ಆರ್ಥಿಕ ಮೌಲ್ಯವನ್ನು ಮೀರಿದ ಪರಿಣಾಮವುಳ್ಳ ‘ಶಕ್ತಿ’ ಯೋಜನೆ
ರಾಜ್ಯ ಸರಕಾರ ಬಜೆಟ್‌ನಲ್ಲಿ ನೀಡುವ 6,500 ಕೋಟಿ ರೂ.ಗಳನ್ನು ಗಣಿತಸೂತ್ರದಲ್ಲಿ ಲೆಕ್ಕಮಾಡಲು ಸಾಧ್ಯವಿಲ್ಲ. ಇದರಿಂದ ಉತ್ಪತ್ತಿಯಾಗುತ್ತಿರುವ ಬಂಡವಾಳವನ್ನು ಸಾಮಾಜಿಕ ಅಭಿವೃದ್ಧಿಗೆ ಮಹಿಳೆಯರು ಮರು ವಿನಿಯೋಗಿಸುತ್ತಿದ್ದಾರೆ. ಹೀಗಾಗಿ ಶಕ್ತಿ ಯೋಜನೆ ಮಹಿಳೆಯರಿಗೆ ಮಾತ್ರ ಹೆಚ್ಚಿನ ಅನುಕೂಲವಾಗಿಲ್ಲ. ಇದು ಅರ್ಥಿಕ ಮೌಲ್ಯವನ್ನು ಮೀರಿದೆ. ಹೀಗಾಗಿ ಶಕ್ತಿ ಯೋಜನೆ ಪ್ರಾರಂಭದಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಪೂರೈಸುವ ರಾಜಕೀಯ ಯೋಜನೆಯಾಗಿ ಕಂಡುಬಂದರೂ ಈಗ ಅದು ಸುಸ್ಥಿರ ಅಭಿವೃದ್ಧಿ ಸಾಧಿಸುವ ಬಹುದೊಡ್ಡ ಸಾಧನವಾಗಿ ಹೊರಹೊಮ್ಮಿದೆ.
ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೆ ಬಂದು ಜೂನ್ 11, 2024ಕ್ಕೆ ಒಂದು ವರ್ಷ ಪೂರೈಸುತ್ತಿದೆ. ಸರಕಾರದ ನಾಲ್ಕು ಸಾರಿಗೆ ನಿಗಮಗಳಲ್ಲಿ ಪ್ರತೀ ದಿನ ಸರಾಸರಿ 60 ಲಕ್ಷ ಮಹಿಳೆಯರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಶಕ್ತಿ ಯೋಜನೆ ಕುರಿತು ಸಾಮಾಜಿಕ ಮಾಧ್ಯಮಗಳು ಮತ್ತು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿದ ಸಿನಿಕತನದ ವೀಡಿಯೊಗಳು, ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎನ್ನುವ ಚರ್ಚೆಗಳು ಪುರುಷಪ್ರಧಾನತೆಯ ಮೂಲಭೂತ ಲಕ್ಷಣ. ಶುಲ್ಕರಹಿತ ಪ್ರಯಾಣದ ಅವಕಾಶವನ್ನು ಬಳಸಿಕೊಳ್ಳುವ ಉತ್ಸಾಹದಲ್ಲಿ ಬಿಡಿಬಿಡಿಯಾಗಿ ನಡೆದ ಕೆಲವು ಅತಿರೇಕದ ಘಟನೆಗಳನ್ನು ಒಟ್ಟಾರೆ ಯೋಜನೆಯ ಪರಿಣಾಮವೆಂದು ಬಿಂಬಿಸುವುದರ ಜೊತೆಗೆ, ಇದೇ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಮಹಿಳೆಯರು ಕೆಟ್ಟ ಹಾದಿಯನ್ನು ತುಳಿಯುತ್ತಿದ್ದಾರೆನ್ನುವ ಪ್ರತಿಪಾದನೆಗಳು ನಡೆದವು. ಆದರೆ ಇದೊಂದು ಮಹಿಳೆಯರ ಬಿಡುಗಡೆಯ ಸಂಕೇತದ ಕ್ರಾಂತಿಕಾರಕ ನಡೆ. ಸಾಮಾಜಿಕ ಅಭಿವೃದ್ಧಿಗೆ ಮತ್ತು ಮಹಿಳೆಯ ಸಬಲೀಕರಣಕ್ಕೆ ಪೂರಕವೆಂದು ಗುರುತಿಸುವ ಪ್ರಯತ್ನ ಇನ್ನೊಂದೆಡೆಯಿದೆ. ಪುರುಷಪ್ರಧಾನತೆಯ ಲಕ್ಷಣಗಳು ಪ್ರಬಲವಾಗಿರುವ ಸಂಕೀರ್ಣ ಸಾಮಾಜಿಕ ಪರಿಸ್ಥಿತಿಯಲ್ಲಿ ಒಂದು ಕಲ್ಯಾಣ ಯೋಜನೆಯು ಮಹಿಳಾ ಸಬಲೀಕರಣದ ಆಚೆಗೂ ಬಹು ಆಯಾಮದ ಪರಿಣಾಮಗಳನ್ನು ಹೇಗೆ ಉಂಟುಮಾಡಬಹುದು ಎನ್ನುವುದನ್ನು ಶಕ್ತಿ ಯೋಜನೆ ಸಾಬೀತುಪಡಿಸುತ್ತಿದೆ. ಸಿನಿಕತನದ ಟೀಕೆಗಳಿಗೆ ರಚನಾತ್ಮಕವಾದ ಉತ್ತರವನ್ನು ನೀಡುತ್ತಿದೆ ಎನ್ನುವ ಪರ-ವಿರೋಧ ಚರ್ಚೆಗಳನ್ನು ಗಮನಿಸಿ, ಶಕ್ತಿ ಯೋಜನೆಯು ಯಾವ ರೀತಿಯ ಪರಿಣಾಮಗಳನ್ನು ಉಂಟುಮಾಡುತ್ತಿದೆ, ಪರಿಣಾಮಗಳು ರಚನಾತ್ಮಕವಾಗಿವೆಯೇ? ಅಥವಾ ಇಲ್ಲವೇ ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ಅಭಿವೃದ್ಧಿ ಅಧ್ಯಯನ ತಂಡದ ಆಶಯವಾಗಿದೆ.
