ಆರ್ಯನ್ ಮಿಶ್ರಾ ಹತ್ಯೆ ಮಾಡಿದವರ ಹಿನ್ನೆಲೆ ಏನು?
ಏಕೆ ಹಂತಕರ ಹಿನ್ನೆಲೆಯನ್ನು ಬಹಿರಂಗಪಡಿಸುತ್ತಿಲ್ಲ? ಪೊಲೀಸರ ಕಾರಣದಿಂದಲೇ ಅವರೆಲ್ಲ ನಿರ್ಭೀತರಾಗಿದ್ದಾರೆಯೆ? ಇವರಿಗೆ ಗೋರಕ್ಷಣೆಗಾಗಿ ಮತ್ತು ಬೇರೆಯವರ ಮೇಲೆ ಗುಂಡು ಹಾರಿಸಲು ಲೈಸೆನ್ಸ್ ಕೊಟ್ಟಿದ್ದವರು ಯಾರು? ಪೊಲೀಸರು ಮನಸ್ಸು ಮಾಡಿದ್ದರೆ ಬಂಧಿತರ ಹಿನ್ನೆಲೆ ತಿಳಿಯಲು ಹೆಚ್ಚು ಹೊತ್ತು ಬೇಕಿಲ್ಲ. ಆದರೆ ಪೊಲೀಸರೇ ಅವರ ಹಿನ್ನೆಲೆ ಬಚ್ಚಿಡಲು ನಿಂತುಬಿಟ್ಟರೆ?
ಆಗಸ್ಟ್ 23ರಂದು ಹರ್ಯಾಣದ ಫರೀದಾಬಾದ್‌ನಲ್ಲಿ ಗೋ ಕಳ್ಳಸಾಗಣೆ ಮಾಡುವವನೆಂದು ತಪ್ಪಾಗಿ ಭಾವಿಸಿ ಆರ್ಯನ್ ಮಿಶ್ರಾ ಎಂಬ 12ನೇ ತರಗತಿಯ ವಿದ್ಯಾರ್ಥಿಯನ್ನು ಬೆನ್ನಟ್ಟಿದ ಐವರ ತಂಡ ಆತನನ್ನು ಗುಂಡಿಕ್ಕಿ ಕೊಂದಿದೆ.
ಹಾಗೆಂದು ವರದಿಗಳು ಹೇಳುತ್ತಿವೆ. ಆದರೆ, ನಿಜವಾಗಿಯೂ ಆತ ಸ್ಮಗ್ಲರ್ ಎಂದು ಭಾವಿಸಿ ಗುಂಡು ಹಾರಿಸಲಾಯಿತೆ? ಅಷ್ಟಕ್ಕೂ ಖಾಸಗಿ ವ್ಯಕ್ತಿಗೆ ಇನ್ನಾರದೋ ಮೇಲೆ ಗುಂಡು ಹಾರಿಸುವ ಹಕ್ಕಿದೆಯೇ? ಯಾವ ಕಾನೂನಿನ ಅಡಿಯಲ್ಲಿ ಗುಂಡು ಹಾರಿಸುವ ಹಕ್ಕನ್ನು ಆತನಿಗೆ ನೀಡಲು ಸಾಧ್ಯ? ಆರೋಪಿಗಳಾದ ಅನಿಲ್ ಕೌಶಿಕ್ ಮತ್ತಿತರರು ಯಾರು? ಅವರು ಯಾವ ಸಂಘಟನೆಗೆ ಸೇರಿದವರು? ಯಾವ ಪಕ್ಷಕ್ಕೆ ಸೇರಿದವರು?
ಈ ಯಾವ ಪ್ರಶ್ನೆಗಳಿಗೂ 10 ದಿನಗಳ ಬಳಿಕವೂ ಪೊಲೀಸರು ಉತ್ತರ ಹೇಳಿಲ್ಲ.
