ನಿರುದ್ಯೋಗ ಮತ್ತು ಯುವಜನರ ಮತ ಭ್ರಾಂತಿ

ಜರ್ಮನಿ ಕೂಡಾ ಇಂತಹ ಹುಸಿ ಪ್ರತಿಷ್ಠೆಯಿಂದಾಗಿಯೇ ಪತನಗೊಂಡಿದ್ದು ಎಂಬ ನೆನಪೂ ಈಗಿನ ಕಾಲಘಟ್ಟದ ಯುವಕರಿಗಿಲ್ಲದ ಸ್ಥಿತಿ ನಿರ್ಮಾಣವಾಗತೊಡಗಿದೆ ಅಥವಾ ಅಂತಹ ಅರಿವಿನ ಪ್ರಜ್ಞೆಯೇ ಅವರಲ್ಲಿ ಮೂಡದಂತೆ ಸದಾ ಕಾಲ ಅವರನ್ನು ಧರ್ಮದ ನಶೆಯಲ್ಲಿರಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಸ್ವತಃ ಪ್ರಧಾನಿಯೊಬ್ಬರೇ ಧಾರ್ಮಿಕ ಕಾರ್ಯಕ್ರಮಗಳ ಪೌರೋಹಿತ್ಯದಲ್ಲಿ ತೊಡಗಿರುವ ದುರಂತಕ್ಕೆ ನಮ್ಮ ದೇಶ ಸಾಕ್ಷಿಯಾಗತೊಡಗಿದೆ. ಯಾವುದೇ ದೇಶ, ಸಮಾಜ, ಸಂಸ್ಕೃತಿ ಇಂತಹ ಹಿಮ್ಮುಖ ಚಲನೆಯಿಂದ ಪ್ರಾರಂಭಗೊಂಡೇ ನಂತರ ಪತನಕ್ಕೀಡಾಗುವುದು. ಇಂಥ ಪತನದ ನೇತೃತ್ವ ವಹಿಸಿರುವುದು ಮಾತ್ರ ಹುಸಿ ಧಾರ್ಮಿಕ ಹೆಮ್ಮೆಯ ನಶೆಯನ್ನೇರಿಸಿಕೊಂಡಿರುವ ಯುವಕರು ಎಂಬುದು ಈ ಹೊತ್ತಿನ ವಿಕಟಗಳಲ್ಲೊಂದು.

Update: 2024-04-04 10:15 GMT

1930ರ ಅಡಾಲ್ಫ್ ಹಿಟ್ಲರ್ ದಶಕ ಜರ್ಮನಿಯ ಪಾಲಿಗೆ ಇಂದಿಗೂ ದುಃಸ್ವಪ್ನವಾಗಿಯೇ ಉಳಿದಿದೆ. ಬಲಿಷ್ಠ ದೇಶವನ್ನು ನಿರ್ಮಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಅಡಾಲ್ಫ್ ಹಿಟ್ಲರ್, ನಂತರ ಪ್ರಜಾತಾಂತ್ರಿಕ ಜರ್ಮನಿಯ ಸ್ಥಾನದಲ್ಲಿ ನಿರ್ಮಿಸಿದ್ದು ಸರ್ವಾಧಿಕಾರಿ ಜರ್ಮನಿಯನ್ನು. ಅದಕ್ಕಾಗಿ ಸ್ವತಃ ಅಡಾಲ್ಫ್ ಹಿಟ್ಲರ್ ಮತ್ತು ಜರ್ಮನಿಗಳೆರಡೂ ಬೆಲೆ ತೆತ್ತಿದ್ದು ಇತಿಹಾಸ.

