ವಯನಾಡ್: ಕಾಂಗ್ರೆಸ್‌ಗೆ ಪ್ರಿಯಾಂಕಾ ಗಾಂಧಿ ಹೊರತು ಬೇರೆ ಆಯ್ಕೆ ಯಾಕಿಲ್ಲ?

Update: 2024-06-20 06:39 GMT
Editor : Thouheed | Byline : ಎನ್. ಕೇಶವ್

ತಮ್ಮನ್ನು ಇಕ್ಕಟ್ಟಿನ ಕಾಲದಲ್ಲಿ ಕೈಹಿಡಿದಿದ್ದ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರವನ್ನು ಕಡೆಗೂ ರಾಹುಲ್ ಗಾಂಧಿ ಬಿಟ್ಟುಕೊಟ್ಟಿದ್ದಾರೆ.

ವಯನಾಡ್ ಅನ್ನು ಅವರು ಬಿಟ್ಟುಕೊಡಲಾರರು ಎಂಬುದು ಒಂದು ವಲಯದ ನಿರೀಕ್ಷೆಯಾಗಿತ್ತು. ಆದರೆ ಅವರು ತಮ್ಮ ಕುಟುಂಬದ ರಾಜಕಾರಣ ನಡೆದುಬಂದಿದ್ದ ಯುಪಿಗೆ ಆದ್ಯತೆ ಕೊಟ್ಟು, ರಾಯ್ ಬರೇಲಿ ಕ್ಷೇತ್ರವನ್ನು ಉಳಿಸಿಕೊಳ್ಳುತ್ತಿದ್ದಾರೆ.

ಆದರೆ ರಾಹುಲ್ ವಯನಾಡ್ ಕ್ಷೇತ್ರ ಬಿಟ್ಟುಕೊಡಲು ತುಂಬ ಹಿಂದೆ ಮುಂದೆ ನೋಡಿದರೆಂಬುದು ನಿಜ. ಅಷ್ಟರ ಮಟ್ಟಿಗೆ ಅವರು ವಯನಾಡ್ ಜನತೆಗೆ ತಮ್ಮ ಬದ್ಧತೆ ತೋರಿದ್ದಾರೆ ಮತ್ತು ಪಕ್ಷದ ಹಿರಿಯರ ಜೊತೆಗಿನ ಸಮಾಲೋಚನೆ ಬಳಿಕದ ತೀರ್ಮಾನದ ಪ್ರಕಾರ ರಾಯ್ ಬರೇಲಿಯ ಸಂಸದರಾಗಿ ಉಳಿಯಲು ನಿರ್ಧರಿಸಿದ್ದಾರೆ.

ಈಗ ವಯನಾಡ್ ಕ್ಷೇತ್ರದಲ್ಲಿನ ಉಪ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುವ ಮೂಲಕ ತಮ್ಮ ಮೊದಲ ಚುನಾವಣೆಯನ್ನು ಎದುರಿಸಲು ಮುಂದಾಗಿದ್ಧಾರೆ.

ಇದು ಕಾಂಗ್ರೆಸ್ ವಿರುದ್ಧ ಕುಟುಂಬ ರಾಜಕಾರಣದ ಆರೋಪ ಮಾಡುವ ಬಿಜೆಪಿಗೆ ಮಾತಿಗೆ ವಿಷಯವಾಗಿರುವುದೇನೋ ನಿಜ. ಆದರೆ ಅದರ ಹೊರತಾಗಿಯೂ, ಕಾಂಗ್ರೆಸ್‌ಗೆ ಬೇರೆ ಆಯ್ಕೆಗಳಿರಲಿಲ್ಲವೆ ಎಂಬ ಪ್ರಶ್ನೆಯೂ ಇದೆ.

ವಯನಾಡ್‌ನಲ್ಲಿ ಈಗ ಪ್ರಿಯಾಂಕಾ ಗೆದ್ದರೆ ಸಂಸತ್ತಿನಲ್ಲಿ ಗಾಂಧಿ ಕುಟುಂಬದವರು ಮೂವರಾಗುತ್ತಾರೆ. ಇದು ಮೋದಿ ವಿರುದ್ಧದ ಕಾಂಗ್ರೆಸ್ ಶಕ್ತಿಯಾಗಲಿದೆ ಎಂಬುದು ಹಲವು ವಿಶ್ಲೇಷಕರ ಅಭಿಪ್ರಾಯ.

