ಹರ್ಯಾಣ ಚುನಾವಣಾ ಚಿತ್ರಣ ಬದಲಿಸಿದ ವಿನೇಶ್ ಫೋಗಟ್!

ವಿನೇಶ್ ಫೋಗಟ್ ಹರ್ಯಾಣ ವಿಧಾನಸಭಾ ಚುನಾವಣಾ ಅಖಾಡಕ್ಕೆ ಇಳಿಯುತ್ತಿದ್ದಂತೆ ಸಣ್ಣ ರಾಜ್ಯ ಹರ್ಯಾಣದಲ್ಲಿ ದೊಡ್ಡ ಸಂಚಲನ ಉಂಟಾಗಿದೆ. ಈಗಾಗಲೇ ಆಡಳಿತ ವಿರೋಧಿ ಅಲೆಯಿಂದ ತತ್ತರಿಸುತ್ತಿದ್ದ ಬಿಜೆಪಿ ಪಾಳಯಕ್ಕೆ ವಿನೇಶ್ ಫೋಗಟ್ ರಾಜಕೀಯ ಪ್ರವೇಶ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹರ್ಯಾಣದ ರಾಜಕೀಯದ ಮೇಲೆ ನಿರ್ಣಾಯಕ ಪಾತ್ರವಹಿಸುವ ಜಾಟ್ ಸಮುದಾಯದ ಮತಗಳು ಕಳೆದೆರಡು ವಿಧಾನಸಭಾ ಚುನಾವಣೆಗಳಲ್ಲಿ ಚದುರಿದ ಪರಿಣಾಮ ಅರಳಿದ್ದ ಕಮಲ ಈ ಸಲ ವಿನೇಶ್ ಫೋಗಟ್ ಕಾರಣಕ್ಕೆ ಮುದುಡುವ ಸಾಧ್ಯತೆಯೇ ಹೆಚ್ಚು ಎನ್ನುತ್ತಾರೆ ಸ್ಥಳೀಯ ರಾಜಕೀಯ ವಿಶ್ಲೇಷಕರು.

Update: 2024-09-15 06:59 GMT

ರಾಷ್ಟ್ರ ರಾಜಧಾನಿ ದಿಲ್ಲಿಯೊಂದಿಗೆ ಗಡಿ ಹಂಚಿಕೊಂಡಿರುವ ಹರ್ಯಾಣ ವಿಧಾನಸಭಾ ಚುನಾವಣಾ ಕಣದಲ್ಲಿ ಈಗ ಭಾರೀ ಸದ್ದು ಮಾಡುತ್ತಿರುವ ಹೆಸರು ಖ್ಯಾತ ಕುಸ್ತಿ ಪಟು ವಿನೇಶ್ ಫೋಗಟ್. ಮೂರು ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರೂ ವಿನೇಶ್ ಫೋಗಟ್ ರಾಷ್ಟ್ರ ಮಟ್ಟದಲ್ಲಿ ದೊಡ್ಡದಾಗಿ ಚರ್ಚೆಯಾಗಿದ್ದು ಭಾರತೀಯ ಕುಸ್ತಿ ಫೆಡರೇಷನ್‌ನಲ್ಲಿ ಒಕ್ಕೂಟದ ಅಧ್ಯಕ್ಷ (ಈಗ ಮಾಜಿ) ಬ್ರಿಜ್ ಭೂಷಣ್ (ಬಿಜೆಪಿ ನಾಯಕ) ನಡೆಸುತ್ತಿದ್ದ ಲೈಂಗಿಕ ದೌರ್ಜನ್ಯದ ವಿರುದ್ಧ ದನಿ ಎತ್ತಿದಾಗ. ಕೇಂದ್ರ ಮತ್ತು ಉತ್ತರ ಪ್ರದೇಶ ಸರಕಾರಗಳ ಕೃಪಾಶೀರ್ವಾದದಿಂದ ತನ್ನನ್ನು ಯಾರೂ ಬಗ್ಗಿಸಲಾರರು ಎಂದು ಎದೆಯುಬ್ಬಿಸಿ ನಿಂತಿದ್ದ ಬ್ರಿಜ್ ಭೂಷಣ್ ಅವರನ್ನು ಏಕಾಂಗಿಯಾಗಿ ‘ಚಿತ್’ ಮಾಡಿದ್ದು ವಿನೇಶ್ ಫೋಗಟ್.

