ಸಾಂಪ್ರದಾಯಿಕ ‘ಇಟ್ಟಿಗೆ’ಗೆ ಮತ್ತೆ ಕುದುರಿದ ಬೇಡಿಕೆ
ಮಂಗಳೂರು: ಉಳ್ಳಾಲ ತಾಲೂಕಿನ ಅಂಬ್ಲಮೊಗರು ಗ್ರಾಮದ ‘ಅಡು’ ಎಂಬಲ್ಲಿ ಸಾಂಪ್ರದಾಯಿಕ ‘ಇಟ್ಟಿಗೆ’ ತಯಾರಿಯು ಕೆಲವು ದಿನಗಳಿಂದ ಭರದಿಂದ ಸಾಗುತ್ತಿದ್ದು, ಕಣ್ಮರೆೆಯಾದ ‘ಇಟ್ಟಿಗೆ’ ನಿರ್ಮಾಣ, ವ್ಯಾಪಾರಕ್ಕೆ ಮರುಜೀವ ನೀಡುವ ಪ್ರಯತ್ನ ನಡೆಯುತ್ತಿದೆ.
ನೇತ್ರಾವತಿ ನದಿ ತಟದಲ್ಲಿರುವ, ತಗ್ಗು ಪ್ರದೇಶದಿಂದ ಕೂಡಿದ ಈ ‘ಅಡು’ ಎಂಬಲ್ಲಿ ಹಲವು ವರ್ಷಗಳ ಹಿಂದೆ ಕೆಲವರು ಸಾಂಪ್ರದಾಯಿಕ ಇಟ್ಟಿಗೆ ತಯಾರಿಸುತ್ತಿದ್ದರು. ಇಲ್ಲಿ ತಯಾರಿಸಲ್ಪಟ್ಟ ಇಟ್ಟಿಗೆಗಳು ದ.ಕ. ಜಿಲ್ಲೆಯಿಂದಾಚೆಗೂ ರಫ್ತಾಗುತ್ತಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಮನೆಗಳ ವಿನ್ಯಾಸದಲ್ಲಿ ಏರುಪೇರು ಆಗುತ್ತಲೇ ‘ಸಾಂಪ್ರದಾಯಿಕ ಇಟ್ಟಿಗೆ’ ಮರೆಯಾಯಿತು. ಯುವ ಪೀಳಿಗೆಯು ಈ ಇಟ್ಟಿಗೆಯ ಬದಲು ಹೊಸತನಕ್ಕೆ ಒಗ್ಗಿಕೊಂಡಿತು. ಸಹಜವಾಗಿ ಸಾಂಪ್ರದಾಯಿಕ ಇಟ್ಟಿಗೆಗೆ ಬೇಡಿಕೆಯೂ ಕುಗ್ಗಿತು. ಹಾಗಾಗಿ ಇಟ್ಟಿಗೆ ತಯಾರಿ, ಉದ್ಯಮ-ವ್ಯವಹಾರವು ಸಂಪೂರ್ಣ ಸ್ಥಗಿತಗೊಂಡಿತ್ತು.
ಕಾಲಚಕ್ರ ಉರುಳುತ್ತಲೇ ಹಳೆಯ ವಸ್ತು, ವಿನ್ಯಾಸದತ್ತ ಮತ್ತೆ ಒಲವು ವ್ಯಕ್ತವಾಗುತ್ತಿದ್ದು, ಸಾಂಪ್ರದಾಯಿಕ ಇಟ್ಟಿಗೆಯೂ ಆಕರ್ಷಿಸಲ್ಪಟ್ಟಿತ್ತು. ಅಂದರೆ ಮನೆ ಮತ್ತಿತರ ಕಟ್ಟಡಗಳ ಗೋಡೆ ನಿರ್ಮಾಣವಲ್ಲದೆ, ಆಲಂಕಾರಿಕ ವಿನ್ಯಾಸಕ್ಕೂ ಬಳಸತೊಡಗಿದರು. ಹಾಗಾಗಿ ವ್ಯಾಪಾರಿಗಳು ಮತ್ತೆ ಇಟ್ಟಿಗೆ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇಟ್ಟಿಗೆಯಲ್ಲಿ ಉತ್ತಮ ಗುಣಮಟ್ಟದ ಮತ್ತು ನಾನಾ ಪ್ರಕಾರದ ಇಟ್ಟಿಗೆಗಳಿವೆ. ಜೇಡಿಮಣ್ಣಿನಿಂದ ತಯಾರಿಸಿದ ಇಟ್ಟಿಗೆಗಳಿಂದ ಹಿಡಿದು ಅಂದವಾದ ಕಾಂಕ್ರಿಟ್ ಇಟ್ಟಿಗೆಗಳೂ ಇವೆ. ಸಾಂಪ್ರದಾಯಿಕ ಜೇಡಿಮಣ್ಣಿನ ಇಟ್ಟಿಗೆಯು ಪರಿಸರ ಸ್ನೇಹಿಯೂ ಆಗಿವೆ. ಮನೆ ಮತ್ತಿತರ ಕಟ್ಟಡಗಳ ನಿರ್ಮಾಣಕ್ಕೆ ಇದನ್ನು ಹಿಂದೆ ಯಥೇಚ್ಛವಾಗಿ ಬಳಸಿಕೊಳ್ಳಲಾಗುತ್ತಿತ್ತು.
