ಕುತೂಹಲ ಕೆರಳಿಸಿರುವ ಸಮ್ಮೇಳನಾಧ್ಯಕ್ಷತೆ

ನಿಜಕ್ಕೂ ಕನ್ನಡ ಸಾಹಿತ್ಯ ಪರಿಷತ್ತಿನ ಮತ್ತು ಸಾಹಿತ್ಯ ಸಮ್ಮೇಳನದ ದಿಕ್ಕು ದೆಸೆಯ ಬಗ್ಗೆ ಗಂಭೀರವಾಗಿ ಚಿಂತಿಸುವವರು ಒಗ್ಗೂಡಿ ಸಾಹಿತ್ಯ ಪರಿಷತ್ತನ್ನು ಅರ್ಥಪೂರ್ಣವಾಗಿ ಪುನರ್‌ರೂಪಿಸುವ ದಿಕ್ಕಿನಲ್ಲಿ ಕ್ರಿಯಾಶೀಲವಾಗ ಬೇಕು. ಹಾಗೆಯೇ ಸಮ್ಮೇಳನಗಳ ಈಗಿನ ಜಾತ್ರೆಯ ಸ್ವರೂಪವನ್ನು ಬದಲಾಯಿಸಿ ನಿಜವಾದ ಅರ್ಥದಲ್ಲಿ ಸಾಹಿತ್ಯ ಸಮ್ಮೇಳನ ಮತ್ತು ಗೋಷ್ಠಿಗಳು ನಡೆಯುವ ದಿಕ್ಕಿನಲ್ಲಿ ಚಿಂತಿಸಬೇಕು ಮತ್ತು ಚರ್ಚಿಸಬೇಕು.

Update: 2024-11-12 04:46 GMT

ಮಂಡ್ಯದಲ್ಲಿ ನಡೆಯಲಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಯಾರಿಗೆ ಸಿಕ್ಕಬೇಕು? ಸಾಹಿತಿಗಳಿಗೋ, ಸಾಹಿತ್ಯೇತರರಿಗೋ? ರಾಜಕಾರಣಿಗಳಿಗೋ, ಮಠಾಧೀಶರಿಗೋ, ಕನ್ನಡ ಹೋರಾಟಗಾರರಿಗೋ? ಬೇರೆ ಬೇರೆ ಕ್ಷೇತ್ರಗಳಲ್ಲಿ ಮಹತ್ತರವಾದ ಸಾಧನೆಯನ್ನು ಮಾಡಿರುವ ಕರ್ನಾಟಕದ ಮಹಾನ್ ಸಾಧಕರಿಗೋ?

ಚುನಾವಣೆಯ ಕಾರಣ ಜಾರಿಯಲ್ಲಿರುವ ನೀತಿ ಸಂಹಿತೆ ಮುಗಿಯುವುದನ್ನೇ ನೋಡುತ್ತಿರುವವರು ಮತ್ತೆ ಈ ಚರ್ಚೆಗೆ ಧುಮುಕಲಿದ್ದಾರೆ. ಈ ಚರ್ಚೆಯಲ್ಲಿ ಭಾಗವಹಿಸದೆ, ಒಳಗೇ ತಮ್ಮ ದಾಳವನ್ನು ಉರುಳಿಸಿ, ಸಮ್ಮೇಳನದ ಗೌರವದ ಸ್ಥಾನವನ್ನು ತಮಗೆ ಬೇಕಾದವರಿಗೆ ಕೊಡಿಸುವ ಒಳ ರಾಜಕೀಯದಲ್ಲಿ ತೊಡಗಿರುವ ‘ಮೌನಿ’ಗಳೂ ಇದ್ದಾರೆ. ಅಧಿಕಾರ ಸೂತ್ರವೂ ಈ ಮೌನಿಗಳ ಕೈಯಲ್ಲೇ ಇರುವುದರಿಂದ ಅವರ ಆಟವೇ ಗೆಲ್ಲುವ ಸಾಧ್ಯತೆಯೂ ಇದೆ.

ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಘನತೆಗಳನ್ನು ಎತ್ತರಿಸಿರುವ ಯಾರು ಬೇಕಾದರೂ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬಹುದು ಎಂಬ ವಾದವನ್ನೂ ಮುನ್ನೊಡ್ಡಬಹುದು. ಇದಕ್ಕೆ ಹೆಚ್ಚಿನ ತಕರಾರೂ ಇರಲಾರದು. ಆದರೆ ಇವತ್ತು ಭಾಷೆ, ಸಾಹಿತ್ಯ, ಸಂಸ್ಕೃತಿ ಎಂಬ ವಿಚಾರಗಳನ್ನು ತೀರ ಸರಳವಾಗಿ ಗ್ರಹಿಸಿ ತಾವೇ ಮುಂಚೂಣಿಯಲ್ಲಿರುವುದಾಗಿ, ತಮ್ಮ ಕೊಡುಗೆಯೇ ಮಹಾನ್ ಕೊಡುಗೆ ಎಂದು ಬಿಂಬಿಸುವವರ ಸಂಖ್ಯೆಯೇ ಹೆಚ್ಚಾಗಿದೆ. ಇಂತಹವರಿಗೆ ನಮ್ಮ ಮಾಧ್ಯಮಗಳಲ್ಲಿ ಹೆಚ್ಚಿನ ಪ್ರಚಾರವೂ ಸಿಕ್ಕುತ್ತಿದೆ. ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ನಿಜಕ್ಕೂ ಚಿಂತಿಸುವವರು, ಹಿನ್ನೆಲೆಯಲ್ಲಿಯೇ ಇದ್ದುಕೊಂಡು ತಮ್ಮತಮ್ಮ ಕೆಲಸಗಳನ್ನು ಅರ್ಥಪೂರ್ಣವಾಗಿ, ಸದ್ದುಗದ್ದಲವಿಲ್ಲದೆ ಮಾಡುವವರು ಮಾಧ್ಯಮಗಳ ಕಣ್ಣಿನಿಂದಲೂ ದೂರವೇ ಉಳಿದಿರುತ್ತಾರೆ. ಅಂತಹವರನ್ನು ಗುರುತಿಸಿ ಈ ಗೌರವವನ್ನು ಕೊಡಬೇಕು.

ಕನ್ನಡ ಸಾಹಿತ್ಯ ಪರಂಪರೆಯನ್ನು ಆಳವಾಗಿ ತಿಳಿದು, ಅದರ ಜೊತೆ ಸಂವಾದ ನಡೆಸುತ್ತ, ತಮ್ಮ ಕೃತಿಗಳ ಮೂಲಕ ಕನ್ನಡ ಸಾಹಿತ್ಯದ ಎತ್ತರ ಮತ್ತು ವಿಸ್ತಾರಗಳನ್ನು ಬದಲು ಮಾಡುತ್ತಿರುವವರು ಬಹುಮಟ್ಟಿಗೆ ಸಾಹಿತಿಗಳೇ. ಸೃಜನಶೀಲ ಸಾಹಿತಿಗಳು, ವಿದ್ವಾಂಸರು, ಭಾಷಾತಜ್ಞರು, ವಿಮರ್ಶಕರು- ಹೀಗೆ ಇಂಥವರನ್ನೆಲ್ಲ ಸಾಹಿತಿಗಳ ಪಟ್ಟಿ ಒಳಗೊಳ್ಳುತ್ತದೆ. ಇಂಥವರ ಕೊಡುಗೆಯನ್ನು ಸರಿಯಾಗಿ ಅರಿಯುವ, ಗೌರವಿಸುವ ಕೆಲಸವನ್ನು ಒಂದು ನಾಡಿನ ಜನ ಮಾಡಬೇಕು. ಸಾಹಿತ್ಯ ಸಮ್ಮೇಳನಗಳು ಈ ಅವಕಾಶವನ್ನು ಜನತೆಗೆ ಕಲ್ಪಿಸಿಕೊಡುತ್ತವೆ.

