡೆದಿದ್ದರೆ ಜಾತಿಯ ಯಾವ ವಿಭಾಗವು ಗರಿಷ್ಠ ಪ್ರಯೋಜನವನ್ನು ಪಡೆದಿದೆ ಎಂಬುದನ್ನು ಸೂಚಿಸುತ್ತದೆ. ಇದು ಮೀಸಲಾತಿಯ ಪ್ರಯೋಜನಗಳ ಕುರಿತು ಸರಕಾರಕ್ಕೆ ವಸ್ತುನಿಷ್ಠ ವಿವೇಚನಾ ಶಕ್ತಿಯನ್ನು ಹೊಂದಲು ಅನುವು ಮಾಡಿಕೊಡುತ್ತದೆ.

ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಜಾತಿಗಳನ್ನು ಸೇರಿಸುವುದು ಯಾಂತ್ರಿಕ ಕ್ರಮವಲ್ಲ ಮತ್ತು ಸಾಕಷ್ಟು ಸುಸಂಗತ ಮಾಹಿತಿ ಇಲ್ಲದೆ ಮಾಡತಕ್ಕದ್ದಲ್ಲ ಅಥವಾ ಬಾಹ್ಯ ಕಾರಣಗಳಿಂದಾಗಿಯೂ ಇದನ್ನು ಮಾಡತಕ್ಕದ್ದಲ್ಲ. ಹಿಂದುಳಿದ ಜಾತಿಗಳ ಪಟ್ಟಿಯಲ್ಲಿ ಮುಂದುವರಿದ ಜಾತಿಗಳನ್ನು ಸೇರಿಸದಂತೆ ಎಚ್ಚರಿಕೆ ವಹಿಸತಕ್ಕದ್ದು(ಇಂದಿರಾ ಸಹಾನಿ v/s ಭಾರತ ಒಕ್ಕೂಟ (2000 ಎಸ್‌ಸಿಸಿ 168)

ಮುಂಬರುವ 2024 -25ರ ಜನಗಣತಿಯ ಮೂಲಕ ಹಿಂದುಳಿದ ವರ್ಗಗಳ ಜನಸಂಖ್ಯೆಯ ದತ್ತಾಂಶವನ್ನು ಸಂಗ್ರಹಿಸಲು ಇದು ಸಕಾಲ. ಈಗಿರುವಂತೆ ಕೇಂದ್ರ ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯೋಗಗಳಲ್ಲಿ ಹಿಂದುಳಿದ ವರ್ಗಗಳಿಗೆ ಶೇ. 27ರಷ್ಟು ಮೀಸಲಾತಿಯು ಐದು ದಶಕಗಳಷ್ಟು ಹಳೆಯದಾದ ಮಂಡಲ ಆಯೋಗದ ವರದಿಯನ್ನು ಆಧರಿಸಿದೆ ಮತ್ತು ಅದು 1931ರ ಜನಗಣತಿ ದತ್ತಾಂಶವನ್ನು ಅವಲಂಬಿಸಿದೆ. ಹಿಂದುಳಿದ ವರ್ಗಗಳ ನಿಜವಾದ ಜನಸಂಖ್ಯೆಗೆ ಸಂಬಂಧಿಸಿದಂತೆ ಅವು ವಿಭಿನ್ನ ಅಂಕಿ ಅಂಶಗಳಾಗಿವೆ ಎಂಬುದನ್ನು ಮರೆಯಬಾರದು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಕೆ.ಎನ್. ಲಿಂಗಪ್ಪ

contributor

Similar News