ಭಾರತೀಯರಿಗೆ ಉತ್ಸವಗಳ ಮೂಲಕ ಸಂವಿಧಾನ ಪರಿಚಯಿಸಬೇಕೇ?
ಸಂವಿಧಾನ ಜಾರಿಗೆ ಬಂದು 75 ವರ್ಷಗಳು ದಾಟಿವೆ. ಆದರೆ ನಾವಿಂದು ಸಂವಿಧಾನ ಪರಿಚಯಿಸುವ ಕಾರ್ಯಕ್ರಮಗಳನ್ನು ಅಂಬೆಗಾಲಿಡುವ ಮಗುವಿಗೆ ಮಾತೃಭಾಷೆ ಕಲಿಸುವ ಮಾತೆಯಂತೆ ಪ್ರಭುತ್ವ ಸಾದರ ಮಾಡುತ್ತಿದ್ದೇವೆ. ಆಶ್ಚರ್ಯವಲ್ಲವೆ?. ಹಾಗಾದರೆ, ಈ ಸಾಮಾಜಿಕ ಲೋಪಕ್ಕೆ ಕಾರಣರಾರು?. ಖಂಡಿತಾ ಈ ಲೋಪ ಒಬ್ಬರದ್ದಾಗಿರದೆ, ಸಾಂಸ್ಥಿಕತೆಯ ಸಾರ್ವತ್ರಿಕ ಸೋಲಿನಂತೆ ಗೋಚರವಾಗುತ್ತಿದೆ ಅಂದರೆ ಅತಿಶಯೋಕ್ತಿ ಆಗಲಾರದು.
ಭಾರತ ದೇಶದಲ್ಲಿ ಅನೇಕ ಧರ್ಮ ಗ್ರಂಥಗಳಿವೆ. ಅಷ್ಟೇ ಪುರಾಣ ಪುಣ್ಯಕಥೆಗಳಿವೆ. ಜಾನಪದಗಳಿವೆ. ಆದರೆ ಅವುಗಳಾವುವೂ ಸಮಸ್ತ ಜನಕೋಟಿಯನ್ನು ಬೆಸೆದು ಸಮಾನ ದೃಷ್ಟಿಕೋನಗಳಡಿ ತೂಗುವ ಸಾಮಾಜಿಕ ವ್ಯವಧಾನವನ್ನು ಅಭಿವ್ಯಕ್ತಿಸುತ್ತಿರಲಿಲ್ಲ. ಅವುಗಳೆಲ್ಲವೂ ಒಂದು ವರ್ಗದ ಸಾಮಾಜಿಕ ಸಂರಕ್ಷಣೆಯ ಸಂಕೇತಗಳಾಗಿದ್ದವು. ಹಾಗೆಯೇ, ಬಹುಸಂಖ್ಯಾತರ ದಮನಕ್ಕೆ ಸಾಮಾಜಿಕ ಅಸ್ತ್ರಗಳಾಗಿದ್ದವು. ಇವುಗಳೆರಡರ ನಡುವೆ ಸ್ವಾತಂತ್ರ್ಯ ಚಳವಳಿ ಒಂದು ಸಣ್ಣ ಜೀವ ಜಲದಂತೆ ಸೃಜಿಸಿ ನಿಧಾನವಾಗಿ ದೇಶಾದ್ಯಂತ ಮಹಾಪೂರದಂತೆ ಪ್ರವಹಿಸಿ ದಾಸ್ಯದ ಸಂಕೋಲೆಗಳನ್ನು ಕಳಚಿಸಿತು. ಅದೇ ಸಂದರ್ಭದಲ್ಲಿ ನಮ್ಮನ್ನಾಳುವ ‘ದೇಶಿಯ ಸಾಂವಿಧಾನಿಕ ಸಂಹಿತೆಗಳನ್ನು’ ರಚಿಸುವ ಅನಿವಾರ್ಯತೆಗಳಿದ್ದವು. ಇಂತಹ ರಚನೆ ಎರಡಲಗಿನ ಕತ್ತಿ ಹಿಡಿದು ತಂತಿ ಮೇಲಿನ ನಡಿಗೆಯಂತಿತ್ತು. ಆದರೂ ಸಂವಿಧಾನ ರಚನೆ ಸಭೆಯು ದೇಶದ ಎಲ್ಲಾ ಭಾಷೆ, ಧರ್ಮ, ಸಂಸ್ಕೃತಿ, ಜೀವನವಿಧಾನ ಹಾಗೂ ಪ್ರಾದೇಶಿಕತೆಗಳನ್ನು ಬೆಸೆದು ಏಕತೆಯ ಸೂತ್ರದಡಿ ಒಂದು