ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಹೇಗಾದರೂ ಗೆಲ್ಲಿಸಲು ‘ಸುಪಾರಿ’ ಮೀಡಿಯಾಗಳು ಸುಳ್ಳು ಸುದ್ದಿ ಹಬ್ಬಿಸುತ್ತಿವೆಯೇ?

ಹೇಗಾದರೂ ಮಾಡಿ ‘ಇಂಡಿಯಾ’ ಒಕ್ಕೂಟ ಅಥವಾ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದಲ್ಲಿ ಬಿರುಕು ತಂದಿಟ್ಟು ಅದರ ಲಾಭವನ್ನು ಬಿಜೆಪಿಗೆ ತಲುಪಿಸಲು ಈ ಮಡಿಲ ಮೀಡಿಯಾಗಳು ಪಣ ತೊಟ್ಟು ಕೆಲಸ ಮಾಡುತ್ತಿವೆ. ಅದಕ್ಕಾಗಿ ಆಧಾರರಹಿತ ಸುದ್ದಿಗಳನ್ನು ಊಹಿಸಿ ಪ್ರಸಾರ ಮಾಡುತ್ತಿವೆ. ಅಂತೂ ಮಡಿಲ ಮೀಡಿಯಾಗಳ ಮೂಲಕ ಸುದ್ದಿ ಪ್ಲಾಂಟ್ ಮಾಡಲು ಹೋಗಿ ಬಿಜೆಪಿ ತನ್ನ ಮುಖವಾಡವನ್ನೇ ಬಯಲು ಮಾಡಿಕೊಂಡಂತಾಗಿದೆ.

Update: 2024-10-24 09:53 GMT

ಮಡಿಲ ಮೀಡಿಯಾಗಳನ್ನು ಬಳಸಿಕೊಂಡು ಬಿಜೆಪಿ ಅತ್ಯಂತ ಅಸಹ್ಯಕರ ಆಟ ನಡೆಸಿದೆ. ಮಹಾರಾಷ್ಟ್ರದಲ್ಲಿ ಅದಕ್ಕೆ ಚುನಾವಣೆಯಲ್ಲಿ ಸೋಲುವ ಭೀತಿಯಿದ್ದು, ಅದನ್ನು ತಪ್ಪಿಸಿಕೊಳ್ಳುವ ಕಸರತ್ತಿನಲ್ಲಿ ಮಾಡಬಾರದ್ದನ್ನು ಮಾಡುತ್ತಿದೆಯೇ ಎನ್ನುವ ಅನುಮಾನವನ್ನು ಅದರ ಈ ನಡೆ ಮೂಡಿಸಿದೆ.

ಮಹಾರಾಷ್ಟ್ರದಲ್ಲಿ ಗೆಲ್ಲಲು ಯಾವ ತಂತ್ರವನ್ನು ಅನುಸರಿಸಿದರೂ ಸರಿ, ಆದರೆ ಗೆಲ್ಲಬೇಕು ಎಂಬ ಸಂದೇಶವನ್ನೂ ಪಕ್ಷದ ನಾಯಕರಿಗೆ ಅಮಿತ್ ಶಾ ನೀಡಿರುವುದು ಗೊತ್ತಿರುವ ವಿಚಾರ.

ಈಗ ಚುನಾವಣೆಯಲ್ಲಿನ ಅದರ ರಣನೀತಿಗೆ ನೆರವಾಗುತ್ತಿರುವುದು ಮಡಿಲ ಮೀಡಿಯಾಗಳು. ಮಡಿಲ ಮೀಡಿಯಾಗಳನ್ನು ಬಳಸಿಕೊಂಡು ಏನೇನೋ ಸುದ್ದಿಗಳನ್ನು ಸೃಷ್ಟಿಸಿ ಹಬ್ಬಿಸುವ ಕೆಲಸ ನಡೆದಿದೆ.

ಉದ್ಧವ್ ಠಾಕ್ರೆ ಅವರು ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿದ್ದಾರೆ ಎಂದೂ, ಸಂಜಯ್ ರಾವುತ್ ಅವರು ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ ಎಂದೂ ಸುದ್ದಿ ಹಬ್ಬಿದೆ. ಸೋಮವಾರವಿಡೀ ಇಂತಹ ಸುದ್ದಿಗಳನ್ನು ಮೀಡಿಯಾಗಳು ಪ್ರಸಾರ ಮಾಡಿವೆ.

