ಭಾರತೀಯ ಬುಡಕಟ್ಟು ಜನರಲ್ಲಿ ಹೆಚ್ಚಾಗುತ್ತಿದೆ ಸಿಕಲ್‌ಸೆಲ್ ಅನಿಮೀಯಾ
ಸಿಕಲ್‌ಸೆಲ್ ಅನಿಮೀಯಾ ಅಥವಾ ಕುಡಗೋಲು ರೋಗ ಅಪರೂಪದ ಜೆನೆಟಿಕ್ ಕಾಯಿಲೆಗಳಲ್ಲಿ ಒಂದಾಗಿದೆ. ಇದನ್ನು ತಳಿಶಾಸ್ತ್ರೀಯವಾಗಿ (ಜೆನೆಟಿಕ್) ಆಟೋಸೋಮಲ್ ರಿಸೆಸಿವ್ ಆನುವಂಶಿಕತೆಯಿಂದ ಉಂಟಾಗುವ ರಕ್ತ ಸಂಬಂಧಿತ ಕಾಯಿಲೆ ಎನ್ನಬಹುದು. ಸಿಕಲ್‌ಸೆಲ್ ಅನಿಮೀಯಾದೊಂದಿಗೆ ಥಲ್ಸೇಮೀಯಾ ಎನ್ನುವ ಇನ್ನೊಂದು ಸ್ಥಿತಿಯು ರೋಗಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇದನ್ನು ಒಟ್ಟಾಗಿ ಹಿಮೋಗ್ಲೋಬಿನೋಪತಿ ಎಂದು ಕರೆಯಲಾಗುತ್ತದೆ. ಈ ಸಮಸ್ಯೆ ಹೊಂದಿರುವವರಲ್ಲಿ ಕೆಂಪು ರಕ್ತ ಕಣಗಳು ವಿಶಿಷ್ಟವಾದ ಕುಡಗೋಲು-ಆಕಾರದ ಅಥವಾ ಅರ್ಧ ಚಂದ್ರ ಆಕಾರದ ರೂಪ ಹೊಂದಿರುತ್ತವೆ. ಇದರಿಂದ ದೇಹದ ಇತರ ಭಾಗಗಳಿಗೆ ಸರಿಯಾಗಿ ಆಮ್ಲಜನಕ ತಲುಪುವುದಿಲ್ಲ. ಈ ಕುರಿತು ಮೊದಲು ವೈದ್ಯ ಜೇಮ್ಸ್ ಹೆರಿಕ್ ಅವರು 1910ರಲ್ಲಿ ವಿಶ್ವಕ್ಕೆ ವಿವರಿಸಿದರು. ಅವರು ತಮ್ಮ ವೈದ್ಯಕೀಯ ವಿದ್ಯಾರ್ಥಿಯಲ್ಲಿ ಅವುಗಳನ್ನು ಮೊದಲು ಗಮನಿಸಿದ್ದರು. ನಂತರ 1949ರಲ್ಲಿ, ಲಿನಸ್ ಪೌಲಿಂಗ್ ಎಂಬ ವಿಜ್ಞಾನಿ ಹಿಮೋಗ್ಲೋಬಿನ್ ಸಮಸ್ಯೆಯಿಂದ ಈ ವಿಶಿಷ್ಟ ಕಾಯಿಲೆ ಉಂಟಾಗುತ್ತದೆ ಎಂದು ಗುರುತಿಸಿದರು ಮತ್ತು ಇದನ್ನು ಜೀನ್ಸ್‌ನಲ್ಲಿ ಉಂಟಾಗುವ ಪೀಳಿಗೆಯಿಂದ ಪೀಳಿಗೆಗೆ ಬರುವ ಕಾಯಿಲೆ ಎಂದು ವ್ಯಾಖ್ಯಾನಿಸಿದರು. ಇದು ಹೆಚ್ಚಾಗಿ ಬುಡಕಟ್ಟು ಜನರಲ್ಲಿ ಕಾಣಿಸಿಕೊಳ್ಳುತ್ತಿರುವ ಕಾಯಿಲೆಯಾಗಿದೆ. ಭಾರತದ ಕೆಲವು ಬುಡಕಟ್ಟು ಸಮುದಾಯ ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಸಿಕಲ್‌ಸೆಲ್ ಹರಡುವಿಕೆಯನ್ನು ಹೊಂದಿದೆ. ಜಾಗತಿಕವಾಗಿ ಇದು ಅತಿ ಹೆಚ್ಚು ಎಂದು ಪರಿಗಣಿತವಾಗಿದೆ. ಭಾರತದ ದಕ್ಷಿಣ, ಮಧ್ಯ ಮತ್ತು ಪಶ್ಚಿಮ ರಾಜ್ಯಗಳಲ್ಲಿನ ಬುಡಕಟ್ಟು ಜನಸಂಖ್ಯೆಯಲ್ಲಿ ವಿಶೇಷವಾಗಿ ಈ ಸಮಸ್ಯೆ ಇದೆ. ‘ಗ್ಲೋಬಲ್ ಅಲಯನ್ಸ್ ಆಫ್ ಸಿಕಲ್ ಸೆಲ್ ಡಿಸೀಸ್ ಆರ್ಗನೈಸೇಶನ್ಸ್’ ಇತ್ತೀಚೆಗೆ ವಿಶ್ವ ಸಿಕಲ್‌ಸೆಲ್ ಅನಿಮೀಯಾ-2024 ವರ್ಷವನ್ನು ‘ಪ್ರಗತಿಯ ಮೂಲಕ ಭರವಸೆ: ಜಾಗತಿಕವಾಗಿ ಸಿಕಲ್‌ಸೆಲ್ ಅನಿಮೀಯಾ’ ಎಂದು ಘೋಷಿಸಿದೆ.
ಈ ಕಾಯಿಲೆಯ ಮುಖ್ಯ ಲಕ್ಷಣವೆಂದರೆ ಕಡಿಮೆ ಸಂಖ್ಯೆಯ ಕೆಂಪು ರಕ್ತ ಕಣಗಳು (ರಕ್ತಹೀನತೆ), ಅತಿಯಾದ ಸೋಂಕುಗಳು ಮತ್ತು ತೀವ್ರತರವಾದ ನಿರಂತರ ದೈಹಿಕ ನೋವು. ಈ ಚಿಹ್ನೆಗಳು ಮತ್ತು ರೋಗಲಕ್ಷಣಗಳ ತೀವ್ರತೆಯು ವ್ಯಕ್ತಿಗಳಲ್ಲಿ ವ್ಯಾಪಕವಾಗಿ ಬದಲಾಗುತ್ತದೆ. ಕೆಲವರು ಸೌಮ್ಯ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಆದರೆ ಇತರರು ಹೆಚ್ಚು ತೀವ್ರವಾದ ಕಾಯಿಲೆಯಿಂದ ಆಗಾಗ ಆಸ್ಪತ್ರೆಗೆ ಸೇರಬೇಕಾಗುತ್ತದೆ. ಭಾರತದಲ್ಲಿ ಈ ಸಂಬಂಧ ಮೊದಲ ಸಂಶೋಧನೆಯನ್ನು 1952ರಲ್ಲಿ ಲೆಹ್ಮನ್ ಮತ್ತು ಕಟ್ಬುಷ್ ಎಂಬ ತಜ್ಞರು ನಡೆಸಿದರು. ಅವರು ದಕ್ಷಿಣ ಭಾರತದ ನೀಲಗಿರಿ ಬೆಟ್ಟಗಳ ಬುಡಕಟ್ಟು ಜನಸಂಖ್ಯೆಯಲ್ಲಿ ಇದನ್ನು ಮೊದಲ ಬಾರಿಗೆ ಆಕಸ್ಮಿಕವಾಗಿ ಗುರುತಿಸಿದರು. ಅಲ್ಲಿಂದೀಚೆಗೆ, ಭಾರತದ ಹಲವಾರು ಬುಡಕಟ್ಟು ಜನಸಂಖ್ಯೆಯ ಗುಂಪುಗಳಲ್ಲಿ ಈ ಕಾಯಿಲೆ ಕುರಿತು ವ್ಯಾಪಕವಾಗಿ ಪರೀಕ್ಷಿಸಲಾಯಿತು. ಸಾಮಾನ್ಯವಾಗಿ ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ ಬುಡಕಟ್ಟು ಮತ್ತು ಇತರ ಗುಂಪುಗಳಲ್ಲಿ ಈ ಕಾಯಿಲೆಯ ಜೀನ್ಸ್‌ನ ಹರಡುವಿಕೆಯನ್ನು ಕಂಡುಹಿಡಿಯಲಾಗಿದೆ. ತಜ್ಞರ ಪ್ರಕಾರ ಭಾರತದ ಜನಸಂಖ್ಯೆಯಲ್ಲಿ ಇದರ ಹರಡುವಿಕೆಯ ಪ್ರಮಾಣ 1 ರಿಂದ 40 ಪ್ರತಿಶತದವರೆಗೆ ಇದೆ ಎನ್ನಲಾಗಿದೆ. ಸಂಶೋಧನೆಗಳ ಪ್ರಕಾರ ಭಾರತದ ಒಟ್ಟು ಬುಡಕಟ್ಟುಗಳಲ್ಲಿ ಸಿಕಲ್ ಸೆಲ್ ಈ ಕಾಯಿಲೆಯ ಹರಡುವಿಕೆಯು 0ರಿಂದ 35 ಪ್ರತಿಶತದವರೆಗೆ ಬದಲಾಗುತ್ತದೆ ಎನ್ನುತ್ತಾರೆ ತಜ್ಞರು.
