ಪಶ್ಚಿಮ ಬಂಗಾಳ: ಆಂತರಿಕ ಕಚ್ಚಾಟದಲ್ಲಿ ಮುಳುಗಿರುವ ಬಿಜೆಪಿಯು ‘ಇಂಡಿಯಾ’ ಕೂಟಕ್ಕೆ ಸರಿಸಾಟಿಯಾದೀತೇ?

ಈ ಬಾರಿ ಪ್ರತಿಪಕ್ಷ ಮೈತ್ರಿಕೂಟ ‘ಇಂಡಿಯಾ’ ಬಿಜೆಪಿಗೆ ಎದುರಾಗಲಿರುವುದರಿಂದ ಒಟ್ಟಾರೆ ಸಮೀಕರಣ ಬದಲಾಗಲಿದೆ. ಬಿಜೆಪಿಗೆ ಇದು ಪ್ರಮುಖ ಸವಾಲಾಗಲಿದೆ ಎಂಬುದು ನಿಜ ಮತ್ತು ಒಂದು ರೀತಿಯಲ್ಲಿ ಬಿಜೆಪಿಗೆ ನಿರ್ಣಾಯಕವೂ ಆಗಿದೆ.

Update: 2024-01-23 06:41 GMT

ಸರಣಿ- 11

ಪಶ್ಚಿಮ ಬಂಗಾಳದ ರಾಜ್ಯದ ಒಟ್ಟು ಜನಸಂಖ್ಯೆ 9.1 ಕೋಟಿ. ಅದರಲ್ಲಿ ಹಿಂದೂಗಳು ಒಟ್ಟು ಜನಸಂಖ್ಯೆಯ ಶೇ.70.54, ಮುಸ್ಲಿಮರು ಶೇ.27.01, ಕ್ರೈಸ್ತರು ಶೇ.0.72 ಮತ್ತು ಬೌದ್ಧರು ಶೇ.0.31

ಪಶ್ಚಿಮ ಬಂಗಾಳದ ಒಟ್ಟು ಲೋಕಸಭಾ ಕ್ಷೇತ್ರಗಳು 42

ಇಲ್ಲಿನ 2019ರ ಲೋಕಸಭೆ ಚುನಾವಣೆಯಲ್ಲಿ ಟಿಎಂಸಿ 22 ಸ್ಥಾನಗಳು, ಬಿಜೆಪಿ 18 ಸ್ಥಾನಗಳು ಹಾಗೂ ಕಾಂಗ್ರೆಸ್ 2 ಸ್ಥಾನಗಳನ್ನು ಪಡೆದುಕೊಂಡಿದ್ದರೆ, 2014ರ ಚುನಾವಣೆಯಲ್ಲಿ ಟಿಎಂಸಿ 34 ಸ್ಥಾನಗಳು, ಕಾಂಗ್ರೆಸ್ 4 ಸ್ಥಾನಗಳು, ಸಿಪಿಐಎಂ 2 ಸ್ಥಾನಗಳು ಮತ್ತು ಬಿಜೆಪಿ 2 ಸ್ಥಾನಗಳನ್ನು ಪಡೆದುಕೊಂಡಿತ್ತು.

ಕಳೆದ ಚುನಾವಣೆಯ ಫಲಿತಾಂಶ ನೋಡಿಕೊಂಡರೆ, ಬಿಜೆಪಿ ತನ್ನ ಪ್ರಾಬಲ್ಯ ಸಾಧಿಸಿದ್ದನ್ನು ಗಮನಿಸಬಹುದು ಮತ್ತು ಅದು ಟಿಎಂಸಿಯ ಸ್ಥಾನಗಳನ್ನೇ ಆಕ್ರಮಿಸಿದೆ ಎಂಬುದು ಕೂಡ ಗಮನಿಸಬೇಕಿರುವ ವಿಚಾರ.

ಈ ಬಾರಿ ಪ್ರತಿಪಕ್ಷ ಮೈತ್ರಿಕೂಟ ‘ಇಂಡಿಯಾ’ ಬಿಜೆಪಿಗೆ ಎದುರಾಗಲಿರುವುದರಿಂದ ಒಟ್ಟಾರೆ ಸಮೀಕರಣ ಬದಲಾಗಲಿದೆ. ಬಿಜೆಪಿಗೆ ಇದು ಪ್ರಮುಖ ಸವಾಲಾಗಲಿದೆ ಎಂಬುದು ನಿಜ ಮತ್ತು ಒಂದು ರೀತಿಯಲ್ಲಿ ಬಿಜೆಪಿಗೆ ನಿರ್ಣಾಯಕವೂ ಆಗಿದೆ.

