ಶಾಂತಿದೂತನ ಎದೆಗೆ ಬಿದ್ದ ‘ಧರ್ಮ ರಕ್ಷಣೆ’ಯ ಹೆಸರಿನ ಆ ಮೂರು ಗುಂಡುಗಳು

ಕೊಂದವರು ಯಾರು? ಇದು ಜಗತ್ತಿನ, ತತ್ರಾಪಿ ಭಾರತದ ಜನಮನದಲ್ಲಿ ಭುಗಿಲೆದ್ದ ಪ್ರಶ್ನೆ. ಅವನೇನಾದರೂ ಮುಸ್ಲಿಮನಾಗಿದ್ದರೆ? ಆಗಬಹುದಾದ ಭೀಕರ ಪರಿಣಾಮವನ್ನು ಊಹಿಸುವುದೂ ಅಸಾಧ್ಯ! ಆ ಸಂಜೆ ಆರು ಗಂಟೆ ಆಕಾಶವಾಣಿ ವಾರ್ತೆಯಲ್ಲಿ ಸಾರಲಾಯಿತು. ‘ಈಗ ಸ್ವಲ್ಪ ಹೊತ್ತಿನ ಮುಂಚೆ ಮಹಾತ್ಮಾ ಗಾಂಧಿಯವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಕೊಂದವನು ಒಬ್ಬ ಹಿಂದೂ!’ ಈ ಒಂದು ಸಾಲಿನ, ಎರಡು ವಾಕ್ಯದ ಸುದ್ದಿ ಭೀಕರ ಹಾಗೂ ವ್ಯಾಪಕ ಹಿಂಸಾಚಾರಗಳಿಂದ ಈ ದೇಶವನ್ನು ಉಳಿಸಿತು. ಮುಖಂಡರು ನಿಟ್ಟುಸಿರುಬಿಟ್ಟು ಇದ್ದದ್ದರಲ್ಲಿಯೇ ಸಮಾಧಾನಪಟ್ಟರು. ಒಂದು ವೇಳೆ ಗಾಂಧೀಜಿ ಹಂತಕ ಮುಸ್ಲಿಮನಾಗಿದ್ದಿದ್ದರೆ ಈ ದೇಶದಲ್ಲಿ ಘನಘೋರ -ಹಿಂದೆ ಎಂದೆಂದೂ ಕಾಣದಿದ್ದ, ಮುಂದೆ ಎಂದೆಂದೂ ಕಾಣಲಾಗದ ಹಿಂದೂ-ಮುಸ್ಲಿಮ್ ಮಾರಣಹೋಮ ನಿಸ್ಸಂಶಯವಾಗಿ ನಡೆದುಹೋಗುತ್ತಿತ್ತು.

Update: 2024-01-30 05:29 GMT

ಅಂದು ಜನವರಿ 30, 1948. ಶುಕ್ರವಾರ ಸಂಜೆ 4 ಗಂಟೆ.

