ದೇಶದ ಗ್ರಾಮೀಣ ಪ್ರದೇಶಗಳ ಜನತೆಯ ಪರಿಸ್ಥಿತಿ ಬಿಚ್ಚಿಡುತ್ತಿರುವ ಸರಕಾರದ್ದೇ ವರದಿಗಳು

ನೂರಾರು ಎಕರೆ ಬಿಟ್ಟಿ ಭೂಮಿ ಪಡೆದುಕೊಂಡು, ಎಲ್ಲ ತೆರಿಗೆಗಳಿಂದ ವಿನಾಯಿತಿ ಪಡೆದುಕೊಂಡವರಿಂದ ಸರಕಾರ ಉಪದೇಶ ಪಡೆಯಬೇಕಾಗಿಲ್ಲ. ಈಗ ಸರಕಾರದ್ದೇ ವರದಿ ಗ್ರಾಮೀಣ ಪ್ರದೇಶಗಳಲ್ಲಿ ಪರಿಸ್ಥಿತಿ ಎಷ್ಟು ಚಿಂತಾಜನಕವಾಗಿದೆ ಎಂದು ಹೇಳುತ್ತಿದೆ. ಸಂವಿಧಾನದ ಪ್ರಕಾರವೇ ಜನಸಾಮಾನ್ಯರ ಬದುಕು ಹಸನಾಗಿಸುವುದು ಸರಕಾರದ ಪರಮ ಕರ್ತವ್ಯ. ಮೊದಲು ಅದನ್ನು ಸರಕಾರ ನಿಭಾಯಿಸಲಿ.

Update: 2024-10-16 07:04 GMT

ಭಾರತ ಸರಕಾರದ ಹಣಕಾಸು ಸಚಿವಾಲಯದ ಅಡಿಯಲ್ಲಿನ ಒಂದು ಸಂಸ್ಥೆ ನಬಾರ್ಡ್. ಅಂದರೆ ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಆ್ಯಂಡ್ ರೂರಲ್ ಡೆವಲಪ್‌ಮೆಂಟ್. ಅದು ಗ್ರಾಮೀಣ ಭಾರತದ ಕುರಿತು ಸಮೀಕ್ಷೆಯ ವರದಿ ಬಿಡುಗಡೆ ಮಾಡಿದೆ. ಈ ವರದಿಯ ಹೆಸರು ‘ಇಂಡಿಯನ್ ರೂರಲ್ ಫೈನಾನ್ಷಿಯಲ್ ಇನ್‌ಕ್ಲೂಷನ್ ಸರ್ವೇ’.

ಗ್ರಾಮೀಣ ಭಾಗದ 1 ಲಕ್ಷ ಕುಟುಂಬಗಳಿಂದ ಮಾಹಿತಿ ಸಂಗ್ರಹಿಸಿ ನಬಾರ್ಡ್ ಈ ವರದಿಯನ್ನು ಬಿಡುಗಡೆ ಮಾಡಿದೆ. ಗಮನಿಸಿ, ಇದು ಮೋದಿ ಸರಕಾರದ ವಿತ್ತ ಖಾತೆ ಅಧೀನದಲ್ಲೇ ಬರುವ ಸಂಸ್ಥೆ ಬಿಡುಗಡೆ ಮಾಡಿರುವ ವರದಿ.

ಈ ಸಮೀಕ್ಷೆಯ ಪ್ರಕಾರ, ಗ್ರಾಮೀಣ ಭಾರತದಲ್ಲಿ ಕುಟುಂಬದ ಸರಾಸರಿ ಮಾಸಿಕ ಆದಾಯ ರೂ. 12,698.

