ಇತಿಹಾಸ ತಮ್ಮ ಅಧಿಕಾರಾವಧಿಯನ್ನು ಹೇಗೆ ನಿರ್ಣಯಿಸುತ್ತದೆ ಎಂಬುದರ ಬಗ್ಗೆ ಸಿಜೆಐ ಅವರೇ ನಿರ್ಧರಿಸಬೇಕಲ್ಲವೇ?

ಸಿಜೆಐ ಚಂದ್ರಚೂಡ್ ಅವರು ಸಾರ್ವಜನಿಕವಾಗಿ ಆಡುವ ಮಾತುಗಳು ನಮ್ಮಲ್ಲಿ ನ್ಯಾಯದ ಬಗ್ಗೆ ಭರವಸೆಯನ್ನು ಮೂಡಿಸಬಹುದು. ಆದರೆ ಸರ್ವಾಧಿಕಾರದ ಒತ್ತಾಯ ಅಥವಾ ಒತ್ತಡದಲ್ಲಿರುವ ಸ್ವಾಯತ್ತ ಸಂಸ್ಥೆಗಳನ್ನು ಪ್ರಜಾಪ್ರಭುತ್ವದ ರೂಪದಲ್ಲಿ ನಂಬುವಂತೆ ಜನರನ್ನು ಕೇಳುವುದು, ಅನುಮಾನಿಸುವ ಅವರ ಶಕ್ತಿಯನ್ನೇ ಕಿತ್ತುಕೊಂಡಂತಲ್ಲವೆ? ಎಂಬುದು ಕವಿತಾ ಕೃಷ್ಣನ್ ಅವರ ಪ್ರಶ್ನೆ. ಕವಿತಾ ಅವರ ಎಲ್ಲ ಪ್ರಶ್ನೆಗಳಲ್ಲಿ ವಾಸ್ತವಾಂಶದ ಉಲ್ಲೇಖವೇ ಇದೆ. ಅದೂ ಸಿಜೆಐ ಚಂದ್ರಚೂಡ್ ಅವರ ಅಧಿಕಾರಾವಧಿಗೇ ಸಂಬಂಧಿಸಿದೆ. ಈಗ, ಇತಿಹಾಸ ತಮ್ಮ ಅಧಿಕಾರಾವಧಿಯನ್ನು ಹೇಗೆ ನಿರ್ಣಯಿಸುತ್ತದೆ ಎಂಬುದರ ಬಗ್ಗೆ ಸಿಜೆಐ ಅವರೇ ನಿರ್ಧರಿಸಬೇಕಲ್ಲವೇ?

Update: 2024-10-20 04:49 GMT

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನವೆಂಬರ್ 10ರಂದು ನಿವೃತ್ತರಾಗುತ್ತಿದ್ದಾರೆ.

ಈ ಮಧ್ಯೆ, ಸುಪ್ರೀಂಕೋರ್ಟ್‌ನ ನ್ಯಾಯಾಧೀಶರ ಗ್ರಂಥಾಲಯದಲ್ಲಿ ಹೊಸ ನ್ಯಾಯದೇವತೆಯ ಪ್ರತಿಮೆ ಅನಾವರಣ ಮಾಡಲಾಗಿದೆ. ಈ ಪ್ರತಿಮೆಯಲ್ಲಿ ನ್ಯಾಯದೇವತೆಯ ಕಣ್ಣಿಗೆ ಕಟ್ಟಿದ್ದ ಬಟ್ಟೆಯನ್ನು ಬಿಚ್ಚಲಾಗಿದ್ದು, ಮೊದಲು ಖಡ್ಗವಿದ್ದ ಕೈಯಲ್ಲಿ ಸಂವಿಧಾನ ಕೊಡಲಾಗಿದೆ.ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಆದೇಶದಂತೆ ಈ ಬದಲಾವಣೆಗಳನ್ನು ಮಾಡಲಾಗಿದೆ.