ಆಗಸ್ಟ್ 23ರ ರಾತ್ರಿ ಈ ಘಟನೆ ನಡೆದಿದ್ದರೆ, ಸೆಪ್ಟಂಬರ್ 3ರಂದು ಪೊಲೀಸರು ಸುದ್ದಿಗೋಷ್ಠಿ ನಡೆಸುತ್ತಾರೆ. ಆದರೆ ಹತ್ಯೆ ಆರೋಪದಲ್ಲಿ ಬಂಧಿತರಾದ ಅನಿಲ್ ಕೌಶಿಕ್, ಸೌರಭ್, ವರುಣ್, ಕೃಷ್ಣ ಮತ್ತು ಆದೀಶ್ ಈ ಐವರು ಯಾವ ಸಂಘಟನೆಗೆ ಸೇರಿದ ವರು, ಅದರ ಹೆಸರೇನು, ಅದರೊಂದಿಗೆ ಇವರ ಸಂಬಂಧವೇನು, ಆ ಸಂಘಟನೆಯ ಕೆಲಸವೇನು ಈ ಯಾವುದರ ಬಗ್ಗೆಯೂ ಪೊಲೀಸರ ಬಳಿ ಮಾಹಿತಿಯೇ ಇಲ್ಲ. ಪೊಲೀಸರು ಹೆಸರುಗಳನ್ನು ಮಾತ್ರ ಬಹಿರಂಗಪಡಿಸಿದ್ದಾರೆ. ಆದರೆ ಅವರ ಗುರುತನ್ನು ಬಹಿರಂಗಪಡಿಸಿಲ್ಲ.
ಅವರು ಮಾಡಿರುವ ತಪ್ಪು ಎಷ್ಟು ಘೋರವೇ ಆದರೂ ಅವರು ಯಾರೆಂಬುದು ಸಾರ್ವಜನಿಕರಿಗೆ ತಿಳಿಯಬಾರದೆ? ಹೀಗೆ ಗುರುತು ಮರೆಮಾಚುವ ಮೂಲಕ ಪೊಲೀಸರೇ ಅವರಿಗೆ ರಕ್ಷಕರಾಗಿ ನಿಂತಿದ್ದಾರೆಯೆ? ಏಕೆ ಅವರ ಹಿನ್ನೆಲೆಯನ್ನು ಬಹಿರಂಗಪಡಿಸುತ್ತಿಲ್ಲ? ಪೊಲೀಸರ ಕಾರಣದಿಂದಲೇ ಅವರೆಲ್ಲ ನಿರ್ಭೀತರಾಗಿದ್ದಾರೆಯೆ? ಇವರಿಗೆ ಗೋರಕ್ಷಣೆಗಾಗಿ ಮತ್ತು ಬೇರೆಯವರ ಮೇಲೆ ಗುಂಡು ಹಾರಿಸಲು ಲೈಸೆನ್ಸ್ ಕೊಟ್ಟಿದ್ದವರು ಯಾರು?
ಪೊಲೀಸರು ಮನಸ್ಸು ಮಾಡಿದ್ದರೆ ಬಂಧಿತರ ಹಿನ್ನೆಲೆ ತಿಳಿಯಲು ಹೆಚ್ಚು ಹೊತ್ತು ಬೇಕಿಲ್ಲ. ಆದರೆ ಪೊಲೀಸರೇ ಅವರ ಹಿನ್ನೆಲೆ ಬಚ್ಚಿಡಲು ನಿಂತುಬಿಟ್ಟರೆ?
ವರದಿ ಪ್ರಕಾರ, ಮುಖ್ಯ ಆರೋಪಿ ಅನಿಲ್ ಕೌಶಿಕ್ ಲೈವ್ ಫಾರ್ ನೇಷನ್ ಎಂಬ, ಗೋ ರಕ್ಷಣೆ ಉದ್ದೇಶದ ಸಂಘಟನೆಗೆ ಸೇರಿದವನು.
ಹತ್ಯೆಯಾದ ಆರ್ಯನ್ ಮಿಶ್ರಾನ ತಂದೆ ಕೊಟ್ಟಿದ್ದ ದೂರಿನಲ್ಲಿ ಗೋ ರಕ್ಷಕರ ಪ್ರಸ್ತಾವವಿಲ್ಲ. ಆರ್ಯನ್ ಸ್ನೇಹಿತರಲ್ಲಿಯೇ ಆತನಿಗೆ ಆಗದ ಯಾರೋ ದುಷ್ಮನ್ ಗಳಿದ್ದರೆಂಬುದು ಅವರ ಭಾವನೆಯಾಗಿತ್ತು.