ಮಹಾತ್ಮಾ ಗಾಂಧಿ, ಗೃಹಮಂತ್ರಿ ವಲ್ಲಭಭಾಯಿ ಪಟೇಲರೊಡನೆ ಸಮಾಲೋಚನೆ ನಡೆಸುತ್ತಿದ್ದರು. ಪಟೇಲರು ಮಂತ್ರಿಪದವಿಗೆ ರಾಜೀನಾಮೆ ಕೊಡುವುದಾಗಿ ಭಾರತದ ಗವರ್ನರ್ ಜನರಲ್ ಲೂಯಿ ಮೌಂಟ್ ಬ್ಯಾಟನ್ರಿಗೆ ಪತ್ರ ಬರೆದಿದ್ದರು. ಆ ಪತ್ರವನ್ನು ಮೌಂಟ್ ಬ್ಯಾಟನ್ ಗಾಂಧೀಜಿಯ ಗಮನಕ್ಕೆ ತಂದು - ಪಟೇಲ್ ರಾಜೀನಾಮೆ ಕೊಡದಂತೆ ಪ್ರಯತ್ನಿಸಬೇಕೆಂದು ಸೂಚಿಸಿದರು. ಆ ವಿಚಾರವಾಗಿ ಗಾಂಧೀಜಿ ತಮ್ಮ ಆಪ್ತ ಶಿಷ್ಯ ಪಟೇಲರನ್ನು ಕರೆಸಿಕೊಂಡು ಸಮಾಲೋಚನೆ ನಡೆಸಿದ್ದರು. ಸಮಯ ಎಷ್ಟಾಯಿತೆಂಬುದರ ಕಡೆ ಗಮನವಿರಲಿಲ್ಲ. ಐದು ಗಂಟೆಗೆ ಪ್ರಾರ್ಥನಾ ಸಭೆ ಸಮಯಕ್ಕೆ ಸರಿಯಾಗಿ ಪ್ರಾರಂಭವಾಗಲೇಬೇಕಿತ್ತು. ಅದನ್ನೆಂದಿಗೂ ಗಾಂಧೀಜಿ ಅತಿಕ್ರಮಿಸಿರಲಿಲ್ಲ. ಆದರೆ ಅಂದು ಐದು ಗಂಟೆ ಮೀರಿ ಹತ್ತು ನಿಮಿಷಗಳಾಗುತ್ತಾ ಬಂದಿತ್ತು.

ಗಾಂಧೀಜಿ ತಮ್ಮ ‘ಸಮಯ ಸೂಚಕರು’ ಎಂದೇ ಪ್ರೀತಿಯಿಂದ ಕರೆಯುತ್ತಿದ್ದ ಅವರ ಮೊಮ್ಮಕ್ಕಳು ಆಭಾ ಮತ್ತು ಮನು ಎಂಬ ಯುವತಿಯರು ಸಂಕೋಚದಿಂದಲೇ ಗಾಂಧೀಜಿಗೆ ಗಡಿಯಾರ ತೋರಿಸಿದರು. ಗಾಂಧೀಜಿ ಒಂದೆರಡು ನಿಮಿಷಗಳಲ್ಲಿ ಮಾತು ನಿಲ್ಲಿಸಿದರು. ‘‘ಪ್ರಾರ್ಥನೆಗೆ ಹೊತ್ತಾಯಿತು’’ ಎಂದರು. ಪಟೇಲರು ಕೊಠಡಿಯಿಂದ ಹೊರನಡೆದರು. ಗಾಂಧೀಜಿ ಪ್ರಾರ್ಥನಾ ಸಭೆಗೆ ಹೊರಟು ನಿಂತರು. ತಮ್ಮ ಊರುಗೋಲು ಗಳೆಂದೇ ಗಾಂಧೀಜಿ ಕರೆಯುತ್ತಿದ್ದ ಆಭಾ ಮತ್ತು ಮನು ಗಾಂಧೀಜಿಯ ಎಡಬಲಗಳಲ್ಲಿ ನಿಂತರು. ಅವರ ಹೆಗಲ ಮೇಲೆ ಕೈ ಊರಿ ಗಾಂಧೀಜಿ ಪ್ರಾರ್ಥನಾ ಸಭೆಯ ಕಡೆ ನಿಧಾನವಾಗಿ ಹೆಜ್ಜೆ ಹಾಕಿದರು. ಜನವರಿ 12ರಿಂದ ಪ್ರಾರಂಭಿಸಿದ್ದ ಆಮರಣ ಉಪವಾಸವನ್ನು ನಿಲ್ಲಿಸಿ ಕೆಲವೇ ದಿನಗಳಾಗಿತ್ತು. ನಿಶ್ಯಕ್ತಿಯಿಂದ ಬಳಲಿದ್ದರು.

