ಪ್ರಮುಖ ನಗರಿಗಳಿಗೆ ತಾಜ್ ಮಹಲ್ ಗುಲಾಬಿ: ಯೂರೋಪಿಯನ್ ರಾಷ್ಟ್ರಗಳಿಗೆ ಹೂವುಗಳು ರಫ್ತು

Update: 2024-02-13 09:57 GMT

ಹೊಸಕೋಟೆ, ಫೆ.12: ಪ್ರೇಮಿಗಳ ದಿನ ಹತ್ತಿರ ಬರುತ್ತಿರುವಂತೆ ಎಲ್ಲೆಡೆ ಕೆಂಪು ಗುಲಾಬಿಯದ್ದೇ ಮಾತು. ಬೆಂಗಳೂರು ಸೇರಿದಂತೆ ದೇಶದ ವಿವಿಧ ಪ್ರಮುಖ ನಗರಗಳಿಗೆ ರಫ್ತಾಗುವ ಮೂಲಕ ಹೊಸಕೋಟೆ ತಾಲೂಕಿನ ಕೆಂಪುಗುಲಾಬಿ ರಂಗು ಹೆಚ್ಚಿಸಿದೆ.

ತಾಲೂಕಿನ ಲಾಲ್ ಬಾಗ್ ದಾಸರಹಳ್ಳಿ, ಕುಂಬಳಹಳ್ಳಿ, ಚೊಕ್ಕಹಳ್ಳಿ, ಕುರುಬರಹಳ್ಳಿ, ಚಿಕ್ಕ ಕೋಲಿಗೆ ಸೇರಿದಂತೆ ನಾನಾ ಭಾಗಗಳಲ್ಲಿ ಡಚ್ ಮಾದರಿಯ 10 ವಿವಿಧ ಗುಲಾಬಿಗಳನ್ನು ಬೆಳೆಯಲಾಗುತ್ತಿದ್ದು, ಹೊಸ ವರ್ಷ ಹಾಗೂ ವ್ಯಾಲೆಂಟೇನ್ಸ್‌ಡೇಗಳಿಗೆ ಭರ್ಜರಿ ಲಾಭದೊಂದಿಗೆ ತಾಲೂಕಿನ ಹೆಸರನ್ನು ಗಡಿಯಾಚೆಗೆ ದಾಟಿಸುವ ಸಾಧನೆಯನ್ನು ಇಲ್ಲಿನ ರೈತರು ಮಾಡುತ್ತಿದ್ದಾರೆ.

10 ವರ್ಷಗಳ ಹಿಂದೆ ಕೆಲವೇ ಕಂಪೆನಿಗಳಿಗೆ ಸಿಮೀತವಾಗಿದ್ದ ಗುಲಾಬಿ ಬೆಳೆ ಇಂದು ಸಾಮಾನ್ಯ ರೈತರ ಜೀವನವನ್ನು ಹಸನಾಗಿಸಿ, ಇಲ್ಲಿನ ಗುಲಾಬಿ ಹೂವುಗಳ ಚೆಲುವು ರಾಷ್ಟ್ರ ರಾಜಧಾನಿ ದಿಲ್ಲಿ, ಚೆನೈ, ಹೈದರಾಬಾದ್, ಮುಂಬೈ ಸೇರಿದಂತೆ ಉದ್ಯಾನ ನಗರಿ ಬೆಂಗಳೂರಿನಲ್ಲಿ ಹೆಚ್ಚು ಬೇಡಿಕೆಯಿದ್ದು, ಹೊಸಕೋಟೆಯ ಕೆಂಪು ಗುಲಾಬಿ ಹೂವುಗಳು ದೇಶದ ಗಡಿ ದಾಟಿ ಜಪಾನ್, ಸಿಂಗಪೂರ್, ಮಲೇಶಿಯಾಗಳಿಗೂ ರಫ್ತಾಗುತ್ತಿವೆ ಎನ್ನುತ್ತಾರೆ ಕುರುಬರಹಳ್ಳಿ ಬೆಳೆಗಾರ ಸುಬ್ಬಣ್ಣ.

