ವಿಶೇಷ ವರ್ಗದ ಸ್ಥಾನಮಾನ: ಕಮರಿದ ರಾಜ್ಯಗಳ ಆಸೆ..?

ವಿಶೇಷ ಸ್ಥಾನಮಾನವನ್ನು ಪಡೆದಿರುವ ರಾಜ್ಯಗಳು ಕೇಂದ್ರದಿಂದ ವಿಶೇಷವಾದ ಅನುದಾನವನ್ನು ಪಡೆಯುತ್ತವೆ. ಕೇಂದ್ರ ಸರಕಾರವು ಹೆಚ್ಚಿನ ಸಾಲವನ್ನು ಇಂತಹ ರಾಜ್ಯಗಳಿಗೆ ನೀಡುತ್ತದೆ. ಅನುದಾನದ ಅನುಪಾತವನ್ನು ನಿರ್ಧರಿಸುವಾಗ ಇಂತಹ ರಾಜ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ವಿಶೇಷ ಯೋಜನೆ ಅಡಿಯಲ್ಲಿ ಇಂತಹ ರಾಜ್ಯಗಳಿಗೆ ಶೇ.90ರಷ್ಟು ಅನುದಾನದ ರೂಪದಲ್ಲಿ ಮತ್ತು ಶೇ.10ರಷ್ಟು ಸಾಲದ ರೂಪದಲ್ಲಿ ಕೇಂದ್ರ ಸರಕಾರವೇ ನೀಡುತ್ತದೆ. ಇಷ್ಟೇ ಅಲ್ಲದೆ ತೆರಿಗೆ ವಿಚಾರದಲ್ಲಿ ಇಂತಹ ರಾಜ್ಯಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗುತ್ತದೆ.

Update: 2024-07-25 06:31 GMT

ಭಾರತವು ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಹೊಂದಿದ್ದು ಅವುಗಳಿಗೆ ಭಾರತದ ಸಂವಿಧಾನದ ಅಡಿಯಲ್ಲಿ ವಿಶೇಷ ಸ್ಥಾನಮಾನ ನೀಡಲಾಗಿದೆ. ಈ ಸ್ಥಾನಮಾನಗಳು ಈ ಪ್ರದೇಶಗಳ ನಿರ್ದಿಷ್ಟ ಅಗತ್ಯಗಳು ಮತ್ತು ಸಮಸ್ಯೆಗಳನ್ನು ಪರಿಹರಿಸಲು ವಿನ್ಯಾಸಗೊಳಿಸಲಾಗಿದೆ. ಭಾರತೀಯ ಸಂವಿಧಾನದ ೩೭೧ನೇ ವಿಧಿಯು ವಿವಿಧ ರಾಜ್ಯಗಳಿಗೆ ತಮ್ಮ ವಿಶಿಷ್ಟವಾದ ಸಾಮಾಜಿಕ-ಆರ್ಥಿಕ ಮತ್ತು ಸಾಂಸ್ಕೃತಿಕ ಅಗತ್ಯಗಳನ್ನು ಪರಿಹರಿಸಲು ವಿಶೇಷ ಅವಕಾಶಗಳನ್ನು ಒದಗಿಸುತ್ತದೆ. ಇದರಿಂದ ಈ ರಾಜ್ಯಗಳು ಕೇಂದ್ರ ಸರಕಾರದಿಂದ ಹಣಕಾಸಿನ ನೆರವಿನ ವಿಷಯದಲ್ಲಿ ವಿಶೇಷ ಆದ್ಯತೆಯನ್ನು ಪಡೆಯುತ್ತವೆ. ಚುನಾವಣೆಯ ನಂತರ ನಡೆದ ವಿದ್ಯಮಾನಗಳನ್ನು ಗಮನಿಸಿದರೆ ಆಂಧ್ರಪ್ರದೇಶ ಮತ್ತು ಬಿಹಾರಗಳು ವಿಶೇಷ ವರ್ಗದ ಸ್ಥಾನಮಾನಗಳನ್ನು ಪಡೆಯಲು ಭಾರೀ ಪೈಪೋಟಿಯನ್ನು ನಡೆಸಿದ್ದವು ಮತ್ತು ಇದರ ಆಧಾರದ ಮೇಲೆ ಕೇಂದ್ರದಲ್ಲಿ ಬಿಜೆಪಿಗೆ ಬೆಂಬಲ ಸಹ ನೀಡಿದ್ದವು. ಆದರೆ ಮೊನ್ನೆಯ ಬಜೆಟ್ ಅವೆಲ್ಲದಕ್ಕೂ ಖಾಯಂ ಆಗಿ ಎಳ್ಳು-ನೀರು ಬಿಟ್ಟಿದೆ ಎನ್ನಬಹುದು. ವಿಶೇಷ ಸ್ಥಾನಮಾನ ಇನ್ನು ಮುಂದೆ ಇತಿಹಾಸದ ಪುಟ ಸೇರುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಲ್ಲಿ ಒಂದು ವಿಷಯ ಗಮನಿಸಬೇಕು. ವಿಶೇಷ ವರ್ಗ ಸ್ಥಾನಮಾನ ಮತ್ತು ವಿಶೇಷ ಸ್ಥಾನಮಾನ ಈ ಎರಡರ ನಡುವೆ ಮೂಲಭೂತ ವ್ಯತ್ಯಾಸವಿದೆ ಎನ್ನುತ್ತಾರೆ ತಜ್ಞರು. ರಾಜಕೀಯ ಮತ್ತು ಭೌಗೋಳಿಕ ಹಿನ್ನೆಲೆಯಿಂದ ವಿಶೇಷ ಸ್ಥಾನಮಾನ ನೀಡಲಾಗುತ್ತದೆ. ಉದಾಹರಣೆಗೆ ಜಮ್ಮು-ಕಾಶ್ಮೀರ, ಹೈದರಾಬಾದ್ ಕರ್ನಾಟಕ ಇತ್ಯಾದಿ.. ವಿಶೇಷ ವರ್ಗ ಸ್ಥಾನಮಾನ ಎಂದರೆ ಮುಖ್ಯವಾಗಿ ಹಣಕಾಸಿಗೆ ಸಂಬಂಧಿಸಿದ ವಿಚಾರಗಳು ಬರುತ್ತವೆ. ಇಂತಹ ಸ್ಥಾನಮಾನ ಪಡೆಯಬೇಕಾದರೆ ಕೆಲವೊಂದು ಮಾನದಂಡಗಳನ್ನು ರಾಜ್ಯಗಳು ಪೂರೈಸಬೇಕು. ರಾಜ್ಯಗಳು ತೀವ್ರವಾಗಿ ಆರ್ಥಿಕವಾಗಿ ಹಿಂದುಳಿದಿರಬೇಕು. ಕಡಿಮೆ ಜನಸಾಂದ್ರತೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಹಾಗೂ ಆದಿವಾಸಿಗಳನ್ನು ಹೊಂದಿರಬೇಕು. ಅಂತರ್‌ರಾಷ್ಟ್ರೀಯ ಗಡಿ ಪ್ರದೇಶಗಳಿಗೆ ಸಮೀಪವಾಗಿದ್ದು ಬೆಳವಣಿಗೆಯಲ್ಲಿ ತೀರ ಹಿಂದುಳಿದಿರಬೇಕು. ರಾಜ್ಯದ ಮುಕ್ಕಾಲು ಭಾಗ ದುರ್ಗಮ ಬೆಟ್ಟ, ಗುಡ್ಡ ಪ್ರದೇಶಗಳಿಂದ ಆವೃತವಾಗಿರಬೇಕು.