ಬಿಜೆಪಿ ಪಕ್ಷ ಮತ್ತು ಸರಕಾರ ಎಷ್ಟೇ ಹರಸಾಹಸ ಮಾಡಿದರೂ ಬಗ್ಗದೆ ಜಗಜಟ್ಟಿಯಂತೆ ಬೀದಿಗಿಳಿದು ಹೋರಾಡಿದ ವಿನೇಶ್ ಫೋಗಟ್ ಆಗಲೇ ದೇಶವಾಸಿಗಳ ಮನಗೆದ್ದಿದ್ದರು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅವರು ಅಮೋಘ ಪ್ರದರ್ಶನ ನೀಡಿಯೂ ದುರದೃಷ್ಟವಶಾತ್ ಅನರ್ಹಗೊಂಡಾಗಲಂತೂ ದೇಶದ ಕೋಟ್ಯಂತರ ಜನ ಅವರಿಗಾಗಿ ನೊಂದುಕೊಂಡರು. ಈಗಾಗಲೇ ಅನ್ಯಾಯದ ವಿರುದ್ಧ ಹೋರಾಡುವ ದೀಕ್ಷೆ ತೆಗೆದುಕೊಂಡಿದ್ದ ವಿನೇಶ್ ಫೋಗಟ್ ಇತ್ತೀಚೆಗೆ ಕಾಂಗ್ರೆಸ್ ಪಕ್ಷವನ್ನು ಸೇರಿ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಜುಲಾನ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ.

ವಿನೇಶ್ ಫೋಗಟ್ ಹರ್ಯಾಣ ವಿಧಾನಸಭಾ ಚುನಾವಣಾ ಅಖಾಡಕ್ಕೆ ಇಳಿಯುತ್ತಿದ್ದಂತೆ ಸಣ್ಣ ರಾಜ್ಯ ಹರ್ಯಾಣದಲ್ಲಿ ದೊಡ್ಡ ಸಂಚಲನ ಉಂಟಾಗಿದೆ. ಈಗಾಗಲೇ ಆಡಳಿತ ವಿರೋಧಿ ಅಲೆಯಿಂದ ತತ್ತರಿಸುತ್ತಿದ್ದ ಬಿಜೆಪಿ ಪಾಳಯಕ್ಕೆ ವಿನೇಶ್ ಫೋಗಟ್ ರಾಜಕೀಯ ಪ್ರವೇಶ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹರ್ಯಾಣದ ರಾಜಕೀಯದ ಮೇಲೆ ನಿರ್ಣಾಯಕ ಪಾತ್ರವಹಿಸುವ ಜಾಟ್ ಸಮುದಾಯದ ಮತಗಳು ಕಳೆದೆರಡು ವಿಧಾನಸಭಾ ಚುನಾವಣೆಗಳಲ್ಲಿ ಚದುರಿದ ಪರಿಣಾಮ ಅರಳಿದ್ದ ಕಮಲ ಈ ಸಲ ವಿನೇಶ್ ಫೋಗಟ್ ಕಾರಣಕ್ಕೆ ಮುದುಡುವ ಸಾಧ್ಯತೆಯೇ ಹೆಚ್ಚು ಎನ್ನುತ್ತಾರೆ ಸ್ಥಳೀಯ ರಾಜಕೀಯ ವಿಶ್ಲೇಷಕರು.