ಭಾರತದ ಮಧ್ಯಪ್ರದೇಶದ ಬುಡಕಟ್ಟು ಮತ್ತು ಇತರ ಜನರಲ್ಲಿ ಈ ಕಾಯಿಲೆ ಹೆಚ್ಚಾಗಿ ಕಂಡುಬಂದಿದೆ. ಇದಲ್ಲದೆ, ಮಧ್ಯಪ್ರದೇಶದ 45 ಜಿಲ್ಲೆಗಳಲ್ಲಿ 27 ಈ ಕಾಯಿಲೆಯ ಪಟ್ಟಿಯೊಳಗೆ ಬರುತ್ತವೆ. ಅಲ್ಲಿ ಹರಡುವಿಕೆಯು ಶೇ. 10 ರಿಂದ 33 ಪ್ರತಿಶತದವರೆಗೆ ಇರುವುದು ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ, ಈ ಕಾಯಿಲೆಯ ವಂಶವಾಹಿಯು ವಿದರ್ಭ ಪ್ರದೇಶ ಎಂದು ಕರೆಯಲ್ಪಡುವ ಎಲ್ಲಾ ಪೂರ್ವ ಜಿಲ್ಲೆಗಳಲ್ಲಿ, ಉತ್ತರದಲ್ಲಿರುವ ಸಾತ್ಪುರ ಶ್ರೇಣಿಗಳಲ್ಲಿ ಮತ್ತು ಮರಾಠಾವಾಡದ ಕೆಲವು ಭಾಗಗಳಲ್ಲಿ ವ್ಯಾಪಕವಾಗಿ ಹರಡಿಕೊಂಡಿದೆ. ಕೇರಳದ ವಯನಾಡ್ ಜಿಲ್ಲೆಯ, ಹೆಚ್ಚಿನ ಬುಡಕಟ್ಟು ಜನರಲ್ಲ್ ಇದು ಕಂಡು ಬಂದಿದೆ. ಇಲ್ಲಿನ ಬುಡಕಟ್ಟುಗಳು 18.2ರಿಂದ 34.1 ಪ್ರತಿಶತದಷ್ಟು ಹೆಚ್ಚು ಹರಡುವಿಕೆಯನ್ನು ಹೊಂದಿವೆ ಎನ್ನುತ್ತವೆ ಸಂಶೋಧನೆಗಳು. ಗುಜರಾತಿನ ಬುಡಕಟ್ಟುಗಳು ಅತಿ ಹೆಚ್ಚು ಎಂದರೆ ಶೇ. 13 ರಿಂದ 31 ಪ್ರತಿಶತದವರೆಗೆ ಈ ಕಾಯಿಲೆಯ ಪ್ರಾಬಲ್ಯವನ್ನು ಹೊಂದಿವೆ ಎನ್ನುವ ಮಾಹಿತಿ ತಿಳಿದುಬಂದಿದೆ. ಭಾರತೀಯ ರೆಡ್ ಕ್ರಾಸ್ ಸೊಸೈಟಿ ನಡೆಸಿದ ಇತ್ತೀಚಿನ ವ್ಯಾಪಕ ಸಮೀಕ್ಷೆಗಳ ಪ್ರಕಾರ 22 ರಾಜ್ಯಗಳಿಂದ ಸುಮಾರು 1,68,498 ಬುಡಕಟ್ಟು ಜನಾಂಗದವರನ್ನು ಪರೀಕ್ಷಿಸಿ, ಈ ಕಾಯಿಲೆಯ ಒಟ್ಟಾರೆ ಹರಡುವಿಕೆಯ ಪ್ರಾಬಲ್ಯ ಶೇ. 11.37 ಪ್ರತಿಶತದಷ್ಟು ಕಂಡುಹಿಡಿದಿದೆ. ದಕ್ಷಿಣಭಾರತಕ್ಕಿಂತ ಉತ್ತರ ಭಾರತದ ಬುಡಕಟ್ಟು ಜನಾಂಗದಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬಂದಿದೆ. 