1965ರ ನಂತರ ಐದನೇ ಆಯೋಗದ ಶಿಫಾರಸಿನ ಮೇರೆಗೆ ಭಾರತದಲ್ಲಿ ವಿಶೇಷ ವರ್ಗ ಸ್ಥಾನಮಾನ ನೀಡುವ ಸಂಪ್ರದಾಯ ಆರಂಭವಾಯಿತು. ಇದುವರೆಗೂ ಭಾರತದಲ್ಲಿ ನಾಗಾಲ್ಯಾಂಡ್ ಮತ್ತು ಸಿಕ್ಕಿಂ(1969-70), ಅಸ್ಸಾಂ ಮತ್ತು ಹಿಮಾಚಲ ಪ್ರದೇಶ,(1970-71) ಮಣಿಪುರ ಮತ್ತು ಮೇಘಾಲಯ ಹಾಗೂ ತ್ರಿಪುರಾ(1971-72), ಅರುಣಾಚಲ ಪ್ರದೇಶ(1986-87), ಮಿಜೋರಾಂ(1986-87), ಉತ್ತರಾಖಂಡ(2001-02) ರಾಜ್ಯಗಳು ಆರ್ಟಿಕಲ್ 371 ಅಡಿಯಲ್ಲಿ ವಿಶೇಷ ಸ್ಥಾನಮಾನಗಳನ್ನು ಪಡೆದಿವೆ. ಕಲಂ 371ಜೆ ಕರ್ನಾಟಕಕ್ಕೆ, ನಿರ್ದಿಷ್ಟವಾಗಿ ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ಸಂಬಂಧಿಸಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ಸ್ಥಾನಮಾನ ಆಗಸ್ಟ್ 2019ರಲ್ಲಿ ರದ್ದಾಗಿದೆ. ಭಾರತೀಯ ಸಂವಿಧಾನದ ಆರನೇ ಶೆಡ್ಯೂಲ್‌ನ ಪ್ರಕಾರ ಈಶಾನ್ಯ ರಾಜ್ಯಗಳಾದ ಅಸ್ಸಾಮ್, ಮೇಘಾಲಯ, ತ್ರಿಪುರಾ ಮತ್ತು ಮಿಜೋರಾಂನಲ್ಲಿ ಬುಡಕಟ್ಟು ಪ್ರದೇಶಗಳಿಗೆ ವಿಶೇಷ ಆಡಳಿತವನ್ನು ಒದಗಿಸುತ್ತದೆ. ಈ ಪ್ರದೇಶಗಳಲ್ಲಿ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯನಿರ್ವಾಹಕ ಅಧಿಕಾರಗಳೊಂದಿಗೆ ವಿಶೇಷ ಸ್ವಾಯತ್ತ ಜಿಲ್ಲಾ ಮಂಡಳಿಗಳ ರಚನೆಗೆ ಅವಕಾಶ ನೀಡುತ್ತದೆ. ಈ ಆರನೇ ಶೆಡ್ಯೂಲ್‌ನ ವಿಶೇಷ ಸ್ಥಾನಮಾನಗಳು ಮತ್ತು ಅವಕಾಶಗಳು ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು, ಸಾಂಸ್ಕೃತಿಕ ಅಸ್ಮಿತೆಯನ್ನು ರಕ್ಷಿಸಲು ಮತ್ತು ಭಾರತದಾದ್ಯಂತ ವಿವಿಧ ಪ್ರದೇಶಗಳ ನಿರ್ದಿಷ್ಟ ಅಗತ್ಯಗಳನ್ನು ಪರಿಹರಿಸುವ ಗುರಿಯನ್ನು ಹೊಂದಿವೆ ಎನ್ನಬಹುದು.

