ಮುರುಗನ್ ಬಾಳು ಬೆಳಗಿದ ಬಡವರ ಬಾದಾಮಿ

Update: 2024-10-21 07:37 GMT
Editor : jafar sadik | Byline : ಸತ್ಯಾ ಕೆ.

ಮಂಗಳೂರು: ಪಶ್ಚಿಮ ಬಂಗಾಲದ ನೆಲಕಡಲೆ ಬೀಜ ಮಾರಾಟಗಾರ ಬೂಬನ್ ಬದ್ಯಾಕರ್ ಎಂಬವರ ‘ಕಚಾ ಬಾದಾಮ್’ ಹಾಡಿನ ವೀಡಿಯೊ ವೈರಲ್ ಆಗಿ ದಿನ ಬೆಳಗಾಗುವುದರೊಳಗೆ ಪ್ರಖ್ಯಾತ ಆಗಿದ್ದು ಹಳೆಯ ವಿಚಾರ. ಇತ್ತ ಮಂಗಳೂರಿನ ಮುರುಗನ್ ಎಂಬವರು ‘ಬಡವರ ಬಾದಾಮಿ’ ಎಂದೇ ಹೇಳಲಾಗುವ ಈ ಹಸಿ ನೆಲಕಡಲೆಯನ್ನು ಬಾಣಲೆಯಲ್ಲಿ ಹುರಿದು ಮಾರಾಟ ಮಾಡುತ್ತಾ ಸ್ವಂತ ಮನೆ ಕಟ್ಟಿಸಿದ್ದಲ್ಲದೆ, ತನ್ನ ಮೂರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವಲ್ಲಿ ಸಫಲರಾಗಿದ್ದಾರೆ.

ಮಂಗಳೂರಿನ ಅಂಬೇಡ್ಕರ್ ಸರ್ಕಲ್(ಜ್ಯೋತಿ) ಸಮೀಪದ ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜು ಬಳಿಯ ಬಸ್ ನಿಲ್ದಾಣದ ಬಳಿ ಸಂಜೆ 3ರ ನಂತರ ‘ಠಣ ಠಣ’ ಸದ್ದು ಮಾಡುತ್ತಾ ನೆಲಕಡಲೆಯನ್ನು ಹುರಿದು ಬಿಸಿಬಿಸಿಯಾಗಿಯೇ ಕಡಲೆಪ್ರಿಯರಿಗೆ ಮಾರಾಟ ಮಾಡುವ ಮುರುಗನ್ ಕಳೆದ 33 ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.

ಮಂಗಳೂರಿನ ಕಾರ್‌ಸ್ಟ್ರೀಟ್ ಬಳಿ ಕುಟುಂಬ ಸಹಿತ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮುರುಗನ್ ತಮ್ಮ ಈ ವ್ಯಾಪಾರದ ಮೂಲಕ ಆರ್ಥಿಕವಾಗಿ ಸದೃಢಗೊಳ್ಳುತ್ತಾ ಉಳ್ಳಾಲದಲ್ಲಿ ಸ್ವಂತ ಮನೆಯನ್ನು ಕಟ್ಟಿಕೊಂಡಿದ್ದಾರೆ. ಮನೆಯಲ್ಲೇ ಟೈಲರಿಂಗ್ ವೃತ್ತಿ ನಡೆಸುವ ಪತ್ನಿ ನೇಹಾ, ಮೂವರು ಗಂಡು ಮಕ್ಕಳ ಜತೆ ವಾಸವಿರುವ ಮುರುಗನ್‌ರ  ಕುಟುಂಬದ ಆಧಾರ ಸ್ತಂಭ ಈ ಬಿಸಿ ನೆಲಕಡಲೆ ವ್ಯಾಪಾರ.

ಓರ್ವ ಪುತ್ರ ಖಾಸಗಿ ಸಂಸ್ಥೆಯಲ್ಲಿ ವೃತ್ತಿಯಲ್ಲಿದ್ದರೆ, ಇನ್ನೋರ್ವ ಪುತ್ರ ಎಂ.ಕಾಂ ಪದವಿ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿದ್ದಾರೆ. ಇನ್ನೋರ್ವ ಪುತ್ರ ಅಂತಿಮ ವರ್ಷದ ಇಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿದ್ದಾರೆ.

