ಕೊಡಗಿನಲ್ಲಿ ಗಮನ ಸೆಳೆಯುತ್ತಿದೆ ʼಸ್ಕೈವಾಕ್ ಬ್ರಿಡ್ಜ್ʼ
ಮಡಿಕೇರಿ: ಪ್ರಾಕೃತಿಕ ಸೌಂದರ್ಯದ ಮೂಲಕ ಗಮನ ಸೆಳೆದಿರುವ ಕೊಡಗು ಜಿಲ್ಲೆಯಲ್ಲಿ ದಕ್ಷಿಣ ಭಾರತದ ಅತ್ಯಂತ ದೊಡ್ಡ ಗಾಜಿನ ಸೇತುವೆ ಖ್ಯಾತಿಯ ಸ್ಕೈ ವಾಕ್ ಬ್ರಿಡ್ಜ್ ಉದ್ಘಾಟನೆಗೊಂಡಿದೆ.
ಕಳೆದ ವರ್ಷವಷ್ಟೆ ಮಡಿಕೇರಿ-ಭಾಗಮಂಡಲ ರಸ್ತೆಯಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣಗೊಂಡಿತ್ತು. ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಈ ಬ್ರಿಡ್ಜ್‌ನಿಂದ ಪ್ರವಾಸೋದ್ಯಮ ಅವಲಂಬಿತರಿಗೂ ಅನುಕೂಲವಾಗಿತ್ತು. ಇದೀಗ ಮತ್ತೊಂದು ಗ್ಲಾಸ್ ಬ್ರಿಡ್ಜ್ ಕೊಡಗಿನಲ್ಲಿ ಗಮನ ಸೆಳೆಯುತ್ತಿದೆ.
ಈ ನೂತನ ಗ್ಲಾಸ್ ಸ್ಕೈವಾಕ್ ಬ್ರಿಡ್ಜ್, ಮಡಿಕೇರಿ ಹೊರವಲಯದ ಅಬ್ಬಿಫಾಲ್ಸ್, ಮಾಂದಲ್‌ಪಟ್ಟಿಗೆ ತೆರಳುವ ರಸ್ತೆಯ ಬದಿಯಲ್ಲಿರುವ ಜಾಗದಲ್ಲೇ ನಿರ್ಮಿಸಲಾಗಿದೆ. ಮಡಿಕೇರಿ ನಗರದಿಂದ ಸುಮಾರು 5 ಕಿಮೀ ಸಂಚಾರ ಮಾಡಿದರೆ ಅಬ್ಬಿಫಾಲ್ಸ್ ಜಂಕ್ಷನ್ ಬಳಿ ಇರುವ ನಂದಿಮೊಟ್ಟೆ ಎಂಬ ಸ್ಥಳದಲ್ಲಿ ಈ ಅತೀ ದೊಡ್ಡ ಗ್ಲಾಸ್ ಬ್ರಿಡ್ಜ್ ಸಿಗುತ್ತದೆ. 180 ಮೀಟರ್ ಉದ್ದ, 8 ಅಡಿ ಅಗಲ, 270 ಅಡಿ ಎತ್ತರದಲ್ಲಿರುವ ಈ ಗ್ಲಾಸ್ ಸ್ಕೈ ವಾಕ್ ಬ್ರಿಡ್ಜ್ ಎಲ್ಲರ ಗಮನ ಸೆಳೆಯುತ್ತಿವೆ.
ಕೊಡಗಿನ ಈ ಸ್ವಾಭಾವಿಕ ಪ್ರಕೃತಿಯ ಸೌಂದರ್ಯ ಇಡೀ ವಿಶ್ವದ ಗಮನ ಸೆಳೆದಿದೆ. ಅದರಲ್ಲೂ ಇಲ್ಲಿನ ವೀವ್ ಪಾಯಿಂಟ್‌ಗಳಂತೂ ಮನಮೋಹಕವಾಗಿದೆ. ಅದರ ಸಾಲಿಗೆ ಸದ್ಯ ಬೆಟ್ಟದ ಇಕ್ಕೆಲಗಳ ನಡುವೆ ಇದೀಗ ಖಾಸಗಿಯವರಿಂದ ನಿರ್ಮಾಣವಾಗಿರುವ ಗ್ಲಾಸ್ ಸ್ಕೈ ವಾಕ್ ಬ್ರಿಡ್ಜ್ ಸೇರಿದೆ. ಹಸಿರ ಪ್ರಕೃತಿಯ ನಡುವೆ ಪಾರದರ್ಶಕ ಗಾಜಿನ ಮೇಲೆ ನಡೆಯುವ ರೋಮಾಂಚಕ ಅನುಭವವನ್ನು ಪ್ರವಾಸಿಗರು ಪಡೆದುಕೊಳ್ಳಬಹುದಾಗಿದೆ.