ಮಹಾರಾಷ್ಟ್ರದ ಎಲ್ಲಾ ಸೀಟುಗಳಿಗಾಗಿ ಉದ್ಧವ್ ಠಾಕ್ರೆ ಪಕ್ಷ ಸ್ಪರ್ಧಿಸುತ್ತಿದೆ ಎಂದೂ ಈ ವರದಿಯಲ್ಲಿ ಹೇಳಲಾಗಿದೆ.

ಶಕ್ತಿಯಿರುವ ಮತ್ತು ತಂತ್ರಗಾರಿಕೆಯಲ್ಲೂ ಅದರದ್ದೇ ಆಟ ನಡೆಯುವ ಸನ್ನಿವೇಶ ಇರುವ ಹಿನ್ನೆಲೆಯಲ್ಲಿ ಬಿಜೆಪಿ ಮಡಿಲ ಮೀಡಿಯಾಗಳ ಮೂಲಕ ಒಂದು ಅತಿ ದೊಡ್ಡ ಆಟವನ್ನೇ ಆಡುತ್ತಿದೆ. ಮಡಿಲ ಮೀಡಿಯಾಗಳು ಅಥವಾ ಸಂಜಯ್ ರಾವುತ್ ಹೇಳಿರುವಂತೆ ‘ಸುಪಾರಿ ಮೀಡಿಯಾ’ಗಳು ಬಿಜೆಪಿಗೋಸ್ಕರ ಕೆಲಸ ಮಾಡುತ್ತಿವೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಅಮಿತ್ ಶಾ ಅವರನ್ನು ತಾವು ಭೇಟಿ ಮಾಡಿರುವುದಾಗಿ ಹಬ್ಬಿರುವ ಸುದ್ದಿಗಳನ್ನು ಸಂಜಯ್ ರಾವುತ್ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ಬಿಜೆಪಿಯೊಂದಿಗೆ ಕೈಜೋಡಿಸುವುದೆಂದರೆ ಔರಂಗಜೇಬ್ ಮತ್ತು ಅಫ್ಝಲ್ ಖಾನ್ ಒಟ್ಟಿಗೆ ಸೇರುವುದು ಎಂದರ್ಥ ಎಂದು ರಾವುತ್ ಹೇಳಿದ್ದಾರೆ.

ಬಿಜೆಪಿ ಉದ್ಧವ್ ಠಾಕ್ರೆ ನೇತೃತ್ವದ ಸರಕಾರವನ್ನು ಉರುಳಿಸಿದ್ದು ಮಾತ್ರವಲ್ಲದೆ ದಿವಂಗತ ಬಾಳಾಸಾಹೇಬ್ ಠಾಕ್ರೆ ಸ್ಥಾಪಿಸಿದ ಪಕ್ಷವನ್ನು ಒಡೆದು ಪಕ್ಷದ ಚಿಹ್ನೆಯನ್ನು ಕಸಿದುಕೊಂಡಿದೆ. ನಾವು ಬಿಜೆಪಿ ಜೊತೆ ಹೋಗುತ್ತೇವೆ ಎಂದು ವದಂತಿ ಹಬ್ಬಿಸುವವರದು ಬರೀ ಊಹೆ ಮಾತ್ರ. ಎಷ್ಟೆಲ್ಲ ಅನ್ಯಾಯ ಮಾಡಿದವರ ಜೊತೆ ಹೇಗೆ ಕೈಜೋಡಿಸಲು ಸಾಧ್ಯ? ಎಂದು ರಾವುತ್ ಪ್ರಶ್ನಿಸಿದ್ದಾರೆ.

