ನೈತಿಕತೆಯ ಪಾತಾಳ ಕುಸಿತ: ಸಾಂವಿಧಾನಿಕ- ಸಾಮಾಜಿಕ

ಭಾರತದ ಸಂಸದೀಯ ನಡವಳಿಕೆಯ ಇತಿಹಾಸದಲ್ಲಿ ವಿರೋಧ ಪಕ್ಷಗಳ ಸದಸ್ಯರು ತಮ್ಮ ಹಕ್ಕೊತ್ತಾಯಗಳನ್ನು ಮಂಡಿಸುವ ಸಂದರ್ಭದಲ್ಲಿ ಅನುಚಿತ ವರ್ತನೆ ತೋರುವುದು, ಸದನದ ಬಾವಿಗಿಳಿದು ಪ್ರತಿಭಟಿಸುವುದು, ಭಿತ್ತಿಪತ್ರಗಳನ್ನು ಹಂಚುವುದು, ಘೋಷಣೆಗಳನ್ನು ಕೂಗುವುದು ಇದಾವುದೂ ಹೊಸ ವಿದ್ಯಮಾನವಲ್ಲ. ಇದನ್ನು ದುರ್ವರ್ತನೆ ಅಥವಾ ಸೋಲಿನ ಹತಾಶ ವರ್ತನೆ ಎಂದು ಭಾವಿಸುವುದರ ಬದಲು, ಸರಕಾರವು ತನ್ನ ಸಾಂವಿಧಾನಿಕ ಜವಾಬ್ದಾರಿಯನ್ನು ಅರಿತು, ನಡೆದ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿ, ಈ ಘಟನೆಯ ಹಿಂದಿರಬಹುದಾದ ಕಾರಣಗಳನ್ನು ಶೋಧಿಸುವುದು ನ್ಯಾಯಯುತವಾದ ಮಾರ್ಗ. ಆದರೆ ಅಧಿವೇಶನದ ಕಲಾಪದಿಂದಲೇ ವಿರೋಧ ಪಕ್ಷದ 141 ಸದಸ್ಯರನ್ನು ದೂರ ಇರಿಸುವ ಮೂಲಕ ಕೇಂದ್ರ ಸರಕಾರ ಪ್ರಜಾಪ್ರಭುತ್ವದ ಮೌಲ್ಯಗಳನ್ನೇ ಅಣಕ ಮಾಡಿದಂತಿದೆ.

Update: 2023-12-21 04:33 GMT
Editor : jafar sadik | Byline : ನಾ. ದಿವಾಕರ

Photo: PTI

35ರ ವಯೋಮಾನದ ಒಳಗಿನ 65 ಪ್ರತಿಶತ ಜನಸಂಖ್ಯೆಯನ್ನು ಹೊಂದಿರುವ ಭಾರತ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ರಾಜಕೀಯವಾಗಿಯೂ, ಈ ಬೃಹತ್ ಜನಸಮೂಹವನ್ನು ಯಾವ ದಿಕ್ಕಿನಲ್ಲಿ ಕೊಂಡೊಯ್ಯುತ್ತಿದೆ? ಬಹುಶಃ ಈ ಪ್ರಶ್ನೆಗೆ ನಿಖರವಾಗಿ ಉತ್ತರಿಸಲು ತಡಕಾಡಬೇಕಾಗುತ್ತದೆ. ಏಕೆಂದರೆ ಸುಳ್ಳು ಮತ್ತು ಅರ್ಧಸತ್ಯಗಳನ್ನೇ ವಾಸ್ತವ ಎಂದು ಬಿಂಬಿಸುವ ಒಂದು ವಿಸ್ತೃತ ಜಾಲ ಇಡೀ ದೇಶವನ್ನು ವ್ಯಾಪಿಸಿದೆ. ಸುತ್ತಲಿನ ಪರಿಸರದಲ್ಲಿ ನಡೆಯುವ ತಪ್ಪುಗಳನ್ನೇ ಸರಿ ಎಂದು ಬಿಂಬಿಸುವ ಒಂದು ಪರಿ ಆದರೆ ಮತ್ತೊಂದೆಡೆ ಗಂಭೀರ ಪ್ರಮಾದಗಳನ್ನೂ ಸಮರ್ಥಿಸಿಕೊಳ್ಳುವ ಬೌದ್ಧಿಕ ಪಡೆಗಳು ಹೇರಳವಾಗಿ ಹುಟ್ಟಿಕೊಂಡಿವೆ. ಕ್ಷಣಮಾತ್ರದಲ್ಲಿ ಈ ತುದಿಯಿಂದ ಆ ತುದಿಗೆ ಪ್ರವಹಿಸುವ ಮಾಹಿತಿಗಳು ಅಷ್ಟೇ ಕ್ಷಿಪ್ರಗತಿಯಲ್ಲಿ ಜನಮಾನಸದ ನಡುವೆ ನುಸುಳಿ, ಮನಗಳಲ್ಲಿ ನಾಟುವಂತಹ ಸಂವಹನ ತಂತ್ರಜ್ಞಾನವೂ ನಮ್ಮ ನಡುವೆ ಇದೆ. ಆಧುನಿಕತೆ ಮತ್ತು ಡಿಜಿಟಲ್ ಕ್ರಾಂತಿಯ ಅಮಲಿನಲ್ಲಿ ತೇಲುತ್ತಿರುವ ಸಮಾಜಕ್ಕೆ ತಪ್ಪು-ಸರಿಗಳನ್ನು ಛೇದಿಸಿ ನಿಷ್ಕರ್ಷಿಸುವ ವ್ಯವಧಾನವೇ ಇಲ್ಲದಂತೆ ಮಾಡಿರುವುದು ಹಾಗೂ ಯುವ ಸಮೂಹವನ್ನು ಅಸ್ಪಷ್ಟ ಗುರಿಗಳತ್ತ ಕೊಂಡೊಯ್ಯುತ್ತಿರುವುದು ವರ್ತಮಾನದ ದುರಂತ ಸತ್ಯ.

ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚನೆಯ ಸಂದರ್ಭದಲ್ಲಿ ಭವಿಷ್ಯ ಭಾರತದ ಆಳ್ವಿಕೆಗೆ ಅಗತ್ಯವಾದ ಸಾಂವಿಧಾನಿಕ ಮಾರ್ಗಗಳನ್ನು ಒತ್ತಿ ಹೇಳುವುದರೊಂದಿಗೆ ಆಡಳಿತ ನಡೆಸುವ ಅಧಿಕಾರ ವರ್ಗಗಳಿಗೆ ಇರಬೇಕಾದ ಸಾಂವಿಧಾನಿಕ ನೈತಿಕತೆಯ ಬಗ್ಗೆಯೂ ಹೆಚ್ಚು ಆಸ್ಥೆ ವಹಿಸಿದ್ದರು. ಸಂವಿಧಾನ ನಿಷ್ಠೆ, ಪ್ರಜಾಸತ್ತಾತ್ಮಕ ಮಾರ್ಗ ಹಾಗೂ ಪ್ರಾಮಾಣಿಕ ಆಳ್ವಿಕೆಯೊಂದಿಗೇ ಅಧಿಕಾರರೂಢ ರಾಜಕೀಯ ಪಕ್ಷಗಳು ಹಾಗೂ ನಾಯಕರು ತಮ್ಮ ನಡೆನುಡಿಗಳಲ್ಲಿ, ನೀತಿ ನಿರೂಪಣೆಯಲ್ಲಿ ಹಾಗೂ ಸಂವಿಧಾನ ಪಾಲನೆಯಲ್ಲಿ ನೈತಿಕತೆಯನ್ನು ಕಾಪಾಡಿಕೊಳ್ಳುವುದರ ಬಗ್ಗೆ ಅಂಬೇಡ್ಕರ್ ಹೆಚ್ಚಿನ ಒಲವು ವ್ಯಕ್ತಪಡಿಸಿದ್ದರು. ಬಹುಶಃ ಮಹಾತ್ಮಾ ಗಾಂಧಿಯನ್ನೂ ಸೇರಿದಂತೆ ಆ ಕಾಲಘಟ್ಟದ ರಾಜಕೀಯ ನಾಯಕರಿಗೆ ನೈತಿಕತೆ ಎನ್ನುವುದು ಸಹಜ ಪ್ರವೃತ್ತಿಯಾಗಿಯೇ ಕಂಡಿರಲು ಸಾಧ್ಯ. ಆದರೆ 75 ವರ್ಷಗಳ ಆಳ್ವಿಕೆಯ ನಂತರ ಹಿಂದಿರುಗಿ ನೋಡಿದಾಗ, ಅಂಬೇಡ್ಕರ್ ಅವರ ಆಶಯ ಇನ್ನೂ ಕನಸಾಗಿಯೇ ಉಳಿದಿರುವಂತೆ ತೋರುತ್ತಿದೆ.

