ಮಾನವೀಯ ಸಂಸ್ಕೃತಿ ರೂಪಿಸುವ ಸವಾಲನ್ನು ಸ್ವೀಕರಿಸಬೇಕಿದೆ

ವಿಜಯಪುರದಲ್ಲಿ ಇದೇ ಮಾರ್ಚ್ 30 ಮತ್ತು 31ರಂದು ಆವಿಷ್ಕಾರ ಸಾಂಸ್ಕೃತಿಕ ಸಂಘಟನೆ, AIDSO, AIDYO, AIMSS ಸಹಯೋಗದಲ್ಲಿ ನಡೆದ ‘ಸಾಂಸ್ಕೃತಿಕ ಜನೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಆಡಿದ ಮಾತುಗಳ ಅಕ್ಷರ ರೂಪ

Update: 2024-04-05 05:30 GMT
Editor : Thouheed | Byline : ರೂಪ ಹಾಸನ

ನಾವಿಂದು ವಿಷಮ ಕಾಲಘಟ್ಟಕ್ಕೆ ಬಂದು ತಲುಪಿದ್ದೇವೆ. ಒಳಗೆ ಹಾಗೂ ಹೊರಗೆ ಅಕ್ಷರಶಃ ಬೇಯುವ ಸ್ಥಿತಿ! ಒಂದೆಡೆ ಹವಾಮಾನ ವೈಪರೀತ್ಯ, ಜಾಗತಿಕ ತಾಪಮಾನದ ರಣಬಿಸಿಲು-ಧಗೆ. ಇನ್ನೊಂದೆಡೆ ಸಮಾಜದೊಳಗೆ ಅಶಾಂತಿ, ಹಿಂಸೆ, ಕ್ರೌರ್ಯ, ದ್ವೇಷದ ವ್ಯಾಪಕ ದಳ್ಳುರಿ. ಮತ್ತೊಂದೆಡೆ ಲೋಕಸಭಾ ಚುನಾವಣೆಯ ಕಾರಣಕ್ಕೆ ದೇಶಾದ್ಯಂತ ಹಬ್ಬಿರುವ- ಸರ್ವಾಧಿಕಾರ, ರಾಜಕೀಯ ಧೂರ್ತತೆಯ ಕಾವು-ಉರಿ. ಆದರೆ ಈ ತಲ್ಲಣಗಳಿಗೆ ಎದುರಾಗಿ- ‘ನಾವು ಒಂದು ಮಾನವೀಯ, ಶಾಂತಿ, ಸೌಹಾರ್ದದ ಸಮಾಜವನ್ನು ಕಟ್ಟಲು ಆಗುತ್ತಿಲ್ಲವಲ್ಲಾ’ ಎಂಬ ಪ್ರಜ್ಞಾವಂತ ಜನಸಮುದಾಯದ ಒಳ ಮನಸ್ಸಿನ ತಳಮಳ, ಒದ್ದಾಟ ಸಶಕ್ತವಾಗಿದೆಯೇ? ತೀವ್ರವಾಗಿದೆಯೇ? ಅದಿದ್ದರೆ ಮಾತ್ರ- ಆ ಪ್ರಾಮಾಣಿಕ ಬೇಯುವಿಕೆ ಖಂಡಿತವಾಗಿ ಈ ವಿಷಮ ಕಾಲಘಟ್ಟದಿಂದ ನಮ್ಮನ್ನು ಪಾರು ಮಾಡಿ, ನಿಜವಾದ ಪ್ರಜಾಪ್ರಭುತ್ವದ ಹಾದಿಗೆ, ಸಂವಿಧಾನದ ಗುರಿಗೆ ಕರೆದೊಯ್ಯುತ್ತದೆ. ಈ ತಹತಹಿಸುವಿಕೆಯೇ ಎಲ್ಲ ಅಪಸವ್ಯಗಳನ್ನು ಸರಿಪಡಿಸಲು ತನಗೆ ಬೇಕಾದ ದಾರಿಗಳನ್ನು ಹುಡುಕಿಕೊಂಡೇ ತೀರುತ್ತದೆ.