ವಿಶೇಷ ಸ್ಥಾನಮಾನವನ್ನು ಪಡೆದಿರುವ ರಾಜ್ಯಗಳು ಕೇಂದ್ರದಿಂದ ವಿಶೇಷವಾದ ಅನುದಾನವನ್ನು ಪಡೆಯುತ್ತವೆ. ಕೇಂದ್ರ ಸರಕಾರವು ಹೆಚ್ಚಿನ ಸಾಲವನ್ನು ಇಂತಹ ರಾಜ್ಯಗಳಿಗೆ ನೀಡುತ್ತದೆ. ಅನುದಾನದ ಅನುಪಾತವನ್ನು ನಿರ್ಧರಿಸುವಾಗ ಇಂತಹ ರಾಜ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ವಿಶೇಷ ಯೋಜನೆ ಅಡಿಯಲ್ಲಿ ಇಂತಹ ರಾಜ್ಯಗಳಿಗೆ ಶೇ.೯೦ರಷ್ಟು ಅನುದಾನದ ರೂಪದಲ್ಲಿ ಮತ್ತು ಶೇ.೧೦ರಷ್ಟು ಸಾಲದ ರೂಪದಲ್ಲಿ ಕೇಂದ್ರ ಸರಕಾರವೇ ನೀಡುತ್ತದೆ. ಇಷ್ಟೇ ಅಲ್ಲದೆ ತೆರಿಗೆ ವಿಚಾರದಲ್ಲಿ ಇಂತಹ ರಾಜ್ಯಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗುತ್ತದೆ. ಆದಾಯ ತೆರಿಗೆ, ಕಂಪೆನಿಗಳ ತೆರಿಗೆ, ಅಬಕಾರಿ ತೆರಿಗೆ ಮುಂತಾದ ವಿಚಾರದಲ್ಲಿ ಈ ರಾಜ್ಯಗಳು ಹೆಚ್ಚಿನ ವಿನಾಯಿತಿಯನ್ನು ಪಡೆಯುತ್ತವೆ. ಇದಲ್ಲದೆ ಪ್ರತಿ ವರ್ಷ ಬಜೆಟ್‌ನಲ್ಲಿ ಇಂತಹ ರಾಜ್ಯಗಳು ಹತ್ತು ಹಲವಾರು ಯೋಜನೆಗಳನ್ನು ಪಡೆಯುತ್ತವೆ. ವಿದೇಶಿ ಹೂಡಿಕೆಯಲ್ಲಿ ಇಂತಹ ರಾಜ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಒಂದೊಮ್ಮೆ ಆ ಆರ್ಥಿಕ ವರ್ಷದಲ್ಲಿ ಇಂತಹ ರಾಜ್ಯಗಳು ಹಣ ಖರ್ಚು ಮಾಡಲು ಸಾಧ್ಯವಾಗದಿದ್ದರೆ ಅದು ಕೇಂದ್ರಕ್ಕೆ ವಾಪಸ್ ಹೋಗುವುದಿಲ್ಲ ಮತ್ತು ಮುಂದಿನ ವರ್ಷ ಅದನ್ನು ರಾಜ್ಯಗಳು ಬಳಸಿಕೊಳ್ಳಬಹುದು. ಕೇಂದ್ರದ ಒಟ್ಟು ಬಜೆಟ್‌ನ ಶೇ. 30 ವಿಶೇಷ ವರ್ಗದ ರಾಜ್ಯಗಳಿಗೆ ಹೋಗುತ್ತದೆ.