‘ಕಳೆದ 33 ವರ್ಷಗಳ ನನ್ನ ಈ ನೆಲಕಡಲೆ ವ್ಯಾಪಾರವೇ ನನಗೆ ಬದುಕು ನೀಡಿದೆ ಎನ್ನಲು ಹೆಮ್ಮೆ ಇದೆ. ದಿನವೊಂದಕ್ಕೆ ಕನಿಷ್ಠ 1,000 ರೂ.ನಿಂದ 1,500 ರೂ.ವರೆಗೆ ದುಡಿಯುತ್ತೇನೆ. ಕೆಲಸ ಯಾವುದೇ ಇರಲಿ ನಿಯತ್ತು, ಪ್ರಾಮಾಣಿಕತೆ ಇದ್ದಾಗ ಜೀವನ ಸಾರ್ಥಕವಾಗುತ್ತದೆ’ ಎನ್ನುತ್ತಾರೆ ಮುರುಗನ್.

ಬೀದಿಬದಿಯಲ್ಲಿ ತಾಸುಗಟ್ಟಲೆ ನಿಂತು ಉರಿಯುವ ಒಲೆಯೊಂದಿಗೆ ತಳ್ಳುಗಾಡಿಯನ್ನು ಆಚಿಂದೀಚೆಗೆ ದೂಡುತ್ತಾ ವ್ಯಾಪಾರ ನಡೆಸುವ ಮುರುಗನ್‌ರ ಬಿಸಿ ನೆಲೆಕಡಲೆ ವ್ಯಾಪಾರ ಸಂಜೆ 3 ಗಂಟೆಗೆ ಆರಂಭಗೊಂಡು ರಾತ್ರಿ 9 ಗಂಟೆಯವರೆಗೂ ಮುಂದುವರಿಯುತ್ತದೆ.

ನಗರದ ಹೃದಯ ಭಾಗವಾಗಿರುವ ಅಂಬೇಡ್ಕರ್ ಸರ್ಕಲ್ ಬಳಿ ವಿವಿಧ ರಾಜ್ಯ, ವಿವಿಧ ಜಿಲ್ಲೆ ಹಾಗೂ ನಗರದ ವಿವಿಧ ಭಾಗಗಳಿಂದ ಬಸ್, ಆಟೊ ರಿಕ್ಷಾ, ಟ್ಯಾಕ್ಸಿ ಅಥವಾ ಸ್ವಂತ ವಾಹನಗಳ ಮೂಲಕ ಪ್ರತಿನಿತ್ಯ ಹಲವಾರು ವ್ಯವಹಾರಗಳಿಗಾಗಿ ಬಂದು ಹೋಗುತ್ತಿರುತ್ತಾರೆ. ಮುರುಗನ್‌ರ ಹುರಿದ ನೆಲಕಡಲೆಯ ಪರಿಮಳದ ಜತೆಗೆ ಠಣ ಠಣ ಸದ್ದು ಆ ಭಾಗದಲ್ಲಿ ಸುಳಿದಾಡುವವರನ್ನು ಆಕರ್ಷಿತ್ತದೆ. ಸದ್ಯ ಕನಿಷ್ಠ 20 ರೂ.ಗಳ ನೆಲಕಡಲೆ ಪೊಟ್ಟಣದಿಂದ ಅರ್ಧ ಕೆಜಿವರೆಗೂ ಮುರುಗನ್ ಮಾರಾಟ ಮಾಡುತ್ತಾರೆ.