ವಿನೇಶ್ ಫೋಗಟ್ ಜಾಟ್ ಸಮುದಾಯವನ್ನು ಪ್ರತಿನಿಧಿಸುವುದರಿಂದ ಮತ್ತು ಈಗಾಗಲೇ ಆ ಸಮುದಾಯ ಬಿಜೆಪಿ ಬಗ್ಗೆ ಒಲವನ್ನು ಕಳೆದುಕೊಂಡಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ಹೆಚ್ಚಿನ ಲಾಭವಾಗಬಹುದು ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗಲು ವಿನೇಶ್ ಫೋಗಟ್ ಜಾಟ್ ಸಮುದಾಯದವರು ಎನ್ನುವುದು ಮಾತ್ರ ಕಾರಣವಾಗುವುದಿಲ್ಲ. ಜೊತೆಗೆ ಈ ಬಾರಿಯ ಚುನಾವಣೆಯಲ್ಲಿ ರೈತರು, ಮಹಿಳೆಯರು ಮತ್ತು ಯುವಕರು ಕೂಡ ಕಾಂಗ್ರೆಸ್ ಬೆಂಬಲಿಸಬಹುದು ಎನ್ನುವ ಲೆಕ್ಕಾಚಾರ ಕಂಡುಬರುತ್ತಿದೆ. ರೈತರು, ಮಹಿಳೆಯರು ಮತ್ತು ಯುವಕರು ಕಾಂಗ್ರೆಸ್ ಪಕ್ಷದ ಕಡೆ ದೊಡ್ಡ ಪ್ರಮಾಣದಲ್ಲಿ ತಿರುಗಿ ನೋಡುವುದಕ್ಕೂ ವಿನೇಶ್ ಫೋಗಟ್ ಅವರೇ ಕಾರಣ.

ದಿಲ್ಲಿ-ಹರ್ಯಾಣ ಗಡಿಯಲ್ಲಿ ನಡೆಯುತ್ತಿದ್ದ ರೈತರ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ವಿನೇಶ್ ಫೋಗಟ್ ರೈತರನ್ನು ಪ್ರತಿನಿಧಿಸಿದ್ದರು. ಜೊತೆಗೆ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರು ಕೂಡ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು. ಇದರಿಂದಾಗಿ ಹೋರಾಟನಿರತ ರೈತರು ವಿನೇಶ್ ಫೋಗಟ್ ಅವರನ್ನು ‘ತಮ್ಮ ಪ್ರತಿನಿಧಿ’ ಎಂದು ಭಾವಿಸಿದಂತೆ ಭಾಸವಾಗುತ್ತಿದೆ. ಇದಲ್ಲದೆ ಮಹಿಳೆಯರು ಮತ್ತು ಯುವಕರಲ್ಲೂ ವಿನೇಶ್ ಫೋಗಟ್ ಅವರ ಬಗ್ಗೆ ‘ನಮ್ಮ ರಾಜ್ಯದವರು’, ‘ನಮ್ಮ ಜಾತಿಯವರು’ ಮತ್ತು ‘ಬಿಜೆಪಿಯಿಂದ ಅನ್ಯಾಯಕ್ಕೆ ಒಳಗಾಗಿರುವವರು’ ಎಂಬ ಭಾವನಾತ್ಮಕ ಅಂಶಗಳು ಬೆಸೆದುಕೊಂಡಿವೆ.

