ಕೊರೋನ ಲಸಿಕೆಗಳನ್ನು ಕೊಟ್ಟದ್ದು ಸಾಕ್ಷ್ಯಾಧಾರಿತವಾಗಿತ್ತೇ?

ಕೊರೋನ ಸಾಂಕ್ರಾಮಿಕವಾಗಿ ಹರಡುತ್ತಿದ್ದಾಗಲೇ ಲಸಿಕೆ ನೀಡುವುದು ಸೂಕ್ತವಾಗಿತ್ತೇ? ಅತಿ ಸುಲಭವಾಗಿ ಹರಡುವ, ಅತಿ ಕಡಿಮೆ ಹಾನಿಯುಂಟು ಮಾಡುವ ಕೊರೋನ ಸೋಂಕಿಗೆ ತರಾತುರಿಯಲ್ಲಿ ಲಸಿಕೆ ತಯಾರಿಸಿ, ಅದು ಸೋಂಕನ್ನು ತಡೆಯುತ್ತದೆನ್ನುವ ಖಾತರಿಯಿಲ್ಲದಿದ್ದರೂ, ಸೋಂಕು ಹರಡುತ್ತಿದ್ದಾಗಲೇ ಎಲ್ಲರಿಗೆ ಕೊಟ್ಟದ್ದು ಮನುಕುಲದ ಇತಿಹಾಸದಲ್ಲೇ ಇದೇ ಮೊದಲು.

Update: 2024-05-27 08:32 GMT

ಭಾರತದಲ್ಲಿ 175 ಕೋಟಿ ಡೋಸ್ ಚುಚ್ಚಿದ ಕೋವಿಶೀಲ್ಡ್ ಲಸಿಕೆಯಿಂದ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಅದರಿಂದಾಗಿ ಹೃದಯಾಘಾತ, ಪಾರ್ಶ್ವವಾಯು ಮುಂತಾದ ಸಮಸ್ಯೆಗಳಾಗಬಹುದು ಎಂದು ಈ ಲಸಿಕೆಯನ್ನು ತಯಾರಿಸಿದ್ದ ಆಸ್ಟ್ರಜೆನೆಕ ಕಂಪೆನಿಯು ಲಂಡನ್ ನ್ಯಾಯಾಲಯದಲ್ಲಿ ಕೆಲವು ವಾರಗಳ ಹಿಂದೆ ಒಪ್ಪಿಕೊಂಡಿದೆ. ಬಳಿಕ ಮೇ 5, 2024ರಂದು ಈ ಲಸಿಕೆಯನ್ನು ಹಿಂಪಡೆಯುತ್ತಿರುವುದಾಗಿ ಹೇಳಿದೆ. ಅಡ್ಡ ಪರಿಣಾಮಗಳಿಂದ ತಮ್ಮವರನ್ನು ಕಳೆದುಕೊಂಡವರು, ಗಂಭೀರವಾದ, ಶಾಶ್ವತವಾದ ವೈಕಲ್ಯಕ್ಕೀಡಾದವರು ಪರಿಹಾರ ಕೇಳಿ ವಿಶ್ವದ ಅನೇಕ ಕಡೆ ಲಸಿಕೆ ಕಂಪೆನಿಗಳ ವಿರುದ್ಧ ನ್ಯಾಯಾಲಯಗಳಲ್ಲಿ ದಾವೆಗಳನ್ನು ಹೂಡುತ್ತಿದ್ದಾರೆ. ಭಾರತದಲ್ಲಿ ಈ ಹಿಂದೆಯೇ ಅಂತಹ ದಾವೆಗಳು ದಾಖಲಾಗಿದ್ದವು, ಈಗ ಅವಕ್ಕೆ ಇನ್ನಷ್ಟು ಬಲ ಬಂದಂತಾಗಿದೆ.

ಲಸಿಕೆಯ ಗಂಭೀರ ಪರಿಣಾಮಗಳನ್ನು ಕಂಪೆನಿಯು ಒಪ್ಪಿಕೊಂಡದ್ದರಿಂದ ಲಸಿಕೆ ಪಡೆದಿದ್ದವರ ಆತಂಕ, ಸಂಶಯ, ಸಿಟ್ಟು ಏರಿವೆ. ಇದಕ್ಕಿದಿರಾಗಿ, ಲಸಿಕೆ ಕೊಡಿಸಿದ ಸರಕಾರವೂ, ಉತ್ಪಾದಿಸಿ ಮಾರಿದ ಕಂಪೆನಿಯೂ ಮೌನ ವಹಿಸಿವೆ, ಲಸಿಕೆ ಹಾಕುವುದನ್ನು ಅಂದು ಬೆಂಬಲಿಸಿ ಉತ್ತೇಜಿಸಿದ್ದ ವೈದ್ಯರು ಈಗ ಅದನ್ನು ಸಮರ್ಥಿಸಲು ಹೆಣಗಾಡುತ್ತಿದ್ದಾರೆ.