ಬಿಜೆಪಿ ಉದ್ಧವ್ ಅವರಿಗೆ ಮೋಸ ಮಾಡಿದೆ ಮತ್ತು ರಾಜ್ಯವನ್ನು ದೇಶದ್ರೋಹಿಗಳಿಗೆ ನೀಡಿದೆ. ನಾವು ಬಿಜೆಪಿ ಮತ್ತು ಅದರ ದಬ್ಬಾಳಿಕೆಯೊಂದಿಗೆ ಬಹಳ ಕಠಿಣ ಹೋರಾಟ ನಡೆಸಿದ್ದೇವೆ. ಅವರು ನಮ್ಮ ನಾಯಕನಿಗೆ ಕೊಟ್ಟ ನೋವನ್ನು ಹೇಗೆ ಮರೆಯಲು ಸಾಧ್ಯ? ಎಂದು ರಾವುತ್ ಪ್ರಶ್ನಿಸಿದ್ದಾರೆ.

ನಾವು ದ್ರೋಹ ಮಾಡುವವರಲ್ಲ, ಶಿವಸೇನೆ (ಯುಬಿಟಿ) ಸ್ವಾಭಿಮಾನಿ ಜನರ ಪಕ್ಷವಾಗಿದೆ. ನಾವು ಏನನ್ನಾದರೂ ಮಾಡಲು ಬಯಸಿದರೆ, ನಾವು ಅದನ್ನು ಬಹಿರಂಗವಾಗಿ ಮಾಡುತ್ತೇವೆ. ನಮ್ಮ ಪಕ್ಷವನ್ನು ದೂಷಿಸಲು ಮತ್ತು ಎಂವಿಎ ಮೈತ್ರಿ ಪಾಲುದಾರರ ನಡುವಿನ ಅಂತರವನ್ನು ಹೆಚ್ಚಿಸಲು ಉದ್ದೇಶಪೂರ್ವಕವಾಗಿ ವದಂತಿಗಳನ್ನು ಹರಡಲಾಗುತ್ತಿದೆ ಎಂದು ರಾವುತ್ ಆರೋಪಿಸಿದ್ದಾರೆ. ‘‘ಮಹಾರಾಷ್ಟ್ರದ ಸ್ವಾಭಿಮಾನದ ವಿಷಯದಲ್ಲಿ ನಾವು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ’’ ಎಂದು ರಾವುತ್ ಹೇಳಿದ್ದಾರೆ.

ಇಂಥ ಸುಳ್ಳು ಸುದ್ದಿಗಳನ್ನು ಹರಡುವುದರಿಂದ ಯಾರಿಗೆ ಲಾಭ?

ಸಹಜವಾಗಿಯೇ ಸುಳ್ಳಿನ ಲಾಭ ಪಡೆಯುವುದು ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟ. ಮತದಾರರ ನಡುವೆ ಗೊಂದಲ ಸೃಷ್ಟಿಸಿ, ಎಂವಿಎಯಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಭಾವನೆ ಹಬ್ಬಿಸುವುದು ಮತ್ತದರ ಪೂರ್ತಿ ಲಾಭ ಪಡೆಯುವುದು ಈ ಸುಳ್ಳುಗಳ ಹಿಂದಿನ ಹುನ್ನಾರ.

ಹೀಗೆ ಸುಳ್ಳು ಹರಡುವುದರಿಂದ ಅಘಾಡಿಯ ಮೈತ್ರಿ ಪಕ್ಷಗಳ ಕಾರ್ಯಕರ್ತರೂ ಗೊಂದಲಕ್ಕೆ ತುತ್ತಾಗುತ್ತಾರೆ. ತಮ್ಮ ನಾಯಕರ ನಡುವೆ ಏನೋ ಮಾತುಕತೆ ನಡೆಯುತ್ತಿದೆ ಎಂಬ ಭಾವನೆ ಬರುವುದರಿಂದ ಕಾರ್ಯಕರ್ತರು ಹೇಗೂ ಪ್ರತಿಕ್ರಿಯಿಸಬಹುದು. ಅವರ ಅಸಮಾಧಾನ, ಅತೃಪ್ತಿಗಳೆಲ್ಲ ಕಡೆಗೆ ಆಯಾ ಪಕ್ಷಗಳಿಗೇ ಏಟು ಬೀಳಲು ಕಾರಣವಾಗಬಹುದು.

ಹರ್ಯಾಣದಲ್ಲಿನ ಬಿಜೆಪಿ ಗೆಲುವು ಮತ್ತು ಮಹಾರಾಷ್ಟ್ರ ಚುನಾವಣೆ ಎರಡೂ ಪೂರ್ತಿಯಾಗಿ ಬೇರೆ ಬೇರೆ.

