ಜಾತಿಜನಗಣತಿ ವರದಿ ಜಾರಿಗೆ ಇರುವ ತೊಡಕೇನು?

ಜಾತಿ ಜನಗಣತಿ ವರದಿ ‘ಬಿಡುಗಡೆ ಆಗಬೇಕೆಂಬ’ ಅಹಿಂದ ವರ್ಗಗಳ ಒತ್ತಡಕ್ಕಿಂತ ‘ಬಿಡುಗಡೆ ಆಗಬಾರದು’ ಎನ್ನುವ ಮೇಲ್ಜಾತಿಗಳ ಒತ್ತಡ ತೀವ್ರವಾಗಿರುವುದು ಮುಖ್ಯವಾಗಿ ಗಮನಿಸಬೇಕಿರುವ ವಿಷಯ. ಅಹಿಂದ ವರ್ಗಗಳ ಒತ್ತಡದಲ್ಲಿರುವ ತೀವ್ರತೆಯ ಕೊರತೆಗೂ ಬ್ರಾಹ್ಮಣ, ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳ ಒತ್ತಡದ ತೀವ್ರತೆಗೂ ಆಯಾ ಸಮುದಾಯಗಳ ಅರಿವಿನ ಮತ್ತು ಸಂಘಟನೆಯ ಸಾಮರ್ಥ್ಯಗಳೇ ಕಾರಣ.

Update: 2024-10-09 05:24 GMT

ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದಲ್ಲಿ ಇರುವ ಎಲ್ಲಾ ಜಾತಿಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ನಡೆಸಿರುವ ಸಮೀಕ್ಷಾವರದಿಯನ್ನು ರಾಜ್ಯ ಸರಕಾರ ಒಪ್ಪಿಕೊಂಡು ಬಿಡುಗಡೆ ಮಾಡಬೇಕೆಂಬ ಕೂಗು ಮತ್ತೆ ಕೇಳಿಬರುತ್ತಿದೆ. ಅಹಿಂದ ವರ್ಗಗಳು ಆಯೋಗದ ಈ ದತ್ತಾಂಶ ಬಿಡುಗಡೆಗೆ ಒತ್ತಾಯಿಸುತ್ತಿದ್ದರೆ ಬ್ರಾಹ್ಮಣ, ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳು ಸರಕಾರ ಆಯೋಗದ ವರದಿಯನ್ನು ಒಪ್ಪಬಾರದೆಂದು ವಿರೋಧಿಸುತ್ತಿವೆ.

ಜಾತಿ ಜನಗಣತಿ ವರದಿ ‘ಬಿಡುಗಡೆ ಆಗಬೇಕೆಂಬ’ ಅಹಿಂದ ವರ್ಗಗಳ ಒತ್ತಡಕ್ಕಿಂತ ‘ಬಿಡುಗಡೆ ಆಗಬಾರದು’ ಎನ್ನುವ ಮೇಲ್ಜಾತಿಗಳ ಒತ್ತಡ ತೀವ್ರವಾಗಿರುವುದು ಮುಖ್ಯವಾಗಿ ಗಮನಿಸಬೇಕಿರುವ ವಿಷಯ. ಅಹಿಂದ ವರ್ಗಗಳ ಒತ್ತಡದಲ್ಲಿರುವ ತೀವ್ರತೆಯ ಕೊರತೆಗೂ ಬ್ರಾಹ್ಮಣ, ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳ ಒತ್ತಡದ ತೀವ್ರತೆಗೂ ಆಯಾ ಸಮುದಾಯಗಳ ಅರಿವಿನ ಮತ್ತು ಸಂಘಟನೆಯ ಸಾಮರ್ಥ್ಯಗಳೇ ಕಾರಣ.

ಬ್ರಾಹ್ಮಣ-ಒಕ್ಕಲಿಗ-ಲಿಂಗಾಯತ ಸಮುದಾಯ ಗಳಲ್ಲೂ ಹಲವು ಉಪಪಂಗಡಗಳು ಇವೆಯಾದರೂ ರಾಜಕೀಯ-ಪ್ರಾತಿನಿಧ್ಯ ಎನ್ನುವ ವಿಚಾರಗಳು ಬಂದಾಗ ಆ ಸಮುದಾಯಗಳಲ್ಲಿ ‘ನಾವೆಲ್ಲರೂ ಒಂದು’ ಎಂಬ ಅಭಿಪ್ರಾಯವಿದೆ. ಹೆಚ್ಚಿನ ಅವಕಾಶಗಳಿಗಾಗಿ ಬೇರೆಯವರ ಜೊತೆ ಹೋರಾಡಲು ನಾವೆಲ್ಲರೂ ಒಂದಾಗಬೇಕು ಎಂಬ ಅರಿವಿದೆ. ಈ ಸಮುದಾಯಗಳ ವಿಷಯದಲ್ಲಿ ಸಂಘಟನೆ-ಒಗ್ಗಟ್ಟಿನಿಂದ ಅವಕಾಶ-ಅವಕಾಶಗಳಿಂದ ಸಂಘಟನೆ-ಒಗ್ಗಟ್ಟು ಏರ್ಪಟ್ಟಿದೆ.