ಕೊರೋನ ಸೋಂಕು ಅತಿ ಭೀಕರವಾದ, ಅತಿ ಮಾರಣಾಂತಿಕವಾದ ಸೋಂಕಾಗಿತ್ತೇ? ಅತಿ ಸುಲಭವಾಗಿ ಹರಡಬಲ್ಲ ಕೊರೋನ ಸೋಂಕನ್ನು ಲಸಿಕೆಯಿಂದ ತಡೆಯಲು ಸಾಧ್ಯವಿತ್ತೇ? ಕೊರೋನ ಸಾಂಕ್ರಾಮಿಕವಾಗಿ ಹರಡುತ್ತಿದ್ದಾಗಲೇ ಲಸಿಕೆ ನೀಡುವುದು ಸೂಕ್ತವಾಗಿತ್ತೇ? ಕೊರೋನ ಸೋಂಕು ತಗಲಿ ವಾಸಿಯಾಗಿದ್ದವರಿಗೂ ಲಸಿಕೆ ನೀಡುವ ಅಗತ್ಯವಿತ್ತೇ? ಕಿರಿಯ ವಯಸ್ಕರಿಗೆ ಮತ್ತು ಆರೋಗ್ಯವಂತರಿಗೆ ಲಸಿಕೆ ಕೊಡುವ ಅಗತ್ಯವಿತ್ತೇ? ಹೊಸ ಕೊರೋನ ಲಸಿಕೆಗಳು ಸುರಕ್ಷಿತವೆನ್ನಲು ಸ್ಪಷ್ಟ ಆಧಾರಗಳಿದ್ದವೇ?

ಈ ಎಲ್ಲಾ ಪ್ರಶ್ನೆಗಳಿಗೆ ಹೌದು ಎನ್ನುವ ಉತ್ತರವಿದ್ದರೆ ಲಸಿಕೆ ಕೊಟ್ಟದ್ದು ಸರಿಯೆನಿಸುತ್ತಿತ್ತು, ಇಲ್ಲ ಎನ್ನುವುದೇ ಉತ್ತರವಾಗಿದ್ದರೆ ಲಸಿಕೆಯನ್ನು ಕೊಡಬಾರದಿತ್ತು.

ಕೊರೋನ ಸೋಂಕು ಅತಿ ಭೀಕರವಾದ, ಅತಿ ಮಾರಣಾಂತಿಕವಾದ ಸೋಂಕಾಗಿತ್ತೇ? ಇಲ್ಲ ಎನ್ನುವುದು ಕೊರೋನ ಹರಡತೊಡಗಿ ಎರಡೇ ತಿಂಗಳಲ್ಲಿ, ಜನವರಿ 2020ರಲ್ಲೇ, ಗೊತ್ತಾಗಿಹೋಗಿತ್ತು. ಹೊಸ ಕೊರೋನ ಸೋಂಕಿನಿಂದ ಸಾವುಗಳಾಗುವ ಸಾಧ್ಯತೆಯು 50 ವರ್ಷಕ್ಕಿಂತ ಕೆಳಗಿನವರಲ್ಲಿ 10 ಲಕ್ಷ ಸೋಂಕಿತರಿಗೆ 3ರಿಂದ 20ರಷ್ಟಿರಬಹುದು, 50ಕ್ಕಿಂತ ಮೇಲ್ಪಟ್ಟವರಲ್ಲಿ 60ಕ್ಕಿಂತ ಹೆಚ್ಚಿ ರಬಹುದು ಎಂದು ಆಗಲೇ ಅಂದಾಜಿಸಲಾಗಿತ್ತು (ಈ ಅಂದಾಜು ಎಷ್ಟು ನಿಖರವಾಗಿತ್ತೆಂದರೆ, ಲಸಿಕೆಗಳು ಬರುವ ಮೊದಲೇ 38 ದೇಶಗಳಲ್ಲಿ ಕೋವಿಡ್‌ನಿಂದ ಆದ ಸಾವುಗಳು ಈ ಆರಂಭಿಕ ಅಂದಾಜಿಗಿಂತಲೂ ಮೂರರಲ್ಲೊಂದರಷ್ಟು ಕಡಿಮೆಯೇ ಇದ್ದವು!). ಕೊರೋನ ಸೋಂಕಿನಿಂದ ಕಿರಿಯ ವಯಸ್ಕರಿಗೆ ಗಂಭೀರ ಸಮಸ್ಯೆಗಳಾಗುವ ಸಾಧ್ಯತೆಗಳು ಅತಿ ವಿರಳವಾಗಿರುವುದರಿಂದ ಅವರಿಗೆ ಯಾವುದೇ ಲಸಿಕೆಯ ಅಗತ್ಯವೇ ಇಲ್ಲ ಎಂದು ಇದರ ಆಧಾರದಲ್ಲೇ ನಾವು ಕೆಲವರು ಹೇಳಿದ್ದೆವು. ಆದರೆ ಇವನ್ನೆಲ್ಲ ಕಡೆಗಣಿಸಿ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರಿಗೂ ಲಸಿಕೆಯನ್ನು ನೀಡಲಾಯಿತು. ಹದಿಹರೆಯಕ್ಕಿಂತ ಮೇಲಿನವರಿಗೆ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಕೊಟ್ಟರೆ, ಅದಕ್ಕಿಂತ ಕಿರಿಯರಿಗೆ ಬೇರೆಲ್ಲೂ ಬಳಸದಿದ್ದ ಕೋರ್ಬೆವ್ಯಾಕ್ಸ್ ಲಸಿಕೆ ಯನ್ನು ನೀಡಲು ತುರ್ತು ಅನುಮೋದನೆ ನೀಡಲಾಯಿತು.

