ದುರಿತ ಕಾಲದಲ್ಲಿ ಸಂವಿಧಾನದ ಆಶಯ ಉಳಿಸ ಹೊರಟವರು

ನಮ್ಮ ಸಮಾಜದಲ್ಲಿ ಕೋಟ್ಯಂತರ ಅಭಿಮಾನಿಗಳಿರುವ ನಟ-ನಟಿಯರ ದಂಡೆಲ್ಲ ಸ್ವಂತ ಆಲೋಚನೆ, ವಿವೇಕ ವಿವೇಚನೆ ಎಲ್ಲವನ್ನೂ ಕಳೆದುಕೊಂಡಂತೆ ಇರುವಾಗ ಇಂಥ ಕೆಲವು ಕಲಾವಿದರಾದರೂ ಈ ದೇಶದ ಬಗ್ಗೆ, ಪ್ರಜಾಸತ್ತೆಯ ಬಗ್ಗೆ, ಜಾತ್ಯತೀತತೆ ಬಗ್ಗೆ ಕಳಕಳಿ ಉಳ್ಳವರಾಗಿದ್ದಾರೆ ಮತ್ತು ಅದಕ್ಕೆ ತದ್ವಿರುದ್ಧವಾದದ್ದು ನಡೆಯುತ್ತಿದೆ ಎನ್ನಿಸಿದಾಗ ಪ್ರತಿಭಟನೆಯ ಧ್ವನಿ ವ್ಯಕ್ತಗೊಳಿಸುತ್ತಿದ್ದಾರೆ ಎಂಬುದೇ ದೊಡ್ಡ ವಿಚಾರ. ನಾವಿನ್ನೂ ಆಶಾವಾದಿಗಳಾಗಿ ಇರಬಹುದು ಎನ್ನಿಸುವುದು ಇಂಥ ಭಿನ್ನ, ದಿಟ್ಟ ಧ್ವನಿಗಳು ಕೇಳಿಸಿದಾಗಲೇ.

Update: 2024-01-26 05:42 GMT
Editor : Thouheed | Byline : ಪೂರ್ವಿ

ರಾಮಮಂದಿರ ಉದ್ಘಾಟನೆ ವೇಳೆ ಸಂಘ ಪರಿವಾರದವರದ್ದು, ರಾಜಕೀಯದವರದ್ದು ಒಂದು ಬಗೆಯ ಅಬ್ಬರವಾಗಿದ್ದರೆ, ಸೆಲೆಬ್ರಿಟಿಗಳದ್ದೇ ಮತ್ತೊಂದು ಬಗೆಯ ಅಬ್ಬರವಾಗಿತ್ತು.

ಘಟಾನುಘಟಿ ಕಲಾವಿದರೂ, ಸೂಪರ್ ಸ್ಟಾರ್‌ಗಳೂ ಅಯೋಧ್ಯೆಯಲ್ಲಿ ಬಂದು ಪ್ರಧಾನಿ ಮೋದಿಗೆ ನಮಸ್ಕರಿಸಿ ಫೋಟೊ ತೆಗೆದುಕೊಂಡು ಧನ್ಯರಾದರು. ಅವರು ಯಾರೂ ರಾಮಮಂದಿರದ ಹಿಂದಿನ ರಾಜಕಾರಣದ ಬಗ್ಗೆ ಧ್ವನಿ ಎತ್ತಲಿಲ್ಲ. ಬದಲಾಗಿ ಸಮೂಹ ಸನ್ನಿಯಲ್ಲಿ ಕಳೆದುಹೋದವರಂತೆ ಇದ್ದರು. ಯಾವುದೋ ಅವ್ಯಕ್ತ ಭಯಕ್ಕೆ ಬಿದ್ದವರಂತೆ, ಆದೇಶ ಪಾಲಿಸುತ್ತಿರುವವರಂತೆ ಕಂಡರು.

