ಗೊಂದಲದ ಗೂಡಾದ ʼಜಲಾಭಿಮುಖʼ ಯೋಜನೆ
ಮಂಗಳೂರು, ಜ.8: ಕೇಂದ್ರ ಸರಕಾರದ ಮಹತ್ವದ ಯೋಜನೆಗಳಲ್ಲಿ ಒಂದಾಗಿರುವ ‘ಸ್ಮಾರ್ಟ್ ಸಿಟಿ’ ಯೋಜನೆ ಮಂಗಳೂರಿಗೆ ದೊರಕುವಲ್ಲಿ ಮಹತ್ವದ ಅಂಶವಾಗಿರುವ ‘ಜಲಾಭಿಮುಖ ಯೋಜನೆ(ವಾಟರ್ ಫ್ರಂಟ್)’ ಇನ್ನೂ ಗೊಂದಲದ ಗೂಡಾಗಿ ಮುಂದುವರಿದಿದೆ. ಈ ವರ್ಷದ ಜೂನ್‌ನಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಮುಕ್ತಾಯಗೊಳ್ಳಬೇಕಾಗಿದೆ. ಆದರೆ ಯೋಜನೆಯ ಪ್ರಮುಖ ಭಾಗವಾಗಿರುವ ಜಲಾಭಿಮುಖ ಯೋಜನೆ ಇನ್ನೂ ಆರಂಭಿಕ ಹಂತದಲ್ಲೇ ಇದೆ.
ಮೀನುಗಾರಿಕೆ ಹಾಗೂ ನದಿ ಹಾಗೂ ಸಮುದ್ರವನ್ನು ಒಳಗೊಂಡು ಪ್ರವಾಸೋದ್ಯಮಕ್ಕೆ ಒತ್ತು ನೀಡುವುದು ವಾಟರ್ ಫ್ರಂಟ್ ಯೋಜನೆಯ ಪ್ರಮುಖ ಉದ್ದೇಶ. ಇದಕ್ಕಾಗಿ ನೇತ್ರಾವತಿ- ಫಲ್ಗುಣಿ ನದಿ ತೀರ, ತಣ್ಣೀರುಬಾವಿ ಕಡಲತೀರ ಸಹಿತ ವಿವಿಧ ಕಡೆ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ನೇತ್ರಾವತಿ ತಟದಲ್ಲಿ ವಾಕಿಂಗ್, ಸೈಕ್ಲಿಂಗ್ ಟ್ರ್ಯಾಕ್‌ಗಳಿಂದ ಕೂಡಿದ 70 ಕೋಟಿ ರೂ. ವೆಚ್ಚದ ವಾಟರ್‌ಫ್ರಂಟ್ ಯೋಜನೆ ಬಗ್ಗೆ ಈಗಾಗಲೇ ಸಾಕಷ್ಟು ಆಕ್ಷೇಪ, ವಿರೋಧ ಕೇಳಿಬರುತ್ತಿದೆ. ಇನ್ನೂ ಕುತೂಹಲಕಾರಿ ಸಂಗತಿಯೆಂದರೆ, ನೇತ್ರಾವತಿ ನದಿ ತಟದಲ್ಲಿ ಈ ಯೋಜನೆ ಕಾರ್ಯಗತಗೊಳಿಸಲು ಅಗತ್ಯವಿರುವ ಖಾಸಗಿ ಜಾಗವನ್ನು ಟಿಡಿಆರ್ (ಟ್ರಾನ್ಸ್‌ಫರೆಬಲ್ ಡೆವಲಪ್‌ಮೆಂಟ್ ರೈಟ್ಸ್) ಅಥವಾ ಭೂಸ್ವಾಧೀನ ಮೂಲಕ ಪಡೆಯುವ ಕಾರ್ಯ ಇನ್ನಷ್ಟೇ ಆರಂಭವಾಗಬೇಕಿದೆ.