ಉಸಿರಿನ ಮೂಲಕ ಸುಲಭವಾಗಿ ಒಬ್ಬರಿಂದ ಆರೇಳು ಜನರಿಗೆ ಹರಡುವ ಕೊರೋನ ಸೋಂಕನ್ನು ಲಸಿಕೆ ಯಿಂದ ತಡೆ ಯಲು ಸಾಧ್ಯವೇ ಎಂಬುದನ್ನು ಉತ್ತರಿಸುವ ಬದಲು ಬಗೆಬಗೆಯ ವರಸೆಗಳನ್ನು ಹೆಣೆಯಲಾಯಿತು. ಕೊರೋನ ಲಸಿಕೆಗಳು ಸೋಂಕಿನ ಲಕ್ಷಣಗಳ ವಿರುದ್ಧ ಸುಮಾರು ಶೇ. 78ರಷ್ಟು, ಆಸ್ಪತ್ರೆ, ಐಸಿಯು ದಾಖಲಾತಿ ವಿರುದ್ಧ ಶೇ.86ರಷ್ಟು, ಮತ್ತು ಸಾವಿನ ವಿರುದ್ಧ ಶೇ. 87-100ರಷ್ಟು ರಕ್ಷಣೆಯೊದಗಿಸುತ್ತವೆ ಎಂದು ಆರಂಭಿಕ ಅಧ್ಯಯನಗಳಲ್ಲಿ ಹೇಳಿದರೆ, ದಿನಗಳುರುಳಿದಂತೆ, ಸೋಂಕನ್ನು ತಡೆಯುವ ಖಾತರಿಯಿಲ್ಲ, ಹೊಸ ರೂಪಾಂತರಗಳಾದಂತೆ ಇನ್ನಷ್ಟು ಹೊಸ ಲಸಿಕೆಗಳು ಬೇಕಾಗಬಹುದು ಎಂದೆಲ್ಲ ಹೇಳಲಾಯಿತು. ಅದರ ಬೆನ್ನಿಗೆ, ಲಸಿಕೆ ಬಂದಿರುವುದರಿಂದ ಕೊರೋನ ಹರಡುವುದನ್ನು ತಡೆಯಲು ಸಾಧ್ಯವಾಗಲಿದೆ, ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದೂ ಹೇಳಲಾಯಿತು ಮತ್ತೂ ಮುಂದೆ ಹೋಗಿ ಲಸಿಕೆ ಹಾಕಿಸಿಕೊಳ್ಳದವರು ಇಡೀ ಸಮುದಾಯಕ್ಕೆ ಅಪಾಯ ತರುತ್ತಾರೆ, ಲಸಿಕೆ ಹಾಕಲು ಸಾಧ್ಯವಿಲ್ಲದ ಮಕ್ಕಳಿಂದಾಗಿ ಶಿಕ್ಷಕರಿಗೆ ಅಪಾಯವಾಗಲಿದೆ, ಹಾಗಾಗಿ ಶಾಲೆಗಳನ್ನು ಮುಚ್ಚಿಯೇ ಇಡಬೇಕು, ಲಸಿಕೆ ಹಾಕದವರು ಎಲ್ಲಿಯೂ ಪ್ರಯಾಣಿಸಬಾರದು, ಪ್ರವೇಶಿಸಬಾರದು, ಆಟದ ಬಯಲಿಗೂ ಇಳಿಯಬಾರದು, ಶಾಲೆಗೆ ಬರಬಾರದು, ಆಸ್ಪತ್ರೆಯೊಳಕ್ಕೆ ಬರಬಾರದು, ದಾದಿಯರಾಗಿಯೂ ಕೆಲಸ ಮಾಡಬಾರದು, ಒಟ್ಟಿನಲ್ಲಿ ಲಸಿಕೆ ಹಾಕಿಸಿಕೊಳ್ಳದವರನ್ನು ಸಮಾಜಘಾತುಕರು, ಜೀವಿಸುವ ಹಕ್ಕೇ ಇಲ್ಲದವರು ಎಂಬಂತೆ ಬಿಂಬಿಸಲಾಯಿತು, ಬಹಿಷ್ಕರಿಸಲಾಯಿತು, ಕೆಲಸದಿಂದ ತೆಗೆಯಲಾಯಿತು, ಬಂಧಿಸಿದ್ದೂ ಆಯಿತು. ಭಾರತದಲ್ಲಂತೂ ಎಪ್ರಿಲ್ 2021ರಿಂದ ಸಾರ್ವಜನಿಕರಿಗೆ ಲಸಿಕೆ ನೀಡಲಾರಂಭಿಸಿದ ಕೆಲವೇ ದಿನಗಳಲ್ಲಿ ಕೊರೋನ ಹರಡುವಿಕೆಯು ಕಡಿಮೆಯಾಗುವ ಬದಲು ಮತ್ತೆ ಏರತೊಡಗಿತು, ಎರಡನೇ ಅಲೆಯಾಗಿ ಅಪ್ಪಳಿಸಿತು.