2019ರ ಚುನಾವಣೆಯಲ್ಲಿನ ಪ್ರಾಬಲ್ಯದ ಬಳಿಕ 2021ರ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಪ್ರಚಾರದ ನಡುವೆಯೂ ಬಿಜೆಪಿ ಸಾಧನೆ ಅಲ್ಲಿ ಹೇಳಿಕೊಳ್ಳುವಂತಿರಲಿಲ್ಲ.

ಆಡಳಿತಾರೂಢ ಟಿಎಂಸಿ ನಾಯಕಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿಯ ಅತ್ಯಂತ ಕಟು ಟೀಕಾಕಾರರು ಮತ್ತು ವಿರೋಧಿಗಳಲ್ಲಿ ಒಬ್ಬರಾಗಿದ್ದಾರೆ.

ಬಿಜೆಪಿಯ ರಾಜ್ಯ ಘಟಕದ ಎದುರು ಕೂಡ ಹಲವು ಸವಾಲುಗಳೇ ಇವೆ.

ಇದರ ನಡುವೆಯೂ 2024ರ ಚುನಾವಣೆಯಲ್ಲಿ 42 ಲೋಕಸಭಾ ಸ್ಥಾನಗಳಲ್ಲಿ ಕನಿಷ್ಠ 35 ಸ್ಥಾನಗಳನ್ನು ಗೆಲ್ಲಬೇಕೆಂಬ ಗುರಿಯೊಂದಿಗೆ ಬಿಜೆಪಿಯ ಕಸರತ್ತುಗಳು ಮತ್ತು ರಾಜಕೀಯ ಆಟ ಜಾರಿಯಲ್ಲಿವೆ.

ಆದರೆ ರಾಜ್ಯದಲ್ಲಿ ಬಿಜೆಪಿಯ ಸಂಘಟನಾತ್ಮಕ ಪ್ರಭಾವ ಕುಸಿಯುತ್ತಿದೆ ಎಂಬುದು ವಿಶ್ಲೇಷಕರ ಅಭಿಪ್ರಾಯ.

2021ರ ವಿಧಾನಸಭಾ ಚುನಾವಣೆ ಬಳಿಕ ಬಿಜೆಪಿಯ ಹಲವು ಶಾಸಕರು ಟಿಎಂಸಿಗೆ ಮರಳಿರುವುದು ಬಿಜೆಪಿಗೆ ದೊಡ್ಡ ಹಿನ್ನಡೆಯಾದಂತಾಗಿದೆ.

ಹೀಗಾಗಿ, ಮುಂದಿನ ಲೋಕಸಭಾ ಚುನಾವಣೆ ವೇಳೆ ಗಟ್ಟಿಯಾದ ಸಂಘಟನಾ ಸಾಮರ್ಥ್ಯ ತೋರಿಸುವ ಸ್ಥಿತಿಯಲ್ಲಿ ಬಿಜೆಪಿ ಇಲ್ಲ ಎನ್ನಲಾಗುತ್ತಿದೆ.

2021ರ ವಿಧಾನಸಭಾ ಚುನಾವಣೆಯ ನಂತರ, ಪಶ್ಚಿಮ ಬಂಗಾಳದಾದ್ಯಂತ ಬಿಜೆಪಿಯ ಸಂಘಟನಾ ಶಕ್ತಿ ಗಮನಾರ್ಹವಾಗಿ ಕ್ಷೀಣಿಸಿದೆ. 2019ರ ಲೋಕಸಭೆಯಲ್ಲಿ ಗೆದ್ದ ಸ್ಥಾನಗಳನ್ನು ಉಳಿಸಿಕೊಳ್ಳಲು ಅಥವಾ ಅದಕ್ಕಿಂತ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಬಿಜೆಪಿಗೆ ಈ ಸಂಘಟನಾ ಶಕ್ತಿಯ ಕೊರತೆ ದೊಡ್ಡ ಸವಾಲಾಗಿದೆ.

