ಕಾಡುಗೊಲ್ಲರ ಮಹಿಳಾ ಶೋಷಣೆಯ ವಿರುದ್ಧದ ದನಿ ಜಿ.ಕೆ. ಪ್ರೇಮಾ

ಪ್ರೇಮಾ ತನ್ನಿಂದಲೇ, ತನ್ನ ಮನೆಯಿಂದಲೇ, ತನ್ನ ಊರಿಂದಲೇ ಬದಲಾವಣೆಯ ಮೊದಲ ಹೆಜ್ಜೆಗಳನ್ನು ಇಡುತ್ತಾರೆ. ಇದು ಸಾಮಾಜಿಕ ಬದಲಾವಣೆಗೆ ಮುಂದಾಗುವ ಚಳವಳಿಗಾರರಿಗೆ ಪ್ರಾಥಮಿಕ ಪಾಠದಂತಿದೆ. ತನ್ನಿಂದ, ತನ್ನ ಮನೆಯಿಂದ ಆಗದ ಬದಲಾವಣೆಯನ್ನು ಸಮಾಜದಿಂದ ನಿರೀಕ್ಷಿಸುವುದು ತಪ್ಪಾಗುತ್ತದೆ. ಈ ವಿಷಯದಲ್ಲಿ ಪ್ರೇಮಾರವರ ಮಾದರಿ ವಿಶಿಷ್ಟವಾಗಿದೆ.

Update: 2024-11-12 05:30 GMT

ಬಾಲ್ಯದಲ್ಲಿ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಬಿದರಕೆರೆ ಗೊಲ್ಲರಹಟ್ಟಿಯಲ್ಲಿ ಕಳೆದ ನೆನಪುಗಳಿವೆ. ನನ್ನ ಅಜ್ಜ ಅಜ್ಜಿ ಗೊಲ್ಲರಹಟ್ಟಿಯಲ್ಲಿ ಪುಟ್ಟ ಅಂಗಡಿ ಇಟ್ಟುಕೊಂಡಿದ್ದರು. ಗೊಲ್ಲರಹಟ್ಟಿಯ ಜನರೆಲ್ಲಾ ಅಂಗಡಿಗೆ ಬರುತ್ತಿದ್ದರು. ಊರ ಹೊರವಲಯಗಳಲ್ಲಿ ಪುಟ್ಟ ಪುಟ್ಟ ಗುಡಿಸಲುಗಳಲ್ಲಿ ಹೆಣ್ಣುಮಕ್ಕಳು ಇರುತ್ತಿದ್ದರು. ಇವರುಗಳೆಲ್ಲಾ ರಾತ್ರಿಯಾದ ತಕ್ಷಣ ಊರಿನ ಶಾಲೆಯ ಆವರಣಕ್ಕೆ ಬರುತ್ತಿದ್ದರು. ಅಲ್ಲಿಯೇ ಕತ್ತಲಲ್ಲಿ ದೀಪದ ಬೆಳಕಲ್ಲಿ ಊಟ ಮಾಡುತ್ತಿದ್ದರು. ಇದ್ಯಾಕೆ ಹೀಗೆ? ಯಾಕೆ ಗೊಲ್ಲರ ಮಹಿಳೆಯರನ್ನು ಊರ ಹೊರಗಿನ ಗುಡಿಸಲಲ್ಲಿ ಇರಿಸುತ್ತಾರೆ ಮುಂತಾದ ಪ್ರಶ್ನೆಗಳನ್ನು ಅಜ್ಜಿ ಅಜ್ಜನಿಗೆ ಕೇಳಿದಾಗ, ನಿನಗೆ ಅರ್ಥವಾಗುವುದಿಲ್ಲ ಎಂದು ನನ್ನ ಬಾಯಿ ಮುಚ್ಚಿಸುತ್ತಿದ್ದರು. ಗೊಲ್ಲರ ಹಟ್ಟಿ ಪ್ರತ್ಯೇಕವಾಗಿತ್ತು. ಬೇರೆ ಜಾತಿಯವರಿಗೆ ಪ್ರವೇಶವಿರಲಿಲ್ಲ. ಗೊಲ್ಲರನ್ನು ಹೊರತುಪಡಿಸಿದ ಜಾತಿ ಸಮುದಾಯದವರು ಈ ಹಟ್ಟಿಯ ಹೊರಭಾಗದಲ್ಲಿದ್ದರು. ಕನ್ನಡ ವಿಶ್ವವಿದ್ಯಾನಿಲಯಕ್ಕೆ 2002ರಲ್ಲಿ ಎಂ.ಎ. ಮಾಡಲು ಬಂದಾಗ ನಿಧಾನಕ್ಕೆ ಗೊಲ್ಲರ ಮಹಿಳೆಯರನ್ನು ಮುಟ್ಟು ಹುಟ್ಟಿನ ಸೂತಕ ಕಳೆಯಲು ಹೊರಗಿನ ಗುಡಿಸಲಿನಲ್ಲಿ ಕೂರಿಸುತ್ತಾರೆ ಎನ್ನುವುದು ಅರಿವಿಗೆ ಬಂತು. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಗಿಡ್ಡಜ್ಜ ಕಲ್ಲಜ್ಜರ (ಜಿ.ಕೆ.) ಪ್ರೇಮಾ ಈ ಮಹಿಳೆಯರ ಶೋಷಣೆ ಬಗ್ಗೆ ದನಿ ಎತ್ತತೊಡಗಿದಾಗ ಗೊಲ್ಲರ ಮೌಢ್ಯದಿಂದಾಗಿ ಮಹಿಳೆಯರು ಅನುಭವಿಸುವ ಹಿಂಸೆಯ ವಿವಿಧ ರೂಪಗಳು ಅರಿವಿಗೆ ಬರತೊಡಗಿದವು.