2016ರಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಭಾರತದಲ್ಲಿ ಈ ಕಾಯಿಲೆಯ ತಡೆಗಟ್ಟುವಿಕೆ ಮತ್ತು ನಿಯಂತ್ರಣದ ಕುರಿತು ರಾಷ್ಟ್ರೀಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತು. ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಈ ಕಾಯಿಲೆಗಾಗಿ ಪ್ರತ್ಯೇಕ ರಾಷ್ಟ್ರೀಯ ಮಂಡಳಿಯನ್ನು ಸ್ಥಾಪಿಸಿತು ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ರೋಗಿಗಳು ಮತ್ತು ಆರೋಗ್ಯ ಸೌಲಭ್ಯಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ತ್ವರಿತ ವೈದ್ಯಕೀಯ ಸೇವೆಯನ್ನು ಪ್ರಾರಂಭಿಸಿತು.
ಕರ್ನಾಟಕದ ಮೈಸೂರು, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಯ ಎರವ ಮತ್ತು ಜೇನುಕುರುಬ ಬುಡಕಟ್ಟುಗಳಲ್ಲಿ ಇದು ಹೆಚ್ಚಾಗಿ ಕಂಡುಬಂದಿದೆ. ಚಾಮರಾಜನಗರ, ಮೈಸೂರು, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆರಂಭಿಸಲಾದ ರೋಗ ಪತ್ತೆ ಅಭಿಯಾನದಲ್ಲಿ ಇದುವರೆಗೆ 23,935 ಆದಿವಾಸಿಗಳನ್ನು ಪರೀಕ್ಷಿಸಲಾಗಿದ್ದು, 342 ಮಂದಿ ಸಿಕಲ್ ಸೆಲ್ ಅನೀಮಿಯಾಗೆ ಒಳಗಾಗಿರುವುದನ್ನು ಪತ್ತೆ ಮಾಡಿದ್ದಾರೆ. ಸರಕಾರವು ಇವರಿಗೆ ಉಚಿತ ಆರೋಗ್ಯ ಸೇವೆ ನೀಡುತ್ತಿದೆ. ಕರ್ನಾಟಕ ಸರಕಾರವು ರೋಗಿಗಳಿಗೆ ವಿಶಿಷ್ಟ ಅಂಗವೈಕಲ್ಯ ಗುರುತಿನ (ಯುಡಿಐಡಿ) ಕಾರ್ಡ್‌ಗಳನ್ನು ನೀಡಿದೆ ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ಶೇ. 50ರಷ್ಟು ರಿಯಾಯಿತಿಯನ್ನು ನೀಡಿದೆ. ಈ ಕಾಯಿಲೆಯ ಸಂಭವವನ್ನು ಕಡಿಮೆ ಮಾಡುವ ಪ್ರಯತ್ನಗಳ ವಿಚಾರದಲ್ಲಿ ರಾಜ್ಯದಲ್ಲಿ ಇದುವರೆಗೆ ಸುಮಾರು 2,480 ಫಲಾನುಭವಿಗಳಿಗೆ ಆನುವಂಶಿಕ ಸಮಾಲೋಚನೆಯನ್ನು ಒದಗಿಸಿವೆ ಮತ್ತು ಪರಸ್ಪರ ಮದುವೆಯಾಗದಂತೆ ಸೂಚಿಸಲಾಗಿದೆ ಎನ್ನುವ ಅಂಶ ಆರೋಗ್ಯ ಇಲಾಖೆಯಿಂದ ತಿಳಿದುಬಂದಿದೆ.
