ಮೀಸಲಾತಿ ಗೊಂದಲ ದುರದೃಷ್ಟಕರ
ಸಂವಿಧಾನದ ಆಜ್ಞಾಪಕ ಮೀಸಲಾತಿಗೆ ಅರ್ಹತೆ ಇರುವ ಚೌಕಟ್ಟಿನೊಳಗೆ ಬಂದ ಜಾತಿ ಸಮುದಾಯಗಳನ್ನು ಮೀಸಲಾತಿ ಪಟ್ಟಿಗೆ ಸೇರಿಸಿದ್ದು ತಪ್ಪು ಎಂದು ಹೇಳಿದರೆ ಅದು ಅಸಾಂವಿಧಾನಿಕ. ಆದ್ದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳ ಮೀಸಲಾತಿ ನೀತಿ ಬಗ್ಗೆ ಆಧಾರ ರಹಿತವಾದಂತಹ ಗೊಂದಲಗಳನ್ನು ಸೃಷ್ಟಿಮಾಡುತ್ತಿರುವುದು ದುರದೃಷ್ಟಕರ.
ನಮ್ಮ ದೇಶದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದು ಳಿದಿರುವಿಕೆಯನ್ನಾಧರಿಸಿ ಮೀಸಲಾತಿ ನೀಡಬೇಕೆಂಬುದು ವಿಶೇಷವಾದ ಸಾಂವಿಧಾನಿಕ ನಿಯಮ. ಈ ನಿಯಮ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಅನ್ವಯಿಸುತ್ತದೆ. ನಮಗೆ ಸಂವಿಧಾನ ಬಂದದ್ದು 1950ರಲ್ಲಿ. ಅದಕ್ಕಿಂತ ಮೊದಲು ಅಲ್ಪಸ್ವಲ್ಪ ಮೀಸಲಾತಿ ನಿಯಮ ಜಾರಿಯಲ್ಲಿತ್ತಾದರೂ, ಅದನ್ನು ನಮಗೆ ಸಂವಿಧಾನ ಬಂದ ನಂತರ ವ್ಯವಸ್ಥಿತವಾಗಿ ಮೀಸಲಾತಿಯನ್ನು ಜಾರಿಗೊಳಿಸುವ ನೀತಿಯನ್ನು ಸಂವಿಧಾನ ಸ್ಪಷ್ಟಪಡಿಸಿದೆ. ಹಾಗಾಗಿ ಯಾವುದೇ ಮೀಸಲಾತಿಯನ್ನು ಜಾರಿಗೊಳಿಸಿದರೂ ಸಂವಿಧಾನದ ಚೌಕಟ್ಟಿನಲ್ಲಿರಬೇಕು.
ಭಾರತದ ಸಂವಿಧಾನದಡಿಯಲ್ಲಿ ಪೀಠಿಕೆಯನ್ನು ಒಳಗೊಂಡಂತೆ ಅನುಚ್ಛೇದ 14, 15(4), 16(4), 335, 339, 340, 341, 342 ಹೀಗೆ ಅನೇಕ ಸಂದರ್ಭಗಳಲ್ಲಿ ಮೀಸಲಾತಿ ನೀತಿಗೆ ಒತ್ತು ಕೊಡಲಾಗಿದೆ. ಸಮಾಜದ ಅನೇಕ ಕ್ಷೇತ್ರಗಳಲ್ಲಿ ಚಾರಿತ್ರಿಕವಾಗಿ ಬಂದಿರುವ ಅಸಮಾನತೆಯೇ ಇದಕ್ಕೆ ಕಾರಣ ಎಂಬುದು ಸ್ಪಷ್ಟ. ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಸಂಬಂಧ ಪಟ್ಟಂತೆ ರಾಷ್ಟ್ರಪತಿಯವರು ಯಾವುದೇ ರಾಜ್ಯಕ್ಕೆ ರಾಜ್ಯಪಾಲರೊಡನೆ ಸಮಾಲೋಚನೆ ಮಾಡಿದ ತರುವಾಯ ಸಂವಿಧಾನದ ಉದ್ದೇಶಗಳಿಗಾಗಿ ಆ ರಾಜ್ಯದ ಅನುಸೂಚಿತ ಜಾತಿಗಳೆಂಬುದಾಗಿ ಭಾವಿಸಬೇಕಾಗಿರತಕ್ಕ ಜಾತಿಗಳು, ಮೂಲ ವಂಶಗಳು ಅಥವಾ ಬುಡಕಟ್ಟುಗಳನ್ನು