ಮಕ್ಕಳಿಗೆ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ವರದಾನ
2023-24ನೇ ಸಾಲಿನಲ್ಲಿ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಒಟ್ಟು 3,661 ಶಾಲೆಗಳ ವಿದ್ಯಾರ್ಥಿಗಳು ಭೇಟಿ ನೀಡಿದ್ದಾರೆ (ಜನವರಿ 2024ರವರೆಗೆ).
ದಾವಣಗೆರೆ, ಫೆ.18: ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯ ಆನಗೋಡು ಸಮೀಪದ ಹುಳುಪಿನ ಕಟ್ಟೆಯಲ್ಲಿ ಇರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ವಿದ್ಯಾರ್ಥಿಗಳು ಮತ್ತು ವಿಜ್ಞಾನಾಸಕ್ತರನ್ನು ಕೈಬೀಸಿ ಕರೆಯುತ್ತಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಆವಿಷ್ಕಾರಗಳನ್ನು ಜನಸಾಮಾನ್ಯರಿಗೆ ಹಾಗೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಪರಿಚಯಿಸಲು ಇಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪಿಸಲಾಗಿದೆ. ಮಾತ್ರವಲ್ಲ ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ಪೂರಕವಾಗಿ ಈ ವಿಜ್ಞಾನ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ.
ಸಣ್ಣ ಪ್ರಮಾಣದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಆಗಿದ್ದು, ಜನಸಾಮಾನ್ಯರಿಗೆ ಮತ್ತು ವಿದ್ಯಾರ್ಥಿಗಳನ್ನು ವಿಜ್ಞಾನದ ಕಡೆಗೆ ಕರೆದೊಯ್ಯುವ ದೂರದೃಷ್ಟಿಯೊಂದಿಗೆ 4 ಎಕರೆ ಪ್ರದೇಶದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹದಾಯಕ ಸೊಸೈಟಿ ವತಿಯಿಂದ ಸ್ಥಾಪಿಸಲಾಗಿದೆ.
2015-16ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿ ದಂತೆ ಅಂದಾಜು 4 ಕೋಟಿ ರೂ. ವೆಚ್ಚದಲ್ಲಿ ದಾವಣಗೆರೆ ತಾಲೂಕಿನ ಆನಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಳುಪಿನಕಟ್ಟೆ ಗ್ರಾಮದಲ್ಲಿ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದ ಎದುರು ಈ ವಿಜ್ಞಾನ ಉಪ ಕೇಂದ್ರ ತಲೆಯೆತ್ತಿ ನಿಂತಿದೆ.
ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಏನೇನಿದೆ?
ಈ ವಿಜ್ಞಾನ ಕೇಂದ್ರದ ಹೊರಾಂಗಣದಲ್ಲಿ ಗ್ರಾಮ ಬಂಧು ಟ್ರಸ್ಟ್ ಚಾಮರಾಜನಗರ ಹಾಗೂ ಕೆಸ್ಟಿಪ್ಸ್ ಸಂಸ್ಥೆಯಿಂದ ಒಟ್ಟು 32 ವಿಜ್ಞಾನ ಮಾದರಿಗಳನ್ನು ಅಳವಡಿಸಲಾಗಿದೆ. ವಿಜ್ಞಾನ ಕೇಂದ್ರದ ನೆಲಮಹಡಿಯಲ್ಲಿ ಸರ್ ಸಿ.ವಿ.ರಾಮನ್ ಸಭಾಮಂದಿರ, ಯು. ಆರ್. ರಾವ್ ಸೆಮಿನಾರ್ ಹಾಲ್, ಕಚೇರಿ, ಸಿಬ್ಬಂದಿ ಕೊಠಡಿ ಹಾಗೂ ಬಿರ್ಲಾ ಸೈನ್ಸ್ ಮ್ಯೂಸಿಯಂ ಹೈದರಾಬಾದ್ ಇವರಿಂದ ನಾಲ್ಕು ಕೊಠಡಿಗಳಲ್ಲಿ ಒಟ್ಟು 24 ಮಾದರಿಗಳ ವಿನೋದ ವಿಜ್ಞಾನ ಗ್ಯಾಲರಿಗಳನ್ನು ನಿರ್ಮಿಸಲಾಗಿದೆ. ವಿಜ್ಞಾನ ಕೇಂದ್ರದ ಎರಡನೇ ಮಹಡಿಯಲ್ಲಿ ಶಕ್ತಿ ಮತ್ತು ಅದರ ಆಕರಗಳು ಹಾಗೂ ಹವಾಮಾನ ಬದಲಾವಣೆ ಮತ್ತು ಪರಿಣಾಮಗಳು ವಿಷಯದ ಕುರಿತು ಎರಡು ವಿಷಯಾಧಾರಿತ ಗ್ಯಾಲರಿಗಳನ್ನು ನಿರ್ಮಿಸಲಾಗಿದೆ.