ಇದನ್ನು ಅರ್ಥಮಾಡಿಕೊಳ್ಳದೆ ಸಾಹಿತ್ಯೇತರರನ್ನು ಮುನ್ನೆಲೆಗೆ ತಂದು ವಾದಿಸುವುದರ ಹಿಂದೆ ಬೇರೆಯೇ ಆದ ಉದ್ದೇಶಗಳಿರುವುದು ನಿಚ್ಚಳವಾಗಿ ಕಾಣಿಸುತ್ತದೆ. ವಿಜ್ಞಾನ ಕ್ಷೇತ್ರದಲ್ಲಿ ಮಹಾನ್ ಸಾಧನೆ ಮಾಡಿದ್ದರೆ ಅಂಥವರನ್ನು ಗೌರವಿಸಲು ಬೇರೆಯೇ ವೇದಿಕೆಗಳಿವೆ. ಹಾಗೆಯೇ ಬೇರೆಬೇರೆ ಕ್ಷೇತ್ರದಲ್ಲಿ ಕೊಡುಗೆ ನೀಡಿದವರನ್ನು ಗುರುತಿಸಿ ಗೌರವಿಸಲು ಬೇರೆಯೇ ವೇದಿಕೆಗಳಿವೆ; ಪ್ರಶಸ್ತಿಗಳೂ ಇವೆ. ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರಗಳನ್ನು ಉಪೇಕ್ಷಿಸಬೇಕೆಂದೇನೂ ಇಲ್ಲ. ಅವರ ಸಾಧನೆಯನ್ನು ಮೆಚ್ಚಲು ಬೇರೆಯೇ ವೇದಿಕೆ ಮತ್ತು ಗೌರವಗಳೂ ಇವೆ.

ಸಾಹಿತ್ಯೇತರರನ್ನು ಸಮ್ಮೇಳನದ ಅಧ್ಯಕ್ಷರಾಗಿ ಮಾಡಬೇಕು ಎನ್ನುವುದರ ಹಿಂದೆ ಇರುವುದು ಒಂದು ಚಿಂತನೆಯಲ್ಲ, ಹುನ್ನಾರ ಎಂಬುದೂ ನಮಗೆ ತಿಳಿಯಬೇಕು. ಸಾಹಿತಿಗಳಿಗೆ ಈ ಗೌರವ ಸಿಗಬೇಕು ಎಂದು ಸಾಹಿತಿಗಳು ಮತ್ತು ಸಾಹಿತ್ಯಪ್ರಿಯರು ಎಷ್ಟೇ ದೊಡ್ಡದಾಗಿ ಧ್ವನಿ ಎತ್ತಿದರೂ, ಅಂತಿಮವಾಗಿ ಸಮ್ಮೇಳನಾಧ್ಯಕ್ಷರ ಆಯ್ಕೆ ಮಾಡುವವರು ಯಾರು? ಕನ್ನಡ ಸಾಹಿತ್ಯ ಪರಿಷತ್ತಿನ ಅಧಿಕಾರವನ್ನು ಹಿಡಿದಿರುವವರು ಮತ್ತು ಸಮ್ಮೇಳನ ನಡೆಯುವ ಜಾಗದ ಸ್ಥಳೀಯ ಸಮಿತಿಯ ಮುಖಂಡರು. ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಇದ್ದಾರೆ. ಪರಿಷತ್ತಿನ ಜಿಲ್ಲಾ ಘಟಕದ ಪದಾಧಿಕಾರಿಗಳಿಗೂ ಈ ಅಧಿಕಾರ ಇರುತ್ತದೆ.

ಕಳೆದ ಮೂರ್ನಾಲ್ಕು ದಶಕಗಳಲ್ಲಿ ಪರಿಷತ್ತನ್ನು ಬೇಕಾಬಿಟ್ಟಿಯಾಗಿ ಎಳೆದಾಡಲಾಗಿದೆ. ಸಾಹಿತ್ಯ ರಾಜಕಾರಣದಲ್ಲಿ ತೊಡಗಿರುವ ಶಕ್ತಿಗಳು ಪರಿಷತ್ತನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಮಾಡಬಹುದಾದ ಎಲ್ಲ ಬಗೆಯ ರಾಜಕಾರಣವನ್ನು ಮಾಡುತ್ತಲೇ ಬಂದಿವೆ. ಪರಿಷತ್ತಿನ ಬೈಲಾವನ್ನು ತಮಗೆ ಬೇಕಾದಂತೆ ತಿದ್ದಿ, ತಮ್ಮ ಅಧಿಕಾರಕ್ಕೆ ಬಲಬರುವಂತೆ ನೋಡಿಕೊಳ್ಳಲಾಗಿದೆ. ಪರಿಷತ್ತಿನ ಸದಸ್ಯರೇ ಪರಿಷತ್ತಿನ ಅಧ್ಯಕ್ಷರನ್ನು ಆಯ್ಕೆಮಾಡುವ ಅಧಿಕಾರವನ್ನು ಪಡೆದಿದ್ದಾರೆಂದು ಸಾಹಿತ್ಯ, ಭಾಷೆ, ಸಂಸ್ಕೃತಿಯ ಬಗ್ಗೆ ಕಿಂಚಿತ್ತೂ ಅರಿವಿರದ, ಕಾಳಜಿ ಇರದ ಹಲವರನ್ನು ಸದಸ್ಯರಾಗಿ ಮಾಡಲಾಗಿದೆ. ಇದೇ ಪರಿಷತ್ತಿನ ಅಧ್ಯಕ್ಷರ ಶಕ್ತಿಕೇಂದ್ರವೂ ಆಗಿದೆ. ಈ ರಾಜಕೀಯ ಚದುರಂಗದಾಟವನ್ನು ಯಾರು ಆರಂಭಿಸಿದವರು, ಯಾರು ಮುನ್ನಡೆಸಿದವರು ಇತ್ಯಾದಿ ಪ್ರಶ್ನೆಗಳನ್ನು ಎತ್ತಿದರೆ ಪರಿಷತ್ತಿನ ಕರಾಳ ಇತಿಹಾಸ ಕಣ್ಮುಂದೆ ಕುಣಿಯುತ್ತದೆ.