ನಾನು ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನೆ ಮಾಡುವಾಗ ಸೆಮಿನಾರುಗಳಿಗೆ ಕುವೆಂಪು ವಿವಿಗೆ ಹೋಗುತ್ತಿದ್ದೆ. ಆಗ ಸಂಶೋಧನೆ ಮಾಡುತ್ತಿದ್ದ ಎಸ್.ಎಂ. ಮುತ್ತಯ್ಯ, ಗುರುನಾಥ, ಎ.ಬಿ. ರಾಮಚಂದ್ರಪ್ಪ ಅವರುಗಳೊಂದಿಗೆ ಚರ್ಚಿಸುತ್ತಿದ್ದೆವು. ಆಗ ಜಿ.ಕೆ. ಪ್ರೇಮಾ ಮತ್ತು ಮಂಜುಶ್ರೀ ಕಡಕೋಳ ಚರ್ಚೆಗಳಲ್ಲಿ ಸೇರುತ್ತಿದ್ದರು. 2010ರಲ್ಲಿ ಒಮ್ಮೆ ಪ್ರೇಮಾ ಅವರ ಊರಾದ ಚಿತ್ತಯ್ಯನಹಟ್ಟಿಯ ಅವರ ಮನೆಗೆ ಹೋಗಿದ್ದೆ. ಆಗ ಅವರ ಮನೆಯ ಪರಿಸರ ನೋಡಿ, ನಾನು ಬಾಲ್ಯದಲ್ಲಿ ನೋಡಿದ ಗೊಲ್ಲರಹಟ್ಟಿಗೆ ಹೋಲಿಸಿದರೆ ಒಂದಷ್ಟು ಬದಲಾವಣೆ ಕಾಣುತ್ತಿತ್ತು. ಹಾಗೆ ಚಿತ್ತಯ್ಯನಹಟ್ಟಿಯಿಂದ ಕುವೆಂಪು ವಿವಿಗೆ ಸಂಶೋಧನೆಗೆ ಬಂದದ್ದರಿಂದ, ಡೆಕ್ಕನ್ ಹೆರಾಲ್ಡ್ ಪತ್ರಿಕೆಯು ಕಾಡುಗೊಲ್ಲ ಮಹಿಳೆಯರ ಶೋಷಣೆ ವಿರುದ್ಧ ದನಿ ಎತ್ತುತ್ತಿರುವ ಪ್ರೇಮಾ ಅವರನ್ನು 2024ರ ‘ಚೇಂಜ್ ಮೇಕರ್’ ಎಂದು ಗುರುತಿಸುವ ತನಕದ ಪಯಣ ಕುತೂಹಲಕಾರಿಯಾಗಿದೆ. ಇತರ ಬುಡಕಟ್ಟು ಸಮುದಾಯದ ಶಿಕ್ಷಿತ ಮಹಿಳೆಯರಿಗೆ ಮಾದರಿಯಾಗಿದೆ.

