ಶಾಂತಿ, ಮೃದು ಹೋರಾಟದ ಮೂಲಕವೇ 6 ಸಾವಿರ ಎಕರೆಗೂ ಹೆಚ್ಚು ಭೂಮಿ ಪಡೆದು ಹಂಚಿದ ಹೋರಾಟಗಾರ ಸೋಮಣ್ಣ

Update: 2024-02-12 09:41 GMT

ಮೈಸೂರು: ಶಾಂತಿಯುತ ಪ್ರತಿಭಟನೆ, ಹಾಸ್ಯ, ಹೋರಾಟದ ಹಾಡುಗಳ ಮೂಲಕವೇ ಬುಡಕಟ್ಟು ಸಮುದಾಯದ ಸ್ಥಿತಿಗತಿಗಳ ಅನಾವರಣ ಮಾಡಿಸಿ ಅಧಿಕಾರಿಗಳ ಗಮನ ಸೆಳೆದು ಸುಮಾರು 6 ಸಾವಿರ ಎಕರೆಗೂ ಹೆಚ್ಚು ಭೂಮಿಯನ್ನು ಸರಕಾರದಿಂದ ಪಡೆದು ಬಡಕಟ್ಟು ಸಮುದಾಯಕ್ಕೆ ಹಂಚಿದ ಜೇನುಕುರುಬ ಸಮುದಾಯದ ಸೋಮಣ್ಣ ಅವರಿಗೆ ದೇಶದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ದೊರಕಿರುವುದು ಇಡೀ ಬುಡಕಟ್ಟು ಸಮುದಾಯಕ್ಕೆ ಸಂದಗೌರವ ಎಂದು ಭಾವಿಸಲಾಗುತ್ತಿದ್ದು, ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಮೊತ್ತ ಹಾಡಿಯ ದಿ.ಬಸಮ್ಮ ಮತ್ತು ಕುನ್ನಯ್ಯ ಅವರ ಪುತ್ರ ಸೋಮಣ್ಣ, ಓದಿದ್ದು ಮಾತ್ರ ನಾಲ್ಕನೇ ತರಗತಿ. ತನ್ನ ತಾಯಿಯ ಕಷ್ಟ ಸಹಿಸದೆ ತುತ್ತಿನ ಊಟಕ್ಕಾಗಿ ಗೌಡರ ಮನೆಯಲ್ಲಿ ಜೀತಕ್ಕೆ ಸೇರಿಕೊಂಡು ನಂತರ ಕುಟುಂಬ ನಿರ್ವಹಣೆ ಜೊತೆಗೆ ಸಮುದಾಯದ ಪರ ಹೋರಾಟದ ಹಾದಿಯೊಂದಿಗೆ ಪದ್ಮಶ್ರೀವರೆಗೆ ತಮ್ಮ ಜೀವನವನ್ನು ಸವೆಸಿರುವ ಅಪರೂಪದ ಸರಳ, ಸೌಮ್ಯ ಮತ್ತು ಮೃದ ಸ್ವಾಭಾವದ ವ್ಯಕ್ತಿ.