ನಮ್ಮ ಅಧ್ಯಯನವು ಪ್ರಮುಖವಾಗಿ ಮಹಿಳೆಯರ ಅರ್ಥಿಕ ಅವಕಾಶಕ್ಕೂ, ಆರ್ಥಿಕ ಭಾಗವಹಿಸುವಿಕೆಗೂ, ಮಹಿಳಾ ಸಬಲೀಕರಣಕ್ಕೂ ಹಾಗೂ ಶಕ್ತಿ ಯೋಜನೆಗೂ ಇರುವ ಸಹ-ಸಂಬಂಧಗಳು ಯಾವುವು? ಕಾರ್ಮಿಕ ಮಾರುಕಟ್ಟೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಗೆ ಶಕ್ತಿ ಯೋಜನೆ ಹೇಗೆ ಪೂರಕವಾಗಿದೆ? ತಾಯಿ ಮತ್ತು ಮಗುವಿನ(ಸಂತಾನೋತ್ಪತ್ತಿ) ಆರೋಗ್ಯಕ್ಕೂ ಮತ್ತು ಯೋಗಕ್ಷೇಮಕ್ಕೂ ಶಕ್ತಿ ಯೋಜನೆಗೂ ಇರುವ ಸಹ-ಸಂಬಂಧಗಳು ಯಾವುವು? ಶಿಕ್ಷಣ, ತಾಂತ್ರಿಕ, ವೃತ್ತಿಪರ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ತರಬೇತಿಗಳಲ್ಲಿ ಹೆಣ್ಣುಮಕ್ಕಳ ಭಾಗವಹಿಸುವಿಕೆಯನ್ನು ಹೆಚ್ಚಿಸುವಲ್ಲಿ ಶಕ್ತಿ ಯೋಜನೆ ಪ್ರಭಾವಗಳು ಯಾವುವು? ಇದರ ಬಗ್ಗೆ ವಿವಿಧ ಜಾತಿ ಮತ್ತು ಸಮುದಾಯಗಳಿಗೆ ಸೇರಿದ ಜನರು ಯಾವ ರೀತಿಯ ಅಭಿಪ್ರಾಯವನ್ನು ಹೊಂದಿದ್ದಾರೆ? ಎನ್ನುವುದನ್ನು ಅರ್ಥಮಾಡಿಕೊಳ್ಳುವುದಾಗಿದೆ.
ಅಧ್ಯಯನ ವಿಧಾನ:
ಕರ್ನಾಟಕ ಮಾನವ ಅಭಿವೃದ್ಧಿ ವರದಿ-2022 ಲಿಂಗ ಸಮಾನತೆ ಸೂಚ್ಯಂಕದ ಆಧಾರದಲ್ಲಿ ರಾಜ್ಯದ ಜಿಲ್ಲೆಗಳನ್ನು ಮುಂದುವರಿದ, ಮಧ್ಯಮ ಕ್ರಮಾಂಕದಲ್ಲಿ ಇರುವ ಹಾಗೂ ಅತ್ಯಂತ ಹಿಂದುಳಿದ ಜಿಲ್ಲೆಗಳು ಎಂದು ವಿಭಾಗಿಸಿದೆ. ಲಿಂಗ ಸಮಾನತೆ ಸೂಚ್ಯಂಕದಲ್ಲಿ ಮುಂದುವರಿದು 1ನೇ ಸ್ಥಾನದಲ್ಲಿ ಬೆಂಗಳೂರು ನಗರ ಜಿಲ್ಲೆ ಇದ್ದರೆ, 3ನೇ ಸ್ಥಾನದಲ್ಲಿ ಹಾಸನ ಜಿಲ್ಲೆ ಇರುತ್ತದೆ. ಮಧ್ಯಮ ಕ್ರಮಾಂಕದಲ್ಲಿ 15ನೇ ಸ್ಥಾನದಲ್ಲಿ ಚಿತ್ರದುರ್ಗ ಜಿಲ್ಲೆ, 20ನೇ ಸ್ಥಾನದಲ್ಲಿ ಕೊಪ್ಪಳ ಮತ್ತು 21ನೇ ಸ್ಥಾನದಲ್ಲಿ ಚಾಮರಾಜನಗರ ಜಿಲ್ಲೆ ಬರುತ್ತವೆ. ಲಿಂಗ ಸಮಾನತೆ ಸೂಚ್ಯಂಕದಲ್ಲಿ ಅತ್ಯಂತ ಹಿಂದುಳಿದು 30ನೇ ಸ್ಥಾನದಲ್ಲಿ ರಾಯಚೂರು ಜಿಲ್ಲೆ, 29ನೇ ಸ್ಥಾನದಲ್ಲಿ ಯಾದಗಿರಿ ಜಿಲ್ಲೆ, 28ನೇ ಸ್ಥಾನದಲ್ಲಿ ಅವಿಭಜಿತ ಬಳ್ಳಾರಿ ಜಿಲ್ಲೆ, 27ನೇ ಸ್ಥಾನದಲ್ಲಿ ಇರುವ ಬಾಗಲಕೋಟೆ ಜಿಲ್ಲೆ ಹಾಗೂ 26ನೇ ಸ್ಥಾನದಲ್ಲಿ ಕಲಬುರಗಿ ಜಿಲ್ಲೆ ಇದೆ. ಇದನ್ನು ಆಧರಿಸಿ ಮೊದಲ ಹಂತದಲ್ಲಿ ಅಧ್ಯಯನಕ್ಕೆ ಎಂಟು ಜಿಲ್ಲೆಗಳನ್ನು (ಬೆಂಗಳೂರು; ಹಾಸನ; ಚಿತ್ರದುರ್ಗ; ಕೊಪ್ಪಳ; ಚಾಮರಾಜನಗರ; ಕಲಬುರಗಿ; ಬಳ್ಳಾರಿ ಮತ್ತು ರಾಯಚೂರು) ಆಯ್ಕೆ ಮಾಡಿಕೊಳ್ಳಲಾಯಿತು.