ಇನ್ನು ಕಂಗನಾ ಥರದ, ರಾಜಕಾರಣಿಯಾಗ ಬಯಸುವ ಸೆಲೆಬ್ರಿಟಿಗಳು ಜೈಶ್ರೀರಾಮ್ ಎಂದು ಮತ್ತೆ ಮತ್ತೆ ಕೂಗುತ್ತ, ಗಮನ ಸೆಳೆಯುತ್ತ, ಕ್ಯಾಮರಾ ಎದುರು ಪೋಸು ಕೊಡುತ್ತಿದ್ದುದು ಸಹಜವೇ ಆಗಿತ್ತು.

ಆದರೆ ರಾಜಕಾರಣದಲ್ಲಿ ಇನ್ನೇನೂ ಮಹಾನ್ ಸಾಧನೆ ಅವಶ್ಯಕತೆಯಿಲ್ಲದ ಅಮಿತಾಭ್ ಬಚ್ಚನ್, ರಜನೀಕಾಂತ್‌ರಂತಹ ಮಹಾ ಸ್ಟಾರ್‌ಗಳೂ ಬಿಜೆಪಿಯ ಕಾರ್ಯಕರ್ತರಂತೆ ಕಂಡು ಬಂದರು.

ವಿಪರ್ಯಾಸವೆಂದರೆ ಮಹೇಶ್ ಭಟ್‌ರಂತಹ ಸಾಮಾಜಿಕ ಕಾರ್ಯಕರ್ತರ ಜಾತ್ಯತೀತ ತತ್ವ ಪ್ರತಿಪಾದಿಸುವ ವ್ಯಕ್ತಿಯ ಪುತ್ರಿ ಆಲಿಯಾ ಭಟ್, ಆಕೆಯ ಪತಿ ರಣಬೀರ್ ಕಪೂರ್‌ರಂತಹವರೂ ಇದೇ ಗುಂಪಿನಲ್ಲಿ ಸೇರಿ ಹೋದರು.

ಎಂದೂ ಈ ದೇಶದ ಜನರಿಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಮಾತೇ ಆಡದ ಸಚಿನ್ ತೆಂಡುಲ್ಕರ್‌ರಂತಹ ಕ್ರಿಕೆಟಿಗರೂ ತಾವೇನೂ ಕಡಿಮೆಯಿಲ್ಲ ಎಂಬಂತೆ ಸೇರಿಕೊಂಡರು.

ಸೆಲೆಬ್ರಿಟಿಗಳು ಎಂದರೆ ಹಿಂದುತ್ವದ ಮತ್ತೊಂದು ಶಾಖೆ ಎಂಬಂತಿದೆ ಈ ದೇಶದಲ್ಲಿ ಇವತ್ತಿನ ಸ್ಥಿತಿ.

ಆದರೂ, ಅಂಧ ಭಕ್ತರಂತೆ ವರ್ತಿಸುತ್ತಿರುವ ಸೆಲೆಬ್ರಿಟಿ ಸಮೂಹದ ನಡುವೆ ಕೆಲವಾದರೂ ಭಿನ್ನ ಧ್ವನಿಗಳು ಸಂವಿಧಾನ ಬದ್ಧತೆ ಪ್ರದರ್ಶಿಸುತ್ತಿರುವುದು ಈ ದೇಶದ ಪಾಲಿನ ಆಶಾಕಿರಣ.

ಹಲವು ಮಲಯಾಳಂ ಕಲಾವಿದರು, ಪಾ. ರಂಜಿತ್‌ರಂತಹ ಅಪ್ಪಟ ಪ್ರತಿಭೆಗಳು ತಮಗೆ ಬೆನ್ನು ಮೂಳೆ ಇದೆ ಎಂದು ಸಾಬೀತುಪಡಿಸುತ್ತಿದ್ದಾರೆ.

ಬಹುತೇಕ ಬಾಲಿವುಡ್ ಸೆಲೆಬ್ರಿಟಿಗಳು ಮೋದಿ ಸರಕಾರದೆದುರು ಮಂಡಿ ಯೂರಿರುವಾಗ ನಟಿ ಸುಶ್ಮಿತಾ ಸೇನ್ ಸಂವಿಧಾನವನ್ನು ಎತ್ತಿ ಹಿಡಿದಿದ್ದಾರೆ.

