‘ಏಕರೂಪಿ ನಾಗರಿಕ ಸಂಹಿತೆ’ : ಕುರಿಯನ್ನು ಕಾಯುತ್ತಿರುವ ತೋಳ

ಹಿಂದೂ ಮಸೂದೆ ಕೋಡ್ ಬಿಲ್ ಮತ್ತು ಶಾ ಬಾನು ಪ್ರಕರಣಗಳು ಏಕರೂಪಿ ನಾಗರಿಕ ಸಂಹಿತೆಯ ಕಾನೂನಿಗೆ ಅತ್ಯಂತ ಪೂರಕವಾಗಿಯೇ ಪರಿಗಣಿಸಲ್ಪಡುತ್ತವೆ. ಆದರೆ ಅಂದು ಐವತ್ತರ ದಶಕದಲ್ಲಿ ಏಕರೂಪಿ ನಾಗರಿಕ ಸಂಹಿತೆಗೆ ತಳಹದಿಯನ್ನು ಒದಗಿಸುತ್ತಿದ್ದ ಈ ಹಿಂದೂ ಮಸೂದೆ ಕೋಡ್ ಬಿಲ್ ಅನ್ನು ಧರ್ಮ ಮತ್ತು ಜಾತಿಕಾರಣಕ್ಕಾಗಿ ವಿರೋಧಿಸಿದ್ದ ಸಂಘಿಗಳು ಇಂದು ಮಹಾನ್ ದೇಶಪ್ರೇಮಿಗಳಂತೆ ಇದೇ ನಾಗರಿಕ ಸಂಹಿತೆಯ ಪರವಾಗಿ ವಾದಿಸುತ್ತಿರುವುದು ಬಲು ದೊಡ್ಡ ವ್ಯಂಗವೇ ಸರಿ.

Update: 2023-07-31 05:51 GMT

ಸಂಘ ಪರಿವಾರದ ತಗಲೂಫಿತನ

ಈ ಬಾರಿಯ ಮಳೆಗಾಲದ ಅಧಿವೇಶನ ದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರವು ‘ಏಕರೂಪಿ ನಾಗರಿಕ ಸಂಹಿತೆ’ (ಯುಸಿಸಿ) ಮಸೂದೆ ಮಂಡಿಸುವ ಸಾಧ್ಯತೆಗಳಿವೆ. ಇದಕ್ಕೆ ಹಿನ್ನೆಲೆಯಾಗಿ ಭಾರತೀಯ ಕಾನೂನು ಆಯೋಗವು ಜೂನ್ ೨೦೨೩ರಲ್ಲಿ ಯುಸಿಸಿ ಕುರಿತು ಸಾರ್ವಜನಿಕ ಅಭಿಪ್ರಾಯ ಕೋರಿ ಅಧಿಸೂಚನೆ ಹೊರಡಿಸಿದೆ. ಕೇಂದ್ರ ಕಾನೂನು ಆಯೋಗ ಅನೇಕ ಪ್ರಶ್ನಾವಳಿಗಳನ್ನು ಮುಂದಿಟ್ಟಿದೆ. ಭಾರತೀಯರಿಗೆ ಪ್ರತಿಕ್ರಿಯಿಸಲು ಕೇಳಿಕೊಂಡಿದೆ. ಅದರೆ ಈ ಯುಸಿಸಿಯ ಕರಡು ಪ್ರತಿ ಲಭ್ಯವಿಲ್ಲದೆ, ಅದರ ವಿವರಗಳು ಗೊತ್ತಿಲ್ಲದೆ ಏಕಪಕ್ಷೀಯವಾಗಿ ಸಾರ್ವಜನಿಕರನ್ನು ನೀವು ಅದರ ಪರವೋ, ವಿರೋಧವೋ ಎಂದು ಚರ್ಚೆ ಮಾಡುತ್ತಿರುವುದು ಬಿಜೆಪಿ ಸರಕಾರದ ಒಡೆದು ಆಳುವ ನೀತಿಯನ್ನು ಬಯಲುಗೊಳಿಸುತ್ತದೆ. ಈಗಾಗಲೇ ಬಿಜೆಪಿಯ ವಾಟ್ಸ್ಆ್ಯಪ್ ವಿವಿಗಳ ಮೂಲಕ ಈ ಯುಸಿಸಿ ಮಸೂದೆಯು ಹಿಂದೂಗಳ ಪರವಂತೆ, ಅದಕ್ಕಾಗಿ ಮುಸ್ಲಿಮರು ವಿರೋಧಿಸುತ್ತಿದ್ದಾರಂತೆ, ಅಂಬೇಡ್ಕರ್, ನೆಹರೂ ಇದನ್ನು ಒಪ್ಪಿಕೊಂಡಿದ್ದಾರಂತೆ, ಒಂದೇ ದೇಶ ಎಂದರೆ ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಎಲ್ಲರಿಗೂ ಒಂದೇ ಕಾನೂನು ಅಲ್ಲವೇ.. ಹೀಗೆ ಅಂತೆ ಕಂತೆಗಳ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡಲಾಗುತ್ತಿದೆ. ಇದನ್ನು ಮೀರಿ ವಾಸ್ತವ ಸಂಗತಿಗಳನ್ನು ಜನರ ಮುಂದಿಡುವುದು ದುಸ್ಸಾಹಸವಾಗಿದೆ.

