ದ.ಕ. ಜಿಲ್ಲೆಗೆ ಪ್ರವಾಸಿಗರ ಭೇಟಿಯಲ್ಲಿ ಹೆಚ್ಚಳ

Update: 2024-05-08 06:54 GMT
Editor : jafar sadik | Byline : ಸತ್ಯಾ ಕೆ.

ಮಂಗಳೂರು: ದ.ಕ. ಜಿಲ್ಲೆ ಶಿಕ್ಷಣ ಕಾಶಿ, ಮೆಡಿಕಲ್ ಹಬ್ ಆಗಿ ಮಾತ್ರವೇ ಗುರುತಿಸಿಕೊಂಡಿರುವುದಲ್ಲ, ಟೆಂಪಲ್ ಟೂರಿಸಂ ಜೊತೆಗೆ, ಆಕರ್ಷಕ ಬೀಚ್ ತಾಣಗಳಾಗಿಯೂ ಆಕರ್ಷಣೀಯವಾಗಿದೆ. ಹೀಗಾಗಿಯೇ ಬಿರು ಬಿಸಿಲು, ಬಿಸಿ ಗಾಳಿಯ ಹೊರತಾಗಿಯೂ ದ.ಕ. ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಾ ಸಾಗಿದೆ.

ಪ್ರವಾಸೋದ್ಯಮ ಇಲಾಖೆಯ ಅಂಕಿ ಅಂಶಗಳ ಪ್ರಕಾರ 2024ರ ಜನವರಿಯಿಂದ ಎಪ್ರಿಲ್‌ವರೆಗೆ ದ.ಕ. ಜಿಲ್ಲೆಯ ವಿವಿಧ ಪುಣ್ಯ ಕ್ಷೇತ್ರಗಳು, ಬೀಚ್‌ಗಳು ಸೇರಿದಂತೆ ವಿವಿಧ ಆಕರ್ಷಣೀಯ ತಾಣಗಳಿಗೆ 4,413 ವಿದೇಶಿ ಪ್ರವಾಸಿಗರು ಸೇರಿ ಒಟ್ಟು 1,65,95,942 ಪ್ರವಾಸಿಗರು/ ಯಾತ್ರಾರ್ಥಿಗಳು ಭೇಟಿ ನೀಡಿದ್ದಾರೆ. ವಿಶೇಷವೆಂದರೆ ಕಳೆದ ಸೆಪ್ಟಂಬರ್‌ನಿಂದೀಚೆಗೆ ಜಿಲ್ಲೆಯ ವಿವಿಧ ಪವಿತ್ರ ಕ್ಷೇತ್ರಗಳು ಸೇರಿದಂತೆ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುತ್ತಿರುವವರ ಸಂಖ್ಯೆ ದುಪ್ಪಟ್ಟಾಗಿದೆ.

ಜನವರಿಯಲ್ಲಿ 2,237 ವಿದೇಶಿಯರು ಸೇರಿ 41,09,367 ಮಂದಿ, ಫೆಬ್ರವರಿಯಲ್ಲಿ 131 ವಿದೇಶಿಯರು ಸೇರಿ 43,22,081 ಮಂದಿ, ಮಾರ್ಚ್‌ನಲ್ಲಿ 979 ವಿದೇಶಿಯರು ಸೇರಿ 39,00,289 ಹಾಗೂ ಎಪ್ರಿಲ್‌ನಲ್ಲಿ 1,066 ವಿದೇಶಿಯರು ಸೇರಿದಂತೆ 42,64,205 ಮಂದಿ ಪ್ರವಾಸಿ ಗರು/ಯಾತ್ರಾರ್ಥಿಗಳು ಜಿಲ್ಲೆಯ ವಿವಿಧ ತಾಣಗಳಿಗೆ ಭೇಟಿ ನೀಡಿದ್ದಾರೆ.

