ಮೋದಿ ಸರಕಾರದ ರೈತರ ‘ದುಪ್ಪಟ್ಟು ಆದಾಯ’ವೆಂಬ ‘ಮಾಸ್ಟರ್ ಸ್ಟ್ರೋಕ್’ನ ಅಸಲಿಯತ್ತೇನು?

Update: 2024-05-11 09:18 GMT

2014ರಿಂದ ಪ್ರತಿ ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ ದೇಶದ ರೈತರಿಗೆ ಆಕರ್ಷಕ ಹೆಡ್ಡಿಂಗುಗಳ ಭರವಸೆ ಕೊಡುತ್ತಾ ಬಂದಿದ್ದಾರೆ. ಅದಕ್ಕೆ ಪೂರಕವಾಗಿ ಮೋದಿ ಸರಕಾರದಿಂದ ರೈತರಿಗಾಗಿ ದೊಡ್ಡ ದೊಡ್ಡ ಬಜೆಟ್‌ಗಳು ಬಿಡುಗಡೆಯಾಗುತ್ತವೆ ಎಂದು ಸುದ್ದಿಯಾಗುತ್ತದೆ. ಆದರೆ ನಿಜವಾಗಿ ಆಗುತ್ತಿರುವುದೇನು?

ನೋಟ್ ಬ್ಯಾನ್, ಲಾಕ್‌ಡೌನ್, ಜಿಎಸ್‌ಟಿ ಜಾರಿ ಥರದ ಹಲವು ಮಾಸ್ಟರ್ ಸ್ಟ್ರೋಕ್‌ಗಳನ್ನು ನಾವು ನೋಡಿದ್ದೇವೆ. ಈ ದೇಶದ ರೈತರ ಜೀವನವನ್ನೇ ಬದಲಿಸಿಬಿಡುತ್ತೇವೆ ಎನ್ನುವ ಮೂಲಕ ಮೋದೀಜಿ ನೀಡಿದ್ದ ಮಾಸ್ಟರ್ ಸ್ಟ್ರೋಕ್ ಕೂಡ ಅಂಥದೇ ಒಂದು.

ಆದರೆ ಆ ಮಾಸ್ಟರ್ ಸ್ಟ್ರೋಕ್‌ನ ಅಸಲಿಯತ್ತು ಏನು ಅನ್ನುವುದು ಈಗ ಎಲ್ಲ ರೈತರಿಗೂ ಗೊತ್ತಾಗಿ ಹೋಗಿದೆ ಮತ್ತು ಚುನಾವಣೆ ಹೊತ್ತಿನಲ್ಲಿ ಬಿಜೆಪಿಗೆ ಅದು ತಿರುಗಿ ಹೊಡೆಯುವ ಹಾಗೆ ಕಾಣಿಸುತ್ತಿದೆ.

ರೈತರ ದುಪ್ಪಟ್ಟು ಆದಾಯದ ಹೆಸರಿನಲ್ಲಿ ಮೋದಿ ಸರಕಾರದ ನೌಟಂಕಿಗಳನ್ನು ‘ರಿಪೋರ್ಟರ್ಸ್ ಕಲೆಕ್ಟಿವ್’ ತನ್ನ ವರದಿಯಲ್ಲಿ ಬಟಾ ಬಯಲು ಮಾಡಿದೆ. ಗಿರೀಶ್ ಜಾಲೀಹಾಳ್ ಹಾಗೂ ನವ್ಯ ಅಸೋಪ ಅವರು ಈ ಬಗ್ಗೆ ವಿವರವಾದ ತನಿಖಾ ವರದಿ ಮಾಡಿದ್ದಾರೆ.

ಈ ಸಲದ ಚುನಾವಣೆಯಲ್ಲಿ ‘ಮೋದಿ ಕಿ ಗ್ಯಾರಂಟಿ’ ಎನ್ನುವುದನ್ನು ಮುಂದೆ ಮಾಡಿರುವ ಹಾಗೆ ಈ ಹಿಂದೆ ರೈತರ ಆದಾಯ ದುಪ್ಪಟ್ಟು ಎಂಬ, ಮೂಗಿಗೆ ತುಪ್ಪ ಸವರುವ ಸ್ಕೀಮ್ ಒಂದನ್ನು ಬಣ್ಣಬಣ್ಣಗಳಲ್ಲಿ ತೋರಿಸಲಾಯಿತು.