ಆಗಲೇ ಬಿರ್ಲಾ ಭವನದ ಹುಲ್ಲು ಮೈದಾನದಲ್ಲಿ ಜನ ಸೇರಿದ್ದರು. ಗಾಂಧೀಜಿ ಬಂದೊಡನೆ ದೂರ ನಿಂತಿದ್ದವರೆಲ್ಲರೂ ಪ್ರಾರ್ಥನಾ ಜಗಲಿಯ ಕಡೆ ನುಗ್ಗಿಬಂದರು. ಆ ಜನರ ಗುಂಪು ಬದಿಗೆ ಸರಿದು ಇಬ್ಭಾಗವಾಗಿ ಗಾಂಧೀಜಿಗೆ ದಾರಿಬಿಟ್ಟಿತು. ಕೆಲವರು ಕೈ ಮುಗಿದು ನಿಂತಿದ್ದರು. ಆಗ ಒಬ್ಬ ಖಾಕಿ ವಸ್ತ್ರಧಾರಿ ಧಾಂಡಿಗ ಯುವಕ ಗಾಂಧೀಜಿ ಕಡೆಗೆ ನುಗ್ಗಿ ಪಾದಕ್ಕೆ ನಮಸ್ಕರಿಸುವಂತೆ ನಟಿಸುತ್ತ ಮುಗಿದ ಕೈಗಳಿಂದ ಬಾಗಿದ. ಗಾಂಧೀಜಿಯ ಪಕ್ಕದಲ್ಲಿದ್ದ ಮನು ಗಾಂಧಿ ಬೇಡ ಬೇಡ ಎಂದು ಅವನನ್ನು ಮೆಲ್ಲನೆ ತಡೆಯಲು ಹೋದಳು. ಆ ಧಾಂಡಿಗ ಅವಳನ್ನು ಬಲವಾಗಿ ಪಕ್ಕಕ್ಕೆ ದೂಡಿ ಬಲಗೈಯಲ್ಲಿ ಬಚ್ಚಿಟ್ಟುಕೊಂಡಿದ್ದ ಪಿಸ್ತೂಲಿನಿಂದ ಗಾಂಧೀಜಿಯ ಎದೆಗೆ ನೇರವಾಗಿ ಗುಂಡಿಕ್ಕಿ ಮೂರು ಸಲ ಹೊಡೆದ !

‘ಢಂ!’ ‘ಢಂ!’ ‘ಢಂ!’

ಗಾಂಧೀಜಿ ‘ಹೇ ರಾಮ್’ ಎಂದು ಕೊನೆಯ ಸಲ ತಮ್ಮ ಜೀವನದ ಉಸಿರಾಗಿದ್ದ ರಾಮನಾಮ ಜಪಿಸಿ ಕೊನೆ ಉಸಿರು ಎಳೆದು ಕುಸಿದುಬಿದ್ದರು!! ಗಾಂಧೀಜಿಯ ಊರುಗೋಲಾಗಿದ್ದ ಯುವತಿಯರಿಬ್ಬರೂ ಅವರನ್ನು ಹಿಡಿದೆತ್ತಿ ನಿಲ್ಲಿಸಲು ತಡಬಡಿಸಿದರು. ಹೆಮ್ಮರ ಉರುಳಿದರೆ ಊರುಗೋಲು ಆಸರೆಯಾದೀತೇ? ಅವರೂ ನೆಲಕ್ಕೆ ಕುಸಿದರು. ಗಾಂಧೀಜಿ ಹೊದ್ದುಕೊಂಡಿದ್ದ ಶುಭ್ರ ಧವಳ ಶ್ವೇತ ಖಾದಿ ಅಂಗವಸ್ತ್ರ ರಕ್ತಮಯವಾಯಿತು. ಯುವತಿಯರಿಬ್ಬರೂ ರಕ್ತದ ಕಣ್ಣೀರಿಟ್ಟರು. ಆಗ ಸಂಜೆ ಐದು ಗಂಟೆ ಹದಿನೇಳು ನಿಮಿಷ.

ಕೂಡಿದ್ದ ಜನ ಗಾಂಧೀಜಿ ಬಿದ್ದ ಸ್ಥಳದತ್ತ ನುಗ್ಗಿದರು. ಕೆಲವರು ಕಂಗೆಟ್ಟು, ದಿಕ್ಕೆಟ್ಟು ದಿಕ್ಕಾ ಪಾಲಾದರು! ಗುಂಡಿಕ್ಕಿ ಕೊಂದ ಆ ಧಾಂಡಿಗನನ್ನು ಬಿರ್ಲಾ ಭವನದ ಮಾಲಿ ರಘುಮಾಲಿ ಹಿಡಿದುಕೊಂಡ. ಪೊಲೀಸರು ಬಂದು ಅವನನ್ನು ವಶಕ್ಕೆ ತೆಗೆದುಕೊಂಡರು. ಇಲ್ಲದಿದ್ದರೆ ಅವನನ್ನು ಜನರೇ ಮುಗಿಸುತ್ತಿದ್ದರು!

ಕಗ್ಗೊಲೆಯ ಸುದ್ದಿ ಕೆಲವೇ ಸೆಕೆಂಡುಗಳಲ್ಲಿ- ನಿಮಿಷಗಳಲ್ಲ- ಕೇವಲ ಕೆಲವೇ ಕ್ಷಣಗಳಲ್ಲಿ ದಿಲ್ಲಿಯಲ್ಲೆಲ್ಲಾ ಕಾಡ್ಗಿಚ್ಚಿನಂತೆ ಹಬ್ಬಿತು. ನಿಮಿಷಾರ್ಧದಲ್ಲಿ ನೆಹರೂ ಬಂದರು, ಪಟೇಲ್ ಬಂದರು.

ಗವರ್ನರ್ ಜನರಲ್ ಮೌಂಟ್ ಬ್ಯಾಟನ್ ಆಗತಾನೇ ಮದ್ರಾಸಿನಿಂದ ಹಿಂದಿರುಗಿದ್ದವರು ಕೂಡಲೇ ಧಾವಿಸಿಬಂದರು. ಅಬುಲ್ ಕಲಾಂ ಆಝಾದ್ ಬಂದರು. ದೌಲತ್ ರಾಮ್, ರಾಜಕುಮಾರಿ ಅಮೃತಕೌರ್, ಆಚಾರ್ಯ ಕೃಪಲಾನಿ, ಕೆ.ಎಂ. ಮುನ್ಶಿ ಬಂದರು. ದಿಲ್ಲಿಯ ಲಕ್ಷೋಪಲಕ್ಷ ಜನ ಬಿರ್ಲಾ ಭವನಕ್ಕೆ ನುಗ್ಗಿ ಬಂದರು. ಸಾಗರದ ಹೆದ್ದೆರೆಗಳಂತೆ ಭೋರ್ಗರೆದು

ದುಃಖಿಸುತ್ತ ಬಂದರು. ಗೋಳಿಟ್ಟು ಬಂದರು.!

ಕೊಂದವರು ಯಾರು? ಇದು ಜಗತ್ತಿನ, ತತ್ರಾಪಿ ಭಾರತದ ಜನಮನದಲ್ಲಿ ಭುಗಿಲೆದ್ದ ಪ್ರಶ್ನೆ. ಅವನೇನಾದರೂ ಮುಸ್ಲಿಮನಾಗಿದ್ದರೆ? ಆಗಬಹುದಾದ ಭೀಕರ ಪರಿಣಾಮವನ್ನು ಊಹಿಸುವುದೂ ಅಸಾಧ್ಯ !

ಆ ಸಂಜೆ ಆರು ಗಂಟೆ ಆಕಾಶವಾಣಿ ವಾರ್ತೆಯಲ್ಲಿ ಸಾರಲಾಯಿತು.

‘ಈಗ ಸ್ವಲ್ಪ ಹೊತ್ತಿನ ಮುಂಚೆ ಮಹಾತ್ಮಾ ಗಾಂಧಿಯವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಕೊಂದವನು ಒಬ್ಬ ಹಿಂದೂ!’

