56 ವಾರ್ಡ್ ಗುತ್ತಿಗೆ ಅಟೆಂಡರ್‌ಗಳನ್ನು ಕೆಲಸದಿಂದ ವಜಾಗೊಳಿಸಿದ ವಿಕ್ಟೋರಿಯಾ ಆಸ್ಪತ್ರೆ: ಆರೋಪ

Update: 2024-05-10 05:32 GMT

ಬೆಂಗಳೂರು: ಬೆಂಗಳೂರಿನ ಸರಕಾರಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸುಮಾರು 20-25 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ವಾರ್ಡ್ ಅಟೆಂಡರ್‌ಗಳಾಗಿ ಕಾರ್ಯನಿರ್ವಹಿಸುತ್ತಿರುವ 56 ಮಂದಿ ಕಾರ್ಮಿಕರನ್ನು ಕಾನೂನುಬಾಹಿರವಾಗಿ ದಿಢೀರನೆ ಸೇವೆಯಿಂದ ವಜಾಗೊಳಿಸಿರುವ ಆರೋಪ ಕೇಳಿಬಂದಿದೆ.

ಎರಡು ತಿಂಗಳಿನಿಂದ ಕಾರ್ಮಿಕರಿಗೆ ವೇತನವನ್ನು ಕೊಟ್ಟಿಲ್ಲ. ಈ ಬಗ್ಗೆ ಆಸ್ಪತ್ರೆಯ ಆಡಳಿತ ಮಂಡಳಿಯಲ್ಲಿ ವೇತನ ಕೇಳಿದ್ದಕ್ಕೆ 56 ಮಂದಿಯನ್ನು ದಿಢೀರನೆ ತೆಗೆದು ಹಾಕಲಾಗಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

ಗುತ್ತಿಗೆ ಕಾರ್ಮಿಕರಾಗಿರುವ ಈ ವಾರ್ಡ್ ಅಟೆಂಡರ್‌ಗಳಲ್ಲಿ ಹಲವರು 25 ವರ್ಷ, 20 ವರ್ಷ, 10 ವರ್ಷ, 7 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕೆಲವರು ಸುಮಾರು 30 ವರ್ಷಗಳವರೆಗೆ ಸೇವೆ ಸಲ್ಲಿಸಿದ್ದಾರೆ. ಕೊರೋನ ಸಂದರ್ಭದಲ್ಲಿ ಇವರು ಆಸ್ಪತ್ರೆಯ ಸೇವೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದು, ಇದೀಗ ಆಸ್ಪತ್ರೆಯ ಈ ದಿಢೀರ್ ನಿರ್ಧಾರ ಕಾರ್ಮಿಕ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

‘ನಾನು 10 ವರ್ಷಗಳಿಂದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಾವು ವಾರ್ಡ್ ಒಳಗೆ ಕೆಲಸ ಮಾಡುವವರು. ಈಗ ನೀವು ಬೇಡ ಎಂದು ನಮ್ಮನ್ನು ತೆಗೆದು ಹಾಕಿ ಸೆಕ್ಯೂರಿಟಿಯವರನ್ನು ನೇಮಕ ಮಾಡುವುದಾಗಿ ಹೇಳಿದ್ದಾರೆ. ಹೊಸ ಕಾಂಟ್ರಾಕ್ಟರ್ ಬಂದಾಗ ನಮ್ಮನ್ನು ತೆಗೆದುಕೊಳ್ಳುವುದಾಗಿಯೂ ಹೇಳಿದ್ದರು. ಆದರೆ, ಈಗ ನಮ್ಮನ್ನು ತೆಗೆದು ಹಾಕಲಾಗಿದೆ’ ಎಂಬುದಾಗಿ ಅಳಲು ತೋಡಿಕೊಂಡಿದ್ದಾರೆ ವಾರ್ಡ್ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ಶಶಿಕಲಾ.