ಶಿಥಿಲವಾಗುತ್ತಿರುವ ನೈತಿಕ ನೆಲೆಗಟ್ಟು

ಇತ್ತೀಚಿನ ಎರಡು ಘಟನೆಗಳು ನೈತಿಕತೆಯ ಪ್ರಶ್ನೆಯನ್ನು ಮುನ್ನೆಲೆಗೆ ತಂದಿವೆ. ಮೊದಲನೆಯದು ಸಂಸತ್ ಕಲಾಪದ ವೇಳೆ ನಡೆದ ಅನಪೇಕ್ಷಿತ ಘಟನಾವಳಿಗಳು. ಅತ್ಯಾಧುನಿಕ ಕಣ್ಗಾವಲು ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ನೂತನ ಸಂಸತ್ ಭವನದಲ್ಲಿ ಕಲಾಪ ನಡೆಯುತ್ತಿರುವಾಗಲೇ ಒಳನುಗ್ಗುವ ದುಸ್ಸಾಹಸದ ಮೂಲಕ ಕೆಲವು ಯುವಕರು ತಮ್ಮೊಳಗಿನ ಹತಾಶೆಯನ್ನೋ, ಆಕ್ರೋಶವನ್ನೋ ಹೊರಹಾಕಲು ಅರಾಜಕತೆಯ ಮಾರ್ಗವನ್ನು ಅನುಸರಿಸಿದ್ದಾರೆ. ಈ ಘಟನೆಯ ಹಿಂದಿನ ಸತ್ಯಾಸತ್ಯತೆಗಳು ತನಿಖೆಯ ನಂತರವಷ್ಟೇ ತಿಳಿಯಲಿದೆ. ಆದರೆ ಭದ್ರತಾ ಲೋಪವನ್ನು ಒಪ್ಪಿಕೊಂಡಿರುವ ಕೇಂದ್ರ ಸರಕಾರ ಈ ಘಟನೆಯನ್ನು ರಾಜಕೀಯ ಚೌಕಟ್ಟಿನಲ್ಲಿಟ್ಟು ನೋಡದೆ, ಎಲ್ಲ ಸದಸ್ಯರನ್ನೂ ಒಳಗೊಳ್ಳುವ ಮೂಲಕ ದೇಶದ ಜನತೆಗೆ ಒಂದು ಸಕಾರಾತ್ಮಕ ಸಂದೇಶವನ್ನು ರವಾನಿಸಬೇಕಿತ್ತು. ಬಹಳ ಮುಖ್ಯವಾಗಿ ಕೇಂದ್ರ ಗೃಹ ಸಚಿವರು ಕೂಡಲೇ ಸಂಸತ್ತಿನಲ್ಲೇ ಹೇಳಿಕೆ ನೀಡುವ ಮೂಲಕ ಸಾಮಾನ್ಯ ಜನತೆಯಲ್ಲಿ ವಿಶ್ವಾಸ ಮೂಡಿಸಬೇಕಿತ್ತು. ಸಂಸತ್ತಿನ ಹೊರಗೆ ನಿಂತು ವಿರೋಧ ಪಕ್ಷಗಳನ್ನು ಖಂಡಿಸುವುದರ ಬದಲು ಸರಕಾರವು ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಜಂಟಿ ಅಧಿವೇಶನ ಕರೆದು ಘಟನೆಯ ಬಗ್ಗೆ ಆರೋಗ್ಯಕರ ಚರ್ಚೆ ನಡೆಸಬೇಕಿತ್ತು. ಇದು ಸಾಂವಿಧಾನಿಕ ನೈತಿಕತೆಯ ಪ್ರಶ್ನೆ.

ಆದರೆ ಆಗಿರುವುದೇ ಬೇರೆ. ಸ್ವತಂತ್ರ ಭಾರತದ ಸಂಸದೀಯ ಇತಿಹಾಸದಲ್ಲೇ ಕಂಡರಿಯದಂತೆ, ಪ್ರಧಾನ ಮಂತ್ರಿ ಹಾಗೂ ಗೃಹಸಚಿವರಿಂದ ಸಂಸತ್ತಿನಲ್ಲಿ ಹೇಳಿಕೆಗಾಗಿ ಆಗ್ರಹಿಸಿದ ಪ್ರತಿಪಕ್ಷಗಳ 141 ಸಂಸದರನ್ನು ಅಮಾನತುಗೊಳಿಸುವ ಮೂಲಕ ಕೇಂದ್ರ ಸರಕಾರ ಪ್ರಜಾಪ್ರಭುತ್ವದ ಮೂಲ ತತ್ವವನ್ನೇ ಅಣಕಿಸಿದೆ. ಭಾರತದ ಸಂಸದೀಯ ನಡವಳಿಕೆಯ ಇತಿಹಾಸದಲ್ಲಿ ವಿರೋಧ ಪಕ್ಷಗಳ ಸದಸ್ಯರು ತಮ್ಮ ಹಕ್ಕೊತ್ತಾಯಗಳನ್ನು ಮಂಡಿಸುವ ಸಂದರ್ಭದಲ್ಲಿ ಅನುಚಿತ ವರ್ತನೆ ತೋರುವುದು, ಸದನದ ಬಾವಿಗಿಳಿದು ಪ್ರತಿಭಟಿಸುವುದು, ಭಿತ್ತಿಪತ್ರಗಳನ್ನು ಹಂಚುವುದು, ಘೋಷಣೆಗಳನ್ನು ಕೂಗುವುದು ಇದಾವುದೂ ಹೊಸ ವಿದ್ಯಮಾನವಲ್ಲ. ಇದನ್ನು ದುರ್ವರ್ತನೆ ಅಥವಾ ಸೋಲಿನ ಹತಾಶ ವರ್ತನೆ ಎಂದು ಭಾವಿಸುವುದರ ಬದಲು, ಸರಕಾರವು ತನ್ನ ಸಾಂವಿಧಾನಿಕ ಜವಾಬ್ದಾರಿಯನ್ನು ಅರಿತು, ನಡೆದ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿ, ಈ ಘಟನೆಯ ಹಿಂದಿರಬಹುದಾದ ಕಾರಣಗಳನ್ನು ಶೋಧಿಸುವುದು ನ್ಯಾಯಯುತವಾದ ಮಾರ್ಗ. ಆದರೆ ಅಧಿವೇಶನದ ಕಲಾಪದಿಂದಲೇ ವಿರೋಧ ಪಕ್ಷದ ೧೪೧ ಸದಸ್ಯರನ್ನು ದೂರ ಇರಿಸುವ ಮೂಲಕ ಕೇಂದ್ರ ಸರಕಾರ ಪ್ರಜಾಪ್ರಭುತ್ವದ ಮೌಲ್ಯಗಳನ್ನೇ ಅಣಕ ಮಾಡಿದಂತಿದೆ. ಪ್ರತಿಪಕ್ಷಗಳಿಲ್ಲದೆ ಅನುಮೋದಿಸಬಹುದಾದ ಮಸೂದೆಗಳೂ ತಮ್ಮ ಸಾಂವಿಧಾನಿಕ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತವೆ.

