ಅಕಾಲಿಕ ಮಳೆ: ಗಿಡಗಳಲ್ಲೇ ಹಣ್ಣಾಗಿ ಕೊಳೆಯುತ್ತಿರುವ ಕಾಫಿ
ಮಡಿಕೇರಿ, ಜ.15: ವರ್ಷಾರಂಭದಲ್ಲಿ ಕೊಡಗಿನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ, ಜಿಲ್ಲೆಯಲ್ಲಿ ಅವಧಿಗೂ ಮೊದಲೇ ಕಾಫಿ ಹೂ ಅರಳಿದ್ದು, ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಕಾಫಿ ಕೊಯ್ಲು ಪೂರ್ಣಗೊಂಡಿಲ್ಲ. ಸಾಧಾರಣವಾಗಿ ಎಪ್ರಿಲ್ ತಿಂಗಳಲ್ಲಿ ಸುರಿಯುವ ಮಳೆಗೆ ಕಾಫಿ ಹೂ ಅರಳುತ್ತವೆ. ಈ ಅವಧಿಯಲ್ಲಿ ಕಾಫಿ ಹೂ ಅರಳಿದರೆ ಮುಂದಿನ ವರ್ಷ ಉತ್ತಮ ಫಸಲು ಸಿಗುತ್ತದೆ. ಆದರೆ ಇದೀಗ ಜಿಲ್ಲೆಯಲ್ಲಿ ಅರೇಬಿಕಾ ಹಾಗೂ ರೋಬಸ್ಟಾ ಕಾಫಿ ಕೊಯ್ಲು ಪೂರ್ಣಗೊಂಡಿಲ್ಲ. ಅಕಾಲಿಕ ಮಳೆಯಿಂದಾಗಿ ಕಾಫಿ ಹೂ ಅರಳಿದ್ದು, ಅನಿವಾರ್ಯವಾಗಿ ಕಾಫಿ ಬೆಳೆಗಾರರು ಕಾಫಿ ಕೊಯ್ಲು ಅರ್ಧಕ್ಕೆ ನಿಲ್ಲಿಸಿದ್ದಾರೆ. ಇದರ ಪರಿಣಾಮ ಹಣ್ಣಾಗಿರುವ ಕಾಫಿ ಗಿಡದಲ್ಲೇ ಕೊಳೆತು ನೆಲಕ್ಕುರುಳುತ್ತಿವೆ ಎಂದು ಬೆಳೆಗಾರರು ತಿಳಿಸಿದ್ದಾರೆ.
ಶೇ.50ರಷ್ಟು ಕಾಫಿ ಹಣ್ಣುಗಳು ಗಿಡಗಳಲ್ಲೇ ಕೊಳೆತು ನೆಲಕಚ್ಚಿವೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಪರಿಸ್ಥಿತಿಗೆ ಜಿಲ್ಲೆಯ ಕಾಫಿ ಬೆಳೆಗಾರರು ಸಿಲುಕಿದ್ದಾರೆ.
ಜನವರಿ ಮೊದಲ ವಾರದಲ್ಲೇ ಸುರಿದ ಮಳೆ:
ಕೊಯ್ಲು ಮಾಡಿ ಒಣಗಿಸಲು ನೆಲದಲ್ಲಿ ಹಾಕಿದ್ದ ಕಾಫಿ ಅಕಾಲಿಕ ಮಳೆಯ ಪಾಲಾಗಿತ್ತು. ಕಳೆದ ವಾರ ಜಿಲ್ಲೆಯಲ್ಲಿ ಸತತ ನಾಲ್ಕು ದಿನಗಳ ಕಾಲ ಮೋಡ ಕವಿದ ವಾತಾವರಣವಿತ್ತು. ಕೊಯ್ಲು ಮಾಡಿ ಒಣಗಿಸಲು ಹಾಕಿದ್ದ ಕಾಫಿ ಬಿಸಿಲಿಲ್ಲದೆ ಕಪ್ಪು ಬಣ್ಣಕ್ಕೆ ತಿರುಗಿ ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.
