ಈ.ಡಿ.ಯ ಮುಖವಾಡ ಕಳಚಿದ ಸುಪ್ರೀಂ ಕೋರ್ಟ್

Update: 2024-04-04 05:33 GMT
Editor : Thouheed | Byline : ಎನ್. ಕೇಶವ್

ಮಂಗಳವಾರ ಆಮ್ ಆದ್ಮಿ ಪಕ್ಷದ ಸಂಜಯ್ ಸಿಂಗ್ ಅವರಿಗೆ ಜಾಮೀನು ಕೊಡುವಾಗ ಸುಪ್ರೀಮ್ ಕೋರ್ಟ್ ಈ.ಡಿ.ಯ ಬಂಡವಾಳವನ್ನು ಈ ದೇಶದೆದುರು ಸಂಪೂರ್ಣವಾಗಿ ಬಯಲು ಮಾಡಿಬಿಟ್ಟಿದೆ.

ಯಾಕೆ 6 ತಿಂಗಳಿಂದ ಸಂಜಯ್ ಸಿಂಗ್ ಅವರನ್ನು ಜೈಲಿನಲ್ಲಿಡಲಾಗಿದೆ? ಅವರ ಮೇಲಿನ ಲಂಚ ಆರೋಪವನ್ನು ಸಾಬೀತುಪಡಿಸುವ ಪುರಾವೆ ಏನಿದೆ? ಸಂಜಯ್ ಸಿಂಗ್ ಹೆಸರು ಎತ್ತಿರುವ ವ್ಯಕ್ತಿ ಹಿಂದಿನ ಅಷ್ಟೂ ಹೇಳಿಕೆಗಳಲ್ಲಿ ಸಿಂಗ್ ಹೆಸರನ್ನೇ ಹೇಳದಿರುವಾಗ ಆತನ ಒಂದು ಹೇಳಿಕೆಯನ್ನು ಮಾತ್ರ ಪರಿಗಣಿಸಿ ಸಿಂಗ್ ಅವರನ್ನು ಜೈಲಿಗೆ ಹಾಕಲಾಗಿದೆ. ಆದರೆ ಯಾವುದೇ ಹಣವನ್ನು ಜಪ್ತಿ ಮಾಡಲಾಗಿದೆಯೇ? ಇದೆಲ್ಲದಕ್ಕೂ ಸಮಂಜಸ ಉತ್ತರ ಬೇಕೆಂದು ಸುಪ್ರೀಂ ಕೋರ್ಟ್ ಕೇಳುತ್ತಿದ್ದಂತೆಯೇ ಈ.ಡಿ. ತಣ್ಣಗಾಗಿ ಹೋಗಿತ್ತು. ಅದರ ಬಳಿ ಇವಾವುದಕ್ಕೂ ಉತ್ತರಗಳಿರಲಿಲ್ಲ.

ಸುಪ್ರೀಂ ಕೋರ್ಟ್ ಮುಂದೆ ಈ.ಡಿ. ಮೌನ ವಹಿಸಿದ್ದರಿಂದ ಅದರ ಬಂಧನದ ಆಟಕ್ಕೆ ತೆರೆ ಬಿದ್ದಂತಾಗಿದೆ. ಜಾಮೀನು ಸಿಗದಂತೆ ಕೂಡ ಅದು ಹೇಗೆ ಆಟವಾಡಿಕೊಂಡು ಬಂತು ಎಂಬುದು ಕೂಡ ಇಡೀ ದೇಶಕ್ಕೆ ಗೊತ್ತಾಗಿದೆ. ವಿಪಕ್ಷ ನಾಯಕರು ಈ.ಡಿ. ಕ್ರೌರ್ಯ ಮತ್ತು ದಮನ ನೀತಿಯ ಬಲಿಪಶುವಾಗುತ್ತಿರುವುದು ಕೂಡ ಇದರಿಂದ ಗೊತ್ತಾಗುತ್ತಿದೆ.