ಟಿಎಂಸಿ ವಿರುದ್ಧ ಇರುವ ಭ್ರಷ್ಟಾಚಾರ ಆರೋಪಗಳ ಹೊರತಾಗಿಯೂ, ಅಭಿಷೇಕ್ ಬ್ಯಾನರ್ಜಿ, ಅನುಬ್ರತಾ ಮೊಂಡಲ್ ಮೊದಲಾದ ನಾಯಕರು ಹಗರಣಗಳಲ್ಲಿ ಭಾಗಿಯಾಗಿರುವ ಆರೋಪಕ್ಕೆ ತುತ್ತಾಗಿದ್ದರೂ, ಟಿಎಂಸಿಗೆ ಪರ್ಯಾಯವಾಗಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಬೆಳೆಯಲು ಸಾಧ್ಯವಾಗಿಲ್ಲ.

ಎಡಪಕ್ಷಗಳು ಮತ್ತು ಕಾಂಗ್ರೆಸ್‌ನಂಥ ರಾಷ್ಟ್ರೀಯ ಪಕ್ಷ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ತಾನು ಗಟ್ಟಿ ನೆಲೆ ಕಂಡುಕೊಳ್ಳಬಹುದೆಂಬ ಬಿಜೆಪಿಯ ಲೆಕ್ಕಾಚಾರ ತಲೆಕೆಳಗಾಗಿದೆ.

ಬಿಜೆಪಿ ಬಂಗಾಳದ ನೆಲದ ಪಕ್ಷವಲ್ಲ ಎಂಬ ಮಮತಾ ಬ್ಯಾನರ್ಜಿಯವರ ಪ್ರತಿಪಾದನೆ, ಬಿಜೆಪಿಯ ಪಾಲಿಗೆ ದೊಡ್ಡ ಹೊಡೆತದಂತೆ ಕಾಡುತ್ತಿದೆ.

ಟಿಎಂಸಿ ಮಾಜಿ ನಾಯಕ ಸುವೆಂದು ಅಧಿಕಾರಿಯಂಥವರು ಬಿಜೆಪಿಯ ಭಾಗವಾಗುವ ಮೂಲಕ ಮಮತಾ ಬ್ಯಾನರ್ಜಿ ಸರಕಾರದ ವಿರುದ್ಧ ನಡೆಸಿದ ಪ್ರತಿಭಟನೆಗಳಿಗೂ ಪಕ್ಷದಲ್ಲೇ ಸರಿಯಾದ ಬೆಂಬಲ ವ್ಯಕ್ತವಾಗಿರಲಿಲ್ಲ ಎಂಬುದನ್ನು ಗಮನಿಸಬೇಕು.

ರಾಜ್ಯ ಬಿಜೆಪಿಯ ಮಾಜಿ ಅಧ್ಯಕ್ಷ ದಿಲೀಪ್ ಘೋಷ್ ಅವರನ್ನು ಬದಿಗೆ ಸರಿಸಿದ ಬಳಿಕ ಬಿಜೆಪಿ ನಾಯಕತ್ವದ ಕೊರತೆ ಎದುರಿಸುತ್ತಿದೆ.

ತಳಮಟ್ಟದ ಸಂಪರ್ಕವನ್ನು ಹೊಂದಿದ್ದ ದಿಲೀಪ್ ಘೋಷ್ ಅವರೊಂದಿಗೆ ಅವರ ನಿಕಟವರ್ತಿಗಳನ್ನೂ ಈಗಿನ ಬಿಜೆಪಿ ರಾಜ್ಯ ಘಟಕ ಮೂಲೆಗುಂಪು ಮಾಡಿದೆ.

ಇದರೊಂದಿಗೆ ಪಕ್ಷದ ರಾಜ್ಯ ನಾಯಕತ್ವದಲ್ಲಿ ಉಂಟಾಗಿರುವ ಒಡಕು ಕೂಡ ಅದರ ಶಕ್ತಿಯನ್ನು ಕುಂದಿಸಿದೆ. ಸುವೆಂದು ಅಧಿಕಾರಿ ಮತ್ತು ಸುಕಾಂತ ಮಜುಂದಾರ್ ನಡುವೆ ಬಿರುಕು ಉಂಟಾಗಿದೆ. ಇದರ ಪರಿಣಾಮವಾಗಿ ನೀತಿ ನಿರ್ಧಾರದ ವಿಚಾರದಲ್ಲಿ ಗೊಂದಲಗಳು ಮೂಡಿವೆ ಎನ್ನಲಾಗುತ್ತಿದೆ.