ಈ ಒಂದು ಸಾಲಿನ, ಎರಡು ವಾಕ್ಯದ ಸುದ್ದಿ ಭೀಕರ ಹಾಗೂ ವ್ಯಾಪಕ ಹಿಂಸಾಚಾರಗಳಿಂದ ಈ ದೇಶವನ್ನು ಉಳಿಸಿತು. ಮುಖಂಡರು ನಿಟ್ಟುಸಿರುಬಿಟ್ಟು ಇದ್ದದ್ದರಲ್ಲಿಯೇ ಸಮಾಧಾನಪಟ್ಟರು. ಒಂದು ವೇಳೆ ಗಾಂಧೀಜಿ ಹಂತಕ ಮುಸ್ಲಿಮನಾಗಿದ್ದಿದ್ದರೆ ಈ ದೇಶದಲ್ಲಿ ಘನಘೋರ - ಹಿಂದೆ ಎಂದೆಂದೂ ಕಾಣದಿದ್ದ, ಮುಂದೆ ಎಂದೆಂದೂ ಕಾಣಲಾಗದ ಹಿಂದೂ-ಮುಸ್ಲಿಮ್ ಮಾರಣಹೋಮ ನಿಸ್ಸಂಶಯವಾಗಿ ನಡೆದುಹೋಗುತ್ತಿತ್ತು. ಇಲ್ಲಿ ಆಗಬಹುದಾಗಿದ್ದ ಮುಸ್ಲಿಮರ ಹತ್ಯಾಕಾಂಡದಿಂದ ಪಾಕಿಸ್ತಾನ ಮತ್ತಿತರ ದೇಶಗಳಲ್ಲಿದ್ದ ಹಿಂದೂ, ಸಿಖ್ ಮುಂತಾದವರ ಹೆಣಗಳ ಬೆಟ್ಟದ ರಾಶಿಗಳೇ ಬೆಳೆಯುತ್ತಿದ್ದವು! ಇದು ನಿರಾಧಾರ ಎಂದು ಯಾರೂ ಹೇಳುವಂತಿರಲಿಲ್ಲ. ದೇಶ ಇಬ್ಭಾಗವಾದಾಗ ಭಾರತ ಪಾಕಿಸ್ತಾನಗಳಲ್ಲಿ ಅದಕ್ಕಿಂತ ಮೊದಲು 1946ರಲ್ಲಿ ಅವಿಭಾಜ್ಯ ಭಾರತದಲ್ಲಿ ಆದ ಹಿಂದೂ-ಮುಸ್ಲಿಮ್ ಗಲಭೆಗಳಲ್ಲಿ ದೊಂಬಿಗಳಲ್ಲಿ ಅದರಲ್ಲೂ ನವಖಾಲಿ ಮತ್ತು ಬಿಹಾರ್ ಪ್ರಾಂತಗಳಲ್ಲಿ ಹರಿದ ರಕ್ತದ ಕಾಲುವೆ, ಈ ಸಂದರ್ಭದಲ್ಲಿ ಪ್ರತಿಯೊಂದು ಊರು, ನಗರ, ಶಹರಗಳಲ್ಲಿ ಹರಿಯುತ್ತಿತ್ತು! ದೇಶ ವಿಭಜನೆಯಾದೊಡನೆ ನಿಸ್ಸಂದೇಹವಾಗಿ ಲಾಹೋರ್ ಶಹರದಲ್ಲಿ ಮಕ್ಕಳು, ಮರಿಗಳು, ಹೆಂಗಸರು, ಮುದುಕರು, ಭಿಕ್ಷುಕರು, ಶ್ರೀಮಂತರು, ಬಡವ ಬಲ್ಲಿದರು, ಆಪ್ತರು-ಮಿತ್ರರು ಎಂಬ ಭೇದವಿಲ್ಲದೆ ಹಿಂದೂ-ಸಿಖ್, ಪಾರ್ಸಿ, ಕ್ರಿಶ್ಚಿಯನ್ ಜನರನ್ನು ಭರ್ಜಿ, ಈಟಿ, ಬಡಿಗೆ, ಬಂದೂಕು, ಕೊಡಲಿ, ಮಚ್ಚು, ಕತ್ತಿಗಳಿಂದ ಕೊಚ್ಚಿ ಹಾಕಿದ್ದರು! ರುಂಡ ಮುಂಡ ಚೆಂಡಾಡಿದ್ದರು.