ಸರಾಸರಿ ಒಂದು ಕುಟುಂಬದಲ್ಲಿ ಐವರು ಸದಸ್ಯರಿದ್ದಾರೆ ಎಂದು ಭಾವಿಸುವ ಮೂಲಕ ನಾವಿದನ್ನು ಇನ್ನೂ ಸರಳವಾಗಿ ಅರ್ಥ ಮಾಡಿಕೊಳ್ಳಲು ನೋಡಬಹುದು. ಅಂದರೆ ಗ್ರಾಮೀಣ ಭಾರತದ ತಲಾ ಮಾಸಿಕ ಆದಾಯ ಸುಮಾರು 2,500 ರೂ. ಅಂದರೆ ದಿನಕ್ಕೆ ಒಬ್ಬ ವ್ಯಕ್ತಿ ಸುಮಾರು 100 ರೂ. ಲೆಕ್ಕದಲ್ಲಿ ಗಳಿಸುತ್ತಾನೆ ಎಂದು ಭಾವಿಸಬಹುದು. ಆದರೆ ವಾಸ್ತವದಲ್ಲಿ ಇದು ರೂ. 50ರಿಂದ 100ರೊಳಗೆ ಇರುತ್ತದೆ.

ಇಷ್ಟು ಕಡಿಮೆ ಆದಾಯದಿಂದ ಬದುಕು ಹೇಗೆ ಸಾಧ್ಯ? ಐದು ಜನರ ಒಂದು ಕುಟುಂಬ 12,698 ರೂ. ಗಳಲ್ಲಿ ಹೇಗೆ ತಾನೆ ತಿಂಗಳಿಡೀ ಸಂಭಾಳಿಸಿ ನೆಮ್ಮದಿಯಿಂದಿರಲು ಸಾಧ್ಯವಾದೀತು?

ನಬಾರ್ಡ್‌ನ ಈ ವರದಿಯ ಪ್ರಕಾರ, ಶೇ.52ರಷ್ಟು ಗ್ರಾಮೀಣ ಭಾರತೀಯರ ಖರ್ಚಿನಲ್ಲಿ ದುಪ್ಪಟ್ಟಾಗುತ್ತದೆ. ಕಳೆದ ಐದು ವರ್ಷಗಳ ಅಂಕಿ ಅಂಶಗಳನ್ನು ಗಮನಿಸಿದರೆ ಖರ್ಚು ಏರುತ್ತಲೇ ಇರುವುದು ಗೊತ್ತಾಗಿದೆ. ಯಾಕೆಂದರೆ ಆದಾಯ ಬಹಳ ಕಡಿಮೆಯಿರುತ್ತದೆ ಮತ್ತು ಖರ್ಚು ಏರುವುದು ತಪ್ಪುವುದಿಲ್ಲ.

ಚುನಾವಣೆ ಬಂದಾಗೆಲ್ಲ, ಕೃಷಿ, ಎಂಎಸ್‌ಪಿ ಎಂದೆಲ್ಲ ಹೇಳಲಾಗುತ್ತದೆ. ಆದರೆ ಅದಕ್ಕೆ ವಿರುದ್ಧವಾಗಿ ವಾಸ್ತವವಿದೆ.