ಭಾರತ ವಸಾಹತುಶಾಹಿ ಪರಂಪರೆಯನ್ನು ಕೈಬಿಟ್ಟು ಮುಂದುವರಿಯಬೇಕು. ಕಾನೂನು ಕುರುಡಲ್ಲ ಹಾಗೂ ಅದು ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ. ಖಡ್ಗ ಕ್ರೌರ್ಯದ ಸಂಕೇತ. ಹಾಗಾಗಿ ಅದರ ಬದಲು ನ್ಯಾಯದೇವತೆಯ ಕೈಗೆ ಸಂವಿಧಾನವನ್ನು ಕೊಡುವುದರಿಂದ ಆಕೆ ಅದರ ಪ್ರಕಾರವೇ ನ್ಯಾಯ ಮಾಡುತ್ತಾಳೆ ಎಂಬ ಸಂದೇಶ ರವಾನೆಯಾಗುತ್ತದೆ ಎಂದು ನಂಬಿರುವ ಚಂದ್ರಚೂಡ್ ಈ ಬದಲಾವಣೆಗಳನ್ನು ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ.

ಆದರೆ, ‘ದಿ ಕ್ವಿಂಟ್’ನಲ್ಲಿ ಪ್ರಕಟಿಸಿರುವ ಬರಹದಲ್ಲಿ ಮಹಿಳಾ ಹಕ್ಕುಗಳ ಕಾರ್ಯಕರ್ತೆ ಕವಿತಾ ಕೃಷ್ಣನ್ ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ.

ನ್ಯಾಯಾಲಯಗಳಲ್ಲಿ ನಂಬಿಕೆಯಿಡಿ, ಅವು ಸ್ವಾತಂತ್ರ್ಯವನ್ನು ರಕ್ಷಿಸುತ್ತವೆ ಎಂಬ ಸಿಜೆಐ ಮಾತನ್ನು ಹೇಗೆ ನಂಬುವುದು ಎಂದು ಅವರು ಕೇಳಿದ್ದಾರೆ. ಸಿಜೆಐ ಚಂದ್ರಚೂಡ್ ಅವರು ಸಾರ್ವಜನಿಕವಾಗಿ ಆಡುವ ಮಾತುಗಳು ನಮ್ಮಲ್ಲಿ ನ್ಯಾಯದ ಬಗ್ಗೆ ಭರವಸೆಯನ್ನು ಮೂಡಿಸಬಹುದು. ಆದರೆ ಸರ್ವಾಧಿಕಾರದ ಒತ್ತಾಯ ಅಥವಾ ಒತ್ತಡದಲ್ಲಿರುವ ಸ್ವಾಯತ್ತ ಸಂಸ್ಥೆಗಳನ್ನು ಪ್ರಜಾಪ್ರಭುತ್ವದ ರೂಪದಲ್ಲಿ ನಂಬುವಂತೆ ಜನರನ್ನು ಕೇಳುವುದು, ಅನುಮಾನಿಸುವ ಅವರ ಶಕ್ತಿಯನ್ನೇ ಕಿತ್ತುಕೊಂಡಂತಲ್ಲವೆ ಎಂದು ಕವಿತಾ ಕೃಷ್ಣನ್ ಪ್ರಶ್ನಿಸಿದ್ದಾರೆ.

ಪ್ರೊ. ಸಾಯಿಬಾಬಾ, ಪಾಂಡು ನರೋತೆ, ಸ್ಟಾನ್ ಸ್ವಾಮಿ, ಉಮರ್ ಖಾಲಿದ್ ಸಹಿತ ನೂರಾರು ಮಂದಿಯ ವಿಷಯದಲ್ಲಿ ದೇಶದ ನ್ಯಾಯಾಂಗ ನಡೆದುಕೊಂಡ ರೀತಿಯ ಬಗ್ಗೆ ಕವಿತಾ ಕೃಷ್ಣನ್ ಪ್ರಶ್ನೆಗಳನ್ನು ಎತ್ತಿದ್ದಾರೆ.

‘‘ಇತಿಹಾಸ ನನ್ನ ಅಧಿಕಾರಾವಧಿಯ ಬಗ್ಗೆ ಏನು ತೀರ್ಪು ಕೊಡುತ್ತದೆ?’’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ತಮ್ಮ ಕೊನೆಯ ತಿಂಗಳ ಕೆಲಸ ಆರಂಭಿಸುವಾಗ ಕೇಳಿದ್ದನ್ನು ತಮ್ಮ ಬರಹದ ಆರಂಭದಲ್ಲಿ ಕವಿತಾ ಪ್ರಸ್ತಾಪಿಸಿದ್ದಾರೆ.

