ನಳನಳಿಸಬೇಕಾಗಿದ್ದಉದ್ಯಾನವನ ಹಾಳುಕೊಂಪೆ

Update: 2024-01-15 07:08 GMT

ಪುತ್ತೂರು: ನಗರಗಳ ಸೌಂದರ್ಯದಲ್ಲಿ ಉದ್ಯಾನವನಗಳ ಪಾತ್ರ ಮಹತ್ತರವಾದುದು. ಈ ನಿಟ್ಟಿನಲ್ಲಿ ಪುತ್ತೂರು ನಗರಸಭೆಯ ವತಿಯಿಂದ ನಗರದಲ್ಲಿ ಹಲವು ಉದ್ಯಾನವನಗಳನ್ನು ನಿರ್ಮಿಸ ಲಾಗಿದೆ. ಆದರೆ ಅವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವ ಕಾರಣ ಈ ಉದ್ಯಾನವನಗಳು ಹಾಳು ಕೊಂಪೆಯಾಗಿ ಪರಿವರ್ತನೆಗೊಂಡಿದೆ. ಇದಕ್ಕೆ ಉತ್ತಮ ನಿದರ್ಶನ ನಗರದ ನೆಲ್ಲಿಕಟ್ಟೆ ಉದ್ಯಾನವನ.

ಪುತ್ತೂರಿನ ಹೃದಯಭಾಗದಲ್ಲಿರುವ ನೆಲ್ಲಿಕಟ್ಟೆಯಲ್ಲಿ 10 ವರ್ಷಗಳ ಹಿಂದೆ ನಗರಸಭೆ ವತಿಯಿಂದ ಉದ್ಯಾನವನ ನಿರ್ಮಿಸಲಾಗಿತ್ತು. ಈ ಉದ್ಯಾನವನಕ್ಕಾಗಿ ಖಾಸಗಿ ವ್ಯಕ್ತಿಯೊಬ್ಬರು ಸ್ಥಳದಾನ ಮಾಡಿದ್ದರು. ಇದರ ಅಭಿವೃದ್ಧಿಗಾಗಿ ಪ್ರತೀ ವರ್ಷ ನಗರಸಭೆ 3ರಿಂದ 4 ಲಕ್ಷ ರೂ. ವೆಚ್ಚ ಮಾಡುತ್ತಿದೆ. ಆದರೆ ಪ್ರಸಕ್ತ ಇಲ್ಲಿ ಗಿಡಗಂಟಿಗಳು ಬೆಳೆದು ಜನರು ಕಾಲಿಡಲು ಭಯಪಡುವ ಸ್ಥಿತಿಯಿದೆ. ವಿಹಾರ ಬಯಸುವವರಿಗೆ ಈ ಉದ್ಯಾನವನ ಊಟಕ್ಕಿಲ್ಲದ ಉಪ್ಪಿನಕಾಯಿ ಎಂಬಂತಾಗಿದೆ. ಈ ಪಾರ್ಕ್‌ನ್ನು ದುರಸ್ತಿಗೊಳಿಸಿ ಬಳಕೆ ಯೋಗ್ಯವನ್ನಾಗಿ ಮಾಡಬೇಕು ಎಂಬ ಆಗ್ರಹ ಈ ಭಾಗದ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ಈ ಹಿಂದೆ ನಗರಸಭೆಯ ಸದಸ್ಯರಾಗಿದ್ದ ದಿ.ಶಕ್ತಿಸಿನ್ಹಾ ನೇತೃತ್ವದಲ್ಲಿ ನಗರಸಭೆಯ ಅನುದಾನ ದಲ್ಲಿ ಈ ಉದ್ಯಾನವನ ನಿರ್ಮಾಣಗೊಂಡಿತ್ತು. ಆಗ ಸುಂದರವಾದ ಗಿಡಗಳು, ಹೂವುಗಳಿಂದ ನಳನಳಿಸುತ್ತಿದ್ದ ಈ ಉದ್ಯಾನವನ ಜನರಿಗೆ ವಿಶ್ರಾಂತಿಯ ಜೊತೆಗೆ ಮುದ ನೀಡುತ್ತಿತ್ತು. ಈಗ ಮುಳ್ಳುಗಂಟಿ, ಪೊದೆಗಳಿಂದ ಆವೃತವಾಗಿದೆ.