ದ್ವೇಷದಲ್ಲಿ ಜನರನ್ನು ಮುಳುಗಿಸುವ ರಾಜಕೀಯವೇ ಇರುತ್ತದೆ. ಹಿಂದೂ-ಮುಸ್ಲಿಮ್ ದ್ವೇಷ, ಜಾತಿ ತಾರತಮ್ಯ, ಕುರುಡು ರಾಷ್ಟ್ರವಾದ, ಮಂದಿರ-ಮಸೀದಿ ಇಂತಹ ವಿಚಾರಗಳನ್ನೇ ಜನರ ಮನಸ್ಸಲ್ಲಿ ತುಂಬಲಾಗುತ್ತದೆ. ಅದು ಜನಸಾಮಾನ್ಯರ ಹಸಿವು ಮತ್ತು ಬೆಲೆಯೇರಿಕೆಗೆ ಏನನ್ನೂ ಮಾಡುವುದಿಲ್ಲ. ಆದರೆ ತಾವು ಮತ ನೀಡಿ ಅಧಿಕಾರಕ್ಕೆ ತಂದ ಸರಕಾರದ ಬಳಿ ಈ ಪ್ರಶ್ನೆ ಕೇಳುವ ಪ್ರಬುದ್ಧತೆಯನ್ನು ಹೆಚ್ಚಿನ ಮತದಾರರು ತೋರಿಸುವುದೇ ಇಲ್ಲ. ಅವರು ಸರಕಾರ ಅಥವಾ ಆಡಳಿತ ಪಕ್ಷ ಸೃಷ್ಟಿಸಿರುವ ಹಿಂದೂ-ಮುಸ್ಲಿಮ್ ಅಥವಾ ಇನ್ಯಾವುದೋ ಭ್ರಮೆಯ ಲೋಕದಲ್ಲಿ ಮೈಮರೆತು ತಮ್ಮ ಬದುಕಿನ ವ್ಯಥೆಯನ್ನೇ ಮರೆತುಬಿಡುತ್ತಾರೆ. ಹಾಗಾಗಿ, ದೇಶದ ಶೇ.60ರಷ್ಟಿರುವ ಗ್ರಾಮೀಣ ಭಾರತೀಯರ ಆದಾಯ ಅತಿ ಕಡಿಮೆಯಿದೆ.

ಸರಕಾರದ ನೆರವಿನ ಯೋಜನೆಗಳು ಅಂಥವರಿಗೆ ಬೇಕೇ ಬೇಕು. ಪ್ರತಿಯೊಂದಕ್ಕೂ ಬೆಲೆ ಹೆಚ್ಚುತ್ತಲೇ ಇರುವ, ಆದಾಯ ಮಾತ್ರ ಹೆಚ್ಚದೆ ಇರುವ ಸ್ಥಿತಿಯಲ್ಲಿ ಉಚಿತ ಕೊಡುಗೆಗಳ ಅವಶ್ಯಕತೆಯಿರುತ್ತದೆ.

ಆದರೆ ಅಂತಹ ನೆರವನ್ನು ಕೆಲವು ಸರಕಾರಗಳು ಕೊಟ್ಟರೆ ಅಣಕಿಸುವವರು ಅದನ್ನು ‘ರೇವಡಿ’ ಎಂದು ಕರೆಯುತ್ತಾರೆ. ಬೇರೆಯವರು ಯಾಕೆ, ಬೇರೆ ಪಕ್ಷಗಳು ಅಧಿಕಾರ ಇರುವಲ್ಲಿ ಜನರಿಗೆ ಕೊಡುವ ಕೊಡುಗೆಗಳನ್ನು ನಮ್ಮ ಪ್ರಧಾನಿಯೇ ‘ರೇವಡಿ’ ಎಂದು ಲೇವಡಿ ಮಾಡುತ್ತಾರೆ.

ಆದರೆ ಈಗ ಸರಕಾರದ್ದೇ ಸಂಸ್ಥೆ ತಂದಿರುವ ವರದಿ ಜನರಿಗೆ ಸರಕಾರ ಆಸರೆಯಾಗುವುದು ಅದೆಷ್ಟು ಮುಖ್ಯ ಎಂಬುದನ್ನು ಸಾರಿ ಸಾರಿ ಹೇಳುತ್ತಿದೆ.

ಈ ವರದಿಯನ್ನು ಪ್ರತಿಯೊಂದು ಮಡಿಲ ಮೀಡಿಯಾದ ಸಂಪಾದಕರು, ಆ್ಯಂಕರ್‌ಗಳು ಹಾಗೂ ಸರಕಾರದಿಂದ ಸ್ವತಃ ಕೋಟಿಗಟ್ಟಲೆ ವಿನಾಯಿತಿ ಪಡೆದು ಜನರಿಗೆ ಉಚಿತವಾಗಿ ಏನನ್ನೂ ಕೊಡಬಾರದು ಎಂದು ಉಪದೇಶ ಮಾಡುವ ಕಾರ್ಪೊರೇಟ್ ಕುಲಗಳೂ ಓದಲೇಬೇಕು.