ಕಾಡುಗೊಲ್ಲರ ಕುರಿತಂತೆ ಪ್ರಾನ್ಸಿಸ್ ಬುಕನಾನ್ (1807), ಎಡ್ಗರ್ ಥರಸ್ಟನ್(1909), ಎಚ್.ವಿ. ನಂಜುಂಡಯ್ಯ ಮತ್ತು ಎಚ್.ಕೆ. ಅನಂತಕೃಷ್ಣ ಅಯ್ಯರ್(1930), ಎ.ಎ.ಡಿ. ಲೂಯಿಸ್(1963) ಮೊದಲಾದ ಪಾಶ್ಚಾತ್ಯರನ್ನು ಒಳಗೊಂಡು, ತೀ.ನಂ.ಶಂಕರನಾರಾಯಣ(1982), ಬಿ.ಎ. ನಾಗರಾಜ(1998), ಕಾಳೇಗೌಡ ನಾಗವಾರ(1984), ಕೃಷ್ಣಮೂರ್ತಿ ಹನೂರು(1998), ಮೀರಸಾಬಿಹಳ್ಳಿ ಶಿವಣ್ಣ(2005), ಡಾ. ಎಂ. ಗುರುಲಿಂಗಯ್ಯ(2005), ಮಲ್ಲಿಕಾರ್ಜುನ ಕಲಮರಹಳ್ಳಿ(2023) ಹೀಗೆ ವಿದೇಶಿ, ದೇಸಿ ವಿದ್ವಾಂಸರುಗಳು ಬೇರೆ ಬೇರೆ ನೆಲೆಯಿಂದ ಅಧ್ಯಯನ ನಡೆಸಿದ್ದಾರೆ. ಆದರೆ ಈ ಎಲ್ಲಾ ಅಧ್ಯಯನಗಳಲ್ಲಿ ಗಂಡಿನ ಕಣ್ಣೋಟವೇ ಪ್ರಧಾನವಾಗಿದೆ. ಈ ಕಾರಣದಿಂದ ಕಾಡುಗೊಲ್ಲರ ಚರಿತ್ರೆ, ಮಾಹಿತಿ ವಿವರಗಳಿಗೆ ಜಿ.ಕೆ. ಪ್ರೇಮಾ ಮೇಲಿನ ಸಂಶೋಧನೆಗಳ ನೆರವು ಪಡೆದಿದ್ದಾರೆ. ಆದರೆ ಕಾಡುಗೊಲ್ಲರ ಮಹಿಳೆಯರನ್ನು ಹೆಣ್ಣಿನ ಕಣ್ಣೋಟದಿಂದ ಶೋಧಿಸಿದ್ದಾರೆ. ಈ ನೋಟಕ್ರಮವೇ ಕಾಡುಗೊಲ್ಲರ ಹೆಣ್ಣಿನ ಶೋಷಣೆಯನ್ನು ತಪ್ಪಿಸಬೇಕು ಎನ್ನುವ ಹಂಬಲವನ್ನು ಪ್ರೇಮಾ ಅವರಲ್ಲಿ ಹುಟ್ಟಿಸಿದೆ.

ಪ್ರೇಮಾ ತನ್ನಿಂದಲೇ, ತನ್ನ ಮನೆಯಿಂದಲೇ, ತನ್ನ ಊರಿಂದಲೇ ಬದಲಾವಣೆಯ ಮೊದಲ ಹೆಜ್ಜೆಗಳನ್ನು ಇಡುತ್ತಾರೆ. ಇದು ಸಾಮಾಜಿಕ ಬದಲಾವಣೆಗೆ ಮುಂದಾಗುವ ಚಳವಳಿಗಾರರಿಗೆ ಪ್ರಾಥಮಿಕ ಪಾಠದಂತಿದೆ. ತನ್ನಿಂದ, ತನ್ನ ಮನೆಯಿಂದ ಆಗದ ಬದಲಾವಣೆಯನ್ನು ಸಮಾಜದಿಂದ ನಿರೀಕ್ಷಿಸುವುದು ತಪ್ಪಾಗುತ್ತದೆ. ಈ ವಿಷಯದಲ್ಲಿ ಪ್ರೇಮಾರವರ ಮಾದರಿ ವಿಶಿಷ್ಟವಾಗಿದೆ. ಪ್ರೇಮಾ ಮುಟ್ಟಿನ ಕಾರಣಕ್ಕೆ ಒಂದೆರಡು ಬಾರಿ ಹೊರಗಿನ ಗುಡಿಸಲಲ್ಲಿರುತ್ತಾರೆ. ಇದು ಹಿಂಸೆ ಅನ್ನಿಸತೊಡಗುತ್ತದೆ. ಪ್ರೇಮಾ ಸ್ನಾತಕೋತ್ತರ ಪದವಿಗಾಗಿ ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಬರುತ್ತಾರೆ. ಹೊರಜಗತ್ತಿನ ಬದಲಾವಣೆಯನ್ನು ಗಮನಿಸುತ್ತಾರೆ. ಮುಂದೆ ಮುಟ್ಟಿನ ಕಾರಣಕ್ಕೆ ಹೊರ ಹೋಗುವುದನ್ನು ವಿರೋಧಿಸಿ ಮನೆಯಲ್ಲೆ ಉಳಿಯುತ್ತಾರೆ. ಹಟ್ಟಿಯಲ್ಲಿ ಆರಂಭಕ್ಕೆ ವಿರೋಧ ಬಂದರೂ ನಿಧಾನಕ್ಕೆ ತಣ್ಣಗಾಗುತ್ತದೆ. ನಂತರ ತನ್ನ ತಂಗಿಯರು ತಾಯಿಯನ್ನು ಬದಲಾವಣೆಗೆ ಅಣಿಗೊಳಿಸುತ್ತಾರೆ.