ಪುತ್ತೂರಿನ ಮಹಾಲಿಂಗೇಶ್ವರ ದೇವಳ ಹಾಗೂ ರೈಲ್ವೆ ನಿಲ್ದಾಣದ ರಸ್ತೆಯ ಪಕ್ಕದಲ್ಲೇ ಇರುವ ಈ ಉದ್ಯಾನವನ ಸದ್ಯ ಹಾಳುಬಿದ್ದು ಹೋಗಿದೆ. ಉದ್ಯಾನವನಕ್ಕೆ ಹಾಕಲಾದ ಬಣ್ಣ ಬಣ್ಣದ ಇಂಟರ್ ಲಾಕ್ ಬಣ್ಣ ಕಳೆದುಕೊಂಡಿವೆ. ಹೂವಿನ ಗಿಡಗಳು ಸತ್ತು ಹೋಗಿವೆ. ಹಲ್ಲುಹಾಸು ಗಳು ಒಣಗಿ ಹೋಗಿವೆ. ಸಿಮೆಂಟ್ ಬೆಂಚುಗಳು ಉಪಯೋಗಶೂನ್ಯವಾಗಿದೆ.ಸುಮಾರು ಐದು ಸೆಂಟ್ಸ್ ಜಾಗದಲ್ಲಿರುವ ಈ ಉದ್ಯಾನವನ ನಿರುಪಯುಕ್ತವಾಗಿದೆ.

ಈಗಾಗಲೇ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಲಾದ ಈ ಉದ್ಯಾನವನವನ್ನು ಪುನರ್ಜೀವನಗೊಳಿಸಬೇಕಿದೆ. ಉದ್ಯಾನವನವನ್ನು ಸ್ವಚ್ಛಗೊಳಿಸುವ ಜತೆಗೆ ಹೂವಿನ ಗಿಡಗಳನ್ನು ಅಳವಡಿಸಿ ಆಕರ್ಷಣೀಯವಾಗಿಸಿ, ಇಲ್ಲಿರುವ ಸೌಕರ್ಯಗಳನ್ನು ಹೆಚ್ಚಿಸಿ ಸಂಜೆ ಹೊತ್ತು ಒಂದಷ್ಟು ಜನ ವಿಶ್ರಾಂತಿ ಪಡೆಯುವಂತಹ ವಾತಾವರಣ ನಿರ್ಮಿಸಬೇಕಾಗಿದೆ. ಜೊತೆಗೆ ನಗರಸಭೆಯ ಕಣ್ಗಾವಲು ಬೇಕಾಗಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಕಡೆಗೆ ಚಿತ್ತ ಹರಿಸಬೇಕಾಗಿದೆ. ‘ನಮ್ಮ ಪುತ್ತೂರು, ಸ್ವಚ್ಛ ಸುಂದರ ಪುತ್ತೂರು’ ಎಂಬ ಘೋಷಣೆಗೆ ಪೂರ್ಣಾರ್ಥ ನೀಡಬೇಕಾಗಿದೆ.

ನಗರದ ಸೌಂದರೀಕರಣಕ್ಕಾಗಿ ನಗರಸಭೆಯ ವತಿಯಿಂದ ಮೊಟ್ಟೆತ್ತಡ್ಕ, ಸಾಮೆತ್ತಡ್ಕ, ನೆಲ್ಲಿಕಟ್ಟೆ ಮತ್ತು ಮಿಷನ್ ಮೂಲೆ ಎಂಬಲ್ಲಿ ಉದ್ಯಾನವನಗಳನ್ನು ನಿರ್ಮಿಸಲಾಗಿತ್ತು. ಅದಕ್ಕೆ ಅಗತ್ಯವಿರುವ ನೀರು ಸಹಿತ ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಆದರೆ ಇದೀಗ ಮೇಲ್ವಿಚಾರಣೆಯ ಕೊರತೆ ಯಿಂದಾಗಿ ಪಾರ್ಕ್‌ಗಳು ಹಾಳಾಗಿವೆ. ನಗರಸಭೆ ಈ ಬಗ್ಗೆ ಗಮನಹರಿಸಿ ಅದಕ್ಕೆ ಮರು ಕಾಯಕಲ್ಪನೀಡಬೇಕಾಗಿದೆ.

-ಮುಹಮ್ಮದ್ ಅಲಿ,

ಮಾಜಿ ಸದಸ್ಯರು ಪುತ್ತೂರು ನಗರಸಭೆ

Writer - ವಾರ್ತಾಭಾರತಿ

contributor

Editor - jafar sadik

contributor

Byline - ಸಂಶುದ್ದೀನ್ ಸಂಪ್ಯ

contributor

Similar News