ನಾವು ಒಟ್ಟು 91 ವಾರ್ಡ್ ಅಟೆಂಡರ್‌ಗಳಿದ್ದು, ಅದರಲ್ಲಿ 25 ಮಂದಿ ಹೊಸ ಅಟೆಂಡರ್‌ಗಳನ್ನು ಉಳಿಸಿಕೊಂಡಿದ್ದಾರೆ. ಇನ್ನುಳಿದ 56 ಮಂದಿ ಹಳೇ ವಾರ್ಡ್ ಅಟೆಂಡರ್‌ಗಳನ್ನು ತೆಗೆದು ಹಾಕಿದ್ದಾರೆ. ಪೂರ್ವಭಾವಿಯಾಗಿ ಯಾವುದೇ ಮಾಹಿತಿಯನ್ನು ನೀಡದೇ ದಿಢೀರನೆ ಕೆಲಸಕ್ಕೆ ಬರಬೇಡಿ ಎನ್ನುತ್ತಿದ್ದಾರೆ. ನಮಗೆ ನ್ಯಾಯ ಬೇಕು. ಹೀಗಾದರೆ ನಮ್ಮ ಕುಟುಂಬಗಳನ್ನು ನಡೆಸುವುದಾದರೂ ಹೇಗೆ?’ ಎನ್ನುತ್ತಾರೆ ಶಶಿಕಲಾ.

ನಾನು ಮತ್ತು ನನ್ನ ಪತಿ ಇಲ್ಲಿ 15 ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ಈಗ ಹೊಸ ಏಜೆನ್ಸಿ ಬಂದು ನಮ್ಮಿಬ್ಬರು ಸೇರಿ 56 ಮಂದಿಯನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ನಮ್ಮಿಬ್ಬರಿಗೂ ಕೆಲಸವಿಲ್ಲದ ಕಾರಣ ಮನೆಯಲ್ಲಿ ಯಾರಿಗೂ ದುಡಿಮೆ ಇಲ್ಲದಾಗಿದೆ. ಮಕ್ಕಳು ಸಣ್ಣ ವಯಸ್ಸಿನವರಾಗಿದ್ದು ನಮಗೆ ಈಗ ದಿಕ್ಕು ತೋಚದಾಗಿದೆ ಎನ್ನುತ್ತಾರೆ ಆಸ್ಪತ್ರೆಯ ಮಾಜಿ ಸಿಬ್ಬಂದಿ ಬೀಬಿ ಆಯಿಶಾ.

ಈ ಹೊರಗುತ್ತಿಗೆ ಕಾರ್ಮಿಕರಿಗೆ ತಮ್ಮ ಒಪ್ಪಂದ ಬದಲಾಗಿದೆ ಎಂದು ತಿಳಿಸಲಾಗಿದೆ. ಆದರೆ, ಕಾಗದದ ಮೇಲೆ ಏನೂ ಇಲ್ಲ. ಯಾವುದೇ ಪೂರ್ವ ಸೂಚನೆಯೂ ಇಲ್ಲ ಎಂದು ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್‌ನ ರಾಜ್ಯ ಸಮಿತಿ ಸದಸ್ಯೆ ಮೈತ್ರೇಯಿ ಕೃಷ್ಣನ್ ಹೇಳುತ್ತಾರೆ.