ಕುವೆಂಪು ವಿವಿಯಲ್ಲಿ ಪ್ರೊ.ರಂಗರಾಜ ವನದುರ್ಗ ಅವರ ಮಾರ್ಗದರ್ಶನದಲ್ಲಿ ಕಾಡುಗೊಲ್ಲರ ಮಹಿಳೆಯ ಬಗ್ಗೆ ಸಂಶೋಧನೆಗೆ ನೋಂದಣಿ ಮಾಡುತ್ತಾರೆ. ಕಾಡುಗೊಲ್ಲರ ಚರಿತ್ರೆ, ಪುರಾಣ, ಐತಿಹ್ಯ ಕುಲಕಥನಗಳನ್ನು ಅಧ್ಯಯನ ಮಾಡುತ್ತಾರೆ. ಈ ಸಂದರ್ಭದಲ್ಲಿ ಊರಿಗೆ ಹೋದಾಗ ಊರ ಹಿರಿಯರ ಜತೆ ಮಾತನಾಡುತ್ತಾರೆ. ಪೂಜಾರಿಕೆ ಮಾಡುವ ತನ್ನ ಸಂಬಂಧಿಕರ ಜತೆ, ತನ್ನದೇ ಹಟ್ಟಿಯ ಹೆಣ್ಣುಮಕ್ಕಳ ಜತೆ ಮಾತನಾಡಿ ಹೆಣ್ಣುಮಕ್ಕಳ ಶೋಷಣೆ ನಿಲ್ಲಬೇಕೆಂದು ಮನವರಿಕೆ ಮಾಡುತ್ತಾರೆ. ಇದು ನಿಧಾನಕ್ಕೆ ತನ್ನೂರಿನಲ್ಲಿ ಸಣ್ಣದಾಗಿ ಬದಲಾವಣೆಯ ಗಾಳಿ ಬೀಸುತ್ತದೆ. ಪರಿಣಾಮ 2014ರಲ್ಲಿ ಚಿತ್ತಯ್ಯನ ಹಟ್ಟಿಯಲ್ಲಿ ಮುಟ್ಟು-ಹುಟ್ಟಿನ ಸಂದರ್ಭಗಳಲ್ಲಿ ಮಹಿಳೆಯರನ್ನು ಹೊರಹಾಕುವುದಿಲ್ಲ ಎಂದು ಹಟ್ಟಿಯವರೆಲ್ಲಾ ನಿರ್ಧರಿಸುತ್ತಾರೆ. ಈ ಬದಲಾವಣೆಯ ಕುರಿತು ಪ್ರೇಮಾ ದೊಡ್ಡ ಕಾರ್ಯಕ್ರಮ ಆಯೋಜಿಸಿ ಊರ ಹಿರಿಯರನ್ನು ಗೌರವಿಸುತ್ತಾರೆ. ಬಂಜಗೆರೆ ಜಯಪ್ರಕಾಶ್ ಅವರನ್ನು ಒಳಗೊಂಡಂತೆ ಸಮುದಾಯದ ಸಾಹಿತಿ ಚಿಂತಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಾರೆೆ. ಈ ಕಾರ್ಯಕ್ರಮಕ್ಕೆ ಸುತ್ತಮುತ್ತಲ ಗೊಲ್ಲರಹಟ್ಟಿಯ ಐದು ನೂರಕ್ಕೂ ಹೆಚ್ಚಿನ ಜನರು ಆಗಮಿಸುತ್ತಾರೆ. ಅವರೂರ ಬದಲಾವಣೆಯ ಗಾಳಿ ಇತರ ಸುತ್ತಮುತ್ತಣ ಹಟ್ಟಿಗಳಿಗೂ ನಿಧಾನಕ್ಕೆ ಬೀಸತೊಡಗುತ್ತದೆ.