ಯಾವುದೇ ಚುನಾವಣೆ ಇನ್ನೊಂದು ಚುನಾವಣೆಗಿಂತ ಬೇರೆಯೇ ಇರುತ್ತದೆ. ಯಾಕೆಂದರೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಿಷಯಗಳು ಸಂಪೂರ್ಣ ಬೇರೆ ಇರುತ್ತವೆ.

ಮಹಾರಾಷ್ಟ್ರದಲ್ಲೂ ಈ ಸಲ ಬಿಜೆಪಿಗೆ ನೆಲೆಯನ್ನು ಮರಳಿ ಸ್ಥಾಪಿಸಿಕೊಳ್ಳುವ ಅನಿವಾರ್ಯತೆ ಇದೆ.

ಮಹಾರಾಷ್ಟ್ರದಲ್ಲಿನ ಆರೂ ರಾಜಕೀಯ ಪಕ್ಷಗಳಿಗೂ ಒಂದು ಸತ್ಯವಂತೂ ಗೊತ್ತಿದೆ. ಒಂದೇ ಪಕ್ಷ ಸ್ವಂತ ಬಲದೊಂದಿಗೆ ಅಧಿಕಾರಕ್ಕೆ ಬರುವುದು ಮಹಾರಾಷ್ಟ್ರದಲ್ಲಿ ಆಗದು ಎಂದು ಬಿಜೆಪಿ, ಕಾಂಗ್ರೆಸ್, ಶಿವಸೇನಾ ಉದ್ಧವ್ ಬಣ, ಶಿವಸೇನಾ ಶಿಂದೆ ಬಣ, ಎನ್‌ಸಿಪಿ ಶರದ್ ಪವಾರ್ ಬಣ ಹಾಗೂ ಎನ್‌ಸಿಪಿ ಅಜಿತ್ ಪವಾರ್ ಬಣ ಈ ಆರೂ ಪಕ್ಷಗಳಿಗೂ ತಿಳಿದಿದೆ. ಸರಕಾರ ರಚಿಸಲು ಎರಡು ಪಕ್ಷಗಳಾದರೂ ಸೇರಿರುವ ಮೈತ್ರಿ ಬೇಕು. ಇದಂತೂ ಸ್ಪಷ್ಟ.

ಲೋಕಸಭೆ ಚುನಾವಣೆಯ ಟ್ರೆಂಡ್ ಗಮನಿಸಿದರೆ, ಜನರ ಒಲವು ‘ಇಂಡಿಯಾ’ ಮೈತ್ರಿ ಅಥವಾ ಮಹಾ ವಿಕಾಸ್ ಅಘಾಡಿ ಕಡೆಗಿತ್ತು. ‘ಇಂಡಿಯಾ’ ಒಕ್ಕೂಟದ ಉತ್ತಮ ಸಾಧನೆ ಮಹಾರಾಷ್ಟ್ರದಲ್ಲಿ ಕಂಡಿತ್ತು.

ಶಿವಸೇನೆ ಉದ್ಧವ್ ಬಣ ಹೊಸ ಚಿಹ್ನೆಯೊಂದಿಗೆ ಮೊದಲ ಸಲ ಹೋರಾಟ ಎದುರಿಸಬೇಕಾಗಿ ಬಂದಿತ್ತು. ಆದರೂ ಬಿಜೆಪಿ ಗಳಿಸಿದ ಸ್ಥಾನಗಳಿಗೆ ಸಮನಾದ ಗೆಲುವನ್ನು ಉದ್ಧವ್ ಠಾಕ್ರೆಯವರ ಶಿವಸೇನೆ ಗಳಿಸಿತ್ತು

ಎನ್‌ಪಿ ಶರದ್ ಪವಾರ್ ಬಣ ಕೂಡ ತನ್ನ ಚಿಹ್ನೆ, ಪಕ್ಷ ಎಲ್ಲವನ್ನೂ ಕಳೆದುಕೊಂಡಿದ್ದಾಗಲೂ, ಅಖಾಡದಲ್ಲಿ ಬಿಜೆಪಿಯ ಬೆವರಿಳಿಸಿತ್ತು.