ಡಾ. ಅಂಬೇಡ್ಕರ್ ಪ್ರತಿಪಾದಿಸಿದ ಸಾಂವಿಧಾನಿಕ ನೈತಿಕತೆಯ ಪ್ರಶ್ನೆ ಇಲ್ಲಿ ಮುಖ್ಯವಾಗುತ್ತದೆ. ಆಡಳಿತ ಪಕ್ಷವಾಗಲೀ, ವಿರೋಧ ಪಕ್ಷಗಳಾಗಲೀ ಮೂಲತಃ ದೇಶದ ನಾಗರಿಕರನ್ನು ಪ್ರತಿನಿಧಿಸುವ ಒಂದು ಚುನಾಯಿತ ಗುಂಪುಗಳಷ್ಟೇ. ಕಾಯ್ದೆ, ಕಾನೂನು, ಆಡಳಿತ ನೀತಿಗಳನ್ನು ರೂಪಿಸಿ ನಿರೂಪಿಸುವ ಜವಾಬ್ದಾರಿಯೊಂದಿಗೇ ದೇಶದ ಜನಸಾಮಾನ್ಯರನ್ನು ಬಾಧಿಸುವ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಪರಾಮರ್ಶೆ ಮಾಡುವ ನೈತಿಕ ಹೊಣೆಗಾರಿಕೆಯೂ ಸಂಸದರ ಮೇಲಿರುತ್ತದೆ. ಭದ್ರತಾಲೋಪದಂತಹ ಗಂಭೀರ ಘಟನೆಗಳು ನಡೆದಾಗ ರಾಜಕೀಯ ಪಕ್ಷಗಳು ತಮ್ಮ ಪ್ರತಿಷ್ಠೆಯನ್ನು ಬದಿಗಿಟ್ಟು, ಚುನಾವಣಾ ಲಾಭನಷ್ಟಗಳ ಲೆಕ್ಕಾಚಾರವನ್ನು ಅಲಕ್ಷಿಸಿ, ಇಂತಹ ಅನಪೇಕ್ಷಿತ ಘಟನೆಗಳ ಹಿಂದೆ ಇರಬಹುದಾದ ಕಾರಣಗಳನ್ನು ಶೋಧಿಸಲು ಮುಂದಾಗಬೇಕು. ವಿರೋಧ ಪಕ್ಷಗಳ ತಾತ್ವಿಕ ವಿರೋಧ/ಪ್ರತಿರೋಧವನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಮೂಲಕ ಮುಕ್ತ ಚರ್ಚೆಗೆ ಆಹ್ವಾನಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸುವುದು ಆಡಳಿತಾರೂಢ ಪಕ್ಷದ ನೈತಿಕ ಹೊಣೆಗಾರಿಕೆ. 2001ರಲ್ಲಿ ಸಂಸತ್ ದಾಳಿ ನಡೆದಾಗ ಎನ್‌ಡಿಎ ಆಳ್ವಿಕೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಇಂತಹ ಮುತ್ಸದ್ದಿತನವನ್ನು ತೋರಿದ್ದನ್ನು ಸ್ಮರಿಸಬಹುದು.