ನ್ಯಾಯವಾದಿ ರವೀಂದ್ರನ್ ಅವರು ‘ಇಂದು ಭಾರತದಲ್ಲಿ ಮದುವೆ, ವಿಚ್ಛೇದನ, ಆಸ್ತಿ ಹಕ್ಕುಗಳು, ಪಿತ್ರಾರ್ಜಿತ ಹಕ್ಕುಗಳು, ದತ್ತು, ಜೀವನಾಂಶ ಮುಂತಾದ ವೈಯಕ್ತಿಕ ವಿಷಯಗಳಿಗೆ ಯಾವುದೇ ಕಾನೂನುಗಳಿಲ್ಲ. ಇವೆಲ್ಲವೂ ಆಯಾ ಮತ, ಧರ್ಮ, ಸಮುದಾಯ, ಜಾತಿ ಪದ್ಧತಿಗಳು, ಆಚರಣೆಗಳು ಮತ್ತು ಆಯಾ ಧಾರ್ಮಿಕ ಪಠ್ಯಗಳಾದ ಹಿಂದೂ ವಿವಾಹ ಕಾಯ್ದೆ, ಹಿಂದೂ ಉತ್ತರಾಧಿಕಾರ ಕಾಯ್ದೆ, ಹಿಂದೂ ಜೀವನಾಂಶ ಮತ್ತು ದತ್ತು ಸ್ವೀಕಾರ ಕಾಯ್ದೆ, ಇಸ್ಲಾಮಿಕ್ ಶರಿಯಾ ಕಾನೂನು, ಭಾರತೀಯ ವಿಚ್ಛೇದನ ಕಾಯ್ದೆ, ವಿಶೇಷ ವಿವಾಹ ಕಾಯ್ದೆ ಇತ್ಯಾದಿಗಳನ್ನು ಆಧರಿಸಿವೆ. ಅನೇಕ ಸಾಮಾನ್ಯ ನಾಗರಿಕ ಕಾನೂನುಗಳಿವೆ. ಬೌದ್ಧಿಕ ಆಸ್ತಿ ಕಾಯ್ದೆ, ಭಾರತೀಯ ಸಾಕ್ಷ್ಯ ಕಾಯ್ದೆ, ಒಪ್ಪಂದ ಕಾಯ್ದೆ, ದಾಖಲೆಗಳ ವರ್ಗಾವಣೆ ಕಾಯ್ದೆ, ಸರಕುಗಳ ಮಾರಾಟ ಕಾಯ್ದೆ, ಆಸ್ತಿ ವರ್ಗಾವಣೆ ಕಾಯ್ದೆ ಮುಂತಾದ ನಾಗರಿಕ ಹಕ್ಕುಗಳಿಗೆ ಸಂಬಂಧಿಸಿದ ಅನೇಕ ಸಾರ್ವಜಿಕ ಕಾನೂನುಗಳಿವೆ. ಅಷ್ಟೇ ಅಲ್ಲದೆ ಭಾರತದಲ್ಲಿನ ವಿವಿಧ ಬುಡಕಟ್ಟು ಸಮುದಾಯಗಳು ಮದುವೆ, ವಿಚ್ಛೇದನ, ಜೀವನಾಂಶ, ಪಿತ್ರಾರ್ಜಿತ ಹಕ್ಕುಗಳು ಮತ್ತು ಆಸ್ತಿ ಹಕ್ಕುಗಳ ಬಗ್ಗೆ ತಮ್ಮದೇ ಆದ ಪದ್ಧತಿಗಳು ಮತ್ತು ಆಚರಣೆಗಳನ್ನು ಹೊಂದಿವೆ. ಆದಿವಾಸಿಗಳ ಈ ಪದ್ಧತಿಗಳು ಮತ್ತು ಆಚರಣೆಗಳನ್ನು ಕಾನೂನಾಗಿ ಕ್ರೋಡೀಕರಿಸಲಾಗುವುದಿಲ್ಲ ಮತ್ತು ಅವುಗಳನ್ನು ಬರೆಯದೆ ಅನುಸರಣೆ ಮಾಡಲಾಗುತ್ತದೆ’ ಎಂದು ಬರೆಯುತ್ತಾರೆ. ಇಂತಹ ವೈವಿಧ್ಯಮಯವಾದ, ಸಂಕೀರ್ಣವಾದ (ಇವುಗಳಲ್ಲಿ ತಪ್ಪು, ಸರಿ ಎನ್ನುವುದು ಬೇರೆ ಪ್ರಶ್ನೆ, ಬೇರೆಯದೇ ಚರ್ಚೆ) ಕಾನೂನು, ಆಚರಣೆಗಳನ್ನು ರದ್ದುಪಡಿಸಿ ಬಿಜೆಪಿ ಪಕ್ಷವು ತನ್ನ ಮೂಗಿನ ನೇರಕ್ಕೆ ‘ಏಕರೂಪಿ ನಾಗರಿಕ ಸಂಹಿತೆ’ ಜಾರಿಗೊಳಿಸಲು ಮುಂದಾಗಿದೆಯೇ? ವಿಷಯ ಅಷ್ಟು ಸರಳವಾಗಿಲ್ಲ.