ಬ್ರಾಹ್ಮಣ ಹುಡುಗಿ ಗಂಗಿಮಾಳವ್ವ ಗಂಡ ಚಿತ್ತಯ್ಯನಿಂದ ಹೊಡೆತ ತಿಂದಾಗ ಮೂಗುತಿ ಬಿದ್ದೋಗುತ್ತದೆ. ಹೀಗೆ ‘ಬಿದ್ದ ಮೂಗುತಿ ಉಡಲಾರೆ, ಬಿಟ್ಟ ಗಂಡನ್ನ ಕೂಡಲ್ಲ’ ಎನ್ನುವ ಪ್ರತಿಜ್ಞೆ ಮಾಡಿ ಅರಮನೆ ತೊರೆಯುತ್ತಾಳೆ. ಈ ಬಗೆಯ ಗಂಗಿಮಾಳವ್ವನ ಪ್ರತಿರೋಧವನ್ನು ಪ್ರೇಮಾ ಕಾಡುಗೊಲ್ಲರ ಮಹಿಳೆಯರಿಗೆ ಹೇಳಿ ಹೊಸ ಹುರುಪನ್ನು ತುಂಬುತ್ತಾರೆ. ಕಾಡುಗೊಲ್ಲರ ಖಂಡಕಾವ್ಯಗಳಲ್ಲಿ ಬರುವ ಹೀರೋಬಿ, ಹಿರಿದಿಮ್ಮವ್ವ, ನಾಗಮ್ಮ, ಕೊಂಡದ ಕಾಟವ್ವ, ಗಿಡ್ಡಮ್ಮ, ತಂಗೆಮ್ಮ, ಈರ ಮಾಸ್ತಮ್ಮ, ನಾಗಮ್ಮ ಮೊದಲಾದ ಸ್ತ್ರೀಯರು ಸತಿ ಹೋಗುವುದನ್ನು ಸಿರಿಯಜ್ಜಿಯ ಹಾಡುಗಳಿಂದ ಅರಿತ ಪ್ರೇಮಾ ಆಧುನಿಕ ಕಾಲದಲ್ಲಿಯೂ ಮುಟ್ಟು ಬಾಣಂತನದ ಕಾರಣಕ್ಕೆ ಹೆಣ್ಣಿನ ಶೋಷಣೆ ಆಗುವುದನ್ನು ತಡೆಗಟ್ಟಬೇಕು ಎನ್ನುವ ಒಳತುಡಿತ ಕಾಡಿದಂತಿದೆ.