ಪಾಲಿಕೆ ವ್ಯಾಪ್ತಿಯ ನೇತ್ರಾವತಿ ಸೇತುವೆಯಿಂದ ಬೋಳಾರ ಸೀ ಫೇಸ್‌ವರೆಗೆ ಸ್ಮಾರ್ಟ್‌ಸಿಟಿ ಲಿಮಿಟೆಡ್ ವತಿಯಿಂದ ಕೈಗೆತ್ತಿಕೊಳ್ಳಲಾಗಿರುವ ಜಲಾಭಿಮುಖ ಯೋಜನೆ ಕಾಮಗಾರಿ ಸ್ಥಳವನ್ನು ಒಳಪಡುವ ಖಾಸಗಿ ಜಾಗಗಳು, ಕಾಮಗಾರಿಯ ಪ್ರದೇಶಕ್ಕೆ ರಸ್ತೆಗಳ ಜಾಗ ಹಾಗೂ ವಾಹನ ನಿಲುಗಡೆಗೆ ಖಾಸಗಿ ಜಾಗದ ಅಗತ್ಯವಿದೆ. ಈ ಸಂಬಂಧ ಕ್ರಮ ವಹಿಸಬೇಕೆಂದು ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರು ಪಾಲಿಕೆ ಆಯುಕ್ತರಿಗೆ ಪತ್ರದಲ್ಲಿ ಮನವಿ ಮಾಡಿದ್ದಾರೆ. ಈ ಕುರಿತಂತೆ ಡಿಸೆಂಬರ್ 29ರಂದು ನಡೆದ ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಕಾರ್ಯಸೂಚಿ ಮಂಡನೆಯಾಗಿದೆ.
ನದಿ ಕಿನಾರೆ ಅಭಿವೃದ್ಧಿಗೆ ಜಾಗ ಬಿಡುವ ಖಾಸಗಿ ಭೂಮಾಲಕರಿಗೆ ಪರಿಹಾರವಾಗಿ ಕೆಟಿಸಿಪಿ ಕಾಯ್ದೆ 1961ರ ಕಲಂ 14 (ಬಿ)ಯ ಅವಕಾಶ ದಂತೆ ಟಿಡಿಆರ್/ ಭೂಸ್ವಾಧೀನ ಮಾಡಲು ನಿರ್ಣಯಿಸಲಾಗಿದೆ.
ನೇತ್ರಾವತಿ ನದಿ ತೀರದ ಜನರಿಗೆ ಯಾವುದೇ ಮುನ್ಸೂಚನೆ ನೀಡದೆ, ಸ್ಥಳೀಯರ ಗಮನಕ್ಕೆ ಬಾರದೆ ಏಕಾಏಕಿಯಾಗಿ ಈ ಜಲಾಭಿಮುಖ ಯೋಜನೆಗಾಗಿ ಅವೈಜ್ಞಾನಿಕವಾಗಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂಬ ಆರೋಪ ಈಗಾಗಲೇ ದಟ್ಟವಾಗಿದೆ. ಪಾಲಿಕೆ ಸಾಮಾನ್ಯ ಸಭೆಯಲ್ಲಿಯೂ ಈ ಯೋಜನೆ ಬಗ್ಗೆ ಸಾಕಷ್ಟು ಚರ್ಚೆ ವಾದ ವಿವಾದಗಳು ನಡೆದಿವೆ. ಮಾತ್ರವಲ್ಲದೆ ನಗರಾಭಿವೃದ್ಧಿ ಸಚಿವ ಸುರೇಶ ಬೈರತಿ ಅವರ ಅಧ್ಯಕ್ಷತೆಯಲ್ಲಿ ಕಳೆದ ನವೆಂಬರ್‌ನಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿಯೂ ಈ ಬಗ್ಗೆ ಚರ್ಚೆಯಾಗಿತ್ತು. 2.1 ಕಿ.ಮೀ. ರಸ್ತೆ ಅಭಿವೃದ್ಧಿಯ ಯೋಜನೆಗೆ 70 ಕೋಟಿ ಯಾಕೆ ಎಂಬ ಪ್ರಶ್ನೆ ಎದ್ದಿತ್ತು. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರೂ ಕೆಲ ಸಮಯದ ಹಿಂದೆ ಸ್ಥಳ ಪರಿಶೀಲನೆ ಮಾಡಿ ‘ಕೆಲವೆಡೆ ಕಾಮಗಾರಿಗೆ ಸಮಸ್ಯೆ ಉಂಟಾಗಿವೆ. ಟೆಂಡರ್ ಅಂತಿಮಗೊಳ್ಳುವ ಮೊದಲೇ ಇದನ್ನು ಬಗೆಹರಿಸಬೇಕಿತ್ತು. ಜಮೀನು ಬಳಕೆದಾರರೊಂದಿಗೆ ಮಾತುಕತೆ ನಡೆಸಿ, ಯೋಜನೆ ನಡೆಸಿ’ ಎಂದಿದ್ದರು. ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್ ಹಾಗೂ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಸ್ಥಳಕ್ಕೆ ಭೇಟಿ ನೀಡಿ ಯೋಜನೆಗೆ ವೇಗ ನೀಡುವಂತೆ ಸೂಚಿಸಿದ್ದಾರೆ.