ಕೇಂದ್ರ ಸರಕಾರವು ಯುಸಿಸಿ ಕರಡನ್ನು ಸಾರ್ವಜನಿಕವಾಗಿ ಪ್ರಕಟಿಸದೆ ಅವರ ಅಭಿಪ್ರಾಯ ಕೇಳುವಂತಹ ತಗಲೂಫೀತನವನ್ನು ಮಾಡದೆ ಮೊಟ್ಟ ಮೊದಲಿಗೆ ಹಿಂದೂ ಧರ್ಮದೊಳಗಿನ ವಿವಿಧ ಜಾತಿ, ಸಮುದಾಯ, ಮಠಗಳು ಆಚರಿಸುವ ಎಲ್ಲಾ ಬಗೆಯ ಪ್ರತ್ಯೇಕತೆ, ತಾರತಮ್ಯವನ್ನು ಹೋಗಲಾಡಿಸಲು ಯುಸಿಸಿ ಕಾಯ್ದೆ ಜಾರಿಗೊಳಿಸುವರೇ ಎನ್ನುವ ಪ್ರಶ್ನೆಗೆ ಉತ್ತರಿಸಲಿ. ಮೋದಿ ನೇತೃತ್ವದ ಸರಕಾರವು ತಾತ್ವಿಕವಾಗಿ ಹಿಂದೂ ಧರ್ಮದ ಖಾಪ್ ಪಂಚಾಯತ್ಗಳ ಬಳಿ ಈ ಚರ್ಚೆಯನ್ನು ಪ್ರಾರಂಭಿಸಬೇಕಿತ್ತು. ಮುಸ್ಲಿಮ್ ಪರ್ಸನಲ್ ಲಾ ಅವರ ಸಾಂಸ್ಕೃತಿಕ ವಿಚಾರವಲ್ಲ ಅದು ಸಾರ್ವಜನಿಕ ವಿಚಾರ ಎಂದು ಹೇಳುವ ಕೇಂದ್ರದ ಬಿಜೆಪಿ ಸರಕಾರ ಇದೇ ಯುಸಿಸಿಯೊಳಗೆ ತಾತ್ವಿಕವಾಗಿಯಾದರೂ ಖಾಪ್ ಪಂಚಾಯತ್ಗಳನ್ನು ಚರ್ಚೆಗೆ ತಂದು ಇದೂ ಸಹ ಸಾರ್ವಜನಿಕ ವಿಚಾರ ಮತ್ತು ಕಾನೂನುಬಾಹಿರ ಎಂದು ಸ್ಪಷ್ಟಪಡಿಸಬೇಕಿತ್ತು. ಹಿಂದೂ ಧರ್ಮದ ಶ್ರೇಣೀಕೃತ ಜಾತಿ ಪದ್ಧತಿಯನ್ನು ತಾತ್ವಿಕವಾಗಿಯಾದರೂ ಈ ಯುಸಿಸಿ ಯಾವ ನೆಲೆಯಲ್ಲಿ ಚರ್ಚಿಸುತ್ತದೆ ಎನ್ನುವುದು ಸ್ಪಷ್ಟವಾಗಬೇಕಿತ್ತು. ಹಿಂದೂ ವಿವಾಹ ಕಾಯ್ದೆಯೊಳಗೆ ವಿವಿಧ ಪದ್ಧತಿಗಳು, ಆಚರಣೆಗಳಿವೆ. ಈ ಯುಸಿಸಿ ಮೂಲಕ ಅವೆಲ್ಲವನ್ನೂ ತಿರಸ್ಕರಿಸುವರೇ? ಆದಿವಾಸಿಗಳ, ಬುಡಕಟ್ಟು ಸಮುದಾಯಗಳ ವಿವಿಧ ಆಚರಣೆಗಳನ್ನು ಯಾವ ರೀತಿ ಪರಿಗಣಿಸುತ್ತಾರೆ? ಅಷ್ಟೇಕೆ ಜೈನ್ ಸಮುದಾಯದ ಕರ್ಮಠ ಧಾರ್ಮಿಕ ಸಂಹಿತೆಗಳೊಂದಿಗೆ ಈ ಏಕರೂಪಿ ನಾಗರಿಕ ಸಂಹಿತೆಯ ಚರ್ಚೆಯನ್ನು ಪ್ರಾರಂಭಿಸಬೇಕಿತ್ತು. ಆದರೆ ತಾಂತ್ರಿಕ ಕಾರಣಗಳನ್ನೊಡ್ಡಿ ಇದನ್ನು ತಿರಸ್ಕರಿಸುತ್ತಾರೆ ಎನ್ನ್ನುವುದೂ ಸಹ ಇಂದಿನ ವಾಸ್ತವ. ವೈರುಧ್ಯವೆಂದರೆ ಈ ಕುರಿತಾಗಿ ವಿವರ ತಿಳಿದುಕೊಳ್ಳಲು ಅಗತ್ಯವಾದ ಕರಡು ಪ್ರತಿಯೇ ಸಾರ್ವಜನಿಕವಾಗಿ ಲಭ್ಯವಿಲ್ಲ.