ಕಾಫಿ ಕೊಯ್ಲು ಪೂರ್ಣಗೊಳ್ಳುವ ಮೊದಲೇ ಗಿಡದಲ್ಲಿ ಹೂ ಅರಳಿರುವುದರಿಂದ ಹಣ್ಣಾಗಿರುವ ಕಾಫಿ ಕೊಯ್ಲನ್ನು ಬೆಳೆಗಾರರು ನಿಲ್ಲಿಸಿದ್ದಾರೆ. ಹಣ್ಣಾಗಿರುವ ಕಾಫಿ ಕೊಯ್ಲು ಮಾಡಿದರೆ ಕಾಫಿ ಗಿಡದಲ್ಲಿ ಅರಳಿರುವ ಹೂವು ನೆಲಕ್ಕುರುಳುತ್ತವೆ. ಇದರಿಂದ ಮುಂದಿನ ವರ್ಷದ ಫಸಲು ಕೈ ಕೊಡುತ್ತದೆ ಎಂದು ಬೆಳೆಗಾರರು ತಿಳಿಸಿದ್ದಾರೆ.
ಹವಾಮಾನ ವೈಪರೀತ್ಯಕ್ಕೆ ನಷ್ಟಗೊಂಡ ಕಾಫಿ ಬೆಳೆ...
ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಹವಾಮಾನ ವೈಪರೀತ್ಯಗಳಿಂದ ಸುರಿದ ಅಕಾಲಿಕ ಮಳೆಯಿಂದಾಗಿ ಜಿಲ್ಲೆಯಲ್ಲಿ ಅವಧಿಗೂ ಮೊದಲೇ ಅರೇಬಿಕಾ ಕಾಫಿ ಹಣ್ಣಾಗಿತ್ತು.
ಕಾರ್ಮಿಕರ ಕೊರತೆಯ ನಡುವೆ, ಅಕ್ಟೋಬರ್ ತಿಂಗಳಲ್ಲಿ ಗಿಡದಲ್ಲಿ ಹಣ್ಣಾದ ಅರೇಬಿಕಾ ಕಾಫಿಯನ್ನು ಬೆಳೆಗಾರರು ಕೊಯ್ಲು ಮಾಡಿದ್ದರು. ಈ ಸಂದರ್ಭದಲ್ಲೂ ಹಣ್ಣಾಗಿರುವ ಅರೇಬಿಕಾ ಕಾಫಿ ನೆಲಕ್ಕುರುಳಿ ಬೆಳೆಗಾರರು ನಷ್ಟ ಅನುಭವಿಸಿದ್ದರು. ಹಣ್ಣಾಗದೆ ಉಳಿದ ಅರೇಬಿಕಾ ಹಾಗೂ ರೋಬಸ್ಟಾ ಕಾಫಿಯನ್ನು ಡಿಸೆಂಬರ್ ಹಾಗೂ ಜನವರಿ ಅಂತ್ಯದೊಳಗೆ ಕೊಯ್ಲು ಪೂರ್ಣಗೊಳಿಸುವ ಉದ್ದೇಶದಲ್ಲಿದ್ದ ಬೆಳೆಗಾರರ ಪಾಲಿಗೆ ಅಕಾಲಿಕ ಮಳೆ ದುಬಾರಿ ಆಗಿ ಪರಿಣಮಿಸಿದೆ. ಕಾಫಿ ಫಸಲು ಕಳೆದುಕೊಂಡು ಜಿಲ್ಲೆಯ ಬೆಳೆಗಾರರು ನಷ್ಟ ಅನುಭವಿಸುವಂತಾಗಿದ್ದು, ಪರಿಹಾರಕ್ಕೆ ಒತ್ತಾಯಿಸುತ್ತಿದ್ದಾರೆ.
ಕೊಡಗಿನಲ್ಲಿ ಅತಿವೃಷ್ಟಿ, ಅನಾವೃಷ್ಟಿಯುಂಟಾದ ಸಂದರ್ಭದಲ್ಲಿ ಹಿಂದಿನ ಬಿಜೆಪಿ ಸರಕಾರ, ರಾಜ್ಯ ಹಾಗೂ ಕೇಂದ್ರ ಸರಕಾರದ ವಿವಿಧ ಯೋಜನೆಗಳಿಂದ ಪರಿಹಾರ ದೊರಕಿಸಿಕೊಟ್ಟಿತ್ತು. ಪ್ರತೀ ಹೆಕ್ಟೇರ್‌ಗೆ 24 ಸಾವಿರದಿಂದ 28 ಸಾವಿರ ರೂ.ಗಳವರೆಗೆ ಕಾಫಿ ಬೆಳೆಗಾರರಿಗೆ ಪರಿಹಾರ ಒದಗಿಸಿಕೊಟ್ಟಿತ್ತು. ಈಗಿನ ಜಿಲ್ಲೆಯ ಜನಪ್ರತಿ ನಿಧಿಗಳು ಹಾಗೂ ಶಾಸಕರು ಆದಷ್ಟು ಬೇಗ ಕಾಫಿ ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆಯನ್ನು ಸರಕಾರದ ಮುಂದಿಟ್ಟು, ಪರಿಹಾರವನ್ನು ಒದಗಿಸಬೇಕಾಗಿದೆ.