ಜರ್ಮನಿಯನ್ನು ಆರ್ಯನ್ ಹಿರಿಮೆ ಹಾಗೂ ಯಹೂದಿ ದ್ವೇಷದೊಂದಿಗೆ ಇಬ್ಭಾಗಿಸಿದ ಅಡಾಲ್ಫ್ ಹಿಟ್ಲರ್ ಉತ್ತಮ ವಾಗ್ಮಿಯಾಗಿದ್ದ. ಆತನ ಮಾತುಗಳಲ್ಲಿ ಚುಂಬಕ ಶಕ್ತಿಯಿತ್ತು. ಆದರೆ, ಆತ ಅದನ್ನು ಬಳಸಿಕೊಂಡಿದ್ದು ಮಾತ್ರ ಜರ್ಮನಿಯನ್ನು ಇಬ್ಭಾಗಿಸಲು ಹಾಗೂ ನರಮೇಧದ ರಣರಂಗವಾಗಿಸಲು. ‘ಮಾತು ಬೆಳ್ಳಿ; ಮೌನ ಬಂಗಾರ’ ಎಂಬ ನಾಣ್ಣುಡಿಯ ಮಹತ್ವವನ್ನು ಮತ್ತೊಮ್ಮೆ ಎತ್ತಿ ಹಿಡಿದ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಅಗಿದ್ದ. ಇಷ್ಟಕ್ಕೂ ಎಲ್ಲ ಜನಾಂಗೀಯವಾದಿಗಳು ಹಾಗೂ ಸರ್ವಾಧಿಕಾರಿಗಳ ಬಂಡವಾಳ ಮಾತೇ ಆಗಿರುವುದಕ್ಕೆ ಇತಿಹಾಸದಲ್ಲಿ ಹೇರಳ ನಿದರ್ಶನಗಳು ದೊರೆಯುತ್ತವೆ.

ಅಡಾಲ್ಫ್ ಹಿಟ್ಲರ್ ಅವಧಿಯಲ್ಲಿ ಜರ್ಮನಿ ಕೇವಲ ಜನಾಂಗೀಯ ರಕ್ತಪಾತದಿಂದ ಮಾತ್ರ ನಲುಗಿರಲಿಲ್ಲ. ನಿರುದ್ಯೋಗದಿಂದಲೂ ಬಸವಳಿದು ಹೋಗಿತ್ತು. ಅಡಾಲ್ಫ್ ಹಿಟ್ಲರ್ ಅವಧಿಯಲ್ಲಿ ಜರ್ಮನಿಯಲ್ಲಿ 60 ದಶಲಕ್ಷ ನಿರುದ್ಯೋಗಿಗಳಿದ್ದರು. ಹೀಗಿದ್ದೂ, ಜನಾಂಗೀಯವಾದವನ್ನು ಬೆನ್ನ ಮೇಲೆ ಹೊತ್ತುಕೊಂಡಿದ್ದವರೂ ಅದೇ ನಿರುದ್ಯೋಗಿಗಳು ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ವಿಪರ್ಯಾಸಗಳಲ್ಲೊಂದು. ಯಹೂದಿ ದ್ವೇಷ ಜರ್ಮನಿಯಲ್ಲಿ ಯಾವ ಪರಿ ಬೇರು ಬಿಟ್ಟಿತ್ತೆಂದರೆ, ಅಸಹಾಯಕ ಹೆಣ್ಣು ಮಗಳೊಬ್ಬಳನ್ನು ಹದಿಹರೆಯದ ಪೋರನೊಬ್ಬ ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ನಡೆಸುವಷ್ಟು. ಇದೇ ಕಾರಣಕ್ಕೆ ಕಾರ್ಲ್ ಮಾರ್ಕ್ಸ್