2023ರ ಜನವರಿಯಿಂದ ಡಿಸೆಂಬರ್‌ವರೆಗೆ 3,818 ಮಂದಿ ವಿದೇಶಿ ಪ್ರವಾಸಿಗರು ಸೇರಿದಂತೆ 3,28,56,725 ಮಂದಿ ಜಿಲ್ಲೆಯ ವಿವಿಧ ತಾಣಗಳಿಗೆ ಯಾತ್ರಿಕರು ಹಾಗೂ ಪ್ರವಾಸಿಗರ ಆಗಮನವಾಗಿದೆ. ಅದರಲ್ಲಿಯೂ ಡಿಸೆಂಬರ್ ತಿಂಗಳಲ್ಲಿ 2,433 ವಿದೇಶಿಯರು ಸೇರಿ ಒಟ್ಟು 38,86,953 ಮಂದಿಯಾಗಿದ್ದರೆ, ನವೆಂಬರ್‌ನಲ್ಲಿ 32,45,730, ಅಕ್ಟೋಬರ್‌ನಲ್ಲಿ 31,95,555, ಸೆಪ್ಟಂಬರ್‌ನಲ್ಲಿ 28,77,090 ಪ್ರವಾಸಿಗರು, ಯಾತ್ರಿಕರ ಆಗಮನದ ಬಗ್ಗೆ ದಾಖಲಾಗಿದೆ.

ಕುಕ್ಕೆ, ಕಟೀಲು, ಧರ್ಮಸ್ಥಳಕ್ಕೆ ಅಧಿಕ ಭೇಟಿ: ದ.ಕ. ಜಿಲ್ಲೆಯ ಇತಿಹಾಸ ಪ್ರಸಿದ್ಧ ಪುಣ್ಯ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ, ಕಟೀಲು, ಧರ್ಮಸ್ಥಳ, ಬಪ್ಪನಾಡು, ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಸ್ಥಾನ, ಮೂಡುಬಿದಿರೆಯ ಜೈನ ಬಸದಿ, ಉಳ್ಳಾಲದ ದರ್ಗಾ, ಸಂತ ಅಲೋಶಿಯಸ್‌ನ ಚಾಪೆಲ್ ವಿದೇಶಿ ಪ್ರವಾಸಿಗರು ಸೇರಿದಂತೆ ಯಾತ್ರಾರ್ಥಿಗಳು ಭೇಟಿ ನೀಡುವ ಪ್ರಮುಖ ತಾಣಗಳಾಗಿವೆ. ಅದರಲ್ಲೂ ಈ ವರ್ಷದ ನಾಲ್ಕು ತಿಂಗಳಲ್ಲಿ 36,24,623 ಮಂದಿಯ ಭೇಟಿಯೊಂದಿಗೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಯಾತ್ರಿಕರ ಭೇಟಿಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಧರ್ಮಸ್ಥಳದ ಮಂಜುನಾಥ ಸ್ವಾಮಿ ಕ್ಷೇತ್ರವು 35,24,715 ಮಂದಿ ಭೇಟಿಯೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದರೆ, ಕಟೀಲು ಕ್ಷೇತ್ರ 32,55,586 ಮಂದಿ ಭೇಟಿಯೊಂದಿಗೆ ತೃತೀಯ ಸ್ಥಾನದಲ್ಲಿದೆ.

ಈ ಅವಧಿಯಲ್ಲಿ ಮುಲ್ಕಿಯ ಬಪ್ಪನಾಡು ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ 9,40,300 ಮಂದಿ, ಕೊಡಿಯಡ್ಕ ಕ್ಷೇತ್ರಕ್ಕೆ 5,05,400 ಮಂದಿ ಭೇಟಿ ನೀಡಿದ್ದಾರೆ.