ಅಂದಮೇಲೆ ಈಗ ಗಾಂಧಿ ಹಂತಕ ಮುಸ್ಲಿಮ್ ಯುವಕನಾಗಿದ್ದಿದ್ದರೆ ಭಾರತದ ಹಳ್ಳಿ, ನಗರ, ಶಹರ, ಹೊಲ ಗದ್ದೆ, ಮನೆ ಮಠ... ಎಲ್ಲೆಲ್ಲೂ ಹತ್ಯಾಕಾಂಡ, ರಕ್ತದ ಹೊಳೆ ನಿಸ್ಸಂದೇಹವಾಗಿ ಹರಿಯುತ್ತಿತ್ತು! ಹೀಗೆಯೇ ಇದಕ್ಕಿಂತ ಹೆಚ್ಚು ಹಾನಿ ಆಗಬಹುದಿತ್ತು ಎಂಬುದಕ್ಕೆ ನಮ್ಮ ಕಣ್ಣೆದುರಿನಲ್ಲಿಯ 2002ರಲ್ಲಿ ಗುಜರಾತ್ನಲ್ಲಿ ನಡೆದ ನರಮೇಧವೇ ಪ್ರತ್ಯಕ್ಷನಿದರ್ಶನ!

ದೇಶ ವಿಭಜನೆಗಿಂತ ಮೊದಲು ಕಲ್ಕತ್ತಾ, ನವಖಾಲಿಯಲ್ಲಿ ಆದ ಮಾರಣಹೋಮವಂತೂ ಭಯಾನಕವಾಗಿತ್ತು. ಆಗ ಅಲ್ಲಿ ಯಾವ ಸರಕಾರಿ ನೌಕರರೂ ಅವರಿಗೆ ರಕ್ಷಣೆ ಕೊಡಲಿಲ್ಲ. ಅಂಥ ಸಂದರ್ಭದಲ್ಲಿ ಗಾಂಧೀಜಿ ಒಬ್ಬಂಟಿಗರಾಗಿ, ಹಗಲು ರಾತ್ರಿ ಎನ್ನದೆ, ಕತ್ತಲಲ್ಲಿ ಲಾಟೀನು ಹಿಡಿದುಕೊಂಡು ಬರಿಗಾಲಲ್ಲಿ ಮನೆ ಮನೆಗೆ ಹೋಗಿ ಸಾಂತ್ವನ ಹೇಳಿದರು. ಆ ಹತ್ಯಾಕಾಂಡವನ್ನು ನಿಲ್ಲಿಸಿದರು. ಕಲ್ಕತ್ತೆಯ ರಕ್ತದ ಕೆಸರಿನಲ್ಲಿ ಕೋಲೂರಿಕೊಂಡು ಜೊತೆಗೆ ಯಾವ ಅಂಗರಕ್ಷಕರೂ ಇಲ್ಲದೆ ಬೀದಿ ಬೀದಿಯಲ್ಲಿ ನಡೆದು ಜನರಿಗೆ ಹಿಂದೂ-ಮುಸ್ಲಿಮ್ ಮೈತ್ರಿ ಸಂದೇಶವನ್ನು ಸಾರಿದರು, ಸೌಹಾರ್ದ ಉಂಟುಮಾಡಿದರು! ಖಡ್ಗಗಳನ್ನು ಕಳಚಿ ಬದಿಗಿಟ್ಟು ಹಿಂದೂ-ಮುಸ್ಲಿಮರು ಅನ್ಯೋನ್ಯ ಪ್ರೀತಿ ವಿಶ್ವಾಸದಿಂದ ಬಾಳಲು ಪಣತೊಟ್ಟರು. ಹಿಂದೆ ಯಾವ ಬುದ್ಧನೂ, ಜೀಸಸ್ ಕ್ರೈಸ್ತನೂ ಮಾಡದಿದ್ದ ಪವಾಡವನ್ನು ಗಾಂಧಿ ಬಂಗಾಳದಲ್ಲಿ ಮಾಡಿ ತೋರಿಸಿದ್ದರು! ಯಾವ ಸೈನ್ಯದಿಂದಲೂ ಆಗದಿದ್ದ ಕೆಲಸವನ್ನು ಈ ‘ಅರೆಬೆತ್ತಲೆ ಫಕೀರ’ ಏಕಾಂಗಿಯಾಗಿ ಸಾಧಿಸಿದ್ದ. ಇದನ್ನು ಕಂಡ ಬಂಗಾಳದ ಅಂದಿನ ಗವರ್ನರ್ ಮಿ. ಆರ್. ಜೆ. ಕೇಸಿ ‘ಗಾಂಧಿ ಈಸ್ ಮೈ ಒನ್ ಮ್ಯಾನ್ ಆರ್ಮಿ ಆಫ್ ಪೀಸ್’ (ಗಾಂಧಿ ನನ್ನ ಏಕವ್ಯಕ್ತಿ ಶಾಂತಿ ಸೈನ್ಯ)ಎಂದಿದ್ದರು !