ಆರೋಗ್ಯ ಸಂಬಂಧಿತ ಕಳೆದ ಬಾರಿಯ ಬಜೆಟ್ ಹಂಚಿಕೆ ಅಡಿಯಲ್ಲಿ, ಅನುಸೂಚಿತ ಬುಡಕಟ್ಟುಗಳ ಅಭಿವೃದ್ಧಿ ಕ್ರಿಯಾ ಯೋಜನೆಯ ಭಾಗವಾಗಿ ನಿರ್ದಿಷ್ಟವಾಗಿ ದುರ್ಬಲ ಬುಡಕಟ್ಟು ಗುಂಪುಗಳು ಅಭಿವೃದ್ಧಿ ಮಿಷನ್ ಮೂಲಕ ಮುಂದಿನ ಮೂರು ವರ್ಷಗಳಲ್ಲಿ 15,000 ಕೋಟಿ ರೂ.ಯನ್ನು ಈ ಕಾಯಿಲೆಯ ನಿಯಂತ್ರಣಕ್ಕೆ ಬಳಸಲು ಉದ್ದೇಶಿಸಲಾಗಿದೆ. ಸರಕಾರಿ ಮತ್ತು ಖಾಸಗಿ ವಲಯದ ಪ್ರಯತ್ನಗಳು ಅಂಚಿನಲ್ಲಿರುವ ಬುಡಕಟ್ಟು ಸಮುದಾಯಗಳಿಗೆ ಸಮಯೋಚಿತ ರೋಗನಿರ್ಣಯ ಮತ್ತು ಹೆಚ್ಚಿನ ಜಾಗೃತಿಗೆ ಕಾರಣವಾಗಿವೆ. ಈ ಪ್ರಯತ್ನಗಳನ್ನು ಇನ್ನಷ್ಟು ಹೆಚ್ಚು ಮಾಡಲು ಮತ್ತು ರೋಗವನ್ನು ವೇಗವಾಗಿ ನಿರ್ಮೂಲನೆ ಮಾಡಲು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವ ವಿಚಾರದಲ್ಲಿ ಈಗಾಗಲೇ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಸಿಕಲ್‌ಸೆಲ್ ಅನಿಮೀಯಾ ರೋಗವನ್ನು ನಿರ್ಮೂಲನೆ ಮಾಡಲು ಸರಕಾರ, ನಿಗಮಗಳು ಮತ್ತು ಎನ್‌ಜಿಒಗಳ ನಡುವಿನ ಸಹಯೋಗದ ಪ್ರಯತ್ನವು ನಿರ್ಣಾಯಕವಾಗಿದೆ. ವಿವಿಧ ಸಂಸ್ಥೆಗಳ ಅನುಭವಗಳ ಪಾಠಗಳನ್ನು ಕ್ರೋಡೀಕರಿಸುವುದು ಮತ್ತು ತಳ ಮಟ್ಟದ ಪ್ರಯತ್ನಗಳನ್ನು ಹೆಚ್ಚಿಸುವುದು ಅತ್ಯಗತ್ಯ ಎನ್ನುತ್ತಾರೆ ತಜ್ಞರು. ಹುಟ್ಟುವ ಮಕ್ಕಳಲ್ಲಿ ಈ ಕಾಯಿಲೆಯನ್ನು ತಡೆಗಟ್ಟಲು ಪ್ರಸವಪೂರ್ವ ಹಂತದಲ್ಲಿ ರೋಗವನ್ನು ಗುರುತಿಸಬಹುದಾದ ಪೂರ್ವಭಾವಿ ಜೆನೆಟಿಕ್ ಟೆಸ್ಟಿಂಗ್ ಮೂಲಕ ಆರಂಭಿಕ ಪತ್ತೆ ಮತ್ತು ಚಿಕಿತ್ಸೆಯನ್ನು ನೀಡಲು ಹೊಸ ಉಪಕ್ರಮಗಳ ಅಗತ್ಯ ಕುರಿತು ಈಗಾಗಲೇ ಸರಕಾರದ ಮಟ್ಟದಲ್ಲಿ ಚಿಂತನೆಗಳು ಆರಂಭವಾಗಿವೆ. ರೋಗಿಗಳು ತಮ್ಮ ಮುಂದಿನ ಸಂತತಿಗೆ ಸಿಕಲ್‌ಸೆಲ್ ಅನಿಮೀಯಾ ವಾಹಕವನ್ನು (ಜೀನ್ಸ್) ರವಾನಿಸುವುದನ್ನು ತಪ್ಪಿಸಲು ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ.
ಸಾರ್ವಜನಿಕ ಆರೋಗ್ಯ ಕಾರ್ಯಕರ್ತರ ಜಾಗೃತಿ ಮತ್ತು ತರಬೇತಿಯು ವಿಶೇಷವಾಗಿ ಭಾರತದ ಬುಡಕಟ್ಟು ಪ್ರದೇಶಗಳಲ್ಲಿ ಸಮಯೋಚಿತ ಮತ್ತು ಸೂಕ್ಷ್ಮ ಆರೈಕೆ ಮತ್ತು ನಿರ್ವಹಣೆಗೆ ಸಹಾಯ ಮಾಡುತ್ತದೆ. ಆದ್ದರಿಂದ, ಈ ಕಾರ್ಯತಂತ್ರಗಳನ್ನು ತಳ ಮಟ್ಟದಲ್ಲಿ ಕಾರ್ಯಗತಗೊಳಿಸಲು ಮತ್ತು ಕಾಯಿಲೆಯ ನಿರ್ಮೂಲನೆಗೆ ಕೆಲಸ ಮಾಡಲು ಎಲ್ಲಾ ಮಧ್ಯಸ್ಥಗಾರರು(ಸಮುದಾಯ, ಎನ್‌ಜಿಒ ಇತ್ಯಾದಿ) ಒಗ್ಗೂಡುವುದು ತುರ್ತು ಅವಶ್ಯಕ. ಇಂತಹ ಸಹಕಾರಿ ಪ್ರಯತ್ನಗಳು ಬುಡಕಟ್ಟು ಪ್ರದೇಶಗಳಲ್ಲಿ ವಾಸಿಸುವ ಸಿಕಲ್‌ಸೆಲ್ ಅನಿಮೀಯಾ ಪೀಡಿತರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಗಣನೀಯವಾಗಿ ಸುಧಾರಿಸುತ್ತದೆ. ಬುಡಕಟ್ಟು ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಸ್ಪತ್ರೆಗಳ ವ್ಯವಸ್ಥೆಯಲ್ಲೂ ಸಾಕಷ್ಟು ಸುಧಾರಣೆಯ ಅಗತ್ಯವಿದೆ. ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಸಂಬಂಧಪಟ್ಟವರಿಗೆ ಮತ್ತು ಇತರರಿಗೆ ಈ ಕಾಯಿಲೆ ಕುರಿತು ಶಿಕ್ಷಣ ಮತ್ತು ಸಲಹೆ ನೀಡುವುದರಲ್ಲಿ ಸ್ಥಳೀಯ ಆರೋಗ್ಯ ಮತ್ತು ಸಮುದಾಯ ಕಾರ್ಯಕರ್ತರ ಪಾತ್ರ ನಿರ್ಣಾಯಕವಾಗಿದೆ. ಈ ಕಾಯಿಲೆಯ ನಿರ್ಮೂಲನೆಯಲ್ಲಿ ಸ್ಥಳೀಯ ವ್ಯವಸ್ಥೆಗಳ ಪಾತ್ರ ನಿರ್ಣಾಯಕ. ಸರಕಾರದ ಮಟ್ಟದಲ್ಲಿನ ನೀತಿ ನಿರೂಪಣೆಗಳು ಸಹ ಸಿಕಲ್‌ಸೆಲ್ ಅನಿಮೀಯಾ ನಿರ್ಮೂಲನೆಯಲ್ಲಿ ಗಮನಾರ್ಹವಾಗಿ ಪ್ರಭಾವ ಬೀರಬಲ್ಲದು.