ಇಲ್ಲಿ ಕೇಳಿ ಬರುವ ಒಂದು ಪ್ರಮುಖ ಪ್ರಶ್ನೆ ಎಂದರೆ ಕಳೆದ ೪೦ ರಿಂದ ೫೦ ವರ್ಷಗಳಿಂದ ವಿಶೇಷ ಸ್ಥಾನಮಾನ ಪಡೆದಿರುವ ಕೆಲವು ರಾಜ್ಯಗಳು ಸಾಮಾಜಿಕವಾಗಿ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹೇಗೆ ಮುಂದುವರಿದಿದೆ ಎನ್ನುವುದು. ಮಾನವ ಅಭಿವೃದ್ಧಿ ವರದಿಗಳು, ನೀತಿ ಆಯೋಗದ ವರದಿಗಳು, ಶೈಕ್ಷಣಿಕ ಮತ್ತು ಆರೋಗ್ಯ ಸರ್ವೇಗಳು ಮುಂತಾದವುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ವಿಶೇಷ ಸ್ಥಾನಮಾನವನ್ನು ಹೊಂದಿರುವ ರಾಜ್ಯಗಳು ಹೇಳಿಕೊಳ್ಳುವಷ್ಟು ಮಟ್ಟಿಗೆ ಖಂಡಿತವಾಗಿಯೂ ಅಭಿವೃದ್ಧಿಯನ್ನು ಸಾಧಿಸಿಲ್ಲ. ಇರುವುದರಲ್ಲಿ ಉತ್ತರಾಖಂಡ ರಾಜ್ಯ ಮಾತ್ರ ಸ್ವಲ್ಪ ಮಟ್ಟಿಗೆ ಅಭಿವೃದ್ಧಿ ಸಾಧಿಸಿದೆ. ನಾಗಾಲ್ಯಾಂಡ್, ಮೇಘಾಲಯ ದಂತಹ ರಾಜ್ಯಗಳು ಅಭಿವೃದ್ಧಿಯನ್ನು ಸಾಧಿಸುವುದರಲ್ಲಿ ಸಂಪೂರ್ಣವಾಗಿ ಹಿಂದುಳಿದಿರುವುದನ್ನು ಗಮನಿಸಬಹುದು.

ವಿಶೇಷ ಸ್ಥಾನಮಾನವನ್ನು ಹೊಂದಿರುವ ಭಾರತೀಯ ರಾಜ್ಯಗಳ ಅಭಿವೃದ್ಧಿಯಾಗದಿರುವುದಕ್ಕೆ ಹತ್ತು ಹಲವಾರು ಸಂಕೀರ್ಣ ಮತ್ತು ಪರಸ್ಪರ ಸಂಬಂಧ ಹೊಂದಿರುವ ಅಂಶಗಳು ಕಾರಣವಾಗಿದೆ. ಈಶಾನ್ಯ ರಾಜ್ಯಗಳು ಮತ್ತು ಜಮ್ಮು ಮತ್ತು ಕಾಶ್ಮೀರದಂತಹ ರಾಜ್ಯಗಳು ಕಷ್ಟಕರವಾದ ಭೂಪ್ರದೇಶವನ್ನು ಎದುರಿಸುತ್ತಿವೆ. ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಂಪರ್ಕವನ್ನು ಮಹತ್ವದ ಸವಾಲಾಗಿಸುತ್ತವೆ. ದೂರದ ಸ್ಥಳಗಳು ಮತ್ತು ಕಠಿಣ ಹವಾಮಾನಗಳು ಹೆಚ್ಚಿನ ಕೈಗಾರಿಕಾ ಹೂಡಿಕೆಯನ್ನು ತಡೆಯುತ್ತಿವೆ ಮತ್ತು ಅವಶ್ಯಕ ಸೇವೆಗಳ ಪೂರೈಕೆಯನ್ನು ಸಂಕೀರ್ಣಗೊಳಿಸುತ್ತಿವೆ. ಈ ರಾಜ್ಯಗಳಲ್ಲಿ ರಾಜಕೀಯ ಅಸ್ಥಿರತೆ ಮತ್ತು ಘರ್ಷಣೆಗಳು ಸಾಮಾನ್ಯವಾಗಿವೆ. ಇದು ಸ್ಥಿರ ಮತ್ತು ನಿರಂತರ ಅಭಿವೃದ್ಧಿ ಪ್ರಯತ್ನಗಳಿಗೆ ಅಡ್ಡಿಪಡಿಸಿದೆ. ಐತಿಹಾಸಿಕ ನಿರ್ಲಕ್ಷ್ಯ ಮತ್ತು ಕಡೆಗಣಿಸುವಿಕೆಯು ಇಂತಹ ರಾಜ್ಯಗಳನ್ನು ಕಂಗೆಡಿಸುತ್ತಿವೆ. ಸೀಮಿತ ಕೈಗಾರಿಕೀಕರಣ ಮತ್ತು ಕಡಿಮೆ ಆರ್ಥಿಕ ಚಟುವಟಿಕೆಯು ಆದಾಯ ಉತ್ಪಾದನೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಕಡಿಮೆ ಮಾಡುತ್ತಿದೆ. ಜಾಗದ ಕೊರತೆಯಿಂದ ಕೃಷಿ ಚಟುವಟಿಕೆ ಕಡಿಮೆಯಾಗುತ್ತಿದೆ. ಅಂತರ್‌ರಾಷ್ಟ್ರೀಯ ಆರ್ಥಿಕ ವೈವಿಧ್ಯೀಕರಣವನ್ನು ನಿರ್ಬಂಧಿಸುತ್ತಿದೆ ಎನ್ನುತ್ತವೆ ವಿವಿಧ ಸಂಶೋಧನಾ ವರದಿಗಳು.