ಆದರೆ ಭಾರತ ಬದಲಾಗಿದೆ. ರಾಜಕೀಯ ವಿರೋಧವನ್ನು ವಿಷಯಾಧಾರಿತವಾಗಿ ನೋಡುವ ವ್ಯವಧಾನವನ್ನೇ ಕಳೆದುಕೊಂಡಿರುವ ಅಧಿಕಾರ ರಾಜಕಾರಣದ ವಾರಸುದಾರರು ಪರಸ್ಪರ ದೋಷಾರೋಪಗಳಲ್ಲಿ ತೊಡಗುವ ಮೂಲಕ ಜನಸಾಮಾನ್ಯರ ಜಟಿಲ ಸಮಸ್ಯೆಗಳಿಗೆ ವಿಮುಖರಾಗುತ್ತಿದ್ದಾರೆ. ಪ್ರಜಾಪ್ರಭುತ್ವದ ಉಳಿವಿಗೆ ಅತ್ಯವಶ್ಯವಾದ ವಿರೋಧ/ಪ್ರತಿರೋಧವನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಮನೋಭಾವ ಕ್ಷೀಣಿಸುತ್ತಿದ್ದು, ಪ್ರತಿರೋಧದ ಧ್ವನಿಗಳನ್ನು ವಿರೋಧಿ ನೆಲೆಯಲ್ಲಿಟ್ಟು ನೋಡುವ ಮನೋವೃತ್ತಿಗೆ ಭಾರತ ಸಾಕ್ಷಿಯಾಗುತ್ತಿದೆ. ಇತಿಹಾಸದಲ್ಲಿ ಎಲ್ಲೂ ಕಾಣಲಾಗದ ‘ವಿರೋಧಪಕ್ಷ ಮುಕ್ತ’ ವಾತಾವರಣವನ್ನು ಕಲ್ಪಿಸಲು ಹರಸಾಹಸ ಮಾಡುತ್ತಿರುವ ಬಹುಸಂಖ್ಯಾವಾದದ ರಾಜಕಾರಣ ಡಾ. ಅಂಬೇಡ್ಕರ್ ಆದಿಯಾಗಿ ಸ್ವತಂತ್ರ ಭಾರತದ ಪೂರ್ವಸೂರಿಗಳು ಆಶಿಸಿದ ಸಾಂವಿಧಾನಿಕ ನೈತಿಕತೆಯ ತಳಹದಿಯನ್ನೇ ಬುಡಮೇಲು ಮಾಡುತ್ತಿದೆ.

ಸಾಮಾಜಿಕ ನೈತಿಕತೆಯ ಪ್ರಶ್ನೆ

ರಾಜಕಾರಣವನ್ನು ಬದಿಗಿಟ್ಟು ನೋಡಿದಾಗ ಸಾಮಾಜಿಕವಾಗಿಯೂ ನಮ್ಮ ಆಡಳಿತ ವ್ಯವಸ್ಥೆಯಲ್ಲಿ ನೈತಿಕತೆಯ ಅಧಃಪತನವು ತೀವ್ರತೆ ಪಡೆಯುತ್ತಿರುವುದು ಪ್ರಜ್ಞಾವಂತ ಸಮಾಜವನ್ನು ಎಚ್ಚರಿಸಬೇಕಿದೆ. ಬೆಳಗಾವಿಯಲ್ಲಿ ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ, ಕಂಬಕ್ಕೆ ಕಟ್ಟಿಹಾಕಿ ಥಳಿಸಿದ ಪ್ರಕರಣ ರಾಜ್ಯ ವಿಧಾನಸಭೆಯ ಸದನದಲ್ಲಿ ಧ್ವನಿಸಿದಂತೆಯೇ ರಾಷ್ಟ್ರ ರಾಜಕಾರಣದಲ್ಲೂ ಧ್ವನಿಸಿದೆ. ದಿಲ್ಲಿಗೆ ಹತ್ತಿರ ಇರುವ ಮಣಿಪುರದಲ್ಲಿ ನೂರಾರು ಜನರ ಸಮ್ಮುಖದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿದಾಗ ತುಟಿಬಿಚ್ಚದೆ ಹೋದ ಬಿಜೆಪಿ ರಾಷ್ಟ್ರಾಧ್ಯಕ್ಷರು ಬೆಳಗಾವಿ ಪ್ರಕರಣಕ್ಕೆ ಕೂಡಲೇ ಸ್ಪಂದಿಸಿ, ಸತ್ಯಶೋಧನೆಗೆ ಮುಂದಾಗಿರುವುದು, ರಾಜಕೀಯ ಪಕ್ಷಗಳಲ್ಲಿರುವ ಸಾಮಾಜಿಕ ಅಸೂಕ್ಷ್ಮತೆಯನ್ನು ತೋರುತ್ತದೆ. ಭಾರತೀಯ ಮಹಿಳಾ ಸಮೂಹದ ಹೆಣ್ತನದ ಘನತೆಯನ್ನು ಅವಮಾನಿಸಿದ ಪುರುಷಾಧಿಪತ್ಯದ ಸಂಕೇತವಾಗಿ ಈ ಎರಡೂ ಘಟನೆಗಳು ನಡೆದಿದ್ದು, ಇವುಗಳನ್ನು ರಾಜಕೀಯ ಪರಿಧಿಯಿಂದಾಚೆಗೆ ಅವಲೋಕಿಸುವ ವಿವೇಕವನ್ನು ಭಾರತದ ರಾಜಕಾರಣ ರೂಢಿಸಿಕೊಳ್ಳಬೇಕಿದೆ.

ಬೆಳಗಾವಿಯ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ರಾಜ್ಯ ಹೈಕೋರ್ಟ್ ಪೀಠ ಈ ಹಲ್ಲೆಯನ್ನು ಮೌನವಾಗಿ ವೀಕ್ಷಿಸಿದವರಿಗೂ ಪುಂಡುಗಂದಾಯದ ರೀತಿ ದಂಡ ವಿಧಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ. ಬ್ರಿಟಿಷರ ಕಾಲದ ಈ ದಂಡ ಪ್ರಕ್ರಿಯೆಯನ್ನು ನೆನಪಿಸಿರುವ ಹೈಕೋರ್ಟ್ ಪೀಠ ‘‘ನಾವು ನಾಗರಿಕ ಸಮಾಜ ಎಂದು ಹೇಳಿಕೊಳ್ಳುತ್ತೇವೆ, ಆದರೆ ಇಂತಹ ಘಟನೆ ನಡೆದಾಗ ಗ್ರಾಮಸ್ಥರ ಪಾತ್ರ ಏನು? ಏಕೆ ಜನರು ಮೂಕಪ್ರೇಕ್ಷಕರಾಗಿದ್ದರು?..’’ ಎಂದು ಪ್ರಶ್ನಿಸುವ ಮೂಲಕ ಇಡೀ ಸಮಾಜಕ್ಕೆ ಕಪಾಳಮೋಕ್ಷ ಮಾಡಿದೆ. ಮಣಿಪುರದಿಂದ ಬೆಳಗಾವಿಯವರೆಗೆ ಮಹಿಳೆಯರ ಮೇಲೆ, ಅಸ್ಪೃಶ್ಯ ಸಮುದಾಯಗಳ ಮೇಲೆ ನಡೆಯುವ ಎಲ್ಲ ದೌರ್ಜನ್ಯಗಳಿಗೂ ನಮ್ಮ ಸಮಾಜ ಮೂಕ ಪ್ರೇಕ್ಷಕನಂತೆಯೇ ಇರುತ್ತದೆ ಎಂಬ ವಾಸ್ತವವನ್ನು ಹೈಕೋರ್ಟ್ ನ್ಯಾಯಪೀಠ ಮತ್ತೊಮ್ಮೆ ನೆನಪಿಸಿದೆ. ಅಷ್ಟೇ ಅಲ್ಲ, ಇಂತಹ ಅಮಾನುಷತೆಯನ್ನು ಸಮರ್ಥಿಸಿಕೊಳ್ಳುವ, ಸಮ್ಮತಿಸುವ, ಸನ್ಮಾನಿಸುವ ಒಂದು ವರ್ಗವೂ ನಮ್ಮ ನಡುವೆ ಇದೆ ಎನ್ನುವುದನ್ನು ಒಪ್ಪಲೇಬೇಕಿದೆ.