ಚಾರಿತ್ರಿಕ ದೇಶಿಯ ಸಂವಿಧಾನವನ್ನು ನೀಡಿದ್ದು ಸೋಜಿಗವೆನಿಸುತ್ತಿದೆ. ಅದರ ಜತೆಗೆ ದೇಶದಲ್ಲಿ ಜಡಗಟ್ಟಿದ್ದ ಜಾತಿ ಮತ್ತು ಅದರ ಸಂಬಂಧಿತ ಸಾಮಾಜಿಕ ವೈರುಧ್ಯಗಳಿಗೆ ಚಿಕಿತ್ಸೆ ನೀಡುವ ಕೆಲಸವಂತೂ ಡಾ. ಬಿ.ಆರ್. ಅಂಬೇಡ್ಕರ್ ಜೊತೆ ಹೆಗಲಾಗಿದ್ದ ಬಹುತೇಕ ಸಂಸದೀಯ ಮುತ್ಸದ್ದಿಗಳಿಗೆ ಕಬ್ಬಿಣದ ಕಡಲೆಯಾಗಿತ್ತು. ಅದಕ್ಕೂ ವೈಜ್ಞಾನಿಕ ಕಾನೂನಿನ ಚಿಕಿತ್ಸಾ ಸೂತ್ರಗಳು ಫಲಿಸಿದವು. ಅದರ ಫಲಶೃತಿಯಾಗಿ ಸಾಮಾಜಿಕವಾಗಿ ದುರ್ಬಲರಾದವರಿಗೆ ಶೈಕ್ಷಣಿಕ, ಆರ್ಥಿಕ, ರಾಜಕೀಯ, ಕಾನೂನು ಹಾಗೂ ಇತರ ಸಂರಕ್ಷಣೆಗಳನ್ನು ನೇರವಾಗಿ ಒದಗಿಸಿದ್ದರೆ, ಇನ್ನುಳಿದ ಅಂಶಗಳೆಲ್ಲವನ್ನೂ ಸರ್ವರೂ ಅನುಭವಿಸುವಂತೆ ದುರ್ಬಲರೂ ಅನುಭವಿಸುವ ಮುಕ್ತ ಅವಕಾಶ ನೀಡಲಾಗಿದೆ. ಈ ಗುಣ ವಿಶೇಷತೆಗಳಿಂದ ಭಾರತೀಯ ಸಂವಿಧಾನ ಜಾಗತಿಕವಾಗಿ ಹಿರಿಮೆಯನ್ನು ಪಡೆದಿದೆ.
ಸಂವಿಧಾನ ಜಾರಿಗೆ ಬಂದು 75 ವರ್ಷಗಳು ದಾಟಿವೆ. ಆದರೆ ನಾವಿಂದು ಸಂವಿಧಾನ ಪರಿಚಯಿಸುವ ಕಾರ್ಯಕ್ರಮಗಳನ್ನು ಅಂಬೆಗಾಲಿಡುವ ಮಗುವಿಗೆ ಮಾತೃಭಾಷೆ ಕಲಿಸುವ ಮಾತೆಯಂತೆ ಪ್ರಭುತ್ವ ಸಾದರ ಮಾಡುತ್ತಿದ್ದೇವೆ. ಆಶ್ಚರ್ಯವಲ್ಲವೆ?. ಹಾಗಾದರೆ, ಈ ಸಾಮಾಜಿಕ ಲೋಪಕ್ಕೆ ಕಾರಣರಾರು?. ಖಂಡಿತಾ ಈ ಲೋಪ ಒಬ್ಬರದ್ದಾಗಿರದೆ, ಸಾಂಸ್ಥಿಕತೆಯ ಸಾರ್ವತ್ರಿಕ ಸೋಲಿನಂತೆ ಗೋಚರವಾಗುತ್ತಿದೆ ಅಂದರೆ ಅತಿಶಯೋಕ್ತಿ ಆಗಲಾರದು. ಸ್ವಾತಂತ್ರ್ಯ ಬಂದಾಗ ಈ ದೇಶದಲ್ಲಿ ಶೇ. 12ರಷ್ಟು ಶಿಕ್ಷಣವಂತರಿದ್ದರು. 2011ರಲ್ಲಿ 74ರಷ್ಟಿತ್ತು. ಜಾಗತಿಕ ದತ್ತಾಂಶ ಅಧ್ಯಯನ ಭಾರತದ ಶಿಕ್ಷಣ ಬೆಳವಣಿಗೆ ವೃದ್ಧಿ ದರ 2021ಕ್ಕೆ ಶೇ. 