ಸೌಜನ್ಯ ಪರ ನೋಟಾ ಬಳಕೆ ರಾಜಕೀಯ ವಂಚನೆ

Update: 2024-04-08 10:34 GMT

ಧರ್ಮಸ್ಥಳ ಗ್ರಾಮದಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಸೌಜನ್ಯ ಪರ ಹೋರಾಟಗಾರರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನೋಟಾಗೆ ಮತ ಚಲಾಯಿಸುವಂತೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇದು ಹೋರಾಟಗಾರರ 'ರಾಜಕೀಯ ವಂಚನೆ'ಯಲ್ಲದೆ ಇನ್ನೇನೂ ಅಲ್ಲ.

2012ರ ಅಕ್ಟೋಬರ್ 9 ರಂದು ಸೌಜನ್ಯಾ ಅವರನ್ನು ಅಪಹರಿಸಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಬೆಳ್ತಂಗಡಿ ಠಾಣಾ ಪೊಲೀಸರು ಮಾನಸಿಕ ಅಸ್ವಸ್ಥರಾಗಿದ್ದ ಸಂತೋಷ್ ರಾವ್ ಎಂಬವರನ್ನು ಬಂಧಿಸಿದ್ದರು. ಈ ಅತ್ಯಾಚಾರ ಮತ್ತು ಕೊಲೆಯ ಹಿಂದೆ "ಮುಂಡಾಸುಧಾರಿ ಮತ್ತು ಅವರ ಕುಟುಂಬದವರಿದ್ದಾರೆ" ಎಂದು ಆರೋಪಿಸಿ ಅವರ ಬಂಧನಕ್ಕಾಗಿ ದೊಡ್ಡ ಚಳವಳಿ ನಡೆದಿತ್ತು. ನಂತರ ಪ್ರಕರಣದ ತನಿಖೆಯನ್ನು ಸಿಐಡಿ, ಆ ಬಳಿಕ ಸಿಬಿಐಗೆ ವರ್ಗಾಯಿಸಲಾಗಿತ್ತು. ಸಿಬಿಐ ತನಿಖೆ ಪೂರ್ಣಗೊಳಿಸಿ ಸಂತೋಷ್ ರಾವ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. ಸೆಷನ್ಸ್ ನ್ಯಾಯಾಲಯ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂಸು ಸಂತೋಷ್‌ ರಾವ್‌ನನ್ನು ಖುಲಾಸೆಗೊಳಿಸಿ 2023ರ ಜೂನ್ 16ರಂದು ತೀರ್ಪು ನೀಡಿತ್ತು.

ಸೌಜನ್ಯ ಅತ್ಯಾಚಾರ-ಹತ್ಯೆಯಾದಾಗ ಮೊದಲು ಸೌಜನ್ಯ ಮನೆಗೆ ಬಂದು ಸಾಂತ್ವಾನ ಹೇಳಿದ್ದ ಕೇಮಾರು ಈಶ ವಿಠಲ ದಾಸ ಸ್ವಾಮೀಜಿಗಳು "ಈ ಪ್ರಕರಣದ ಹಿಂದೆ ಮುಂಡಾಸುಧಾರಿ ಇದ್ದಾರೆ. ಹಾಗಾಗಿ ಈ ಪ್ರಕರಣವನ್ನು ಸಿಬಿಐಗೆ ಕೊಡಬೇಕು" ಎಂದು ಆಗ್ರಹಿಸಿದ್ದರು. ನಂತರ ಹೋರಾಟದ ಕಣಕ್ಕಿಳಿದ ಎಡಪಂಥೀಯರು ಕೂಡಾ ಈ ಪ್ರಕರಣದ ಹಿಂದೆ ಧಾರ್ಮಿಕ ಮಾಫೀಯಾದ ಕೈವಾಡ ಇದೆ ಎಂದು ಆರೋಪಿಸಿ ಜನಾಂದೋಲನ‌ ಕಟ್ಟಿದ್ದರು. ಬೆಳ್ತಂಗಡಿಯಲ್ಲಿ ಎಡಪಂಥೀಯರು ನಡೆಸಿದ ಹಲವು ಸಮಾವೇಶಗಳಿಗೆ ಬಂದ ರಾಜ್ಯದ ಹಿರಿಯ ಸಾಹಿತಿ ಚಿಂತಕರಾದ ಕೆ ನೀಲಾ, ಮೀನಾಕ್ಷಿ ಬಾಳಿ ಮುಂತಾದವರು ಧಾರ್ಮಿಕ ಮಾಫಿಯಾದ ಹಿನ್ನಲೆಯನ್ನು ಬಯಲು ಮಾಡಿ ರಾಜ್ಯ‌ಮಟ್ಟದಲ್ಲಿ ಸೌಜನ್ಯ ಕೊಲೆಯನ್ನು ಚರ್ಚೆಯ ವಿಷಯವನ್ನಾಗಿಸಿದ್ದರು.

ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಸೌಜನ್ಯ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲೇ ಬೇಕು ಎಂದು ಹಠ ಹಿಡಿದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಳವಳಿ ಮುನ್ನಡೆಸಿದರು. ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಇಡೀ ಜಿಲ್ಲೆ ಸುತ್ತಿ ಗ್ರಾಮ ಗ್ರಾಮಗಳಲ್ಲಿ ಸಮಾವೇಶ ನಡೆಸಿದರು. ಜಿಲ್ಲೆಯ ಎಲ್ಲೆಡೆ ನಡೆದ ಸೌಜನ್ಯ ಪರ ಸಮಾವೇಶವು ಮುಂಡಾಸುಧಾರಿ ಮತ್ತು ಧಾರ್ಮಿಕ ಮಾಫಿಯಾದ ವಿರುದ್ದವೇ ಆಗಿತ್ತು. ಈ ಸಂದರ್ಭದಲ್ಲಿ ಅವರಿಗೆ ಜೊತೆಯಾದವರು ಗಿರೀಶ್ ಮಟ್ಟೆಣ್ಣನವರ್, ತಮ್ಮಣ್ಣ ಶೆಟ್ಟಿ, ಪ್ರಸನ್ನ ರವಿ ಮುಂತಾದ ಹೋರಾಟಗಾರರು. ಈ ಹೋರಾಟಗಾರರ ಹೋರಾಟದ ಪ್ರಾಮಾಣಿಕತೆ ಪ್ರಶ್ನಾತೀತ. ಮುಂಡಾಸುಧಾರಿಯ ವಿರುದ್ದ ಜನಾಭಿಪ್ರಾಯ ರೂಪಿಸುವಲ್ಲಿ ಇವರು ಪಟ್ಟ ಶ್ರಮ ಮತ್ತು ಅದಕ್ಕಾಗಿ ತೆತ್ತ ಬೆಲೆ ಊಹಾತೀತ ಎಂಬುದರಲ್ಲಿ ಎರಡು ಮಾತಿಲ್ಲ.

2014 ರಲ್ಲಿ "ಮೋದಿ ಪ್ರಧಾನಿಯಾದರೆ ಮಾತ್ರ ಸೌಜನ್ಯ ಹೋರಾಟಕ್ಕೆ ನ್ಯಾಯ ಸಿಗಲು ಸಾಧ್ಯ" ಎಂದು ಹೇಳಿಕೆ ನೀಡಿದ್ದ ಮಹೇಶ್ ಶೆಟ್ಟಿ ತಿಮರೋಡಿಯವರು ಅಂದಿನ ಬಿಜೆಪಿ ಅಭ್ಯರ್ಥಿಗೆ ಬಹಿರಂಗ ಬೆಂಬಲ ಘೋಷಿಸಿದ್ದರು. ಮೋದಿ ಪ್ರಧಾನಿಯಾದರು. ಮೋದಿ ಪ್ರಧಾನಿಯಾದ ಬಳಿಕ ಮುಂಡಾಸುಧಾರಿಗೆ ಸಾಂವಿಧಾನಿಕ ಹುದ್ದೆ, ಪ್ರಶಸ್ತಿ ಪುರಸ್ಕಾರ, ಹಾರ ತುರಾಯಿಗಳು, ಮುಂಡಾಸಿಗೆ ಗರಿಗಳು ಜಾಸ್ತಿಯಾದವು‌ !