ಎರಡನೇ ಹಂತದಲ್ಲಿ ಪ್ರಾತಿನಿಧಿಕ ಮಾದರಿ ಆಯ್ಕೆ ವಿಧಾನವನ್ನು ಬಳಸಿ ಪ್ರತೀ ಜಿಲ್ಲೆಯಿಂದ 90 ಜನ ಮಹಿಳೆಯರು ಮತ್ತು 30 ಜನ ಪುರುಷರನ್ನು ಆಯ್ಕೆ ಮಾಡಲಾಗಿದೆ. ಅಧ್ಯಯನಕ್ಕೆ ಒಟ್ಟು 960 ಜನರನ್ನು, (ಇದರಲ್ಲಿ 720 ಮಹಿಳೆಯರು ಮತ್ತು 240 ಪುರುಷರು) ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡವರಲ್ಲಿ ಶೇ. 68.12ರಷ್ಟು ಜನರು ಭೂರಹಿತ ಕುಟುಂಬಕ್ಕೆ, ಶೇ. 22.70ರಷ್ಟು ಜನರು ಅತಿಸಣ್ಣ ಭೂಹಿಡುವಳಿ ಕುಟುಂಬಕ್ಕೆ, ಶೇ. 6.14ರಷ್ಟು ಜನರು ಸಣ್ಣ ಭೂಹಿಡುವಳಿ ಕುಟುಂಬಕ್ಕೆ ಹಾಗೂ ಶೇ. 3ರಷ್ಟು ಜನರು ಮಧ್ಯಮ ಗಾತ್ರದ ಭೂಹಿಡುವಳಿ ಹೊಂದಿರುವ ಕೃಷಿ ಕುಟುಂಬಕ್ಕೆ ಸೇರಿರುತ್ತಾರೆ. ಇದರಲ್ಲಿ ಶೇ. 21.87ರಷ್ಟು ಜನರು ಪರಿಶಿಷ್ಟ ಜಾತಿಗೆ; ಶೇ. 14.58ರಷ್ಟು ಜನರು ಪರಿಶಿಷ್ಟ ಪಂಗಡಕ್ಕೆ; ಶೇ. 34.37ರಷ್ಟು ಜನರು ಹಿಂದುಳಿದ ವರ್ಗಕ್ಕೆ; ಶೇ. 13ರಷ್ಟು ಜನರು ಅಲ್ಪಸಂಖ್ಯಾತ ಸಮುದಾಯಕ್ಕೆ ಹಾಗೂ ಶೇ. 16.14ರಷ್ಟು ಜನರು ಇತರ ಜಾತಿ ಸಮುದಾಯಗಳಿಗೆ ಸೇರಿದವರಾಗಿದ್ದಾರೆ.
ಕ್ಷೇತ್ರಕಾರ್ಯದ ಮೂಲಕ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡವರಿಂದ ಸಂಗ್ರಹಿಸಿದ ಪ್ರಾಥಮಿಕ ಮಾಹಿತಿಯನ್ನು ಸಂಬಂಧಿಸಿದ ಆನುಷಂಗಿಕ ಮಾಹಿತಿಯ ವಿಶ್ಲೇಷಣೆಯೊಂದಿಗೆ ತಾಳೆನೋಡಿ, ಪರಿಶೀಲಿಸಿ, ಅಧ್ಯಯನದ ಉದ್ದೇಶಗಳ ಹಿನ್ನೆಲೆಯಲ್ಲಿ ಕೆಲವು ತೀರ್ಮಾನಗಳಿಗೆ ಬರಲಾಯಿತು. ಹೀಗೆ ಮಾಡುವಾಗ ಪರಿಮಾಣಾತ್ಮಕ ಮಾಹಿತಿಯನ್ನು ಖಾತರಿಪಡಿಸಿಕೊಳ್ಳುವ ಉದ್ದೇಶದಿಂದ ಗುಣಾತ್ಮಕ ಮಾಹಿತಿಯನ್ನು 50 ಪ್ರಕರಣ ಅಧ್ಯಯನ/ಕೇಸ್ ಸ್ಟಡೀಸ್‌ಗಳ ಮೂಲಕ ಸಂಗ್ರಹಿಸಲಾಯಿತು. ಅಧ್ಯಯನ ಮಾಡಿದ ಕೇಸ್ ಸ್ಟಡೀಸ್‌ಗಳನ್ನು ಅಧ್ಯಯನ ಉದ್ದೇಶಗಳಿಗೆ (ಆರ್ಥಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ಮತ್ತು ಅರ್ಥಿಕ ಅವಕಾಶ, ಹೆಣ್ಣುಮಕ್ಕಳ ಶೈಕ್ಷಣಿಕ ಸಾಧನೆ, ಕಾರ್ಮಿಕ ಮಾರುಕಟ್ಟೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ, ಮಗು ಮತ್ತು ತಾಯಿಯ(ಸಂತಾನೋತ್ಪತ್ತಿ) ಆರೋಗ್ಯ ಮತ್ತು ಯೋಗಕ್ಷೇಮ ಹಾಗೂ ರಾಜಕೀಯ ಸಬಲೀಕರಣ) ಅನುಗುಣವಾಗಿ ವರ್ಗೀಕರಿಸಿ ಶಕ್ತಿ ಯೋಜನೆಯ ಬಟರ್‌ಫ್ಲೈ ಎಫೆಕ್ಟ್‌ಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಮಾಡಲಾಗಿದೆ.
ಶಕ್ತಿ ಯೋಜನೆಯ ಆಶಯ ಕಾರ್ಮಿಕ ಮಾರುಕಟ್ಟೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು. ಆ ಮೂಲಕ ಬಡ ಮತ್ತು ಕೆಳ-ಮಧ್ಯಮ ವರ್ಗದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಮತ್ತು ಮಾರುಕಟ್ಟೆಯಲ್ಲಿ ಅವರ ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವುದಾಗಿದೆ. ಈ ಯೋಜನೆಗೆ ಪ್ರಾರಂಭದಲ್ಲಿ ರಾಜ್ಯ ಸರಕಾರ ಬಜೆಟ್‌ನಲ್ಲಿ ನಾಲ್ಕು ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿರಿಸಿತ್ತು. ನಂತರ ವೆಚ್ಚ ಬೇಡಿಕೆಗೆ ಅನುಗುಣವಾಗಿ ಹಂತ ಹಂತವಾಗಿ ಅನುದಾನ ಹೆಚ್ಚು ಮಾಡಿದೆ. 2024-25ರ ಹಣಕಾಸು ವರ್ಷದಲ್ಲಿ ಶಕ್ತಿ ಯೋಜನೆಗೆ ರೂ.6,500 ಕೋಟಿಗಳಿಗೂ ಹೆಚ್ಚಿನ ಹಣ ಬೇಕಾಗಬಹುದು ಎಂದು ಅಂದಾಜಿಸಲಾಗುತ್ತಿದೆ.
ಮಹಿಳೆಯರು ಯಾವುದೇ ರೀತಿಯ ಅವಲಂಬನೆ ಇಲ್ಲದೇ ಸ್ವತಂತ್ರವಾಗಿ ಓಡಾಟ ಮಾಡಲು, ಮನೆಯ ಹೊರಗೆ ವಿವಿಧ ರೀತಿಯ ದುಡಿಮೆಯಲ್ಲಿ ಭಾಗವಹಿಸಲು, ಶಕ್ತಿ ಯೋಜನೆ ಹೆಚ್ಚು ಅನುಕೂಲವಾಗಿದೆ ಎಂದು ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡ 960 ಜನರಲ್ಲಿ ಶೇ. 51.56ರಷ್ಟು ಜನರು ತಿಳಿಸಿದ್ದಾರೆ. ಶಕ್ತಿ ಯೋಜನೆಯು ಮಹಿಳೆಯರ ಆರ್ಥಿಕ ಸ್ವಾತಂತ್ರ್ಯಕ್ಕೆ ಹೆಚ್ಚು ಬೆಂಬಲವಾಗುವ ಜೊತೆ ಜೊತೆಗೆ ಮಹಿಳೆಯರ ಸ್ವಾವಲಂಬನೆ ಮತ್ತು ಆರ್ಥಿಕ ಸಬಲೀಕರಣಕ್ಕೆ ಪೂರಕವಾಗಿದೆ ಎಂದು ಹೇಳಿರುತ್ತಾರೆ. ರಾಜ್ಯದ ಹಣಕಾಸು ನೀತಿ ಸಂಸ್ಥೆ ನಡೆಸಿದ ಅಧ್ಯಯನವು ಮಹಿಳೆಯರ ಗಳಿಕೆ ಮತ್ತು ಉಳಿತಾಯವನ್ನು ಹೆಚ್ಚಿಸಿದೆ ಎಂದು ಹೇಳಿದೆ. ಕಾರ್ಮಿಕ ಮಾರುಕಟ್ಟೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಶಕ್ತಿ ಯೋಜನೆ ಸುಧಾರಿಸಿದೆ ಮತ್ತು ರಾಜ್ಯದ ತೆರಿಗೆ ಆದಾಯವನ್ನು ಹೆಚ್ಚಿಸಿದೆ. 2022ರ ಅಕ್ಟೋಬರ್-ಡಿಸೆಂಬರ್‌ನಲ್ಲಿ ಕಾರ್ಮಿಕ ಬಲದಲ್ಲಿ ಮಹಿಳೆಯರ ಭಾಗವಹಿಸುವಿಕೆಯು ಶೇ. 25.1 ಇತ್ತು. ಅದು ಅಕ್ಟೋಬರ್-ಡಿಸೆಂಬರ್ 2023ರ ವೇಳೆಗೆ ಶೇ. 30.2ಕ್ಕೆ ಏರಿಕೆಯಾಗಿದೆ. ಮಹಿಳೆಯರ ಉಳಿತಾಯದ ಮಾಸಿಕ ಹೆಚ್ಚಳವು ರಾಜ್ಯಾದ್ಯಂತ ರೂ. 681 ರಿಂದ ರೂ. 1,326ಕ್ಕೆ ಹೆಚ್ಚಿದೆ ಎಂದು ಗುರುತಿಸಿದೆ. ಇದನ್ನು ಸರಾಸರಿ ಪ್ರಮಾಣದಲ್ಲಿ ಪರಿಮಾಣಾತ್ಮಕ ಮಾಹಿತಿಯನ್ನು ವಿಶ್ಲೇಷಿಸುವಾಗ ಸರಿಯಾಗಿದೆ, ಆದರೆ ಆದಾಯ ಮತ್ತು ಉಳಿತಾಯದಲ್ಲಿನ ಹೆಚ್ಚಳವನ್ನು ಸರಾಸರಿ ನೆಲೆಯಲ್ಲಿ ಸಾರ್ವತ್ರಿಕಗೊಳಿಸುವ ಸರಿಯಾದ ಕ್ರಮವಲ್ಲ. ಏಕೆಂದರೆ ಕರ್ನಾಟಕದ ಪ್ರಾದೇಶಿಕ ಅಸಮಾನತೆ, ಸಾಮಾಜಿಕ ಸ್ವರೂಪ ಮತ್ತು ದುಡಿಮೆ ಅವಕಾಶಗಳ ವೈವಿಧ್ಯತೆಗಳು ಬೇರೆ ಬೇರೆ. ಹೀಗಾಗಿ ನಮ್ಮ ಅಧ್ಯಯನವು ಪರಿಮಾಣಾತ್ಮಕ ಮಾಹಿತಿಯ ಜೊತೆ ಜೊತೆಗೆ ಕೇಸ್‌ಸ್ಟಡಿಗಳ ಮೂಲಕ ಶಕ್ತಿ ಯೋಜನೆ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಮಾಡಿದೆ. ಹೀಗೆ ಮಾಡುವಾಗ ನಾವು ಮಾಡಿದ ಐವತ್ತಕ್ಕೂ ಹೆಚ್ಚು ಪ್ರಕರಣ ಕೇಸ್‌ಸ್ಟಡಿಗಳಲ್ಲಿ ಎರಡನ್ನು ಮಾತ್ರ ಈ ಲೇಖನದಲ್ಲಿ ಚರ್ಚಿಸಲಾಗಿದೆ.