ಸಾಮಾನ್ಯವಾಗಿ ಹಸಿಯಾದ ಜೇಡಿಮಣ್ಣಿಗೆ ಒಣಹುಲ್ಲು ಅಥವಾ ಇತರ ನಾರು ಬೆರೆಸಲಾಗುತ್ತದೆ. ಬಳಿಕ ನೀರು ಹಾಕಿ ಜೇಡಿ ಮಣ್ಣನ್ನು ಚೆನ್ನಾಗಿ ಹದ ಮಾಡಲಾಗುತ್ತದೆ. ಬೇರೆ ಬೇರೆ ಗಾತ್ರದ ಇಟ್ಟಿಗೆ ತಯಾರಿಸಿ ನಂತರ ಅವುಗಳನ್ನು ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಬಿಸಿಲಿನ ತಾಪ ಅತಿಯಾದರೆ ಇಟ್ಟಿಗೆಗಳು ಒಡೆಯುವ ಸಂಭವವೂ ಇರುತ್ತದೆ. ಹಾಗೇ ಒಡೆದ ಇಟ್ಟಿಗೆಗಳನ್ನು ಮತ್ತೆ ಜೇಡಿಮಣ್ಣಿನ ರಾಶಿಗೆ ಹಾಕಲಾಗುತ್ತದೆ. ಹದಿನೈದು ದಿನಗಳ ಬಳಿಕ ಒಣಗಿದ ಇಟ್ಟಿಗೆಗಳನ್ನು ಸುಡಲಾಗುತ್ತದೆ. ನಂತರ ಅದನ್ನು ಮನೆ, ಕಟ್ಟಡ ನಿರ್ಮಿಸಲು ಬೇರೆ ಬೇರೆ ಕಡೆಗೆ ರಫ್ತು ಮಾಡಲಾಗುತ್ತದೆ.
ಜನರ ಗಮನ ಸೆಳೆಯುತ್ತಿರುವ ಇಟ್ಟಿಗೆ ತಯಾರಿ
ಅಂಬ್ಲಮೊಗರು ಗ್ರಾಮದ ‘ಅಡು’ ಎಂಬಲ್ಲಿ ಕಳೆದ ಎರಡು ವಾರಗಳಿಂದ ಜೇಡಿಮಣ್ಣಿನಿಂದ ೮ ಇಂಚು ಉದ್ದ ಮತ್ತು ೪ ಇಂಚು ಅಗಲದ ಇಟ್ಟಿಗೆ ತಯಾರಿಸಲಾಗುತ್ತಿದೆ. ಬಾದಾಮಿ ಮೂಲದ ಇಬ್ಬರು ಮಹಿಳೆಯರು ಮತ್ತು 6 ಮಂದಿ ಪುರುಷರು ಸದ್ಯ ಕೆಲಸ ಮಾಡುತ್ತಿದ್ದಾರೆ. ಅಂದರೆ ಜಾಗ ಸಮತಟ್ಟು ಮಾಡುವುದು, ಮಣ್ಣು ಸೋಸುವುದು, ನೀರು ಬೆರೆಸುವುದು, ಕಲ್ಲು ಮತ್ತು ಕಸಕಡ್ಡಿ ಬೇರ್ಪಡಿಸುವುದು, ಹದ ಮಾಡುವುದು, ಆಯತಾಕಾರದ ‘ಅಚ್ಚಿ’ಗೆ ಹದ ಮಾಡಿದ ಮಣ್ಣನ್ನು ಹಾಕಿ ‘ಇಟ್ಟಿಗೆ’ ತಯಾರಿಸುವುದು, ಅದನ್ನು ಬಿಸಿಲಲ್ಲಿ ಒಣಗಿಸುವುದು, ಬಿಸಿಲಿನ ತಾಪಕ್ಕೆ ಇಟ್ಟಿಗೆ ಒಡೆಯದಂತೆ ಅದರ ಮೇಲೆ ಪ್ಲಾಸ್ಟಿಕ್ ಕವಚ ಹಾಕುವುದು ಹೀಗೆ ಒಂದಿಲ್ಲೊಂದು ಕೆಲಸದಲ್ಲಿ ನಿರತರಾಗಿರುವುದು ಕಂಡು ಬರುತ್ತವೆ. ಯುವ ಪೀಳಿಗೆಗೆ ಈ ‘ಇಟ್ಟಿಗೆ’ ತಯಾರಿ ಹೊಸ ಅನುಭವವಾಗಿದೆ. ಹಾಗಾಗಿ ಈ ದಾರಿಯಾಗಿ ಸಾಗುವ ಬಹುತೇಕ ಯುವಕರು ಇದನ್ನು ಕೆಲಕಾಲ ವೀಕ್ಷಿಸುವುದು, ಫೋಟೊ ತೆಗೆಯುವುದು, ವೀಡಿಯೊ ಮಾಡುವುದು ಸಾಮಾನ್ಯವಾಗಿದೆ.