2014ರಲ್ಲಿ ಮೋದಿ, ತಾನು ಪ್ರಧಾನಿಯಾದರೆ ರೈತರ ಉತ್ಪಾದನಾ ವೆಚ್ಚದ ಕನಿಷ್ಠ ಅರ್ಧದಷ್ಟನ್ನು ಸರಕಾರವೇ ಭರಿಸುವುದಾಗಿ ಹೇಳಿಬಿಟ್ಟರು.

ಆ ನಂತರ ನೇರವಾಗಿ ರೈತರ ಆದಾಯವನ್ನು 6 ವರ್ಷಗಳಲ್ಲಿ ದುಪ್ಪಟ್ಟು ಮಾಡುವುದಾಗಿ ಹೇಳಿದರು.

ತುಂಬಾ ಸರಳವಾಗಿ ಹೇಳಬೇಕೆಂದರೆ, ಎಲ್ಲರ ಖಾತೆಗೂ 15 ಲಕ್ಷ ರೂ. ಹಾಕುವುದಾಗಿ ಭಾಷಣ ಮಾಡಿದ ಹಾಗೆ ರೈತರ ಮುಂದೆ ಕೂಡ ಮೋದಿ ಭರವಸೆಗಳ ಮಳೆಯನ್ನೇ ಸುರಿಸಿಬಿಟ್ಟಿದ್ದರು.

ಈಗ 5 ಟ್ರಿಲಿಯನ್ ಡಾಲರ್ ಕಥೆಯನ್ನು ಹೇಗೆ ಹೇಳಲಾಗು ತ್ತ್ತಿದೆಯೋ ಹಾಗೆಯೇ ಆಗ ರೈತರ ಆದಾಯ ದುಪ್ಪಟ್ಟಾಗುವುದರ ವಿಚಾರವನ್ನೂ ಭಾರೀ ಅಬ್ಬರದಿಂದ ಹೇಳಲಾಗುತ್ತಿತ್ತು.

ರೈತರಂತೂ ತಮ್ಮ ಅಚ್ಛೇ ದಿನಗಳು ಬಂದೇಬಿಟ್ಟವು ಎಂದು ನಂಬಿಕೊಂಡು ಕೂತುಬಿಟ್ಟಿದ್ದರು.

ರೈತರ ಆದಾಯ ಡಬಲ್ ಕಥೆ ಹೇಳುತ್ತ ಸರಕಾರ ಕೆಲವು ಹೊಸ ಯೋಜನೆಗಳನ್ನು ತಂದಿತು. ಆದರೆ ಅವು ಹಳೆ ಯೋಜನೆಗಳಿಗೇ ಹೊಸ ಬಣ್ಣ ಹೊಡೆದು ತಂದವಾಗಿದ್ದವು. ಯೋಜನೆ ತಮ್ಮದು ಅಂತ ಹೇಳಿಕೊಳ್ಳಲು ಏನೇನು ವೇಷ ತೊಡಿಸಬೇಕೋ ಅದೆಲ್ಲವನ್ನೂ ತೊಡಿಸಿ ತಂದಿದ್ದರು.

ಅಂತಹ ಒಂದು ಯೋಜನೆ PM AASHA, ಅಂದರೆ ‘ಪ್ರಧಾನ ಮಂತ್ರಿ ಅನ್ನದಾತ ಆಯ್ ಸಂರಕ್ಷಣ್ ಅಭಿಯಾನ್’.ಎಣ್ಣೆಕಾಳು ಮತ್ತು ಬೇಳೆಕಾಳುಗಳನ್ನು ಬೆಳೆಯುವ ರೈತರ ಆದಾಯ ರಕ್ಷಣೆಗಾಗಿ ಎಂದು ಆ ಯೋಜನೆಯ ಬಗ್ಗೆ ಹೇಳಲಾಗಿತ್ತು. ಕನಿಷ್ಠ ಬೆಂಬಲ ಬೆಲೆಯಲ್ಲಿ ರೈತರಿಂದ ನೇರವಾಗಿ ಖರೀದಿಸುವ ಮೂಲಕ ರೈತರ ಆದಾಯ ರಕ್ಷಣೆ ಎಂದು ಹೇಳಲಾಗಿತ್ತು. ಹರ್ಯಾಣದ ರೈತರು ಬಹು ಕಾಲದಿಂದ ಬೇಡಿಕೆಯಿಟ್ಟಿದ್ದ ಹಿನ್ನೆಲೆಯಲ್ಲಿ ಅದನ್ನು ಸರಕಾರ ಮಾಡಿತ್ತು.