ಗೆಳೆಯರೊಂದಿಗೆ ಕಾರಿನಲ್ಲಿ ಹೋಗುತ್ತಿದ್ದ ಆರ್ಯನ್ ಅನ್ನು ಇನ್ನೊಂದು ಕಾರಿನಲ್ಲಿ ಬೆನ್ನಟ್ಟಿದ್ದ ಆರೋಪಿಗಳು ಕೊಂದು ಮುಗಿಸಿದ್ದಾರೆ.
ಎಫ್‌ಐಆರ್ ಪ್ರಕಾರ, ಆರ್ಯನ್ ಇದ್ದ ಕಾರಿನಲ್ಲಿ ಹರ್ಷಿತ್ ಗುಲಾಟಿ, ಸುಜಾತಾ ಗುಲಾಟಿ, ಶಾಂಕಿ, ಸಾಗರ್ ಗುಲಾಟಿ ಹಾಗೂ ಕೀರ್ತಿ ಶರ್ಮಾ ಎಂಬವರೂ ಇದ್ದರು.
ಆದರೆ ಗುಂಡು ಆರ್ಯನ್‌ಗೆ ಮಾತ್ರ ತಗಲಿದೆ.
ಆರ್ಯನ್‌ನನ್ನು ಗೋ ಕಳ್ಳಸಾಗಣೆದಾರ ಎಂದು ಭಾವಿಸಿ ಕೊಂದಿರಬೇಕು ಇಲ್ಲವೇ ವಿಷಯ ಬೇರೆ ಏನೋ ಇರಬೇಕು.
ಆರ್ಯನ್ ಇದ್ದ ಕಾರನ್ನು ಬೆನ್ನಟ್ಟಿದ್ದ ಕಾರು ಅದಕ್ಕಾಗಿಯೇ ತಯಾರಾಗಿ ನಿಂತಿತ್ತೆ? ಎಂಬ ಪ್ರಶ್ನೆಯೂ ಏಳುತ್ತದೆ.
ಒಂದು ವೇಳೆ ಆತ ಗೋ ಕಳ್ಳಸಾಗಣೆದಾರನೇ ಆಗಿದ್ದರೂ ಆತನ ಮೇಲೆ ಗುಂಡು ಹಾರಿಸಲು ಇವರಿಗೇನು ಅಧಿಕಾರವಿತ್ತು? ಗುಂಡಿಕ್ಕಿ ಕೊಂದು ಕಡೆಗೆ ಬಚಾವಾಗಲು ಗೋ ರಕ್ಷಣೆಯ ಕಥೆ ಹೆಣೆದಿರಬಹುದೆ?
ಗೋ ರಕ್ಷಣೆ ಹೆಸರಲ್ಲಿ ರಸ್ತೆಯಲ್ಲಿ ದಾಂಧಲೆ ಮಾಡುವ, ಗುಂಡಿನ ದಾಳಿ ನಡೆಸುವ ಈ ಜನರು ಯಾರು? ಆರ್ಯನ್‌ನನ್ನು ಕೊಂದವರ ಹಿನ್ನೆಲೆಯೇ ಪೊಲೀಸರಿಗೆ ಹತ್ತು ದಿನಗಳ ಬಳಿಕವೂ ಸಿಕ್ಕಿಲ್ಲವೆಂದರೆ ಏನರ್ಥ? ನಿಜವಾಗಿಯೂ ಬೇರೇನೋ ನಡೆದಿದ್ದು, ಈಗ ಗೋ ಕಳ್ಳಸಾಗಣೆ ಮತ್ತು ಗೋ ರಕ್ಷಕರು ಎಂಬ ಕಥೆ ಕಟ್ಟಲಾಗಿದೆಯೆ?
ಕ್ಲೋಸ್ ರೇಂಜ್‌ನಿಂದ ಗುಂಡು ಹಾರಿಸಿ, ಆರ್ಯನ್‌ಗೆ ಆದು ತಗಲುತ್ತಿದ್ದಂತೆ ಆ ಕಾರಿನ ಹಿಂಬದಿ ಸೀಟಿನಲ್ಲಿ ಮಹಿಳೆ ಕೂತಿರುವುದು ಕಂಡಿದೆ. ಆಗ ಆರೋಪಿಗಳಿಗೆ ತಮ್ಮಿಂದಾದ ತಪ್ಪು ಗೊತ್ತಾಗಿದೆ ಎಂಬುದು ಪೊಲೀಸ್ ಅಧಿಕಾರಿಯೊಬ್ಬರ ವಿವರಣೆ.