ಕೊರೋನ ಸಾಂಕ್ರಾ ಮಿಕವಾಗಿ ಹರಡುತ್ತಿ ದ್ದಾಗಲೇ ಲಸಿಕೆ ನೀಡುವುದು ಸೂಕ್ತವಾಗಿತ್ತೇ? ಅತಿ ಸುಲಭವಾಗಿ ಹರಡುವ, ಅತಿ ಕಡಿಮೆ ಹಾನಿಯುಂಟು ಮಾಡುವ ಕೊರೋನ ಸೋಂಕಿಗೆ ತರಾತುರಿಯಲ್ಲಿ ಲಸಿಕೆ ತಯಾರಿಸಿ, ಅದು ಸೋಂಕನ್ನು ತಡೆಯುತ್ತದೆನ್ನುವ ಖಾತರಿಯಿಲ್ಲದಿದ್ದರೂ, ಸೋಂಕು ಹರಡುತ್ತಿದ್ದಾಗಲೇ ಎಲ್ಲರಿಗೆ ಕೊಟ್ಟದ್ದು ಮನುಕುಲದ ಇತಿಹಾಸದಲ್ಲೇ ಇದೇ ಮೊದಲು. ಒಬ್ಬರಿಂದ ಆರೇಳು ಜನರಿಗೆ ಸುಲಭದಲ್ಲಿ ಹರಡುವ ಸೋಂಕನ್ನು ತಡೆಯುವುದಕ್ಕೆ ಕೋಟಿಗಟ್ಟಲೆ ಜನರಿಗೆ ಎರಡೆರಡು ಡೋಸ್ ಲಸಿಕೆ ಕೊಡುವುದೊಂದೇ ಉಪಾಯ ಎಂದುದರ ಹಿಂದೆ ಯಾವ ತರ್ಕವಿತ್ತೆಂದು ಸುಲಭದಲ್ಲಿ ಅರ್ಥವಾಗದು! ಅಂತೂ ಲಸಿಕೆಗಿಂತ ವೇಗವಾಗಿ ಸೋಂಕೇ ಎಲ್ಲರಿಗೂ ತಗುಲಿತು, ಅದರ ಮೇಲೆ ಲಸಿಕೆಯನ್ನೂ ಚುಚ್ಚಲಾಯಿತು.

ಕೊರೋನ ಸೇರಿದಂತೆ ಯಾವುದೇ ವೈರಸ್ ಸೋಂಕು ಒಮ್ಮೆ ತಗುಲಿದರೆ ಜೀವನಪರ್ಯಂತ ರೋಗರಕ್ಷಣೆ ಉಂಟಾಗುತ್ತದೆ ಎನ್ನುವುದು ಸಾಮಾನ್ಯ ತಿಳಿವಳಿಕೆಯಾಗಿದೆ. ಭಾರತದಲ್ಲಿ ಡಿಸೆಂಬರ್ 2020ರ ವೇಳೆಗೆ ಶೇ. 40ರಷ್ಟು ಜನರಿಗೆ ಕೊರೋನ ಸೋಂಕು ತಗುಲಿತ್ತೆಂದು ಕೇಂದ್ರ ಸರಕಾರವೇ ಹೇಳಿತ್ತು, ಭಾರತವು ಕೊರೋನ ಯುದ್ಧವನ್ನು ಯಶಸ್ವಿಯಾಗಿ ಗೆದ್ದಾಗಿದೆ ಎಂದು ಜನವರಿ 18, 2021ರಂದು ಮಾನ್ಯ ಪ್ರಧಾನಿಗಳೇ ಘೋಷಿಸಿದ್ದರು. ಹಾಗಿದ್ದಲ್ಲಿ, ಸೋಂಕು ತಗುಲಿ ರೋಗರಕ್ಷಣೆ ಬೆಳೆಸಿಕೊಂಡಿದ್ದ 40-60ಶೇ. ಭಾರತೀಯರಿಗೆ ಲಸಿಕೆಯನ್ನು ನೀಡುವ ಅಗತ್ಯವೇನಿದೆ ಎಂದು ನಾವು ಪ್ರಶ್ನಿಸಿದ್ದೆವು. ಸಹಜ ಸೋಂಕಿನಲ್ಲಿ ವೈರಾಣುವಿನ ಎಲ್ಲ 29 ಪ್ರೊಟೀನುಗಳನ್ನು ಅಗಣಿತ ಪ್ರಮಾಣದಲ್ಲಿ ಎದುರಿಸಿ ಬಲಿಷ್ಠ ರೋಗರಕ್ಷಣೆ ದೊರೆಯುತ್ತದೆ, ಅದರ ಮುಳ್ಳಿನ ಪ್ರೊಟೀನ್ ಮಾತ್ರವಲ್ಲ, ಇತರ ಪ್ರೊಟೀನ್‌ಗಳ ವಿರುದ್ಧವೂ ಪ್ರತಿಕಾಯಗಳುಂಟಾಗುತ್ತವೆ. ಲಸಿಕೆಯಲ್ಲಿ ಸೀಮಿತ ಪ್ರಮಾಣದಲ್ಲಿ ಮುಳ್ಳಿನ ಪ್ರೊಟೀನ್ ಒಂದಕ್ಕಷ್ಟೇ ಪ್ರತಿರೋಧ ಬೆಳೆಯುತ್ತದೆ, ಆದರೆ ಹಾಗೆನ್ನುವುದಕ್ಕೂ ಸಾಕಷ್ಟು ಸಾಕ್ಷ್ಯಾಧಾರಗಳು ದೊರೆತಿಲ್ಲ ಎಂಬ ವೈಜ್ಞಾನಿಕ ಸತ್ಯಗಳನ್ನು ಬದಿಗೊತ್ತಿ, ಕೊರೋನ ಲಸಿಕೆಯು ಸಹಜ ಸೋಂಕಿಗಿಂತಲೂ ಪ್ರಬಲವಾದ ರೋಗರಕ್ಷಣೆ ಒದಗಿಸುತ್ತದೆ ಎಂಬ ಹೊಸದೊಂದು ವಾದವನ್ನು ಹೆಣೆಯಲಾಯಿತು! ಲಸಿಕೆಯು ಸೋಂಕನ್ನೂ ತಡೆಯುವುದಿಲ್ಲ, ರೂಪಾಂತರಿಗಳನ್ನೂ ತಡೆಯುವುದಿಲ್ಲ, ಮರುಸೋಂಕನ್ನೂ ತಡೆಯುವುದಿಲ್ಲ ಎನ್ನುವುದೂ, ಅತ್ತ, ಆಗಲೇ ಸೋಂಕಿತರಾದವರಲ್ಲಿ ಉತ್ತಮವಾದ, ದೀರ್ಘ ಕಾಲಿಕ ರೋಗರಕ್ಷಣೆಯಿದ್ದು ಮರುಸೋಂಕಿನ ಸಾಧ್ಯತೆಯು ತೀರಾ ಅತ್ಯಲ್ಪ ಎನ್ನುವುದೂ ಸ್ಪಷ್ಟವಾಗಿ ದೃಢಪಟ್ಟಿದ್ದರೂ ಕೂಡ ಸೋಂಕಿನಿಂದ ಗುಣಮುಖರಾದವರನ್ನೂ ಲಸಿಕೆಯ ಸಾಲಿಗೆ ತಳ್ಳಲಾಯಿತು.

