ಕೊರೆಯುವ ಚಳಿಯ ನಡುವೆ ಜಲಪಾತ ವೀಕ್ಷಣೆಗೆ ಪ್ರವಾಸಿಗರ ಲಗ್ಗೆ
ಚಾಮರಾಜನಗರ: ತುಂಬಿ ತುಳುಕುತ್ತಿರುವ ಕಾವೇರಿ-ಕಪಿಲ ನದಿಗಳ ಒಡಲಿನಿಂದಾಗಿ ಗಡಿನಾಡು ಚಾಮರಾಜನಗರ ಜಿಲ್ಲೆಯ ಜಲಪಾತಗಳು ಬೋರ್ಗರೆಯುತ್ತಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆದುಕೊಳ್ಳುತ್ತಿವೆ.
ಕಾವೇರಿ, ಕಪಿಲ ನದಿ ಪಾತ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಎರಡೂ ನದಿಗಳಲ್ಲಿ ಒಳ ಹರಿವು ನೀರು ಹೆಚ್ಚಾಗಿದ್ದರಿಂದ ಕಬಿನಿ ಮತ್ತು ಕೆ.ಆರ್.ಎಸ್ ಜಲಾಶಯಗಳು ಸಂಪೂರ್ಣ ಭರ್ತಿಯತ್ತ ಕಾಲಿಡುತ್ತಿದ್ದಂತೆ, ಜಲಾಶಯಗಳ ಹಿತದೃಷ್ಟಿಯಿಂದಾಗಿ ಜಲಾಶಯಗಳಿಂದ ಸಾವಿರಾರು ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯ ಟಿ.ನರಸೀಪುರದ ಕಾವೇರಿ-ಕಪಿಲ ನದಿಗಳ ನೀರು ಹೆಚ್ಚಾಗಿದ್ದು, ಅಲ್ಲಿ ಸೃಷ್ಟಿಯಾಗುವ ಸ್ಪಟಿಕ ಸರೋವರದ ನೀರು ಅತೀ ಹೆಚ್ಚಾಗಿ ಕೊಳ್ಳೇಗಾಲ ತಾಲೂಕಿನ ನದಿ ಪಾತ್ರದಲ್ಲಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿ ವಾಸ ಮಾಡುವ ಜನರಿಗೆ ಕಿರಿಕಿರಿಯಾಗಿದೆ. ಅದೂ ಅಲ್ಲದೆ ನದಿ ಪಾತ್ರದ ಬಳಿ ಕೃಷಿ ಮಾಡುವ ರೈತರ ಜಮೀನುಗಳಿಗೆ ನೀರು ಹರಿಯುವ ಹಂತದಲ್ಲಿದ್ದು, ರೈತರು ಬೆಳೆದ ಫಸಲುಗಳು ನೀರಿನಿಂದ ಜಲಾವೃತಗೊಳ್ಳಲಿದೆ.
ಯಡಕುರಿಯಾ ಬಳಿ ಸೇತುವೆ ನಿರ್ಮಾಣದಿಂದಾಗಿ ಅಲ್ಲಿ ವಾಸ ಮಾಡುವ ಜನರು ತುಸು ನಿಟ್ಟುಸಿರು ಬಿಟ್ಟಿದ್ದಾರೆ. ಒಂದು ವೇಳೆ ಯಡಕುರಿಯಾ ಬಳಿ ಸೇತುವೆ ನಿರ್ಮಾಣವಾಗದೇ ಇದ್ದರೆ ಯಡಕುರಿಯಾದಲ್ಲಿ ವಾಸ ಮಾಡುವ ಜನರು ನದಿ ಪಾತ್ರದಲ್ಲಿ ನೀರು ಹರಿವು ಕಡಿಮೆಯಾಗುವ ತನಕ ಅಲ್ಲೇ ಇರುವ ಪರಿಸ್ಥಿತಿ ಬರುತ್ತಿತ್ತು.
ಸತ್ತೇಗಾಲದ ಬಳಿಯೂ ನದಿಪಾತ್ರದ ನೀರು ಹರಿವು ಹೆಚ್ಚಾಗಿದ್ದರಿಂದ ಸಮೀಪದ ಭರಚುಕ್ಕಿ ಜಲಪಾತದಲ್ಲಿ ಧುಮ್ಮಿಕ್ಕುವ ನೀರು ಅಧಿಕವಾಗಿರುವುದರಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದ್ದು, ಇದು ಕರ್ನಾಟಕದ ನಯಾಗರ ಕೇಂದ್ರವನ್ನಾಗಿಸಿದೆ. ಅದೂ ಅಲ್ಲದೆ, ಶಿವನಸಮುದ್ರ ಬಳಿಯ ದರ್ಗಾದ ಬಳಿ ಇರುವ ಗಗನ ಚುಕ್ಕಿ ಜಲಪಾತದಲ್ಲೂ ನೀರಿನ ಪ್ರಮಾಣ ಅಧಿಕವಾಗಿರುವ ಹಿನ್ನೆಲೆಯಲ್ಲಿ ಇಲ್ಲೂ ಸಹ ಪ್ರವಾಸಿಗರು ಹೆಚ್ಚಾಗಿ ಆಗಮಿಸಿ, ನೀರಿನ ಮನಮೋಹಕ ದೃಶ್ಯವನ್ನು ಕಂಡು ಪುಳಕಿತರಾಗುತ್ತಿದ್ದಾರೆ.
ಚುಮು ಚುಮು ಚಳಿಯ ನಡುವೆ ಬೀಳುತ್ತಿರುವ ತುಂತುರು ಮಳೆಯಲ್ಲೇ ಪ್ರವಾಸಿಗರು ಈ ಅವಳಿ ಜಲಪಾತಗಳನ್ನು ಕಂಡು ಕಣ್ತುಂಬಿಸಿಕೊಳ್ಳಲು ಕಾತುರದಿಂದ ಹೆಜ್ಜೆಯಿಡುತ್ತಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿರುವ ಅವಳಿ ಜಲಾಶಯಗಳಿಗೆ ಬರುವ ಪ್ರವಾಸಿಗರ ಹಿತದೃಷ್ಟಿಯಿಂದ ಮತಷ್ಟು ಮೂಲ ಸೌಕರ್ಯ ಕಲ್ಪಿಸಬೇಕು. ಜಲಪಾತದ ಕೆಳಗೆ ಯಾರೂ ಹೋಗದಂತೆ ನಿರ್ಬಂಧಿಸಬೇಕು ಹಾಗೂ ಜಲಪಾತಗಳು ಬೋರ್ಗರೆಯುವ ದಿನಗಳಲ್ಲಿ ವಿಶೇಷ ವಾಹನ ವ್ಯವಸ್ಥೆ ಮಾಡಬೇಕು.
<ಮನೋಜ್ ಕುಮಾರ್, ಪ್ರವಾಸಿಗ, ಬೆಂಗಳೂರು