ಚಾಮರಾಜನಗರ ಜಿಲ್ಲೆಯ ಪ್ರವಾಸೋದ್ಯಮದಲ್ಲಿ‘ಹುಲಿ’ ಆಕರ್ಷಣೆ

Update: 2024-10-21 07:26 GMT

ಚಾಮರಾಜನಗರ: ಕರ್ನಾಟಕದಲ್ಲೇ ಅತೀ ಹೆಚ್ಚು ಹುಲಿಗಳು ವಾಸ ಮಾಡುವ ಜಿಲ್ಲೆ ಕರ್ನಾಟಕ ತಮಿಳುನಾಡು ಹಾಗೂ ಕೇರಳ ಗಡಿ ಚಾಮರಾಜನಗರ ಜಿಲ್ಲೆ. ಇಲ್ಲಿ ಎರಡು ಹುಲಿ ಸಂರಕ್ಷಿತ ಪ್ರದೇಶಗಳಿದ್ದು, ಇದಕ್ಕಾಗಿಯೇ ಚಾಮರಾಜನಗರ ಜಿಲ್ಲೆ ‘ಹುಲಿಗಳ ನಾಡು’ ಎಂದೇ ಖ್ಯಾತಿ ಪಡೆದಿದಿದೆ. ಚಾಮರಾಜನಗರ ಜಿಲ್ಲೆಯ ಜೀವ ಪರಿಸರ ಪ್ರವಾಸೋದ್ಯಮದಲ್ಲಿ ಹುಲಿಯೇ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ಚಾಮರಾಜನಗರ ಜಿಲ್ಲೆಯಲ್ಲಿರುವ ಎರಡು ಹುಲಿ ಸಂರಕ್ಷಿತ ಪ್ರದೇಶದದಲ್ಲಿರುವ ಸಫಾರಿ ಕೇಂದ್ರ ಮೂಲಕ ಸಫಾರಿ ಮಾಡಿ ಹುಲಿ ನೋಡುವುದು ಎಂದರೆ ಅದು ರೋಮಾಂಚಕ ಅನುಭವವೇ ಸರಿ. ಅದಕ್ಕಾಗಿ ರಾಜ್ಯವಲ್ಲದೆ ವಿದೇಶಗಳಿಂದಲೂ ಪ್ರಾಣಿ ಪ್ರಿಯರು ಆಗಮಿಸಿ ಸಫಾರಿ ಮಾಡುವ ಮೂಲಕ ವನ್ಯ ವನ್ಯ ಜೀವ ಸಂಕುಲವನ್ನು ಕಂಡು ಕಣ್ತುಂಬಿಸಿಕೊಳ್ಳುವುದು ಸಹಜವಾಗಿದೆ.

ವಿಶ್ವ ವಿಖ್ಯಾತಿ ಪಡೆದಿರುವ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶ ಮತ್ತು ನಿತ್ಯ ಹರಿದ್ವರ್ಣ ಕಾಡಾಗಿರುವ ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ ಪ್ರವಾಸಿಗರ ಆಕರ್ಷಣೀಯ ತಾಣ. ಅಲ್ಲದೇ, ಮಲೆ ಮಹದೇಶ್ವರ ಮತ್ತು ಕಾವೇರಿ ವನ್ಯಜೀವಿ ಧಾಮಗಳಿರುವ ಚಾಮರಾಜನಗರ ಜಿಲ್ಲೆಯ ಕಾಡುಗಳಿಗೆ ಬರುವ ಪ್ರವಾಸಿಗರಿಗೆ ಬೇರೆಲ್ಲ ಪ್ರಾಣಿಗಳಿಗಿಂತ ಹುಲಿಯನ್ನು ಕಾಣಬಹುದಾಗಿದೆ.