ಇವತ್ತಿನ ನಮ್ಮ ರಾಜಕೀಯದಲ್ಲಿ ನಡೆಯುತ್ತಿರುವ ವೋಟಿನ ಆಟವೇ ಪರಿಷತ್ತಿನಲ್ಲಿಯೂ ನಡೆದಿದೆ, ನಡೆಯುತ್ತಿದೆ. ಪರಿಷತ್ತಿನ ಅಧ್ಯಕ್ಷರಾಗಿ ಪರಿಷತ್ತನ್ನು ಸರಿಯಾದ ದಿಕ್ಕಿನಲ್ಲಿ ನಡೆಸಿಕೊಂಡು ಹೋಗಿರುವ ಅಧ್ಯಕ್ಷರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ತೀರ ಕಡಿಮೆ ಎನ್ನುವುದು ಪರಿಷತ್ತಿನ ಸ್ಥಿತಿಗತಿ ಹೇಳುತ್ತದೆ.

ಯಾಕೆ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಇಷ್ಟೆಲ್ಲ ಪೈಪೋಟಿ, ತೆರೆಮರೆಯ ಆಟ ನಡೆಯುತ್ತಿದೆ ಎಂಬುದನ್ನು ಗಮನಿಸಿ. ಪರಿಷತ್ತಿಗೆ ಬಿಡಿಗಾಸೂ ಸಿಗದ ದಿನಗಳಲ್ಲಿ ನಿಜವಾದ ಸಾಹಿತಿಗಳು, ಕನ್ನಡಾಭಿಮಾನಿಗಳು ಹಗಲಿರುಳು ಬಿಡಿಗಾಸಿಗಾಗಿ ಪರದಾಡಿ ಕನ್ನಡದ ಕೆಲಸವನ್ನು ಮಾಡುತ್ತಿದ್ದರು. ಹಣದ ಆಸೆಗಾಗಲಿ, ಸ್ಥಾನಮಾನದ ಗೌರವಕ್ಕಾಗಲಿ ದುಡಿಯದೆ ನಾಡು, ನುಡಿ, ಜನಸಂಸ್ಕೃತಿ ಇಂಥವೇ ಕಾಳಜಿಗಳಿಂದ ದುಡಿದು ಸೇವಾ ಮನೋಭಾವದಿಂದ ಪರಿಷತ್ತನ್ನು ಕಟ್ಟಲಾಯಿತು. ನಿಧಾನಕ್ಕೆ ಸರಕಾರದ ಹಣ ಪರಿಷತ್ತಿಗೆ ಹರಿದುಬರಲು ಆರಂಭವಾದ ಮೇಲೆ ಪರಿಷತ್ತಿನ ಸ್ವರೂಪವೇ ಬದಲಾಯಿತು. ಪರಿಷತ್ತಿನ ಅಧ್ಯಕ್ಷ ಸ್ಥಾನದ ಮೇಲೆ ಎಲ್ಲರ ಕಣ್ಣುಗಳೂ ಬಿದ್ದವು. ಇದನ್ನು ಹಿಡಿಯುವ ಮಾರ್ಗಗಳನ್ನು ಕಂಡುಕೊಂಡ ಜಾಣರ, ಚಾಣಕ್ಯರ ಪ್ರವೇಶವೂ ಆಯಿತು. ಕನ್ನಡಪರ ಚಿಂತನೆ, ಕಾಳಜಿ ಎನ್ನುವುದೆಲ್ಲ ಬರೀ ಶಬ್ದಗಳ ಮಟ್ಟದಲ್ಲೇ ಉಳಿದು, ಅಧಿಕಾರವನ್ನು ಹಿಡಿಯುವ ಅಸಲಿ ರಾಜಕಾರಣವೇ ಚಲಾವಣೆಗೆ ಬಂದುಬಿಟ್ಟಿತು. ಅದರ ಫಲವಾಗಿ ಏನೇನೋ ನಡೆಯುವ ಪರಿಸ್ಥಿತಿಯನ್ನು ಕನ್ನಡಿಗರು ನೋಡುವಂತಾಗಿದೆ.