ಅವರು ಅತುಲ್ ಮೊಂಗಿಯಾ ಅವರ ಸಂವಿಧಾನ ಪೀಠಿಕೆ ಚಿತ್ರವುಳ್ಳ ಇನ್‌ಸ್ಟಾಗ್ರಾಮ್ ಪೋಸ್ಟ್ ಮರು ಪೋಸ್ಟ್ ಮಾಡುವ ಮೂಲಕ ಬಾಲಿವುಡ್ ಮಂದಿಯ ಮಧ್ಯೆ ಭಿನ್ನವಾಗಿ ಉಳಿದು, ತಮ್ಮ ಹೊಣೆಗಾರಿಕೆ ಮೆರೆದಿದ್ದಾರೆ. ಮಲಯಾಳಂ ನಟರು, ನಿರ್ದೇಶಕರು ಕೂಡ ಇದೇ ಬಗೆಯಲ್ಲಿ ಈ ವಿಚಾರದಲ್ಲಿ ದೇಶಕ್ಕೇ ಮಾದರಿಯಾಗಿದ್ದಾರೆ.

ಕಲಾವಿದ ಎಂದರೆ ಬಣ್ಣ ಹಚ್ಚಿ, ಕೊಟ್ಟ ಯಾವುದೋ ಪಾತ್ರ ಮುಗಿಸಿ ಹೋಗುವಷ್ಟಕ್ಕೆ ಸೀಮಿತ ಅಲ್ಲ. ಕಲಾವಿದರಿಗೂ ಸಾಮಾಜಿಕ ಜವಾಬ್ದಾರಿಗಳಿವೆ, ಅನ್ಯಾಯದ ವಿರುದ್ಧ ಅನೀತಿಯ ವಿರುದ್ಧ ಖಂಡಿಸುವುದು ಅವರ ಕರ್ತವ್ಯವಾಗಿದೆ ಎಂಬುದನ್ನು ಸಾರಿಹೇಳುವಂಥ ಮಾದರಿಯಾಗಿ ಇವರೆಲ್ಲ ನಮಗೆ ಕಾಣಿಸುತ್ತಿದ್ದಾರೆ.

ಹಾಗೆ ನೋಡಿದರೆ ಮಲಯಾಳಂ ಸಿನೆಮಾಗಳ ಹಾಗೆಯೇ ಅಲ್ಲಿನ ಕಲಾವಿದರು ಕೂಡ ಇಂಥ ವಿಚಾರದಲ್ಲಿ ತೋರುವ ಗಾಂಭೀರ್ಯ ಯಾವಾಗಲೂ ಗಮನ ಸೆಳೆಯುತ್ತದೆ.

ಅದು ಯಾವತ್ತೂ ಅವರ ಬದ್ಧತೆಯೇ ಆಗಿದೆ ಮತ್ತು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹೊತ್ತಿನಲ್ಲೂ ಅವರು ಇತರರ ಹಾಗೆ ಗುಂಪಿನಲ್ಲಿ ಒಂದಾಗಿ ಹೋಗದೆ, ಕೆಟ್ಟ ರಾಜಕಾರಣದ ಬೆಂಬಲಿಗರಾಗಿಬಿಡದೆ ಅದೇ ಬದ್ಧತೆಯನ್ನು ಮೆರೆದರು. ಭಿನ್ನ ಧ್ವನಿಯಾಗಿ ನಿಂತರು.

ಆ ದಿನ ಮಲಯಾಳಂ ಚಿತ್ರರಂಗದ ಕೆಲವು ನಟರು, ನಿರ್ದೇಶಕರು ತಮ್ಮ ಸಾಮಾಜಿಕ ಮಾಧ್ಯಮಗಳ ಖಾತೆಗಳಲ್ಲಿ ಭಾರತದ ಸಂವಿಧಾನದ ಪೀಠಿಕೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಸಮಾನತೆ, ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ತತ್ವಗಳನ್ನು ಒತ್ತಿಹೇಳಿದ್ದಾರೆ.