ವರ್ಲ್ಡ್ ಬ್ಯಾಂಕ್ ವರದಿ ಹೇಳುವ ಒಂದು ಮುಖ್ಯ ವಿಚಾರವೆಂದರೆ, ಭಾರತೀಯರು ಮಧ್ಯಮ ಆದಾಯದ ಸುಳಿಯಲ್ಲಿ ಸಿಲುಕಿಬಿಟ್ಟಿದ್ದಾರೆ. ಕೃಷಿಕ ಕುಟುಂಬಗಳಲ್ಲಿ, ಕೃಷಿಯಿಂದ ಬರುವ ಆದಾಯ ಮೂರನೇ ಒಂದು ಭಾಗದಷ್ಟಾಗುತ್ತದೆ. ಸರಕಾರಿ ಅಥವಾ ಖಾಸಗಿ ಸೇವೆಗಳಿಂದ ಶೇ. 25ರಷ್ಟು ಆದಾಯ ಬರುತ್ತಿದೆ. ಕೂಲಿಯಿಂದ ಶೇ. 15, ಇತರ ಉದ್ದಿಮೆ ಮೂಲಕ ಶೇ. 15ರಷ್ಟು ಆದಾಯವು ಗ್ರಾಮೀಣ ಕುಟುಂಬಗಳಿಗೆ ಹೋಗುತ್ತಿದೆ.

ಆದರೆ, ಗ್ರಾಮೀಣ ಭಾಗದ ಒಟ್ಟಾರೆ ಆದಾಯದಲ್ಲಿ ಶೇ. 37ರಷ್ಟು ಮೊತ್ತವು ಸಂಬಳ ನೀಡುವ ಉದ್ಯೋಗಗಳಿಂದ ಬರುತ್ತಿದೆ ಎಂದು ಈ ಸಮೀಕ್ಷೆಯ ಅಂಶಗಳು ಹೇಳುತ್ತಿವೆ.

ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಲು ಒಂದು ಮಾದರಿ ಬೇಕಿರುತ್ತದೆ. ಅದು ಕ್ಯಾಪಿಟಲಿಸ್ಟ್ ಅಪ್ರೋಚ್ ಮಾಡೆಲ್. ಶ್ರೀಮಂತನೇ ಈ ಜಗತ್ತಿನ ವಿಕಾಸವನ್ನು ಮಾಡಲು ಸಾಧ್ಯ. ಭ್ರಷ್ಟಾಚಾರ ತುಂಬಿ ತುಳುಕುತ್ತಿರುವಲ್ಲಿ ಶ್ರೀಮಂತರೇ ಇನ್ನಷ್ಟು ಶ್ರಿಮಂತರಾಗುತ್ತಿರುತ್ತಾರೆ. ಅದಕ್ಕಾಗಿ ಅವರು ಸರಕಾರದಿಂದ ಎಲ್ಲ ಸವಲತ್ತುಗಳನ್ನು, ವಿನಾಯಿತಿ, ರಿಯಾಯಿತಿ ಎಲ್ಲವನ್ನೂ ಪಡೆಯುತ್ತಾರೆ. ತಾವು ಸಾವಿರಾರು ಕೋಟಿ ರೂ. ಆದಾಯ ಗಳಿಸುತ್ತಾರೆ. ಅದರಲ್ಲಿ ಒಂದು ತೀರಾ ಸಣ್ಣ ಮೊತ್ತವನ್ನು ಅಲ್ಲಲ್ಲಿ ಕೆಲವು ಜನೋಪಯೋಗಿ ಕೆಲಸಗಳಿಗೆ ದೇಣಿಗೆಯಾಗಿ ಕೊಡ್ತಾರೆ. ಅದಕ್ಕೆ ಹತ್ತು ಪಟ್ಟು ಹೆಚ್ಚು ಪ್ರಚಾರ ಪಡೆಯುತ್ತಾರೆ.