ಜಾತಿ ಲೆಕ್ಕಾಚಾರವನ್ನು ನೋಡುವುದಾದರೆ ಹರ್ಯಾಣದ ಒಟ್ಟು ಜನಸಂಖ್ಯೆಯ ಶೇ. 22ರಿಂದ 27ರಷ್ಟು ಜನ ಜಾಟ್ ಸಮುದಾಯಕ್ಕೆ ಸೇರಿದವರು. ಹರ್ಯಾಣದ 90 ವಿಧಾನಸಭಾ ಕ್ಷೇತ್ರಗಳ ಪೈಕಿ 37ರಲ್ಲಿ ಜಾಟ್ ಮತದಾರರು ಶೇ. 20ಕ್ಕಿಂತ ಹೆಚ್ಚಿದ್ದಾರೆ. ಜಾಟ್ ಸಮುದಾಯದ ಪ್ರಾಬಲ್ಯ ಇರುವ ಈ ಕ್ಷೇತ್ರಗಳಲ್ಲಿ 2009ರಲ್ಲಿ ಬಿಜೆಪಿ ಒಂದನ್ನೂ ಗೆದ್ದಿರಲಿಲ್ಲ. ಕಾಂಗ್ರೆಸ್ 19 ಮತ್ತು ಐಎನ್‌ಎಲ್‌ಡಿ 12 ಸ್ಥಾನಗಳನ್ನು ಗೆದ್ದುಕೊಂಡಿದ್ದವು.

2019 ರಲ್ಲಿ ಬಾಲಾಕೋಟ್ ವೈಮಾನಿಕ ದಾಳಿಯ ನಂತರ ದೇಶಾದ್ಯಂತ ರಾಷ್ಟ್ರೀಯತೆಯ ವಿಚಾರ ಚರ್ಚೆಯ ಮುನ್ನೆಲೆಗೆ ಬಂದಿದ್ದರಿಂದ ಆಗ ಜಾಟ್ ಸಮುದಾಯ ಜಾತಿ ನೋಡದೆ ಬಿಜೆಪಿಗೆ ಮತ ನೀಡಿತ್ತು. ನಂತರ ಬಿಜೆಪಿಗೆ ಲಾಭ ಆಗಿದ್ದು ಕಾಂಗ್ರೆಸ್, ಭಾರತೀಯ ರಾಷ್ಟ್ರೀಯ ಲೋಕದಳ ಮತ್ತು ಜನನಾಯಕ್ ಜನತಾ ಪಕ್ಷಗಳ ನಡುವೆ ಜಾಟ್ ಮತಗಳು ವಿಭಜನೆಯಾಗಿದ್ದರಿಂದ.

ಆದರೀಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಕಳೆದ ಐದು ವರ್ಷಗಳಲ್ಲಿ ರೈತರು, ಕುಸ್ತಿಪಟುಗಳು ಮತ್ತು ಅಗ್ನಿವೀರ್ ಪ್ರತಿಭಟನೆಗಳು ತೀವ್ರಗೊಂಡಿವೆ. ಎಲ್ಲಾ ಪ್ರತಿಭಟನೆಗಳ ಗುರಿ ಬಿಜೆಪಿಯೇ ಆಗಿದೆ. ಇದಲ್ಲದೆ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ಜಾಟ್ ಸಮುದಾಯವನ್ನು ಪರಿಗಣಿಸಿಲ್ಲ ಎಂಬ ಆಕ್ರೋಶವೂ ಇದೆ. ಪರಿಣಾಮವಾಗಿ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಜಾಟ್ ಸಮುದಾಯ ಸಿಡಿದೆದ್ದಿತ್ತು. ಬಿಜೆಪಿ ಅರ್ಧಕ್ಕರ್ಧ ಸೀಟುಗಳನ್ನು ಕಳೆದುಕೊಳ್ಳಬೇಕಾಯಿತು. ಶೇ. 64ರಷ್ಟು ಜಾಟ್ ಮತದಾರರು ಕಾಂಗ್ರೆಸ್-ಆಮ್ ಆದ್ಮಿ ಪಕ್ಷದ ಮೈತ್ರಿಯನ್ನು (+40ಶೇ.) ಬೆಂಬಲಿಸಿದ್ದರು. ಬಿಜೆಪಿಯನ್ನು ಶೇ. 27ರಷ್ಟು (-23ಶೇ.) ಜನ ಮಾತ್ರ ಬೆಂಬಲಿಸಿದ್ದರು. ಐಎನ್‌ಎಲ್‌ಡಿ ಮತ್ತು ಜೆಜೆಪಿ ಪಕ್ಷಗಳು ಶೇ. 9ರಷ್ಟು(-17ಶೇ.) ಮತ ಪಡೆದಿದ್ದವು. 2014ರ ವಿಧಾನಸಭಾ ಚುನಾವಣೆಯಲ್ಲಿ ಶೇ. 42ರಷ್ಟು ಜಾಟ್ ಮತಗಳು ಐಎನ್‌ಎಲ್‌ಡಿಗೆ, ಶೇ. 24ರಷ್ಟು ಕಾಂಗ್ರೆಸ್‌ಗೆ ಮತ್ತು ಶೇ.17ರಷ್ಟು ಬಿಜೆಪಿಗೆ ಹೋಗಿದ್ದವು ಎಂದು ‘ಸಿಎಸ್ ಡಿಸ್-ಎನ್‌ಇಎಸ್’ ಸಮೀಕ್ಷೆ ಅಭಿಪ್ರಾಯಪಟ್ಟಿತ್ತು.