ಇನ್ನೊಂದೆಡೆ ಆಡಳಿತದಲ್ಲಿನ ಅಸಮರ್ಥತೆ ಮತ್ತು ಭ್ರಷ್ಟಾಚಾರವು ಅನುದಾನಗಳ ಪರಿಣಾಮಕಾರಿ ಬಳಕೆ ಮತ್ತು ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಅಡ್ಡಿಯಾಗುತ್ತಿದೆ ಎನ್ನುವ ಮಾಹಿತಿಯಿದೆ. ದೊಡ್ಡ ಪ್ರಮಾಣದ ಯೋಜನೆಗಳನ್ನು ನಿರ್ವಹಿಸಲು ಮತ್ತು ಕಾರ್ಯಗತಗೊಳಿಸಲು ಇಂತಹ ರಾಜ್ಯಗಳ ಸ್ಥಳೀಯ ಸರಕಾರಗಳಲ್ಲಿ ಸಾಮರ್ಥ್ಯ ಮತ್ತು ಪರಿಣತಿಯ ಕೊರತೆ ಸಹ ಇದೆ. ರಸ್ತೆಗಳು, ವಿದ್ಯುತ್ ಮತ್ತು ಇಂಟರ್ನೆಟ್ ಸಂಪರ್ಕ ಸೇರಿದಂತೆ ಕಳಪೆ ಮೂಲಸೌಕರ್ಯವು ಆರ್ಥಿಕ ಅವಕಾಶಗಳು ಇನ್ನು ಸಹ ಲಭ್ಯವಿಲ್ಲ ಎನ್ನುತ್ತವೆ ನೀತಿ ಆಯೋಗದ ಸರ್ವೇ ವರದಿಗಳು. ಸಾಕಷ್ಟು ಶೈಕ್ಷಣಿಕ ಮತ್ತು ಆರೋಗ್ಯ ಸೌಲಭ್ಯಗಳು ಕೊರತೆ, ಕಳಪೆ ಮಾನವ ಅಭಿವೃದ್ಧಿಗೆ ಕಾರಣವಾಗಿವೆ. ಹೆಚ್ಚಿದ ಬಡತನ ಮತ್ತು ಕಡಿಮೆ ಆರ್ಥಿಕ ಬೆಳವಣಿಗೆ ಗುಡ್ಡಗಾಡು ರಾಜ್ಯಗಳ ಅಭಿವೃದ್ಧಿಯ ಚಕ್ರವನ್ನು ಹಿಂದಕ್ಕೆ ಎಳೆಯುತ್ತಿದೆ. ಸಾಮಾಜಿಕ ಅಸಮಾನತೆಗಳು ಮತ್ತು ಆದಿವಾಸಿ ಸಮುದಾಯಗಳ ಹೊರಗಿಡುವಿಕೆಯು ಒಟ್ಟಾರೆ ಪ್ರಗತಿಗೆ ಅಡ್ಡಿಯಾಗುತ್ತಿದೆ ಎನ್ನುತ್ತಾರೆ ಆರ್ಥಿಕ ತಜ್ಞರು. ವಿಶೇಷ ಸ್ಥಾನಮಾನವು ಹೆಚ್ಚುವರಿ ಹಣಕಾಸಿನ ಸಹಾಯವನ್ನು ಒದಗಿಸುತ್ತದೆಯಾದರೂ, ನಿಧಿ ಹಂಚಿಕೆ ಮತ್ತು ಬಳಕೆಯಲ್ಲಿನ ಸಮಸ್ಯೆಗಳಿಂದಾಗಿ ಪರಿಣಾಮಕಾರಿ ಅಭಿವೃದ್ಧಿಯಾಗಿ ಪರಿವರ್ತನೆಯಾಗುತ್ತಿಲ್ಲ. ಅತಿಯಾದ ಕೇಂದ್ರೀಕೃತ ವ್ಯವಸ್ಥೆ ಮತ್ತು ಸರಕಾರದ ಆದ್ಯತೆಗಳಲ್ಲಿನ ಆಗಾಗ ಬದಲಾವಣೆಗಳು ದೀರ್ಘಾವಧಿಯ ಅಭಿವೃದ್ಧಿ ಯೋಜನೆಗಳಿಗೆ ಅಡ್ಡಿಪಡಿಸುತ್ತಿವೆ. ಪ್ರವಾಹಗಳು, ಭೂಕುಸಿತಗಳು ಮತ್ತು ಭೂಕಂಪಗಳಂತಹ ನೈಸರ್ಗಿಕ ವಿಕೋಪಗಳಿಗೆ ದುರ್ಬಲತೆಯು ಮೂಲಸೌಕರ್ಯ ಮತ್ತು ಜೀವನೋಪಾಯವನ್ನು ನಾಶಪಡಿಸುತ್ತಿದೆ ಎಂದು ಕೆಲವು ಸಂಶೋಧನಾ ವರದಿಗಳು ಹೇಳುತ್ತವೆ. ವಿಶೇಷ ಸ್ಥಾನಮಾನವು ಹೆಚ್ಚುವರಿ ಕೇಂದ್ರ ನೆರವು ಮತ್ತು ರಿಯಾಯಿತಿಗಳನ್ನು ನೀಡಿದರೂ ಆಳವಾಗಿ ಬೇರೂರಿರುವ ಸಾಂಸ್ಥಿಕ ಸಮಸ್ಯೆಗಳನ್ನು ನಿವಾರಿಸಲು ಉತ್ತಮ ಆಡಳಿತ, ಕಾರ್ಯತಂತ್ರದ ಯೋಜನೆ ಮತ್ತು ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಕ್ರಿಯ ಭಾಗವಹಿಸುವಿಕೆಯನ್ನು ಒಳಗೊಂಡ ಬಹುಮುಖಿ ಮತ್ತು ನಿರಂತರ ವಿಧಾನದ ಅಗತ್ಯವಿದೆ ಎನ್ನುತ್ತಾರೆ ತಜ್ಞರು.

ಇದೀಗ ಬಿಹಾರ ಮತ್ತು ಆಂಧ್ರಪ್ರದೇಶಗಳು ಈ ವಿಚಾರದಲ್ಲಿ ಕತ್ತಲಿನಲ್ಲಿ ಕಲ್ಲು ಹೊಡೆಯುತ್ತಿವೆ. ೧೪ನೇ ಹಣಕಾಸು ಆಯೋಗದ ವರದಿ ಪ್ರಕಾರ ಯಾವುದೇ ರಾಜ್ಯಕ್ಕೂ ವಿಶೇಷ ವರ್ಗದ ಸ್ಥಾನಮಾನವನ್ನು ಈಗ ನೀಡುವುದಿಲ್ಲ. ಆದರೂ, ಕೇಂದ್ರ ಸರಕಾರವು 2015-16ರಿಂದ ೨೦೧೯-೨೦ರ ಅವಧಿಯಲ್ಲಿ ಕೇಂದ್ರ ಪ್ರಾಯೋಜಿತ ಯೋಜನೆಗಳ ನಿಧಿಯ ವೇಳೆ ಆಂಧ್ರ ರಾಜ್ಯವು ಪಡೆದಿರಬಹುದಾದ ಹೆಚ್ಚುವರಿ ಕೇಂದ್ರ ಪಾಲನ್ನು ಸರಿದೂಗಿಸಲು ಈ ರಾಜ್ಯಕ್ಕೆ ತಾತ್ಕಾಲಿಕ ವಿಶೇಷ ನೆರವು ನೀಡಲು ಹಿಂದೆ ಒಪ್ಪಿಕೊಂಡಿದೆ. ಕೇಂದ್ರ ಮತ್ತು ರಾಜ್ಯಗಳ ನಡುವೆ 90:10 ಅನುಪಾತದಲ್ಲಿ ಅನುದಾನ ಹಂಚಲು