ಆದರೆ ವಿಪರ್ಯಾಸ ನೋಡಿ, ಇವತ್ತು ಅದೇ ಹರ್ಯಾಣದ ರೈತರು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಗಾಗಿ ಬೀದಿಗಿಳಿದು ಹೋರಾಡಬೇಕಾಗಿದೆ.

ಆಗ ಚುನಾವಣೆ ಸಮಯವಾಗಿತ್ತು. 2018ರಲ್ಲಿ ಯೋಜನೆ ಜಾರಿಗೊಳಿಸಿದ ಮೋದಿ, ರೂ. 15,000 ಕೋಟಿ ಅನುದಾನವನ್ನೂ ಘೋಷಿಸಿದ್ದರು. ಆದರೆ ಆ 15,000 ಕೋಟಿಯಲ್ಲಿ ಎಷ್ಟನ್ನು ಖರ್ಚು ಮಾಡಲಾಯಿತು ಎನ್ನುವುದನ್ನು ಸರಕಾರ ಹೇಳಲೇ ಇಲ್ಲ.

ಮೀಡಿಯಾಗಳಲ್ಲಿ ಮಾತ್ರ ರೈತರ ಬಗ್ಗೆ ಅಪಾರ ಕರುಣೆ ಹರಿಸಲಾಯಿತು. ರೂ. 15,000 ಕೋಟಿ ವಿಚಾರವನ್ನು ಮತ್ತೆ ಮತ್ತೆ ತೋರಿಸಲಾಯಿತು. ಮತಗಳನ್ನು ಸೆಳೆದದ್ದೂ ಆಯಿತು. ಆ ಯೋಜನೆಯನ್ನು ಮಾಸ್ಟರ್ ಸ್ಟ್ರೋಕ್ ಎನ್ನಲಾಯಿತು. ಆಮೇಲೆ ಮಾಸ್ಟರ್ ಸ್ಟ್ರೋಕ್‌ನ ಅಸಲಿಯತ್ತು ಬಯಲಾಯಿತು.

ಕಾಂಗ್ರೆಸ್ ಇದ್ದಾಗಿನಿಂದಲೂ ರೈತರ ಬೆಳೆ ಖರೀದಿಗೆ ಕೇಂದ್ರ ಸರಕಾರ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಲೇ ಬಂದಿತ್ತು.

ಹೊಸ ಬಣ್ಣದಲ್ಲಿನ ಹಳೇ ಯೋಜನೆಗೆ ಮೋದಿ ಸರಕಾರ ಎರಡು ಅಂಶಗಳನ್ನು ಸೇರಿಸಿತ್ತು.

ಒಂದು, ಕನಿಷ್ಠ ಬೆಂಬಲ ಬೆಲೆಗೆ ಮಾರಲು ಆಗದೇ ಇದ್ದಲ್ಲಿ ಎಣ್ಣೆಕಾಳು ರೈತರಿಗೆ ನಗದು ಹಣ ನೀಡುವುದು. ಎರಡು, ಎಂಎಸ್‌ಪಿ ದರದಲ್ಲಿ ಫಸಲು ಖರೀದಿಗೆ ಖಾಸಗಿಯವರನ್ನು ಪ್ರಾಯೋಗಿಕವಾಗಿ ಇಳಿಸುವುದು.

ಹೀಗೆ ಸಣ್ಣದೊಂದು ಬದಲಾವಣೆ ಮಾಡಿ, ರೈತರ ಆದಾಯ ಡಬಲ್ ಯೋಜನೆ ಎಂದು ಹೇಳಲಾಯಿತು. ಅಂತೂ 2022ರೊಳಗಾಗಿ ರೈತರ ಆದಾಯ ಡಬಲ್ ಆಗುತ್ತದೆ ಎಂದು ರೈತರನ್ನೆಲ್ಲ ನಂಬಿಸಲಾಯಿತು.

ರಿಪೋರ್ಟರ್ಸ್ ಕಲೆಕ್ಟಿವ್ ತನಿಖೆಯ ಪ್ರಕಾರ, ಈ ಯೋಜನೆಯಲ್ಲಿ ಸರಕಾರ ಖರ್ಚು ಮಾಡಿದ್ದು ಎರಡೇ ಬಾರಿ. 2019ರ ಚುನಾವಣೆಗೆ ಮೊದಲು ಒಂದು ಸಲ ಹಾಗೂ ಈಗ 2024ರ ಚುನಾವಣೆ ಹೊತ್ತಿನಲ್ಲಿ ಇನ್ನೊಮ್ಮೆ.