ಕೊರೋನ ಲಸಿಕೆ ಲಭ್ಯವಾಗುವ ವೇಳೆಗೆ ಕೊರೋನ ಸೋಂಕಿನ ಬಗ್ಗೆ ಒಂದು ವರ್ಷದ ಅನುಭವವು ಜಾಗತಿಕ ಮಟ್ಟದಲ್ಲಿ ಲಭ್ಯವಿತ್ತು, ಭಾರತದಲ್ಲೂ ಇತ್ತು; ಕಿರಿಯ ವಯಸ್ಕರಲ್ಲಿ ಮತ್ತು ಆರೋಗ್ಯವಂತರಲ್ಲಿ ಯಾವುದೇ ತೊಂದರೆ ಗಳಾಗುವುದಿಲ್ಲ ಎನ್ನುವುದು ಅಷ್ಟರಲ್ಲಿ ಸುಸ್ಪಷ್ಟವಾಗಿತ್ತು. ಆದ್ದರಿಂದ ಅಂಥವರಿಗೆಲ್ಲ ಲಸಿಕೆ ಕೊಡುವ ಅಗತ್ಯವೇ ಇಲ್ಲ ಎಂದು ನಾವು ಹಲವರು ವಿರೋಧಿಸಿದ್ದೆವು. ನಮ್ಮ ದೇಶದಲ್ಲಿ 50 ವರ್ಷಕ್ಕಿಂತ ಕೆಳಗಿನವರು ಶೇ. 85ರಷ್ಟಿರುವುದರಿಂದ ಸುಮಾರು 115 ಕೋಟಿ ಜನರಿಗೆ ಲಸಿಕೆಯ ಅಗತ್ಯವೇನು ಎಂದೂ ಕೇಳಿದ್ದೆವು. ಅದಕ್ಕಿಂತ ಮೇಲಿನ ವಯಸ್ಸಿನ 20 ಕೋಟಿ ಜನರಲ್ಲೂ ಶೇ. 40 ಮಂದಿಗೆ ಕೊರೋನ ತಗುಲಿ ವಾಸಿಯಾಗಿದ್ದರೆ ಅವರಿಗೂ ಲಸಿಕೆಯ ಅಗತ್ಯವೇನು, ಇನ್ನುಳಿದ ಒಟ್ಟು ಸುಮಾರು 12 ಕೋಟಿ ಜನರಿಗೆ ಮತ್ತು 35 ವರ್ಷಕ್ಕೆ ಮೇಲ್ಪಟ್ಟವರಲ್ಲಿ ಅತಿ ತೂಕ, ಸಕ್ಕರೆ ಕಾಯಿಲೆ, ಹೃದ್ರೋಗ ಇತ್ಯಾದಿ ಸಮಸ್ಯೆಗಳಿದ್ದವರಿಗಷ್ಟೇ ಲಸಿಕೆಯನ್ನು ಕೊಟ್ಟರೆ ಸಾಕಾಗದೇ ಎಂದೂ ಕೇಳಿದ್ದೆವು. ಲಸಿಕೆ ಹಾಕಿಸಿಕೊಳ್ಳದ ವಿದ್ಯಾರ್ಥಿಗಳು 2021ರ ಜೂನ್ ತಿಂಗಳಿಂದ ಕಾಲೇಜಿಗೆ ಬರುವಂತಿಲ್ಲ ಎಂದು ಆಗಿನ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಹೇಳಿದ್ದನ್ನು ಪ್ರಶ್ನಿಸಿ ವಕೀಲರಿಂದ ನೋಟಿಸ್ ನೀಡಿದ್ದಲ್ಲದೆ ಬಳಿಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ಸಲ್ಲಿಸಿದ್ದೆವು. ಆದರೆ ಇವನ್ನೆಲ್ಲ ಸರಕಾರವು ಕೇಳಲಿಲ್ಲ, ಹೆಚ್ಚಿನ ವೈದ್ಯರು ಕೂಡ ಗೇಲಿ ಮಾಡಿದರು, ವಿರೋಧಿಸಿದರು.