ಕೇಸ್‌ಸ್ಟಡಿ-1:
ಹೆಸರು ನಂದಿನಿ(ಹೆಸರು ಬದಲಿಸಲಾಗಿದೆ). ಇವರು ಗುಂಡ್ಲುಪೇಟೆ ತಾಲೂಕಿನ ಪೂತನಪುರ ಗ್ರಾಮದವರು. ಇವರ ವಯಸ್ಸು 40. ಪೂತನಪುರದಿಂದ ಚಾಮರಾಜನಗರದಲ್ಲಿರುವ ಗಿರೀಶ್ ಎಕ್ಸ್‌ಪೋರ್ಟ್ ಯೂನಿಟ್-2 ಕೆಲಸಕ್ಕೆ ಪ್ರತಿದಿನ ಬಂದು ಹೋಗುತ್ತಿದ್ದಾರೆ. ಇವರ ಜೊತೆ ಗಿರೀಶ್ ಎಕ್ಸ್ ಪೋರ್ಟ್ ಆವರಣದಲ್ಲಿ ಊಟದ ಸಮಯದಲ್ಲಿ ಶಕ್ತಿ ಯೋಜನೆಯ ಬಗ್ಗೆ ಮಾತನಾಡಲು ಪ್ರಾರಂಭಿಸಲಾಯಿತು. ಆಗ ಅವರು ‘‘ನಮ್ಮ ಮನೆಯವರು ತರಕಾರಿ ವ್ಯಾಪಾರ ಮಾಡುತ್ತಿದ್ದರು. ಕೋವಿಡ್-19 ಸಾಂಕ್ರಾಮಿಕಕ್ಕೆ ಒಳಗಾಗಿ ಮೇ 2020ರಲ್ಲಿ ತೀರಿಕೊಂಡರು. ನಾವು ಆರ್ಥಿಕವಾಗಿ ಚೆನ್ನಾಗಿದ್ದೆವು. ಕೋವಿಡ್-19 ಸೋಂಕಿಗೆ ತುತ್ತಾಗಿದ್ದ ನಮ್ಮ ಮನೆಯವರನ್ನು ಮೈಸೂರಿನ ಆಸ್ಪತ್ರೆಗೆ ಸೇರಿಸಿದ್ದೆವು. ಆಸ್ಪತ್ರೆಗೆ ಸುಮಾರು ಎಂಟು ಲಕ್ಷ ಖರ್ಚು ಮಾಡಿದೆವು. ಆದರೂ ಅವರ ಜೀವ ಉಳಿಯಲಿಲ್ಲ. ನಮ್ಮ ಮನೆಯವರ ಕೆಲಸವನ್ನು ನಾವು ಮಾಡಕ್ಕೆ ಆಗಲಿಲ್ಲ. ಅವರು ದುಡಿದದ್ದು ಸೇರಿದಂತೆ ಆಸ್ಪತ್ರೆಗೆ ನಾಲ್ಕು ಲಕ್ಷ ಸಾಲ ಮಾಡಬೇಕಾಯಿತು. ಈಗ ತಂದೆಯ ಮನೆಯಲ್ಲಿಯೇ ಇದ್ದೇನೆೆ. ಗಂಡ ಇಲ್ಲ. ಭೂಮಿ ಇಲ್ಲ. ಮನೆ ಇಲ್ಲ. ಏನೂ ಇಲ್ಲ. ನನಗೆ ಒಬ್ಬ ಮಗ ಇದ್ದಾನೆ. ಅವನು ಬಿಎಸ್‌ಸಿ ನರ್ಸಿಂಗ್ ಅನ್ನು ಜೆಎಸ್‌ಎಸ್ ಕಾಲೇಜಿನಲ್ಲಿ ಓದುತ್ತಿದ್ದಾನೆ.