ಈ ನಡುವಿನ ಅವಧಿಯಲ್ಲಿ ಈ ಯೋಜನೆಗಾಗಿ ಒಂದು ಪೈಸೆಯನ್ನೂ ಮೋದಿ ಖರ್ಚು ಮಾಡಿಲ್ಲ. ದೇಶದ ಶೇ.55ರಷ್ಟು ಜನರು ಕೃಷಿಯನ್ನೇ ನೆಚ್ಚಿಕೊಂಡವರು. ಅಷ್ಟು ದೊಡ್ಡ ಸಂಖ್ಯೆಯಲ್ಲಿರುವ ರೈತರ ವಿಚಾರದಲ್ಲಿ ಮೋದಿ ಇಂಥದೊಂದು ವಂಚನೆ ಎಸಗಿದ್ದರು. ಆದರೆ ಜನರಿಗೆ ಈ ನೌಟಂಕಿ ಸರಿಯಾಗಿ ಅರ್ಥವಾಗಿದ್ದೇ ಆದಲ್ಲಿ, ಈ ಸಲದ ಚುನಾವಣೆಯಲ್ಲಿ ಮೋದಿಗೆ ಖಂಡಿತ ಕಷ್ಟವಿದೆ.

ಈಗಾಗಲೇ ಗೊತ್ತಿರುವಂತೆ 2018ರಲ್ಲಿ ಈ ಯೋಜನೆ ಜಾರಿಗೆ ಬಂತು. 15,000 ಕೋಟಿ ರೂ. ತೆಗೆದಿಡಲಾಯಿತು. ಯೋಜನೆಯ ಮೊದಲ 6 ತಿಂಗಳುಗಳಲ್ಲಿ ರೂ. 5,000 ಕೋಟಿ ಖರ್ಚು ಮಾಡಲಾಯಿತು.

ಅದರಲ್ಲಿ ಶೇ.70ರಷ್ಟನ್ನು 2019ರ ಲೋಕಸಭಾ ಚುನಾವಣೆಗೆ ಎರಡು ತಿಂಗಳ ಮೊದಲು ಖರ್ಚು ಮಾಡಲಾಯಿತು ಮತ್ತು ಮೋದಿ ಬಹುಮತದೊಡನೆ ಗೆದ್ದರು.

2019ರ ಮೇನಲ್ಲಿ ಮತ್ತೆ ಗದ್ದುಗೆ ಏರಿದ ಮೋದಿ, ಈ ಯೋಜನೆ ಮುಂದುವರಿಯಲಿದೆ ಎಂದರು.

2019-2020ರಲ್ಲಿ 1,500 ಕೋಟಿ ರೂ. ಈ ಯೋಜನೆಗೆ ಹಂಚಿಕೆ ಮಾಡಲಾಯಿತು. 15,000 ಕೋಟಿ ಎಂದದ್ದು ಅಲ್ಲೇ ಉಳಿಯಿತು. ಅದರಲ್ಲೂ ರೂ. 1,500 ಕೋಟಿಯ ಶೇ.20ರಷ್ಟನ್ನು ಮಾತ್ರ ಎಣ್ಣೆಕಾಳು ಬೆಳೆಗಾರರಿಗೆ ಬೆಂಬಲವಾಗಿ ಖರ್ಚು ಮಾಡಲಾಯಿತು. ಹೇಳಿದ್ದರಲ್ಲಿ ಈಗಾಗಲೇ ಶೇ.90ರಷ್ಟನ್ನು ಕಡಿತ ಮಾಡಲಾಗಿತ್ತು. ರೈತರ ಪಾಲಿನ ಅಚ್ಛೇ ದಿನಗಳು ಮೋಡದ ಹಾಗೆ ದೂರ ತೇಲಿಹೋದವು.

2020-2021 ಹಾಗೂ 2021-2022ರಲ್ಲಿ ನಯಾಪೈಸೆಯನ್ನೂ ಖರ್ಚು ಮಾಡಲಿಲ್ಲ.

ಈ ವರ್ಷಗಳಿಗಾಗಿ 500 ಕೋಟಿ ತೆಗೆದಿಡಲಾಗಿತ್ತಾದರೂ, ಖರ್ಚು ಮಾಡಲೇ ಇಲ್ಲ.

