ಸೋರುವ ಸೂರಿನಲ್ಲಿ ಸೋಲಿಗರ ಜೀವನ
ಚಾಮರಾಜನಗರ : ಒಂದೆಡೆ ಹೊಸ ಮನೆ ನಿರ್ಮಾಣಗೊಳ್ಳುವವರೆಗೂ ಜೋಪಡಿ, ಶಿಥಿಲ ಗೊಂಡಿರುವ ಮನೆಯಲ್ಲಿ ಬದುಕಬೇಕಾದ ಪರಿಸ್ಥಿತಿ, ಮತ್ತೊಂದೆಡೆ ಮಳೆಯಿಂದಾಗಿ ಸೋರುವ ಸೂರಿನಲ್ಲಿ ಒಂದೊಂದು ದಿನ ಕಳೆಯುವುದೂ ಕಷ್ಟಕರವಾದ ಸ್ಥಿತಿ. ಇದು ಚಾಮರಾಜನಗರ ತಾಲೂಕಿನ ಹೆಬ್ಬಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿತ್ತಲಗುಡ್ಡ ಗ್ರಾಮದ ಸೋಲಿಗರ ಕಾಲನಿಯ ದುಸ್ಥಿತಿಯಾಗಿದೆ.
ಹಿತ್ತಲಗುಡ್ಡ ಗ್ರಾಮದಲ್ಲಿ ಸುಮಾರು 35 ಕುಟುಂಬಗಳು, 70ಕ್ಕೂ ಹೆಚ್ಚು ಜನರು ವಾಸ ಮಾಡುತ್ತಿದ್ದಾರೆ. ಇವರಲ್ಲಿ ಹಲವರ ಮನೆಗಳು ಕುಸಿದು ಬೀಳುವ ಸ್ಥಿತಿಯಲ್ಲಿವೆ. ಈ ಹಿನ್ನೆಲೆಯಲ್ಲಿ ಕೆಲವು ತಿಂಗಳ ಹಿಂದೆ ಗ್ರಾಮ ಪಂಚಾಯತ್‌ವತಿಯಿಂದ 2022-23ನೇ ಸಾಲಿನ ಅಂಬೇಡ್ಕರ್ ನಿವಾಸ ಯೋಜನೆಯಡಿ 14 ಮನೆಗಳ ನಿರ್ಮಾಣಕ್ಕೆ ಅವಕಾಶ ಸಿಕ್ಕಿತ್ತು.
ಇದರಲ್ಲಿ 10 ಜನ ಫಲಾನುಭವಿಗಳನ್ನು ಆಯ್ಕೆ ಮಾಡಿ ಮನೆಗಳನ್ನು ಕಟ್ಟಿಸಿಕೊಡಲಾಗುತ್ತಿದೆ. ನಿವೇಶನದಲ್ಲಿದ್ದ ಹಳೆಯ ಮನೆಯನ್ನು ಕೆಡವಲಾಗಿದೆ. ಹೊಸ ಮನೆ ಕಟ್ಟುವ ಕಾರ್ಯ ಪೂರ್ಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸೂರು ಇಲ್ಲದವರು ನಿರ್ಮಾಣ ಹಂತದ ಮನೆಗಳ ಮುಂದೆ ತೆಂಗಿನ ಗರಿಯಿಂದ ಜೋಪಡಿ ಹಾಕಿಕೊಂಡಿದ್ದಾರೆ. ಅಕ್ಕ ಪಕ್ಕದ ಸಂಬಂಧಿಕರ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಹೊಸ ಮನೆ ಪೂರ್ಣಗೊಳ್ಳುವವರೆಗೂ ಸೋಲಿಗರಿಗೆ ವಸತಿ ಸೌಲಭ್ಯವಿಲ್ಲದೇ ಈಗ ಮಳೆ ಸುರಿಯುತ್ತಿರುವುದರಿಂದ ಇವರ ಬದುಕು ಇನ್ನಷ್ಟು ಕಷ್ಟ ಕರವಾಗಿದೆ.
ಹೀನಾಯ ಸ್ಥಿತಿಯ ವಾಸ: ಹಿತ್ತಲ ಗುಡ್ಡದ ಕೆಂಪಮ್ಮ ಮತ್ತು ಯೋಗೇಶ್‌ಗೆ ವಸತಿ ಯೋಜನೆಯಡಿ ಹೊಸದಾಗಿ ಮನೆ ನಿರ್ಮಾಣ ಮಾಡಿಕೊಡಲಾಗುತ್ತಿದೆ. ಆದರೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ವಾಸಕ್ಕಾಗಿ ನಿರ್ಮಾಣ ಹಂತದಲ್ಲಿರುವ ಮನೆಯ ಮುಂದೆಯೇ ತೆಂಗಿನ ಗರಿಯಿಂದ ಕಟ್ಟಿಕೊಂಡಿರುವ ಗುಡಿಸಲಿನಲ್ಲಿ ಕೆಂಪಮ್ಮ, ಯೋಗೇಶ್ ಇದ್ದಾರೆ. ಈಗ ಮಳೆ ಸುರಿಯುತ್ತಿದೆ. ಈ ಜೋಪಡಿಯಲ್ಲಿ ಸೋರುವ ಮಳೆ ನೀರಿನಿಂದ ತಪ್ಪಿಸಿಕೊಂಡು ಬದುಕಬೇಕು. ಎಷ್ಟು ಬೇಗ ಮನೆ ನಿರ್ಮಾಣವಾಗುವುದೋ ಅಷ್ಟು ಬೇಗ ಇವರ ಈ ಹೀನಾಯ ಸ್ಥಿತಿಯ ವಾಸ ತಪ್ಪಲಿದೆ.