ಅಹಿಂದ ವರ್ಗಗಳ ವಿಷಯದಲ್ಲಿ ನಿಸ್ಸಂದೇಹವಾಗಿ ಅರಿವಿನ ಕೊರತೆಯೂ ಹೆಚ್ಚಾಗಿದೆ. ಸಂಘಟನೆಯ ಕೊರತೆಯೂ ಜಾಸ್ತಿ ಇದೆ. ಹಾಗಾಗಿ ರಾಜಕೀಯ ಪ್ರಾತಿನಿಧ್ಯ ಕಡಿಮೆ ಇದೆ. ಕರ್ನಾಟಕದ ವಿಧಾನಸಭೆಯಲ್ಲಿ ಈವರೆಗೆ ಸಿಕ್ಕಿರುವ ಜಾತಿವಾರು ಪ್ರಾತಿನಿಧ್ಯದ ಕಡೆ ಕಣ್ಣಾಡಿಸಿದರೆ ಇದು ಸ್ಪಷ್ಟವಾಗಿ ಗೊತ್ತಾಗಲಿದೆ.

ನ್ಯಾಯಮುರ್ತಿ ಕುಲ್‌ದೀಪ್ ಸಿಂಗ್ ಆಯೋಗದ ವರದಿ ಪ್ರಕಾರ 2008ರಲ್ಲಿ ಪ್ರತೀ 2.50 ಲಕ್ಷ ಜನಸಂಖ್ಯೆಗೆ ಒಂದು ವಿಧಾನಸಭಾ ಕ್ಷೇತ್ರದಂತೆ 224 ವಿಧಾನಸಭೆ ಕ್ಷೇತ್ರಗಳ ಪುರ್ನವಿಂಗಡಣೆ ಮಾಡಲಾಗಿದೆ. ಇದೇ ಮಾನದಂಡವನ್ನು ರಾಜಕೀಯ ಪಕ್ಷಗಳು ಲೋಕಸಭೆ ಮತ್ತು ವಿಧಾನಸಭೆಗಳಿಗೆ ಜಾತಿಗಳ ಜನಸಂಖ್ಯೆಗೆ ಟಿಕೆಟ್ ನೀಡಲು ಅನುಸರಿಸಬೇಕಿತ್ತು. 2011ರ ಜನಗಣತಿ ಪ್ರಕಾರ ಕರ್ನಾಟಕದ ಜನಸಂಖ್ಯೆ 6 ಕೋಟಿ 11 ಲಕ್ಷ. ಅದರಲ್ಲಿ ಪರಿಶಿಷ್ಟ ಜಾತಿ 1 ಕೋಟಿ 5 ಲಕ್ಷ. ಪರಿಶಿಷ್ಟ ಪಂಗಡ 43 ಲಕ್ಷ. ಮುಸ್ಲಿಮ್ 79 ಲಕ್ಷ, ಕ್ರೈಸ್ತ 11.50 ಲಕ್ಷ. ಹಿಂದುಳಿದ ಜಾತಿಗಳ ಒಟ್ಟಾರೆ ಜನಸಂಖ್ಯೆ 1 ಕೋಟಿ 90 ಲಕ್ಷ (ಇದು ಮಾತ್ರ 1931ರ ಜನಗಣತಿಯ ಮಾಹಿತಿ). ಅಹಿಂದ ವರ್ಗಗಳ ಒಟ್ಟು ಜನಸಂಖ್ಯೆ ಸುಮಾರು 4 ಕೋಟಿ 30 ಲಕ್ಷ. ಈ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಅಹಿಂದ ಪೈಕಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲು ಕ್ಷೇತ್ರಗಳನ್ನು ನಿರ್ಧರಿಸಿರುವುದರಿಂದ ಅನ್ಯ ದಾರಿ ಇಲ್ಲದೆ ಆ ಸಮುದಾಯಗಳಿಗೆ ಅಷ್ಟುಮಾತ್ರದ ಅವಕಾಶ ಸಿಕ್ಕಿದೆ.