ಡಚ್ ಮಾದರಿಯಲ್ಲಿ ಬೆಳೆ: ಗುಲಾಬಿ ಹೂವುಗಳನ್ನು ಬೆಳೆಯುವುದರಲ್ಲಿ ಎರಡು ವಿಧಗಳಿದ್ದು, ಒಂದು ಲೋಕಲ್ ಗುಲಾಬಿ (ತೆರೆದ ಹೂವುಗಳು) ಮತ್ತೊಂದು ಡಚ್ ಮಾದರಿಯ ಗುಲಾಬಿಗಳ ಬೆಳೆ. ಲೋಕಲ್ ಗುಲಾಬಿಗಳನ್ನು ತೆರೆದ ತೋಟಗಳಲ್ಲಿ ಬೆಳೆಯಲಾಗುವುದಲ್ಲದೆ, ಸ್ಥಳೀಯ ಮಾರುಕಟ್ಟೆಗಳಲ್ಲಿ ಕಡಿಮೆ ಬೆಲೆಗೆ ಮಾರಾಟವಾಗುತ್ತದೆ. ಡಚ್ ಮಾದರಿಯ ಗುಲಾಬಿಗಳನ್ನು ಪಾಲಿಹೌಸ್‌ಗಳಲ್ಲಿ ಎಚ್ಚರಿಕೆಯಿಂದ ನಿರ್ದಿಷ್ಟ ತಾಪಮಾನದಲ್ಲಿ ಬೆಳೆಯಲಾಗುತ್ತಿದ್ದು, ಹೂವುಗಳನ್ನು ಸ್ಪಂಜಿನ ಕವಚದೊಂದಿಗೆ ಮುಚ್ಚುವುದರಿಂದ ಹೂವು ನಿರ್ದಿಷ್ಟ ಆಕಾರ ಪಡೆದುಕೊಳ್ಳುತ್ತದೆ.

1 ಲಕ್ಷಕ್ಕೂ ಹೆಚ್ಚು ಗುಲಾಬಿ ರಫ್ತು: ಫೆ.14 ಪ್ರೇಮಿಗಳ ದಿನದಂದು. ಗುಲಾಬಿ ಹೂವುಗಳ ಖರೀದಿಗೆ ಮುಗಿ ಬೀಳುತ್ತಾರೆ. ತಾಲೂಕಿನ ತಾಜ್‌ಮಹಲ್ ಕೆಂಗುಲಾಬಿಗೆ ವಿಶೇಷವಾಗಿ ಬೇಡಿಕೆ ಹೆಚ್ಚಾಗಿದ್ದು, ಈಗಾಗಲೇ ಹೂವಿನ ಸಂಗ್ರಹಣೆಗೆಂದು ಸೂಕ್ತ ವ್ಯವಸ್ಥೆ ಆರಂಭಿಸಲಾಗಿದೆ. ಕಳೆದ ವರ್ಷ ತಾಲೂಕಿನಿಂದ 80 ಸಾವಿರದಿಂದ 1 ಲಕ್ಷಕ್ಕೂ ಹೆಚ್ಚು ಹೂಗಳು ರಫ್ತಾಗಿದ್ದು, ಈ ವರ್ಷವು ಹೆಚ್ಚಾಗಿ ಸರಬರಾಜಾಗುವ ನಿರೀಕ್ಷೆಯಿದೆ ಎನ್ನುತ್ತಾರೆ ಗುಲಾಬಿ ಬೆಳೆಗಾರರು.

10 ವರ್ಷ ಹಿಂದೆ ಸಾಮಾನ್ಯವಾಗಿ ಆರಂಭಿಸಿದ ಗುಲಾಬಿ ಬೆಳೆ ಇಂದು 6 ಎಕರೆಯಾಗಿ ಬೆಂಗಳೂರು ಸೇರಿದಂತೆ ಯೂರೋಪಿಯನ್ ರಾಷ್ಟ್ರಗಳಿಗೂ ನಮ್ಮಲ್ಲಿನ ಹೂವು ರಫ್ತಾಗುತ್ತಿದೆ. ರೈತರು ಒಂದೇ ಬೆಳೆಗೆ ಸೀಮಿತವಾಗದೆ ಲಾಭದಾಯಕ ಬೆಳೆಗಳನ್ನು ಅನುಸರಿಸಬೇಕು.

ಲಕ್ಷ್ಮಣ್, ಹೂ ಬೆಳೆಗಾರ ಚಿಕ್ಕಕೋಲಿಗ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ನಾರಾಯಣಸ್ವಾಮಿ ಸಿ.ಎಸ್.

contributor

Similar News