ನಾನು ಕಳೆದ 25 ವರ್ಷಗಳಿಂದ ಇಟ್ಟಿಗೆ ವ್ಯಾಪಾರದಲ್ಲಿ ತೊಡಗಿಸಿಕೊಂಡವ. ಆದರೆ ಇಟ್ಟಿಗೆಗೆ ಬೇಡಿಕೆ ಕಡಿಮೆಯಾಗುತ್ತಲೇ ೯ ವರ್ಷಗಳಿಂದ ಈ ವ್ಯಾಪಾರದಿಂದ ದೂರವಿದ್ದೆ. ಈಗ ಮತ್ತೆ ಬೇಡಿಕೆ ಬರತೊಡಗಿದೆ. ಹಾಗಾಗಿ ಇಟ್ಟಿಗೆ ವ್ಯಾಪಾರದಲ್ಲಿ ತೊಡಗಿಸಿರುವೆ. ವರ್ಷದಲ್ಲಿ ನಾಲ್ಕು ತಿಂಗಳು ಅಂದರೆ ಜನವರಿಯಿಂದ ಎಪ್ರಿಲ್‌ವರೆಗೆ ಇಟ್ಟಿಗೆ ತಯಾರಿಸುತ್ತೇವೆ. ಬೇಡಿಕೆಗೆ ತಕ್ಕಂತೆ ಸದ್ಯ ಸ್ಥಳೀಯ ಹಾರ್ಡ್‌ವೇರ್ ಅಂಗಡಿಗಳಿಗೆ ಇಟ್ಟಿಗೆ ಪೂರೈಸುತ್ತಿದ್ದೇವೆ. ಇದಕ್ಕೆ ಅಸಲು ಜಾಸ್ತಿ. ಲಾಭ ಕಡಿಮೆ. ಆದರೂ ಇಟ್ಟಿಗೆ ತಯಾರಿಸುತ್ತಿದ್ದೇವೆ.
ಮುಹಮ್ಮದ್ (ಇಟ್ಟಿಗೆ ಮೋನಾಕ)
ಇಟ್ಟಿಗೆ ವ್ಯಾಪಾರಿ, ಇನೋಳಿ
ನಾನು ಬಾದಾಮಿ ಜಿಲ್ಲೆಯವ. ಹತ್ತಾರು ವರ್ಷಗಳ ಹಿಂದೆ ಇಲ್ಲಿ ಇಟ್ಟಿಗೆ ತಯಾರಿ ಕೆಲಸ ಮಾಡುತ್ತಿದ್ದೆ. ಆದರೆ ಇಟ್ಟಿಗೆಗೆ ಬೇಡಿಕೆ ಕಡಿಮೆಯಾದ ಕಾರಣ ಇಟ್ಟಿಗೆ ನಿರ್ಮಾಣದ ಕೆಲಸವೂ ಇಲ್ಲಿ ಸ್ಥಗಿತಗೊಂಡಿತ್ತು. ತುಂಬಾ ವರ್ಷದ ಬಳಿಕ ಮತ್ತೆ ಕೆಲಸಕ್ಕೆ ಬಂದಿದ್ದೇವೆ. ನಾವೆಲ್ಲರೂ ಸೇರಿಕೊಂಡು ದಿನಕ್ಕೆ 2 ಸಾವಿರದಷ್ಟು ಇಟ್ಟಿಗೆ ತಯಾರಿಸುತ್ತೇವೆ. ಊರಲ್ಲಿ ನಮಗೆ 6 ಎಕರೆ ಜಮೀನು ಇದೆ. ಮೆಕ್ಕೆಜೋಳ, ನೆಲಕಡಲೆ ಬೆಳೆಯುತ್ತೇವೆ. ಈಗ ಅಲ್ಲಿ ಕೆಲಸವಿಲ್ಲ. ಹಾಗಾಗಿ ಈ ಕಡೆ ಬಂದಿದ್ದೇವೆ. ನಾಲ್ಕೈದು ತಿಂಗಳು ಇಲ್ಲೇ ಕೆಲಸ ಮಾಡಿ ಮತ್ತೆ ಊರಿಗೆ ಹೋಗಿ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತೇವೆ. ಊಟ, ವಸತಿಯಲ್ಲದೆ ಗಂಡಸರಿಗೆ ದಿನಕ್ಕೆ ೮೦೦ ರೂ. ಮತ್ತು ಮಹಿಳೆಯರಿಗೆ 500 ರೂ. ಕೂಲಿ ಕೊಡುತ್ತಾರೆ.
-ಬೀಮ್ಸ್,
ಮುತ್ತಲಿಗೇರಿ ಗ್ರಾಮ, ಬಾದಾಮಿ ಜಿಲ್ಲೆ