ಕಿಂಗ್ ಮೇಕರ್ ಯಾರು?

ಸಾಕ್ಷರತೆ ಸುಧಾರಿಸಿದಂತೆ ಚುನಾವಣೆಯಿಂದ ಚುನಾವಣೆಗೆ ಮಹಿಳೆಯರು, ರೈತರು ಮತ್ತು ಯುವಕರು ಸ್ವತಂತ್ರವಾಗಿ ಮತದಾನದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಕಂಡುಬರುತ್ತಿದೆ. ಈ ಮೂರು ಪ್ರಮುಖ ಮತವರ್ಗ ಈ ಬಾರಿ ಬೇರೆ ಬೇರೆ ಕಾರಣಕ್ಕೆ ಬಿಜೆಪಿ ವಿರುದ್ಧ ಸೆಟೆದು ನಿಂತರೆ ಆ ಪಕ್ಷ ಅಧಿಕಾರವನ್ನು ಕಳೆದುಕೊಳ್ಳಬೇಕಾಗುತ್ತದೆ. ಸಹಜವಾಗಿ ಅದರ ಲಾಭ ಕಾಂಗ್ರೆಸ್ ಪಕ್ಷದ ಪಾಲಾಗುತ್ತದೆ.

2024ರ ಲೋಕಸಭಾ ಚುನಾವಣೆಯಲ್ಲಿ ‘ಸಿಎಸ್ ಡಿಸ್-ಎನ್‌ಇಎಸ್’ ಸಮೀಕ್ಷೆ ಪ್ರಕಾರ ಶೇ. 49ರಷ್ಟು ಮಹಿಳೆಯರು ಕಾಂಗ್ರೆಸ್-ಎಎಪಿ ಮೈತ್ರಿಯನ್ನು ಬೆಂಬಲಿಸಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ‘ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್’ ಪ್ರಕಾರ ಶೇ.60ರಷ್ಟು ಮಹಿಳೆಯರು ಬಿಜೆಪಿಗೆ ಮತ ಹಾಕಿದ್ದರು.