ಧರ್ಮವನ್ನು ಅಫೀಮಿಗೆ ಹೋಲಿಸಿದ್ದು. ಧರ್ಮದ ನಶೆ ಹಲವಾರು ಜನಾಂಗಗಳನ್ನು ಚಿತ್ತ ಭ್ರಾಂತಿಗೆ ದೂಡಿರುವ ಹೇರಳ ನಿದರ್ಶನಗಳು ಇತಿಹಾಸದಲ್ಲಿ ದೊರೆಯುತ್ತವೆ. ಅದರಲ್ಲೂ ಉದ್ಯೋಗವಿಲ್ಲದ ಯುವಕರನ್ನು ಅದು ಇನ್ನಿಲ್ಲದಂತೆ ಆವರಿಸಿಕೊಳ್ಳುತ್ತದೆ. ‘Idle mind is a devil’s work shop’ ಎಂಬ ನಾಣ್ಣುಡಿಯಂತೆ, ಇಂಥ ಕೆಲಸವಿಲ್ಲದ ಯುವಕರು ಸದಾ ಯಾವುದಾದರೂ ಒಂದು ನಶೆಗಾಗಿ ಹಪಹಪಿಸುತ್ತಿರುತ್ತಾರೆ. ಇಂಥವರಿಗೆ ಧರ್ಮದ ನಶೆ ಆವರಿಸಿದರಂತೂ ಹಿಂಸಾಪಶುಗಳಾಗಿ ಬದಲಾಗಿ ಬಿಡುತ್ತಾರೆ.

ಈ ಮಾತಿಗೆ ಜರ್ಮನಿಯ ಹಿಟ್ಲರ್ ಅವಧಿಯಂತೆಯೇ, ಭಾರತದಲ್ಲಿ ರಾಮ ಜನ್ಮಭೂಮಿ ರಥ ಯಾತ್ರೆಯ ನಂತರದ ಅವಧಿಯೂ ಜ್ವಲಂತ ನಿದರ್ಶನವಾಗಿದೆ. 1990ರಲ್ಲಿ ಬಿಜೆಪಿಯ ಅಂದಿನ ರಾಷ್ಟ್ರೀಯ ಅಧ್ಯಕ್ಷ ಲಾಲ್ ಕೃಷ್ಣ ಅಡ್ವಾಣಿ ನಡೆಸಿದ ರಥ ಯಾತ್ರೆಯು ಆಗಷ್ಟೇ ಆಧುನಿಕ ಜಗತ್ತಿಗೆ ಕಣ್ಣು ಬಿಡುತ್ತಿದ್ದ ಯುವಕರಲ್ಲಿ ಧರ್ಮದ ನಶೆಯನ್ನೇರಿಸಿತು. ಇದರ ಪರಿಣಾಮವಾಗಿ ಡಿಸೆಂಬರ್ 6, 1992ರಂದು ನಡೆದ ಬಾಬರಿ ಮಸೀದಿ ಧ್ವಂಸದಲ್ಲಿ ಭಾಗಿಯಾಗಿದ್ದ ಬಹುತೇಕರು ಆಗಷ್ಟೆ ಯೌವನಕ್ಕೆ ಕಾಲಿಟ್ಟ ಯುವಕರಾಗಿದ್ದರು. ಅದರಲ್ಲೂ ಹಿಂದುಳಿದ ವರ್ಗಗಳ ಯುವಕರಾಗಿದ್ದರು. ಈಗಲೂ ಹಿಂದೂ ಧರ್ಮದ ರಕ್ಷಣೆಗೆ ಕಟಿಬದ್ಧರಾಗಿರುವುದೂ ಕೂಡಾ ಇಂತಹ ಹಿಂದುಳಿದ ವರ್ಗಗಳ ಯುವಕರೇ ಆಗಿದ್ದಾರೆ. ದಕ್ಷಿಣ ಕನ್ನಡದಲ್ಲಿ ಧರ್ಮ ರಕ್ಷಣೆಯ ಹೆಸರಲ್ಲಿ ಪೊಲೀಸ್ ಕೇಸುಗಳನ್ನು ಹಾಕಿಸಿಕೊಂಡು ಜೈಲಿನಲ್ಲಿ ಕೊಳೆಯುತ್ತಿರುವ ಬಹುತೇಕ ಯುವಕರು ಹಿಂದುಳಿದ ವರ್ಗಗಳ ಬಿಲ್ಲವ, ಮೊಗವೀರ ಯುವಕರೇ ಆಗಿರುವುದು ಈ ಮಾತಿಗೆ ನಿದರ್ಶನ.