ದಿಲ್ಲಿ ಮದ್ಯ ಪ್ರಕರಣದಲ್ಲಿ ಆರೋಪಿಯೊಬ್ಬ ಅಪ್ರೂವರ್ ಆಗಿ ಕೇಜ್ರಿವಾಲ್ ಬಗ್ಗೆ ಹೇಳಿಕೆ ನೀಡಿದ್ದನ್ನೇ ಇಟ್ಟುಕೊಂಡು ಈಗ ಕೇಜ್ರಿವಾಲ್ ಅವರನ್ನೂ ಜೈಲಿಗೆ ತಳ್ಳಲಾಗಿದೆ. ಹೇಗೆ ಒಬ್ಬ ವ್ಯಕ್ತಿಯ ಹೇಳಿಕೆ ಆಧರಿಸಿ ಬಂಧಿಸಲಾಗುತ್ತದೆ? ಹಿಂದಿನ ಹೇಳಿಕೆಗಳಲ್ಲಿ ಆ ವ್ಯಕ್ತಿ ಸಂಜಯ್ ಸಿಂಗ್ ಹೆಸರನ್ನೇ ಹೇಳಿರಲಿಲ್ಲ. ಅಲ್ಲದೆ ಯಾವುದೇ ಹಣ ಕೂಡ ಜಪ್ತಿಯಾಗಿಲ್ಲ ಎಂಬ ಪ್ರಶ್ನೆ ಎದ್ದಿದೆ.

ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಮಾರ್ಪಟ್ಟಿರುವ ಉದ್ಯಮಿ ದಿನೇಶ್ ಅರೋರಾ ತನ್ನ ಆರಂಭಿಕ ಹೇಳಿಕೆಗಳಲ್ಲಿ ಸಿಂಗ್ ಅವರನ್ನು ಹೆಸರಿಸಿರಲೇ ಇಲ್ಲ. ಈ.ಡಿ. ಕುಣಿಕೆಯಿಂದ ತಪ್ಪಿಸಿಕೊಳ್ಳಲು ದಿನೇಶ್ ಅರೋರಾ ಅಪ್ರೂವರ್ ಆಗಿ ಬದಲಾಗಿದ್ದು ಬಯಲಾಗಿತ್ತು. ಆ ವ್ಯಕ್ತಿಯನ್ನು ಬಿಟ್ಟು ಸಂಜಯ್ ಸಿಂಗ್ ಅವರನ್ನು ಜೈಲಿಗೆ ತಳ್ಳಲಾಗಿತ್ತು. ಕಳೆದ ಅಕ್ಟೋಬರ್ 4ರಂದು ಸಂಜಯ್ ಸಿಂಗ್ ಅವರನ್ನು ಬಂಧಿಸಲಾಗಿತ್ತು.

ಅದಕ್ಕಿಂತ ಒಂದು ದಿನ ಮೊದಲು ದಿಲ್ಲಿ ವಿಶೇಷ ಕೋರ್ಟ್ ನ್ಯಾಯಾಧೀಶರು ರಾಘವ್ ಮಾಂಗುಟಾ ಹಾಗೂ ದಿನೇಶ್ ಅರೋರಾ ಇಬ್ಬರೂ ಸಾಕ್ಷಿಗಳಾಗಬೇಕೆಂಬ ಷರತ್ತಿನ ಮೇಲೆಯೇ ಮಾಫಿ ನೀಡಿದ್ದರು.

ಶರತ್ ರೆಡ್ಡಿ ಕೂಡ ಇದೇ ಹಿನ್ನೆಲೆಯಲ್ಲಿ ಈ ಪ್ರಕರಣದಿಂದ ಪಾರಾಗಿದ್ದರು. ಶರತ್ ರೆಡ್ಡಿಯ ಅರಬಿಂದೋ ಫಾರ್ಮಾ ಕಂಪೆನಿಯಿಂದ ಬಿಜೆಪಿಗೆ 55 ಕೋಟಿ ರೂ. ದೇಣಿಗೆ ಬಂದಿತ್ತು.