ಮಲಯಾಳಂ ನಟರಾದ ಪಾರ್ವತಿ ತಿರುವೋತು, ರಿಮಾ ಕಲ್ಲಿಂಗಲ್, ದಿವ್ಯ ಪ್ರಭಾ, ಕಣಿ ಕುಸೃತಿ, ನಿರ್ದೇಶಕರಾದ ಜಿಯೋ ಬೇಬಿ, ಆಶಿಕ್ ಅಬು, ಕಮಲ್ ಕೆಎಂ ಮತ್ತು ಗಾಯಕ ಸೂರಜ್ ಸಂತೋಷ್ ಸೇರಿದಂತೆ ಹಲವರು ಸಂವಿಧಾನದ ಮುನ್ನುಡಿಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಈ ಕಾಲದಲ್ಲಿ ಇದೊಂದು ಮಹತ್ವದ ಮತ್ತು ಭಿನ್ನ ಬಗೆಯ ಪ್ರತಿಕ್ರಿಯೆ.

ಈ ಅಭಿವ್ಯಕ್ತಿ, ಸರಕಾರಿ ಪ್ರಾಯೋಜಿತ ಸಂಭ್ರಮಾಚರಣೆಯ ಟೀಕೆ ಎಂದೇ ಪರಿಗಣಿಸಲಾಗಿದೆ. ದೇಶದ ಜಾತ್ಯತೀತ ಮೌಲ್ಯಗಳಿಗೆ ವಿರುದ್ಧವಾದುದು ನಡೆಯುತ್ತಿದೆ ಎಂಬುದನ್ನೇ ಆ ಮೂಲಕ ಪ್ರತಿಪಾದಿಸುವ ಕೆಲಸ ಆಗಿದೆ.

ಎಲ್ಲವೂ ಸಂವಿಧಾನ ವಿರೋಧಿ ರೀತಿಯಲ್ಲಿ ನಡೆಯುತ್ತಿರುವಾಗ, ಧರ್ಮವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಎಗ್ಗಿಲ್ಲದೆ ನಡೆಯುತ್ತಿರುವಾಗ ಸಂವಿಧಾನ ಪೀಠಿಕೆಯನ್ನು ನೆನಪಿಸಿಕೊಟ್ಟ ಈ ಬಗೆ ಸ್ಪಷ್ಟವಾಗಿಯೇ ಹೇಳಬೇಕಿರುವುದನ್ನು ಹೇಳಿತ್ತು.

ಹೀಗೆ ತಮ್ಮ ಹೊಣೆಗಾರಿಕೆಯನ್ನು ತೋರಿದ ಕಲಾವಿದರ ಸಾಲಿನಲ್ಲಿ ತಮಿಳುನಾಡಿನ ಖ್ಯಾತ ನಿರ್ದೇಶಕ ಪಾ. ರಂಜಿತ್ ಮತ್ತೊಬ್ಬರು.

‘‘ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆ ಪ್ರತಿಗಾಮಿ ರಾಜಕೀಯದ ಅಭಿವ್ಯಕ್ತಿಯಾಗಿದೆ’’ ಎಂದು ಬಣ್ಣಿಸಿರುವ ಪಾ. ರಂಜಿತ್, ದೇಶದ ಭವಿಷ್ಯ ಅಪಾಯದಲ್ಲಿದೆ ಎಂದಿದ್ದಾರೆ.

‘‘ದೇವಸ್ಥಾನದ ಉದ್ಘಾಟನೆಯೊಂದಿಗೆ 500 ವರ್ಷ ಹಳೆಯ ಸಮಸ್ಯೆ ಪರಿಹಾರಗೊಂಡಿದೆ ಎನ್ನಲಾಗಿದೆ. ಆದರೆ ನಾವು ಆ ಸಮಸ್ಯೆಯ ಹಿಂದಿನ ರಾಜಕೀಯವನ್ನು ಪ್ರಶ್ನಿಸಬೇಕಿದೆ. ಸರಳವಾದ ಸರಿ ಅಥವಾ ತಪ್ಪಿನಾಚೆಗೆ ನನಗೆ ಈ ವಿಚಾರದ ಕುರಿತು ಅಭಿಪ್ರಾಯಗಳಿವೆ’’ ಎಂದು ಅವರು ಹೇಳಿದ್ದಾರೆ.