ಪ್ರೇಮಾ ಅವರು ಸಂಶೋಧನೆಯ ಕಾರಣಕ್ಕೆ ಬೇರೆ ಬೇರೆ ಜಿಲ್ಲೆಗಳ ಅಪರಿಚಿತ ಗೊಲ್ಲರಹಟ್ಟಿಗಳಿಗೆ ಕ್ಷೇತ್ರಕಾರ್ಯಕ್ಕೆ ಹೋಗುತ್ತಾರೆ. ಕಾಡುಗೊಲ್ಲರ ಸಾಂಸ್ಕೃತಿಕ ಚರಿತ್ರೆಯನ್ನು ಅರಿತ ಕಾರಣ ಗೊಲ್ಲರ ಹಿರಿಯರ ಜತೆ ಮಾತನಾಡುವಾಗ ಈ ನಾಯಕ-ನಾಯಕಿಯರ ಸಂಗತಿಯನ್ನು ತರುತ್ತಾರೆ. ಹೀಗೆ ಗೊಲ್ಲರ ಸಾಂಸ್ಕೃತಿಕ ಸಂಗತಿಗಳನ್ನು ತನ್ನ ಸಮಾಜಿಕ ಬದಲಾವಣೆಯಲ್ಲಿ ಬಳಸಿಕೊಂಡ ಕಾರಣ ಒಂದು ರೀತಿಯಲ್ಲಿ ಸಮುದಾಯದ ಜತೆ ಸಂಹವನ ಸಾಧ್ಯವಾಗುತ್ತದೆ. ಅನೇಕ ಗೊಲ್ಲರಹಟ್ಟಿಗೆ ಹೋದಾಗ ಗೊಲ್ಲರ ಹಿರಿಯರು ಪ್ರೇಮಾ ಅವರನ್ನು ಹಟ್ಟಿಯ ಹೊರಗಡೆ ನಿಲ್ಲಿಸಿ ಪರೀಕ್ಷಿಸಿದ್ದಾರೆ. ತಮ್ಮ ಸಮುದಾಯದ ಮಹಿಳೆ ಎಂದರೂ ಕುಲ, ಗೋತ್ರ, ಕಟ್ಟೆಮನೆ, ಮನೆ ದೇವರುಗಳ ಪರೀಕ್ಷೆ ಆದ ನಂತರ ಹಟ್ಟಿಗಳಿಗೆ ಪ್ರವೇಶ ಕೊಟ್ಟಿದ್ದಾರೆ.

ಹಿರಿಯೂರು ತಾಲೂಕಿನ ಮದ್ದನಕುಂಟೆಯಲ್ಲಿ ಮೊದಲ ತಲೆಮಾರು ಶಿಕ್ಷಿತರಾದ ಪರಿಣಾಮ 1975ರಲ್ಲಿಯೇ ಅಸ್ಪಶ್ಯತಾ ಆಚರಣೆಯನ್ನು ನಿಷೇಧಿಸಿದ್ದಾರೆ. ಈ ಹಟ್ಟಿಯಲ್ಲಿ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಅಂತೆಯೇ ಗೊಲ್ಲರ ಹೆಣ್ಣು ಮಾದಿಗ ಯುವಕನನ್ನು ಮದುವೆಯಾಗಿದ್ದಾಳೆ. ಉಳಿದಂತೆ ಕುರುಬ, ಬ್ರಾಹ್ಮಣ, ಲಿಂಗಾಯತ ಸಮುದಾಯಗಳೊಂದಿಗೆ ಅಂತರ್ಜಾತಿ ವಿವಾಹಗಳು ನಡೆದಿವೆ. ಈ ನಿಟ್ಟಿನಲ್ಲಿ ಇದೊಂದು ಕ್ರಾಂತಿಕಾರಿ ಗೊಲ್ಲರಹಟ್ಟಿ. ಹೊಸದುರ್ಗ ತಾಲೂಕಿನ ಹೊನ್ನೆಕೆರೆ ಗೊಲ್ಲರಹಟ್ಟಿಯಲ್ಲಿ ಮುಟ್ಟಾಗಿ ಹೊರಗಿದ್ದಾಗ ಪ್ರೇಮಾ ಅವರ ಚಿಕ್ಕಮ್ಮನೇ ಹಾವು ಕಚ್ಚಿ ಸಾವನ್ನಪ್ಪುತ್ತಾರೆ. ಈ ಘಟನೆಯಿಂದ ಇಡೀ ಹಟ್ಟಿಯ ಜನರು ಹೆಣ್ಣುಮಕ್ಕಳನ್ನು ಹೊರಗಿಡುವ ಆಚರಣೆಯನ್ನು ನಿಲ್ಲಿಸುತ್ತಾರೆ. ನಂತರ ಮದ್ದನಕುಂಟೆ ಮತ್ತು ಹೊನ್ನೆಕೆರೆ ಗೊಲ್ಲರಹಟ್ಟಿಗಳನ್ನು ಇತರ ಗೊಲ್ಲರಹಟ್ಟಿಯವರು ಹೆಣ್ಣು ಕೊಡುವ, ತರುವ ಸಂಬಂಧ ಬೆಳೆಸದಂತೆ ಅಸ್ಪಶ್ಯತೆ ಆಚರಿಸುತ್ತಾರೆ. ಸಮುದಾಯಗಳ ಒಳಗೇ ಆದ ಇಂತಹ ಬದಲಾವಣೆಗಳನ್ನು ಪ್ರೇಮಾ ಅವರು ತನ್ನ ಜಾಗೃತಿ ಪಯಣದಲ್ಲಿ ಉಲ್ಲೇಖಿಸಿ ಜನರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ.