ಮುಖ್ಯವಾಗಿ, ಹಿರಿಯ ಪತ್ರಕರ್ತರಾದ ರಶೀದ್ ಕಿದ್ವಾಯಿ ಅವರ ಪ್ರಕಾರ, ಪ್ರಿಯಾಂಕಾ ಸಂಸತ್ತಿನ ಒಳಗೆ ಮತ್ತು ಹೊರಗೆ ಸ್ಟ್ರಾಟೆಜಿಸ್ಟ್, ಪ್ರಚಾರಕಿ ಮತ್ತು ಬಿಕ್ಕಟ್ಟಿನ ಸಂದರ್ಭಗಳನ್ನು ನಿಭಾಯಿಸಬಲ್ಲವರಾಗಿ ಪ್ರಮುಖ ಪಾತ್ರ ವಹಿಸಲಿದ್ದಾರೆ.

ಲೋಕಸಭಾ ಸಂಸದೆಯಾಗಿ ಪ್ರಿಯಾಂಕಾ ಅವರ ಪಾತ್ರ ಮತದಾರರ ಬಗೆಗಿನ ಅವರ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಮತ್ತು ಅವರನ್ನು ಕಾಂಗ್ರೆಸ್‌ನಲ್ಲಿ ಮಹತ್ವದ ಶಕ್ತಿಯನ್ನಾಗಿ ಮಾಡುತ್ತದೆ ಎಂದು ಕಿದ್ವಾಯಿ ಸಂದರ್ಶನವೊಂದರಲ್ಲಿ ಹೇಳಿದ್ಧಾರೆ.

ಬಹಳ ವರ್ಷಗಳ ನಂತರ ಮೊನ್ನೆಯ ಚುನಾವಣೆಯಲ್ಲಿನ ಕಾಂಗ್ರೆಸ್ ಪ್ರಚಾರ ಪರಿಣಾಮಕಾರಿಯಾಗಿ ಇತ್ತೆಂಬುದರ ಬಗ್ಗೆಯೂ ಗಮನ ಸೆಳೆದಿರುವ ಕಿದ್ವಾಯಿ ಅವರು, ಮೋದಿ ಆರೋಪಗಳಿಗೆ ಪ್ರಿಯಾಂಕಾ ಸರಿಯಾದ ತಿರುಗೇಟು ಕೊಟ್ಟರೆಂಬುದನ್ನೂ, ಮೀನು, ಮಾಂಸ, ಮಂಗಳಸೂತ್ರ ಆರೋಪಗಳಿಗೆ ಸರಿಯಾದ ಉತ್ತರ ಕೊಟ್ಟದ್ದನ್ನೂ ಪ್ರಸ್ತಾಪಿಸಿದ್ದಾರೆ.

ಹೀಗೆ, ಸಂಸತ್ತಿನಲ್ಲಿ ಮೋದಿ ವಿರುದ್ಧದ ಬಲ ಹೆಚ್ಚಿಸುವ ಕಾಂಗ್ರೆಸ್ ತಂತ್ರವಾಗಿಯೂ ಈ ನಿರ್ಧಾರ ಕಾಣಿಸುತ್ತಿದೆ.

ಆದರೆ, ಕುಟುಂಬ ರಾಜಕಾರಣದ ಸಾಂಪ್ರದಾಯಿಕ ಚೌಕಟ್ಟನ್ನು ಮೀರುವುದು ವಿಭಿನ್ನ ನಾಯಕನಾಗಿ ಕಾಣಿಸುತ್ತಿರುವ ರಾಹುಲ್ ಅವರಿಗೂ ಸಾಧ್ಯವಾಗಲಿಲ್ಲವೇ ಎಂಬ ಪ್ರಶ್ನೆಯೂ ಈ ಹೊತ್ತಿನಲ್ಲಿ ಎದ್ದಿದೆ.