ತನ್ನ ತಾಯಿ ಮಗನನ್ನು ಓದಿಸಬೇಕು ಎಂದು ಶಾಲೆಗೆ ಸೇರಿಸಿ ಹಸಿ ಹುಲ್ಲನ್ನು ಕೊಯ್ದು ಅದನ್ನು ಮಾರಿ ಬರುವ ಪುಡಿಗಾಸಿನಲ್ಲಿ ಜೀವನ ಸಾಗಿಸುತ್ತಿದ್ದರು. ಹುಲ್ಲನ್ನು ಹೆಚ್ಚು ಕೊಯ್ದುಕೊಂಡು ಹೋದರೆ ಹೆಚ್ಚಿನ ಹಣ ಸಿಗುತ್ತದೆ ಎಂಬ ಆಸೆಯಿಂದ ಒಮ್ಮೆ ಹೆಚ್ಚಿನ ಹುಲ್ಲನ್ನು ಕೊಯ್ದು ಅದನ್ನು ಹೊತ್ತಿಕೊಂಡು ಎಚ್.ಡಿ.ಕೋಟೆ ಪಟ್ಟಣಕ್ಕೆ ನಡೆದುಕೊಂಡು ಹೋಗಬೇಕಾದರೆ ಹುಲ್ಲಿನ ಹೊರೆಯ ತೂಕ ತಡೆಯದೇ ಸೋಮಣ್ಣನವರ ತಾಯಿ ಕುಸಿದು ಬೀಳುತ್ತಾರೆ. ಆಗ ಅಲ್ಲೇ ಇದ್ದ ಹಸುಗಳು ಹುಲ್ಲನ್ನು ತಿನ್ನುತ್ತಿರುವ ವಿಚಾರ ತಿಳಿದ ಸೋಮಣ್ಣ ಅಲ್ಲಿಗೆ ಓಡಿಹೋಗಿ ನೋಡುತ್ತಾರೆ. ತಾಯಿಯ ಕಷ್ಟವನ್ನು ಕಂಡ ಸೋಮಣ್ಣ ಅಂದೇ ತನ್ನ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿ ತಾಯಿ ಕಷ್ಟಕ್ಕೆ ನೆರವಾಗಬೇಕು ಎಂದು ಅದೇ ಊರಿನ ಗೌಡರ ಮನೆಗೆ ಜೀತಕ್ಕೆ ಸೇರಿಕೊಳ್ಳುತ್ತಾರೆ.

ಮೊದಲ ವರ್ಷ 16.50 ರೂ.ಗೆ ಜೀತಕ್ಕೆ ಸೇರಿಕೊಳ್ಳುತ್ತಾರೆ. ಗೌಡರ ಮನೆಯಲ್ಲಿ ಕೊಡುವ ಊಟವನ್ನು ಮಾಡಿ ತನ್ನ ತಾಯಿಗೂ ಸ್ವಲ್ಪಟವಲ್‌ನಲ್ಲಿ ಕಟ್ಟಿಕೊಂಡು ಬಂದು ಜೀವನ ನಡೆಸಿದ್ದಾರೆ. ಗೌಡರ ಮನೆಯಲ್ಲಿ ಕೊಟ್ಟ 16.50 ರೂ.ಗಳಲ್ಲಿ ತಾಯಿಗೆ 16 ರೂ.ಕೊಟ್ಟು 50 ಪೈಸೆಯನ್ನು ತನ್ನಲ್ಲಿ ಇಟ್ಟುಕೊಳ್ಳುತ್ತಾರೆ. ಆ 50 ಪೈಸೆ ಏಕೆಂದರೆ ಸಿನೆಮಾ ನೋಡಲು. ರಾಜ್‌ಕುಮಾರ್ ಸಿನೆಮಾ ಎಂದರೆ ಬಲು ಇಷ್ಟಪಡುವ ಸೋಮಣ್ಣ, ಎಚ್.ಡಿ.ಕೋಟೆಯ ಟೆಂಟ್‌ನಲ್ಲಿ ಭಲೇ ಜೋಡಿ, ಬೀದಿ ಬಸವಣ್ಣ, ಕಸ್ತೂರಿ ನಿವಾಸ ಸೇರಿದಂತೆ ರಾಜ್‌ಕುಮಾರ್ ಸಿನೆಮಾವನ್ನು 1 ಪೈಸೆ ಕೊಟ್ಟು ಸೆಕೆಂಡ್ ಶೋನಲ್ಲಿ ನೋಡಿಕೊಂಡು ಬಂದು ಸಂತೋಷಪಡುತ್ತಿದ್ದರಂತೆ

ನಂತರದ ವರ್ಷಗಳಲ್ಲಿ 20 ರೂ. 25 ರೂ.ರೀತಿ ನಾಲ್ಕು ವರ್ಷ ಜೀತ ಮಾಡುತ್ತಾರೆ. ನಂತರ ವಾರದ ಜೀತಕ್ಕೆ ಸೇರಿಕೊಂಡು ಎರಡು ಎಕರೆ ಜಮೀನು ಪಡೆದು ಕೆಲಸ ಮಾಡಿದ್ದಾರೆ. ಈ ವೇಳೆ ಅರಣ್ಯ ಹಕ್ಕು ಕಾಯ್ದೆಯಡಿ ಬುಡಕಟ್ಟು ಜನರನ್ನು ಅಧಿಕಾರಿಗಳು ಒಕ್ಕಲೆಬ್ಬಿಸಿದ್ದರಿಂದ ಅಲ್ಲಿಂದ ಮೊತ್ತ ಹಾಡಿಗೆ ಬಂದು ಕಾಲುವೆ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ನಂತರ ಡೈನಮ್ ಗುಂಡಿ ಹೊಡೆದರೆ ಅಡಿಗೆ 1 ರೂ.ನಂತೆ ಹಣಕೊಡುತ್ತಾರೆ ಎಂದು ಡೈನಮ್ ಗುಂಡಿ ಅಗೆಯುವಾಗ ಅವರ ಬೆರಳು ಕಟ್ಟಾಗುತ್ತದೆ.