‘‘ನಾವು ನಮ್ಮ ಮನೆಗಳಲ್ಲಿ ಕರ್ಪೂರದ ಆರತಿ ಬೆಳಗಿಸದೆ ಇದ್ದರೆ ನಮ್ಮನ್ನು ಉಗ್ರವಾದಿಗಳೆಂದು ಪರಿಗಣಿಸುವ ಹಂತದಲ್ಲಿ ನಾವಿದ್ದೇವೆ. ದೇಶ ಅಪಾಯಕಾರಿ ಭವಿಷ್ಯದತ್ತ ಮುನ್ನಡೆಯುತ್ತಿದೆ. ಮುಂದಿನ ಐದರಿಂದ ಹತ್ತು ವರ್ಷಗಳ ಕಾಲ ನಾವು ಯಾವ ರೀತಿಯ ಭಾರತದಲ್ಲಿ ವಾಸಿಸಬೇಕೆಂದು ಭಯವಾಗುತ್ತಿದೆ’’ ಎಂದೂ ರಂಜಿತ್ ಅವರು ಹೇಳಿರುವುದು ಕಲಾವಿದನಾಗಿ ಅವರು ತೋರಿರುವ ಧೈರ್ಯವಾಗಿದೆ.

ಇನ್ನು ಕನ್ನಡದಲ್ಲಿ ಇಬ್ಬರು ಮಾತ್ರವೇ ಅಯೋಧ್ಯೆಯ ವಿಚಾರದಲ್ಲಿ ಗುಂಪಿನಲ್ಲಿ ಸೇರಿಹೋಗದೆ, ಭಿನ್ನ ಧ್ವನಿ ವ್ಯಕ್ತಪಡಿಸಿದ್ದಾರೆ.

ಒಬ್ಬರು ನಟ ಕಿಶೋರ್ ಹಾಗೂ ಇನ್ನೊಬ್ಬರು ನಟಿ ಶ್ರುತಿ ಹರಿಹರನ್.

ಭಿನ್ನ ಧ್ವನಿಯಾಗಿ ಜನಪರವಾಗಿ ಮಾತಾಡಿರುವ ನಟ ಕಿಶೋರ್ ಇನ್‌ಸ್ಟಾಗ್ರಾಮ್ ಪೋಸ್ಟ್ ಹೀಗಿದೆ:

‘‘ಮಂದಿರ, ರಾಜರು ಮತ್ತು ರಾಜಕೀಯ ನಿಯಂತ್ರಣ.. ನಾವು ನೋಡದ್ದೇನಲ್ಲ.. ಇಂದು ಮತ್ತೆ ರಾಜರ ಕಾಲಕ್ಕೆ ಹೋದ ಅನುಭವ.. ದೇವರ ಹೆಸರಲ್ಲಿ ಪೂಜಾರಿಯೊಂದಿಗೆ ಸೇರಿ ಜನರನ್ನು ನಿಯಂತ್ರಿಸಿ, ದೇಗುಲ ಕಟ್ಟಿಸಿ, ತಮ್ಮ ಹೆಸರು ಕೆತ್ತಿಸಿ, ದೇಗುಲದ ಶಿಲ್ಪಿಯ ಕೈ ಕತ್ತರಿಸಿ, ತಮ್ಮ ಕೀರ್ತಿ ಪತಾಕೆಯನ್ನು ಹಾರಿಸಿ, ಅಜರಾಮರರಾದ ದೊರೆಗಳು.. ಉಧೋ ಉಧೋ ಎಂದ ಪ್ರಜೆಗಳು, ಭಟ್ಟಂಗಿಗಳು..

ಧರ್ಮ ಮತ್ತು ದೇವರು ರಾಜಕಾರಣಿಗಳ ಕೈಗೆ ಹೋಗಿ ತಾವೂ ಪ್ರಶ್ನಾತೀತವಾಗಿ ಅವರನ್ನೂ ಪ್ರಶ್ನಾತೀತರನ್ನಾಗಿಸಿ ಬಿಡುವುದು ಸಂಸ್ಕೃತಿಯ ಚಲನಶೀಲತೆಗೆ, ನಾಡಿನ ಭವಿಷ್ಯಕ್ಕೆ ಅತೀ ಅಪಾಯಕಾರಿ’’ ಎಂದಿದ್ದಾರೆ ಕಿಶೋರ್.