ನಿಜಕ್ಕೂ ಕನ್ನಡ ಸಾಹಿತ್ಯ ಪರಿಷತ್ತಿನ ಮತ್ತು ಸಾಹಿತ್ಯ ಸಮ್ಮೇಳನದ ದಿಕ್ಕು ದೆಸೆಯ ಬಗ್ಗೆ ಗಂಭೀರವಾಗಿ ಚಿಂತಿಸುವವರು ಒಗ್ಗೂಡಿ ಸಾಹಿತ್ಯ ಪರಿಷತ್ತನ್ನು ಅರ್ಥಪೂರ್ಣವಾಗಿ ಪುನರ್‌ರೂಪಿಸುವ ದಿಕ್ಕಿನಲ್ಲಿ ಕ್ರಿಯಾಶೀಲವಾಗಬೇಕು. ಹಾಗೆಯೇ ಸಮ್ಮೇಳನಗಳ ಈಗಿನ ಜಾತ್ರೆಯ ಸ್ವರೂಪವನ್ನು ಬದಲಾಯಿಸಿ ನಿಜವಾದ ಅರ್ಥದಲ್ಲಿ ಸಾಹಿತ್ಯ ಸಮ್ಮೇಳನ ಮತ್ತು ಗೋಷ್ಠಿಗಳು ನಡೆಯುವ ದಿಕ್ಕಿನಲ್ಲಿ ಚಿಂತಿಸಬೇಕು ಮತ್ತು ಚರ್ಚಿಸಬೇಕು. ಪರಿಷತ್ತಿನ ಸಮ್ಮೇಳನಕ್ಕೆ ಪರ್ಯಾಯವಾಗಿ ಸಮ್ಮೇಳನವನ್ನು ನಡೆಸಲು ಮುಂದಾದ ನವ್ಯ ಸಾಹಿತಿಗಳು ತಲುಪಿದ್ದು ಧರ್ಮಸ್ಥಳವನ್ನು ಎಂಬುದು ಕೂಡಾ ನಮ್ಮ ನೆನಪಿಗೆ ಬರಬೇಕು.

ಹೆಚ್ಚಿನ ಹಣಕಾಸು ಇಲ್ಲದೆ, ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು, ಅರ್ಥಪೂರ್ಣವಾದ ಸಾಹಿತ್ಯ ಸಮ್ಮೇಳನಗಳು ಖಾಸಗಿಮಟ್ಟದಲ್ಲಿ (ಧಾರವಾಡದವರಿಂದ) ನಡೆದ, ನಡೆಯುತ್ತಿರುವ ಉದಾಹರಣೆಗಳೂ ನಮ್ಮ ಮುಂದಿವೆ.