ಗಾಂಧಿ ಕುಟುಂಬ ಎಂಬ ಬ್ರ್ಯಾಂಡ್ ಅನ್ನು ಕಾಂಗ್ರೆಸ್ ತನ್ನ ಅಸ್ತ್ರವಾಗಿ ಪ್ರಯೋಗಿಸುತ್ತಿದೆಯೇ ಎಂಬ ಅನುಮಾನಗಳಿಗೂ ಇದು ಎಡೆ ಮಾಡಿಕೊಡದೆ ಇಲ್ಲ.

ಕುಟುಂಬ ರಾಜಕಾರಣವನ್ನೇ ರಾಜಕೀಯ ಪಕ್ಷಗಳು ನೆಚ್ಚಿದಾಗ ಅದು ಪ್ರಜಾಪ್ರಭುತ್ವವವನ್ನು ದುರ್ಬಲಗೊಳಿಸುವುದಿಲ್ಲವೇ ಎಂಬುದು ಮತ್ತೊಂದು ಮುಖ್ಯ ತಕರಾರು.

ಇವತ್ತು ಪ್ರಾದೇಶಿಕ ಪಕ್ಷಗಳಂತೂ ಪೂರ್ತಿಯಾಗಿ ಕುಟುಂಬದ ವ್ಯವಹಾರವೆಂಬಂತೆ ಆಗಿಬಿಟ್ಟಿವೆ. ಆದರೆ ಇನ್ನೊಂದು ಕಡೆ ಜನರು ಕೂಡ ತಮ್ಮ ಮಾತುಗಳನ್ನು ಆಲಿಸದ ಸರಕಾರದ ವಿರುದ್ಧ ನಿಲ್ಲಬೇಕೆಂದಾಗ, ತಾವು ನಂಬುವ ಕುಟುಂಬವನ್ನು ಬೆಂಬಲಿಸಲು ಮುಂದಾಗುತ್ತಾರೆ. ಹೀಗೆ ಕುಟುಂಬ ರಾಜಕಾರಣ ಜನರ ಬಲದಿಂದಲೂ ಮುಂದುವರಿದುಕೊಂಡು ಬರುವುದು ಇರುತ್ತದೆ. ಜನರು ತಮ್ಮ ಆಕಾಂಕ್ಷೆಗಳನ್ನು ಆ ಕುಟುಂಬದ ಮೂಲಕ ಈಡೇರಿಸಿಕೊಳ್ಳಲು ಸಾಧ್ಯವೆಂದು ನಂಬಿದಾಗ, ಅದರ ಮೂಲಕ ಕುಟುಂಬ ರಾಜಕಾರಣ ಉಳಿದುಕೊಂಡು ಬರುತ್ತದೆ.

ಈ ಸಲದ ಚುನಾವಣೆಯಲ್ಲಿಯೂ ರಾಜಕೀಯ ಕುಟುಂಬದಿಂದ ಸಂಸದರಾಗಿ ಆಯ್ಕೆಯಾಗಿರುವವರು ಬಿಜೆಪಿಯಿಂದ 12 ಮಂದಿಯಿದ್ದರೆ, ಕಾಂಗ್ರೆಸ್‌ನಿಂದ 18 ಮಂದಿ ಇದ್ದಾರೆ.

ಯುಪಿಎ ಅವಧಿಯಲ್ಲಿ ಸೋನಿಯಾ ಗಾಂಧಿ ನೇಪಥ್ಯದಲ್ಲಿ ಇದ್ದುಕೊಂಡೇ ಸರಕಾರದ ಮೇಲೆ ಪ್ರಭಾವ ಬೀರಿದ್ದರು ಎಂಬುದು ಕೂಡ ಇವತ್ತಿಗೂ ವಿಮರ್ಶೆಗೆ ಒಳಪಡುತ್ತಿರುವ ಸಂಗತಿಯಾಗಿದೆ.

ಅವರು ಪಿ.ವಿ. ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ಈ ಇಬ್ಬರು ಪ್ರಧಾನಿಗಳನ್ನು ನೇಮಕ ಮಾಡಿದವರು ಎಂಬ ಟೀಕೆಗಳಿವೆ. ಕಾಂಗ್ರೆಸ್ ಸಂಸದೀಯ ಪಕ್ಷ (ಸಿಪಿಪಿ) ಅದನ್ನು ಮಾಡಿದ್ಧಾದರೂ, ವಾಸ್ತವದಲ್ಲಿ ಅದರ ಹಿಂದೆ ಪ್ರಭಾವ ಬೀರಿದ್ದವರು ಸೋನಿಯಾ ಎಂಬ ಟೀಕೆಗಳಿಂದ ಕಾಂಗ್ರೆಸ್ ಈವರೆಗೂ ಬಿಡಿಸಿಕೊಳ್ಳುವುದು ಸಾಧ್ಯವಾಗಿಲ್ಲ.