ಮಗನನ್ನು ಓದಿಸಲು ನಾನು ಕೆಲಸ ಮಾಡಲೇಬೇಕು. ನಾನು ಪ್ರತಿದಿನ ಬೆಳಗ್ಗೆ 6:15ಕ್ಕೆ ಪೂತನಪುರದಿಂದ ಹೊರಡುವ ಸರಕಾರಿ ಬಸ್ಸಿನಲ್ಲಿ ಗುಂಡ್ಲುಪೇಟೆ(8.5 ಕಿ.ಮೀ) ತಲುಪಿ, ಅಲ್ಲಿಂದ ಚಾಮರಾಜನಗರಕ್ಕೆ(35 ಕಿ.ಮೀ) 8 ಗಂಟೆಗೆ ಬರುತ್ತೇನೆ. ಗಿರೀಶ್ ಗಾರ್ಮೆಂಟ್ಸ್‌ನಲ್ಲಿ ಬೆಳಗ್ಗೆ 8:30ರಿಂದ ಸಂಜೆ 5:30ರವರೆಗೆ ಒಂಭತ್ತು ಗಂಟೆ ಕೆಲಸ ಮಾಡಿ, ಸಂಜೆ 5:30ಕ್ಕೆ ಹೊರಟು ಪೂತನಪುರಕ್ಕೆ ರಾತ್ರಿ ಎಂಟು ಗಂಟೆಯ ಹೊತ್ತಿಗೆ ಮನೆ ಸೇರುತ್ತೇನೆ. ಗಿರೀಶ್ ಗಾರ್ಮೆಂಟ್ಸ್‌ನಲ್ಲಿ ನನಗೆ ಪ್ರತಿ ತಿಂಗಳಿಗೆ ರೂ.11,000 ಕೊಡುತ್ತಾರೆ. ಶಕ್ತಿ ಯೋಜನೆ ಜಾರಿಗೆ ಬರುವ ಮೊದಲು(ಜೂನ್ 11, 2023ಕ್ಕೆ ಮೊದಲು) ಪ್ರತಿ ದಿನ ಪೂತನಪುರದಿಂದ ಗುಂಡ್ಲುಪೇಟೆಗೆ 12 ರೂ. ಗಳನ್ನು, ಗುಂಡ್ಲುಪೇಟೆಯಿಂದ ಚಾಮರಾಜನಗರಕ್ಕೆ ರೂ.45 ರೂ. ಹೀಗೆ ಒಂದು ಬದಿ ಪ್ರಯಾಣಕ್ಕೆ ರೂ. 57ರಂತೆ, ಎರಡು ಬದಿಯ ಪ್ರಯಾಣಕ್ಕೆ 114 ರೂ.ಗಳನ್ನು ನೀಡಿ ಪ್ರಯಾಣಿಸುತ್ತಿದ್ದೆ. ನಾನು ಒಂದು ತಿಂಗಳಲ್ಲಿ 26 ದಿನ ಕೆಲಸಕ್ಕೆ ಬಂದರೆ ಒಟ್ಟು 2964 ರೂ. ಪ್ರಯಾಣಕ್ಕೆ ವೆಚ್ಚ ಮಾಡಬೇಕಾಗಿತ್ತು. ಈಗ ಶಕ್ತಿ ಯೋಜನೆ ಜಾರಿಗೆ ಬಂದ ಮೇಲೆ ಈ ಹಣ ಉಳಿಯುತ್ತಿದೆ. ಶಕ್ತಿ ಯೋಜನೆ ನನಗೆ ಒಂದಿಷ್ಟು ಸಹಾಯ ಮಾಡಿದೆ.
ನಾನು ಪ್ರತಿ ತಿಂಗಳು ಪ್ರಯಾಣಕ್ಕೆ ಮಾಡುತ್ತಿದ್ದ ಖರ್ಚು 2964 ರೂ.ಗಳು ಉಳಿತಾಯವಾಗುತ್ತದೆ. ಇದನ್ನು ಒಂದು ವರ್ಷಕ್ಕೆ ಅಂದರೆ 12 ತಿಂಗಳಿಗೆ ಲೆಕ್ಕ ಹಾಕಿದರೆ 35,568 ರೂ.ಗಳಷ್ಟು ಹಣ ಉಳಿತಾಯವಾಗುತ್ತದೆ. ಹೀಗಾಗಿ ನನಗೆ ನಿಜವಾಗಿಯೂ ಶಕ್ತಿ ಯೋಜನೆಯಿಂದ ಅನುಕೂಲವಾಗಿದೆ. ನನಗೆ ನನ್ನ ಮಗನ ಓದು ಮಾತ್ರ ನನ್ನ ಕನಸು. ಅವನು ಓದಿ ಒಳ್ಳೆಯ ಸ್ಥಾನಕ್ಕೆ ಬರುವವರೆಗಾದರೂ ಈ ಯೋಜನೆ ಜಾರಿಗೆ ಇದ್ದರೆ ನನಗೆ ಮತ್ತು ನನ್ನಂತಹವರಿಗೆ ತುಂಬಾ ಅನುಕೂಲವಾಗುತ್ತದೆ’’ ಎಂದು ನಂದಿನಿ ಅವರು ಹೇಳುವಾಗ ಅವರ ಕಣ್ಣಲ್ಲಿ ನೀರು ತುಂಬಿತ್ತು. ನಂದಿನಿ ಅವರು ಮಗನ ವಿದ್ಯಾಭ್ಯಾಸಕ್ಕೆ ವಾರ್ಷಿಕವಾಗಿ ಕಟ್ಟುವ ಶುಲ್ಕ ಒಂದು ಲಕ್ಷದಲ್ಲಿ ಶೇ. 35ರಷ್ಟು ಹಣ ಶಕ್ತಿ ಯೋಜನೆಯಿಂದ ಉಳಿದ ಹಣವಾಗಿದೆ. ಇದರಿಂದ ಮಗನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿರುವುದು ಶಕ್ತಿ ಯೋಜನೆಯ ಬಟರ್‌ಫ್ಲೈ ಎಫೆಕ್ಟ್ ಗಳಲ್ಲಿ ಅತ್ಯಂತ ಮಹತ್ವದ್ದಾಗಿದೆ. ಕೋವಿಡ್-19ನಿಂದ ನಂದಿನಿಯ ರೀತಿಯಲ್ಲಿಯೇ ಸಂಕಷ್ಟಕ್ಕೆ ಒಳಗಾದ ಮತ್ತು ಆರ್ಥಿಕ ದುಸ್ಥಿತಿಗೆ ತಳ್ಳಲ್ಪಟ್ಟ ಅಸಂಖ್ಯಾತ ಮಹಿಳೆಯರಿಗೆ ಶಕ್ತಿ ಯೋಜನೆಯು ಒಂದಿಷ್ಟು ಬೆಂಬಲವನ್ನು ನೀಡುತ್ತಿದೆ ಎನ್ನುವುದು ಇದರಿಂದ ತಿಳಿಯುತ್ತದೆ.