94.02ರಷ್ಟು ಇರಬಹುದೆಂದು ಅಂದಾಜಿಸಿದೆ. ಒಂದು ಶಿಸ್ತುಬದ್ಧ ಸಾಮಾಜಿಕ ವ್ಯವಸ್ಥೆ ನಿರೂಪಿಸಲು ಇಷ್ಟು ಶಿಕ್ಷಿತರು ಸಾಕಿತ್ತಲ್ಲವೇ?. ಹೌದು, ಆದರೆ ಭಾರತದಲ್ಲಿ ಶಿಸ್ತಿನ ಮತ್ತು ಮೈತ್ರಿಯ ಸಾಮಾಜಿಕತೆ ಕಲ್ಪನೆ ಅದರ ಕಕ್ಷೆಯಿಂದ ಮಂಗಮಾಯವಾಗಿ ಅದೆಷ್ಟೋ ಶತಮಾನಗಳಾಗಿವೆ.
ಭಾರತೀಯ ಸಾಮಾಜಿಕ ರಚನೆಯಲ್ಲಿ ಜಾತಿ ಮತ್ತು ವರ್ಗಗಳ ಪ್ರಭಾವ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹಾಸುಹೊಕ್ಕಾಗಿವೆ. ಆದುದರಿಂದ ಕಾನೂನು ಪರಿಪಾಲನೆ ವ್ಯಕ್ತಿಗತವಾದ ಸಂಗತಿಗಳಾಗಿ ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದಿದ್ದರೆ, ಸಂವಿಧಾನ ಮುದ್ರಿತ ಪುಸ್ತಕದ ಮೇಲಿರುವ ಅಕ್ಷರ ಮಾಲೆ ಆಗಿರದೆ ಆಚರಣೆಯಲ್ಲಿ ಮತ್ತು ಅನುಷ್ಠಾನದಲ್ಲಿ ಮುಗಿಲೆತ್ತರದಲ್ಲಿ ಮೇಳೈಸುತ್ತಿತ್ತು. ಯಾವ ದೇಶದಲ್ಲಿ ಮೃದು ಸಾಮಾಜಿಕ ಧೋರಣೆಗಳಿಗೆ ಹೆಚ್ಚಿನ ಮನ್ನಣೆಗಳಿರುತ್ತದೆಯೋ ಅಲ್ಲಿ ಸಂವಿಧಾನ ಅಥವಾ ಅದರ ಅನ್ವಯಿಕ ಕಾನೂನುಗಳು ಇಲ್ಲವೇ ಇತರ ಆಡಳಿತಾತ್ಮಕ ಕಾನೂನುಗಳು ಜನಮಾನಸದಲ್ಲಿ ಅವರ ಹೃದಯದ ಮಾತಾಗಿರುವುದಿಲ್ಲ. ಅದರ ಬದಲು ಸಾಮಾಜಿಕ ಕಟ್ಟಪ್ಪಣೆಗಳು ನರ್ತಿಸುತ್ತಿರುತ್ತವೆ. ನೊಬೆಲ್ ಪ್ರಶಸ್ತಿ ಪುರಸ್ಕೃತ ಗುನ್ನಾರ್ ಮಿರ್ಡಾಲ್ ಎಂಬ ಸ್ವಿಡೀಸ್ ಅರ್ಥಶಾಸ್ತ್ರಜ್ಞ ಮತ್ತು ಸಮಾಜಶಾಸ್ತ್ರಜ್ಞ ತನ್ನ ‘ಏಶ್ಯ ನಾಟಕ’ (ಂsiಚಿಟಿ ಆಡಿಚಿmಚಿ) ಎಂಬ ಪುಸ್ತಕದಲ್ಲಿ ಏಶ್ಯ ಅದರಲ್ಲೂ ಭಾರತದಲ್ಲಿ ಸಾಮಾನ್ಯವಾಗಿರುವ ಸಾಮಾಜಿಕ ಅಶಿಸ್ತು ಮತ್ತು ಮೃದು ಸಾಮಾಜಿಕ ಮನೋಧರ್ಮದಿಂದ ಕಾನೂನು ಪರಿಪಾಲಿಸುವ ಮಾನಸಿಕತೆ ಹೇಗಿರುತ್ತದೆಂದು ಹೀಗೆ ವಿವರಿಸಿದ್ದಾರೆ:‘‘...all