ಇದೆಲ್ಲದರ ಹಿನ್ನೆಲೆಯಲ್ಲಿ ಈಗ ‘ಇಂಡಿಯಾ’ ಒಕ್ಕೂಟದ ಬಗ್ಗೆ ಸುದ್ದಿಯನ್ನು ಮೀಡಿಯಾಗಳಲ್ಲಿ ಪ್ಲಾಂಟ್ ಮಾಡಲಾಗುತ್ತಿದೆ.

ಮಹಾಯುತಿಯಲ್ಲಿರುವ ಬಿಜೆಪಿ, ಏಕನಾಥ್ ಶಿಂದೆ ಹಾಗೂ ಅಜಿತ್ ಪವಾರ್ ಮೂವರೂ ಸಿಎಂ ಅಭ್ಯರ್ಥಿಗಳಾಗಲು ಪೈಪೋಟಿಯಲ್ಲಿರುವವರೇ ಆಗಿದ್ದಾರೆ.

ಹರ್ಯಾಣದಲ್ಲಿ ಕಾಂಗ್ರೆಸ್‌ಗೆ ಹೊಡೆತ ಕೊಟ್ಟದ್ದು ಇಂಥದೇ ಪೈಪೋಟಿ. ಅಲ್ಲಿ ಭೂಪಿಂದರ್ ಸಿಂಗ್ ಹೂಡಾ ಮತ್ತು ಶೆಲ್ಜಾ ನಡುವೆ ಸಿಎಂ ಆಗಲು ಪೈಪೋಟಿಯಿತ್ತು. ಇಬ್ಬರ ನಡುವೆ ಎದ್ದ ಬಿಗುಮಾನ ಬಗೆಹರಿಯದೇ ಉಳಿಯಿತು. ಅಂತಿಮವಾಗಿ ಕಾಂಗ್ರೆಸ್ ಅಲ್ಲಿ ನೆಲ ಕಚ್ಚುವಂತಾಯಿತು.

ಮಹಾರಾಷ್ಟ್ರದಲ್ಲಿ ಈಗ ಎನ್‌ಡಿಎ ಎದುರಿಸುತ್ತಿರುವ ಈ ಸಂಕಷ್ಟದ ಬಗ್ಗೆ ಬಿಜೆಪಿ ಭಯಗೊಂಡಿದೆ.

‘ಇಂಡಿಯಾ’ ಒಕ್ಕೂಟದಲ್ಲಿ ಈ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಮಹಾರಾಷ್ಟ್ರದಲ್ಲಿ ‘ಇಂಡಿಯಾ’ ಒಕ್ಕೂಟ ಗೆದ್ದರೆ ಉದ್ಧವ್ ಠಾಕ್ರೆ ಸಿಎಂ ಆಗಲಿದ್ದಾರೆ ಎಂಬುದು ಸ್ಪಷ್ಟ. ಇದು ಅಘೋಷಿತ ಸತ್ಯ.

ಸೀಟು ಹಂಚಿಕೆ ಸುಗಮವಾಗಿ ನಡೆಯಿತೆಂದರೆ, ಅರ್ಧ ಚುನಾವಣೆಯನ್ನೇ ಗೆದ್ದ ಹಾಗೆ ಎಂಬುದು ಕೂಡ ನಿಜ.

ಹರ್ಯಾಣದಲ್ಲಿ ಒಂದೊಂದು ಸೀಟನ್ನೂ ಪ್ರತ್ಯೇಕ ಸಮೀಕರಣದೊಂದಿಗೆ ಎಲ್ಲ ಲೆಕ್ಕಾಚಾರಗಳನ್ನು ಹಾಕಿ ಬಿಜೆಪಿ ಗೆದ್ದಿತ್ತು. ಆ ಗೆಲುವಿನಲ್ಲಿ ಅದರ ಮೈಕ್ರೊ ಮ್ಯಾನೇಜ್‌ಮೆಂಟ್ ಕೆಲಸ ಮಾಡಿತ್ತು. ಅದನ್ನೇ ಮಹಾರಾಷ್ಟ್ರದಲ್ಲಿ ‘ಇಂಡಿಯಾ’ ಒಕ್ಕೂಟ ಮಾಡಬೇಕಿದೆ.