ಸುಮಾರು 15 ಟನ್ ಭಾರ ಹೊರುವ ಸಾಮರ್ಥ್ಯದ ಈ ಬ್ರಿಡ್ಜ್‌ನಲ್ಲಿ ಒಮ್ಮೆಗೆ 30 ರಿಂದ 35 ಮಂದಿ ನಿಂತು ಪ್ರಕೃತಿಯ ಸೌಂದರ್ಯ ಸವಿಯಬಹುದಾಗಿದೆ. ಮಳೆಗಾಲ, ಚಳಿಗಾಲದ ಸಮಯದಲ್ಲಿ ಮೋಡಗಳ ಮರೆಯಲ್ಲಿ ಪ್ರವಾಸಿಗರಿಗೆ ರೋಮಾಂಚಕ ಅನುಭವ ಸಿಗಲಿದೆ.
ದಕ್ಷಿಣ ಭಾರತದಲ್ಲಿಯೇ ಅತ್ಯಂತ ಎತ್ತರದ ಹಾಗೂ ಉದ್ದದ ಗಾಜಿನ ಸೇತುವೆ ಎಂಬ ಖ್ಯಾತಿಯನ್ನು ಈ ಸೇತುವೆ ಪಡೆದುಕೊಂಡಿದೆ. ಗಾಜಿನ ಸೇತುವೆಯಲ್ಲಿ ಸಂಭ್ರಮಾಚರಣೆಗೂ ವಿಶೇಷ ಸ್ಥಳ ನಿರ್ಮಿಸಲಾಗಿದೆ. ಇಲ್ಲಿ ಕೇಕ್ ಕತ್ತರಿಸಬಹುದಾಗಿದೆ. ಗಾಜಿನ ಮೇಲೆ ನಡೆದಾಡುವವರ ಸುರಕ್ಷತೆಗೂ ಅಗತ್ಯ ಮುತುವರ್ಜಿ ವಹಿಸಲಾಗಿದೆ. ಪ್ರವಾಸಿಗರ ವಾಹನ ನಿಲುಗಡೆಗೂ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, 4 ಎಕರೆ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಸೇತುವೆ ಬಳಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ವಾರ್ಷಿಕವಾಗಿ ಅತೀ ಹೆಚ್ಚು ಪ್ರವಾಸಿಗರು ಕೊಡಗಿಗೆ ಭೇಟಿ ನೀಡುತ್ತಾರೆ. ಪ್ರವಾಸೋದ್ಯಮ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಕಳೆದ ವರ್ಷ ಜನವರಿಯಿಂದ ಡಿಸೆಂಬರ್ ಅಂತ್ಯದವರೆಗೆ 43,69,507 ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡಿದ್ದಾರೆ. ಇದೀಗ ಗ್ಲಾಸ್ ಬ್ರಿಡ್ಜ್‌ಗಳ ನಿರ್ಮಾಣದಿಂದ ಇನ್ನೂ ಹೆಚ್ಚಿನ ಪ್ರವಾಸಿಗರು ಜಿಲ್ಲೆಯತ್ತ ಮುಖ ಮಾಡುವ ಸಾಧ್ಯತೆ ಇದೆ. ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ನಂದಿಮೊಟ್ಟೆ ಬಳಿ ಗ್ಲಾಸ್ ಬ್ರಿಡ್ಜ್ ನಿರ್ಮಿಸಲಾಗಿದೆ.
ಸುಮಾರು 30-35 ಜನ ಪ್ರವಾಸಿಗರು ಒಮ್ಮೆಲೆ ನಿಲ್ಲಬಹುದಾದ ಸೇತುವೆ ಇದಾಗಿದ್ದು, ಸುರಕ್ಷತೆಗೂ ಆದ್ಯತೆ ನೀಡಲಾಗಿದೆ. ಅಬ್ಬಿ ಫಾಲ್ಸ್ ಹಾಗೂ ಮಾಂದಲ್‌ಪಟ್ಟಿಗೆ ಇದೇ ರಸ್ತೆಯಲ್ಲಿ ಸಂಚರಿಸಬೇಕಾಗಿರುವುದರಿಂದ ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುವ ನಿರೀಕ್ಷೆ ಇದೆ.
- ರಾಜೇಶ್ ಯಲ್ಲಪ್ಪ, ಉದ್ಯಮಿ, ಮಡಿಕೇರಿ
ನಮ್ಮ ಗ್ರಾಮದಲ್ಲಿ ಇಂತಹದೊಂದು ಸುಂದರ ಗಾಜಿನ ಸೇತುವೆ ನಿರ್ಮಾಣಗೊಂಡಿರುವುದು ಉತ್ತಮ ಬೆಳವಣಿಗೆ. ಗಾಜಿನ ಸೇತುವೆ ಮೇಲೆ ನಿಂತು ಸುತ್ತಲೂ ಸುಂದರ ಪರಿಸರವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಬಹುದಾಗಿದೆ. ಪಾರ್ಕಿಂಗ್‌ಗೂ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿರುವುದರಿಂದ ಯಾವುದೇ ಸಮಸ್ಯೆ ಇಲ್ಲ. ಇಂತಹ ಯೋಜನೆಗಳಿಂದ ಸ್ಥಳೀಯರಿಗೂ ಒಂದಷ್ಟು ಉದ್ಯೋಗ ದೊರೆಯಲಿದೆ.
-ವಿವೇಕ್, ಸ್ಥಳೀಯರು