ಇನ್ನು ನಟಿ ಶ್ರುತಿ ಹರಿಹರನ್ ಕೂಡ ಮಲಯಾಳಂ ಕಲಾವಿದರಂತೆಯೇ ಸಂವಿಧಾನ ಪೀಠಿಕೆ ಚಿತ್ರವನ್ನು ಹಂಚಿಕೊಂಡಿರುವುದಲ್ಲದೆ ತಮ್ಮದೇ ಆದ ಆಲೋಚನೆಗಳನ್ನು ಬಹಳ ನಿಖರವಾಗಿ ಹೇಳಿದ್ದಾರೆ.

ಈ ಹೊತ್ತಿನಲ್ಲಿ ಏಕೆ ಸಂವಿಧಾನವನ್ನು ನೆನಪಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ಕೇಳಿಕೊಳ್ಳುತ್ತ, ಶ್ರುತಿ ಹರಿಹರನ್ ಬರೆದಿರುವುದು ಹೀಗೆ:

‘‘ಧರ್ಮದ ವಿಷಯದಲ್ಲಿ ದೇಶವು ತಟಸ್ಥವಾಗಿರಬೇಕು. ಜತೆಗೆ ಯಾವುದೇ ನಿರ್ದಿಷ್ಟ ಧರ್ಮವನ್ನು ಪೋಷಿಸುವುದು ಅಥವಾ ಅದರ ವಿರುದ್ಧ ತಾರತಮ್ಯ ಮಾಡಬಾರದು ಎಂದು ಸಂವಿಧಾನದಲ್ಲಿ ಹೇಳಲಾಗಿದೆ. ಆದರೆ ಇಂದು ಧರ್ಮವನ್ನು ರಾಜಕೀಯಗೊಳಿಸಲಾಗುತ್ತಿದೆ. ಇದನ್ನು ನೋಡಿಯೂ ಸುಮ್ಮನೆ ಕೂತು ಗಮನಿಸುವುದೂ ಸರಿಯಲ್ಲ’’ ಎಂದಿದ್ದಾರೆ.

ನಮ್ಮ ಸಮಾಜದಲ್ಲಿ ಕೋಟ್ಯಂತರ ಅಭಿಮಾನಿಗಳಿರುವ ನಟ-ನಟಿಯರ ದಂಡೆಲ್ಲ ಸ್ವಂತ ಆಲೋಚನೆ, ವಿವೇಕ ವಿವೇಚನೆ ಎಲ್ಲವನ್ನೂ ಕಳೆದುಕೊಂಡಂತೆ ಇರುವಾಗ ಇಂಥ ಕೆಲವು ಕಲಾವಿದರಾದರೂ ಈ ದೇಶದ ಬಗ್ಗೆ, ಪ್ರಜಾಸತ್ತೆಯ ಬಗ್ಗೆ, ಜಾತ್ಯತೀತತೆ ಬಗ್ಗೆ ಕಳಕಳಿ ಉಳ್ಳವರಾಗಿದ್ದಾರೆ ಮತ್ತು ಅದಕ್ಕೆ ತದ್ವಿರುದ್ಧವಾದದ್ದು ನಡೆಯುತ್ತಿದೆ ಎನ್ನಿಸಿದಾಗ ಪ್ರತಿಭಟನೆಯ ಧ್ವನಿ ವ್ಯಕ್ತಗೊಳಿಸುತ್ತಿದ್ದಾರೆ ಎಂಬುದೇ ದೊಡ್ಡ ವಿಚಾರ.

ನಾವಿನ್ನೂ ಆಶಾವಾದಿಗಳಾಗಿ ಇರಬಹುದು ಎನ್ನಿಸುವುದು ಇಂಥ ಭಿನ್ನ, ದಿಟ್ಟ ಧ್ವನಿಗಳು ಕೇಳಿಸಿದಾಗಲೇ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಪೂರ್ವಿ

contributor

Similar News