ದೇಶದ ದೊಡ್ಡ ಪ್ರಮಾಣದ ಜನಸಂಖ್ಯೆ ಕಡಿಮೆ ಆದಾಯವನ್ನೇ ಹೊಂದಿದೆ. ಆದಾಯಕ್ಕಿಂತ ಖರ್ಚು ಹೆಚ್ಚಾಗಿರುವುದರಿಂದ ಗ್ರಾಮೀಣ ಭಾಗದ ಕುಟುಂಬಗಳ ಹಣ ಉಳಿತಾಯ ಕಷ್ಟವಾಗಿದೆ.

ಐದು ವರ್ಷದಲ್ಲಿ ಉಳಿತಾಯ ಅಲ್ಪ ಹೆಚ್ಚಳ ಕಂಡಿದೆ. 9,104 ರೂ. ಇದ್ದ ವಾರ್ಷಿಕ ಉಳಿತಾಯ ಐದು ವರ್ಷದ ಬಳಿಕ 13,209 ರೂ. ಗೆ ಏರಿದೆ.

ಕೃಷಿ ಕಸುಬು ಮಾಡುವ ಕೆಲವು ಕುಟುಂಬಗಳು ಹಣ ಉಳಿತಾಯ ತೋರಿವೆ. ಆದರೆ, ಸಾಲ ಬಾಕಿ ಇರುವ ಕುಟುಂಬಗಳ ಪ್ರಮಾಣ ಶೇ.47.4ರಿಂದ ಶೇ.52ಕ್ಕೆ ಏರಿಕೆಯಾಗಿದೆ. ಇದು ಅತ್ಯಂತ ಗಂಭೀರ ವಿಷಯವಾಗಿದೆ.

ತೀರಾ ಮೂಲಭೂತ ಅವಶ್ಯಕತೆಗಳಿಗೂ ಸಾಲದ ಮೊರೆ ಹೋಗುವ ಸ್ಥಿತಿ ನಿರ್ಮಾಣವಾಗುತ್ತಿದೆ. ಸಾಲದ ಶೂಲಕ್ಕೆ ಭಾರತದ ಗ್ರಾಮೀಣ ಜನರು, ಮಧ್ಯಮ, ಕೆಳ ಮಧ್ಯಮ ವರ್ಗಗಳ ಜನರು ಸಿಲುಕುತ್ತಿದ್ದಾರೆ. ಅಂತಹ ಜನರ ಕೈಹಿಡಿಯುವುದು ಸರಕಾರದ ಕರ್ತವ್ಯ.

ನೂರಾರು ಎಕರೆ ಬಿಟ್ಟಿ ಭೂಮಿ ಪಡೆದುಕೊಂಡು, ಎಲ್ಲ ತೆರಿಗೆಗಳಿಂದ ವಿನಾಯಿತಿ ಪಡೆದುಕೊಂಡವರಿಂದ ಸರಕಾರ ಉಪದೇಶ ಪಡೆಯಬೇಕಾಗಿಲ್ಲ. ಈಗ ಸರಕಾರದ್ದೇ ವರದಿ ಗ್ರಾಮೀಣ ಪ್ರದೇಶಗಳಲ್ಲಿ ಪರಿಸ್ಥಿತಿ ಎಷ್ಟು ಚಿಂತಾಜನಕವಾಗಿದೆ ಎಂದು ಹೇಳುತ್ತಿದೆ. ಸಂವಿಧಾನದ ಪ್ರಕಾರವೇ ಜನಸಾಮಾನ್ಯರ ಬದುಕು ಹಸನಾಗಿಸುವುದು ಸರಕಾರದ ಪರಮ ಕರ್ತವ್ಯ.

ಮೊದಲು ಅದನ್ನು ಸರಕಾರ ನಿಭಾಯಿಸಲಿ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಚಂದ್ರಕಾಂತ್ ಎನ್.

contributor

Similar News