ಪ್ರಸಕ್ತ ಶಾಲಾ ಶಿಕ್ಷಣ ವ್ಯವಸ್ಥೆ ಮತ್ತು ಕಾಂಗ್ರೆಸ್‌ ನ ನ್ಯಾಯ ಪತ್ರ

Update: 2024-04-09 05:08 GMT

‌ಭಾರತ ರಾಷ್ಟ್ರೀಯ ಕಾಂಗ್ರೆಸ್ ಮೊನ್ನೆ ಬಿಡುಗಡೆ ಮಾಡಿದ ನ್ಯಾಯ ಪತ್ರ (ಚುನಾವಣಾ ಪ್ರಣಾಳಿಕೆ) ಶಾಲಾ ಶಿಕ್ಷಣದ ಬಗ್ಗೆ ಮಕ್ಕಳು, ಪಾಲಕರು ಮತ್ತು ಶಿಕ್ಷಕರಲ್ಲಿ ಹೊಸ ಭರವಸೆ ಮೂಡಿಸುತ್ತದೆ. ಕಳೆದ 10 ವರ್ಷಗಳಿಂದ ತೀವ್ರ ಬಿಕ್ಕಟ್ಟು ಹಾಗೂ ಗೊಂದಲದ ಗೂಡಾಗಿದ್ದ ಶಾಲಾ ಶಿಕ್ಷಣ ವಲಯವನ್ನು ಪುನಃ ಹಳಿಯ ಮೇಲೆ ತರುವ, ಅದರಲ್ಲೂ ಶಿಕ್ಷಣದ ಮೂಲಭೂತ ಹಕ್ಕನ್ನು ಎತ್ತಿ ಹಿಡಿಯುವ ಬಹುತೇಕ ಭರವಸೆಗಳನ್ನು ನ್ಯಾಯ ಪತ್ರ ಒಳಗೊಂಡಿದೆ. ನ್ಯಾಯ ಪತ್ರದಲ್ಲಿ ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮುಖ ಅಂಶಗಳನ್ನು ವಿಶ್ಲೇಷಿಸುವ ಆಶಯವನ್ನು ಈ ಲೇಖನ ಹೊಂದಿದೆ.

ನ್ಯಾಯ ಪತ್ರದ ಶಿಕ್ಷಣದ ವಿಭಾಗವು, ಶಿಕ್ಷಣ ಒಂದು ಸಾರ್ವಜನಿಕ ಒಳಿತು, ಪ್ರತಿಯೊಬ್ಬ ವಿದ್ಯಾರ್ಥಿಯು ಉಚಿತ ಮತ್ತು ಗುಣಮಟ್ಟದ ಹಕ್ಕನ್ನು ಹೊಂದಿದ್ದು, ರಾಜ್ಯವು ಸಾರ್ವಜನಿಕ ಸಂಪನ್ಮೂಲಗಳಿಂದ ಸಾರ್ವಜನಿಕ ಸಂಸ್ಥೆಗಳ ಮೂಲಕ ಶಿಕ್ಷಣ ಒದಗಿಸಬೇಕೆಂಬ ತಾತ್ವಿಕ ವಿಚಾರವನ್ನು ದಾಖಲಿಸುತ್ತದೆ. ನನ್ನಂತಹ ಲಕ್ಷಾಂತರ ಶಿಕ್ಷಣ ಪ್ರೇಮಿಗಳು ಕಳೆದ ನಾಲ್ಕೈದು ದಶಕಗಳಿಂದ ಬಲವಾಗಿ ಪ್ರತಿಪಾದಿಸುತ್ತಿರುವ ಮೂಲ ತತ್ವ ಇದಾಗಿದೆ. ಇದು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಬಲವರ್ಧನೆಗೆ ಬುನಾದಿ ತತ್ವವಾಗಲಿದೆ. ಈ ಹಿನ್ನೆಲೆಯಲ್ಲಿ ನ್ಯಾಯ ಪತ್ರದ ಕೆಲವೊಂದು ಪ್ರಮುಖ ಅಂಶಗಳನ್ನು ಅವಲೋಕಿಸಬೇಕಿದೆ.