ಈಗ 2024 ರ ಲೋಕಸಭಾ ಚುನಾವಣೆ ನಡೆಯುತ್ತಿದೆ. ಇದು ಸೌಜನ್ಯ ಪ್ರಕರಣಕ್ಕೆ ತಾರ್ಕಿಕ ಅಂತ್ಯ ನೀಡಲು, ಹಿಂದೆ ಮಾಡಿದ್ದ ತಪ್ಪುಗಳನ್ನು ಸರಿಪಡಿಸಲು ಸಕಾಲ ! ಸೌಜನ್ಯ ಅತ್ಯಾಚಾರ-ಕೊಲೆ ಹಿಂದೆ ಮುಂಡಾಸುಧಾರಿ ಇದ್ದಾರೆ ಎಂದು ಈ ವರೆಗೆ ಆರೋಪಿಸಿ ಚಳವಳಿ ಕಟ್ಟಲಾಗಿದೆ. ಆ ಮುಂಡಾಸುಧಾರಿ ಯಾವ ಪಕ್ಷದಲ್ಲಿದ್ದಾರೆ ? ಆ ಮುಂಡಾಸುಧಾರಿ ಯಾವ ಪಕ್ಷದಿಂದ ಹುದ್ದೆ ಪಡೆದಿದ್ದಾರೆ ಎನ್ನುವುದು ಗೊತ್ತಿರುವ ವಿಷಯವೇ ಆಗಿದೆ. ಮುಂಡಾಸುಧಾರಿಯ ಇಡೀ ಪಕ್ಷ ಮುಂಡಾಸುಧಾರಿಯ ರಕ್ಷಣೆ ಮತ್ತು ಆರಾಧನೆಯಲ್ಲಿ ತೊಡಗಿದೆ. ಕಾಂಗ್ರೆಸ್ ಪಕ್ಷದ ನಾಯಕರು ಮುಂಡಾಸುಧಾರಿ ವಿರುದ್ದ ನಿಲ್ಲದಿದ್ದರೂ ಪರವಂತೂ ನಿಂತಿಲ್ಲ. ಕಾಂಗ್ರೆಸ್ ಪಕ್ಷ ಮುಂಡಾಸುಧಾರಿಗೆ ಯಾವ ಸಂವಿಧಾನಿಕ ಹುದ್ದೆಯನ್ನೂ ನೀಡಿಲ್ಲ. ಹಾಗೆ ನೋಡಿದರೆ ಸೌಜನ್ಯ ಪರ ಹೋರಾಟಕ್ಕೆ ಗಟ್ಟಿ ಊರುಗೋಲಾಗಿ ನಿಂತಿದ್ದು ಕಾಂಗ್ರೆಸ್ ನ ಮಾಜಿ ಶಾಸಕ ವಸಂತ ಬಂಗೇರ. ಒಂದು ಹಂತದಲ್ಲಿ ಸೌಜನ್ಯ ಪರ ಹೋರಾಟಗಾರರನ್ನು ಹತ್ತಿಕ್ಕಲೇಬೇಕು ಎಂಬ ನಿರ್ಧಾರವನ್ನು ಮುಂಡಾಸುಧಾರಿಯ ಪಕ್ಷ ಮತ್ತು ಪೊಲೀಸರು ತೆಗೆದುಕೊಂಡಾಗ ಅದಕ್ಕೆ ಅಡ್ಡಿಯಾಗಿದ್ದು ಕಾಂಗ್ರೆಸ್ ನ ಮಾಜಿ ಶಾಸಕ ವಸಂತ ಬಂಗೇರರು !

ಕಾಂಗ್ರೆಸ್ ನಾಯಕರು ಕೂಡಾ ಸೈದ್ದಾಂತಿಕ ಸ್ಪಷ್ಟತೆ ಇಲ್ಲದೆ ಬಿಜೆಪಿಯ ಮುಂಡಾಸುಧಾರಿಯ ಕಾಲಿಗೆ ಬೀಳಬಹುದು. ಆದರೆ ಇಡೀ ಕಾಂಗ್ರೆಸ್ ಪಕ್ಷ ಮುಂಡಾಸುಧಾರಿಯ ಪಕ್ಷವನ್ನು ಬೆಂಬಲಿಸಲ್ಲ. ಕನಿಷ್ಠ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರರಿಗಾದರೂ ಮುಂಡಾಸುಧಾರಿ ವಿರುದ್ದ ನಿಲ್ಲಲ್ಲು ಸ್ವಾತಂತ್ರ್ಯವನ್ನಾದರೂ ನೀಡಿದೆ.

ಹೋರಾಟ ಎನ್ನುವುದು ಒಂದು ರಾಜಕೀಯ. ಸಮಾಜವನ್ನು ರೂಪಿಸುವುದೇ ರಾಜಕೀಯ. ಹಾಗಾಗಿ ರಾಜಕೀಯ ಸ್ಪಷ್ಟತೆ, ಬದ್ದತೆ ಇಲ್ಲದ ಹೋರಾಟ ಎನ್ನುವುದು ಒಂದು ವಂಚನೆಯಷ್ಟೆ. ನೋಟಾ ಕೂಡಾ ಒಂದು ರಾಜಕೀಯ ಅಸ್ತ್ರ ನಿಜ. ಆದರೆ ಸೌಜನ್ಯ ಪರ ಹೋರಾಟದಲ್ಲಿ ಎದುರಾಳಿ ಸ್ಪಷ್ಟವಿದ್ದಾರೆ. ಎದುರಾಳಿಯ ಪಕ್ಷವೂ ಸ್ಪಷ್ಟವಾಗಿರುವಾಗ ಎದುರಾಳಿ ಪ್ರತಿನಿಧಿಸುವ ಪಕ್ಷದ ವಿರುದ್ದ ಮತ ಚಲಾಯಿಸಿ ಎಂದು ಕರೆ ಕೊಡದೇ ನೋಟಾ ಬಳಸುವಂತೆ ಜಾಗೃತಿ ಮೂಡಿಸುವುದು ರಾಜಕೀಯ ವಂಚನೆಯಲ್ಲದೆ ಇನ್ನೇನೂ ಅಲ್ಲ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ನವೀನ್ ಸೂರಿಂಜೆ

contributor

Similar News