ಟೇಬಲ್ ಟೆನಿಸ್‌ನ ಭರವಸೆ ಅರ್ಚನಾ ಮತ್ತು ಓಟದ ರಾಣಿ ಪೂವಮ್ಮ

Update: 2024-08-10 08:57 GMT
Editor : Ismail | Byline : ದರ್ಶನ್ ಜೈನ್

ಮಂಗಳೂರಿನ ಪದವಿನಂಗಡಿ ಮೂಲದ, ಬೆಂಗಳೂರಿನ ಪ್ರಸಿದ್ಧ ಕಣ್ಣಿನ ವೈದ್ಯರಾದ ಡಾ. ಗಿರೀಶ್ ಕಾಮತ್ ಮತ್ತು ಡಾ. ಅನುರಾಧಾ ಕಾಮತ್ ದಂಪತಿಯ ಮಗಳು ಅರ್ಚನಾ ಕಾಮತ್.

ಕೂತೂಹಲಕ್ಕೆಂದು ತನ್ನ ಸಂಬಂಧಿಕರ ಜೊತೆಗೆ ಟೇಬಲ್ ಟೆನಿಸ್ ಆಡಲು ಶುರುಮಾಡಿದ ಅರ್ಚನಾ ಅವರು ಒಂಭತ್ತು ವರ್ಷ ವಯಸ್ಸಿನ ಹುಡುಗಿಯಾಗಿದ್ದಾಗಿನಿಂದ ಗಂಭೀರವಾಗಿ ಈ ಆಟವನ್ನು ಪರಿಗಣಿಸಿದರು.

24 ವರ್ಷದ ಯುವ ಟೇಬಲ್ ಟೆನಿಸ್ ಆಟಗಾರ್ತಿ ಅರ್ಚನಾ ಕಾಮತ್, ಎರಡು ಬಾರಿಯ ನ್ಯಾಷನಲ್ ಚಾಂಪಿಯನ್. ಕಳೆದ ಡಿಸೆಂಬರ್‌ನಲ್ಲಿ ಗೋವಾದಲ್ಲಿ ನಡೆದ 37ನೇ ನ್ಯಾಷನಲ್ ಗೇಮ್ಸ್‌ನಲ್ಲಿ ಮಹಿಳೆಯರ ಟೇಬಲ್ ಟೆನಿಸ್‌ನಲ್ಲಿ (ಸಿಂಗಲ್ಸ್) ಚಿನ್ನದ ಪದಕ ವಿಜೇತೆ. ಈಗ ಭಾರತ ಟೇಬಲ್ ಟೆನಿಸ್ ತಂಡದ ಅತೀ ಪ್ರಮುಖ ಸದಸ್ಯೆ.

ಈ ಪ್ಯಾರಿಸ್ ಒಲಿಂಪಿಕ್ಸ್‌ನ ಟೇಬಲ್ ಟೆನಿಸ್ (ಮಹಿಳೆಯರ ತಂಡ) ಕ್ವಾರ್ಟರ್ ಫೈನಲ್ಸ್‌ನಲ್ಲಿ ತನಗಿಂತ ವಿಶ್ವ ರ್ಯಾಂಕಿಂಗ್‌ನಲ್ಲಿ 83 ಸ್ಥಾನ ಮೇಲಿರುವ, ರಿಯೋ ಒಲಿಂಪಿಕ್ಸ್ ಬೆಳ್ಳಿ ವಿಜೇತ ಜರ್ಮನ್ ತಂಡದ ಶಾನ್ ಕ್ಸಿಯಾನ ವಿರುದ್ಧ ಜಯಗಳಿಸಿ ಅಚ್ಚರಿ ಮೂಡಿಸಿದ್ದರು. ಇದು ಕ್ವಾರ್ಟರ್ ಫೈನಲ್ಸ್ ಹೋರಾಟದಲ್ಲಿ ಭಾರತ ತಂಡಕ್ಕೆ ಸಿಕ್ಕ ಏಕೈಕ ಜಯವಾಗಿತ್ತು.

2018ರ ಯೂತ್ ಒಲಿಂಪಿಕ್ಸ್‌ನ ಟೇಬಲ್ ಟೆನಿಸ್ ಪಂದ್ಯಾಟದಲ್ಲಿ ಸೆಮಿಫೈನಲ್ಸ್ ತಲುಪಿ, ಈ ಸಾಧನೆ ಮಾಡಿದ ಮೊದಲ ಭಾರತೀಯರಾದ ಅರ್ಚನಾ ಕಾಮತ್ ಅವರಿಗೆ ಈ ಬಾರಿ ಎರಡನೆಯ ಒಲಿಂಪಿಕ್ಸ್.