ಅಂಥದೇ ಪವಾಡವನ್ನು ಗಾಂಧೀಜಿ ಜನವರಿ 1948ರಲ್ಲಿ ದಿಲ್ಲಿಯಲ್ಲೂ ಮಾಡಿದ್ದರು. ಹಿಂದೂ-ಮುಸ್ಲಿಮ್ ಸೌಹಾರ್ದ ಸ್ಥಾಪನೆಗಾಗಿಯೇ ದಿಲ್ಲಿಯಲ್ಲಿ ಜನವರಿ 12ರಿಂದ ಆಮರಣ ಉಪವಾಸ ಕೈಗೊಂಡು ನರಮೇಧ ನಿಲ್ಲಿಸಿದ್ದರು!! ಕೋಮುಸೌಹಾರ್ದ ನೆಲೆಸಿದ ಮೇಲೆ ಉಪವಾಸ ನಿಲ್ಲಿಸಿದ್ದರು!

ಇಂಥ ಶಾಂತಿದೂತನನ್ನು, ಅಹಿಂಸಾಮೂರ್ತಿಯನ್ನು ಕೋಮುಸೌಹಾರ್ದದ ಹರಿಕಾರನನ್ನು, ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ ಧರ್ಮಾತ್ಮನನ್ನು, ಪ್ರೇಮ ಸಂದೇಶ ವಾಹಕನನ್ನು ಇಂದು ಓರ್ವ ಹಿಂದೂ ದ್ವೇಷ ತುಂಬಿದ ವಿಷಜಂತು ಹತ್ಯೆ ಮಾಡಿತ್ತು. ಅದೂ ಹಿಂದೂ ಧರ್ಮ ರಕ್ಷಣೆಯ ಹೆಸರಿನಲ್ಲಿ! ಹಿಂದುತ್ವದ ಸ್ಥಾಪನೆಗಾಗಿ!!

(ಕೋ. ಚೆನ್ನಬಸಪ್ಪನವರ ‘ಗಾಂಧಿ ಕಗ್ಗೊಲೆ-ಕಾರಣ-ಪರಿಣಾಮ’ ಕೃತಿಯಿಂದ ಆಯ್ದ ಭಾಗ)

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಕೋ. ಚೆನ್ನಬಸಪ್ಪ

contributor

Similar News