ಕಾಂಗ್ರೆಸ್ ಪಕ್ಷದ ‘ಲಡ್ಕಿ ಹೂಂ ಲಡ್ ಸಕ್ತಿ ಹೂಂ’ ಘೋಷಣೆಗೆ ಹರ್ಯಾಣದಲ್ಲಿ ವಿನೇಶ್ ಫೋಗಟ್ ಅವರೇ ರಾಯಭಾರಿಯಾಗಿರುವುದರಿಂದ ಮಹಿಳಾ ಮತಕ್ರೋಡೀಕರಣ ಆಗಬಹುದು ಎಂದು ಹೇಳಲಾಗುತ್ತಿದೆ. ‘ಆಕ್ಸಿಸ್ ಮೈ ಇಂಡಿಯಾ’ ಪ್ರಕಾರ 2019ಕ್ಕೆ ಹೋಲಿಸಿದರೆ ಈ ಬಾರಿ 18-25 ವರ್ಷ ವಯಸ್ಸಿನ ಶೇ. 47 ಪ್ರತಿಶತ ಯುವಕರು ಹರ್ಯಾಣದ ಇಂಡಿಯಾ ಬ್ಲಾಕ್ ಅನ್ನು ಬೆಂಬಲಿಸಿದ್ದಾರೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ (ಸಿಎಂಐಇ) ಪ್ರಕಾರ ಭಾರತದಲ್ಲಿ ಅತಿ ಹೆಚ್ಚು ನಿರುದ್ಯೋಗ ದರ ಹೊಂದಿರುವ ರಾಜ್ಯಗಳಲ್ಲಿ ಹರ್ಯಾಣವೂ ಸೇರಿದೆ. ಉದ್ಯೋಗದ ಭರವಸೆ ನೀಡಿ ಅಧಿಕಾರಕ್ಕೆ ಬಂದು ಅದಕ್ಕನುಗುಣವಾಗಿ ಕೆಲಸ ಮಾಡದ ಬಿಜೆಪಿ ಬಗ್ಗೆ ಭ್ರಮನಿರಸನಗೊಂಡಿರುವ ಯುವ ಸಮುದಾಯಕ್ಕೆ ಬಿಜೆಪಿ ವಿರುದ್ಧ ಬಂಡೆದ್ದಿರುವ ವಿನೇಶ್ ಫೋಗಟ್ ಯೂತ್ ಐಕಾನ್ ಆಗಿದ್ದಾರೆ. ಹರ್ಯಾಣದ ಅತ್ಲೀಟ್‌ಗಳು ಭಾರತದ ಪ್ಯಾರಿಸ್ ಒಲಿಂಪಿಕ್ ತಂಡದಲ್ಲಿ ಶೇ. 20ರಷ್ಟು (117 ರಲ್ಲಿ 24) ಪಾಲನ್ನು ಹೊಂದಿದ್ದಾರೆ ಎನ್ನುವುದು ಇಲ್ಲಿ ಗಮನಾರ್ಹ.

ಇತ್ತೀಚೆಗೆ ‘ಇಂಡಿಯಾ ಟುಡೇ - ಸಿ ವೋಟರ್ ಪೊಲಿಟಿಕಲ್ ಸ್ಟಾಕ್ ಎಕ್ಸ್‌ಚೇಂಜ್’ ನಡೆಸಿದ ಸಮೀಕ್ಷೆಯಲ್ಲಿ ಶೇ. 41ರಷ್ಟು ಜನ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಸೇರಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಮಟ್ಟದ ಲಾಭ ಆಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಶೇ. 21ರಷ್ಟು ಜನ ಸಣ್ಣ ಪ್ರಮಾಣದಲ್ಲಿ ಲಾಭ ಆಗಲಿದೆ ಎಂದಿದ್ದಾರೆ. ಶೇ. 23ರಷ್ಟು ಜನ ಕಡಿಮೆ ಅಥವಾ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಶೇ. 5ರಷ್ಟು ಜನ ಈ ಬೆಳವಣಿಗೆ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಸಂಘರ್ಷಗಳನ್ನು ಉಂಟುಮಾಡಬಹುದು ಎಂದು ಕೂಡ ಹೇಳಿದ್ದಾರೆ.