ನಮ್ಮದು ಬಹು ಭಾಷೆ, ಆಚರಣೆ, ಸಂಸ್ಕೃತಿಗಳಿರುವ- ಬಹು ದೊಡ್ಡ ದೇಶ. ಇಲ್ಲಿ ಅನೇಕ ಜಾತಿ, ಮತ, ಜನಾಂಗ, ಸಮುದಾಯಗಳ ಜನರು ತಲೆತಲಾಂತರದಿಂದ ಅವರವರ ದೇವರು, ಧರ್ಮ, ಸಂಪ್ರದಾಯ, ಆಚರಣೆಗಳನ್ನು ನಂಬಿ ಬದುಕುತ್ತಾ ಬಂದಿದ್ದಾರೆ. ಅದರಲ್ಲಿ ಕೆಲವಷ್ಟು ಅವೈಜ್ಞಾನಿಕ, ಅವೈಚಾರಿಕ, ಅಸಮಾನತೆಯ ನೆಲೆಗಳೂ ಇವೆ. ಹಿಂದೆ, ಜಾತಿ ಕಟ್ಟುಕಟ್ಟಳೆ, ಚಾತುರ್ವರ್ಣ ವ್ಯವಸ್ಥೆ ಕಾಪಾಡುವುದೇ ರಾಜನ ಕೆಲಸ ಎಂದಾಗಿತ್ತು! ಹೀಗಾಗಿಯೇ ನಮ್ಮ ಸಂಸ್ಕೃತಿಯಲ್ಲಿ ಜಾತಿಪದ್ಧತಿ, ಸತಿಪದ್ಧತಿ, ಬೆತ್ತಲೆ ಸೇವೆ, ದೇವದಾಸಿ ಪದ್ಧತಿ, ಅಸ್ಪಶ್ಯತೆ, ತಲೆ ಮೇಲೆ ಮಲ ಹೊರುವ ಪದ್ಧತಿ, ಜೀತಪದ್ಧತಿ... ಇಂತಹ ಎಷ್ಟೋ ಅನಿಷ್ಟ ಪದ್ಧತಿಗಳು ಆಚರಣೆಯಲ್ಲಿ ಇತ್ತು. ಅಂಬೇಡ್ಕರ್ ಅವರ ನೇತೃತ್ವದಲ್ಲಿ ನಾವೊಂದು ಸಂವಿಧಾನವನ್ನು ರೂಪಿಸಿಕೊಂಡ ನಂತರ, ಕಾಲಾಂತರದಲ್ಲಿ ಹಂತಹಂತವಾಗಿ ಅವನ್ನು ನಿರ್ಮೂಲನೆ ಮಾಡಿಕೊಳ್ಳುತ್ತಾ ಬಂದಿದ್ದೇವೆ. ನಾಗರಿಕವಾದ ಮಾನವೀಯ ಸಮಾಜಕ್ಕೆ ಪೂರಕವಾಗುವಂತಹ ಸಂಸ್ಕೃತಿಯನ್ನು ರೂಪಿಸಿಕೊಳ್ಳಲು ಸಾಧ್ಯವಾದಷ್ಟೂ ಪ್ರಯತ್ನಿಸುತ್ತಾ ಬಂದಿದ್ದೇವೆ. ಆ ಪ್ರಯತ್ನವನ್ನು ಇಂದಿಗೂ ಮುಂದುವರಿಸಿದ್ದೇವೆ. ಸಕಲ ಜೀವಪರವಾದಂತಹ ನಮ್ಮ ಲಿಖಿತ ಸಂವಿಧಾನ ರೂಪುಗೊಂಡು ಈಗ 75 ವರ್ಷಗಳಾಗುತ್ತಾ ಬಂದಿದೆಯಷ್ಟೇ. ಆದರೆ ಅನಾದಿಯಿಂದ ನಮ್ಮ ತಲೆ ಮತ್ತು ಮನಸ್ಸಿನೊಳಗೆ ಬೇರು ಬಿಟ್ಟಿರುವ ಅಲಿಖಿತ ಸಂವಿಧಾನ- ಬಹು ಆಳಕ್ಕೆ ಊರಿ ಬಿಟ್ಟಿದೆ! ಅದನ್ನು ಕಿತ್ತು ಎಸೆಯುವುದು ಅಷ್ಟೊಂದು ಸುಲಭವೂ ಅಲ್ಲ. ಸರಳವೂ ಅಲ್ಲ.