ಇನ್ನೊಂದೆಡೆ, ಕುಟುಂಬ ರಾಜಕಾರಣದ ಕಾರಣದಿಂದಾಗಿ ಮಾಫಿಯಾ ರೀತಿಯಲ್ಲಿ ಕುಟುಂಬವೊಂದು ಹಿಡಿತ ಸಾಧಿಸುವ ಅಪಾಯವನ್ನು ಕಾಣಬಹುದು. ಕುಟುಂಬ ರಾಜಕಾರಣದ ಹಿಡಿತದಲ್ಲಿ ಚೌಕಟ್ಟನ್ನು ಮೀರಿದ ಒಂದು ಆಲೋಚನೆಗೂ ಅವಕಾಶ ಇಲ್ಲದಂತಾಗುವುದು ಕೂಡ ವಿಪರ್ಯಾಸ.

ಉದಾಹರಣೆಗೆ ಈಗ, ‘ಇಂಡಿಯಾ’ ಒಕ್ಕೂಟದ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್‌ನಲ್ಲಿ ವಿರೋಧಪಕ್ಷದ ನಾಯಕ ಯಾರಾಗಬೇಕು ಎನ್ನುವ ವಿಚಾರ ಬಂದಾಗಲೂ ರಾಹುಲ್ ಅವರನ್ನು ಹೊರತುಪಡಿಸಿ ಬೇರೆಯವರ ಬಗ್ಗೆ ಯೋಚಿಸುವ ಶಕ್ತಿಯನ್ನೇ ಪಕ್ಷ ಕಳೆದುಕೊಂಡಿದೆಯೇ ಎಂಬ ಅನುಮಾನಗಳು ಕಾಡದೇ ಇರುವುದಿಲ್ಲ.

ರಾಹುಲ್ ಅವರು ಒಬ್ಬ ಪ್ರಬುದ್ಧ ರಾಜಕಾರಣಿಯಾಗಿ ಬೆಳೆದಿರುವುದು, ಇಡೀ ದೇಶವನ್ನು ಸುತ್ತಿ ಜನರೊಂದಿಗೆ ಬೆರೆತಿರುವುದು, ಈಚಿನ ದಿನಗಳಲ್ಲಿ ಅವರು ಮೋದಿ ಸರಕಾರದ ವಿರುದ್ಧ ನಡೆಸಿದ ವಾಗ್ದಾಳಿಗಳು, ಸಂಸತ್ತಿನಲ್ಲಿ ಅವರು ಎತ್ತಿದ ಪ್ರಶ್ನೆಗಳು ಇದೆಲ್ಲದರ ಹೊರತಾಗಿಯೂ ಈ ಪ್ರಶ್ನೆಯನ್ನು ಕೇಳಬೇಕಿದೆ.

ಹೇಗೆ ಪಕ್ಷವೊಂದು ರಾಜಕೀಯ ಕುಟುಂಬಕ್ಕೆ ಮಣೆ ಹಾಕುವ ಅನಿವಾರ್ಯತೆಯಲ್ಲಿ ಇತರ ಸಾಧ್ಯತೆಗಳನ್ನು ಮರೆಯುತ್ತದಲ್ಲವೇ ಎಂಬುದಕ್ಕಾಗಿ ಇದನ್ನು ಕೇಳಬೇಕಾಗಿದೆ.