ಮತ್ತೊಂದೆಡೆ ಹಿಂದೂ ಧರ್ಮದ ಅವಿಭಜಿತ ಕೂಡು ಕುಟುಂಬಗಳ ಒಡೆತನದ ಆಸ್ತಿಗಳು ಮತ್ತು ಉದ್ಯಮಗಳು ಇಂದು ಆದಾಯ ತೆರಿಗೆಯ ಲಾಭ ಪಡೆದುಕೊಳ್ಳುತ್ತಿವೆ. ಆದರೆ ಈ ಏಕರೂಪಿ ನಾಗರಿಕ ಸಂಹಿತೆಯಡಿಯಲ್ಲಿ ಆ ಸೌಲಭ್ಯವನ್ನು ಕಳೆದುಕೊಳ್ಳುತ್ತವೆಯೇ? ಇದರ ಕುರಿತಾಗಿಯೂ ಚರ್ಚೆ ನಡೆಯಬೇಕಿತ್ತು. ಇಲ್ಲಿನ ಬುಡಕಟ್ಟು ಸಮುದಾಯಗಳಲ್ಲಿ ಮಾತೃಪ್ರಧಾನ ವ್ಯವಸ್ಥೆಯಿದೆ. ಈಶಾನ್ಯ ರಾಜ್ಯಗಳಲ್ಲಿ ವೈವಿಧ್ಯಮಯ ಆಚರಣೆ, ಸಂಪ್ರದಾಯಗಳನ್ನು ಪರಿಗಣಿಸಿ ಭಾರತದ ಸಂವಿಧಾನದ ಶೆಡ್ಯೂಲ್ ೫ ಮತ್ತು ೬ ಅಡಿಯಲ್ಲಿ ಅವರಿಗೆ ಭೂಮಿ ಹಕ್ಕನ್ನೂ, ಆಚರಣೆಗಳ ಹಕ್ಕನ್ನು ಕೊಡಲಾಗಿದೆ. ಈ ಯುಸಿಸಿ ಇವರ ಎಲ್ಲಾ ಹಕ್ಕುಗಳು, ಆಚರಣೆಗಳನ್ನು ಕಿತ್ತುಕೊಳ್ಳಲಿದೆಯೇ? ಜಾರ್ಖಂಡ್, ಛತ್ತೀಸ್ಗಡ, ಮಧ್ಯಪ್ರದೇಶ, ಒಡಿಶಾ, ಬಿಹಾರದಲ್ಲಿ ವಾಸಿಸುತ್ತಿರುವ ಆದಿವಾಸಿ ಸಮುದಾಯಗಳ ವೈವಿಧ್ಯಮಯ ಆಚರಣೆಗಳಿಗೆ ಈ ಯುಸಿಸಿ ಅನ್ವಯವಾಗುತ್ತದೆಯೇ? ಗೊತ್ತಿಲ್ಲ ಆದರೆ ದುರಂತವೆಂದರೆ ಮುಸ್ಲಿಮ್ ಸಮುದಾಯದ ವಿರುದ್ಧ ಇದು ಒಂದು ಬ್ರಹ್ಮಾಸ್ತ್ರ ಎನ್ನುವಂತೆ ಇಡೀ ಚರ್ಚೆಯನ್ನು ದಿಕ್ಕುತಪ್ಪಿಸಲಾಗುತ್ತಿದೆ. ೨೦೨೪ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮತ್ತೊಮ್ಮೆ ಹಿಂದೂ-ಮುಸ್ಲಿಮ್ ಧ್ರುವೀಕರಣಕ್ಕೆ ಕೈ ಹಾಕಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಾನೂನು ಆಯೋಗದ ಪ್ರಶ್ನೆಗಳ ಜೊತೆಗೆ ಮೋದಿ ಮತ್ತು ಬಿಜೆಪಿ ನಾಯಕರ ವರ್ತನೆಗಳನ್ನು ಗಮನಿಸಿದಾಗ ಅವು ಮುಸ್ಲಿಮ್ ಸಮುದಾಯದ ಕಟ್ಟುಪಾಡುಗಳು, ಧರ್ಮ ಸಂಹಿತೆಗಳ ಸುತ್ತಲೂ ಪರಿಭ್ರಮಿಸುತ್ತದೆ. ಯುಸಿಸಿ ಎನ್ನುವ ಕಣ್ಕಟ್ಟನ್ನು ತೇಲಿಬಿಟ್ಟು ಮುಸ್ಲಿಮ್ ಸಮುದಾಯದ ಕಟ್ಟುಪಾಡುಗಳನ್ನು ಒಂದು ಪ್ರಧಾನ ಅಂಶವನ್ನಾಗಿ ಚರ್ಚಿಸುವುದರ ಮೂಲಕ ಮುಸ್ಲಿಮ್ ಧರ್ಮದ ಸುಧಾರಣೆ ಎನ್ನುವ ಮರೆಮೋಸದ ಪ್ರಚಾರ ಮಾಡುತ್ತಿದ್ದಾರೆ. ಇಲ್ಲಿ ಈ ಕಾನೂನು ಆಯೋಗವು ಅಲ್ಪಸಂಖ್ಯಾತರ ಹಕ್ಕುಗಳನ್ನು ಮಾನವ ಹಕ್ಕುಗಳಿಂದ ಪ್ರತ್ಯೇಕಿಸಿ ಪರಿಗಣಿಸುತ್ತದೆಯೇ ಎಂದು ನಮಗೆ ಇಂದಿಗೂ ಸ್ಪಷ್ಟವಾಗಿಲ್ಲ. ಅಲ್ಪಸಂಖ್ಯಾತರನ್ನು ತುಲನಾತ್ಮಕವಾಗಿ ನೋಡುತ್ತದೆಯೇ ಎನ್ನವುದು ಸಹ ಸ್ಪಷ್ಟವಾಗಿಲ್ಲ.