ಹೊಸ ಕೊರೋನ ಲಸಿಕೆಗಳು ಸುರಕ್ಷಿತವೆನ್ನಲು ಸ್ಪಷ್ಟ ಆಧಾರಗಳೂ ಇರಲಿಲ್ಲ. ಡಿಸೆಂಬರ್ 2019ರಲ್ಲಿ ಹೊಸ ಕೊರೋನ ವೈರಸ್ ಗುರುತಿಸಲ್ಪಟ್ಟ ಬಳಿಕ ಅದರ ಜೀವತಳಿಯನ್ನು ನಿಖರವಾಗಿ ಗುರುತಿಸಿ ಜನವರಿ 12, 2020ರಂದು ಚೀನಾದ ವಿಜ್ಞಾನಿಗಳು ಪ್ರಕಟಿಸಿದಲ್ಲಿಂದಲೇ ಅದಕ್ಕಿದಿರಾಗಿ ಲಸಿಕೆಯನ್ನು ತಯಾರಿಸುವ ಸ್ಪರ್ಧೆಯೂ ಆರಂಭಗೊಂಡಿತು, ಅದುವರೆಗೆ ಬಳಸಿರದೇ ಇದ್ದ ತಂತ್ರಜ್ಞಾನದಿಂದ ಹಲಬಗೆಯ ಲಸಿಕೆಗಳು ಸಿದ್ಧಗೊಂಡವು. ಅಮೆರಿದ ಸಿಡಿಸಿಯ ಅನುಸಾರ ಒಂದು ಲಸಿಕೆಯನ್ನು ಅಭಿವೃದ್ಧಿಪಡಿಸಿ, ಮೂರು ಹಂತಗಳಲ್ಲಿ ಪರೀಕ್ಷಿಸಿ, ಅನುಮೋದನೆ ದೊರೆತು, ಬಳಕೆಗೆ ತರಲು 10-15 ವರ್ಷಗಳಾದರೂ ಬೇಕಾಗುತ್ತವೆ. ಅಂತಲ್ಲಿ ಕೊರೋನ ಸೋಂಕಿಗಿದಿರಾದ ಹೊಸ ಲಸಿಕೆಗಳನ್ನು ಕೇವಲ ಆರೇಳು ತಿಂಗಳಲ್ಲೇ ತಯಾರಿಸಿ, ಒಂದೆರಡು ತಿಂಗಳಷ್ಟೇ ಅಧ್ಯಯನಗಳನ್ನು ನಡೆಸಿ, ಸುರಕ್ಷತೆಯ ಬಗ್ಗೆ ಹಾಗೂ ದೀರ್ಘ ಕಾಲಿಕ ಅಡ್ಡ ಪರಿಣಾಮಗಳ ಬಗ್ಗೆ ಸರಿಯಾದ ಯಾವುದೇ ಅಧ್ಯಯನಗಳಾಗದೆ, ಮಾಹಿತಿಯೂ ಇಲ್ಲದೆ, ತುರ್ತು ಅನುಮೋದನೆ ನೀಡಿ ಒಂದೇ ವರ್ಷದೊಳಗೆ ಬಳಕೆಗೆ ತರಲಾಯಿತು.