ಈ ಆಂತರಿಕ ಭಿನ್ನಾಭಿಪ್ರಾಯ 2024ರ ಚುನಾವಣೆಗೆ ಮೊದಲು ಪಕ್ಷದಲ್ಲಿ ಭಾರೀ ಬಿಕ್ಕಟ್ಟು ತಲೆದೋರಲು ಕಾರಣವಾಗಿದೆ. ಮೇಲ್ಮಟ್ಟದಿಂದ ತಳಮಟ್ಟದವರೆಗೆ ಇಡೀ ಪಕ್ಷ ಸಂಘಟನೆ ಅಸ್ತವ್ಯಸ್ತಗೊಂಡಿದೆ.

ಇದೆಲ್ಲದರ ನಡುವೆಯೇ, ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡದ (ಎಸ್‌ಟಿ) ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಬಿಜೆಪಿಗೆ ಬೆಂಬಲ ಕಡಿಮೆಯಾಗುತ್ತಿರುವುದು ಅದರ ಇನ್ನಷ್ಟು ಕಳವಳಕ್ಕೆ ಕಾರಣವಾಗಿದೆ.

2019ರ ಲೋಕಸಭಾ ಚುನಾವಣೆ ಮತ್ತು ನಂತರದ ವಿಧಾನಸಭಾ ಚುನಾವಣೆಯಲ್ಲಿ ಮಾಟುವಾ ಮತ್ತು ರಾಜಬನ್ಶಿ ಸಮುದಾಯ ದೊಡ್ಡ ಮಟ್ಟದಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದವು. ಆದರೆ ಚುನಾವಣೆಯಲ್ಲಿ ನೀಡಲಾಗಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿಚಾರದಲ್ಲಿ ಬಿಜೆಪಿ ವಿಳಂಬ ತೋರಿದ ಕಾರಣದಿಂದ ಆ ಸಮುದಾಯಗಳು ತೀವ್ರ ಅಸಮಾಧಾನಗೊಂಡಿವೆ ಎನ್ನಲಾಗಿದೆ.

ಇತ್ತೀಚಿನ ಪಂಚಾಯತ್ ಚುನಾವಣೆಗಳು ಮತ್ತು ಧುಪ್ಗುರಿ ಉಪಚುನಾವಣೆಯ ಸಮಯದಲ್ಲಿ, ಎಸ್‌ಸಿಗಳು ಬಿಜೆಪಿಯಿಂದ ದೂರವಿರುವುದು ಗಮನಾರ್ಹವಾಗಿ ಕಂಡುಬಂತು.

ಪಶ್ಚಿಮ ಬಂಗಾಳದ ಬುಡಕಟ್ಟು ಸಮುದಾಯಗಳು ಪ್ರಾಥಮಿಕವಾಗಿ ಜಂಗಲ್ ಮಹಲ್ ಪ್ರದೇಶದಲ್ಲಿ ಕೇಂದ್ರೀಕೃತವಾಗಿದ್ದು, ಹಿಂದೆ ಬಿಜೆಪಿಯನ್ನು ಬೆಂಬಲಿಸುತ್ತಿದ್ದ ಅವು ಈಗ ದೂರ ಸರಿಯುತ್ತಿವೆ.

ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ಬೆಂಬಲವಿಲ್ಲವಾಗುತ್ತಿರುವುದು ಕೂಡ ಬಿಜೆಪಿಗೆ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಸವಾಲಾಗಿದೆ.

ಹೀಗಾಗಿಯೇ, ಅಮಿತ್ ಶಾ ಮತ್ತೆ ಪೌರತ್ವ ಕಾಯ್ದೆ ಜಾರಿ ಪ್ರಸ್ತಾಪ ಮಾಡುತ್ತಿರುವುದು ಎಂದು ಟಿಎಂಸಿ ಆರೋಪಿಸಿದೆ.