ಪತ್ನಿ ನಿಧನ, ಪತಿ-ಪುತ್ರನಿಗಿಲ್ಲ ಆಸರೆ: ಹಿತ್ತಲಗುಡ್ಡದ ರಾಜಮ್ಮ ನಿಧನದಿಂದಾಗಿ ಈಕೆಯ ಪತಿ ಮತ್ತು ಮಗ ಇಂದಿಗೂ ವಸತಿ ವಂಚಿತರಾಗಿದ್ದಾರೆ. ಈ ಹಿಂದೆ ರಾಜಮ್ಮ ಹೆಸರು ಮನೆ ನಿರ್ಮಾಣಕ್ಕೆ ಆಯ್ಕೆಯಾಗಿತ್ತು. ಹಳೇ ಮನೆ ಕೆಡವಿ ಹೊಸ ಮನೆ ಕಟ್ಟಲು ಅಡಿಪಾಯ ಹಾಕಲಾಗಿತ್ತು. ಅದಷ್ಟರಲ್ಲಿ ರಾಜಮ್ಮ ಅನಾರೋಗ್ಯದಿಂದ ನಿಧನರಾದರು. ಮನೆ ನಿರ್ಮಾಣ ಕೆಲಸ ಶುರುವಾಗಲೇ ಇಲ್ಲ. ಇದ್ದ ಮನೆಯನ್ನೂ ಕೆಡವಿ ಅಲ್ಲಿ ಹಾಕಿದ್ದ ಅಡಿಪಾಯ ನೋಡಿಕೊಂಡೇ ಪತಿ ಸಿದ್ದೇಗೌಡ, ಪುತ್ರ ಮನು ಇದ್ದಾರೆ. ಹೀಗಾಗಿ ತಂದೆ, ಮಗ ಇಬ್ಬರೂ ಶಿಥಿಲಗೊಂಡಿರುವ ಮನೆಯಲ್ಲೇ ವಾಸ ಮಾಡುತ್ತಿದ್ದಾರೆ.
ನಾನು ಈ ಹಿಂದೆ ಮುರಿದು ಕುಸಿದು ಬೀಳುವ ಸ್ಥಿತಿಯಲ್ಲಿದ್ದ ಮನೆಯಲ್ಲಿದ್ದೆ. ಈಗ ಹೊಸದಾಗಿ ಮನೆ ನಿರ್ಮಾಣ ಮಾಡಿಕೊಡುತ್ತಿದ್ದಾರೆ. ಆ ಮನೆಯ ನಿರ್ಮಾಣ ಪೂರ್ಣಗೊಳ್ಳುವವರಗೆ ಅಲ್ಲಿಯ ವರೆಗೂ ಮತ್ತೆ ಶಿಥಿಲಗೊಂಡಿರುವ ಮನೆಯಲ್ಲಿ ಇರಬೇಕಾಗಿದೆ. ಬೇಗ ಮನೆಯ ಕಾಮಗಾರಿ ಪೂರ್ಣಗೊಳಿಸಿಕೊಟ್ಟರೆ ಅನುಕೂಲವಾಗಲಿದೆ.
-ಜಡೆಮಾದಮ್ಮ, ಹಿತ್ತಲಗುಡ್ಡ ನಿವಾಸಿ
ಮನೆಗಳನ್ನು ಬೇಗ ನಿರ್ಮಾಣ ಮಾಡಲು ಹೆಬ್ಬಸೂರು ಗ್ರಾಮ ಪಂಚಾಯತ್‌ನಿಂದ ಬಿಲ್‌ಗಳನ್ನು ಪಾವತಿ ಮಾಡಿದ್ದೇವೆ. ಫಲಾನುಭವಿ ಜಯಶ್ರೀ ಹೆಸರು ಬದಲಾ ವಣಿಯಾಗಿರುವುದನ್ನು ಸರಿಪಡಿಸಿಕೊಡುತ್ತೇವೆ. ರಾಜಮ್ಮ ಮರಣ ಪ್ರಮಾಣ ಪತ್ರದೊಂದಿಗೆ ಬಿಲ್ ಮಾಡಲು ಪ್ರಸ್ತಾವ ಸಲ್ಲಿಸಿದ್ದೇವೆ.
-ರಂಜಿತಾ, ಪಿಡಿಒ, ಹೆಬ್ಬಸೂರು ಗ್ರಾಪಂ, ಚಾಮರಾಜನಗರ