ಏಳು ದಶಕಗಳ ಪತ್ರಿಕಾ ವಿತರಕ ತಾರಾನಾಥ ಕಾಮತ್

Update: 2024-07-01 09:20 GMT

ಏಳು ದಶಕಗಳ ಹಿಂದೆ ಸೈಕಲ್ ತುಳಿದು ಮನೆಮನೆಗೆ ಪತ್ರಿಕೆ ವಿತರಿಸಲು ಆರಂಭಿಸಿದ ಮಂಗಳೂರು ಮಹಾನಗರದ ಅತ್ಯಂತ ಹಿರಿಯ ಪತ್ರಿಕಾ ವಿತರಕರ ತಾರಾನಾಥ ಕಾಮತ್, 94ರ ಹರೆಯದಲ್ಲೂ ಪ್ರತಿದಿನ ಪತ್ರಿಕಾ ವಿತರಣೆಯನ್ನು ಮುಂದುವರಿಸುತ್ತಿದ್ದಾರೆ.

1930ರ ಡಿಸೆಂಬರ್ 25ರಂದು ಮಂಗಳೂರು ತಾಲೂಕಿನ ಕಂಕನಾಡಿಯಲ್ಲಿ ತಂದೆ ಉಪೇಂದ್ರ ಕಾಮತ್, ತಾಯಿ ಸುಂದರಿ ಕಾಮತ್ ದಂಪತಿಯ ಮೂವರು ಮಕ್ಕಳಲ್ಲಿ ಒಬ್ಬರಾಗಿ ತಾರನಾಥ ಕಾಮತ್ ಜನಿಸಿದರು. ಅವರಿಗೆ ಓರ್ವ ಹಿರಿಯ ಸಹೋದರಿ ಮತ್ತು ಓರ್ವ ಕಿರಿಯ ಸಹೋದರ ಇದ್ದಾರೆ. ಆರ್ಥಿಕವಾಗಿ ಬಡಕುಟುಂಬದಿಂದ ಬಂದ ತಾರಾನಾಥರು 8ನೇ ತರಗತಿವರೆಗೆ ಓದಿದ್ದು, ಬಳಿಕ ಬಂಧುಗಳ ಜೊತೆ ಕೆಲಸ ಮಾಡಿದ್ದ ಅವರು, ಲೋಕೋಪಯೋಗಿ ಇಲಾಖೆಯಲ್ಲಿ ಗುತ್ತಿಗೆದಾರರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಕಾರವಾರಕ್ಕೆ ವರ್ಗಾವಣೆಗೊಂಡ ಕಾರಣ ಮರಳಿ ಊರಿಗೆ ಬರಬೇಕಾಯಿತು. ಆ ನಂತರ ಮಾವ ನೀಡಿದ 10 ಸಾವಿರ ರೂ. ಮೂಲ ಬಂಡವಾಳದಿಂದ ಪತ್ರಿಕಾ ವಿತರಕರಾಗಿ ಕಂಕನಾಡಿಯಲ್ಲಿ ಕಾಮತ್ ನ್ಯೂಸ್ ಏಜೆನ್ಸಿಯನ್ನು ಆರಂಭಿಸಿದರು. ಏಳು ದಶಕಗಳಿಂದ ವಿವಿಧ ದೈನಿಕ ನಿಯತ ಕಾಲಿಕಗಳನ್ನು ಮಾರಾಟ ಮಾಡುತ್ತಾ ಸುಮಾರು 2 ಸಾವಿರ ಪತ್ರಿಕೆಗಳನ್ನು ಮನೆ ಮನೆಗೆ ವಿತರಿಸುವ ಕೆಲಸದಲ್ಲಿ ತೊಡಗಿದ್ದಾರೆ. ಆರಂಭದಲ್ಲಿ ಮಂಗಳೂರಿನ ಸುಮಾರು ನಾಲ್ಕು ಕಿ.ಮೀ. ದೂರದವರೆಗೆ ಪತ್ರಿಕಾ ವಿತರಣೆ ಮಾಡಲಾರಂಭಿಸಿದ್ದ ಅವರು, ಈ ಕೆಲಸದಲ್ಲಿ ತಮ್ಮ ಪತ್ನಿ ದಿ.ವಿಜಯಾ ಅವರ ಸಹಕಾರವನ್ನು ನೆನಪಿಸಿಕೊಳ್ಳುತ್ತಾರೆ.

ಸೈಕಲ್ ಮೂಲಕ ಪತ್ರಿಕೆ ವಿತರಣೆಯಲ್ಲಿ ನಿರತರಾಗಿದ್ದ ವೇಳೆ ಅಪಘಾತ ಉಂಟಾಗಿ ಸುಮಾರು ಎರಡು ವರ್ಷಗಳ ಕಾಲ ತನ್ನ ಪತ್ರಿಕಾ ವಿತರಣೆ ಮುಗಿದೇ ಹೊಯಿತು ಅಂದುಕೊಂಡಿದ್ದರು. ಆದರೆ ಪತ್ರಿಕಾ ವಿತರಣೆಯ ಹೊಣೆಗಾರಿಕೆಯನ್ನು ತನ್ನ ಪತ್ನಿ ವಹಿಸಿಕೊಂಡು ನಡೆಸಿದ್ದರು. ಈಗ ಮಕ್ಕಳಾದ ವಿನಾಯಕ ಕಾಮತ್ ಮತ್ತು ವಿಷ್ಣು ಕಾಮತ್ ನನ್ನ ಜೊತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಾರಾನಾಥ ಕಾಮತ್ ವಿವರಿಸುತ್ತಾರೆ.