‘‘ನನಗೆ ತಿಳುವಳಿಕೆ ಬಂದ ನಂತರದಲ್ಲಿ ನ್ಯಾ.ಡಿ.ವೈ. ಚಂದ್ರಚೂಡ್ ಅವರಿಗಿಂತ ಹೆಚ್ಚು ಪಾಂಡಿತ್ಯಪೂರ್ಣ, ವಿದ್ಯಾವಂತ, ವಾಗ್ಮಿಗಳಾಗಿದ್ದ ಕೆಲವೇ ಕೆಲವು ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು, ಸಿಜೆಐಗಳನ್ನು ಕಂಡಿದ್ದೇನೆ’’ ಎಂದಿದ್ದಾರೆ ಕವಿತಾ.

ಪ್ರೊ. ಜಿ.ಎನ್.ಸಾಯಿಬಾಬಾ, ಪಾಂಡು ನರೋತೆ ಮೃತಪಟ್ಟಿದ್ದಾರೆ. ನ್ಯಾಯಾಲಯವೇ ಹೇಳಿದ ಹಾಗೆ ಸರಕಾರವನ್ನು ಕೆಡವಲು ಪಿತೂರಿ ನಡೆಸಿದ್ದಾರೆ ಎಂಬ ಅಸ್ಪಷ್ಟ ಆರೋಪಗಳನ್ನು ಬಿಟ್ಟು ಮತ್ತೇನೂ ಇಲ್ಲದಿರುವಾಗಲೂ, ತಪ್ಪು ಯುಎಪಿಎ ಶಿಕ್ಷೆಯಿಂದ ಎರಡು ಜೀವಗಳು ವಿನಾಕಾರಣ ಬಲಿಯಾಯಿತು ಎಂದು ಕವಿತಾ ಕಳವಳ ವ್ಯಕ್ತಪಡಿಸಿದ್ದಾರೆ.

ಬಾಂಬೆ ಹೈಕೋರ್ಟ್ ಸಾಯಿಬಾಬಾ ಮತ್ತಿತರರ ಬಿಡುಗಡೆಗೆ ಆದೇಶಿಸಿದ್ದಾಗ, ಸುಪ್ರೀಂ ಕೋರ್ಟ್ ಸಾಮಾನ್ಯವಾಗಿ ಕೆಲಸ ಮಾಡದ ಶನಿವಾರ ದಿಢೀರ್ ಆಗಿ ಅಸಾಮಾನ್ಯ ವಿಚಾರಣೆ ನಡೆಸಿ, ಹೈಕೋರ್ಟ್ ಆದೇಶವನ್ನು ಅಮಾನತುಗೊಳಿಸಿತ್ತು.

ಅದು ಮತ್ತೊಂದು ಹೊಸ ಅಸಹಜತೆಗೆ ನಾಂದಿಯಾಗಿದೆ ಎಂದು ಆಗ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮದನ್ ಲೋಕೂರ್ ಹೇಳಿದ್ದರು. ಈ ಪ್ರಶ್ನಾರ್ಹ ಆದೇಶದ ಎರಡು ತಿಂಗಳ ನಂತರ, ಹೊಸದಾಗಿ ನೇಮಕಗೊಂಡ ಸಿಜೆಐ ಚಂದ್ರಚೂಡ್, ಉಪನ್ಯಾಸವೊಂದರಲ್ಲಿ ವಿಚಾರಣಾ ನ್ಯಾಯಾಲಯದ ಅಸ್ಪಷ್ಟ ಭಾಷೆ ಇತ್ಯಾದಿಗಳ ಬಗ್ಗೆಲ್ಲ ಮಾತಾಡಿದ್ದರು. ವ್ಯಕ್ತಿಯೊಬ್ಬ ಅಗತ್ಯಕ್ಕಿಂತ ಹೆಚ್ಚಿನ ಜೈಲು ಶಿಕ್ಷೆ ಅನುಭವಿಸುವುದನ್ನು ತಪ್ಪಿಸಬೇಕಿರುವುದರ ಬಗ್ಗೆಯೂ ಹೇಳಿದ್ದರು. ಆದರೆ, ಜಿ.ಎನ್. ಸಾಯಿಬಾಬಾ ಅಂಥವರ ವಿಚಾರದಲ್ಲಿ ಕೋರ್ಟ್ ಹೇಗೆ ನಡೆದುಕೊಂಡಿದೆ ಎಂಬುದರ ಹಿನ್ನೆಲೆಯಲ್ಲಿ, ಚಂದ್ರಚೂಡ್ ಅವರ ಮಾತುಗಳು ಬರಿ ಒಣ ಉಪದೇಶ ಎನ್ನಿಸುವುದಿಲ್ಲವೇ ಎಂದು ಕವಿತಾ ಪ್ರಶ್ನಿಸುತ್ತಾರೆ.