ಮೊದಲಿಗೆ, ಈ ಹಿಂದೆ ಕೇಂದ್ರದಲ್ಲಿ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಸಂವಿಧಾನದ ಮೂಲಭೂತ ಹಕ್ಕಾಗಿರುವ 21ಎ ಯನ್ನು ಜಾರಿಗೊಳಿಸಲು 2009ರಲ್ಲಿ ಶಿಕ್ಷಣ ಹಕ್ಕು ಕಾಯ್ದೆಯನ್ನು (ಆರ್‌ಟಿಇ) ರೂಪಿಸಿ 2010 ರಲ್ಲಿ ಜಾರಿಗೊಳಿಸಿತ್ತು. ಅದರಂತೆ 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ಮೂಲಭೂತ ಹಕ್ಕಾಗಿದ್ದು, ಮಕ್ಕಳು ತಮ್ಮ ನೆರೆಹೊರೆಯ ಶಾಲೆಯಲ್ಲಿ ಉಚಿತ ಮತ್ತು ಕಡ್ಡಾಯವಾಗಿ ಪಡೆಯುವ ಅವಕಾಶವನ್ನು ಕಾಯ್ದೆ ಕಲ್ಪಿಸಿತ್ತು. ಕಾಯ್ದೆ ಜಾರಿಯಾದಾಗಲೇ ಸೊನ್ನೆಯಿಂದ ಆರು ಮತ್ತು 15ರಿಂದ 18 ವರ್ಷದ ಮಕ್ಕಳನ್ನು ಮೂಲಭೂತ ಹಕ್ಕಿನ ಹೊರಗೆ ಇಟ್ಟಿದ್ದರ ಬಗ್ಗೆ ಅತೀವ ಆಕ್ರೋಶ ವ್ಯಕ್ತವಾಗಿತ್ತು . ಕನಿಷ್ಠ 8ನೇ ತರಗತಿಯವರೆಗಾದರೂ ಶಿಕ್ಷಣ ಮೂಲಭೂತ ಹಕ್ಕಾಯಿತೆಂಬ ಸಮಾಧಾನದೊಂದಿಗೆ ಕಾಯ್ದೆ ಜಾರಿಗೆ ಬಂತು. ಮೊದಲ ನಾಲ್ಕು ವರ್ಷ ಕಾಯ್ದೆ ಕುಂಟುತ್ತಲೇ ಅನುಷ್ಠಾನಗೊಳ್ಳುತ್ತಿತ್ತು. 2014 ರಲ್ಲಿ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ನಂತರ, ಕಾಯ್ದೆಯನ್ನು ಉದ್ದೇಶಪೂರ್ವಕವಾಗಿಯೇ ಮೂಲೆಗುಂಪು ಮಾಡಲಾಯಿತು. 2014ರಿಂದ ಇಲ್ಲಿಯವರೆಗೆ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೊಂಡದ್ದು ಶೂನ್ಯ. ಬದಲಿಗೆ, ಕಾಯ್ದೆಯಲ್ಲಿದ್ದ ಹಲವು ಮಕ್ಕಳ ಸ್ನೇಹಿ ಅವಕಾಶಗಳನ್ನು ತಿಳಿಗೊಳಿಸಿ, ಕಾಯ್ದೆಯ ಮೂಲ ಆಶಯವನ್ನೇ ಬುಡಮೇಲು ಮಾಡಲಾಯಿತು. ಅದರ ಪರಿಣಾಮವೇ 3, 5 ಮತ್ತು 8ನೇ ತರಗತಿಗಳಿಗೆ ಮಂಡಳಿ ಪರೀಕ್ಷೆ. ನ್ಯಾಯ ಪತ್ರವು ಶಿಕ್ಷಣ ಹಕ್ಕು ಕಾಯ್ದೆಯ ಬಗ್ಗೆ ಪ್ರಸ್ತಾಪಿಸಿದ್ದು, ಅದಕ್ಕೆ ಸೂಕ್ತ ತಿದ್ದುಪಡಿ ಮೂಲಕ ಒಂದನೇ ತರಗತಿಯಿಂದ ಹನ್ನೆರಡನೇ ತರಗತಿಯವರೆಗೆ ಸಾರ್ವಜನಿಕ ಶಾಲೆಗಳಲ್ಲಿ ಶಿಕ್ಷಣವನ್ನು ಉಚಿತ ಮತ್ತು ಕಡ್ಡಾಯ ಮಾಡುವುದಾಗಿ ಪ್ರಸ್ತಾಪಿಸಿರುವುದು ಶಾಲಾ ಶಿಕ್ಷಣಕ್ಕೆ ಒಂದು ಹೊಸ ಆಯಾಮವನ್ನು ನೀಡಲಿದೆ.