ಜುಲೈ-ಆಗಸ್ಟ್ 2020ರಲ್ಲಿ ಚೀನಾ ಹಾಗೂ ರಶ್ಯದ ಮೊದಲ ಲಸಿಕೆಗಳು ಬಂದವು. ಡಿಸೆಂಬರ್ 2020ರ ಕೊನೆಯ ವೇಳೆಗೆ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಹಾಗೂ ಆಸ್ಟ್ರಜೆನೆಕ ತಯಾರಿಸಿದ ಲಸಿಕೆಗೆ ಯೂರೋಪಿನ ದೇಶಗಳು ಅನುಮೋದನೆ ನೀಡಿದವು, ಇಂಗ್ಲೆಂಡ್, ಡೆನ್ಮಾರ್ಕ್ ಮುಂತಾದ ದೇಶಗಳಲ್ಲಿ ಅದನ್ನು ಕೊಡಲಾರಂಭಿಸಲಾಯಿತು. ಅದೇ ಲಸಿಕೆಯನ್ನು ಉತ್ಪಾದಿಸಲು ಭಾರತದ ಸೀರಂ ಇನ್ಸ್ಟಿಟ್ಯೂಟ್ ಸಂಸ್ಥೆ ಒಪ್ಪಂದ ಮಾಡಿಕೊಂಡು ಭಾರತದಲ್ಲಿ ಕೋವಿಶೀಲ್ಡ್ ಹೆಸರಲ್ಲಿ ನೀಡಲು ಮುಂದಾಯಿತು. ಭಾರತದ್ದೇ ಆದ ಭಾರತ್ ಬಯೋಟೆಕ್ ಕಂಪೆನಿಯು ಐಸಿಎಂಆರ್ ಸಹಯೋಗದಲ್ಲಿ ತನ್ನದೇ ಆದ ಲಸಿಕೆಯನ್ನು (ಕೊವ್ಯಾಕ್ಸಿನ್) ತಯಾರಿಸಿ ಅನುಮೋದನೆ ಪಡೆಯಲು ಹೋಯಿತು. ಲಸಿಕೆಯ ಸ್ಪರ್ಧೆಗೆ ಬಿದ್ದಿದ್ದ ನಮ್ಮ ಸರಕಾರವು ನಮ್ಮ ದೇಶದಲ್ಲಿ ಈ ಎರಡೂ ಲಸಿಕೆಗಳ ಪರೀಕ್ಷೆಗಳ ವರದಿಗಳು ದೊರೆಯುವ ಮೊದಲೇ ಜನವರಿ 2021ರ ಆರಂಭದಲ್ಲಿ ತರಾತುರಿಯಲ್ಲಿ ಸಭೆಗಳನ್ನು ನಡೆಸಿ ಇವೆರಡಕ್ಕೂ ತುರ್ತು ಬಳಕೆಯ ಅನುಮೋದನೆ ನೀಡಿತು.

ಕೋವಿಶೀಲ್ಡ್ ಹೆಸರಲ್ಲಿ ಹೀಗೆ ತುರ್ತು ಅನುಮೋದನೆ ನೀಡಿದಾಗ ಭಾರತದಲ್ಲಿ ನಡೆದಿದ್ದ ಪರೀಕ್ಷೆಗಳ ವರದಿಗಳಿನ್ನೂ ಪ್ರಕಟವಾಗಿರಲಿಲ್ಲ; ಬ್ರಿಟನ್, ಬ್ರೆಝಿಲ್ ಮತ್ತು ಆಫ್ರಿಕಾಗಳಲ್ಲಿ ನಡೆದಿದ್ದ ಪರೀಕ್ಷೆಗಳ ವರದಿಗಳಷ್ಟೇ ಲಭ್ಯವಿದ್ದವು. ಕೊವ್ಯಾಕ್ಸಿನ್ ಲಸಿಕೆಯದಂತೂ ಎರಡನೇ ಹಂತದ ಪರೀಕ್ಷೆಗಳಷ್ಟೇ ಆಗಿದ್ದವು, ಆದರೂ ಅದಕ್ಕೆ ಬ್ರಿಟನ್‌ನಿಂದ ಬಂದಿರುವ ರೂಪಾಂತರಿತ ತಳಿಯ ನಿಯಂತ್ರಣಕ್ಕೆನ್ನುವ ನೆಪದಲ್ಲಿ ತುರ್ತು ಅನುಮೋದನೆ ನೀಡಲಾಯಿತು, ಲಸಿಕೆ ಪಡೆದವರನ್ನೇ ಮೂರನೇ ಹಂತದ ಪರೀಕ್ಷೆಗಳಿಗೆ ಒಡ್ಡಲಾಯಿತು!