ಒಂದು ವೇಳೆ ಸರಕಾರ ರಚನೆಯ ಅವಕಾಶ ಕಾಂಗ್ರೆಸ್ ಎದುರು ಬಂದರೆ ಪ್ರಧಾನಿ ಹುದ್ದೆಗೆ ಕಾಂಗ್ರೆಸ್ ಅಧ್ಯಕ್ಷ ಖರ್ಗೆಯವರು ಹೆಸರು ಪ್ರಸ್ತಾಪಿಸುತ್ತಾರೆಯೇ ಹೊರತು ಖರ್ಗೆಯವರ ಹೆಸರನ್ನೇ ಪ್ರಧಾನಿ ಹುದ್ದೆಗೆ ಪ್ರಸ್ತಾಪಿಸುವ ಧೈರ್ಯ ತೋರಬಲ್ಲವರು ಕಾಂಗ್ರೆಸ್‌ನಲ್ಲಿ ಸಿಗಬಲ್ಲರೆ?

ಇದು ಪ್ರಶ್ನೆ.

ಇಂತಹ ಹಿನ್ನೆಲೆಯಲ್ಲಿಯೇ, ಈಗ ವಯನಾಡ್ ಕ್ಷೇತ್ರಕ್ಕೆ ರಾಹುಲ್ ಇಲ್ಲವೆಂದ ತಕ್ಷಣ ಅವರ ಸಹೋದರಿ ಅಲ್ಲಿ ಕಣಕ್ಕಿಳಿಯುತ್ತಾರೆ ಎಂಬುದು ಪ್ರಶ್ನೆಗಳಿಗೆ ಎಡೆ ಮಾಡಿಕೊಡುತ್ತದೆ.

ಪ್ರಿಯಾಂಕಾ ಗಾಂಧಿ ಬಹಳ ಉತ್ತಮ ಮತ್ತು ಪ್ರಬಲ ಪ್ರಚಾರಕಿ. ವಯನಾಡ್ ಜನತೆ ಗಾಂಧಿ ಕುಟುಂಬದ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳುವ ನಿಟ್ಟಿನ ಬದ್ಧತೆಗಾಗಿ ಎಂಬ ಸಮರ್ಥನೆಗಳೂ ಇರಬಹುದು. ಆದರೆ ಯಾಕೆ ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವನ್ನು ಕಾಣುವುದಕ್ಕೆ ಸಾಧ್ಯವಾಗುವುದಿಲ್ಲ ಎಂಬ ಪ್ರಶ್ನೆ ಹಾಗೇ ಉಳಿದುಬಿಡುತ್ತದೆ.

ಕೇರಳದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ಥಳೀಯ ನಾಯಕ ಅಥವಾ ನಾಯಕಿಯರಲ್ಲಿ ಒಬ್ಬ ಸಮರ್ಥ ಅಭ್ಯರ್ಥಿ ಕಾಂಗ್ರೆಸ್‌ಗೆ ಯಾಕೆ ಸಿಗಲಿಲ್ಲ, ಅಮೇಠಿಯಲ್ಲಿ ಕಿಶೋರಿ ಲಾಲ್ ಶರ್ಮಾರನ್ನು ಹುಡುಕಬಲ್ಲ ಕಾಂಗ್ರೆಸ್‌ಗೆ ಕೇರಳದಲ್ಲೊಬ್ಬ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತರು ಸಿಗಲಿಲ್ಲವೇ? ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ.

ಇದೆಲ್ಲದರ ಹೊರತಾಗಿಯೂ ವಯನಾಡ್ ಮೂಲಕ ಪ್ರಿಯಾಂಕಾ ಸಂಸತ್ ಪ್ರವೇಶಿಸುವ ಸಾಧ್ಯತೆಯನ್ನು ಪತ್ರಕರ್ತ ಕಿದ್ವಾಯಿ ಸೇರಿದಂತೆ ಅನೇಕ ಪರಿಣಿತರು ಉತ್ತಮ ಬೆಳವಣಿಗೆ ಎಂದೇ ನೋಡುತ್ತಾರೆ.

ಆಕೆ ರಾಹುಲ್‌ಗೆ ಬಲವಾಗಿ ಸಂಸತ್ತಿನ ಒಳಹೊರಗೂ ನಿಲ್ಲಲಿದ್ದಾರೆ ಮತ್ತು ರಾಹುಲ್ ಅವರಿಗಿಂತ ಭಿನ್ನ ಮತ್ತು ಪ್ರಬಲರಾಗಿ ಸಂಸತ್ತಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಬಗ್ಗೆ ಪರಿಣಿತರು ಹೇಳುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎನ್. ಕೇಶವ್

contributor

Similar News