ಪತ್ರಿಕೆಗೆ ಅನಿಲ್ ಕೌಶಿಕ್ ಸಂಘಟನೆ ಬಗ್ಗೆ ಗೊತ್ತಾಗು ತ್ತದೆ. ಆದರೆ ಪೊಲೀಸರಿಗೆ ಏಕೆ ತಿಳಿಯುವುದಿಲ್ಲ? ಹತ್ಯೆ ಆರೋಪ ಹೊತ್ತವರನ್ನು ಗೋ ರಕ್ಷಕರು ಎಂಬ ಹೆಸರಿನಲ್ಲಿ ರಕ್ಷಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆಯೆ? ಹಾಗೆಂದು ಹತ್ಯೆ ಮಾಡಿದವರು ಗೋ ರಕ್ಷಕರೇ ಆದರೆ ಅವರನ್ನು ಪೊಲೀಸರು ಪಾರು ಮಾಡುತ್ತಾರೆಯೆ? ಮುಸ್ಲಿಮ್ ಆರೋಪಿಗಳ ಹೆಸರುಗಳು ಕಂಡ ತಕ್ಷಣ ಅಬ್ಬರಿಸುವ ಮಂದಿ ಈಗ ಬಾಯ್ಮುಚ್ಚಿ ಕುಳಿತಿರುವುದೇಕೆ? ಮುಸ್ಲಿಮರನ್ನು ಗೋವಿನ ಹೆಸರಲ್ಲಿ ನಡುಬೀದಿಯಲ್ಲೇ ಕೊಂದುಹಾಕುವ ಇದೇ ಮತಾಂಧ ಹುಡುಗರನ್ನು ಗೌರವದಿಂದ, ಹೆಮ್ಮೆಯಿಂದ ಕಾಣಲಾಗುತ್ತದೆಯಲ್ಲವೇ ಎಂದು ಕೇಳುತ್ತಾರೆ ಖ್ಯಾತ ಪತ್ರಕರ್ತ ರವೀಶ್ ಕುಮಾರ್ ಬಂದೂಕು ಹಿಡಿದುಕೊಂಡು ರಾತ್ರಿ ರಸ್ತೆಯಲ್ಲಿ ನಿಲ್ಲುವುದಕ್ಕೆ, ಬಂದ ವಾಹನಗಳನ್ನೆಲ್ಲ ಪರಿಶೀಲಿಸುತ್ತ ಅಬ್ಬರಿಸುವುದಕ್ಕೆ ಇವರನ್ನು ಬಿಡುವವರು ಯಾರು? 2016ರಲ್ಲಿ ಮೋದಿ ‘‘ಈ ಗೋರಕ್ಷಕರ ಮೇಲೆ ಸಿಟ್ಟು ಬರುತ್ತದೆ. ಇವರು ರಾತ್ರಿಯಲ್ಲಿ ಅವರಾಧಿಗಳಾಗಿರುತ್ತಾರೆ. ಹಗಲಲ್ಲಿ ಗೋರಕ್ಷಕರಾ ಗುತ್ತಾರೆ. ಇವರ ಬಗ್ಗೆ ತನಿಖೆಯಾದರೆ ಶೇ. 80ರಷ್ಟು ಗೋರಕ್ಷಕರು ನಕಲಿಗಳು’’ ಎಂದಿದ್ದರು.
ಗೋರಕ್ಷಕರ ಹೆಸರಿನಲ್ಲಿ ಅಂಗಡಿ ತೆರೆದುಕೊಂಡು ಕೂತವರಲ್ಲಿ ಎಷ್ಟೋ ಮಂದಿ ಗೂಂಡಾಗಳು ಎಂದು ಮೋದಿ ಹೇಳಿದ್ದು ಸತ್ಯವಿತ್ತು. ಆದರೆ ಇಷ್ಟು ಹೇಳಿದ್ದ ಮೋದಿ ಮತ್ತೆಂದಾದರೂ ಈ ವಿಚಾರ ಎತ್ತಿದರಾ?