ಇಂತಹ ಸಂಕೀರ್ಣ ಕಾಲಘಟ್ಟದಲ್ಲೇ, ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಘಟನೆಯು ಭಾರತದಲ್ಲಿನ ನಿರುದ್ಯೋಗ ಪ್ರಮಾಣದ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ, ಕಳೆದ ಎರಡು ದಶಕಗಳಲ್ಲೇ ಭಾರತದಲ್ಲಿ ಗರಿಷ್ಠ ಪ್ರಮಾಣದ ನಿರುದ್ಯೋಗ ತಾಂಡವವಾಡುತ್ತಿದೆ. ಇನ್ನೂ ಆಘಾತಕಾರಿ ಸಂಗತಿಯೆಂದರೆ, ನಿರುದ್ಯೋಗಿಗಳ ಪೈಕಿ ಶೇ. 83ರಷ್ಟು ಮಂದಿ ಯುವಕರೇ ಆಗಿರುವುದು.

2000 ಇಸವಿಯಲ್ಲಿ ಶೇ. 35.2ರಷ್ಟಿದ್ದ ಪ್ರೌಢ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಪದವೀಧರರ ನಿರುದ್ಯೋಗ ಪ್ರಮಾಣವು, 2022ರಲ್ಲಿ ಶೇ. 65.7ಕ್ಕೆ ಏರಿಕೆಯಾಗಿದೆ. ಅರ್ಥಾತ್ ಎಸೆಸೆಲ್ಸಿಯಿಂದ ಸ್ನಾತಕೋತ್ತರ ಪದವಿಗಳನ್ನು ಪೂರೈಸಿರುವ ಯುವಕರ ಪೈಕಿ ಅರ್ಧಕ್ಕೂ ಹೆಚ್ಚು ಯುವಕರು ಉದ್ಯೋಗಾವಕಾಶವಿಲ್ಲದಂತಾಗಿದ್ದಾರೆ. ಇನ್ನೂ ಆಘಾತಕಾರಿ ಸಂಗತಿಯೆಂದರೆ, ಈಗಲೂ ಕೂಡಾ ಸೇವಾ ಭದ್ರತೆಯಿಲ್ಲದ ಅನೌಪಚಾರಿಕ ವಲಯದಲ್ಲಿ ಶೇ. 90ರಷ್ಟು ಮಂದಿ ಉದ್ಯೋಗ ನಿರ್ವಹಿಸುತ್ತಿದ್ದಾರೆ.

ಇಪ್ಪತ್ತೊಂದನೇ ಶತಮಾನ ಶೈಕ್ಷಣಿಕ ವಲಯದಲ್ಲಿ ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಿದ್ದರೂ, ಈಗಲೂ ಶೇ. 65ರಷ್ಟು ಮಂದಿ ಯುವಕರಿಗೆ ಈಮೇಲ್‌ನೊಂದಿಗೆ ಯಾವುದಾದರೂ ಕಡತವನ್ನು ಲಗತ್ತಿಸಲು ಬರುವುದಿಲ್ಲ ಎಂಬ ಆಘಾತಕಾರಿ ಸಂಗತಿಯನ್ನು ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಘಟನೆಯ ವರದಿ ಬಯಲು ಮಾಡಿದೆ. ಹಾಗೆಯೇ. ಶೇ. 60ರಷ್ಟು ಮಂದಿ ಯುವಕರಿಗೆ ಯಾವುದಾದರೂ ಕಡತವನ್ನು ನಕಲು ಮಾಡಿ ಅಂಟಿಸಲು ಬರುವುದಿಲ್ಲ ಮತ್ತು ಗಣಿತ ಸೂತ್ರಗಳನ್ನು ಬರೆಯಲು ಬರುವುದಿಲ್ಲ ಎಂಬ ಸಂಗತಿಯೂ ಬಯಲಾಗಿದೆ. ಇದರರ್ಥ, ಭಾರತದಲ್ಲಿನ ಶೈಕ್ಷಣಿಕ ವ್ಯವಸ್ಥೆಯು ಅಧೋಗತಿಗೆ ತಲುಪಿದೆ ಎಂದು. ಮತ್ತೊಂದೆಡೆ ಇಂತಹ ಅಶಿಕ್ಷಿತ ಯುವಕರೇ ಧರ್ಮ ರಕ್ಷಣೆಯ ಕಾಲಾಳುಗಳಾಗಿಯೂ ಬದಲಾಗುವ ಮೂಲಕ ಧಾರ್ಮಿಕ ಉನ್ಮಾದ ಮುನ್ನೆಲೆಗೆ ಬಂದು, ಶೈಕ್ಷಣಿಕ ಮಹತ್ವ ಹಿನ್ನೆಲೆಗೆ ಸರಿಯುತ್ತಿದೆ ಎಂದೂ ಕೂಡಾ.

ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಈ ದೇಶದ ಪ್ರಥಮ ಪ್ರಧಾನಿಯಾಗಿದ್ದ ಪಂಡಿತ್ ಜವಾಹರಲಾಲ್ ನೆಹರೂ ದೇಶವನ್ನು ವೈಜ್ಞಾನಿಕ ಚಿಂತನೆಯ ತಳಹದಿಯಲ್ಲಿ ನಿರ್ಮಿಸಲು ಮುಂದಾಗಿದ್ದರಿಂದ, ಕನಿಷ್ಠ ಪ್ರಮಾಣದ ಅಕ್ಷರಸ್ಥರನ್ನು ಹೊಂದಿದ್ದ ಭಾರತವು ಕೆಲವೇ ವರ್ಷಗಳಲ್ಲಿ ಇಡೀ ವಿಶ್ವವೇ ನಿಬ್ಬೆರಗಾಗುವಂತೆ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡ ಸಾಧನೆಯನ್ನು ಮಾಡಲು ಸಾಧ್ಯವಾಯಿತು. ಅಕ್ಷರತೆಯ ಪ್ರಮಾಣ ಕ್ರಮೇಣವಾಗಿ ಆರೋಗ್ಯಕರ ಸ್ಥಿತಿಗೆ ತಲುಪುವಂತಾಗಲು ಸಾಧ್ಯವಾಯಿತು. ದುರಂತವೆಂದರೆ, ಈಗಿನ ಅಕ್ಷರವಂತ ಜನರೇ ಮೌಢ್ಯದ ದಾಸರಾಗಿ ಬದಲಾಗಿರುವುದು. ಇದರ ಅರ್ಥ, ಅಕ್ಷರವಂತರು ತಾವು ಪಡೆದ ಶಿಕ್ಷಣವನ್ನು ತಮ್ಮ ಪರಂಪರಾಗತ ನಂಬಿಕೆ, ಸಂಪ್ರದಾಯ, ಕಟ್ಟುಪಾಡುಗಳನ್ನು ಜತನದಿಂದ ಪಾಲಿಸಲು ಮಾತ್ರ ಬಳಸಿಕೊಳ್ಳುತ್ತಿದ್ದಾರೆ ಹೊರತು ಪಟ್ಟಭದ್ರ ಹಿತಾಸಕ್ತಿಗಳು ರೂಪಿಸಿರುವ ಧಾರ್ಮಿಕ ಕಂದಾಚಾರಗಳನ್ನು ವೈಜ್ಞಾನಿಕ ತಳಹದಿಯಲ್ಲಿ ಪ್ರಶ್ನಿಸಲಿಲ್ಲ ಎಂಬುದು ವೇದ್ಯವಾಗುತ್ತಿದೆ.