ಸಾಕ್ಷಿಯಾಗಿ ಬದಲಾಗಿದ್ದ ದಿನೇಶ್ ಅರೋರಾಗೆ ಆತನ 25ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ಸ್ಪೇನ್‌ಗೆ ಹೋಗುವುದಕ್ಕೂ ಕೋರ್ಟ್ ಸಮ್ಮತಿ ಕೊಟ್ಟಿತ್ತು. ಹೇಗಿದೆ ಅಲ್ಲವೇ ಈ ಈ.ಡಿ. ತಮಾಷೆ ?

ಪ್ರಕರಣದಲ್ಲಿ ದಿಲ್ಲಿ ಸಿಎಂ ಮತ್ತು ಡಿಸಿಎಂ ಜೈಲಿನಲ್ಲಿದ್ದಾರೆ. ಆದರೆ ಸರಕಾರಿ ಸಾಕ್ಷಿಯಾಗಿರುವ ಆರೋಪಿ ಮಾತ್ರ ಸ್ಪೇನ್‌ನಲ್ಲಿ ಸಂತಸದಿಂದ ಕಾಲಕಳೆಯುತ್ತಿದ್ದಾನೆ.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ದೀಪಂಕರ್ ದತ್ತಾ ಮತ್ತು ಪ್ರಸನ್ನ ಬಿ. ವರಾಳೆ ಅವರಿದ್ದ ಸುಪ್ರೀಂ ಕೋರ್ಟ್ ಪೀಠ, ಸಂಜಯ್ ಸಿಂಗ್ 2 ಕೋಟಿ ರೂ. ಲಂಚ ಪಡೆದ ಆರೋಪದ ವಿಚಾರವಾಗಿ ಏನು ಪುರಾವೆ ಇದೆ ಎಂದು ಈ.ಡಿ.ಯನ್ನು ಪ್ರಶ್ನಿಸಿತು. ಅಲ್ಲದೆ ವಿಚಾರಣೆಯಿಲ್ಲದೆ ಅಥವಾ ಲಂಚದ ಹಣವನ್ನು ವಸೂಲಿ ಮಾಡದೆ ಆರು ತಿಂಗಳ ಕಾಲ ಅವರನ್ನು ಏಕೆ ಜೈಲಿನಲ್ಲಿಡಲಾಗಿದೆ ಎಂದು ಕೋರ್ಟ್ ಪ್ರಶ್ನಿಸಿತು.

ಉದ್ಯಮಿ ದಿನೇಶ್ ಅರೋರಾ ಆರಂಭಿಕ ಹೇಳಿಕೆಗಳಲ್ಲಿ ಸಂಜಯ್ ಸಿಂಗ್ ಅವರ ಹೆಸರನ್ನೇ ಹೇಳಿರಲಿಲ್ಲ. ಆನಂತರ ಅಂಥದೊಂದು ಹೇಳಿಕೆ ಬಂತು ಎಂದು ನ್ಯಾ.ಸಂಜೀವ್ ಖನ್ನಾ ಹೇಳಿದರು.

ಸಿಂಗ್ ಅವರನ್ನು ಇನ್ನೂ ಕಸ್ಟಡಿಯಲ್ಲಿರಿಸಿಕೊಳ್ಳುವ ಅಗತ್ಯವಿದೆಯೇ ಎಂಬ ಬಗ್ಗೆ ಈ.ಡಿ.ಯಿಂದ ಮಾಹಿತಿ ಪಡೆಯುವಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರಿಗೆ ಪೀಠ ಸೂಚಿಸಿತು.

ಜಾಮೀನನ್ನು ವಿರೋಧಿಸುವುದಾದಲ್ಲಿ ಅದಕ್ಕೆ ಪೂರಕ ಎಲ್ಲ ದಾಖಲೆಗಳನ್ನು ಹಾಜರುಪಡಿಸಬೇಕು. ಅದರ ಆಧಾರದಲ್ಲಿ ನಿರ್ಧರಿಸುವುದಾಗಿ ಕೋರ್ಟ್ ಹೇಳಿತು.