ಪಣಂಬೂರು, ತಣ್ಣೀರುಬಾವಿ, ಸುರತ್ಕಲ್ ಬೀಚ್ ಆಕರ್ಷಣೆ

ಕಡಲ ನಗರಿ ಮಂಗಳೂರಿನ ಬೀಚ್‌ಗಳು ಪ್ರವಾಸಿಗರ ಆಕರ್ಷಣೀಯ ತಾಣಗಳಲ್ಲಿ ಒಂದಾಗಿವೆ. ಅದರಲ್ಲೂ ರುದ್ರರಮಣೀಯ ಪಣಂಬೂರು ಬೀಚ್‌ನ ಜತೆಗೆ, ಬ್ಲೂಫ್ಲ್ಯಾಗ್ ಮಾನ್ಯತೆಯ ಹೊಸ್ತಿಲಲ್ಲಿರುವ ತಣ್ಣೀರು ಬಾವಿ ಬೀಚ್ ಕೂಡಾ ಜನಾಕರ್ಷಣೆಯ ಕೇಂದ್ರವಾಗಿದೆ. ಕಳೆದ 4 ತಿಂಗಳಲ್ಲಿ ಪಣಂಬೂರು ಬೀಚ್‌ಗೆ 8,74,445 ಮಂದಿ ಭೇಟಿ ನೀಡಿದ್ದರೆ, ತಣ್ಣೀರು ಬಾವಿಗೆ 7,64,179 ಮಂದಿ ಭೇಟಿ ನೀಡಿದ್ದಾರೆ. ಸುರತ್ಕಲ್ ಬೀಚ್‌ಗೆ 4,41,310 ಮಂದಿ ಭೇಟಿ ನೀಡಿದ್ದಾರೆ.

ದ.ಕ. ಜಿಲ್ಲಾ ಪ್ರವಾಸೋದ್ಯಮ ಇಲಾಖೆಯು ಬೀಚ್‌ಗಳಾದ ಸುರತ್ಕಲ್, ಪಣಂಬೂರು, ಉಳ್ಳಾಲ, ತಲಪಾಡಿ ಬೀಚ್, ತಣ್ಣೀರುಬಾವಿ, ಸಸಿಹಿತ್ಲು, ಸೋಮೇಶ್ವರ ಹಾಗೂ ಪ್ರಮುಖ ಪುಣ್ಯ ಕ್ಷೇತ್ರಗಳು, ಮೂಡುಬಿದಿರೆ ಜೈನ ಬಸದಿ, ವೇಣೂರು, ಜಮಲಾಬಾದ್ ಪೋರ್ಟ್, ದಿಡುಪೆ, ಎರ್ಮಯಿ ಫಾಲ್ಸ್, ನೇತ್ರಾವತಿ ನದಿ, ಗುರುಪುರ ನದಿ, ನೆಲ್ಲಿತೀರ್ಥ ಗುಹಾಲಯ, ಸಿಮಂತಿಬಾಯಿ ಸರಕಾರಿ ಮ್ಯೂಸಿಯಂ, ಸುಲ್ತಾನ್‌ಬತ್ತೇರಿ ವಾಚ್ ಟವರ್, ಪಾಂಡೇಶ್ವರದ ಅಂಚೆ ಚೀಟಿ ಸಂಗ್ರಹ ಕೇಂದ್ರ, ಕೊಡಮಗುಂಡಿ ಫಾಲ್ಸ್, ತೋಡಿಕಾನ ಫಾಲ್ಸ್, ಮತ್ಸಧಾಮ, ಎಣ್ಮೂರು ಬಂಟಮಲೆ ಮತ್ತು ಪೂಮಲೆ, ಬೇಂದ್ರೆ ತೀರ್ಥ, ಉಪ್ಪಿಂಗಡಿ ಸಹಸ್ರಲಿಂಗೇಶ್ವರ ದೇವಾಲಯ, ಶಿರಾಡಿ, ಬಿರುಮಲೆ ಬೆಟ್ಟ, ಪಡುಮಲೆ ಬೆಟ್ಟ, ಶಿವರಾಮ ಕಾರಂತ ಬಾಲವನ, ಅನಂತವಾಡಿ ಪಾಂಡವರ ಗುಹೆ, ಕೊಡಿಯಡ್ಕ, ಬೆಳುವಾಯಿಯ ಸಮ್ಮಿಲನ ಬಟರ್‌ಫ್ಲೈ ಪಾರ್ಕ್, ಮರೋಳಿ ಸೂರ್ಯ ನಾರಾಯಣ ದೇವಸ್ಥಾನದಿಂದ ಮಾಹಿತಿಯನ್ನು ಸಂಗ್ರಹಿಸುತ್ತದೆ.