ಇಂಥ ಹೊತ್ತಲ್ಲಿ ‘ಇಂಡಿಯಾ’ ಮೈತ್ರಿಕೂಟ ಬಿಜೆಪಿಯ ದೌರ್ಬಲ್ಯಗಳನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ.

ಸೀಟು ಹಂಚಿಕೆಯಂಥ ಹೆಜ್ಜೆಗಳನ್ನು ಕಾಂಗ್ರೆಸ್ ಮತ್ತು ಟಿಎಂಸಿ ಎಷ್ಟು ಪರಿಣಾಮಕಾರಿಯಾಗಿ ಇಡಲಿವೆ ಎಂಬುದು ಈಗ ಮುಖ್ಯವಾಗಲಿದೆ.

ಸೀಟು ಹಂಚಿಕೆಯ ಮಾತುಕತೆ ಇನ್ನು ಕೆಲ ದಿನಗಳಲ್ಲಿಯೇ ಮುಗಿಯಬಹುದು. ಅದಕ್ಕೂ ಮೊದಲು ಪಶ್ಚಿಮ ಬಂಗಾಳದ ಕಾಂಗ್ರೆಸ್ ನಾಯಕರು ಎಂಟು ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸುವುದಾಗಿ ಪಕ್ಷದ ರಾಷ್ಟ್ರೀಯ ನಾಯಕತ್ವಕ್ಕೆ ತಿಳಿಸಿದ್ದಾರೆ ಎಂದು ವರದಿಗಳು ಹೇಳುತ್ತಿವೆ.

ಪ್ರಸಕ್ತ ಕಾಂಗ್ರೆಸ್ ಪಕ್ಷ ಪಶ್ಚಿಮ ಬಂಗಾಳದಿಂದ ಇಬ್ಬರು ಸಂಸದರನ್ನು ಹೊಂದಿದೆ.

ಮುರ್ಷಿದಾಬಾದ್‌ನ ಮೂರು ಸ್ಥಾನಗಳು, ಮಾಲ್ಡಾದಿಂದ ಎರಡು ಹಾಗೂ ಪುರುಲಿಯಾ, ಡಾರ್ಜಿಲಿಂಗ್ ಮತ್ತು ರಾಯಗಂಜ್ ಕ್ಷೇತ್ರಗಳಿಂದ ಸ್ಪರ್ಧಿಸಲು ರಾಜ್ಯ ಕಾಂಗ್ರೆಸ್ ನಾಯಕರು ಬಯಸಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಟಿಎಂಸಿ ಅಥವಾ ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಬಯಸಿತ್ತು ಎನ್ನಲಾಗಿದೆ. ಆದರೆ ಟಿಎಂಸಿ-ಕಾಂಗ್ರೆಸ್-ಎಡಪಕ್ಷಗಳ ಮೈತ್ರಿ ಇರುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದು, ಇದಾವುದೂ ಅಧಿಕೃತವಾಗಿ ಪ್ರಕಟವಾಗಿಲ್ಲ.

‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿ ಟಿಎಂಸಿ ಇರುವ ಹಿನ್ನೆಲೆಯಲ್ಲಿ, ಸೀಟು ಹಂಚಿಕೆ ಕುರಿತ ನಿರ್ಧಾರ ಅಂತಿಮಗೊಂಡ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ.

ಬಿಜೆಪಿಯೊಂದಿಗೆ ನೇರ ಸ್ಪರ್ಧೆಯಿರುವ ದೇಶದ ಸುಮಾರು 300 ಸ್ಥಾನಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಬೇಕು ಮತ್ತು ಉಳಿದೆಡೆ ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸಬೇಕು ಎಂದು ಈಗಾಗಲೇ ಟಿಎಂಸಿ ಪ್ರಸ್ತಾಪ ಇಟ್ಟಿರುವ ಹಿನ್ನೆಲೆಯಲ್ಲಿ, ಪಶ್ಚಿಮ ಬಂಗಾಳ ಸೀಟು ಹಂಚಿಕೆ ವಿಚಾರವಾಗಿ ಅದರ ನಿಲುವು ಏನಿರಲಿದೆ ಎನ್ನುವುದು ಕುತೂಹಲ ಕೆರಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಹರೀಶ್ ಎಚ್.ಕೆ.

contributor

Similar News