ಅಥವಾ ಜಾತಿ, ಮೂಲವಂಶ ಅಥವಾ ಬುಡಕಟ್ಟುಗಳೊಳಗಿನ ಭಾಗವನ್ನು ಅಥವಾ ಗುಂಪುಗಳನ್ನು ಸಾರ್ವಜನಿಕ ಅನುಸೂಚಿಯ ಮೂಲಕ ನಿರ್ಧಿಷ್ಟಪಡಿಸಲಾಗುತ್ತದೆ. ಅದಕ್ಕನುಗುಣವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿದಂತೆ ನಮ್ಮ ಸಂವಿಧಾನದ 1950ರ ಆದೇಶದ ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ನೀಡಲಾಗುತ್ತಿದೆ. ಈ ಆದೇಶದ ಪ್ರಕಾರ ಮೀಸಲಾತಿಗೆ ಒಳಪಡುವ ಜಾತಿ ಸಮುದಾಯಗಳ ಪಟ್ಟಿ ತಯಾರಿಸಲಾಗುತ್ತದೆ. ರಾಜ್ಯದ ಯಾವುದೇ ಭಾಗಕ್ಕಾದರೂ ಯಾವುದೇ ಜಾತಿ ಮತ್ತು ಉಪಜಾತಿಯನ್ನು ಅರ್ಹತೆಗನುಗುಣವಾಗಿ ರಾಷ್ಟ್ರಪತಿಯವರು ಪರಿಶಿಷ್ಟಜಾತಿ ಅಥವಾ ಪಂಗಡವೆಂದು ಸಂವಿಧಾನದ ಅನುಚ್ಛೇದ 341 ಮತ್ತು 342ರ ಅಡಿಯಲ್ಲಿ ಘೋಷಿಸಬಹುದು. ರಾಷ್ಟ್ರಪತಿಯವರ ಘೋಷಣೆ ಅಂತಿಮ. ಈ ಪಟ್ಟಿ ಆಯಾ ರಾಜ್ಯಗಳಲ್ಲಿನ ಸ್ಥಿತಿಗತಿಗಳಿಗನುಗುಣವಾಗಿ ಪ್ರತ್ಯೇಕವಾಗಿ ಮಾಡಲಾಗಿರುತ್ತದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ವಿದ್ಯಾಭ್ಯಾಸ ಹಾಗೂ ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡುವುದರ ಜೊತೆಗೆ ಎಲ್ಲಾ ಹಂತದಲ್ಲೂ ರಾಜಕೀಯ ಮೀಸಲಾತಿಯನ್ನೂ ಸಂವಿಧಾನದ ಅಡಿಯಲ್ಲಿ ನೀಡಲಾಗಿದೆ. ಇತರ ಹಿಂದುಳಿದ ವರ್ಗಗಳ ಮೀಸಲಾತಿಗೆ ಸಂಬಂಧಪಟ್ಟಂತೆ, ಅನುಚ್ಛೇದ 15(4) ಮತ್ತು 16(4) ಅಡಿಯಲ್ಲಿ ವಿದ್ಯಾಭ್ಯಾಸ ಹಾಗೂ ಸರಕಾರಿ ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿಗೆ ಅವಕಾಶ ನೀಡಲಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಮೀಸಲಾತಿ ಇದೆ. ಆದರೆ ಇತರ ಹಿಂದುಳಿದ ವರ್ಗಗಳಿಗೆ ವಿಧಾನಸಭೆ ಮತ್ತು ಸಂಸತ್ತಿಗೆ ಸಂಬಂಧಪಟ್ಟಂತೆ ರಾಜಕೀಯ ಮೀಸಲಾತಿ ಈವರೆಗೆ ಇಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ರಾಷ್ಟ್ರಪತಿಯವರು ಅಂತಿಮಗೊಳಿಸಿದ್ದನ್ನು ಸಂಸತ್ತಿನಲ್ಲಿ ಬಿಟ್ಟರೆ ನ್ಯಾಯಾಲಯವೂ ಸೇರಿದಂತೆ ಯಾರೂ ಯಾವುದೇ ರೀತಿಯ ಬದಲಾವಣೆಗೆ ಕೈಹಾಕುವ ಹಾಗಿಲ್ಲ ಹಾಗೂ ಇನ್ನು ಹಿಂದುಳಿದ ವರ್ಗಗಳ ಸಾಮಾಜಿಕ ಶೈಕ್ಷಣಿಕ ಮೀಸಲಾತಿ ನೀಡುವ ವಿಷಯದಲ್ಲಿ, ಸರ್ವೋಚ್ಚ ನ್ಯಾಯಾಲಯದ ಸಾಂವಿಧಾನಿಕ ಪೀಠ ಇಂದ್ರಾಸಾಹ್ನಿ (ಮಂಡಲ್) ಪ್ರಕರಣದಲ್ಲಿ 16.11.1992ರಂದು ದೇಶದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲೂ ಹಿಂದುಳಿದ ವರ್ಗಗಳ ಆಯೋಗಗಳನ್ನು ಶಾಶ್ವತವಾಗಿ ರಚನೆ ಮಾಡಬೇಕು, ಅದರ ಮೂಲಕ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರನ್ನು ಗುರುತಿಸಿ ಸರಕಾರಕ್ಕೆ ವರದಿಯನ್ನು ನೀಡಬೇಕು, ಆನಂತರ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀತಿಯನ್ನು ರೂಪಿಸಬೇಕು ಎಂಬುದಾಗಿ ತೀರ್ಪು ನೀಡಿದೆ.
ಮೀಸಲಾತಿ ನೀತಿಯ ಸಾಂವಿಧಾನಿಕ ವ್ಯವಸ್ಥೆ ಹೀಗಿರುವಾಗ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿಯನ್ನು ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡಲಾಗುತ್ತಿದೆ ಎಂದು ದೇಶದ ಪ್ರಧಾನಿ ಆದವರು ಹೇಳಿದರೆ ಏನನ್ನಬೇಕು? ಅಂತಹ ಒಂದು ಉದಾಹರಣೆ ಅಥವಾ ದಾಖಲಾತಿಯಾದರೂ ಇರಬೇಕು. ಇವೆರಡೂ ಇಲ್ಲದೆ ಇದ್ದಾಗ, ಮೀಸಲಾತಿ ನೀತಿಯ ವ್ಯವಸ್ಥೆ ಬಗ್ಗೆ ಕನಿಷ್ಠ ಮಾಹಿತಿಯೂ ಇಲ್ಲ ಅಥವಾ ದುರುದ್ದೇಶದಿಂದ ಹೇಳಿದ ಮಾತು ಎಂದು ಮನವರಿಕೆಯಾಗುತ್ತದೆ. ಅಷ್ಟೇ ಅಲ್ಲ ಸಾರ್ವಜನಿಕರಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ. ಇನ್ನು ಕರ್ನಾಟಕದಲ್ಲಿ ಮುಸ್ಲಿಮ್ ಸಮುದಾಯದ ಮೀಸಲಾತಿಗೆ ಸಂಬಂಧಪಟ್ಟಂತೆ 17.9.1994ರಿಂದ ರಾಜ್ಯ ಮೀಸಲಾತಿ ಪಟ್ಟಿಯಲ್ಲಿ ಪ್ರತ್ಯೇಕ ಪ್ರವರ್ಗ (2ಬಿ)ದಲ್ಲಿ ನೀಡಲಾಗಿದೆ. ಅದು ಧರ್ಮಾಧಾರಿತವಲ್ಲ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜಾತಿ, ಸಮುದಾಯಗಳನ್ನು