ಸಂಸ್ಕೃತಿ ಯಾವತ್ತೂ ನಿಂತ ನೀರಲ್ಲ. ಅದು ಹರಿಯುವ ನದಿ. ನೀರು ನಿಂತಲ್ಲೇ ನಿಂತರೆ ಅದು ಕೊಳೆಯಲು ಪ್ರಾರಂಭವಾಗುತ್ತದೆ. ಅದೇ ನಿಂತ ನೀರು ಹಿಮ್ಮುಖವಾಗಿ ಚಲಿಸಲು ಪ್ರಾರಂಭವಾದರೆ...? ದೇಶ, ಸಮಾಜ, ಅಲ್ಲಿನ ಆಗುಹೋಗು, ಅಲ್ಲಿನ ಜನರು... ಎಲ್ಲವೂ ಬದುಕಿನ ಚೈತನ್ಯವನ್ನು, ಕ್ರಿಯಾಶೀಲತೆಯನ್ನು, ರಚನಾತ್ಮಕತೆಯನ್ನು ಕಳೆದುಕೊಂಡು ಬದುಕಿದ್ದೂ ಸತ್ತಂತಹ ವಾತಾವರಣ ಸೃಷ್ಟಿಯಾಗಿಬಿಡುತ್ತದೆ. ಹೀಗಾಗದ ಹಾಗೆ ಕಾಲಕಾಲಕ್ಕೆ ನಮ್ಮ ಜನಪದರು, ವಚನಕಾರರು, ಚಿಂತಕರು, ವಿದ್ವಾಂಸರು, ಸಾಹಿತಿಗಳು, ವಿವಿಧ ಕ್ಷೇತ್ರಗಳ ಕಲಾವಿದರು, ಶಿಕ್ಷಣ ತಜ್ಞರು, ಸಮಾಜ ಸುಧಾರಕರು, ಹೋರಾಟಗಾರರು, ನ್ಯಾಯಾಧೀಶರು, ಮಾಧ್ಯಮದವರು... ಇನ್ನೂ ಅನೇಕ ಪ್ರಾತಃಸ್ಮರಣೀಯರು ಸಮಾಜವನ್ನು, ಜನಸಮುದಾಯವನ್ನು ಎಚ್ಚರಿಸುತ್ತಾ ಬರುತ್ತಿದ್ದಾರೆ. ದುಷ್ಟತೆಯನ್ನು, ಮೌಢ್ಯವನ್ನು, ಅಸಮಾನತೆಯನ್ನು ವಿಭಿನ್ನ ವಿಧಾನಗಳಿಂದ ಪ್ರಶ್ನಿಸುತ್ತಿದ್ದಾರೆ. ಅದಕ್ಕೆ ಪ್ರತಿರೋಧವನ್ನೂ ಒಡ್ಡುತ್ತಿದ್ದಾರೆ. ಸ್ಥಾಪಿತ ಹಿತಾಸಕ್ತಿಗಳು ಮತ್ತು ಈ ಮುಮ್ಮುಖ ಚಲನೆಯ ಪ್ರಗತಿಪರ ಚಿಂತನೆಯ ಪ್ರಯೋಗಶೀಲರ ನಡುವೆ ಸಂಘರ್ಷಗಳು ನಿರಂತರವಾಗಿವೆ. ಈ ಕಾರಣದಿಂದಲೇ ನಮ್ಮ ಸಂಸ್ಕೃತಿ ನಿಂತ ನೀರಾಗಿಲ್ಲ. ಸುಸಂಸ್ಕೃತಿಯ ಕೆಲ ಭಾಗವಾದರೂ ಕಾಲದಿಂದ ಕಾಲಕ್ಕೆ ಮತ್ತೆ ಮತ್ತೆ ರೂಪುಗೊಳ್ಳುತ್ತಿದೆ. ಆದ್ದರಿಂದಲೇ ಸುಸಂಸ್ಕೃತಿ ನಿರ್ಮಾಪಕರೆಲ್ಲರೂ ನಿಜವಾಗಿ ನಮ್ಮ ‘ಸಾಂಸ್ಕೃತಿಕ ನಾಯಕ/ನಾಯಕಿಯರು’. ಏಕೆಂದರೆ ಇವರೇ ಎಚ್ಚರದ ರಾಜಕೀಯ ಪ್ರಜ್ಞೆಯ, ಸಶಕ್ತ ಶಾಶ್ವತ ವಿರೋಧ ಪಕ್ಷಗಳು!