ಇತಿಹಾಸದ ಉತ್ಖನನ

ಇದಕ್ಕೂ ಹಿಂದೆ ಹಿಂದೂ ಕೋಡ್ ಬಿಲ್ ಕುರಿತಾಗಿ ೧೯೪೮-೧೯೫೪ ರವರೆಗೆ ಸಂಸತ್ತಿನಲ್ಲಿ ಚರ್ಚೆ, ವಾಗ್ವಾದಗಳು ಜರುಗಿದವು. ಆಗ ಕಾನೂನು ಮಂತ್ರಿಯಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರು ಈ ಪರಿಷ್ಕರಿಸಿದ ಹಿಂದೂ ಬಿಲ್ ಅನ್ನು ರೂಪಿಸಿದ್ದರು. ಈ ಮಸೂದೆಯಲ್ಲಿ ಹಿಂದೂ ಧರ್ಮದೊಳಗಿನ ಪಿತೃಪ್ರಧಾನ ಯಾಜಮಾನ್ಯವನ್ನು ಕೊನೆಗಾಣಿಸುವಂತಹ, ಮಹಿಳೆಯರ ಸ್ವಾತಂತ್ರ್ಯದ ಪರವಾದ ತತ್ವಗಳನ್ನು ರೂಪಿಸಿದ್ದರು. ವಿಚ್ಛೇದನದ ನಂತರದ ಜೀವನಾಂಶವನ್ನು ನಿರ್ಣಯಿಸುವ ಸಂದರ್ಭದಲ್ಲಿ ಮಹಿಳೆಯರ ದನಿಗೆ ಪ್ರಾತಿನಿಧ್ಯ, ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿ ಒಡೆತನದ ಹಕ್ಕು ಇತ್ಯಾದಿಗಳ ಕ್ರಾಂತಿಕಾರಿ ಕಾಯ್ದೆಗಳನ್ನು ಈ ಕೋಡ್ ಬಿಲ್ನಲ್ಲಿ ಅಳವಡಿಸಿದ್ದರು. ಆದರೆ ಇದೇ ಹಿಂದೂ ಧರ್ಮದ ಅಮಾನವೀಯ ಜಾತಿ ಪದ್ಧತಿಯನ್ನು, ಅಲ್ಲಿನ ತಾರತಮ್ಯ ನೀತಿಯನ್ನು, ಅಸ್ಪಶ್ಯತೆಯನ್ನು ಕಟುವಾಗಿ ಟೀಕಿಸಿದ್ದ ಅಂಬೇಡ್ಕರ್ ಅವರ ಕುರಿತಾಗಿ ಮೊದಲಿನಿಂದಲೂ ಬ್ರಾಹ್ಮಣ್ಯದ ಹಿನ್ನೆಲೆಯ ಬಲಪಂಥೀಯ ಹಿಂದೂ ಸಂಸದರಿಗೆ ಅಸಮಾಧಾನವಿತ್ತು. ಸಂಸತ್ತಿನಲ್ಲಿ ಇವರೆಲ್ಲ ಶ್ಯಾಮ್ ಪ್ರಸಾದ್ ಮುಖರ್ಜಿಯವರ ನೇತೃತ್ವದಲ್ಲಿ ಈ ಹಿಂದೂ ಕೋಡ್ ಬಿಲ್ ಅನ್ ವಿರೋಧಿಸಿದ್ದರು. ಹಿಂದೂ ಮಹಿಳೆಯರಿಗೆ ಪಿತೃಪ್ರಧಾನ ವ್ಯವಸ್ಥೆಯಿಂದ ಬಿಡುಗಡೆಯನ್ನು ದೊರಕಿಸಿಕೊಡುವ ಈ ಮಸೂದೆಯನ್ನು ಹಿಂದೂ ವಿರೋಧಿ, ರಾಷ್ಟ್ರ ವಿರೋಧಿ ಎಂದು ಕಟುವಾಗಿ ಟೀಕಿಸಿದ್ದರು. ಆಗಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರೂ ಸಹ ಈ ಮಸೂದೆಯನ್ನು ವಿರೋಧಿಸಿದ್ದರು. ಆಗ ಏಕಾಂಗಿಯಾಗಿದ್ದ ಅಂಬೇಡ್ಕರ್ ಅವರಿಗೆ ಪ್ರಧಾನಿ ನೆಹರೂ ಅವರು ಸಹ ಬೆಂಬಲಿಸಲಿಲ್ಲ. ಇದರಿಂದ ನೊಂದ ಅಂಬೇಡ್ಕರ್ ಅವರು ತಮ್ಮ ಮಂತ್ರಿ ಪದವಿಗೆ ರಾಜೀನಾಮೆ ನೀಡಿ ಸರಕಾರದಿಂದ ನಿರ್ಗಮಿಸಿದರು. ಕಡೆಗೆ ೧೯೫೬ರಲ್ಲಿ ನೆಹರೂ ಅವರು ಇದೇ ಮಸೂದೆಯನ್ನು ದುರ್ಬಲಗೊಳಿಸಿ ಹಿಂದೂ ಮದುವೆ ಕಾಯ್ದೆ, ಅಲ್ಪಸಂಖ್ಯಾತ ಮತ್ತು ಪೋಷಕರ ಕಾಯ್ದೆ, ದತ್ತು ಮತ್ತು ನಿರ್ವಹಣಾ ಕಾಯ್ದೆ,ಉತ್ತರಾಧಿಕಾರಿ ಕಾಯ್ದೆ ಎಂದು ನಾಲ್ಕು ಭಾಗಗಳಲ್ಲಿ ತಿದ್ದುಪಡಿ ಮಾಡಿ ಜಾರಿಗೊಳಿಸಿದರು. ಆದರೆ ಈ ದುರ್ಬಲಗೊಂಡ ಮಸೂದೆ ಪಿತೃಪ್ರಧಾನ ವ್ಯವಸ್ಥೆಯ ಯಜಮಾನಕೀಯತೆಯ ಹಿಡಿತವನ್ನು ಸಡಿಲಗೊಳಿಸುವಲ್ಲಿ ಸಹಕಾರಿಯಾಗಿರಲಿಲ್ಲ ಮತ್ತು ಲಿಂಗ ತಾರತಮ್ಯವನ್ನು ನಿಯಂತ್ರಿಸಲು ಸೋತಿತು.