ಎರಡನೆಯದಾಗಿ, ಎನ್‌ಡಿಎ ಸರಕಾರ ರೂಪಿಸಿ ಜಾರಿಗೊಳಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯು ದೇಶಾದ್ಯಂತ ವ್ಯಾಪಕ ಟೀಕೆಗೆ ಒಳಗಾಗಿತ್ತು. ಕಾರಣ, ಶಿಕ್ಷಣ ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿದ್ದು, ಈಗಿನ ಕೇಂದ್ರ ಸರಕಾರವು ಒಕ್ಕೂಟ ವ್ಯವಸ್ಥೆಯನ್ನು ಶಿಥಿಲಗೊಳಿಸುವ ರೀತಿಯಲ್ಲಿ ಶಿಕ್ಷಣದ ಕೇಂದ್ರೀಕರಣಕ್ಕೆ ಮುಂದಾಗಿ, ರಾಜ್ಯಸರಕಾರಗಳ ಮೇಲೆ ಶಿಕ್ಷಣ ನೀತಿಯನ್ನು ಬಲವಂತವಾಗಿ ಹೇರುವ ಮೂಲಕ ರಾಜ್ಯ ಸರಕಾರಗಳ ಸಂವಿಧಾನಬದ್ಧ ಹಕ್ಕುಗಳನ್ನು ದಮನ ಮಾಡಲು ಮುಂದಾಗಿತ್ತು. ಪರಿಣಾಮ, ನಮ್ಮ ರಾಜ್ಯವೂ ಸೇರಿದಂತೆ ಹಲವು ರಾಜ್ಯಗಳು ಎನ್‌ಇಪಿಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದವು.

ನ್ಯಾಯ ಪತ್ರವು, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮರುಪರಿಶೀಲಿಸಿ ರಾಜ್ಯಗಳೊಂದಿಗೆ ಸಮಾಲೋಚಿಸಿ ತಿದ್ದುಪಡಿ ಮಾಡುವುದಾಗಿ ಹೇಳಿದೆ. ಇದು ಗಣತಂತ್ರ ಹಾಗೂ ಒಕ್ಕೂಟ ವ್ಯವಸ್ಥೆಗೆ ಸಲ್ಲಬೇಕಾದ ನಿಜವಾದ ಗೌರವ. ಆದರೆ, ಕಳೆದ ನಾಲ್ಕು ವರ್ಷಗಳಲ್ಲಿ ಎನ್‌ಇಪಿಯ ಎಲ್ಲಾ ಅವಾಂತರಗಳನ್ನು ನೋಡಿದ ಮೇಲೆಯೂ, ಅದನ್ನು ಪೂರ್ಣವಾಗಿ ತಿರಸ್ಕರಿಸಲು ಕಾಂಗ್ರೆಸ್ ಹಿಂದೇಟು ಹಾಕುತ್ತಿರುವುದರ ಹಿಂದೆ ಅದರ ಮೃದು ಹಿಂದುತ್ವ ಧೋರಣೆ ಅನಾವರಣಗೊಂಡಿದೆ. ಚುನಾವಣೆಯ ನಂತರ ಕಾಂಗ್ರೆಸ್ ತನ್ನ ನಿಲುವನ್ನು ಬದಲಾಯಿಸಬಹುದೆಂಬ ವಿಶ್ವಾಸದೊಂದಿಗೆ ಇದನ್ನು ಸ್ವಾಗತಿಸಬಹುದಾಗಿದೆ.