ಆರ್ಯನ್‌ಗೆ ಬೆನ್ನಟ್ಟಿ ಬಂದ ಕಾರಿನಿಂದ ಒಂದು ಗುಂಡು ಹಾರಿಸಿದಾಗ ಹಿಂಬದಿಯಿಂದ ತಲೆಗೆ ಹೊಕ್ಕಿದೆ. ಆದರೆ ಎದುರಿಂದ ತಗಲಿದ ಗುಂಡು ಯಾವುದು ಎಂಬುದು ಅರ್ಥವಾಗುತ್ತಿಲ್ಲ ಎನ್ನುತ್ತಿದ್ದಾರೆ ಆತನ ತಂದೆ.
ಪೊಲೀಸರೇಕೆ ಏನನ್ನೂ ಹೇಳುತ್ತಿಲ್ಲ? ಎಲ್ಲವನ್ನೂ ಸ್ಪಷ್ಟವಾಗಿ ಹೇಳಬೇಕಲ್ಲವೆ?
2018ರಲ್ಲಿ ಸುಪ್ರೀಂ ಕೋರ್ಟ್ ಗುಂಪು ಹಲ್ಲೆಗಳ ವಿಚಾರವಾಗಿ ವ್ಯಾಪಕವಾದ ಮಾರ್ಗದರ್ಶಿ ಸೂತ್ರಗಳನ್ನು ನೀಡಿತ್ತು ಮತ್ತು ಪ್ರತೀ ಜಿಲ್ಲೆಯಲ್ಲಿ ಸಂಭವಿಸುವ ಇಂಥ ಪ್ರಕರಣಗಳ ವಿಚಾರವಾಗಿ ಹೇಗೆ ಕಣ್ಣಿಡಬೇಕು ಮತ್ತು ಹೇಗೆ ಕ್ರಮ ಕೈಗೊಳ್ಳಬೇಕು ಎಂಬುದನ್ನು ಹೇಳಿತ್ತು.
ಸುಪ್ರೀಂ ಕೋರ್ಟ್‌ನ ಆಗಿನ ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ಪೀಠ ಗುಂಪು ಹಲ್ಲೆ ಮತ್ತು ಹತ್ಯೆ ಪ್ರಕರಣಗಳ ಕುರಿತಂತೆ 11 ಅಂಶಗಳ ಮಾರ್ಗದರ್ಶಿ ಸೂತ್ರವನ್ನು ನೀಡಿತ್ತು.
ಗುಂಪು ಹಲ್ಲೆ, ಹತ್ಯೆ ವಿಚಾರವಾಗಿ ಪೊಲೀಸರಿಗೆ ವ್ಯಾಪಕವಾದ ನಿರ್ದೇಶನಗಳನ್ನು ನೀಡಲಾಗಿತ್ತು.
ಹಾಗೆಯೇ ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೂ ಈ ನಿರ್ದೇಶನಗಳನ್ನು ಎಲ್ಲ ಮಾಧ್ಯಮಗಳಲ್ಲಿ ವ್ಯಾಪಕ ಪ್ರಸಾರ ಮಾಡುವಂತೆ ಸೂಚಿಸಿತ್ತು.
ಗುಂಪು ಹಲ್ಲೆ, ಹತ್ಯೆಯಂಥ ಪ್ರಕರಣಗಳಲ್ಲಿ ಭಾಗಿಯಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯೂ ಇತ್ತು.
ಗುಂಪು ಹಿಂಸಾಚಾರ ಮತ್ತು ಥಳಿತದ ಘಟನೆಗಳ ತಡೆಗೆ ಕ್ರಮ ಕೈಗೊಳ್ಳಲು ಪ್ರತೀ ಜಿಲ್ಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಶ್ರೇಣಿಗಿಂತ ಕಡಿಮೆಯಿಲ್ಲದ ಹಿರಿಯ ಪೊಲೀಸ್ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನಿಯೋಜಿಸಲು ರಾಜ್ಯ ಸರಕಾರಗಳಿಗೆ ಸುಪ್ರೀಂ ಕೋರ್ಟ್ ಪೀಠ ಸೂಚಿಸಿತ್ತು.