2022ರ ಜನವರಿಯಿಂದ ಡಿಸೆಂಬರ್‌ವರೆಗೆ 1261 ಪ್ರವಾಸಿಗರು ಸೇರಿ ಜಿಲ್ಲೆಯ ವಿವಿಧ ಕಡೆ ಭೇಟಿ ನೀಡಿರುವವರ ಒಟ್ಟು ಸಂಖ್ಯೆ 1,28,91,513 ಆಗಿತ್ತು. 2021ಲ್ಲಿ 123 ವಿದೇಶಿಯರು ಹಾಗೂ 1,03,52,969 ದೇಶೀ ಪ್ರವಾಸಿಗರು ಜಿಲ್ಲೆಯ ವಿವಿಧ ತಾಣಗಳಿಗೆ ಭೇಟಿ ನೀಡಿದ್ದರು.

ಮೂಲಗಳ ಪ್ರಕಾರ 2023ರ ಜುಲೈನಿಂದೀಚೆಗೆ ಪುಣ್ಯ ಕ್ಷೇತ್ರಗಳಿಗೆ ಯಾತ್ರಾರ್ಥಿಗಳ ಹರಿವು ಹೆಚ್ಚಾಗಿದೆ. ಕರ್ನಾಟಕ ಸರಕಾರದ ‘ಶಕ್ತಿ’ ಯೋಜನೆಯ ಉಚಿತ ಬಸ್ ಪ್ರಯಾಣವು ಮಹಿಳಾ ಪ್ರವಾಸಿಗರ ಸಂಖ್ಯೆ ಯನ್ನು ಹೆಚ್ಚಿಸಿದೆ. ಪಣಂಬೂರು, ತಣ್ಣೀರು ಬಾವಿ ಸಹಿತ ಕಡಲ ಕಿನಾರೆಗಳು ಜಲ ಹಾಗೂ ಸಾಹಸ ಕ್ರೀಡೆಗಳ ಮೂಲಕ ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

ತುಳುನಾಡಿನಲ್ಲಿ ಜನವರಿಯಿಂದ ಎಪ್ರಿಲ್‌ವರೆಗೂ ಸಾಮಾನ್ಯವಾಗಿ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು, ಜಾತ್ರೆ, ಮದುವೆ, ಗೃಹ ಪ್ರವೇಶದಂತಹ ಶುಭ ಕಾರ್ಯಗಳೂ ಹೆಚ್ಚಾಗಿರುತ್ತವೆ. ಇದಕ್ಕಾಗಿ ಹೊರ ರಾಜ್ಯ, ಜಿಲ್ಲೆ ಮಾತ್ರವಲ್ಲದೆ, ವಿದೇಶದಲ್ಲಿರುವವರೂ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಊರಿಗೆ ಮರಳುತ್ತಾರೆ. ಪ್ರವಾಸಿ ತಾಣಗಳಿಗೆ, ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಪುಣ್ಯ ಕ್ಷೇತ್ರಗಳಲ್ಲದೆ ಜಿಲ್ಲೆಯ ಕಡಲ ಕಿನಾರೆಗಳು ಪ್ರವಾಸಿಗರ ಆಕರ್ಷಣೀಯ ತಾಣಗಳು. ಬ್ಲೂಫ್ಲ್ಯಾಗ್ ಪಡೆಯುವ ನಿಟ್ಟಿನಲ್ಲಿ ತಣ್ಣೀರು ಬಾವಿ ಬೀಚ್‌ನಲ್ಲಿ ಎಲ್ಲಾ ರೀತಿಯ ಸಿದ್ಧತೆಗಳು ಅಂತಿಮಗೊಂಡಿದ್ದು, ಈ ಬೀಚ್‌ನ ಜತೆಗೆ ಸಮೀಪದ ಪಣಂಬೂರು ಹಾಗೂ ಇತರ ಕಡಲ ಕಿನಾರೆಗಳು ಆಕರ್ಷಣೀಯ ತಾಣಗಳಾಗುತ್ತಿವೆ.

- ಮಾಣಿಕ್ಯ, ಉಪ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ದ.ಕ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಸತ್ಯಾ ಕೆ.

contributor

Similar News