ಸೈಕಲ್ ತುಳಿದು ಆರಂಭಗೊಂಡ ಪತ್ರಿಕಾ ವಿತರಣೆ: ‘ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಮಂಗಳೂರು ನಗರದಲ್ಲಿ ಸೈಕಲ್ ತುಳಿದು ಮನೆ ಮನೆಗೆ ಪತ್ರಿಕೆ ವಿತರಣೆ ಮಾಡುತ್ತಿದ್ದೆ. ಆಗ ಮಂಗಳೂರು ಮಹಾ ನಗರವಾಗಿರಲಿಲ್ಲ. ಪತ್ರಿಕೆಗಳ ಸಂಖ್ಯೆ ಕೂಡ ಕಡಿಮೆ ಇತ್ತು. ಸುಜೀರ್ ಮಂಜುನಾಥ ನಾಯಕ್ ಎಂಬವರು ಕಂಕನಾಡಿ ಪಡೀಲ್ ಬಳಿ ಇದ್ದ ಓರ್ವ ಅಧಿಕಾರಿಗೆ ಇಂಡಿಯನ್

ಎಕ್ಸ್‌ಪ್ರೆಸ್ ಪತ್ರಿಕೆ ಹಾಕುವಂತೆ ವಿಜ್ಞಾಪಿಸಿಕೊಂಡರು. ನಾನು ಒಪ್ಪಿಕೊಂಡೆ. ಪ್ರತಿದಿನ ಮದ್ರಾಸ್‌ನಿಂದ ಆ ಪತ್ರಿಕೆ ರೈಲು ಮೂಲಕ ಬರ್ತಾ ಇತ್ತು. ಮುಂದೆ ‘ನವಭಾರತ ಪತ್ರಿಕೆ’ ಆರಂಭವಾಯಿತು. ಅದರ ಏಜೆನ್ಸಿಯನ್ನು ಪಡೆದುಕೊಂಡೆ. ಆಗ ‘ನವಭಾರತ ಪತ್ರಿಕೆ’ಗೆ ಒಂದು ಆಣೆ ಇತ್ತು. ಒಂದು ರುಯಿ ಕಮಿಷನ್ ದೊರೆಯುತ್ತಿತ್ತು. ಅಲ್ಲಿಂದ ಇಲ್ಲಿಯವರೆಗೆ ನಿರಂತರವಾಗಿ 70 ವರ್ಷಗಳಿಂದ ಪತ್ರಿಕಾ ವಿತರಣೆ ಮಾಡುತ್ತಿದ್ದೇನೆ’ ಎನ್ನುತ್ತಾರೆ ಕಾಮತ್.

ಕಾಮತ್ ಇಂದಿಗೂ ಮಂಗಳೂರಿನ ಕಂಕನಾಡಿಯಲ್ಲಿ ಮುಂಜಾನೆಯಿಂದ ಸಂಜೆಯವರೆಗೆ ತಮ್ಮ ಅಂಗಡಿಯಲ್ಲಿ ಪತ್ರಿಕೆ ಮಾರಾಟ ಮಾಡುತ್ತಿ ದ್ದಾರೆ. ಹಲವು ದಶಕಗಳಿಂದ ಒಂದು ಇಡೀ ಕುಟುಂಬವೇ ಪತ್ರಿಕಾ ವಿತರಣೆ ಕಾಯಕದಲ್ಲಿ ತೊಡಗಿಸಿಕೊಂಡಿರುವುದು ಅಪರೂಪದ ಉದಾಹರಣೆ.

ಪ್ರೇರಣೆ ನೀಡಿದ ಸುಜಿರ್ ಮಂಜುನಾಥ ನಾಯಕ್, ನೆರವು ನೀಡಿದ ಜಯಕರ, ಸದಾ ಪ್ರೇರಕ ಶಕ್ತಿಯಾಗಿದ್ದ ತಾಯಿಯ ನೆನಪಿನೊಂದಿಗೆ ಇತರರಿಗೆ ಕೆಡುಕನ್ನು ಬಯಸದೆ ಸದಾ ಇತರರ ಹಿತವನ್ನು ಬಯಸಬೇಕೆಂಬ ಆದರ್ಶದೊಂದಿಗೆ ಬದುಕುತ್ತಿದ್ದೇನೆ. ಮುಂದಿನ ಡಿಸೆಂಬರ್ ತಿಂಗಳಿಗೆ ನನಗೆ 95 ವರ್ಷ. ಇಂದು ಪತ್ರಿಕಾ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಹಲವು ಮಂದಿ ಮೊಬೈಲ್‌ನಲ್ಲಿ ಪತ್ರಿಕೆ ಓದುತ್ತಾರೆ. ಆದರೂ ಪತ್ರಿಕೆ ಓದುವವರಿದ್ದಾರೆ. ಅಂಗಡಿಯಲ್ಲಿ ಕನ್ನಡ, ಇಂಗ್ಲಿಷ್, ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳ ಪತ್ರಿಕೆ ಮಾರಾಟ ಮಾಡುತ್ತೇನೆ’. 

-ತಾರಾನಾಥ ಕಾಮತ್

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಪುಷ್ಪರಾಜ್ ಬಿ.ಎನ್.

contributor

Similar News