ಇಂತಹ ಅಪರಾಧಗಳನ್ನು ಮಾಡುವ ಸಾಧ್ಯತೆ ಅಥವಾ ದ್ವೇಷದ ಭಾಷಣಗಳು, ಪ್ರಚೋದನಕಾರಿ ಹೇಳಿಕೆಗಳು ಮತ್ತು ನಕಲಿ ಸುದ್ದಿಗಳನ್ನು ಹರಡುವಲ್ಲಿ ತೊಡಗಿರುವವರ ಮೇಲೆ ಕಣ್ಣಿಡಲು ಮತ್ತು ಮಾಹಿತಿ ಸಂಗ್ರಹಿಸಲು ವಿಶೇಷ ಕಾರ್ಯಪಡೆ ರಚಿಸುವಂತೆ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು.
ಅವತ್ತು ನೀಡಲಾಗಿದ್ದ ನಿರ್ದೇಶನಗಳ ಪಾಲನೆಯಾಗಲು ಮತ್ತೊಮ್ಮೆ ಸುಪ್ರೀಂ ಕೋರ್ಟ್ ಸ್ವತಃ ಮಧ್ಯಪ್ರವೇಶಿಸಬೇಕಾಗಿದೆಯೆ? ತಪರಾಕಿ ಕೊಡಬೇಕಾಗಿದೆಯೆ?
ಆರ್ಯನ್ ಹತ್ಯೆ ಹಿಂದಿನ ಸತ್ಯ ಹೊರಬರಲೇಬೇಕಿದೆ ಮತ್ತು ಗೋರಕ್ಷಕರ ಹೆಸರಿನಲ್ಲಿ ಕಟ್ಟಲಾಗಿರುವ ಬ್ರಿಗೇಡ್ ವಿರುದ್ಧ ಮಾತಾಡುವ ದಿಟ್ಟತನ ವ್ಯಕ್ತವಾಗಲೇಬೇಕಿದೆ.
ಹತ್ತು ವರ್ಷಗಳಿಂದ ಗೋರಕ್ಷಕರು ಎಂಬ ಹೆಸರಿನಲ್ಲಿ ಇಂಥವೇ ಘಟನೆಗಳು ನಡೆಯುತ್ತ ಬಂದಿವೆ.
ಬಿಜೆಪಿಯವರ ಮಕ್ಕಳು ಉನ್ನತ ಮತ್ತು ಉತ್ತಮ ಶಿಕ್ಷಣ ಪಡೆಯಲು ವಿದೇಶಕ್ಕೆ ತೆರಳುತ್ತಾರೆ. ಅವರದೇ ಸರಕಾರವಿರುವಾಗ, ಮೋದಿ ಆಳ್ವಿಕೆಯಿರುವಾಗ ಬಿಜೆಪಿ ನಾಯಕರ ಮಕ್ಕಳಿಗೇ ಇಲ್ಲಿ ಓದಲು ಸೂಕ್ತ ಶಿಕ್ಷಣ ವ್ಯವಸ್ಥೆ ಇಲ್ಲವೆ?
ಇದ್ದರೆ ಅವರೇಕೆ ವಿದೇಶಕ್ಕೆ ಹೋಗುತ್ತಾರೆ? ಅಮೆರಿಕದ ಪೌರತ್ವ ಪಡೆದು ಅಲ್ಲೇ ಉಳಿದುಬಿಡುತ್ತಾರೆ?
ಮತ್ತೊಂದೆಡೆ, ವಿಶ್ವಗುರುವಿನ ದೇಶದಲ್ಲಿ ಗೋ ರಕ್ಷಣೆ ಹೆಸರಿನಲ್ಲಿ ರಾತ್ರಿ ಬಂದೂಕು ಹಿಡಿದು ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟುವವರು, ಬೆನ್ನಟ್ಟುವವರು ಅಮಾಯಕರನ್ನು ಹೊಡೆಯುತ್ತಾರೆ, ಬಡಿಯುತ್ತಾರೆ, ಹೊಡೆದು ಕೊಲ್ಲುತ್ತಾರೆ, ಗುಂಡಿಕ್ಕಿ ಕೊಲ್ಲುತ್ತಾರೆ.
ಮೋದಿ ಅಮೃತಕಾಲದ ಅಚ್ಛೇ ದಿನಗಳು ಹೀಗೆ ಕೊಂದು ಹಾಕಿರುವ ಅಮಾಯಕ ಜೀವಗಳೆಷ್ಟು?