ಮೂರನೆಯದಾಗಿ, ಶಿಕ್ಷಣ ಹಕ್ಕು ಕಾಯ್ದೆ ಎಲ್ಲಾ ಸಾರ್ವಜನಿಕ ಶಾಲೆಗಳಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕನ್ನು ನೀಡಿದ್ದರೂ, ಹಲವು ಸಾರ್ವಜನಿಕ ಶಾಲೆಗಳಲ್ಲಿ ವಿಶೇಷ ಶುಲ್ಕವನ್ನು ವಿಧಿಸುವ ಅಭ್ಯಾಸವನ್ನು ಮುಂದುವರಿಸಲಾಗುತ್ತಿದೆ. ಮುಂದುವರಿದು, ಶಿಕ್ಷಣ ಹಕ್ಕು ಕಾಯ್ದೆಯ ಪ್ರಕರಣದ 2(ಬಿ)ಯನ್ನು 13ರ ಜೊತೆ ಸೇರಿಸಿ ಓದಿದಾಗ ವಂತಿಗೆ ಹಾಗೂ ದುಬಾರಿ ಶುಲ್ಕವನ್ನು ನಿಯಂತ್ರಿಸುವ ಅವಕಾಶ ಒದಗಿಸಲಾಗಿದೆ. ಹೀಗಿದ್ದರೂ, ಹಲವು ಸಾರ್ವಜನಿಕ ಶಾಲೆಗಳಲ್ಲಿ ವಿಭಿನ್ನ ಉದ್ದೇಶಗಳ ಬಾಬತ್ತಿನ ಅಡಿಯಲ್ಲಿ ಶುಲ್ಕ ವಸೂಲಾತಿ ಮತ್ತು ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ದುಬಾರಿ ಶುಲ್ಕ ವಿಧಿಸಲಾಗುತ್ತಿದೆ.

ಈ ಬಗ್ಗೆ ಪ್ರಸ್ತಾಪಿಸಿರುವ ನ್ಯಾಯ ಪತ್ರ ಸಮಾನತೆ, ಕೈಗೆಟುಕುವಿಕೆ ಮತ್ತು ಪಾರದರ್ಶಕತೆಗಾಗಿ ಸಾರ್ವಜನಿಕ ಶಾಲೆಗಳಲ್ಲಿ ವಿಭಿನ್ನ ಉದ್ದೇಶಗಳ ಶುಲ್ಕ ಸಂಗ್ರಹ ಮತ್ತು ಖಾಸಗಿ ಅನುದಾನರಹಿತ ಶಾಲೆಗಳು ವಿಧಿಸುವ ಶಾಲಾ ಶುಲ್ಕವನ್ನು ನಿಯಂತ್ರಿಸಲು, ಶಾಲಾ ಶುಲ್ಕ ನಿಯಂತ್ರಣ ಸಮಿತಿಗಳನ್ನು ಸ್ಥಾಪಿಸಲು ರಾಜ್ಯ ಸರಕಾರಗಳನ್ನು ಪ್ರೋತ್ಸಾಹಿಸುವುದಾಗಿ ಭರವಸೆ ನೀಡಿದೆ. ಶಿಕ್ಷಣ ಸಂಪೂರ್ಣ ಖಾಸಗೀಕರಣ ವ್ಯಾಪಾರೀಕರಣವಾಗಿರುವ ಈ ಸಂದರ್ಭದಲ್ಲಿ, ನ್ಯಾಯ ಪತ್ರದ ಈ ಭರವಸೆ ಪಾಲಕರು ಮತ್ತು ಮಕ್ಕಳಲ್ಲಿ ಶಿಕ್ಷಣದ ಬಗ್ಗೆ ಹೊಸ ಭರವಸೆಯನ್ನು ಮೂಡಿಸುತ್ತದೆ.