ಇತರ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವುದು ಕ್ರಮ. ಸರ್ವೋಚ್ಚ ನ್ಯಾಯಾಲಯ ಇಂದ್ರಾ ಸಾಹ್ನಿ ಮೊಕದ್ದಮೆಯಲ್ಲಿ ತೀರ್ಪು ನೀಡಿದ ನಂತರ ಹಿಂದುಳಿದ ವರ್ಗಗಳ ಆಯೋಗ ರಚನೆಮಾಡಿ, ಆಯೋಗದ ವರದಿಯನ್ನು ಪಡೆದು ಮೀಸಲಾತಿ ಪಟ್ಟಿಯಲ್ಲಿ ಹಿಂದುಳಿದ ವರ್ಗವೆಂದು ಸೇರಿಸಬೇಕಾದುದು ನಿಯಮವೇ ಆಗಿದೆ. ಅದಕ್ಕನುಸಾರವಾಗಿ ರಾಜ್ಯಮಟ್ಟದಲ್ಲಿ 1995ರಲ್ಲಿ ಒಂದು ಪ್ರತ್ಯೇಕ ಕಾಯ್ದೆ ಮಾಡಲಾಗಿದೆ. ಹಿಂದುಳಿದ ವರ್ಗವೆಂದು ಗುರುತಿಸುವುದು ಆಯೋಗದ ಮುಖ್ಯವಾದ ಕಾರ್ಯಗಳಲ್ಲೊಂದಾಗಿದೆ. ಆ ದಿಕ್ಕಿನಲ್ಲಿ ಸೂಕ್ತವಾದ ವಿಧಾನ ಮತ್ತು ಕ್ರಮಗಳನ್ನು ವಹಿಸುವುದು ಆಯೋಗದ ವಿವೇಚನೆಗೆ ಬಿಟ್ಟ ವಿಚಾರವೆಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ. ಕರ್ನಾಟಕದಲ್ಲಿ ಮುಸ್ಲಿಮ್ ಸಮುದಾಯಕ್ಕೆ ಇತರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಮೀಸಲಾತಿ ನೀಡುವಾಗ ಕರ್ನಾಟಕದಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ನೇಮಕಗೊಂಡಿದ್ದ ನ್ಯಾ. ಒ. ಚಿನ್ನಪ್ಪರೆಡ್ಡಿ ಹಿಂದುಳಿದ ವರ್ಗಗಳ ಆಯೋಗದ 07.04.1990ರ ವರದಿಯನ್ನು ಆಧರಿಸಲಾಗಿದೆ ಎಂಬುದು ರಾಜ್ಯ ಸರಕಾರದ ನಿಲುವು. ನ್ಯಾ. ಒ. ಚಿನ್ನಪ್ಪರೆಡ್ಡಿ ಆಯೋಗದ ವರದಿಯಲ್ಲಿ ಕರ್ನಾಟಕದಲ್ಲಿ ಮುಸ್ಲಿಮ್ ಸಮುದಾಯವು ರಾಜ್ಯದಲ್ಲಿ ಶೇ. 11.6744ರಷ್ಟು ಇದ್ದು ಪರಿಶಿಷ್ಟ ಜಾತಿಯ ನಂತರ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯವಾಗಿದೆ ಎಂದು ಗುರುತಿಸಲಾಗಿದೆ. ಮುಸ್ಲಿಮ್ ಸಮುದಾಯಕ್ಕೆ ಶೇ. 4ರಷ್ಟು ಮೀಸಲಾತಿಯನ್ನು ಕರ್ನಾಟಕದ ಇತರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಪ್ರವರ್ಗ 2ಬಿ ಅಡಿಯಲ್ಲಿ ನೀಡಲಾಗಿದೆ. ಕೇಂದ್ರ ಸರಕಾರ ಕೂಡ ಆಯಾ ರಾಜ್ಯಗಳಿಗೆ ಸಂಬಂಧಪಟ್ಟ ಇತರ ಹಿಂದುಳಿದ ವರ್ಗಗಳ ಪ್ರತ್ಯೇಕ ಪಟ್ಟಿಯನ್ನು ಹೊಂದಿರುತ್ತದೆ. ಕರ್ನಾಟಕ ರಾಜ್ಯಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರಕಾರ ಕೂಡ ಇತರ ಹಿಂದುಳಿದ ವರ್ಗದ ಪ್ರತ್ಯೇಕ ಮೀಸಲಾತಿ ಪಟ್ಟಿಯನ್ನು ತಯಾರಿಸಿ ಅದರ ಪ್ರಕಾರ ಕೇಂದ್ರ ಸರಕಾರದ ಮೀಸಲಾತಿಯನ್ನು ಮುಸ್ಲಿಮ್ ಸಮುದಾಯಕ್ಕೂ 1993ರಿಂದಲೇ ನೀಡಲಾಗುತ್ತಿದೆ. ಆ ಪಟ್ಟಿಯಲ್ಲೂ ಮುಸ್ಲಿಮ್ ಸಮುದಾಯದ ಅನೇಕ ಜಾತಿ, ಉಪಜಾತಿಗಳನ್ನು ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳೆಂದು ಪರಿಗಣಿಸಿ ಸೇರ್ಪಡೆಮಾಡಲಾಗಿದೆ. ಅದರ ಪ್ರಕಾರ ಕೇಂದ್ರ ಸರಕಾರದ ಮೀಸಲಾತಿ ಜಾರಿಯಲ್ಲಿದೆ. ಇತರ ಹಿಂದುಳಿದ ವರ್ಗಗಳ ಮೀಸಲಾತಿ ಕ್ರಮ ಮತ್ತು ಮೀಸಲಾತಿ ಪ್ರಮಾಣವೇ ಬೇರೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಕ್ರಮ ಮತ್ತು ಮೀಸಲಾತಿ ಪ್ರಮಾಣವೇ ಬೇರೆ. ಹಾಗಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಪ್ರಮಾಣ ಕಡಿಮೆ ಮಾಡಿ ಮುಸ್ಲಿಮ್ ಸಮುದಾಯಗಳನ್ನು ಇತರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ನೀಡಲಾಗುತ್ತಿದೆ ಎಂಬ ಮಾತು ಸತ್ಯಕ್ಕೆ ದೂರವಾದುದು. ಯಾವ ಯಾವ ಜಾತಿ ಸಮುದಾಯಗಳು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದಾವೋ ಅವುಗಳಿಗೆ ಇತರ ಹಿಂದುಳಿದ ವರ್ಗಗಳಿಗೆ ಆಯಾ ಕಾಲದಲ್ಲಿ ಇರುವ ಮೀಸಲಾತಿ ಪ್ರಮಾಣದ ಒಳಗಡೆ ಅವುಗಳ ಜನಸಂಖ್ಯೆ ಮತ್ತು ಹಿಂದುಳಿದಿರುವಿಕೆ ಅನುಗುಣವಾಗಿ ಮೀಸಲಾತಿ ನೀಡಬೇಕಾಗುತ್ತದೆ. ಸಂವಿಧಾನದ ಆಜ್ಞಾಪಕ ಮೀಸಲಾತಿಗೆ ಅರ್ಹತೆ ಇರುವ ಚೌಕಟ್ಟಿನೊಳಗೆ ಬಂದ ಜಾತಿ ಸಮುದಾಯಗಳನ್ನು ಮೀಸಲಾತಿ ಪಟ್ಟಿಗೆ ಸೇರಿಸಿದ್ದು ತಪ್ಪು ಎಂದು ಹೇಳಿದರೆ ಅದು ಅಸಾಂವಿಧಾನಿಕ. ಆದ್ದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳ ಮೀಸಲಾತಿ ನೀತಿ ಬಗ್ಗೆ ಆಧಾರ ರಹಿತವಾದಂತಹ ಗೊಂದಲಗಳನ್ನು ಸೃಷ್ಟಿಮಾಡುತ್ತಿರುವುದು ದುರದೃಷ್ಟಕರ.