ಕಾರ್ಯ ಚಟುವಟಿಕೆಗಳು:
ಈ ಉಪ ವಿಜ್ಞಾನ ಕೇಂದ್ರದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿಶ್ವ ಜನಸಂಖ್ಯಾ ದಿನಾಚರಣೆ ಕುರಿತು ಪ್ರಬಂಧ ಸ್ಪರ್ಧೆ, ವಿಶ್ವ ಪರಿಸರ ಸಂರಕ್ಷಣಾ ದಿನ ಅಂಗವಾಗಿ ಚಿತ್ರಕಲಾ ಸ್ಪರ್ಧೆ, ವಿಶ್ವ ಓರೆನ್ ದಿನದ ನಿಮಿತ್ತವಾಗಿ ಉಪನ್ಯಾಸ ಕಾರ್ಯಕ್ರಮ, ಸರ್ ಎಂ. ವಿಶ್ವೇಶ್ವರಯ್ಯ ಜನ್ಮದಿನಾಚರಣೆ ಅಂಗವಾಗಿ ಇಂಡಸ್ಟ್ರಿಯಲ್ ಇಂಟರ್ನೆಟ್ ಆಫ್ ಥಿಂಗ್ಸ್ ವಿಷಯಾಧಾರಿತ ಕಾರ್ಯಾಗಾರ, ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗೆ ಎರಡು ದಿನದ ವಿಜ್ಞಾನ ವಿಷಯದ ಕುರಿತು ಪ್ರಾಯೋಗಿಕ ಕಾರ್ಯಾಗಾರ ಸೇರಿ ಹೀಗೆ ಬಹು ಉಪಯೋಗಿ ವಿಜ್ಞಾನದ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಶಾಲಾ ಶಿಕ್ಷಣ ಇಲಾಖೆಯಿಂದ ನಡೆಸಲಾಗುತ್ತಿದೆ.
ಉಪ ವಿಜ್ಞಾನ ಕೇಂದ್ರ ಶಾಲಾ ಮಕ್ಕಳಿಗೆ ಬಹಳ ಉಪಯುಕ್ತವಾಗಿದೆ. ಮೂಲ ವಿಜ್ಞಾನಕ್ಕೆ ಸಂಬಂಧಪಟ್ಟಂತೆ ಹಲವಾರು ಪ್ರಯೋಗದ ಅಂಶಗಳು ಮನಮುಟ್ಟುವಂತೆ ಮಾಡಿವೆ. ವಿಜ್ಞಾನದ ಬಗ್ಗೆ ಮಕ್ಕಳಿಗೆ ಅಸಕ್ತಿ ಕೆರಳಿಸಿದೆ. ಮುಂದಿನ ದಿನಗಳಲ್ಲಿ ಸಂಶೋಧನೆ ಕೈಗೊಳ್ಳಲು ಸಹಕಾರಿಯಾಗಲಿದೆ.
-ಜಿ.ಕೊಟ್ರೇಶ್, ಉಪನಿರ್ದೇಶಕರು
ಶಾಲಾಶಿಕ್ಷಣ ಇಲಾಖೆ
ದಾವಣಗೆರೆ
ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಮತ್ತು ವೈಚಾರಿಕ ಪ್ರಜ್ಞೆ ಬೆಳೆಸಲು, ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹುಳುಪಿನಕಟ್ಟೆ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸಹಕಾರಿಯಾಗಿದೆ.
-ನಾಗರಾಜ ಎಚ್.
ಶಿಕ್ಷಕರು,ದ್ಯಾಮವ್ವನಹಳ್ಳಿ