ಆಗಸ್ಟ್ 2021ರಲ್ಲಿ ನ್ಯಾಯಮೂರ್ತಿ ಚಂದ್ರಚೂಡ್ ಅವರು ‘ಅಧಿಕಾರಕ್ಕೆ ಸತ್ಯವನ್ನು ಹೇಳುವುದರ ಕುರಿತು’ ಉಪನ್ಯಾಸ ನೀಡಿದ್ದರು. ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವ ಮನೋಧರ್ಮ ಬೆಳೆಸಿಕೊಳ್ಳಿ ಎಂದಿದ್ದರು. ಯುಎಪಿಎ ದಿಂದ ನಾಗರಿಕರನ್ನು ರಕ್ಷಿಸುವಲ್ಲಿ ಸುಪ್ರೀಂಕೋರ್ಟ್‌ನ ಪಾತ್ರದ ಕುರಿತು ಮಾತನಾಡಿದ್ದರು.

ಅರ್ನಬ್ ಗೋಸ್ವಾಮಿಗೆ ಜಾಮೀನು ನೀಡುವ ತಮ್ಮ ತೀರ್ಪಿನಲ್ಲಿ ಒಂದೇ ದಿನವೂ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವುದು ಆಗಬಾರದು ಎಂದು ಧ್ವನಿಸುವ ಟಿಪ್ಪಣಿ ಮಾಡಿದ್ದರು. ಆದರೆ, ಯುವ ವಿದ್ವಾಂಸ ಉಮರ್ ಖಾಲಿದ್‌ಗೆ ಸತತ ಜಾಮೀನು ನಿರಾಕರಿಸುತ್ತಲೇ ಬರಲಾಗಿರುವ ವಿಚಾರವೂ ಕಣ್ಣೆದುರು ಇದೆ.

ಹಲವು ಪ್ರಕರಣಗಳಲ್ಲಿ ಜಾಮೀನು ನೀಡದೇ ಇರುವ ಕ್ರಮವನ್ನು ಸಿಜೆಐ ದೂಷಿಸಿದ್ದೂ ಇದೆ. ಆದರೆ ಖಾಲಿದ್ ವಿಚಾರದಲ್ಲಿ ನಿರಂತರ ನ್ಯಾಯ ನಿರಾಕರಣೆ ಆದುದನ್ನು ನೆನಪಿಸಿ ಕವಿತಾ ಕಳವಳ ವ್ಯಕ್ತಪಡಿಸಿದ್ದಾರೆ.

ಈ ವರ್ಷ ಜುಲೈನಲ್ಲಿ ಮಾಡಿದ ಭಾಷಣವೊಂದರಲ್ಲಿ ಜನರಿಗೆ ಕೋರ್ಟ್‌ನಲ್ಲಿ ವಿಚಾರಣೆಯ ಅವಕಾಶ ಸಿಗಬೇಕು ಎಂಬ ಸರಳ ಕಾರಣದಿಂದಾಗಿ ಸುಪ್ರೀಂ ಕೋರ್ಟ್ ರಜೆಯ ಸಂದರ್ಭಗಳಲ್ಲೂ ಜಾಮೀನು ಅರ್ಜಿಗಳಿಗೆ ಆದ್ಯತೆ ಕೊಡುತ್ತದೆ ಎಂದು ಹೇಳಿದ್ದರು. ಆದರೆ ಆ ಅವಕಾಶ ಉಮರ್ ಖಾಲಿದ್‌ಗೆ ಸಿಗಲೇ ಇಲ್ಲ ಯಾಕೆ?