ಒಂದು ಸಮುದಾಯದ ಸಂಶೋಧನೆಯನ್ನು ಗಂಡಸರು ಮಾಡುವುದಕ್ಕೂ, ಅದೇ ಸಮುದಾಯದ ಹೆಣ್ಣೊಬ್ಬಳು ಮಾಡುವುದಕ್ಕೂ ವ್ಯತ್ಯಾಸವಿದೆ. ಎಷ್ಟೊಂದು ಗಂಡುಗಳು ಗೊಲ್ಲರ ಬಗ್ಗೆ ಸಂಶೋಧನೆ ಮಾಡಿದ್ದರೂ ಪ್ರೇಮಾರನ್ನು ಕಾಡಿದಂತೆ ಹೆಣ್ಣಿನ ಶೋಷಣೆ ಮತ್ತು ಹಿಂಸೆಯ ಪ್ರಶ್ನೆಗಳು ಸಂಶೋಧಕ ಗಂಡಸರಿಗೆ ಕಾಡಿರಲಿಲ್ಲ. ಪುರುಷ ಅಧ್ಯಯನಕಾರರು ಗೊಲ್ಲರ ಮಹಿಳೆಯರ ಶೋಷಣೆಯನ್ನು ಒಂದು ಆಚರಣೆ ಎಂದು ಗುರುತಿಸುತ್ತಾರೆ. ಹೆಚ್ಚೆಂದರೆ ಇದು ಮೌಢ್ಯ ಎಂದು ಮೆಲುದನಿಯಲ್ಲಿ ಲೊಚಗುಟ್ಟಿದ್ದಾರೆ ಎನ್ನುವುದು ಪ್ರೇಮಾ ಅವರ ಅಭಿಪ್ರಾಯ. ಕರ್ನಾಟಕದ ಬಹುಪಾಲು ಸಮುದಾಯಗಳನ್ನು ಆಯಾ ಸಮುದಾಯದ ಹೆಣ್ಣುಮಕ್ಕಳು ಅಧ್ಯಯನ ಮಾಡುವ ಅಗತ್ಯದ ಬಗ್ಗೆ ಪ್ರೇಮಾ ಅವರ ಸಂಶೋಧನೆ ಮತ್ತು ಸಾಮಾಜಿಕ ಬದಲಾವಣೆಯ ಕಾರ್ಯ ದಿಕ್ಸೂಚಿಯಾಗಿದೆ.

ಪ್ರೇಮಾ ಅವರಿಗೆ ಮನೆಯವರು ಈ ಹೋರಾಟಕ್ಕೆ ಪೂರ್ಣ ಬೆಂಬಲವನ್ನೇನೂ ನೀಡಲಿಲ್ಲ, ಆದರೆ ವಿರೋಧಿಸಿಲ್ಲ. ಕಾಡುಗೊಲ್ಲರ ಬಗ್ಗೆ ಅಧ್ಯಯನ ಮಾಡಿದ ಪುರುಷ ವಿದ್ವಾಂಸರುಗಳು ಹೊರಗಿನಿಂದ ಮಾತಿನ ಬೆಂಬಲ ನೀಡಿದ್ದಾರೆಯೇ ಹೊರತು ಹೋರಾಟಕ್ಕೆ ಜತೆಯಾಗಿಲ್ಲ. ಪ್ರೇಮಾ ಅವರ ಈ ಪಯಣದಲ್ಲಿ ಸಮುದಾಯದ ಹಿರಿಯರಾದ ಕೂನಿಕೆರೆ ರಾಮಣ್ಣ ಜತೆಯಾಗಿದ್ದಾರೆ. ಒಂಟಿ ಹೋರಾಟಕ್ಕೆ ಸಂಘಟನೆಯ ಸ್ವರೂಪ ಕೊಟ್ಟು ಅರಿವಿನ ಪಯಣವನ್ನು ವಿಸ್ತರಿಸುವ ದೃಷ್ಟಿಯಿಂದ ಇತ್ತೀಚೆಗೆ ಗಣೆ ಟ್ರಸ್ಟ್ ಶುರುಮಾಡಿದ್ದಾರೆ. ಜಿ.ಕೆ.ಪ್ರೇಮಾ ಈ ಟ್ರಸ್ಟ್‌ನ ಅಧ್ಯಕ್ಷೆಯಾಗಿದ್ದಾರೆ. ಬಾಣದೇವರಹಟ್ಟಿಯ ಬಿ.ಕೆ. ಸುನಂದಮ್ಮ ಉಪಾಧ್ಯಕ್ಷೆಯಾಗಿದ್ದಾರೆ, ಕಾರ್ಯದರ್ಶಿಯಾಗಿ ಉಜ್ಜಜ್ಜಿ ರಾಜಣ್ಣ, ಕೂನಿಕೆರೆ ರಾಮಣ್ಣ, ಸಂಪತ್ ಕುಮಾರ್, ಟ್ರಸ್ಟಿಗಳಾಗಿ ಶಿವಲಿಂಗಮ್ಮ, ಅನ್ನಪೂರ್ಣ ಸಿ.ಜಿ., ರಾಜಣ್ಣ ಬಿ., ಕಾಂತರಾಜು ಕೆ. ಜತೆಯಾಗಿದ್ದಾರೆ.