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಲಗುಂಡಿಯನ್ನು ಸ್ವಚ್ಛಗೊಳಿಸಲು ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳನ್ನು ಬಳಸಿಕೊಂಡಿರುವ ಪ್ರಕರಣ ಈ ಅಮಾನುಷತೆಯ ಮತ್ತೊಂದು ಆಯಾಮವನ್ನು ನಮ್ಮ ಮುಂದೆ ತೆರೆದಿಟ್ಟಿದೆ. ಜಾತಿ ತಾರತಮ್ಯ ಮತ್ತು ಕೆಳಜಾತಿಗಳನ್ನು ನಿಕೃಷ್ಟವಾಗಿ ಕಾಣುವ ಮೇಲ್ಜಾತಿಯ ಶ್ರೇಷ್ಠತೆಯ ಅಹಮಿಕೆಯನ್ನು ಬಿಂಬಿಸುವ ಈ ಪ್ರಕರಣ ಜ್ಞಾನ ದೇಗುಲದ ಆವರಣದಲ್ಲಿ ನಡೆದಿರುವುದು ಇಡೀ ಸಮಾಜವೇ ತಲೆತಗ್ಗಿಸುವ ವಿಚಾರ. ‘‘ಅದು ಮಲಗುಂಡಿಯಲ್ಲ ತ್ಯಾಜ್ಯ ಹರಿಯುವ ಚೇಂಬರ್ ಅಷ್ಟೇ...’’ ಎಂಬ ವಸತಿಶಾಲೆಯ ಮುಖ್ಯಸ್ಥರ ಸಮಜಾಯಿಷಿ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ನೆರವಾಗಬಹುದು. ಆದರೆ ಸ್ವಚ್ಛತಾ ಅಭಿಯಾನದಲ್ಲಿ ತ್ಯಾಜ್ಯ ತೊಳೆಯಲು ಪರಿಶಿಷ್ಟರೇ ಏಕೆ ಎಂಬ ಪ್ರಶ್ನೆಗೆ ಇವರಿಂದ ಉತ್ತರ ಸಿಗಬಹುದೇ? ಈ ಘಟನೆಯ ತನಿಖೆ, ವಿಚಾರಣೆ ಇತ್ಯಾದಿಗಳನ್ನು ಬದಿಗಿಟ್ಟು ನೋಡಿದಾಗ, ನಮ್ಮ ನಾಗರಿಕ ಜಗತ್ತು ತನ್ನ ಸಾಮಾಜಿಕ ನೈತಿಕತೆಯನ್ನು ಕಳೆದುಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಸ್ವಚ್ಛ ಭಾರತ ಅಭಿಯಾನದಡಿ ಬಯಲು ಶೌಚ ಮುಕ್ತ ಭಾರತದ ಆಂದೋಲನಕ್ಕೆ ನಾಲ್ಕು ವರ್ಷಗಳು ತುಂಬಿದ್ದರೂ, ಕಳೆದ ಐದು ವರ್ಷಗಳಲ್ಲಿ ನಾನೂರಕ್ಕೂ ಹೆಚ್ಚು ಸ್ವಚ್ಛತಾ ಕಾರ್ಮಿಕರು ಮಲಗುಂಡಿಯಲ್ಲಿ ಇಳಿದು ಉಸಿರುಗಟ್ಟಿ ಸತ್ತಿರುವುದು ವರದಿಯಾಗಿದೆ. ಹೀಗೆ ಬಲಿಯಾದವರೆಲ್ಲರೂ ಅಸ್ಪಶ್ಯ ಸಮುದಾಯಕ್ಕೆ ಸೇರಿದವರೇ ಎನ್ನುವುದಕ್ಕೆ ಸಾಕ್ಷ್ಯಾಧಾರಗಳೇ ಬೇಕಿಲ್ಲ ಎನಿಸುವಷ್ಟು ಮಟ್ಟಿಗೆ ಭಾರತೀಯ ಸಮಾಜದ ಶ್ರೇಣಿ ವ್ಯವಸ್ಥೆ ರೂಪುಗೊಂಡಿದೆ. ಮಾಲೂರು ತಾಲೂಕಿನಲ್ಲಿ ನಡೆದಿರುವ ಘಟನೆ ಇದೇ ಸಾಮಾಜಿಕ ವ್ಯಾಧಿಯ ಇತ್ತೀಚಿನ ನಿದರ್ಶನ. ಆಳ್ವಿಕೆಯ ದೃಷ್ಟಿಯಲ್ಲಿ ಬೆಳಗಾವಿ, ಯಲುವಹಳ್ಳಿ, ಮಣಿಪುರ ಎಲ್ಲವೂ ಸಂಭಾಳಿಸಬೇಕಾದ ಕಾನೂನು ಸುವ್ಯವಸ್ಥೆಯ ಸಮಸ್ಯೆಯಾಗಿ ಕಾಣುತ್ತದೆ. ಆದರೆ ಆಳಕ್ಕಿಳಿದು ನೋಡಿದಾಗ ಇವು ನಮ್ಮ ಸಮಾಜಕ್ಕೆ ಅಂಟಿರುವ ಶ್ರೇಷ್ಠತೆ-ಪಾರಮ್ಯ-ಆಧಿಪತ್ಯದ ವ್ಯಸನ ಹಾಗೂ ಅಹಮಿಕೆಯ ವ್ಯಾಧಿಯ ಲಕ್ಷಣಗಳೇ ಆಗಿವೆ.

ಆಡಳಿತ ನೈತಿಕತೆಯ ಪ್ರಶ್ನೆ

ಇದನ್ನು ಸರಿಪಡಿಸಲಿರುವ ಹಲವು ವಿಧಾನಗಳಿಗೆ ಕೇಂದ್ರ ಸ್ತಂಭವಾಗಿರುವುದು ನಮ್ಮ ಸಾಮಾಜಿಕ ನೈತಿಕತೆ ಹಾಗೂ ೧೪೦ ಕೋಟಿ ಜನತೆಯನ್ನಾಳುವ ಅಧಿಕಾರ ರಾಜಕಾರಣದ ಸಾಂವಿಧಾನಿಕ ನೈತಿಕತೆ. ಈ ಜನಕೋಟಿಯ ಪೈಕಿ ಅಂದಾಜು ೯೦ ಕೋಟಿ ಮತದಾರರಿದ್ದಾರೆ. ಇವರ ಪೈಕಿ ಶೇ. ೪೦ರಷ್ಟು ಅಂದರೆ ೩೬ ಕೋಟಿ ಜನತೆ ಚಲಾಯಿಸುವ ಮತ ಪಡೆದ ಪಕ್ಷಗಳು ಆಳ್ವಿಕೆಯನ್ನು ನಿಭಾಯಿಸುತ್ತವೆ. ಯಾವುದೇ ಆಡಳಿತಾರೂಢ ಪಕ್ಷವು ಇನ್ನುಳಿದ ನೂರುಕೋಟಿಗೂ ಹೆಚ್ಚು ಜನರತ್ತ ನೋಡುವ ವ್ಯವಧಾನ ಬೆಳೆಸಿಕೊಂಡಾಗ, ಬಹುಮತದ ಅಮಲಿನಿಂದ ಹೊರಬಂದು, ಎಲರನ್ನೂ ಒಳಗೊಳ್ಳುವ ಬಹುತ್ವದ ಸಮಾಜವನ್ನು ಕಟ್ಟುವುದು ಸಾಧ್ಯ. ಮೂಲತಃ ಭಾರತೀಯ ಸಮಾಜ Inclusive ಅಲ್ಲ. ಎಲ್ಲರನ್ನೂ ಒಳಗೊಳ್ಳುವುದಕ್ಕಿಂತಲೂ ಹೆಚ್ಚಾಗಿ ಹೆಚ್ಚಿನ ಜನರನ್ನು ಹೊರಗಿಟ್ಟು ಬದುಕುವ ಒಂದು ಮಾದರಿಯನ್ನು ಶ್ರೇಣೀಕೃತ ವ್ಯವಸ್ಥೆ ರೂಪಿಸಿದ್ದು, ಶತಮಾನಗಳಿಂದಲೂ ಕಾಪಾಡಿಕೊಂಡುಬಂದಿದೆ. ಈ ಸಮಾಜವನ್ನು ನಿರ್ವಹಿಸುವ ರಾಜಕೀಯ ವ್ಯವಸ್ಥೆಯಲ್ಲಿ ಸಾಂವಿಧಾನಿಕ ನೈತಿಕತೆ ಇದ್ದಾಗ ಮಾತ್ರವೇ ಎಲ್ಲರನ್ನೂ ಒಳಗೊಳ್ಳುವ ಸಮಾಜವನ್ನು ರೂಪಿಸಲು ಸಾಧ್ಯವಾಗುತ್ತದೆ. ಈ ಕಾರಣಕ್ಕಾಗಿಯೇ ಡಾ. ಅಂಬೇಡ್ಕರ್ ಜನಪ್ರತಿನಿಧಿಗಳ ಹಾಗೂ ಆಳ್ವಿಕೆಯ ಸಾಂವಿಧಾನಿಕ ನೈತಿಕತೆಯ ಬಗ್ಗೆ ಹೆಚ್ಚು ಪ್ರಸ್ತಾಪಿಸುತ್ತಾರೆ.