the various types of social indiscipline which manifest themselves by deficiencies in legislation and, in particular, law observance and enforcement, a widespread disobedience by public officials and, often, their collusion with powerful persons and groups... whose conduct they should regulate. Within the concept of the soft states belongs also corruption’’(p-208). ಬಹುಶಃ ಕಾನೂನಿನ ಆಡಳಿತವನ್ನು ಅನುಸರಿಸುವವರಲ್ಲಿ ಮತ್ತು ಅದನ್ನು ಬಯಸುವವರಲ್ಲಿ ಶಿಸ್ತಿನ ಸಾಮಾಜಿಕತೆ ಅತ್ಯವಶ್ಯವೆನ್ನುವ ಮನೋಜ್ಞ ಅಭಿಮತಗಳು ಮಿರ್ಡಾಲ್‌ರ ಅಭಿಮತಗಳಲ್ಲಿ ಹೇರಳವಾಗಿವೆ. ಮೃದು ಸಾಮಾಜಿಕತೆಯೇ ತುಂಬಿರುವ ಭಾರತದಲ್ಲಿ ಬಹುತೇಕ ಶೋಷಿತ ಸಮುದಾಯಗಳಿಗೆ ಹುಟ್ಟಿನ ಹಿನ್ನೆಲೆ ಸರಿಸಿ ಸಂವಿಧಾನದ ಆಶಯಗಳಂತೆ ಬದುಕುವ ಸ್ವಾಭಾವಿಕ ಸಾಮಾಜಿಕ ಅವಕಾಶಗಳು ಕಮರಿಹೋಗುತ್ತಿರುತ್ತವೆ. ಅಂತಹ ಜನರನ್ನು ಮೇಲೆತ್ತಲು ಜ್ಯೇಷ್ಠತೆ ಪರಿಕರಗಳನ್ನು (Merit Goods) ಒದಗಿಸಲು ನಿರ್ದೇಶಿಸಿದೆ.
ಸಂವಿಧಾನವನ್ನು ಟೀಕಿಸುವವರು ಕೇವಲ ಮೀಸಲಾತಿ ಮುಖೇನ ಅಭಿಮತಿಸುತ್ತಾರೆ. ಅದೇ ಸಂವಿಧಾನದಲ್ಲಿರುವ ಮಹಿಳೆಯರ ಶೋಷಣೆ, ಅಸ್ಪಶ್ಯತೆ ಆಚರಣೆ ಮತ್ತು ಮಲ ಹೊರುವ ಪದ್ಧತಿಯನ್ನು ನಾವು ಪ್ರೋತ್ಸಾಹಿಸಬಾರದೆಂದು ಹೇಳುವ ಸುಶಿಕ್ಷಿತರ ಸಂಖ್ಯೆ ವಿರಳ ಮತ್ತು ಇಂತಹವರನ್ನು ಗೌರವಿಸುವವರ ಸಂಖ್ಯೆ ಮತ್ತಷ್ಟೂ ನಗಣ್ಯ. ಭಾರತವಿಂದು ಬಹುತೇಕ ವಲಯಗಳಲ್ಲಿ ಪ್ರಗತಿ ಕಾಣುವ ಮಟ್ಟಕ್ಕೆ ಬೆಳೆದಿದೆ. ಅದು ವಿಶ್ವಗುರು ಆಗುತ್ತಿರುವ ಮಡಿಲಲ್ಲಿ ಅದರ ಬಹುತೇಕ ಸಾಮಾಜಿಕ ವೈರುಧ್ಯಗಳು ಬೂದಿ ಮುಚ್ಚಿದ ಕೆಂಡದಂತೆ ಇಂದಿಗೂ ಸುಡುತ್ತಿರುವುದನ್ನು ಯಾರೂ ತಿರಸ್ಕರಿಸುವ ಹಾಗಿಲ್ಲ. ವ್ಯಾಸಂಗದಲ್ಲಿ ಕಲಿತ ಪ್ರತಿಯೊಬ್ಬ ವಿದ್ಯಾರ್ಥಿ/ಓದುಗ ಅಷ್ಟಿಷ್ಟು ಸಂವಿಧಾನ ಪ್ರಜ್ಞೆಯನ್ನು ತಮ್ಮ ದೈನಂದಿನ ಬದುಕಿನಲ್ಲಿ ಧಾರಣ ಮಾಡದಿರುವ ಸಂಗತಿಗಳೇ ಹೆಚ್ಚು. ಸಂವಿಧಾನದ ಅರಿವಿಲ್ಲದಿರುವ ಭಾರತೀಯರ ಸಾಮಾಜಿಕತೆಯ ಒಡನಾಟ ಹೇಗಿದೆಯಂದರೆ ‘ಗಾಳಿ ಬೆಳಕಿಲ್ಲದ ಸುಂದವಾದ ಭವ್ಯ ಬಂಗಲೆಗೆ ಭೇಟಿ ನೀಡುವ ಸ್ಥಿತ ಮನಃಸ್ಥಿತಿ’ಗಳಂತಿವೆ. ಮಂಡಲ ವರದಿ ಚಳವಳಿಯಿಂದಾಚೆಗೆ ಸಾಂವಿಧಾನಿಕ ಸ್ಥಾನಗಳಲ್ಲಿರುವವರಲ್ಲಿಯೂ ಸಂಸದೀಯ ಸಮಾಜಮುಖಿ ನಡಾವಳಿಕೆಗಳಿಲ್ಲದ ಕಾರಣ ಅದರ ಆಶಯಗಳು ಸಹ ಮಂಕಾದಂತೆ ಕಾಣುತ್ತಿವೆ. ಹಾಗಾಗಿ ಸಾಂವಿಧಾನಿಕ ಕಾನೂನುಗಳನ್ನು ಅನುಷ್ಠಾನ ಮಾಡುವವರ ಕರ್ತವ್ಯಗಳು ಸಹ ‘ಈಜು ಬಲ್ಲ ನಾಗರಿಕನು ನದಿಯಲ್ಲಿ ಮುಳುಗುವ ಮಗುವಿನ ರಕ್ಷಣೆಗೆ ಧಾವಿಸದೆ ಅಗ್ನಿಶಾಮಕ ದಳಕ್ಕೆ ಪೋನಾಯಿಸಿದಂತಿವೆ’. ಧಾರ್ಮಿಕ ಅಸಹಿಷ್ಣುತೆ ತಾರಕಕ್ಕೇರಿದಂತೆಲ್ಲ ಸಾಮಾಜಿಕ ಜೀವನಗಳೆಲ್ಲವೂ ಪಾಚಿಯಿಂದ ಸಾಯುವ ಕೆರೆ-ಕುಂಟೆಗಳಂತಾಗುತ್ತವೆ.
ಸಂವಿಧಾನ ಬಹು ರಾಜಕೀಯ ಪಕ್ಷಗಳ ವ್ಯವಸ್ಥೆಗೆ ಬೆಂಬಲ ನೀಡಿ, ಅವುಗಳೂ ಪ್ರಜಾಪ್ರಭುತ್ವದ ಸೈದ್ಧಾಂತಿಕ ಪರಿಧಿಯಲ್ಲಿ ಸಾಗಬೇಕೆಂದು ಸಾರಿದ್ದರೂ ಅದರ ಆಶಯಗಳಿಗೆ ಮಣ್ಣೆರಚಿ ಪ್ರಣಾಳಿಕೆ ಎಂಬ ಸೂತ್ರರಹಿತ ಗಾಳಿಪಟದಾಟವಾಡುತ್ತಿವೆ. ಈ ಗುಣಲಕ್ಷಣಗಳು ಶಾಶ್ವತವಾಗಿ ಬಿಟ್ಟರೆ ಈಗಿನ ಸಂವಿಧಾನ ಜೀವಂತವಾಗಿ ಉಳಿದರೂ ಅದರ ಆಶಯಗಳೆಲ್ಲವೂ ಮಣ್ಣುಪಾಲಾದಂತೆಯೇ ಸರಿ. ಈ ವ್ಯಾಖ್ಯಾನವನ್ನು ಸದೃಢ ಕಾಯ ಜೀವಿಯಲ್ಲಿ ಅಡಗಿರುವ ನಿಸ್ತೇಜ ಸ್ವಭಾವ ಎಂದು ಪರಿಭಾವಿಸಬಹುದು. ಮೀಸಲಾತಿಯಾಚೆ ನಿಂತು ಸಂವಿಧಾನವನ್ನು ವಿಶ್ಲೇಷಿಸಿದಾಗ ಅದು ಯಾವುದೇ ಸಂದರ್ಭದಲ್ಲಿ ಬೇಕಾದರೂ ಸರ್ವರನ್ನು ಒಳಗೊಳ್ಳುವ, ಬೆಸೆಯುವ ಮಾತೃಭಾವವನ್ನು ಹೊಂದಿದೆ. ಪ್ರತಿಯೊಬ್ಬ ಪ್ರಜೆಯೂ ತನ್ನ ಬದುಕಿನ ಆಶಯಗಳನ್ನು ನಿರ್ಮಿಸುವ ಧೀಮಂತಿಕೆಗಳನ್ನು ಅದರ ಪ್ರತೀ ಅಕ್ಷರವೂ ಸಾರುತ್ತಿವೆ. ಉದಾಹರಣೆಗೆ ಆರ್ಥಿಕವಾಗಿ ಹಿಂದುಳಿದಿರುವ ಮೇಲ್ವರ್ಗದವರಿಗೆ ಶೇ. 10 ಮೀಸಲಾತಿಯ ಮೇಲಿರುವ ಟೀಕೆಟಿಪ್ಪಣಿಗಳನ್ನು ಆಂಶಿಕವಾಗಿ ಬದಿಗೆ ತಳ್ಳಿ ವಿಮರ್ಶಿಸಿದಾಗ, ಅದನ್ನು ಸಂವಿಧಾನ ಸ್ವೀಕರಿಸುವ ವಿಶಿಷ್ಟತೆಯಲ್ಲೇ ಅದರ ಶ್ರೇಷ್ಠತೆ, ಬದ್ಧತೆ ಮತ್ತು ಸ್ವೀಕಾರ ಹಾಗೂ ಸಾಮಾಜಿಕ ವಿಸ್ತಾರಗಳು ನಿಚ್ಚಳವಾಗಿ ಪರಿಚಯವಾಗುತ್ತಿವೆ.
75 ವರ್ಷಗಳಿಂದ ದೇಶಾಭಿವೃದ್ಧಿ ಮಂತ್ರಗಳಡಿ ಕೇಂದ್ರ, ರಾಜ್ಯಗಳು, ಸ್ಥಳೀಯ ಸರಕಾರಗಳು ಹಲವು ಆಯಾಮಗಳಲ್ಲಿ ಜನ ಕಲ್ಯಾಣ ಯೋಜನೆಗಳನ್ನು ಜಾರಿ ಮಾಡುತ್ತಲೇ ಬಂದಿವೆ. ಸಮಾಜೋಆರ್ಥಿಕ ಮತ್ತು ಸಾಂಸ್ಥಿಕ ಸಮಸ್ಯೆಗಳ ತೀವ್ರತೆಗಳು ಅಷ್ಟಿಷ್ಟು ಕುಗ್ಗಿದ್ದರೂ ಸಂಪೂರ್ಣವಾಗಿ ಹಿಮ್ಮೆಟ್ಟಲು ಸಾಧ್ಯವಾಗಿಲ್ಲ. ಈ ಪ್ರಗತಿಗಳ ಛಾಯೆಗಳಲ್ಲಿ ಅಡಗಿರುವ ಬಡತನ, ಅಂಧಶ್ರದ್ಧೆ, ಮೌಢ್ಯತೆ, ಸ್ತ್ರೀ ಶೋಷಣೆ, ಅಸ್ಪಶ್ಯತೆ ಆಚರಣೆ, ಮಲಹೊರುವ ಪದ್ಧತಿ, ದೇವದಾಸಿ ಪದ್ಧತಿ, ಲಿಂಗ ತಾರತಮ್ಯತೆ, ಪಂಕ್ತಿಭೇದ, ಕೋಮು ಗಲಭೆಗಳು, ಜಾತಿ ಆಧಾರಿತ ದೌರ್ಜನ್ಯಗಳು, ಭ್ರಷ್ಟಾಚಾರ, ಸ್ವಜನಪಕ್ಷಪಾತ ಇತ್ಯಾದಿ ವಿಚಾರಗಳನ್ನು