ಸಿಕಲ್‌ಸೆಲ್ ಅನಿಮೀಯಾ ವಿಚಾರದಲ್ಲಿ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಪಾತ್ರಗಳ ಬಗ್ಗೆ ಬಹು ಹಂತಗಳಲ್ಲಿ ವಿಶ್ಲೇಷಿಸಬೇಕಾಗುತ್ತದೆ. ಸಾಮಾಜಿಕ-ಸಾಂಸ್ಕೃತಿಕ ಅಂಶಗಳ ಪಾತ್ರವನ್ನು ಪ್ರಾಥಮಿಕವಾಗಿ ಸಾಂಕ್ರಾಮಿಕ ರೋಗಶಾಸ್ತ್ರದ ಪರಿಭಾಷೆಯಲ್ಲಿ ಪ್ರತಿನಿಧಿಸಬೇಕು. ಈ ಕಾಯಿಲೆಯ ತಡಗಟ್ಟುವಿಕೆಯ ವಿಚಾರದಲ್ಲಿ ಸೂಕ್ಷ್ಮ ಮಟ್ಟದಲ್ಲಿ ಆರ್ಥಿಕ-ರಾಜಕೀಯ ಅಂಶಗಳು ಸಹ ಸೇರಿಕೊಂಡಿವೆ. ಸಾಮಾಜಿಕ ಅಸಮಾನತೆಗಳಾದ ಜಾತಿ, ಲಿಂಗ, ಸಾಮಾಜಿಕ ಆರ್ಥಿಕ ಸ್ಥಾನ ಸೇರಿದಂತೆ ತಳ ಮಟ್ಟದ ಸೂಕ್ಷ್ಮ ಅಂಶಗಳು ಇಲ್ಲಿ ನಿರ್ಣಾಯಕ. ಈ ಕಾಯಿಲೆಯ ನಿರ್ವಹಣೆ ಕುರಿತು ಹೊಸ ಆರೋಗ್ಯ ನೀತಿಗೆ ಸಂಬಂಧಪಟ್ಟ ವಿಶ್ಲೇಷಣೆ ತುಂಬಾ ಅಗತ್ಯ. ಇದಲ್ಲದೆ, ಇಂದಿಗೂ ಅನೇಕ ಬುಡಕಟ್ಟು ಮತ್ತು ಗ್ರಾಮೀಣ ಸಮುದಾಯಗಳಲ್ಲಿ ಸಾಂಪ್ರದಾಯಿಕ ಔಷಧಿಗಳ ಮೇಲೆ ವ್ಯಾಪಕವಾದ ಅವಲಂಬನೆ ಸಹ ಇಲ್ಲಿ ಗಮನಿಸಬೇಕಾದ ಅಂಶ. ಸಿಕಲ್‌ಸೆಲ್ ಅನಿಮೀಯಾ ವಿಚಾರದಲ್ಲಿ ಬುಡಕಟ್ಟು ಸಮುದಾಯದ ಸಾಂಪ್ರದಾಯಿಕ ಆರೋಗ್ಯ ವ್ಯವಸ್ಥೆಗಳ ಪಾತ್ರವನ್ನು ಕುರಿತು ಅಧ್ಯಯನ ಇನ್ನಷ್ಟೇ ಆರಂಭವಾಗಬೇಕಾಗಿದೆ. ಮೈಸೂರಿನ ಜೆಎಸ್‌ಎಸ್ ವೈದ್ಯಕೀಯ ಕಾಲೇಜು ಈ ವಿಚಾರದಲ್ಲಿ ಈಗಾಗಲೇ ಹೆಜ್ಜೆ ಇಟ್ಟಿದೆ. ಇತ್ತೀಚೆಗೆ ಕರ್ನಾಟಕ ಸರಕಾರವು ‘ಪ್ರಾಜೆಕ್ಟ್ ಚಂದನ’ ಎಂಬ ಯೋಜನೆಯನ್ನು ಆರಂಭಿಸಿದ್ದು ಈ ನಿಟ್ಟಿನಲ್ಲಿ ಮತ್ತಷ್ಟು ಭರವಸೆಯನ್ನು ಮೂಡಿಸಿದೆ.