ಆದರೆ, ಎಲೆಕ್ಷನ್ ಹೊತ್ತಿನ ಮೋದಿ ಮ್ಯಾಜಿಕ್ ನೋಡಿ. ಬಜೆಟ್ ಹಂಚಿಕೆ ಬರೀ 1 ಲಕ್ಷ ರೂ. ಇತ್ತು. ಆದರೆ 2,200 ಕೋಟಿ ಆಯೋಜಿತ ಹಣ ಇದ್ದಕ್ಕಿದ್ದಂತೆ ಈ ಯೋಜನೆಗೆ ಬಂತು.

ಇದು ಚುನಾವಣೆಯ ಮಹಿಮೆ.

ಹೀಗೆ ವರ್ಷವೂ ಚುನಾವಣೆ ಬರುವ ಹಾಗಿದ್ದರೆ, ರೈತರು ಮತ್ತು ಬಡವರು ತಮಗೆ ನ್ಯಾಯವಾಗಿ ಬರಬೇಕಿರುವುದನ್ನಾದರೂ ಮೋದಿ ಸರಕಾರದಿಂದ ಪಡೆಯಬಹುದಿತ್ತೋ ಏನೋ.

15,000 ಕೋಟಿ ರೂ. ಎಂದಿದ್ದದ್ದು ನಂತರ 1,500 ಕೋಟಿ ಆಯಿತು, ನಂತರ 500 ಕೋಟಿ, ಮತ್ತೆ 500 ಕೋಟಿ ಆಯಿತು, ಆಮೇಲೆ ಬರೀ 1 ಲಕ್ಷ ಆಯ್ತು. ಆನಂತರ ಬಂತು 2,200 ಕೋಟಿ ರೂ.!. ಈ ಯೋಜನೆಯ ಏರಿಳಿತ ಎಂಥದು ನೋಡಿ. ಇದನ್ನು ಏನೆಂದು ಅರ್ಥ ಮಾಡಿಕೊಳ್ಳಬಹುದು?

ಚುನಾವಣೆ ಹೊತ್ತಿಗೆ ರೈತರಿಗೆ ಲಾಲಿಪಾಪ್ ಕೊಟ್ಟು ಕೂರಿಸಲಾಗುತ್ತಿದೆ. ಆಮೇಲೆ ರೈತರಿಗೆ ಏನಾಯಿತು ಎಂದು ಸರಕಾರ ಕಣ್ಣೆತ್ತಿಯೂ ನೋಡುವುದಿಲ್ಲ. ಮತ್ತೆ ಇನ್ನೊಂದು ಚುನಾವಣೆ ಸಮಯದಲ್ಲಿ ಮಾತ್ರವೇ ಅವರಿಗಾಗಿ ಯೋಜನೆಗಳು ಬರುತ್ತವೆ.

ಆದರೆ, ಕೃಷಿ ಸ್ಥಾಯಿ ಸಮಿತಿಯ ಅಧ್ಯಕ್ಷ, ಬಿಜೆಪಿಯ ಸಂಸದ ಪಿ.ಸಿ. ಗದ್ದೀಗೌಡರ್ ಸುಳ್ಳನ್ನು ಬಯಲು ಮಾಡಿದ್ದಾರೆ. ಯಾಕೆ ಈ ಯೋಜನೆಯ ಹಣ ಖರ್ಚು ಮಾಡುತ್ತಿಲ್ಲ ಎಂದು ಕೇಳಿದ್ದಾರೆ. ಅದಕ್ಕೆ ಯಾರೂ ಕೇಳುತ್ತಲೇ ಇಲ್ಲ ಎಂದೇ ಸರಕಾರ ಹೇಳುತ್ತದೆ.

ಯೋಜನೆ ರೂಪಿಸುವಲ್ಲಿನ ಅಸಮರ್ಥತೆ ಮತ್ತು ಅವೈಜ್ಞಾನಿಕ ಅನುಷ್ಠಾನಗಳೇ ಹಣ ಖರ್ಚಾಗದಿರಲು ಕಾರಣ. ಆದರೆ ಯೋಜನೆ ಬಗೆಗಿನ ಅಬ್ಬರದ ಮಾತುಗಳು ಮಾತ್ರ ನಿಲ್ಲುವುದೇ ಇಲ್ಲ.