‘‘ಗೊಲ್ಲರ ಮೊದಲ ತಲೆಮಾರಿನ ಶಿಕ್ಷಿತರು ಉದ್ಯೋಗ ಪಡೆದು ನಗರಗಳನ್ನು ಸೇರಿದವರು ಹಬ್ಬಗಳಿಗೆ ಮಾತ್ರ ಹಟ್ಟಿಗಳಿಗೆ ಬರುತ್ತಾರೆ. ಇವರುಗಳು ಸಮುದಾಯವನ್ನು ಜಾಗೃತಗೊಳಿಸಲು, ಬದಲಾಯಿಸಲು ಪ್ರಯತ್ನಿಸಲಿಲ್ಲ. ಆದರೆ ಈಗ ಗೊಲ್ಲರಹಟ್ಟಿಗಳಲ್ಲಿ ಹೊಸ ತಲೆಮಾರು ಬದಲಾವಣೆಗೆ ಸಿದ್ಧರಿದ್ದಾರೆ. ಅವರಿಗೆ ನಮ್ಮಂತಹವರ ನೈತಿಕ ಬೆಂಬಲ ಬೇಕಾಗಿದೆ. ಕರ್ನಾಟಕದಲ್ಲಿ ಒಂದು ಸಾವಿರಕ್ಕಿಂತ ಹೆಚ್ಚಿನ ಗೊಲ್ಲರಹಟ್ಟಿಗಳಿವೆ, ಆದರೆ ಹುಟ್ಟು ಮುಟ್ಟಿನ ಸೂತಕ ಮುಕ್ತವಾದ ಹಟ್ಟಿಗಳು ಹತ್ತರಿಂದ ಹದಿನೈದು ಮಾತ್ರ. ಹಾಗಾಗಿ ಗೊಲ್ಲರ ಸಮುದಾಯದಲ್ಲಿ ಜಾಗೃತಿ ಮೂಡಿಸಿ ರಾಜ್ಯದಾದ್ಯಂತ ಹುಟ್ಟು ಮುಟ್ಟಿನ ಸೂತಕದ ಶೋಷಣೆ ಮುಕ್ತ ಮಾಡಬೇಕು ಎನ್ನುವುದು ನಮ್ಮ ಗಣೆ ಟ್ರಸ್ಟಿನ ಕನಸು’’ ಎಂದು ಪ್ರೇಮಾ ಹೇಳುತ್ತಾರೆ. ಪ್ರೇಮಾ ಅವರು ವಿವರಿಸುವ ಘಟನೆಗಳು ಈ ಕಾಲದಲ್ಲಿಯೂ ಗೊಲ್ಲರ ಸಮುದಾಯ ಹೀಗಿದೆಯೇ ಎಂದು ಅಚ್ಚರಿಯಾಗುತ್ತದೆ. ಈ ಅನುಭವವನ್ನು ದಾಖಲಿಸಿದರೆ ಪರಿಣಾಮಕಾರಿ ಆತ್ಮಕಥನವಾಗುತ್ತದೆ. ಪ್ರೇಮಾ ಅವರ ಹೋರಾಟದ ದಾರಿಯ ಕನಸು ನನಸಾಗಲಿ, ಗೊಲ್ಲ ಸಮುದಾಯದ ಮಹಿಳೆಯರ ಶೋಷಣೆ ತಪ್ಪಲಿ ಎಂದು ಆಶಿಸೋಣ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಅರುಣ್ ಜೋಳದಕೂಡ್ಲಿಗಿ

contributor

Similar News