ನಮ್ಮಲ್ಲಿ ಅನಾದಿಯಿಂದ ಆಳ್ವಿಕೆ ನಡೆಸುತ್ತಾ ಬಂದ ಪುರೋಹಿತಶಾಹಿ, ಪಿತೃಪ್ರಾಧಾನ್ಯತೆಯ ವ್ಯವಸ್ಥೆಯಿಂದಾಗಿ- ದೌರ್ಜನ್ಯ, ದಬ್ಬಾಳಿಕೆಗಳೂ ಕೂಡ ಅಸಹಾಯಕರು, ದುರ್ಬಲರ ಮೇಲೆ ನಡೆಯುತ್ತಲೇ ಬಂದಿವೆ. ಹಾಗೇ ಪುರಾಣ, ಪುಣ್ಯಕತೆಗಳನ್ನೇ ಇತಿಹಾಸ ಎನ್ನುವ ಹಾಗೆ ಬಿಂಬಿಸಿ, ನಂಬಿಸುವಂತಹ ಮೋಸ ಕೂಡ ಇಲ್ಲಿ ನಡೆದಿದೆ. ಜೊತೆಗೆ ದುಷ್ಟ ರಾಜಕಾರಣ ಕೂಡ ಜಾತಿ/ಜಾತಿಗಳ ಮಧ್ಯೆ, ಧರ್ಮ/ಧರ್ಮಗಳ ಮಧ್ಯೆ ವೈಷಮ್ಯ ತಂದಿಟ್ಟು, ತನ್ನ ಬೇಳೆ ಬೇಯಿಸಿಕೊಳ್ಳುತ್ತಿದೆ. ಈ ಕಾರಣಗಳಿಂದ ಉಂಟಾದ ವಿಷಮತೆ, ಲೋಪ, ತಪ್ಪು, ದನಿ ಅಡಗಿಸುವಿಕೆಯಿಂದಾಗಿ ಹೆಣ್ಣು ಸಂಕುಲ ಮತ್ತು ಅಂಚಿಗೊತ್ತರಿಸಲ್ಪಟ್ಟ ಜಾತಿ ಸಮುದಾಯಗಳ ಸಂಸ್ಕೃತಿಯ ವಿವಿಧ ಆಯಾಮಗಳು ಮುನ್ನೆಲೆಗೇ ಬರದೆ ಹೋಗಿಬಿಟ್ಟಿವೆ. ಹೀಗಾಗಿ ನಾವು ಈಗಲಾದರೂ ಎಚ್ಚೆತ್ತು ಈ ಅನ್ಯಾಯವನ್ನು, ಕುಸಂಸ್ಕೃತಿಯನ್ನು, ಸಾಂಸ್ಕೃತಿಕ ಹೇರುವಿಕೆಯನ್ನು ತಿರುಗಿ ನಿಂತು ಪ್ರಶ್ನಿಸಬೇಕಿದೆ. ಅದಕ್ಕೆ ಪರ್ಯಾಯವಾಗಿ ನಮ್ಮ ಬಹುಸಂಸ್ಕೃತಿಯ, ಬಹುಮುಖಗಳನ್ನೂ ಒಳಗೊಂಡು ಪ್ರೀತಿ, ಕಾರುಣ್ಯ ಮತ್ತು ಮಾನವೀಯ ಅಂತಃಕರಣಭರಿತವಾದ ಸಂಸ್ಕೃತಿಯನ್ನು ಎಲ್ಲ ಆಯಾಮಗಳಲ್ಲೂ ಮರುರೂಪಿಸುತ್ತ ಹೋಗಬೇಕಿದೆ. ಅಂತಹ ಜವಾಬ್ದಾರಿ ಮತ್ತು ಸವಾಲು ಇಂದಿನ ಯುವಜನರು ಹಾಗೂ ಹೆಣ್ಣುಸಂಕುಲದ ಮೇಲಿದೆ. ನಾವು ನಮ್ಮ ಘನತೆ, ಅಂತಃಸತ್ವಕ್ಕೆ ತಕ್ಕುದಾದಂತಹ, ಸಂವಿಧಾನಬದ್ಧ ಮಾನವೀಯ ಸಂಸ್ಕೃತಿಯನ್ನು ರೂಪಿಸಿಕೊಳ್ಳುವ, ಸಾಂಸ್ಕೃತಿಕ ನಾಯಕ/ನಾಯಕಿಯರು ಆಗಬೇಕಾಗಿದೆ. ಈ ಸವಾಲನ್ನು ನಾವು ಈಗಲಾದರೂ ದಿಟ್ಟವಾಗಿ ಸ್ವೀಕರಿಸದೇ ಹೋದರೆ... ಖಂಡಿತ ಈ ದೇಶಕ್ಕೆ ಉಳಿಗಾಲವಿಲ್ಲ. ಏಕೆಂದರೆ, ಯಾವುದೇ ದೇಶದ ಯುವಜನರು ಮತ್ತು ಹೆಣ್ಣುಸಂಕುಲ ನಿಷ್ಕ್ರಿಯರಾದರೆ ಅಲ್ಲಿನ ಸಂಸ್ಕೃತಿ ಸ್ಥಗಿತವಾಗುತ್ತದೆ. ಅಲ್ಲಿ ಹೊಸದೇನೂ ಹುಟ್ಟಲು ಸಾಧ್ಯವಿಲ್ಲ.