ಪೊಲೀಸರ ಮೂಲಕ ಧಮ್ಕಿ ಆರೋಪ

ಕಾರಣವೇ ಇಲ್ಲದೇ ನಮ್ಮನ್ನು ಕೆಲಸದಿಂದ ತೆಗೆದು ಹಾಕಿರುವುದನ್ನು ಪ್ರಶ್ನಿಸಿ ನ್ಯಾಯಕ್ಕಾಗಿ ಕರ್ನಾಟಕ ಲೇಬರ್ ಯೂನಿಯನ್ ವಿಕ್ಟೋರಿಯಾ ಘಟಕದ ಆಶ್ರಯದಲ್ಲಿ ಆಸ್ಪತ್ರೆಯ ಬಳಿ ಮೇ 8ರಿಂದ ಪ್ರತಿಭಟನೆ ಕೈಗೊಂಡಿದ್ದೇವೆ. ಈ ನಡುವೆ ಆಸ್ಪತ್ರೆಯ ಆಡಳಿತ ಮಂಡಳಿಯ ಕುಮ್ಮಕ್ಕಿನಿಂದ ಪೊಲೀಸ್ ಇಲಾಖೆಯವರು ನಮಗೆ ಆಸ್ಪತ್ರೆಯ ಹತ್ತಿರ ಪ್ರತಿಭಟಿಸದಂತೆ ಧಮ್ಕಿ ಹಾಕುತ್ತಿದ್ದಾರೆ. ನಮಗೆ ಅನ್ಯಾಯವಾಗಿರುವ ಸ್ಥಳದಲ್ಲೇ ನ್ಯಾಯ ಕೇಳುತ್ತಿದ್ದೇವೆ. ಆದರೆ, ಯಾವುದಾರೂ ಪಾರ್ಕ್ ಬಳಿ ಹೋಗಿ ಪ್ರತಿಭಟಿಸುವಂತೆ ಪೊಲೀಸರು ಒತ್ತಾಯಿಸುತ್ತಿದ್ದಾರೆ ಎಂದು ಆಸ್ಪತ್ರೆಯ ಮಾಜಿ ಸಿಬ್ಬಂದಿ ಶಶಿಕಲಾ ಆರೋಪಿಸಿದ್ದಾರೆ.

ವಾರ್ಡ್ ಅಟೆಂಡರ್‌ಗಳು ಸುಮಾರು 25 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಕಾಂಟ್ರಾಕ್ಟರ್ ಮತ್ತು ವಿಕ್ಟೋರಿಯಾ ಆಸ್ಪತ್ರೆ ಅವರನ್ನು ದಿಢೀರ್ ಆಗಿ ಕೆಲಸದಿಂದ ತೆಗೆದು ಹಾಕಿ ಆದೇಶವನ್ನು ನೀಡಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಉಡಾಫೆಯಿಂದ ವರ್ತಿಸಿದ್ದಾರೆ. ಆದರೆ, ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವವರೆಗೆ ಹೋರಾಟ ಮಾಡಲಾಗುವುದು.

-ಮೈತ್ರೇಯಿ ಕೃಷ್ಣನ್, ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್.

ಕಾರ್ಮಿಕರು ಹೊರಗುತ್ತಿಗೆ ನೌಕರರಾಗಿದ್ದು, ಒಂದು ಏಜೆನ್ಸಿಯ ಟೆಂಡರ್ ಅವಧಿ ಮುಗಿದಿದ್ದು ಹೊಸ ಏಜೆನ್ಸಿಯವರು 56 ಕಾರ್ಮಿಕರನ್ನು ತೆಗೆದು ಹೊಸಬರನ್ನು ಸೇರಿಸಿಕೊಂಡಿದ್ದಾರೆ. ಕಾರ್ಮಿಕ ಇಲಾಖೆಯಿಂದ ಮೇ 9ರ ಗುರುವಾರ ಸಭೆ ನಡೆಸಲಾಗಿದೆ. ಎರಡೂ ಏಜೆನ್ಸಿ ಕಂಪೆನಿಗಳ ಗೊಂದಲದಿಂದ ಈ ಸಮಸ್ಯೆ ಉಂಟಾಗಿದೆ. ಮೇ 13ರ ಸೋಮವಾರ ಏಜೆನ್ಸಿ ಕಂಪೆನಿಯ ಸಭೆ ಕರೆದು ಸಮಸ್ಯೆ ಪರಿಹರಿಸಲಾಗುವುದು.

-ಡಾ.ದೀಪಕ್ ಎಸ್. ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಯೋಗೇಶ್ ಮಲ್ಲೂರು

contributor

Similar News