ಸರಕಾರದ್ದೇ ಅಂಕಿಅಂಶಗಳು ಹೇಳುವ ಹಾಗೆ, ಅಕ್ಟೋಬರ್ 2018ರಿಂದ ಜನವರಿ 2023ರವರೆಗೆ ಬೇಳೆಕಾಳುಗಳು ಮತ್ತು ಎಣ್ಣೆಕಾಳುಗಳ ಬೆಲೆ ಎಂಎಸ್‌ಪಿಗಿಂತ ಕಡಿಮೆಯಿದ್ದವು. ಅಂದರೆ ಈ ಅವಧಿಯಲ್ಲಿ ಸರಕಾರದಿಂದ ರೈತರಿಗೆ ಹಣ ಬರಬೇಕಿತ್ತು. ಆದರೆ ಬರಲೇ ಇಲ್ಲ.

ಸಂಸದೀಯ ಸ್ಥಾಯಿ ಸಮಿತಿ ವರದಿ ಸಾರ್ವಜನಿಕ ಚರ್ಚೆಗೇ ಬರುವುದಿಲ್ಲ. ಒಂದು ವೇಳೆ ಅದು ಚರ್ಚೆಗೆ ಬಂದಿದ್ದರೆ, ರೈತರನ್ನು ವೋಟ್ ಬ್ಯಾಂಕ್ ಆಗಿ ತನಗೆ ಬೇಕಾದಂತೆ ಸರಕಾರ ಬಳಸಿ ಆಮೇಲೆ ಕೈ ತೊಳೆದುಕೊಳ್ಳುತ್ತಿದೆ ಎಂಬುದು ಬಯಲಾಗುತ್ತಿತ್ತು.

ಇಷ್ಟೆಲ್ಲ ಆದಮೇಲೂ ಮೋದಿ ಈ ಯೋಜನೆಯನ್ನು ಯಶಸ್ವಿ ಯೋಜನೆ ಎನ್ನುತ್ತಿದ್ದಾರೆ.

ಆದರೆ ಯಾರಿಗೂ ಇದೊಂದು ವಿಚಾರವಾಗಿ ಕಾಣಿಸುವುದೇ ಇಲ್ಲ. ಗೋದಿ ಮೀಡಿಯಾಗಳಲ್ಲಂತೂ ಇದು ಚರ್ಚೆಯಾಗುವುದೇ ಇಲ್ಲ.

ಆದರೆ ರೈತರಿಗೆ ದೇಶದಲ್ಲಿ ಏನಾಗುತ್ತಿದೆ ಎಂಬುದು ಗೊತ್ತಿದೆ. ಒಂದು ಸಲ ಅವರು ಜಾಗೃತರಾದರೆ, ಯಾವುದೇ ಸರಕಾರಕ್ಕೂ ಅವರನ್ನು ಎದುರಿಸಲಾಗದು.

ಕಳೆದ ಕೆಲ ವರ್ಷಗಳಲ್ಲಿ ರೈತರ ವಿಚಾರವಾಗಿ ಸರಕಾರ ಹೇಗೆ ನಡೆದುಕೊಂಡಿದೆ ಎಂಬುದು ಗೊತ್ತಿರದೇ ಇರುವ ವಿಚಾರವಲ್ಲ.

ಎನ್‌ಸಿಆರ್‌ಬಿ ಡೇಟಾ ಪ್ರಕಾರ, ನಿತ್ಯವೂ 30 ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.

ರೈತರ ಆದಾಯ ದುಪ್ಪಟ್ಟು ಯೋಜನೆಯಲ್ಲಿ ರಾಜಕೀಯ ಬೆರೆತಿದ್ದರೆ ಸರಕಾರಕ್ಕೇ ಅದರ ಏಟು ಬೀಳಲಿದೆ. 400 ಅಂತಿರುವುದು 200ಕ್ಕೂ ಇಳಿಯಬಹುದು.

ಸುಳ್ಳುಗಳು, ಕಾಪಟ್ಯದ ಮೂಲಕವೇ ಗೆಲ್ಲುವ, ಮತ್ತದನ್ನು ತಮ್ಮ ಜಾಣತನ ಎಂದೇ ಭ್ರಮಿಸುವ ಮಂದಿಗೆ, ಶೋಕಿ ಯೋಜನೆ ಮೂಲಕ ರೈತರನ್ನು ವಂಚಿಸಿದವರಿಗೆ ಈ ಚುನಾವಣೆ ಪಾಠ ಕಲಿಸೀತೆ?

ಕೃಪೆ: reporters-collective.in

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎಸ್. ಸುದರ್ಶನ್

contributor

Similar News