ನಾಲ್ಕನೆಯದಾಗಿ, ಸರಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟ ಇಂದು ಅತ್ಯಂತ ಚರ್ಚೆಗೆ ಗ್ರಾಸವಾಗಿದೆ. ಕಾರಣ, ಕನಿಷ್ಠ ಶಿಕ್ಷಕರು, ಉತ್ತಮ ತರಗತಿ ಕೋಣೆ, ಶಿಕ್ಷಕರನ್ನು ಪೂರ್ಣವಾಗಿ ಕಲಿಕಾ ಪ್ರಕ್ರಿಯೆ ಬಳಸಿಕೊಳ್ಳಲಾಗದ ದಯನೀಯ ಸ್ಥಿತಿ ಹೀಗೆ ಹತ್ತು-ಹಲವು ಸಮಸ್ಯೆಗಳು ಕಲಿಕೆ ಮತ್ತು ಶಿಕ್ಷಣದ ಗುಣಮಟ್ಟವನ್ನು ಕ್ಷೀಣಿಸಿವೆ. ಇದನ್ನು ಗುರುತಿಸಿರುವ ನ್ಯಾಯ ಪತ್ರವು, ಗುಣಮಟ್ಟವು ಅತ್ಯಂತ ಪ್ರಮುಖ ಮತ್ತು ನಿರ್ಣಾಯಕ ಎಂದು ಅಭಿಪ್ರಾಯಿಸಿದೆ. ಈ ನಿಟ್ಟಿನಲ್ಲಿ, ಪ್ರತೀ ತರಗತಿ ಮತ್ತು ಪ್ರತಿಯೊಂದು ವಿಷಯಕ್ಕೆ ಸಮರ್ಪಿತ ಶಿಕ್ಷಕರನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳೊಂದಿಗೆ ಕೆಲಸ ನಿರ್ವಹಿಸುವುದಾಗಿ ಹೇಳಿದೆ. ಪ್ರತಿಯೊಂದು ತರಗತಿಗೂ ಒಂದು ಮೀಸಲಾದ ತರಗತಿ ಕೋಣೆಯನ್ನು ಒದಗಿಸುವ ಭರವಸೆ ನೀಡಿದೆ.

ಶಿಕ್ಷಣಕ್ಕೆ ಭದ್ರ ಬುನಾದಿ ಅಡಿಪಾಯ ಕಲಿಕೆ. ಸಾಕ್ಷರತೆ, ಸಂಖ್ಯಾಶಾಸ್ತ್ರ, ವಿಜ್ಞಾನ ಮತ್ತು ಸಾಂವಿಧಾನಿಕ ಮೌಲ್ಯಗಳು ಅಡಿಪಾಯ ಕಲಿಕೆಯ ಅತ್ಯವಶ್ಯಕ ಅಂಶಗಳು. ಈ ಅಂಶಗಳು ಮಕ್ಕಳ ಕಲಿಕೆಗೆ ಒಂದು ಪ್ರಮುಖ ಅವಶ್ಯಕತೆಯಾಗಿದೆ. ಕಲಿಕೆಯ ದಿಕ್ಕನ್ನು ತೀರ್ಮಾನಿಸುತ್ತವೆ. ಈ ಅಡಿಪಾಯ ಕಲಿಕೆಯ ಸರಕಾರಿ ಕಾರ್ಯಕ್ರಮಗಳನ್ನು ಮತ್ತಷ್ಟು ಹೆಚ್ಚಿಸಲು ಮತ್ತು ವೇಗವರ್ಧನಗೊಳಿಸಲು ಬಜೆಟನ್ನು ವಿಸ್ತರಿಸುವುದಾಗಿ ನ್ಯಾಯ ಪತ್ರ ಭರವಸೆ ನೀಡಿದೆ. ಶಾಲಾ ಕಾಲೇಜುಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಅಭಿವೃದ್ಧಿಪಡಿಸುವ ಸಲುವಾಗಿ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಗಣಿತ (Sಖಿಇಒ) ವಿಷಯಗಳ ಅಧ್ಯಯನಕ್ಕೆ ಒತ್ತು ನೀಡಲಾಗುವುದೆಂದು ಹೇಳಲಾಗಿದೆ. ಆದರೆ, ಶಿಕ್ಷಣಕ್ಕೆ ಜಿಡಿಪಿಯ ಶೇ. 6ರಷ್ಟನ್ನು ಮೀಸಲಿಡುವ ಬಗ್ಗೆ ನ್ಯಾಯ ಪತ್ರ ಖಚಿತವಾಗಿ ಹೇಳಬೇಕಿತ್ತು. ಸಾರ್ವಜನಿಕ ಶಿಕ್ಷಣವನ್ನು ಬಲಗೊಳಿಸುವ ಮೊದಲ ಹೆಜ್ಜೆ ಸಂಪನ್ಮೂಲ ಹೂಡಿಕೆ.