ಎನ್‌ಡಿಎಯಲ್ಲಿ ಬಿಜೆಪಿಯೇ ಪ್ರಬಲ ಪಕ್ಷ.

‘ಇಂಡಿಯಾ’ ಒಕ್ಕೂಟದಲ್ಲಿ ಕಾಂಗ್ರೆಸ್ ಜೊತೆಗಿರುವ ಶಿವಸೇನೆ ಉದ್ಧವ್ ಠಾಕ್ರೆ ಬಣ ಹಾಗೂ ಎನ್‌ಸಿಪಿ ಶರದ್ ಪವಾರ್ ಬಣ ಎರಡೂ ಅಷ್ಟೇ ಪ್ರಬಲವಾಗಿವೆ.

ಇನ್ನೊಂದೆಡೆ ಬಿಜೆಪಿಯಿಂದ ದ್ರೋಹಕ್ಕೆ ತುತ್ತಾದ ಪಕ್ಷಗಳೆಂಬುದೂ ಈ ಸಲದ ಚುನಾವಣೆಯಲ್ಲಿ ಅವೆರಡೂ ಪಕ್ಷಗಳಿಗೆ ಲಾಭ ತಂದುಕೊಡಬಹುದು. ಹೀಗಿರುವಾಗ ಅದನ್ನು ಕುಗ್ಗಿಸಿಬಿಡಬೇಕು ಎನ್ನುವ ದಿಸೆಯಲ್ಲಿ ಸೈಕಾಲಜಿಕಲ್ ಆಟ ಆಡಲು ಬಿಜೆಪಿ ಯತ್ನಿಸುತ್ತಿದೆ. ಅದರ ಭಾಗವಾಗಿಯೇ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ.

ಶಿವಸೇನೆ ಉದ್ಧವ್ ಠಾಕ್ರೆ ಬಣ ಮತ್ತು ಕಾಂಗ್ರೆಸ್ ಬಗ್ಗೆ ಹರಡಲಾಗುತ್ತಿರುವ ಸುಳ್ಳು ಸುದ್ದಿಗಳ ನೈಜತೆ ಬೇರೆಯೇ ಇದೆ. ಉದ್ಧವ್ ಠಾಕ್ರೆ ಮತ್ತು ದೇವೇಂದ್ರ ಫಡ್ನವೀಸ್ ಭೇಟಿಯ ಬಗ್ಗೆ ಸುಳ್ಳು ಸುದ್ದಿ ಏಕೆ ಹರಡಿತು?

ಅಮಿತ್ ಶಾ ಮತ್ತು ಸಂಜಯ್ ರಾವುತ್ ಭೇಟಿಯ ಬಗ್ಗೆ ಸುಳ್ಳು ಸುದ್ದಿ ಏಕೆ ಬಿತ್ತರಿಸಲಾಯಿತು?

ಅಷ್ಟಕ್ಕೂ, ಸುಳ್ಳು ಸುದ್ದಿ ಹಬ್ಬಿಸಿ ಉದ್ಧವ್ ಠಾಕ್ರೆ ಮತ್ತು ಕಾಂಗ್ರೆಸ್ ನಡುವೆ ಉದ್ವಿಗ್ನತೆ ಸೃಷ್ಟಿಸಲು ಈ ಸಂದರ್ಭದಲ್ಲಿ ಯಾರು ಬಯಸುತ್ತಿದ್ಧಾರೆ ಎಂಬುದು ಸ್ಪಷ್ಟವಿದೆ.

ಎಲ್ಲದಕ್ಕೂ ವೀಡಿಯೊ ಹೆಕ್ಕಿ ತೋರಿಸುವ ಬಿಜೆಪಿ ಐಟಿ ಸೆಲ್‌ನವರು ಇಂಥದೊಂದು ಭೇಟಿ ನಡೆದದ್ದೇ ಹೌದಾದರೆ ವೀಡಿಯೊ ಇಲ್ಲದೆ ಬರುತ್ತಿದ್ದರೆ?