ಅದಾದ ಬಳಿಕ, ಸಿಂಗ್ ಬಿಡುಗಡೆಗೆ ಈ.ಡಿ. ಒಪ್ಪಿದೆ, ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ರಾಜು ಕೋರ್ಟ್‌ಗೆ ತಿಳಿಸಿದರು.

ಜಾಮೀನು ವಿರೋಧಿಸುವುದೇ ಆದಲ್ಲಿ ಎಲ್ಲವನ್ನೂ ದಾಖಲೆ ಸಹಿತ ಹೇಳಬೇಕಿತ್ತು. ಆರು ತಿಂಗಳಿಂದ ಏನಾಗಿದೆ ಎಂಬುದನ್ನು ಹೇಳಬೇಕಿತ್ತು. ಸಂಜಯ್ ಸಿಂಗ್ 2 ಕೋಟಿ ರೂ. ಲಂಚ ಪಡೆದಿರುವುದನ್ನು ಸಾಬೀತು ಪಡಿಸಬೇಕಿತ್ತು. ಆದರೆ ಕೋರ್ಟ್ ಎದುರು ಈ.ಡಿ. ಬಳಿ ಉತ್ತರವೇ ಇರಲಿಲ್ಲ. ಹಾಗಾಗಿ ಅದು ಸಂಜಯ್ ಸಿಂಗ್ ಜಾಮೀನಿಗೆ ತಕರಾರು ತೆಗೆಯಲೇ ಇಲ್ಲ. ಜಾಮೀನಿಗೆ ವಿರೋಧ ವ್ಯಕ್ತಪಡಿಸುವ ಅದರ ದಾರಿಗಳೆಲ್ಲ ಬಂದ್ ಆಗಿದ್ದವು. ಜಾಮೀನಿಗೆ ವಿರೋಧವಿಲ್ಲ ಎಂದು ಬಿಟ್ಟಿತು ಈ.ಡಿ.

ಅಕ್ಟೋಬರ್‌ನಲ್ಲಿ ಸಂಜಯ್ ಸಿಂಗ್ ಬಂಧನವಾಗಿತ್ತು. ಅಲ್ಲಿಂದ ಶುರುವಾಗಿ ಈ.ಡಿ. ಸುಳ್ಳುಗಳನ್ನೇ ಹೇಳಿಕೊಂಡು ಬಂತು. ದೇಶದ ಅತ್ಯುನ್ನತ ತನಿಖಾ ಸಂಸ್ಥೆ ಬಳಿ, ಸ್ವತಃ ತಾನು 6 ತಿಂಗಳಿಂದ ಜೈಲಿನಲ್ಲಿ ಇರಿಸಿರುವ ವಿಪಕ್ಷ ನಾಯಕನನ್ನು ಯಾಕೆ ಜೈಲಿನಲ್ಲಿ ಇರಿಸಲಾಗಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆ ವಿಪಕ್ಷ ನಾಯಕನ ಬಗ್ಗೆ ತಾನು ಮಾಡಿರುವ ಆರೋಪವನ್ನು ಸಾಬೀತುಪಡಿಸುವ ಪುರಾವೆಗಳೂ ಇಲ್ಲ. 2 ಕೋಟಿ ಲಂಚ ಸ್ವೀಕಾರದ ಆರೋಪ ಮಾಡಿದ ಅದಕ್ಕೆ, ಹಣ ಯಾರು ಕೊಟ್ಟರು, ಹೇಗೆ ಬಂತು ಎಂದು ಹಣದ ಜಾಡನ್ನು ಪತ್ತೆ ಮಾಡುವುದೂ ಸಾಧ್ಯವಾಗಿಲ್ಲ.

ಹೀಗೆ ಏನೂ ಇಲ್ಲದೆ, ಯಾರಿಂದಲೋ ಒಂದು ಹೇಳಿಕೆಯನ್ನು ಬಲವಂತವಾಗಿ ಪಡೆದು, ಆ ಹೇಳಿಕೆ ಇಟ್ಟುಕೊಂಡು ವಿಪಕ್ಷ ನಾಯಕರನ್ನು ಜೈಲಿನಲ್ಲಿಡಲಾಗುತ್ತಿದೆ. ಏನಾಗುತ್ತಿದೆ ಈ ದೇಶದಲ್ಲಿ?