‘ನನಗೀಗ 48 ವರ್ಷ. ನನ್ನ 13ನೇ ವಯಸ್ಸಿನಲ್ಲಿ ಆರಂಭದಲ್ಲಿ ಕೆಲ ಸಮಯ ಉಳ್ಳಾಲ ಬೀಚ್ ಬಳಿ ಕಡಲೆ ವ್ಯಾಪಾರ ನಡೆಸಿದೆ. ಬಳಿಕ ಇಲ್ಲಿಗೆ ಶಿಫ್ಟ್ ಆಗಿ ಇಲ್ಲೇ ತಳ್ಳುಗಾಡಿಯಲ್ಲಿ ಮಾರಾಟ ಮಾಡುತ್ತಿದ್ದೇನೆ. ದಿನವೊಂದಕ್ಕೆ 5 ಕೆಜಿಯಿಂದ 10 ಕೆಜಿಯ ವರೆಗೆ ಹುರಿದ ನೆಲಕಡಲೆ ವ್ಯಾಪಾರವಾಗುತ್ತದೆ. ಇಲ್ಲಿ ವ್ಯಾಪಾರ ಆರಂಭಿಸುವಾಗ ಕನಿಷ್ಠ ಕಡಲೆ ಪೊಟ್ಟಣವೊಂದರ ಬೆಲೆ 50 ಪೈಸೆ ಆಗಿತ್ತು. ಈಗ ಅದು 20 ರೂ.ಗಳಾಗಿವೆ. ಹಿಂದೆ ಕಡಲೆ ತಿನ್ನುವವರೂ ಹೆಚ್ಚಾಗಿದ್ದರು. ಈಗ ಮಕ್ಕಳು ಮಾತ್ರವಲ್ಲ, ಪೋಷಕರಿಗೂ ಕಡಲೆ ಬಗ್ಗೆ ಆಸಕ್ತಿ ಕಡಿಮೆ. ಆದರೆ ಕಡಲೆಯ ಪೋಷಕಾಂಶ ತಿಳಿದವರು, ಅದರ ರುಚಿ ಬಲ್ಲವರು ಈಗಲೂ ನಮ್ಮ ವ್ಯಾಪಾರಕ್ಕೆ ಸಾಥ್ ನೀಡುತ್ತಾರೆ’ ಎನ್ನುವುದು ಮುರುಗನ್ ಮನದಾಳದ ಮಾತು.

‘ನನ್ನ ಮಕ್ಕಳಿಗೂ ನನ್ನ ಈ ಕಾಯಕದ ಬಗ್ಗೆ ಗೌರವ ಇದೆ. ಈ ಕೆಲಸದಲ್ಲಿ ಬಹು ಹೊತ್ತು ನಿಲ್ಲಬೇಕಾಗುತ್ತದೆ. ಮಳೆಯ ಸಂದರ್ಭ ಬಿಸಿಕಡಲೆ ಕೊಳ್ಳುವವರು ಹೆಚ್ಚಾಗಿರುತ್ತಾರಾದರೂ ವ್ಯಾಪಾರ ಮಾಡುವುದು ಕಷ್ಟ. ನನಗೆ ಈವರೆಗೆ ಯಾವುದೇ ಆರೋಗ್ಯ ಸಮಸ್ಯೆ ಬಂದಿಲ್ಲವಾದರೂ ನಗರದಲ್ಲಿ ಹೆಚ್ಚುತ್ತಿರುವ ಧೂಳು, ವಾಹನಗಳ ಹೊಗೆ, ವಾಹನ ದಟ್ಟಣೆಯ ಸಮಸ್ಯೆ ವ್ಯಾಪಾರಕ್ಕೆ ಅಡ್ಡಿಯಾಗುತ್ತಿದೆ. ಆದರೂ ಅದನ್ನೆಲ್ಲಾ ಸುಧಾರಿಸಿಕೊಂಡು ಹೋಗುತ್ತಿದ್ದೇನೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದ್ದೇನೆ. ಮುಂದೆ ಕೆಲ ಸಮಯದ ಬಳಿಕ ಈ ಕಾಯಕದಿಂದ ದೂರ ಸರಿಯಲು ನಿರ್ಧರಿಸಿದ್ದೇನೆ’ ಎನ್ನುತ್ತಾರೆ ಮುರುಗನ್.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಸತ್ಯಾ ಕೆ.

contributor

Similar News