ಎಪ್ರಿಲ್ 2023ರಿಂದ ಫೆಬ್ರವರಿ 2024ರ ನಡುವೆ ಸುಪ್ರೀಂ ಕೋರ್ಟ್ ಉಮರ್ ಖಾಲಿದ್ ಜಾಮೀನು ಅರ್ಜಿಯ ವಿಚಾರಣೆಯನ್ನು 14 ಬಾರಿ ಮುಂದೂಡಿದೆ.

ಸುಪ್ರೀಂ ಕೋರ್ಟ್ ಜಾಮೀನು ಮೇಲ್ಮನವಿಗಳ ವಿಚಾರಣೆಗೆ ಆದ್ಯತೆ ನೀಡುತ್ತಿದೆ ಎಂಬ ಸಿಜೆಐ ಮಾತನ್ನು ನೆನಪಿಸಿರುವ ಕವಿತಾ, ಉಮರ್ ಖಾಲಿದ್ ಜಾಮೀನು ವಿಚಾರದಲ್ಲಿ ಕೋರ್ಟ್ ನಡೆದುಕೊಂಡ ರೀತಿ ನ್ಯಾಯಾಂಗವನ್ನೇ ಅಣಕಿಸುವಂತೆ ಕಂಡುಬರುತ್ತದೆ ಎಂದಿದ್ದಾರೆ.

ಒಬ್ಬ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮತ್ತು ಒಬ್ಬ ಹೈಕೋರ್ಟ್ ನ್ಯಾಯಾಧೀಶರು ಯಾವುದೇ ಸ್ಪಷ್ಟವಾದ ಆಧಾರಗಳಿಲ್ಲದೆ ಪ್ರಕರಣದಿಂದ ಹಿಂದೆ ಸರಿದಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಅವರ ಜಾಮೀನು ಅರ್ಜಿಯನ್ನು ಒಬ್ಬ ನಿರ್ದಿಷ್ಟ ನ್ಯಾಯಾಧೀಶರ ನ್ಯಾಯಾಲಯಕ್ಕೆ ಬರುವವರೆಗೆ ಬೆಂಚ್‌ನಿಂದ ಬೆಂಚ್‌ಗೆ ವರ್ಗಾಯಿಸಲಾಯಿತು. ಅದೇ ನಿರ್ದಿಷ್ಟ ನ್ಯಾಯಾಧೀಶರ ಪೀಠಕ್ಕೆ ಹಲವಾರು ರಾಜಕೀಯ ಸೂಕ್ಷ್ಮ ಪ್ರಕರಣಗಳನ್ನು ನಿಯಮಗಳಿಗೆ ವಿರುದ್ಧವಾಗಿ ಸ್ಥಳಾಂತರಿಸಲಾಗಿದೆ ಎಂಬ ವಿಚಾರವನ್ನೂ ಕವಿತಾ ಉಲ್ಲೇಖಿಸಿದ್ದಾರೆ.

ಖಂಡಿತವಾಗಿಯೂ ಸಿಜೆಐ ಸುಪ್ರೀಂ ಕೋರ್ಟ್‌ನ ಮಾಸ್ಟರ್ ಆಫ್ ರೋಸ್ಟರ್. ಯಾವ ಪ್ರಕರಣ ಯಾವ ಪೀಠದೆದುರು ಹೋಗಬೇಕು ಎಂಬ ಬಗ್ಗೆ ಅಂತಿಮ ತೀರ್ಮಾನ ಅವರದ್ದೇ. ಹಾಗಿರುವಾಗ ಹಲವು ಸೂಕ್ಷ್ಮ ರಾಜಕೀಯ ಪ್ರಕರಣಗಳು ಒಂದು ನಿರ್ದಿಷ್ಟ ನ್ಯಾಯಾಧೀಶರ ಬಳಿಯೇ ಹೋಗುವ ಈ ಪ್ರಹಸನವನ್ನು ಚಂದ್ರಚೂಡ್ ಕೊನೆಗೊಳಿಸಬಹುದಿತ್ತು ಎಂದಿದ್ದಾರೆ ಕವಿತಾ ಕೃಷ್ಣನ್.

ಅಕ್ಟೊಬರ್ 7ರಂದು ಎರಡು ತಿಂಗಳ ನಂತರ ಮತ್ತೆ ಉಮರ್ ಖಾಲಿದ್, ಶರ್ಜೀಲ್ ಇಮಾಮ್ ಇನ್ನಿತರರ ಜಾಮೀನು ಅರ್ಜಿ ದಿಲ್ಲಿ ಹೈಕೋರ್ಟಿನ ದ್ವಿಸದಸ್ಯ ಪೀಠದ ಮುಂದೆ ಬಂದಿತ್ತು. ಒಬ್ಬ ನ್ಯಾಯಾಧೀಶರು ರಜೆಯ ಮೇಲಿದ್ದರಿಂದ ಕೋರ್ಟು ವಿಚಾರಣೆಯನ್ನು 50 ದಿನಗಳ ನಂತರ ನವೆಂಬರ್ 25ಕ್ಕೆ ಮುಂದೂಡಿತು!

ಉಮರ್ ಮತ್ತಿತರರು ಈಗಾಗಲೇ ಜಾಮೀನು ಇಲ್ಲದೆ, ವಿಚಾರಣೆ ಇಲ್ಲದೆ ಜೈಲಿನಲ್ಲಿ ನಾಲ್ಕು ವರ್ಷ ಕಳೆದಿದ್ದಾರೆ.

ಆರೋಪಿಯ ಮೇಲೆ ಗಂಭೀರ ಅಪರಾಧಗಳ ಆರೋಪವಿದೆ ಎಂಬ ಕಾರಣಕ್ಕೆ ಜಾಮೀನನ್ನು ತಿರಸ್ಕರಿಸುವ ಬದಲು ದೃಢವಾದ ಸಾಮಾನ್ಯ ಜ್ಞಾನ ಅನ್ವಯಿಸುವಂತೆ ಸಿಜೆಐ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರಿಗೆ ಸೂಚಿಸುತ್ತಾರೆ.

ಇನ್ನೊದೆಡೆ, ಯುಎಪಿಎ ಜಾಮೀನು ಪ್ರಕರಣಗಳಲ್ಲಿ ನ್ಯಾಯಾಧೀಶರು ಅಂತಹ ಸಾಮಾನ್ಯ ಜ್ಞಾನವನ್ನು ಚಲಾಯಿಸದಂತೆ ಸುಪ್ರೀಂಕೋರ್ಟ್ ತೀರ್ಪು ನಿರ್ಬಂಧಿಸುತ್ತದೆ ಎಂದು ವರ್ಷಗಳಿಂದ ನಮಗೆ ಹೇಳಲಾಗಿದೆ ಎಂದು ಕವಿತಾ ಹೇಳಿದ್ದಾರೆ.

ಹಲವಾರು ಸಂದರ್ಭಗಳಲ್ಲಿ, ನ್ಯಾಯಮೂರ್ತಿ ಚಂದ್ರಚೂಡ್ ಅವರು ದೈಹಿಕ ಮತ್ತು ಮಾನಸಿಕ ಆರೋಗ್ಯ ಮತ್ತು ಅಪರಾಧಿಗಳು ಸೇರಿದಂತೆ ಕೈದಿಗಳ ಮಾನವ ಘನತೆಯನ್ನು ಕಾಪಾಡುವ ಜೈಲು ವ್ಯವಸ್ಥೆಯ ಕರ್ತವ್ಯದ ಬಗ್ಗೆ ಮಾತನಾಡಿದ್ದಾರೆ ಎಂದು ಕವಿತಾ ಉಲ್ಲೇಖಿಸಿದ್ದಾರೆ.

ಕವಿತಾ ಅವರ ಎಲ್ಲ ಪ್ರಶ್ನೆಗಳಲ್ಲಿ ವಾಸ್ತವಾಂಶದ ಉಲ್ಲೇಖವೇ ಇದೆ. ಅದೂ ಸಿಜೆಐ ಚಂದ್ರಚೂಡ್ ಅವರ ಅಧಿಕಾರಾವಧಿಗೇ ಸಂಬಂಧಿಸಿದೆ.

ಈಗ, ಇತಿಹಾಸ ತಮ್ಮ ಅಧಿಕಾರಾವಧಿಯನ್ನು ಹೇಗೆ ನಿರ್ಣಯಿಸುತ್ತದೆ ಎಂಬುದರ ಬಗ್ಗೆ ಸಿಜೆಐ ಅವರೇ ನಿರ್ಧರಿಸಬೇಕಲ್ಲವೇ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎಚ್. ವೇಣುಪ್ರಸಾದ್

contributor

Similar News