ಈ ಎರಡು ಲಸಿಕೆಗಳಿಗೆ ತುರ್ತು ಅನುಮೋದನೆ ಕೊಟ್ಟದ್ದನ್ನು ಅನೇಕ ತಜ್ಞರು ಪ್ರಶ್ನಿಸಿದ್ದರು, ವಿರೋಧಿಸಿದ್ದರು, ಆ ಲಸಿಕೆಗಳ ಕಂಪೆನಿಗಳ ಮಾಲಕರೂ ಬಹಿರಂಗವಾಗಿ ಕಚ್ಚಾಡಿಕೊಂಡಿದ್ದರು. ಕೊವ್ಯಾಕ್ಸಿನ್ ಲಸಿಕೆಯು ನೀರಿನಂತಿದೆ ಎಂದು ಕೋವಿಶೀಲ್ಡ್‌ನ ಆದಾರ್ ಪೂನಾವಾಲ ಹೀಗಳೆದರೆ, ಕೊವ್ಯಾಕ್ಸಿನ್ನ ಕೃಷ್ಣ ಎಲ್ಲ ಅವರು ಕೋವಿಶೀಲ್ಡ್ ಲಸಿಕೆಯ ಪರೀಕ್ಷೆಗಳೇ ಕಳಪೆಯಾಗಿವೆ, 60-70ಶೇ. ಜನರಲ್ಲಿ ಅಡ್ಡ ಪರಿಣಾಮಗಳಾಗಿವೆ ಎಂದಿದ್ದರು! ಹಿರಿಯ ಲಸಿಕೆ ವಿಜ್ಞಾನಿ ಡಾ. ಗಗನ್‌ದೀಪ್ ಕಾಂಗ್ ಅವರು ಕೋವಿಶೀಲ್ಡ್ ಲಸಿಕೆಯ ಬಗ್ಗೆ ಭಾರತದಲ್ಲಿ ನಡೆಸಲಾಗಿರುವ ಪರೀಕ್ಷೆಗಳ ವರದಿಗಳು ಪ್ರಕಟವಾಗಿಲ್ಲ, ಅತ್ತ ಕೊವ್ಯಾಕ್ಸಿನ್ ಬಗ್ಗೆ ಯಾವುದೇ ಮಾಹಿತಿಯೂ ಇಲ್ಲ, ಆದ್ದರಿಂದ ಇವೆರಡನ್ನೂ ತಾನು ಪಡೆಯುವುದಿಲ್ಲ ಎಂದು ಹೇಳಿದ್ದರು. ಹಿರಿಯ ವೈರಾಣು ತಜ್ಞ ಡಾ. ಜೇಕಬ್ ಜಾನ್ ಅವರು ಕೋವಿಶೀಲ್ಡ್ ಲಸಿಕೆಗೆ ಅಡ್ಡ ಪರಿಣಾಮಗಳು ವರದಿಯಾಗಿರುವುದರಿಂದ ತಾನದನ್ನು ಹಾಕಿಸಿಕೊಳ್ಳುವುದಿಲ್ಲ ಎಂದರೆ, ಹಿರಿಯ ರೋಗರಕ್ಷಣಾ ವಿಜ್ಞಾನಿ ಡಾ. ವಿನೀತಾ ಬಾಲ್ ಅವರು ಸೋಂಕನ್ನು ತಡೆಗಟ್ಟುವ ಸಾಮರ್ಥ್ಯದ ಬಗ್ಗೆ ಆಧಾರಗಳಿಲ್ಲದೆಯೇ ಲಸಿಕೆಗಳನ್ನು ಬಳಸತೊಡಗುವುದು ಅನೈತಿಕವೆಂದೂ, ಹಿಟ್ಲರ್‌ಶಾಹಿ ವರ್ತನೆಯಾಗುತ್ತದೆಂದೂ ಹೇಳಿದ್ದರು. ಹಿರಿಯ ವೈರಾಣು ತಜ್ಞ ಡಾ. ಶಾಹಿದ್ ಜಮೀಲ್ ಅವರು ಈ ಲಸಿಕೆಗಳಿಗೆ ಅನುಮತಿ ಕೊಟ್ಟ ಬಗೆಯನ್ನು ಪ್ರಶ್ನಿಸಿದ್ದರು. ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿಯಾಗಿದ್ದ ಡಾ. ಸೌಮ್ಯ ಸ್ವಾಮಿನಾಥನ್ ಲಸಿಕೆಗಳ ಉಪಯುಕ್ತತೆ ಮತ್ತು ಸುರಕ್ಷತೆಗಳ ಕನಿಷ್ಠ ಮಾನದಂಡಗಳು ಖಾತರಿಯಾಗುವವರೆಗೆ ಅವುಗಳನ್ನು ಸಾರ್ವತ್ರಿಕವಾಗಿ ಬಳಸುವುದಕ್ಕೆ ಅನುಮತಿ ನೀಡುವಂತಿಲ್ಲ ಎಂದಿದ್ದರು (ಇವನ್ನು ಜನವರಿ 15, 2021ರಂದು ವಾರ್ತಾಭಾರತಿಯಲ್ಲಿ ಪ್ರಕಟವಾದ ‘ತುರ್ತು ಸ್ಥಿತಿಯಲ್ಲಿಲ್ಲದ ಕೊರೋನ ಸೋಂಕಿಗೆ ತುರ್ತಾಗಿ ಲಸಿಕೆ ಬೇಕೇ?’ ಎಂಬ ಲೇಖನದಲ್ಲಿ ಬರೆದಿದ್ದೆ). ಕೆಲವು ತಿಂಗಳ ಬಳಿಕ ಇವರಲ್ಲಿ ಹೆಚ್ಚಿನವರು ಸುಮ್ಮನಾದರು ಅಥವಾ ತಮ್ಮ ನಿಲುವನ್ನು ಬದಲಿಸಿದರು, ಲಸಿಕೆ ಕಂಪೆನಿಗಳ ಜಗಳವೂ ತಣ್ಣಗಾಯಿತು!

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಡಾ. ಶ್ರೀನಿವಾಸ ಕಕ್ಕಿಲ್ಲಾಯ

contributor

Similar News