ಕುವೆಂಪು ಅವರ ಎರಡು ಮಹತ್ವದ ಭಾಷಣಗಳಾದಂತಹ- ‘ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ’ ಹಾಗೂ ‘ವಿಚಾರ ಕ್ರಾಂತಿಗೆ ಆಹ್ವಾನ’ಕ್ಕೆ ಈಗ ಐವತ್ತು ವರ್ಷಗಳು. ಇವನ್ನು ಮತ್ತೆ ಮತ್ತೆ ಓದಿ ನಮ್ಮನ್ನು ವೈಚಾರಿಕವಾಗಿ ವಿಸ್ತರಿಸಿಕೊಳ್ಳಬೇಕಾಗಿದೆ. ಕುವೆಂಪು ಅವರು ಆ ಕಾಲಕ್ಕೇ- ‘‘ಯಾವ ಕಾಲದ ಶಾಸ್ತ್ರ ಏನು ಹೇಳಿದರೇನು? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು? ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು? ನಿನ್ನೆದೆಯ ದನಿಯೆ ಋಷಿ! ಮನು ನಿನಗೆ ನೀನು!’’ ಎನ್ನುವಂತಹ ಮಾನವೀಯ ಸಂಸ್ಕೃತಿಯ ಮಾರ್ಗವನ್ನು ನಮಗೆ ತೋರಿಸಿಕೊಟ್ಟಿದ್ದಾರೆ. ಮೌಢ್ಯ, ಅವೈಚಾರಿಕತೆ, ಶೋಷಣೆಗೆ ವಿರುದ್ಧವಾಗಿ- ‘‘ನೂರು ದೇವರನೆಲ್ಲ ನೂಕಾಚೆ ದೂರ, ಭಾರತಾಂಬೆಯೆ ದೇವಿ ನಮಗಿಂದು, ಪೂಜಿಸುವ ಬಾರ’’ ಎಂದು ನಿಜವಾದ ದೇಶಭಕ್ತಿಗೆ ಉದಾತ್ತ ತಾತ್ವಿಕ ಆಯಾಮವನ್ನು ನೀಡಿದ್ದಾರೆ. ಹಾಗೆಯೇ ‘‘ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ, ಬಡತನವ ಬುಡಮಟ್ಟ ಕೀಳಬನ್ನಿ. ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ, ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ’’ ಎಂದು ನಮ್ಮ ಸೈದ್ಧಾಂತಿಕ, ವೈಚಾರಿಕ, ತಾತ್ವಿಕ, ಸಾಮಾಜಿಕ... ಸ್ಪಷ್ಟತೆ ಹೇಗಿರಬೇಕು ಎನ್ನುವುದಕ್ಕೆ ಬಹು ದೊಡ್ಡ ಮಾದರಿಯನ್ನೇ ನೀಡಿಬಿಟ್ಟಿದ್ದಾರೆ. ಇಂತಹ ಧೀಮಂತ ಸಂಸ್ಕೃತಿಯನ್ನು ರೂಪಿಸುವ ಪ್ರಯೋಗಗಳು ಹೆಚ್ಚಾಗಬೇಕಿದೆ. ತನ್ಮೂಲಕ ನಿಜವಾದ ಜಾತ್ಯತೀತ, ಧರ್ಮನಿರಪೇಕ್ಷ, ಮನುಜಮತ, ವಿಶ್ವಪಥವನ್ನು ಅನುಸರಿಸುವಂತಹ ಎಚ್ಚರ ಪಡೆದುಕೊಳ್ಳಬೇಕಿದೆ. ಆಗ ಮಾತ್ರ ನಿಜವಾದ ಅರ್ಥದಲ್ಲಿ ಭಾರತ ನವನವೀನವಾಗಲು, ಪ್ರಕಾಶಿಸಲು, ಸಾಂಸ್ಕೃತಿಕವಾಗಿ ಘನವಾದುದನ್ನು ಸಾಧಿಸಲು ಸಾಧ್ಯವಾಗುತ್ತದೆ. ಅಂದೇ ದಾಸ್ಯದಿಂದ ನಿಜ ಬಿಡುಗಡೆ!

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರೂಪ ಹಾಸನ

contributor

Similar News