ಸಂಪ್ರೀತಿಸುವವರೆಲ್ಲರೂ ಅವುಗಳನ್ನು ತುಳಿಯದೆ ಸಾಗುವವರಾಗಿದ್ದಾರೆ. ಅಂದರೆ, ಗುನ್ನಾರ್ ಮಿರ್ಡಾಲ್ ಪ್ರತಿಪಾದಿಸಿರುವಂತೆ ಭಾರತ ತನ್ನ ಸಾಮಾಜಿಕ ನಡವಳಿಕೆಗಳಲ್ಲಿ ಅಶಿಸ್ತಿನ ವರ್ತನೆಗಳಿಂದ ಮಿಂದೇಳುತ್ತಿರುವ ಕಾರಣ ಇಂದಿಗೂ ಸಂವಿಧಾನ ಮತ್ತು ಅದರ ಅನ್ವಯಿಕ ಆಡಳಿತಾತ್ಮಕ ಕಾನೂನುಗಳ ಬಗ್ಗೆ ಕನಿಷ್ಠ ತಿಳಿವಳಿಕೆಗಳಿಲ್ಲದೆ ಜನರು ಬದುಕುತ್ತಿದ್ದಾರೆ ಎಂದರೆ ಅತಿಶಯೋಕ್ತಿ ಆಗಲಾರದು. ಆದುದರಿಂದ, ಶಿಸ್ತುಬದ್ಧ ಸಾಮಾಜಿಕ ನಡವಳಿಕೆಗಳ ಜತೆಗೆ ಸಾಂವಿಧಾನಿಕ ಬದ್ಧತೆ, ಕಾನೂನು ಪರಿಪಾಲನಾ ಬದ್ಧತೆಗಳು ಜನರ ದೈನಂದಿನ ಪ್ರಾರ್ಥನೆಗಳಾದಾಗ ವ್ಯಕ್ತಿಯ ಸಾಮರ್ಥ್ಯಗಳು ದುಡಿಮೆಗೆ ಅಳತೆಗೋಲಾಗುತ್ತವೆ. ಆಗ, ಬದ್ಧವಲ್ಲದ ಸರಕಾರಿ ವೆಚ್ಚಗಳ ನಿಯಂತ್ರಣವಾಗುತ್ತದೆ. ಆಮೂಲಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಪನ್ಮೂಲಗಳ ಲಭ್ಯತೆ ಇರುತ್ತದೆ. ಅವಶ್ಯವಾದ ‘ಸಂವಿಧಾನ, ಸರಕಾರ ಮತ್ತು ಜನತೆ’ ನಡುವಿನ ಸಹ ಸಂಬಂಧಗಳಿಲ್ಲದೆ ಹೋದರೆ ‘‘ಸಂವಿಧಾನ ಪರಿಚಯ’’ ಈವತ್ತಿನ ಜರೂರು ಕಾರ್ಯಕ್ರಮಗಳಂತೆ ಮೆರವಣಿಗೆ ಆಗುತ್ತಿರುತ್ತವೆ. ಅವಶ್ಯವಾಗಿ, ಕಾನೂನುಗಳನ್ನು ಚಾಚು ತಪ್ಪದೆ ಪರಿಪಾಲಿಸುವ ಜನತೆ ಕಾಲದಿಂದ ಕಾಲಕ್ಕೆ ಹುಟ್ಟುತ್ತಲೇ ಇದ್ದರೆ ಸರಕಾರಗಳು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾತ್ರ ಜಪಿಸುತ್ತವೆ. ಆಗ ಜನ ಕಲ್ಯಾಣ ಅವುಗಳ ಬೀಜ ಮಂತ್ರವಾಗುತ್ತವೆ, ಸಂವಿಧಾನದ ‘ಜನ ಕಲ್ಯಾಣ’ ಆಶಯಗಳು ಪ್ರತೀ ಆಯಾಮಗಳಲ್ಲಿ ಅದರ ಅನ್ವಯಿಕ ಕಾನೂನುಗಳ ಮುಖೇನ ಬಿಗಿಯಾದ ಆಡಳಿತ ಚಾಚೂತಪ್ಪದೆ ಅನುಷ್ಠಾನವಾಗುತ್ತಿರುತ್ತವೆ.