ಬಳಿಕ ದಲಿತ ಸಂಘರ್ಷ ಸಮಿತಿ ಸಂಘಟನೆ ಸೇರಿ ಮೊತ್ತ ಹಾಡಿಗೆ ಬಂದು ದಸಂಸ ಸಂಘಟನೆ ಮಾಡುವಾಗ ಸಂಘದಲ್ಲಿ ದಲಿತರ ದೌರ್ಜನ್ಯ, ಸೇರಿದಂತೆ ಇತರ ವಿಷಯಗಳ ಬಗ್ಗೆ ಮಾತ್ರ ಚರ್ಚೆಯಾಗುತ್ತಿರುತ್ತದೆ. ಇದು ಸೋಮಣ್ಣ ಅವರನ್ನು ಕಾಡಿಸುತ್ತದೆ. ನಮ್ಮ ಬುಡಕಟ್ಟು ಸಮುದಾಯದ ಬಗ್ಗೆ ಇಲ್ಲಿ ಚರ್ಚೆಯೇ ಆಗುತ್ತಿಲ್ಲವಲ್ಲ. ನಮ್ಮ ಸಮುದಾಯದ ಅಭಿವೃದ್ಧಿಗೆ ನಾನು ಒಂದು ಸಂಘ ಕಟ್ಟಬೇಕಲ್ಲ ಎಂದು ತಮ್ಮ ಮಾವ ಮತ್ತು ಇತರ ನಾಲ್ಕು ಜನರೊಂದಿಗೆ ಚರ್ಚಿಸಿ ಬಡಕಟ್ಟು ಕೃಷಿಕರ ಸಂಘವನ್ನು ಸ್ಥಾಪಿಸುತ್ತಾರೆ.

ನಂತರ ಇವರು ಬಡುಕಟ್ಟು ಸಮುದಾಯದ ಜೇನುಕುರುಬ, ಬೆಟ್ಟಕುರುಬ, ಎರವ, ಸೋಲಿಗ, ಹಕ್ಕಿಪಿಕ್ಕಿ ಸಮುದಾಯದವರ ಹಕ್ಕುಗಳಿಗಾಗಿ ಹೋರಾಟ ಪ್ರಾರಂಭಿಸುತ್ತಾರೆ. ಅಷ್ಟರಲ್ಲಾಗಲೇ ಹೋರಾಟದ ರೂಪಗಳನ್ನು ಅರಿತಿದ್ದ ಸೋಮಣ್ಣ, ಜಿಲ್ಲಾಧಿಕಾರಿ, ಎಸಿ, ಎಸ್ಪಿ ಸೇರಿದಂತೆ ಹಲವು ಅಧಿಕಾರಿಗಳ ಬಳಿಗೆ ಹೋಗಿ ಅರಣ್ಯ ಹಕ್ಕು ಕಾಯ್ದೆಯಡಿ ನಮ್ಮನ್ನೆಲ್ಲಾ ಒಕ್ಕಲೆಬ್ಬಿಸಿದ್ದಾರೆ. ನಮಗೆ ಎಲ್ಲಾದರೂ ಸರಕಾರಿ ಜಾಗಕೊಟ್ಟರೆ ಬದುಕು ಕಟ್ಟಿಕೊಳ್ಳುತ್ತೇವೆ ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಬುಡಕಟ್ಟು ಜನರನ್ನು ಒಟ್ಟಿಗೆ ಸೇರಿಸಿ ಅಲ್ಲಲ್ಲಿ 50 ಎಕರೆ 100 ಎಕರೆ ಜಾಗಗಳಲ್ಲಿ ಗುಡಿಸಲುಗಳನ್ನು ನಿರ್ಮಿಸಿ ಈ ಜಾಗಕ್ಕೆ ಹಕ್ಕು ಪತ್ರಕೊಡಿ ಎಂದು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಮಾಡಿದ ಶಾಂತಿಯುತ ಹೋರಾಟಕ್ಕೆ ಮಣಿದ ಅಧಿಕಾರಿಗಳು ಜಮೀನುಗಳನ್ನು ಮಂಜೂರು ಮಾಡಿಕೊಟ್ಟಿದ್ದಾರೆ. ಹೋರಾಟದ ಸಮಯದಲ್ಲಿ ಸೋಮಣ್ಣ ಶ್ರೀಮಂತರು,ಜಮೀನ್ದಾರರ ಕೈಯಲ್ಲಿ ಏಟನ್ನು ತಿಂದಿದ್ದಾರೆ. ಅದ್ಯಾವುದಕ್ಕೂ ಬಗ್ಗದ ಸೋಮಣ್ಣ ಡೀಡ್ ಸಂಸ್ಥೆಯ ದಿವಂಗತ ಕ್ಷೀರಸಾಗರ್, ದಸಂಸದ ನಂಜುಂಡಮೂರ್ತಿ, ಸೇರಿದಂತೆ ಹಲವರ ಸಹಕಾರದಿಂದ ಹೋರಾಟವನ್ನು ಮುಂದುವರಿಸುತ್ತಾರೆ.