ಈ ಒಲಿಂಪಿಕ್ಸ್‌ನ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅರ್ಚನಾ ಕಾಮತ್ ಮತ್ತು ಅಕುಲಾ ಶ್ರೀಜಾ ಜೋಡಿ ರೊಮೆನಿಯಾದ ಸಮಾರಾ ಮತ್ತು ಅಡಿನಾ ಜೋಡಿಯನ್ನು ಸೋಲಿಸಿ, ಭಾರತ ತಂಡ ಕ್ವಾರ್ಟರ್ ಫೈನಲ್ಸ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಅರ್ಚನಾ ಕಾಮತ್ ಸಾಗುತ್ತಿರುವ ಹಾದಿಗೆ, ಅವರಿಗೆ ಉತ್ತಮ ಪ್ರೋತ್ಸಾಹ ದೊರತರೆ ಮುಂದಿನ ದಿನಗಳಲ್ಲಿ ಒಲಂಪಿಕ್ಸ್ ಮೆಡಲಿಸ್ಟ್ ಆದರೂ ಆಶ್ಚರ್ಯವಿಲ್ಲ.

                                            ************************

ಮಚ್ಚೆಟ್ಟಿರ ರಾಜು ಪೂವಮ್ಮ (ಎಂ.ಆರ್. ಪೂವಮ್ಮ) ಕಳೆದ ಹನ್ನೆರಡು ವರ್ಷಗಳಲ್ಲಿ ಭಾರತೀಯ ಅತ್ಲೆಟಿಕ್ಸ್ ಪ್ರಪಂಚದ ಚಿರಪರಿಚಿತ ಹೆಸರು.

ಕೊಡಗಿನ ಗೋಣಿಕೊಪ್ಪದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಪೂವಮ್ಮ, ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ, ಹೈಸ್ಕೂಲು ದಿನಗಳಿಂದ ಕ್ರೀಡೆಯಲ್ಲಿ ಆಸಕ್ತಿ ಮೂಡಿಸಿಕೊಂಡು, ಪ್ರಾರಂಭದಲ್ಲಿ 100 ಮೀ. ಆನಂತರ, 400 ಮೀ. ಓಟದಲ್ಲಿ ರಾಜ್ಯ, ರಾಷ್ಟ್ರ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದರು.

ಆರಂಭದಿಂದಲೂ ಸೂಕ್ತ ಪ್ರೋತ್ಸಾಹದ ಕೊರತೆ ಇದ್ದುದರಿಂದ ಪೂವಮ್ಮ ಅವರಿಗೆ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಗಳಿಸಲು ಸಾಧ್ಯವಾಗಲಿಲ್ಲ

ರಾಜ್ಯ ಸರಕಾರದ ಅತ್ಯಂತ ಸೀಮಿತ ಪ್ರೋತ್ಸಾಹದ ಹೊರತಾಗಿಯೂ ಮೂರು ಏಶ್ಯನ್ ಗೇಮ್ಸ್ ಚಿನ್ನದ ಪದಕ, ಒಂದು ಸೌತ್ ಏಶ್ಯನ್ ಗೇಮ್ಸ್ ಚಿನ್ನದ ಪದಕ, ಒಂದು ಏಶ್ಯನ್ ಚಾಂಪಿಯನ್‌ಶಿಪ್ ಚಿನ್ನದ ಪದಕ ಗೆದ್ದಿರುವ ಎಂ.ಆರ್. ಪೂವಮ್ಮ, ರಾಜ್ಯದ ಮತ್ತು ದೇಶದ 400 ಮೀ. ಓಟದ ಅಗ್ರಮಾನ್ಯ ಓಟಗಾರ್ತಿ.

34 ವರ್ಷದ ಪೂವಮ್ಮ ಅವರಿಗೆ ಈ ಒಲಿಂಪಿಕ್ಸ್ ಮೂರನೇ ಮತ್ತು ಬಹುಶಃ ಕಡೆಯ ಒಲಿಂಪಿಕ್ಸ್. ಈ ಒಲಿಂಪಿಕ್ಸ್‌ನಲ್ಲಿ ಭಾರತ ಮಹಿಳೆಯರ ತಂಡವು 400x4 ರಿಲೇಯಲ್ಲಿ ಕಡೆಯ ಸ್ಥಾನ ಪಡೆದು ಓಟ ಮುಗಿಸಿದ್ದು ಬೇಸರದ ಸಂಗತಿ.

ಕ್ರೀಡಾ ಪಟುಗಳಿಗೆ, ಮುಖ್ಯವಾಗಿ ಅತ್ಲೀಟ್‌ಗಳಿಗೆ ಪಾಕೆಟ್ ಮನಿ ಕೊಡುವ ರೀತಿಯಲ್ಲಿ ನೆರವಾಗುವ, ವಿಶೇಷವಾಗಿ ಕ್ರಿಕೆಟ್ ಹೊರತಾಗಿ ಉಳಿದ ಕ್ರೀಡೆಗಳಿಗೆ ಮನ್ನಣೆಯೇ ಇಲ್ಲದ ದೇಶದಲ್ಲಿ ದಶಕಗಳ ಕಾಲ 400 ಮೀ. ಓಟದ ಸ್ಪರ್ಧೆಯಲ್ಲಿ ಪದಕಗಳನ್ನು ಗೆಲ್ಲುತ್ತಾ, ಒಲಿಂಪಿಕ್ಸ್ ನಂತಹ ಪಂದ್ಯಾವಳಿಗಳಿಗೆ ಅರ್ಹತೆ ಪಡೆಯುವುದು ದೊಡ್ಡ ಸಾಧನೆಯೇ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ದರ್ಶನ್ ಜೈನ್

contributor

Similar News