► ಅಚ್ಚಾಂಡಿರ ಪವನ್ ಪೆಮ್ಮಯ್ಯ
ಕಾಫಿ ಬೆಳೆಗಾರ, ಕೊರವೇ ಕೊಡಗು ಜಿಲ್ಲಾಧ್ಯಕ್ಷ
ಅಕಾಲಿಕ ಮಳೆ
ತಂದ ಆಪತ್ತು
ಕೊಡಗು ಕೃಷಿ ಪ್ರಧಾನ ಜಿಲ್ಲೆ.ಇಲ್ಲಿನ ರೈತರಿಗೆ ಕಾಫಿಯೇ ಬದುಕು. 2-3 ಎಕರೆ ತೋಟದಲ್ಲಿ ಕಾಫಿ ಬೆಳೆದು ಜೀವನ ಸಾಗಿಸುತ್ತಿರುವ ಸಣ್ಣ ಬೆಳೆಗಾರರು ಅಕಾಲಿಕ ಮಳೆಯಿಂದಾಗಿ ಸಂಕಷ್ಟಕ್ಕೀಡಾಗಿದ್ದಾರೆ.
ಕಾರ್ಮಿಕರ ಕೊರತೆಯ ಮಧ್ಯೆ ದುಪ್ಪಟ್ಟು ಕೂಲಿ ನೀಡಿ ಕೊಯ್ಲು ಮಾಡಿರುವ ಕಾಫಿ ಹವಾಮಾನ ಬದಲಾವಣೆಯಿಂದ ಕೊಳೆಯುತ್ತಿವೆ. ಮತ್ತೊಂದೆಡೆ ಪಲ್ಪ್‌ಮಾಡಿದ ಕಾಫಿ ಬೀಜವನ್ನು ಒಣಗಿಸಲು ಸಾಧ್ಯವಾಗದೆ ಬೆಳೆಗಾರ ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡಿದ್ದಾನೆ. ಮತ್ತೊಂದೆಡೆ ಪಾರ್ಚ್‌ಮೆಂಟ್ ಕಾಫಿ ಕಪ್ಪು ಬಣ್ಣಕ್ಕೆ ತಿರುಗಿ ಗುಣಮಟ್ಟ ಕಳೆದುಕೊಂಡು, ಬೆಲೆಯನ್ನೂ ಕಳೆದುಕೊಳ್ಳಬೇಕಾದ ದುಸ್ಥಿಗೆ ಬೆಳೆಗಾರರು ಸಿಲುಕಿದ್ದಾರೆ. ಜಿಲ್ಲೆಯಲ್ಲಿ 1,02,525 ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಇದರಲ್ಲಿ 74,495 ಹೆಕ್ಟೇರ್ ಪ್ರದೇಶದಲ್ಲಿ ರೋಬಸ್ಟಾ ಹಾಗೂ 28,030 ಹೆಕ್ಟೇರ್ ಪ್ರದೇಶದಲ್ಲಿ ಅರೇಬಿಕಾ ಕಾಫಿ ಬೆಳೆಯಲಾಗುತ್ತಿದೆ. ದಕ್ಷಿಣ ಕೊಡಗು ರೋಬಸ್ಟಾ ಕಾಫಿಗೆ ಹೆಸರುವಾಸಿಯಾದರೆ,ಉತ್ತರ ಕೊಡಗಿನಲ್ಲಿ ಅರೇಬಿಕಾ ಕಾಫಿಗೆ ಹೆಚ್ಚಿಗೆ ಬೆಳೆಯುತ್ತಾರೆ.