ಈಗ ನಡೆಯುತ್ತಿರುವ ಪರಿಷತ್ತಿನ ಸಾಹಿತ್ಯ ಸಮ್ಮೇಳನಗಳನ್ನೇ ನೋಡಿ. ಪರಿಷತ್ತಿನ ಸಮ್ಮೇಳನ ಎಂದರೆ ಸಾವಿರ, ಲಕ್ಷಗಳನ್ನು ದಾಟಿ ಈಗ ಕೋಟಿ ರೂಪಾಯಿಯ ವೆಚ್ಚವನ್ನು ಕನ್ನಡಿಗರು ನೋಡುವಂತಾಗಿದೆ. ಮಂಡ್ಯ ಸಮ್ಮೇಳನಕ್ಕೆ ಅಂದಾಜು 30 ಕೋಟಿ ರೂಪಾಯಿಯನ್ನು ಕೇಳಲಾಗಿದೆ. ಈ ಹಣವನ್ನು ಸರಕಾರ ಕೊಡುತ್ತದೆ, ಕನ್ನಡದ ಅಭಿಮಾನದಿಂದಲ್ಲ, ಭಯದಿಂದ. ಅಂದರೆ ಇದು ಸಾರ್ವಜನಿಕ ಹಣ; ಜನತೆಯ ದುಡ್ಡು. ಜೊತೆಗೆ ಸ್ಥಳೀಯರು ಬಹಳ ಹೆಮ್ಮೆಯಿಂದ, ಘನತೆಯಿಂದ ಉದಾರವಾಗಿ ಕೊಡುವ ದೇಣಿಗೆಯೂ ಇರುತ್ತದೆ. ಊಟ, ವಸತಿ, ಆತಿಥ್ಯ ಇವುಗಳಲ್ಲೂ ಸ್ಥಳೀಯ ಕನ್ನಡಿಗರು ತೋರುವ ಉದಾರಿ ಗುಣವೂ ದೊಡ್ಡದಾಗಿರುತ್ತದೆ. ಇದೆಲ್ಲವನ್ನೂ ಗಣನೆಗೆ ತೆಗೆದುಕೊಂಡರೆ ಸಮ್ಮೇಳನಕ್ಕೆ ತಗುಲುವ ಖರ್ಚು ಎಷ್ಟು?

ಸಮ್ಮೇಳನ ಮುಗಿದ ಮೇಲೆ ಖರ್ಚುವೆಚ್ಚದ ಲೆಕ್ಕವನ್ನು ಕೊಡಲಾಗುತ್ತದೆಯೇ? ಇದೂ ಕೂಡಾ ಸಂಶಯಗಳಿಗೆ, ಚರ್ಚೆಗಳಿಗೆ ಎಡೆಮಾಡಿಕೊಡುವ ವಿಚಾರವಾಗಿಯೇ ಉಳಿದುಕೊಂಡು ಬಂದಿದೆ. ಎಂಥದಾದರೂ ಸರಿ, ಒಂದು ಲೆಕ್ಕವನ್ನು ಕೊಟ್ಟರೆ ಅದೇ ಪರಿಷತ್ತಿನ ದೊಡ್ಡ ಸಾಧನೆಯಾಗಿ ಕಾಣಿಸುತ್ತದೆ. ಹಣಕೊಡುವ ಸರಕಾರ ಲೆಕ್ಕ ಕೇಳುವ ವಿಚಾರದಲ್ಲಿಯೂ ಕಟ್ಟುನಿಟ್ಟಾಗಿ ನಡೆದುಕೊಳ್ಳಬೇಕು.

ಸಮ್ಮೇಳನದ ಅಧ್ಯಕ್ಷರ ಆಯ್ಕೆಯ ಬಗ್ಗೆ ನಡೆಯುವ ಸಾರ್ವಜನಿಕ ಚರ್ಚೆಯಂತೆಯೇ ಸಮ್ಮೇಳನಗಳ ವಿವಿಧ ಗೋಷ್ಠಿಗಳಲ್ಲಿ ಯಾವ ಯಾವ ವಿಷಯಗಳು ಮಂಥನವಾಗಬೇಕೆಂಬುದೂ ಸಮ್ಮೇಳನಕ್ಕಿಂತ ಮುಂಚಿತವಾಗಿಯೇ ಸಾರ್ವಜನಿಕವಾಗಿ ಚರ್ಚಿತವಾಗಬೇಕು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಹಾಗೆಯೇ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳ ವಿದ್ಯಮಾನಗಳನ್ನು, ಪಲ್ಲಟಗಳನ್ನು, ದಿಕ್ಕುತಪ್ಪಿದ ಸ್ಥಿತಿಗತಿಗಳನ್ನೂ ಮುಕ್ತವಾಗಿ ಸಂವಾದಿಸುವ ವಾತಾವರಣವೂ ಇರುವಂತೆ ಸಾಹಿತ್ಯ ಸಮ್ಮೇಳನಗಳನ್ನು ರೂಪಿಸಬೇಕು.