ಬಹುಶಃ ಸ್ವಾತಂತ್ರ್ಯಾನಂತರದ 50 ವರ್ಷಗಳೇ ಭಾರತದ ಪಾಲಿಗೆ ಸುವರ್ಣ ಯುಗವಾಗಿತ್ತು ಎನ್ನಿಸುತ್ತದೆ. ಈ ಅವಧಿಯಲ್ಲಿ ಬಂದ ಎಲ್ಲ ಸರಕಾರಗಳು ತಮ್ಮ ಪ್ರಜೆಗಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ರೂಢಿಸಲು ಒತ್ತು ನೀಡಿದ್ದರಿಂದ, ಪ್ರಜಾಸತ್ತಾತ್ಮಕ ವಾತಾವರಣವನ್ನು ಸೃಷ್ಟಿಸಿದ್ದರಿಂದ ಸಾಮಾಜಿಕ, ಸಾಂಸ್ಕೃತಿಕ, ವೈಚಾರಿಕ ಹಾಗೂ ವೈಜ್ಞಾನಿಕ ವಲಯಗಳಲ್ಲಿ ದೊಡ್ಡ ಪರಿವರ್ತನೆಯೇ ನಡೆದು ಹೋಯಿತು. ಈ ಕಾಲಘಟ್ಟದಲ್ಲಿ ಅಂತರ್ಜಾತಿ ವಿವಾಹಗಳು ಸಾಮಾಜಿಕ ಮೌಲ್ಯಗಳಾಗಿದ್ದವು. ಸಹಮಾನವರನ್ನು ಸಮಾನವಾಗಿ ನೋಡಬೇಕು, ಅವರ ಆಚಾರ-ವಿಚಾರಗಳನ್ನು ಗೌರವಿಸಬೇಕು ಎಂಬುದು ಸಾಂಸ್ಕೃತಿಕ ಮೌಲ್ಯವಾಗಿತ್ತು. ಧಾರ್ಮಿಕ ಆಚರಣೆಗಳ ನೆಪದಲ್ಲಿ ನಡೆಯುವ ಮೌಢ್ಯಾಚರಣೆ, ಕಂದಾಚಾರಗಳನ್ನು ವಿರೋಧಿಸಬೇಕು ಎಂಬುದು ವೈಚಾರಿಕ ಮೌಲ್ಯವಾಗಿತ್ತು. ಅನುಭವಕ್ಕೆ ಬಾರದ ಏನನ್ನೂ ಒಪ್ಪಿಕೊಳ್ಳಬಾರದು ಎಂಬುದು ವೈಜ್ಞಾನಿಕ ಮೌಲ್ಯವಾಗಿತ್ತು. ಆದರಿಂದು, ಜಾತಿ ಅಸ್ಮಿತೆಯ ಹೆಸರಲ್ಲಿ ಜಾತೀಯತೆ ಸಾಮಾಜಿಕ ಮೌಲ್ಯವಾಗಿ ಮರು ರೂಪುಗೊಳ್ಳತೊಡಗಿದೆ. ಆಚಾರ-ವಿಚಾರಗಳ ನೆಪದಲ್ಲಿ ಸಹಮಾನವನ್ನು ದೂರೀಕರಿಸುವುದು, ತುಚ್ಛೀಕರಿಸುವುದು ಸಾಂಸ್ಕೃತಿಕ ಮೌಲ್ಯವಾಗತೊಡಗಿದೆ. ಎಲ್ಲ ಕಂದಾಚಾರ, ಮೌಢ್ಯಾಚರಣೆಗಳನ್ನು ಧರ್ಮ, ಸಂಸ್ಕೃತಿಯ ಹೆಸರಲ್ಲಿ ಒಪ್ಪುವುದು, ಅಪ್ಪುವುದು, ಅದನ್ನು ವಿರೋಧಿಸುವವರನ್ನು ಧರ್ಮ ವಿರೋಧಿಗಳು ಎಂದು ಬಿಂಬಿಸುವುದು ವೈಚಾರಿಕ ಮೌಲ್ಯವಾಗಿ ಬೆಳೆಯತೊಡಗಿದೆ. ಈ ಆಧುನಿಕ ಕಾಲಘಟ್ಟದ ಎಲ್ಲ ಆವಿಷ್ಕಾರಗಳೂ ಪುರಾಣ ಕಾಲ ಘಟ್ಟದಲ್ಲಿಯೇ ಅಸ್ತಿತ್ವದಲ್ಲಿದ್ದವು ಎಂಬ ಹುಸಿ ಹೆಮ್ಮೆಯನ್ನು ಪ್ರಕಟಪಡಿಸುವುದು ವೈಜ್ಞಾನಿಕ ಮೌಲ್ಯವೆಂದು ಕರೆಯಲ್ಪಡುತ್ತಿದೆ.