ಕೌಂಟರ್ ಕ್ರೋಡೀಕರಣದ ಸಾಧ್ಯತೆ

ಜಾಟ್ ಹೊರತಾಗಿ ಇತರ ಜಾತಿಗಳು ಒಂದಾಗುವ ಅಪಾಯವೂ ಇದೆ. 2014 ಮತ್ತು 2019 ರಲ್ಲಿ ಬಿಜೆಪಿ ಒಬಿಸಿ, ಎಸ್‌ಸಿ, ಅರೋರಾ, ಪಂಜಾಬಿ, ಖತ್ರಿ ಮತ್ತು ಬ್ರಾಹ್ಮಣ ಮತಗಳನ್ನು ಒಂದುಗೂಡಿಸುವ ಪ್ರಯೋಗ ಮಾಡಿ ಯಶಸ್ವಿಯಾಗಿದೆ. ಈ ಬಗ್ಗೆ ಕೂಡ ಕಾಂಗ್ರೆಸ್ ಜಾಗರೂಕವಾಗಿದ್ದು ಅದಕ್ಕಾಗಿಯೇ ತನ್ನ ಸಿಎಂ ಅಭ್ಯರ್ಥಿಯಾಗಿ ಜಾಟ್ ಸಮುದಾಯದ ನಾಯಕ ಭೂಪಿಂದರ್ ಸಿಂಗ್ ಹೂಡಾ ಅವರ ಹೆಸರನ್ನು ಘೋಷಿಸಿಲ್ಲ.

ಜಾಟ್, ದಲಿತ, ಮುಸ್ಲಿಮ್ ಸಂಯೋಜನೆಯನ್ನು ರಚಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಜಾಟ್‌ಗಳು ಮತ್ತು ಮುಸ್ಲಿಮರು ಕಾಂಗ್ರೆಸ್ ಬೆಂಬಲಿಸುವ ಸಾಧ್ಯತೆ ಹೆಚ್ಚಿದ್ದರೂ ದಲಿತ ಸಮುದಾಯದ ಬಗ್ಗೆ ಖಾತರಿ ಇಲ್ಲ. 2024ರ ಲೋಕಸಭಾ ಚುನಾವಣೆಯಲ್ಲಿ ‘ಬಿಜೆಪಿ ಸಂವಿಧಾನವನ್ನು ಬದಲಿಸುತ್ತದೆ, ಮೀಸಲಾತಿಯನ್ನು ರದ್ದು ಪಡಿಸುತ್ತದೆ’ ಎನ್ನುವ ಚರ್ಚೆಯ ಹಿನ್ನೆಲೆಯಲ್ಲಿ ದಲಿತ ಸಮುದಾಯ ಕೆಲ ಮಟ್ಟಿಗೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿತ್ತು. ವಿಧಾನಸಭಾ ಚುನಾವಣೆಯಲ್ಲೂ ಅದೇ ರೀತಿ ಬೆಂಬಲಿಸಿದರೆ ಕಾಂಗ್ರೆಸ್ ಗೆಲುವು ಅನಾಯಾಸವಾಗಲಿದೆ.

ಯುವಕರು, ಮಹಿಳೆಯರು ಮತ್ತು ರೈತರ ಬೆಂಬಲ ಗಿಟ್ಟಿಸಿಕೊಂಡಿರುವ ವಿನೇಶ್ ಫೋಗಟ್ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಟ್ರಂಪ್ ಕಾರ್ಡ್. ಹರ್ಯಾಣದಲ್ಲಿ 2019ರಲ್ಲೂ ಕುಸ್ತಿಪಟುಗಳು ಚುನಾವಣಾ ಅಖಾಡಕ್ಕೆ ಇಳಿದಿದ್ದರು, ಗೆದ್ದಿರಲಿಲ್ಲ. ಸಹ ಆಟಗಾರರು ಸೋತ ಅಖಾಡದಲ್ಲಿ ವಿನೇಶ್ ಫೋಗಟ್ ತಾವೂ ಗೆದ್ದು ಪಕ್ಷಕ್ಕೂ ಹೇಗೆ ನೆರವಾಗುವರು ಎನ್ನುವುದು ಸದ್ಯದ ಕುತೂಹಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಧರಣೀಶ್ ಬೂಕನಕೆರೆ

contributor

Similar News