ಈ ಹಿಂದೂ ಮಸೂದೆ ಕೋಡ್ ಬಿಲ್ ಮತ್ತು ಶಾ ಬಾನು ಪ್ರಕರಣಗಳು ಏಕರೂಪಿ ನಾಗರಿಕ ಸಂಹಿತೆಯ ಕಾನೂನಿಗೆ ಅತ್ಯಂತ ಪೂರಕವಾಗಿಯೇ ಪರಿಗಣಿಸಲ್ಪಡುತ್ತವೆ. ಆದರೆ ಅಂದು ಐವತ್ತರ ದಶಕದಲ್ಲಿ ಏಕರೂಪಿ ನಾಗರಿಕ ಸಂಹಿತೆಗೆ ತಳಹದಿಯನ್ನು ಒದಗಿಸುತ್ತಿದ್ದ ಈ ಹಿಂದೂ ಮಸೂದೆ ಕೋಡ್ ಬಿಲ್ ಅನ್ನು ಧರ್ಮ ಮತ್ತು ಜಾತಿಕಾರಣಕ್ಕಾಗಿ ವಿರೋಧಿಸಿದ್ದ ಸಂಘಿಗಳು ಇಂದು ಮಹಾನ್ ದೇಶಪ್ರೇಮಿಗಳಂತೆ ಇದೇ ನಾಗರಿಕ ಸಂಹಿತೆಯ ಪರವಾಗಿ ವಾದಿಸುತ್ತಿರುವುದು ಬಲು ದೊಡ್ಡ ವ್ಯಂಗವೇ ಸರಿ.

ಉತ್ತರವಿಲ್ಲದ ಪ್ರಶ್ನೆಗಳು?