ಸ್ಮಾರ್ಟ್ ಸಿಟಿ ಅಧಿಕಾರಿಗಳು ಹೇಳುವಂತೆ ಇಲ್ಲಿ ರಸ್ತೆ ಅಭಿವೃದ್ಧಿ ಮಾತ್ರವಲ್ಲದೆ ಆ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ಜಪ್ಪು ಫೆರ್ರಿ ಅಭಿವೃದ್ಧಿ, ಟೈಲ್ ಫ್ಯಾಕ್ಟರಿ ಪ್ರದೇಶವನ್ನು ಮ್ಯೂಸಿಯಂ ಆಗಿ ಅಭಿವೃದ್ಧಿ ಪಡಿಸುವ ಕಾರ್ಯ ನಡೆಯಲಿದೆ. ನೇತ್ರಾವತಿ ಸೇತುವೆ ಬಳಿಯಿಂದ ಬೋಳಾರ ಫೆರಿವರೆಗೆ ನದಿ ಬದಿ ವ್ಯಾಪ್ತಿಯಲ್ಲಿ ಬಯೋ ಡೈವರ್ಸಿಟಿ ಪಾರ್ಕ್, ಸೈಕಲ್ ಟ್ರ್ಯಾಕ್, ಕುಳಿತುಕೊಳ್ಳಲು ವ್ಯವಸ್ಥೆ, ವಿವಿಧ ಸೇವೆ ನೀಡುವ ಕಿಯೋಸ್ಕ್‌ಗಳು, ಮಕ್ಕಳ ಆಟದ ಸಣ್ಣ ಪಾರ್ಕ್ ಸೇರಿದಂತೆ ಇನ್ನೂ ಕೆಲವು ವಿಶೇಷತೆಗಳ ಅನುಷ್ಠಾನ ಯೋಜನೆಯಲ್ಲಿದೆ. ಸದ್ಯ ಈ ಜಾಗದಲ್ಲಿ ಮಣ್ಣು ಸಮತಟ್ಟು ಮಾಡುವ ಕೆಲಸವಷ್ಟೆ ಆಗಿದೆ. ಈ ಅಭಿವೃದ್ಧಿ ನಡೆಯುವ ಪ್ರದೇಶದುದ್ದಕ್ಕೂ ಇರುವ ರಸ್ತೆಗಳನ್ನು ಅಗಲೀಕರಿಸಿಕೊಂಡು ಸುಮಾರು ಏಳು ಕಡೆಗಳಿಂದ ಸಂಪರ್ಕ ಕಲ್ಪಿಸುವ ವ್ಯವಸ್ಥೆಯೂ ಈ ಯೋಜನೆಯಡಿ ಬರಲಿದೆ. ಯೋಜನೆ ಪೂರ್ಣಗೊಂಡಾಗ ಇದೊಂದು ಹಾರದಂತೆ ಹಾಗೂ ನಡು ನಡುವೆ ಪೆಂಡೆಂಟ್ ರೀತಿಯಲ್ಲಿ ಅಗಲೀಕರಣಗೊಂಡ ರಸ್ತೆಗಳು ಕಾಣಸಿಗಲಿವೆ (ಅದಕ್ಕಾಗಿಯೇ ಈ ಅಗಲೀಕರಣಗೊಳ್ಳುವ ರಸ್ತೆಗಳಿಗೆ ಪೆಂಡೆಂಟ್ ರಸ್ತೆ ಎನ್ನಲಾಗುತ್ತಿದೆ). ಆದರೆ ಯೋಜನೆ ಆರಂಭಗೊಂಡಿದ್ದರೂ ಈ ಯೋಜನೆಗೆ ಬಹುಮುಖ್ಯವಾದ ರಸ್ತೆಗಳ ಅಗಲೀಕರಣ ಅಥವಾ ಅಭಿವೃದ್ಧಿ ಹಾಗೂ ಪಾರ್ಕಿಂಗ್‌ಗೆ ಅಗತ್ಯವಾದ ಭೂಮಿ ಸ್ವಾಧೀನ ಪ್ರಕ್ರಿಯೆ ಮಾತ್ರ ಇನ್ನಷ್ಟೇ ಆರಂಭವಾಗಬೇಕಿದೆ.
ಆರಂಭದಲ್ಲಿ ಸಿಆರ್‌ಝಡ್ ಅನುಮತಿ ಸಹಿತ ಇತರ ಕಾರಣಗಳಿಂದ ನನೆಗುದಿಗೆ ಬಿದ್ದಿದ್ದ ಈ ಪ್ರಮುಖ ಯೋಜನೆ ಯಾವ ರೂಪ ಪಡೆಯಲಿದೆ ಎಂಬುದೂ ಕುತೂಹಲ ಹುಟ್ಟಿಸಿದೆ.