ಧರ್ಮದ ಹೆಸರು ಹೇಳಿಕೊಂಡು, ಮಂದಿರದ ಹೆಸರು ಹೇಳಿಕೊಂಡು ರಾಜಕೀಯ ಮಾಡುವ, ಜನರನ್ನು ಭ್ರಮೆಯಲ್ಲಿ ಇಡುವ ಈ ಸರಕಾರ ವಿಪಕ್ಷ ನಾಯಕರನ್ನೆಲ್ಲ ಏನೇನೋ ನಿರಾಧಾರ ಆರೋಪ ಹೊರಿಸಿ ಜೈಲಿಗೆ ಅಟ್ಟುತ್ತ ಏನು ಮಾಡಲು ಹೊರಟಿದೆ?

ಸಂಜಯ್ ಸಿಂಗ್ ಜಾಮೀನು ಆದೇಶ ಹೊರಬೀಳುತ್ತಿದ್ದಂತೆ ಎಎಪಿ ನಾಯಕರು ಇದೇ ಪ್ರಶ್ನೆಯನ್ನು ಎತ್ತಿದ್ದಾರೆ. ‘‘ಈ ದಿನ ದೇಶದ ಪ್ರಜಾಪ್ರಭುತ್ವದ ಪಾಲಿನ ಮಹತ್ವದ ದಿನ ಮತ್ತು ಭರವಸೆಯ ಕ್ಷಣ’’ ಎಂದು ದಿಲ್ಲಿ ಸಚಿವ ಸೌರಭ್ ಭಾರದ್ವಾಜ್ ಹೇಳಿದ್ದಾರೆ.

‘‘ಸಂಜಯ್ ಸಿಂಗ್ ಅವರಿಗೆ ಜಾಮೀನು ಸಿಕ್ಕಿರುವುದು ಸತ್ಯ ಯಾವಾಗಲೂ ಗೆಲ್ಲುತ್ತದೆ ಎಂಬುದನ್ನು ಸಾಬೀತುಪಡಿಸಿದೆ. ನೀವು ಸತ್ಯವನ್ನು ನಿಗ್ರಹಿಸಬಹುದು, ಆದರೆ ಅದನ್ನು ಅಳಿಸಲು ಸಾಧ್ಯವಿಲ್ಲ. ಎಎಪಿ ಉನ್ನತ ನಾಯಕರನ್ನು ಸುಳ್ಳು ಪ್ರಕರಣಗಳಲ್ಲಿ ಹೇಗೆ ಬಂಧಿಸಲಾಯಿತು ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ. ಇಂದು ಸಂಜಯ್ ಸಿಂಗ್ ಜಾಮೀನು ಕುರಿತ ವಿಚಾರಣೆಯಲ್ಲಿ ಪ್ರಮುಖ ವಿಷಯಗಳು ಎಲ್ಲರ ಮುಂದೆ ಬಯಲಾಗಿವೆ’’ ಎಂದು ಸಚಿವೆ ಅತಿಶಿ ಹೇಳಿದ್ದಾರೆ.

ಇಷ್ಟೊಂದು ಕೀಳು ಹಾಗೂ ಅಪಾಯಕಾರಿ ಮಟ್ಟದಲ್ಲಿ ಆಳುವ ಪಕ್ಷದ ಹೊಲಸು ಆಟಗಳ ದಾಳವಾಗಿ ಬಿಟ್ಟಿದೆಯೆ ಈ.ಡಿ.?

ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿ ಎಎಪಿ ನಾಯಕ ಅಕ್ರಮ ಹಣ ಅಥವಾ ಕಿಕ್‌ಬ್ಯಾಕ್‌ಗಳನ್ನು ಪಡೆದಿರುವುದಾಗಿಯೂ, ಪಿತೂರಿಯಲ್ಲಿ ಅವರ ಪಾತ್ರ ಇರುವುದಾಗಿಯೂ ಈ.ಡಿ. ಆರೋಪಿಸಿತ್ತು. ತಾನು ಯಾವುದೇ ಪಾತ್ರ ಹೊಂದಿಲ್ಲ ಎಂದು ಸಿಂಗ್ ಅವರು ಹೈಕೋರ್ಟ್ ನಲ್ಲಿ ಜಾಮೀನು ಕೋರಿದ್ದರು. ಹೈಕೋರ್ಟ್‌ನಲ್ಲಿ ಈ.ಡಿ. ಜಾಮೀನು ಅರ್ಜಿಯನ್ನು ವಿರೋಧಿಸಿತ್ತು. ಆದರೆ, ಆರು ತಿಂಗಳ ಬಳಿಕವೂ ಆ ಯಾವ ಆರೋಪಗಳನ್ನೂ ಸಾಬೀತು ಪಡಿಸಲಾಗಲಿಲ್ಲ.

ಬದಲಾಗಿ, ಸುಪ್ರೀಂ ಕೋರ್ಟ್ ಎದುರಿನಲ್ಲಿ ಈ.ಡಿ. ತತ್ತರಿಸಿಹೋಗಿದೆ. ಉತ್ತರವಿಲ್ಲದೆ ಮೌನ ವಹಿಸಿದೆ. ಜಾಮೀನಿಗೆ ತಕರಾರು ಎತ್ತಲಾರದೆ ತನ್ನ ಕ್ರೂರ ನಾಟಕವನ್ನು ತಾನೇ ಬಯಲು ಮಾಡಿಕೊಂಡಿದೆ.

ಈ.ಡಿ. ಸರಕಾರದ ಪರವಾಗಿ ನಾಟಕವಾಡುವುದು, ವಸೂಲಿ ದಂಧೆಗೆ ಇಳಿದಿರುವುದು, ಮೋದಿ ಸರಕಾರ ಈ.ಡಿ.ಯಂಥ ಏಜೆನ್ಸಿಯನ್ನು ಬಳಸಿಕೊಂಡು ವಿಪಕ್ಷಗಳನ್ನು ಹಣಿಯಲು ನಿಂತಿರುವುದು, ತನಗೆ ವಿರೋಧವೇ ಇಲ್ಲದ ಸ್ಥಿತಿಯನ್ನು ನಿರ್ಮಾಣ ಮಾಡಿಕೊಳ್ಳುತ್ತಿರುವುದು, ಇದೆಲ್ಲದರ ನಡುವೆ ಮತ್ತೊಂದು ಹೌದಪ್ಪ ಸಂಸ್ಥೆಯಾಗಿರುವ ಚುನಾವಣಾ ಆಯೋಗ ಲೆವೆಲ್ ಪ್ಲೇಯಿಂಗ್ ಫೀಲ್ಡ್ ಬಗ್ಗೆ ಮಾತಾಡುವುದು ಎಲ್ಲವೂ ದೇಶದಲ್ಲಿನ ಕರಾಳ ವಾಸ್ತವವನ್ನು ಕಾಣಿಸುತ್ತಿವೆ. ದೊಡ್ಡ ವಿಪರ್ಯಾಸವಾಗಿ ಕಾಣಿಸುತ್ತಿವೆ. ಆದರೆ ಮಡಿಲ ಮೀಡಿಯಾಗಳು ಮೋದಿಯ ಗುಣಗಾನ ಮಾಡಿಕೊಂಡೇ, ಈ ಅಸಹ್ಯದಲ್ಲಿ ತಮ್ಮದೂ ಪಾಲು ಸೇರಿಸುತ್ತಿವೆ.

ಆದರೆ ಜನತೆಗೆ ಸತ್ಯ ಗೊತ್ತಾಗುತ್ತಿರುವುದಂತೂ ನಿಜ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎನ್. ಕೇಶವ್

contributor

Similar News