ವನ್ಯಜೀವಿಧಾಮದಲ್ಲಿ ದರ್ಶನ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಹುಲಿಯೊಂದು ಕಾಣಿಸಿರುವ ಬೇಕೆಂಬ ಹಂಬಲ ಹೆಚ್ಚು. ಇದಕ್ಕಾಗಿಯೇ ಹುಲಿಗಳನ್ನು ನೋಡಲು ಪ್ರವಾಸಿಗರು ಜಿಲ್ಲೆಯ ವೀಡಿಯೊವನ್ನು ಸಾಮಾಜಿಕ ಜಾಲತಾಣಕ್ಕೆ ಅರಣ್ಯ ಇಲಾಖೆ ಶೇರ್ ಮಾಡಿದೆ. ಸಫಾರಿ ವೇಳೆ ಕಂಡ ಹುಲಿಯನ್ನು ವೀಡಿಯೊದಲ್ಲಿ ಪ್ರವಾಸಿಗರು ಸೆರೆಹಿಡಿದ್ದಾರೆ. ಮಲೆ ಮಹದೇಶ್ವರ ವನ್ಯಜೀವಿಧಾಮದ ಪಿ.ಜಿ.ಪಾಳ್ಯದಲ್ಲಿ ಸಫಾರಿ ಕೇಂದ್ರವಿದೆ. ಇದಾದ ಬಳಿಕ ಹನೂರು ಬಫರ್ ವಲಯದ ಅಜ್ಜಿ ಪುರದಲ್ಲೂ ಇತ್ತೀಚೆಗೆ ಸಫಾರಿ ಆರಂಭಿಸಲಾಗಿದೆ. ಮಲೆ ಮಹದೇಶ್ವರಬೆಟ್ಟಕ್ಕೆ ಹೋಗುವ ಭಕ್ತರನ್ನು ಈ ಸಫಾರಿ ಕೇಂದ್ರ ಸೆಳೆಯುತ್ತಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿರುವುದಾಗಿ ತಿಳಿದುಬಂದಿದೆ.

ವನ್ಯಜೀವಿ ಪ್ರವಾಸಿಗರ ಪ್ರವಾಸೋದ್ಯಮದಲ್ಲಿ ಪ್ರಮುಖ ಉದ್ದೇಶವೇ ಹುಲಿಯನ್ನು ನೋಡುವುದು. ಹುಲಿಯ ದರ್ಶನವಾದರೆ ಖುಷಿ, ಇಲ್ಲದಿದ್ದರೆ ಬೇಸರ ಕಾಡುತ್ತದೆ. ಸಫಾರಿಗೆ ಬಂದು ಜಿಂಕೆ, ಕಾಟಿ ಇನ್ನಿತರ ಪ್ರಾಣಿಗಳನ್ನು ನೋಡಿದರೂ ಹುಲಿಯನ್ನು ನೋಡಿದ ತೃಪ್ತಿ ಸಿಗುವುದಿಲ್ಲ. ಮತ್ತೊಮ್ಮೆ ಹುಲಿ ನೋಡಲು ಕಾಡಿಗೆ ಬರಬೇಕು ಅಥವಾ ಹುಲಿ ಕಾಣಿಸುವ ಕಾಡಿಗೆ ಹೋಗಬೇಕೆಂಬ ಆಸೆ ಮುಂದುವರಿಯುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಯಾವುದಾದರೂ ಒಂದು ಕಾಡಿನಲ್ಲಿ ಹುಲಿ ಕಾಣಿಸಿಕೊಂಡಿದೆ ಎಂದು ಗೊತ್ತಾದರೆ ಆ ಕಾಡಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚು.

ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿಗೆ ಹೋದವರಿಗೆಲ್ಲಾ ಹುಲಿ ಕಾಣಿಸುವುದಿಲ್ಲ. ಕೆಲವೊಮ್ಮೆ ಸಫಾರಿಯನ್ನು ಸಂಪೂರ್ಣ ಮುಗಿಸಿ ಮರಳುವಾಗ ಹುಲಿ ನೋಡುವ ಭಾಗ್ಯವೂ ಸಿಕ್ಕಿದೆ. ಹಾಗಾಗಿ ಹುಲಿ ನೋಡುವುದು ಅದೃಷ್ಟವೇ ಸರಿ ಎನ್ನಲೂಬಹುದು.

ರಾಜ್ಯಕ್ಕೆ2ನೇ ಸ್ಥಾನ

ಚಾಮರಾಜನಗರ ಜಿಲ್ಲೆಯ ಅರಣ್ಯವು ಹುಲಿ ತಾಣವಾಗಿದ್ದು, ಹುಲಿಗಳ ಮನೆಯಾಗಿದೆ. ಅಧಿಕ ಹುಲಿಗಳಿರುವ ರಾಜ್ಯಗಳಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿರುವ ಜಿಲ್ಲೆಗಳಲ್ಲಿ ಚಾಮರಾಜನಗರದಲ್ಲೇ ಹೆಚ್ಚು ಹುಲಿಗಳಿರುವುದು. ಜಿಮ್ ಕಾರ್ಬೆಟ್ ಹುಲಿ ಸಂರಕ್ಷಿತ ಪ್ರದೇಶದ ಬಳಿಕ ಬಂಡೀಪುರದಲ್ಲಿ ಅಧಿಕ ಹುಲಿಗಳಿವೆ. ಬಿಳಿಗಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದಲ್ಲೂ ಇದೀಗ ಹುಲಿಗಳ ಸಂಖ್ಯೆ ಕಡಿಮೆ ಇಲ್ಲ. ಇನ್ನು ಮಲೆ ಮಹದೇಶ್ವರ ಮತ್ತು ಕಾವೇರಿ ವನ್ಯ ಜೀವಿಧಾಮಗಳೂ ಹುಲಿಗಳ ಆವಾಸ ಸ್ಥಾನವಾಗಿದೆ. ಬಂಡೀಪುರ, ಬಿಳಿಗಿರಂಗನಾಥ ಹುಲಿ ಸಂಕ್ಷಿತ ಪ್ರದೇಶದ ಕೆ.ಗುಡಿ, ಮಲೆ ಮಹದೇಶ್ವರ ವನ್ಯಜೀವಿಧಾಮದ ಪಿ.ಜಿ. ಪಾಳ್ಯ ಮತ್ತು ಅಜೀಪುರ, ಕಾವೇರಿ ವನ್ಯಜೀವಿಧಾಮದ ಗೋಪಿನಾಥಂನಲ್ಲಿ ಸಫಾರಿಗೆ ಅವಕಾಶವಿದೆ. ಕಾಡಿಗೆ ಪ್ರವಾಸಕ್ಕೆ ಬರುವ ವನ್ಯಪ್ರೇಮಿಗಳಿಗೆ ಹುಲಿಯ ದರ್ಶನವಾಗಿ ಬಿಟ್ಟರೆ ಛಾಯಾಚಿತ್ರಗಳನ್ನು ತೆಗೆದುಕೊಂಡು ಸಂಭ್ರಮಿಸುತ್ತಾರೆ.

ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶಕ್ಕೆ ಬರುವ ಎಲ್ಲರೂ ಶೇ.99ರಷ್ಟು ಹುಲಿಯನ್ನು ನೋಡ ಬೇಕೆಂದು ಬರುತ್ತಾರೆ. ಅದೃಷ್ಟ ಇದ್ದವರಿಗೆ ಹುಲಿ ಕಾಣಿಸುತ್ತದೆ. ಇಲ್ಲದೆ ಹೋದರೆ ಆನೆ, ಜಿಂಕೆ, ಕಡವೆ, ಕಾಟಿ, ಕರಡಿ ಸೇರಿದಂತೆ ಇನ್ನಿತರ ಪ್ರಾಣಿಗಳ ದರ್ಶನವಾಗುತ್ತದೆ.

-ಎನ್.ಪಿ.ನವೀನ್ ಕುಮಾರ್, ಸಹಾಯಕ ಅರಣ್ಯಾಧಿಕಾರಿ, ಬಂಡೀಪುರ ಉಪ ವಿಭಾಗ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ನಾ.ಅಶ್ವಥ್ ಕುಮಾರ್

contributor

Similar News