ಗುಣಮಟ್ಟದ ಮುಂದುವರಿದ ಭಾಗವಾಗಿ, ಶಿಕ್ಷಕರನ್ನು ಕಲಿಕೇತರ ಚಟುವಟಿಕೆಗಳಿಗೆ ಬಳಸುವುದನ್ನು ಪ್ರೋತ್ಸಾಹಿಸದಿರಲು ಮತ್ತು ಶಿಕ್ಷಕರ ಖಾಲಿ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ಶಿಕ್ಷಕರ ನೇಮಕಾತಿಯನ್ನು ಮಾಡದಿರಲು ತೀರ್ಮಾನಿಸಿರುವುದು ಉತ್ತಮ ನಿರ್ಧಾರ. ಈಗ ಗುತ್ತಿಗೆ ಆಧಾರದಲ್ಲಿನ ಶಿಕ್ಷಕರನ್ನು ಖಾಯಂಗೊಳಿಸುವ ಬಗ್ಗೆ ನ್ಯಾಯ ಪತ್ರ ಭರವಸೆ ನೀಡಿದೆ. ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಪ್ರಾಥಮಿಕ ಶಿಕ್ಷಣದ ಜೊತೆಗೆ ಬೆಸೆಯಲು ಮತ್ತು ಎಲ್ಲಾ ಮಕ್ಕಳು ಕನಿಷ್ಠ ಎರಡು ವರ್ಷದ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವ ಕಾರ್ಯವನ್ನು ವೇಗವರ್ಧನಗೊಳಿಸುವ ಭರವಸೆ ಮತ್ತು ಶಾಲಾ ಶಿಕ್ಷಣದ ಕಲಿಕೆಯಲ್ಲಿನ ಕೊರತೆಗಳನ್ನು ನೀಗಿಸಲು 5 ವರ್ಷಗಳ ಒಳಗಾಗಿ ಕಲಿಕೆಯ ಫಲಿತಾಂಶಗಳ ಸುಧಾರಣೆಗೆ ಮತ್ತು ಆರೋಗ್ಯಕರ ಕಲಿಕಾ ಕ್ರಮಗಳನ್ನು ಖಚಿತಪಡಿಸಿಕೊಳ್ಳಲಾಗುವುದು ಎಂಬ ಅಂಶ ಗುಣ ಮಟ್ಟವನ್ನು ಖಾತರಿಗೊಳಿಸುವ ಭರವಸೆಯಾಗಿದೆ.

ಒಟ್ಟಾರೆ, ನ್ಯಾಯ ಪತ್ರದಲ್ಲಿನ ಶಾಲಾ ಶಿಕ್ಷಣದ ಭರವಸೆಗಳು ಆಶಾದಾಯಕವಾಗಿದ್ದು, ಕಳೆದ 10 ವರ್ಷದಲ್ಲಿ ಕಳೆದು ಹೋಗಿದ್ದ ಭರವಸೆಯನ್ನು ಮತ್ತೆ ಚಿಗುರುಗೊಳಿಸಿದೆ. ದೇಶದ ಪ್ರಜ್ಞಾವಂತ ನಾಗರಿಕರು, ನ್ಯಾಯ ಪತ್ರದಲ್ಲಿನ ನ್ಯಾಯಯುತ ಭರವಸೆಗಳು ಜಾರಿಯಾಗಲು ಕಡ್ಡಾಯವಾಗಿ ಮತ್ತು ಪ್ರಜ್ಞಾಪೂರ್ವಕವಾಗಿ ಮತ ಚಲಾಯಿಸಬೇಕಿದೆ. ಕಳೆದ 10 ವರ್ಷಗಳ ದ್ವೇಷ, ಅನ್ಯಾಯ, ಸುಳ್ಳು ಮತ್ತು ಸರ್ವಾಧಿಕಾರಿ ಧೋರಣೆಯನ್ನು ಕೊನೆಗೊಳಿಸಿ, ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಶಾಂತಿಯುತ ಸಹಬಾಳ್ವೆಯನ್ನು ಮರುಸ್ಥಾಪಿಸಲು ಮತ ಚಲಾಯಿಸಬೇಕಿದೆ. ಸಂವಿಧಾನ ರಕ್ಷಣೆಯ ಮೊದಲ ಹೆಜ್ಜೆ ಸುಸಜ್ಜಿತ ಸಾರ್ವಜನಿಕ ಶಿಕ್ಷಣ ಎಂಬುದನ್ನು ಮನಗಾಣಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ನಿರಂಜನಾರಾಧ್ಯ ವಿ.ಪಿ.

contributor

Similar News