ಅಂದಿನ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವಿ.ಪಿ.ಬಳಿಗಾರ್, ತಾ.ಮ.ವಿಜಯಭಾಸ್ಕರ್, ಪೊಲೀಸ್ ವರಿಷ್ಠಾಧಿಕಾರಿ ಬಿಪಿನ್‌ಗೋಪಾಲಕೃಷ್ಣ, ತಾಲೂಕು ಮತ್ತು ವಿಭಾಗ ಮಟ್ಟದ ಅಧಿಕಾರಿಗಳು ಬುಡಕಟ್ಟು ಸಮುದಾಯಕ್ಕೆ ಸಹಾಯ ಮಾಡುತ್ತಾರೆ. ಇದರ ಫಲ 6 ಸಾವಿರಕ್ಕೂ ಹೆಚ್ಚು ಭೂಮಿಯನ್ನು ಬುಡಕಟ್ಟು ಸಮುದಾಯಕ್ಕೆ ಕೊಡಿಸಲಾಗುತ್ತದೆ. ಇದರ ಜೊತೆಗೆ ಬುಡಕಟ್ಟು ಸಮುದಾಯದ ಹೆಣ್ಣು ಮಕ್ಕಳು ನರ್ಸಿಂಗ್ ತರಬೇತಿ ಪಡೆದು ನರ್ಸ್‌ಗಳಾಗಿದ್ದಾರೆ ಮತ್ತು ಅರಣ್ಯ ವಾಚರ್‌ಗಳು ಆಗಿದ್ದಾರೆ. ಇದಕ್ಕೆಲ್ಲಾ ಸೋಮಣ್ಣ ಅವರ ಹೋರಾಟವೇ ಕಾರಣವಾಗಿದೆ.

ಇಷ್ಟೆಲ್ಲಾ ಹೋರಾಟಕ್ಕೆ ಪತ್ನಿ ರಾಜಮ್ಮ ಅವರ ಸಹಕಾರ ಕಾರಣ ಎನ್ನುವ ಸೋಮಣ್ಣ, ತನ್ನ ಪತ್ನಿ ಜ.7ರಂದು ನಿಧನರಾಗುತ್ತಾರೆ. ಜ.21ಕ್ಕೆ ಪದ್ಮಶ್ರೀ ಪ್ರಶಸ್ತಿ ಬಂದಿದೆ ಎಂಬ ದೂರವಾಣಿ ಕರೆ ಬರುತ್ತದೆ. ಒಂದನ್ನು ಕಳೆದುಕೊಂಡೆ ಮತ್ತೊಂದನ್ನು ಗಳಿಸಿಕೊಂಡೆ ಎಂದು ಬಾವುಕರಾಗುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ನೇರಳೆ ಸತೀಶ್‌ಕುಮಾರ್

contributor

Similar News