ಕೇಸ್‌ಸ್ಟಡಿ-2:
ಹೆಸರು ಹುಲಿಗೆಮ್ಮ(ಹೆಸರು ಬದಲಿಸಲಾಗಿದೆ). ಇವರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗಾಣದಾಳ್ ಗ್ರಾಮದವರು. ಇವರಿಗೆ 1 ಎಕರೆ ಒಣಭೂಮಿ ಇದೆ. ಇವರು ಬದುಕಿಗೆ ಕೂಲಿ ಮಾಡುತ್ತಾರೆ. ಇವರು ಏಳನೇ ತರಗತಿಯವರೆಗೆ ಓದಿದ್ದಾರೆ. ಇವರನ್ನು ಶಕ್ತಿ ಯೋಜನೆ ಬಗ್ಗೆ ಮಾತಾಡಿಸಿದ ತಕ್ಷಣ ಅವರು ‘‘ತುಂಬಾ ಛಲೋ ಐತ್ರಿ ಸರ್. ನಮ್ಮೂರಾಗಾ ಕೂಲಿ 120 ರೂಪಾಯಿ ಕೊಡ್ತಾರೆ, ಹೆಣ್ಣು ಮಕ್ಕಳಿಗೆ ಸೀಜನ್ ಜಾಸ್ತಿ ಇದ್ದಾಗಾ ಸ್ವಲ್ಪ ಜಾಸ್ತಿ ಕೊಡ್ತಾರೆ. ಈ ಸಲ ಮಳೆ ಬಂದಿಲ್ಲ ಹಂಗಾಗಿ ಕೆಲಸ ಇಲ್ರೀ, ಮತ್ತೇನು ಮಾಡೊದು ಕೆಲಸ ಇಲ್ರಿ. ಅಂದ್ರೆ 120 ರೂಪಾಯಿಗೆ ಏನೂ ಬರಲ್ರೀ, ಜೋಳ 50 ರೂಪಾಯಿ ಆಗಿದೆ. ಗೋಧಿ ಕೊಳ್ಳಾಂಗಿಲ್ರೀ ಏನೂ ಮಾಡೋದು ತಿಳಿದಂಗ ಆಗೈತ್ರೀ’’ ಎಂದು ಹೇಳಿ ಮೌನ ತಾಳಿದರು. ಮತ್ತೆ ಅವರನ್ನು ‘‘ಶಕ್ತಿ ಯೋಜನೆಯ ಶುಲ್ಕರಹಿತ ಪ್ರಯಾಣ ನಿಮಗೆ ಏನು ಅನಿಸಕತ್ತೈತ್ರಿ?’’ ಎಂದು ಕೇಳಿದರೆ, ‘‘ಅಲ್ರಿ ಸರ್ ಬೇರೆ ಊರಿನಾಗ ಒಂದು ದಿನ ಕೆಲಸ ಮಾಡಿದ್ರೆ 250 ರೂಪಾಯಿ ಕೂಲಿ ಕೊಡ್ತಾರೆ. ಶಕ್ತಿ ಯೋಜನೆಯಿಂದಾಗಿ ಹೋಗಿ ಬರೋಕ ಬಸ್ಸು ಖರ್ಚು ಉಳಿತಾವ. ಬಸ್ ಫ್ರಿ ಇರೋದರಿಂದ ಮತ್ತು ಗೌರ್ನಮೆಂಟ್ ಬಸ್ ಆಗಿರೋದರಿಂದ ಕೆಲಸ ಇರೋ ಕಡೆ ಹುಡುಕಿಕೊಂಡು ಹೋಗಿ ದುಡಿಮೆಮಾಡಿ ಬರಬಹುದು. ನಮಗೊಂದಿಷ್ಟು ಭದ್ರತೆ ಸಿಗುತ್ತದೆ. ಬೇರೆ ಕಡೆ ಕೂಲಿ ಮಾಡೋಕೆ ಹೋಗಬಹುದು. ಯಾವುದಾದರೂ ಊರಿಗೆ ಗಾರೆ ಕೆಲಸಕ್ಕಾದ್ರು ಹೋಗಬಹುದು. ಇಲ್ಲಂದ್ರೆ ಬೇರೆ ಏನಾದ್ರು ಕೆಲಸ ಸಿಕ್ಕರೆ ಮಹಿಳೆಯರಿಗೆ ದುಡಿಯಲು ಕೂಲಿ ಮಾಡಿಕೊಂಡು ಹೋಗಲಿಕ್ಕೆ ಶಕ್ತಿ ಯೋಜನೆಯಿಂದ ಬಹಳ ಅನುಕೂಲ ಆಗ್ತೈತ್ರಿ’’ ಎಂದು ಹುಲಿಗೆಮ್ಮ ಹೇಳುತ್ತಾರೆ.