ಜರ್ಮನಿ ಕೂಡಾ ಇಂತಹ ಹುಸಿ ಪ್ರತಿಷ್ಠೆಯಿಂದಾಗಿಯೇ ಪತನಗೊಂಡಿದ್ದು ಎಂಬ ನೆನಪೂ ಈಗಿನ ಕಾಲಘಟ್ಟದ ಯುವಕರಿ ಗಿಲ್ಲದ ಸ್ಥಿತಿ ನಿರ್ಮಾಣವಾಗತೊಡಗಿದೆ ಅಥವಾ ಅಂತಹ ಅರಿವಿನ ಪ್ರಜ್ಞೆಯೇ ಅವರಲ್ಲಿ ಮೂಡದಂತೆ ಸದಾ ಕಾಲ ಅವರನ್ನು ಧರ್ಮದ ನಶೆಯಲ್ಲಿರಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಸ್ವತಃ ಪ್ರಧಾನಿಯೊಬ್ಬರೇ ಧಾರ್ಮಿಕ ಕಾರ್ಯಕ್ರಮಗಳ ಪೌರೋಹಿತ್ಯದಲ್ಲಿ ತೊಡಗಿರುವ ದುರಂತಕ್ಕೆ ನಮ್ಮ ದೇಶ ಸಾಕ್ಷಿಯಾಗತೊಡಗಿದೆ. ಯಾವುದೇ ದೇಶ, ಸಮಾಜ, ಸಂಸ್ಕೃತಿ ಇಂತಹ ಹಿಮ್ಮುಖ ಚಲನೆಯಿಂದ ಪ್ರಾರಂಭಗೊಂಡೇ ನಂತರ ಪತನಕ್ಕೀಡಾಗುವುದು. ಇಂಥ ಪತನದ ನೇತೃತ್ವ ವಹಿಸಿರುವುದು ಮಾತ್ರ ಹುಸಿ ಧಾರ್ಮಿಕ ಹೆಮ್ಮೆಯ ನಶೆಯನ್ನೇರಿಸಿಕೊಂಡಿರುವ ಯುವಕರು ಎಂಬುದು ಈ ಹೊತ್ತಿನ ವಿಕಟಗಳಲ್ಲೊಂದು.

ಮತ ಭ್ರಾಂತಿ ಒಂದಿಲ್ಲೊಂದು ದೇಶಗಳನ್ನು ಬಲಿ ಪಡೆದಿರುವ ನಿದರ್ಶನ ವಿಶ್ವದೆಲ್ಲೆಡೆ ದೊರೆಯುತ್ತದೆ. ಆದರೆ, ಅಂತಹ ಮತ ಭ್ರಾಂತಿಯನ್ನು ಹೋಗಲಾಡಿಸುವುದು ಮಾತ್ರ ವೈಚಾರಿಕ ಮತ್ತು ವೈಜ್ಞಾನಿಕ ಮನೋಧರ್ಮ ಮಾತ್ರ. ಇದನ್ನು ರೂಢಿಸಬೇಕಿರುವುದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರ ಕರ್ತವ್ಯ ಮಾತ್ರವಲ್ಲ; ನಮ್ಮನ್ನಾಳುವ ರಾಜಕೀಯ ನಾಯಕರ ಕರ್ತವ್ಯ ಕೂಡಾ. ಅದು ಬಿಟ್ಟು ದೇಶದ ಪ್ರಧಾನಿಯೇ ಧರ್ಮಗುರುಗಳ ಕಾಲಿಗೆ ಅಡ್ಡ ಬೀಳತೊಡಗಿದರೆ, ಅಂತಹ ದೇಶಕ್ಕೆ ಭವಿಷ್ಯವಾದರೂ ಎಲ್ಲಿರುತ್ತದೆ? ನಿರುದ್ಯೋಗವಾದರೂ ಹೇಗೆ ನಿರ್ಮೂಲನೆಯಾಗುತ್ತದೆ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಸದಾನಂದ ಗಂಗನಬೀಡು

contributor

Similar News