ಒಪ್ಪಿಕೊಂಡಿದೆ. ವಿಶೇಷ ನೆರವನ್ನು ರಾಜ್ಯವು 2015-2016ರಿಂದ 2019-20ರ ಅವಧಿಯಲ್ಲಿ ವಿತರಿಸಿದ ಬಾಹ್ಯ ನೆರವಿನ ಯೋಜನೆಗಳಿಗೆ ಸಾಲ ಮತ್ತು ಬಡ್ಡಿಯ ಮರುಪಾವತಿಯ ಮೂಲಕ ಒದಗಿಸಬೇಕು ಎನ್ನುವ ಷರತ್ತಿದೆ. ಬಿಹಾರದ ವಿಚಾರ ಇನ್ನೂ ಚರ್ಚೆಯ ಹಂತದಲ್ಲಿದೆ.

ವಿಶೇಷ ಸ್ಥಾನಮಾನ ಕೇಂದ್ರದ ಹಣಕಾಸು ಮೇಲೆ ಹೆಚ್ಚಿನ ಹೊರೆ ಹೊರಿಸಿದೆ. ಅಲ್ಲದೆ ಕೆಲವು ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವುದು ಇತರ ರಾಜ್ಯಗಳ ಬೇಡಿಕೆಗಳಿಗೂ ಕಾರಣವಾಗುತ್ತಿದೆ. ಹದಿನಾಲ್ಕನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಗಳ ತೆರಿಗೆ ಹಂಚಿಕೆಯನ್ನು ಶೇ.೪೨ಕ್ಕೆ ಹೆಚ್ಚಿಸಲಾಗಿದೆ. ೧೫ನೇ ಹಣಕಾಸು ಆಯೋಗ ಇದನ್ನು ಶೇ. ೪೧ಕ್ಕೆ ಇಳಿಸಿದೆ. ಸಂಪನ್ಮೂಲದ ಅಂತರವನ್ನು ತುಂಬಲು ಸಹ ೧೪ನೇ ಹಣಕಾಸು ಆಯೋಗವು ವಿಶೇಷ ಉಪಕ್ರಮಗಳಿಗೆ ಶಿಫಾರಸು ಮಾಡಿದೆ. ಈಶಾನ್ಯ ಮತ್ತು ಗುಡ್ಡಗಾಡು ರಾಜ್ಯಗಳಿಗೆ ಕೆಲವು ವಿನಾಯಿತಿಗಳನ್ನು ನೀಡುವ ಪ್ರಸ್ತಾವ ಸಹ ಇರಿಸಿದೆ. ಕರ್ನಾಟಕವು ದೇಶದಲ್ಲಿ ಅತೀ ಹೆಚ್ಚು ತೆರಿಗೆ ನೀಡಿದರೂ ಕಾನೂನು ಬದ್ಧ ನಿಗದಿತ ಪಾಲನ್ನು ಕೇಂದ್ರವು ನೀಡುತ್ತಿಲ್ಲ. ಇತ್ತೀಚಿನ ಬಜೆಟ್‌ನಲ್ಲೂ ಕರ್ನಾಟಕದ ಬೇಡಿಕೆಗಳಿಗೆ ಕವಡೆ ಕಾಸಿನ ಕಿಮ್ಮತ್ತು ಸಿಕ್ಕಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಡಿ.ಸಿ. ನಂಜುಂಡು

contributor

Similar News