ಸಮ್ಮೇಳನದ ಕೊನೆಯಲ್ಲಿ ತೆಗೆದುಕೊಳ್ಳುವ ನಿರ್ಣಯಗಳಲ್ಲಿ ನಿಜಕ್ಕೂ ಜನ ಭಾಗವಹಿಸಲು ಸಾಧ್ಯವಾದ ಪರಿಸ್ಥಿತಿ ಇರುವುದರಿಂದ ಈ ನಿರ್ಣಯಗಳ ಬಗ್ಗೆ ಸಮ್ಮೇಳನಕ್ಕಿಂತ ಮೊದಲೇ ಸಾರ್ವಜನಿಕ ಚರ್ಚೆ ನಡೆಯಬೇಕು. ಇದಕ್ಕೆ ಪರಿಷತ್ತು ಅನುವು ಮಾಡಿಕೊಡಬೇಕು. ಆಸಕ್ತರೂ ಗಂಭೀರವಾಗಿ ಈ ವಿಚಾರಗಳನ್ನು ಚರ್ಚಿಸಬೇಕು. ಆಗ ಮಾತ್ರ ನಿರ್ಣಯಗಳಿಗೆ ಬಲ ಬರುತ್ತದೆ. ಸರಕಾರವೂ ಈ ನಿರ್ಣಯಗಳನ್ನು ಕಾರ್ಯರೂಪಕ್ಕೆ ತರಲು ಗಂಭೀರವಾಗಿ ಚಿಂತಿಸಬೇಕಾಗುತ್ತದೆ. ಇಲ್ಲವಾದರೆ ಎಲ್ಲವೂ ಅರ್ಥವಿಲ್ಲದ ಆಚರಣೆಯಂತೆ ನಡೆದುಹೋಗಿ ನಿರ್ಣಯಗಳು ಕಾಗದದ ಮೇಲೆ ಉಳಿಯುವ ಸಂಭವವೇ ಹೆಚ್ಚಾಗಿರುತ್ತದೆ.

ಪರಿಷತ್ತು ಈ ಎಲ್ಲ ವಿದ್ಯಮಾನಗಳಿಗೂ ಗಮನಕೊಡದೆ ತನಗೆ ಬೇಕಾದವರನ್ನು, ಆ ಸ್ಥಾನಕ್ಕೆ ಅರ್ಹರಲ್ಲದವರನ್ನು ಸಮ್ಮೇಳನಾಧ್ಯಕ್ಷರಾಗಿ ಮಾಡಿದರೆ, ನಮ್ಮ ಬರಹಗಾರರು, ಚಿಂತಕರು ಮತ್ತು ಕನ್ನಡಾಭಿಮಾನಿಗಳು ಸಮ್ಮೇಳನವನ್ನು ಬಹಿಷ್ಕರಿಸುವ ಕೆಲಸವನ್ನೂ ಮಾಡಬೇಕು. ಅದಕ್ಕೆ ತತ್ವಬದ್ಧತೆ ಮತ್ತು ದಿಟ್ಟತನ ಬೇಕಾಗುತ್ತದೆ. ಪರಿಷತ್ತು ಈ ಎಲ್ಲ ವಿದ್ಯಮಾನಗಳಿಗೂ ಗಮನಕೊಡದೆ ತನಗೆ ಬೇಕಾದವರನ್ನು, ಆ ಸ್ಥಾನಕ್ಕೆ ಅರ್ಹರಲ್ಲದವರನ್ನು ಸಮ್ಮೇಳನಾಧ್ಯಕ್ಷರಾಗಿ ಮಾಡಿದರೆ, ನಮ್ಮ ಬರಹಗಾರರು, ಚಿಂತಕರು ಮತ್ತು ಕನ್ನಡಾಭಿಮಾನಿಗಳು ಸಮ್ಮೇಳನವನ್ನು ಬಹಿಷ್ಕರಿಸುವ ಕೆಲಸವನ್ನೂ ಮಾಡಬೇಕು. ಅದಕ್ಕೆ ತತ್ವಬದ್ಧತೆ ಮತ್ತು ದಿಟ್ಟತನ ಬೇಕಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ಜಿ.ಪಿ. ಬಸವರಾಜು

contributor

Similar News