ಹೇಗೂ ಮೋದಿ ಹಾಗೂ ಅಮಿತ್ ಶಾ ಅವರ ಕೃಪಾಕಟಾಕ್ಷ ಇದ್ದರೆ ಬದುಕು ಸಾರ್ಥಕ ಎಂಬಂತೆ ಕೆಲಸ ಮಾಡುವ ಮಡಿಲ ಮೀಡಿಯಾಗಳ ಸಂಪಾದಕರು ಹಾಗೂ ಆ್ಯಂಕರ್‌ಗಳು ಈಗ ಫೀಲ್ಡಿಗೆ ಇಳಿದಿದ್ದಾರೆ.

ಚೀನಾ ನಮ್ಮ ಗಡಿಯಲ್ಲಿ ಅದೆಂತಹ ಅವಾಂತರ ಮಾಡಿಟ್ಟಿದೆ ಎಂಬುದನ್ನು ದೇಶದ ಸೇನೆಯೇ ಹೇಳಿಕೊಂಡಿರುವಾಗ ಬಾಯಿಗೆ ಬೀಗ ಹಾಕಿಕೊಂಡಿದ್ದವರು ಈಗ ಚೀನಾ ಜೊತೆ ಯಾವುದೋ ಒಂದು ಬೆಳವಣಿಗೆ ಅಂದುಕೊಂಡಂತೆ ನಡೆದು ಬಿಟ್ಟರೆ ಅದು ಮೋದಿ ಸರಕಾರದ ಪಾಲಿಗೆ ಚೀನಾ ವಿರುದ್ಧ ಬಹುದೊಡ್ಡ ರಾಜತಾಂತ್ರಿಕ ಗೆಲುವು ಎಂದು ‘ಇಂಡಿಯಾ ಟುಡೇ’ಯ ಸಂಪಾದಕ ರಾಹುಲ್ ಕವಲ್‌ರಂತಹವರು ಬರೆಯುತ್ತಾರೆ.

ಚೀನಾ ಕಿಲೋಮೀಟರ್ ಗಟ್ಟಲೆ ನಮ್ಮ ಗಡಿಯೊಳಗೆ ಬಂದಿರುವ ಬಗ್ಗೆ ಚಕಾರ ಎತ್ತದ ಈ ಭಟ್ಟಂಗಿ ಈಗ ಏನೇನೂ ಆಗಿಬಿಟ್ಟರೆ ಅದು ಮೋದಿ ಸರಕಾರದ ದೊಡ್ಡ ಸಾಧನೆ ಅಂದರೆ ಅದಕ್ಕಿಂತ ತಮಾಷೆ ಇನ್ನೇನಿದೆ?

ಇದು ಮಹಾರಾಷ್ಟ್ರ ಚುನಾವಣೆಯಲ್ಲಿ ಸಾಹೇಬರಿಗೆ ಏನಾದರೂ ಇಮೇಜ್ ಬೂಸ್ಟಿಂಗ್ ಆಗಲಿ ಎಂಬ ಹೆಣಗಾಟ ಅಲ್ಲದೆ ಇನ್ನೇನೂ ಅಲ್ಲ

ಹೇಗಾದರೂ ಮಾಡಿ ‘ಇಂಡಿಯಾ’ ಒಕ್ಕೂಟ ಅಥವಾ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದಲ್ಲಿ ಬಿರುಕು ತಂದಿಟ್ಟು ಅದರ ಲಾಭವನ್ನು ಬಿಜೆಪಿಗೆ ತಲುಪಿಸಲು ಈ ಮಡಿಲ ಮೀಡಿಯಾಗಳು ಪಣ ತೊಟ್ಟು ಕೆಲಸ ಮಾಡುತ್ತಿವೆ. ಅದಕ್ಕಾಗಿ ಆಧಾರರಹಿತ ಸುದ್ದಿಗಳನ್ನು ಊಹಿಸಿ ಪ್ರಸಾರ ಮಾಡುತ್ತಿವೆ.

ಅಂತೂ ಮಡಿಲ ಮೀಡಿಯಾಗಳ ಮೂಲಕ ಸುದ್ದಿ ಪ್ಲಾಂಟ್ ಮಾಡಲು ಹೋಗಿ ಬಿಜೆಪಿ ತನ್ನ ಮುಖವಾಡವನ್ನೇ ಬಯಲು ಮಾಡಿಕೊಂಡಂತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಪಿ.ಎಚ್. ಅರುಣ್

contributor

Similar News