ದುರದೃಷ್ಟವಶಾತ್ 75 ವರ್ಷಗಳ ಸ್ವತಂತ್ರ ಆಳ್ವಿಕೆಯ ನಂತರವೂ ಜನಪ್ರತಿನಿಧಿಗಳ ನಡುವೆ, ಸರಕಾರಗಳಲ್ಲಿ, ವಿರೋಧ ಪಕ್ಷಗಳಲ್ಲಿ ಈ ಸಾಂವಿಧಾನಿಕ ನೈತಿಕತೆಯ ಕೊರತೆ ಢಾಳಾಗಿ ಕಾಣುತ್ತಿದೆ. ಇದರ ಪ್ರತಿಬಿಂಬವನ್ನೇ ವಿಶಾಲ ಸಮಾಜದಲ್ಲೂ ಕಾಣುತ್ತಿದ್ದೇವೆ. ರಾಜ್ಯ ಹೈಕೋರ್ಟ್ ನ್ಯಾಯಪೀಠ ಹೇಳಿದಂತೆ ಪುಂಡುಗಂದಾಯ ವಿಧಿಸುವುದೇ ಆದರೆ, ಪ್ರಸಕ್ತ ಸಂದರ್ಭದಲ್ಲಿ ವಿಶ್ವಬ್ಯಾಂಕ್ ಸಾಲ ತೀರಿಸುವಷ್ಟು ಮೊತ್ತವನ್ನು ಸಂಗ್ರಹಿಸಬಹುದು. ಏಕೆಂದರೆ ಇಡೀ ಸಮಾಜವೇ ಅತ್ಯಾಚಾರಗಳಿಗೆ, ಅಮಾನುಷತೆಗೆ, ಕ್ರೌರ್ಯಕ್ಕೆ, ದೌರ್ಜನ್ಯಗಳಿಗೆ, ತಾರತಮ್ಯಗಳಿಗೆ ಹಾಗೂ ಸಂವಿಧಾನದ ಮೌಲ್ಯಗಳಿಗೆ ಪ್ರತ್ಯಕ್ಷದರ್ಶಿಯಾಗಿಯೂ ಮೌನ ಪ್ರೇಕ್ಷಕನಂತೆ ವರ್ತಿಸುತ್ತಿದೆ. ಸಾಂವಿಧಾನಿಕ-ಸಾಮಾಜಿಕ ನೈತಿಕತೆಯನ್ನು ಶೂನ್ಯದಿಂದ ಸೃಷ್ಟಿಸಲಾಗುವುದಿಲ್ಲ. ಅದು ಸಮಾಜದಲ್ಲಿ ಅಂತರ್ಗತವಾಗಿರುವ ಮನುಜ ಪ್ರಜ್ಞೆಯನ್ನು ಪುನರುಜ್ಜೀವನಗೊಳಿಸುವ ಮೂಲಕ ಸಾಧಿಸಬಹುದು. ನಾಗರಿಕತೆಯನ್ನು ಮುಂದೊಯ್ಯುವ ಪ್ರತಿಯೊಂದು ಮನಸ್ಸೂ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವುದು ವರ್ತಮಾನದ ತುರ್ತು.

Writer - ವಾರ್ತಾಭಾರತಿ

contributor

Editor - jafar sadik

contributor

Byline - ನಾ. ದಿವಾಕರ

contributor

Similar News