ಏಕೆಂದರೆ ಇಂದು ಮತೀಯವಾದಿ ಸಂಘ ಪರಿವಾರ ಈ ಏಕರೂಪಿ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ತುದಿಗಾಲಲ್ಲಿದೆ. ಈ ಸಂಘ ಪರಿವಾರವು ರೂಪಿಸುವ ಈ ಏಕರೂಪಿ ನಾಗರಿಕ ಸಂಹಿತೆಯು ಮದುವೆ, ವಿಚ್ಛೇದನ, ದತ್ತು ಮತ್ತು ಪಿತ್ರಾರ್ಜಿತ ಆಸ್ತಿಯ ಒಡೆತನ ಮತ್ತು ಉತ್ತರಾಧಿಕಾರಿ ಆಯ್ಕೆ ಇವುಗಳನ್ನು ಮಾತ್ರ ಒಳಗೊಂಡಿರುತ್ತದೆ. ಇದು ಎಲ್ಲಾ ಧರ್ಮದವರಿಗೂ ಏಕರೂಪಿಯಾಗಿರುತ್ತದೆ ಎಂದೇ ಹೇಳಲಾಗುತ್ತಿದೆ. ಆದರೆ ಈ ಏಕರೂಪಿ ಕಾನೂನುಗಳು ಯಾವ ಅಂಶಗಳನ್ನು ಒಳಗೊಂಡಿರುತ್ತದೆ? ಇದು ಅಂಬೇಡ್ಕರ್ ರೂಪಿಸಿದ ಹಿಂದೂ ಮಸೂದೆ ಕೋಡ್ ಬಿಲ್ನ ಪ್ರಗತಿಪರ, ಪಿತೃಪ್ರಧಾನ ವ್ಯವಸ್ಥೆ ವಿರೋಧಿ ಅಂಶಗಳನ್ನು ಒಳಗೊಂಡಿರುತ್ತದೆಯೇ? ಇದು ಲಿಂಗ ತಾರತಮ್ಯವನ್ನು ನಿರಾಕರಿಸುವಂತಹ ಮಹಿಳೆಗೆ ಸಮಾನ ಹಕ್ಕನ್ನು ನೀಡುವಂತಹ ತತ್ವಗಳನ್ನು ಒಳಗೊಂಡಿರುತ್ತದೆಯೇ? ಇದು ಬಂಡವಾಳಶಾಹಿ ಉದ್ಯಮಿಗಳ ಉಕ್ಕಿನ ಕೋಟೆಯಂತಹ ಕುಟುಂಬ ವ್ಯವಸ್ಥೆಗಳಲ್ಲಿನ ಪಟ್ಟಭದ್ರ ಹಿತಾಸಕ್ತಿಗಳ ಪರವಾದ, ಪುರುಷ ಪ್ರಧಾನವಾದ ಆರ್ಥಿಕ ವಹಿವಾಟನ್ನು ಪಾರದರ್ಶಕಗೊಳಿಸುತ್ತದೆಯೇ? ಈ ಬಕಾಸುರ ಬಂಡವಾಳಶಾಹಿಗಳಿಗೆ ತಮ್ಮ ಹಣಕಾಸಿನ ಹಿಡಿತವನ್ನು ಸಡಿಲಗೊಳಿಸಲು ಅನಿವಾರ್ಯವಾಗುತ್ತದೆಯೇ? ಸಮಾನತೆಯ ತತ್ವಗಳಿಗೆ ಉತ್ತರದಾಯಿತ್ವವನ್ನು ತಂದುಕೊಡುತ್ತದೆಯೇ? ಜಾತಿ-ಫ್ಯೂಡಲಿಸಂನ ಅಪಾಯಕಾರಿ ನಡೆಯಾದ ಖಾಪ್ ಪಂಚಾಯತ್ನ ಕೊಲೆಗಡುಕ ನೀತಿಯನ್ನು ಈ ಏಕರೂಪಿ ನಾಗರಿಕ ಸಂಹಿತೆ ಯಾವ ರೀತಿ ನಿರ್ಮೂಲನೆ ಮಾಡುತ್ತದೆ?

ಆದರೆ ಪುರೋಹಿತಶಾಹಿ ವ್ಯವಸ್ಥೆಯನ್ನು, ಬ್ರಾಹ್ಮಣಶಾಹಿ ಯನ್ನು ಬೆಂಬಲಿಸುವ ಸಂಘ ಪರಿವಾರ ತರಲು ಹೊರಟಿರುವ ಈ ಏಕರೂಪಿ ನಾಗರಿಕ ಸಂಹಿತೆ ಮೇಲಿನ ಪ್ರಶ್ನೆಗಳಿಗೆ ಉತ್ತರ ಕೊಡುತ್ತದೆ ಎನ್ನುವುದರ ಕುರಿತಾಗಿಯೇ ಅನುಮಾನಗಳಿವೆ. ಈ ಕಾರಣಕ್ಕಾಗಿಯೇ ಪ್ರಜ್ಞಾವಂತರು ಇದನ್ನು ವಿರೋಧಿಸುತ್ತಿದ್ದಾರೆ.

ಕೇಂದ್ರ ಸರಕಾರದ ಕಾನೂನು ಇಲಾಖೆಯಾಗಲೀ, ಕಾನೂನು ಆಯೋಗವಾಗಲೀ ಇದುವರೆಗೂ ಈ ಸಮಾನ ನಾಗರಿಕ ಸಂಹಿತೆಯ ಕರಡು ಪ್ರತಿಯನ್ನು ಸಹ ಪ್ರಕಟಿಸಿಲ್ಲ. ಮೊದಲು ಇದರ ಕರಡು ಪ್ರತಿಯನ್ನು ಮಂಡಿಸಬೇಕು ಎಂದು ಒತ್ತಾಯಿಸಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಬಿ.ಶ್ರೀಪಾದ ಭಟ್

contributor

Similar News