ಈ ಎರಡು ಕೇಸ್‌ಸ್ಟಡಿಗಳು ಶಕ್ತಿ ಯೋಜನೆಯು ಮಹಿಳೆಯರಲ್ಲಿ ದುಡಿಮೆಯ ಮಾರುಕಟ್ಟೆಯಲ್ಲಿ ಭಾಗವಹಿಸುವ ಮತ್ತು ಬದುಕುವ ವಿಶ್ವಾಸವನ್ನು ಹುಟ್ಟು ಹಾಕಿದೆ ಎನ್ನುವ ಸೂಕ್ಷ್ಮತೆ ತಿಳಿಸುತ್ತವೆ. ಇದರ ಕೆಲವು ಲಾಭಗಳು ಪ್ರತ್ಯಕ್ಷವಾಗಿದ್ದರೆ ಮತ್ತೆ ಕೆಲವು ಪರೋಕ್ಷವಾಗಿವೆ. ಈ ಯೋಜನೆಯ ಧನಾತ್ಮಕ ಪರಿಣಾಮವು ಅನೇಕ ವಲಯಗಳಲ್ಲಿ ಕಂಡುಬರುತ್ತಿದೆ. ಪ್ರಯಾಣದಿಂದ ಉಳಿತಾಯವಾಗುವ ಹಣದ ವಿನಿಯೋಗದ ಸ್ವರೂಪವೇನಿರಬಹುದು? ಹೀಗೆ ಉಳಿತಾಯವಾಗುವ ಹಣ ವಸ್ತುಗಳ ಖರೀದಿಗೆ ಇಲ್ಲವೇ ಪುರುಷರ ವಿವಿಧ ಚಟಗಳಿಗೆ ಬಳಕೆಯಾಗುತ್ತವೆ ಎನ್ನುವ ಮಾತುಗಳನ್ನು ಚರ್ಚೆಯ ದೃಷ್ಟಿಯಿಂದ ಒಪ್ಪೋಣ. ಆದರೆ ಅನೇಕ ಸಮೀಕ್ಷೆಗಳ ಪ್ರಕಾರ ಭಾರತದ ಪ್ರತೀ ಗ್ರಾಮೀಣ ಕುಟುಂಬವು ತನ್ನ ಒಟ್ಟು ಆದಾಯದಲ್ಲಿ ಶೇ. 3.31 ಅನ್ನು ತನ್ನ ಸದಸ್ಯರ ಆರೋಗ್ಯ ಕಾಪಾಡಿಕೊಳ್ಳಲು ಬಳಸುತ್ತದೆ. ನಗರ ಪ್ರದೇಶದ ಕುಟುಂಬಗಳು ಶೇ. 5.15ರಷ್ಟು ಪ್ರಮಾಣವನ್ನು ಆರೋಗ್ಯದ ಮೇಲೆ ವೆಚ್ಚ ಮಾಡುತ್ತಿವೆ. ಇವು ತುರ್ತು ಸಂದರ್ಭದ ನಿರ್ವಹಣೆ, ಔಷಧಿಗಳ ಖರೀದಿ, ವಿವಿಧ ವೈದ್ಯಕೀಯ ಪರೀಕ್ಷೆಗಳಿಗೆ ಬಳಕೆಯಾಗುವ ಔಟ್-ಆಫ್-ಪಾಕೆಟ್ ವೆಚ್ಚಗಳಾಗಿರುತ್ತವೆ. ಶುಲ್ಕರಹಿತ ಪ್ರಯಾಣದಿಂದ ಉಳಿತಾಯವಾದ ಹಣ ಆರೋಗ್ಯ ನಿರ್ವಹಣೆಗೆ ಬಳಕೆಯಾಗುವುದರಿಂದ ಒಂದಿಷ್ಟು ಆರ್ಥಿಕ ಹೊರೆಯನ್ನು ತಗ್ಗಿಸಿಕೊಳ್ಳುವ ಅವಕಾಶ ಕುಟುಂಬಕ್ಕೆ ದೊರೆಯುತ್ತದೆ. ಅಂದರೆ ಅಗತ್ಯ ಸರಕು ಮತ್ತು ಸೇವೆಗಳ ಮೇಲಿನ ಖರ್ಚು, ಸೇರಿದಂತೆ ಮಹಿಳೆಯರು ಮಾಡುತ್ತಿರುವ ವೆಚ್ಚವು ಸರಕಾರಗಳಿಗೆ ಆದಾಯವನ್ನು ತಂದಿತು. ರಾಜ್ಯದಾದ್ಯಂತ ಲಕ್ಷಾಂತರ ಸಗಟು ಮತ್ತು ಚಿಲ್ಲರೆ ಮಾರಾಟಗಾರರ ಲಾಭವನ್ನು ಹೆಚ್ಚಿಸಿದೆ. ಇದಕ್ಕೆ ಜಿಎಸ್‌ಟಿ ಸಂಗ್ರಹಣೆಯಲ್ಲಿನ ಏರಿಕೆ ಉದಾಹರಣೆಯಾಗಿದೆ. ಇದು ರಾಜ್ಯ ಆರ್ಥಿಕವಾಗಿ ದಿವಾಳಿಯೂ ಆಗುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ರಾಜಕೀಯ ನಾಯಕರ ರೀತಿ ಶಕ್ತಿ ಯೋಜನೆಯಿಂದ ಮಹಿಳೆಯರು ದಾರಿ ತಪ್ಪಿಲ್ಲ ಎನ್ನುವುದು ಸಾಬೀತಾಗಿದೆ. ರಾಜ್ಯ ಸರಕಾರ ಬಜೆಟ್‌ನಲ್ಲಿ ನೀಡುವ 6,500 ಕೋಟಿ ರೂ.ಗಳನ್ನು ಗಣಿತಸೂತ್ರದಲ್ಲಿ ಲೆಕ್ಕಮಾಡಲು ಸಾಧ್ಯವಿಲ್ಲ. ಇದರಿಂದ ಉತ್ಪತ್ತಿಯಾಗುತ್ತಿರುವ ಬಂಡವಾಳವನ್ನು ಸಾಮಾಜಿಕ ಅಭಿವೃದ್ಧಿಗೆ ಮಹಿಳೆಯರು ಮರು ವಿನಿಯೋಗಿಸುತ್ತಿದ್ದಾರೆ. ಹೀಗಾಗಿ ಶಕ್ತಿ ಯೋಜನೆ ಮಹಿಳೆಯರಿಗೆ ಮಾತ್ರ ಹೆಚ್ಚಿನ ಅನುಕೂಲವಾಗಿಲ್ಲ. ಇದು ಅರ್ಥಿಕ ಮೌಲ್ಯವನ್ನು ಮೀರಿದೆ. ಹೀಗಾಗಿ ಶಕ್ತಿ ಯೋಜನೆ ಪ್ರಾರಂಭದಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಪೂರೈಸುವ ರಾಜಕೀಯ ಯೋಜನೆಯಾಗಿ ಕಂಡುಬಂದರೂ ಈಗ ಅದು ಸುಸ್ಥಿರ ಅಭಿವೃದ್ಧಿ ಸಾಧಿಸುವ ಬಹುದೊಡ್ಡ ಸಾಧನವಾಗಿ ಹೊರಹೊಮ್ಮಿದೆ.