ಹಿಂದುಳಿದ ಜಾತಿಗಳ ವಿಷಯಕ್ಕೆ ಬಂದರೆ 197 ಮುಖ್ಯ ಜಾತಿಗಳು ಮತ್ತು 550 ಉಪಜಾತಿಗಳಿವೆ (ಒಟ್ಟು 747). ಇವುಗಳ ಪೈಕಿ 26 ಸಮುದಾಯಗಳು ಮಾತ್ರ ಈವರೆಗೆ ಶಾಸನಸಭೆಯನ್ನು ಪ್ರತಿನಿಧಿಸಿವೆ. ಉಳಿದ 721 ಜಾತಿಗಳು ಅವಕಾಶದಿಂದ ವಂಚಿತವಾಗಲು ಯಾವ ಅರ್ಹ ಕಾರಣಗಳೂ ಇಲ್ಲ. ಅಹಿಂದ ವರ್ಗಗಳಿಗೆ ಯಾವ ರೀತಿ ನಿರಂತರವಾಗಿ ಅನ್ಯಾಯ ಆಗುತ್ತಿದೆ ಎನ್ನುವುದನ್ನು ಅರಿಯಲು 1957ರ ಮೊದಲ ವಿಧಾನಸಭಾ ಚುನಾವಣೆಯಿಂದ 2023ರ ವಿಧಾನಸಭಾ ಚುನಾವಣೆವರೆಗೆ ಆಯ್ಕೆಯಾದ ಜಾತಿವಾರು ಶಾಸಕರ ಸಂಖ್ಯೆಯನ್ನು ಒಮ್ಮೆ ನೋಡಬೇಕು.

1957ರ ಮೊದಲ ವಿಧಾನಸಭಾ ಚುನಾವಣೆಯಲ್ಲಿ 61 ಲಿಂಗಾಯತ, 45 ಒಕ್ಕಲಿಗ, 21 ಬ್ರಾಹ್ಮಣ, 11 ಅಲ್ಪಸಂಖ್ಯಾತ ಮತ್ತು 29 ಹಿಂದುಳಿದ ಶಾಸಕರು ಆಯ್ಕೆಯಾಗಿದ್ದರು. 2023ರಲ್ಲಿ ಲಿಂಗಾಯತ ಶಾಸಕರ ಸಂಖ್ಯೆ 66ಕ್ಕೆ ಮತ್ತು ಒಕ್ಕಲಿಗ ಶಾಸಕರ ಸಂಖ್ಯೆ 59ಕ್ಕೆ ಏರಿಕೆಯಾಗಿದೆ. ಇನ್ನೊಂದೆಡೆ ಅಲ್ಪಸಂಖ್ಯಾತ ಶಾಸಕರ ಸಂಖ್ಯೆ 10ಕ್ಕೆ ಕುಸಿದಿದೆ. ಹಿಂದುಳಿದ ಶಾಸಕರ ಸಂಖ್ಯೆ 29ಕ್ಕೆ ಸೀಮಿತಗೊಂಡಿದೆ. ಜನಸಂಖ್ಯೆ ಹೆಚ್ಚುತ್ತಿದ್ದರೂ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳಿಗೆ ಅದಕ್ಕೆ ಅನುಗುಣವಾಗಿ ಶಾಸನಸಭೆಗೆ ಪ್ರಾತಿನಿಧ್ಯ ದೊರಕುತ್ತಿಲ್ಲ ಎನ್ನುವುದಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಕಿಲ್ಲ.

ಈವರೆಗೆ ರಾಜ್ಯವನ್ನಾಳಿದ 23 ಮುಖ್ಯಮಂತ್ರಿಗಳ ಪೈಕಿ ರಾಜ್ಯದ ಜನಸಂಖ್ಯೆಯ ಮುಕ್ಕಾಲು ಭಾಗಕ್ಕೂ ಜಾಸ್ತಿ ಇರುವ ಅಹಿಂದ ವರ್ಗಗಳಿಂದ ಸಿಎಂ ಆದವರು ಕೇವಲ 5 ಮಂದಿ. ಜನಸಂಖ್ಯೆಯ ಕಾಲು ಭಾಗಕ್ಕೂ ಕಮ್ಮಿ ಇರುವ ಬ್ರಾಹ್ಮಣ(2), ಒಕ್ಕಲಿಗ (7) ಮತ್ತು ಲಿಂಗಾಯತ (9) ಸಮುದಾಯಗಳಿಂದ ಸಿಎಂ ಆದವರು 18 ಜನ ಎಂಬ ಮಾಹಿತಿಯಿಂದಲೂ ಅಹಿಂದ ವರ್ಗಕ್ಕೆ ಯಾವ ಮಟ್ಟದ ಅನ್ಯಾಯವಾಗುತ್ತಿದೆ ಎಂಬುದು ಮನವರಿಕೆಯಾಗಲಿದೆ.

ಅಹಿಂದ ವರ್ಗಗಳಿಗೆ ಆಗಿರುವ ಚಾರಿತ್ರಿಕ ಅನ್ಯಾಯವನ್ನು ಈಗಲಾದರೂ ಸರಿಪಡಿಸಬೇಕಲ್ಲವೇ? ಸಮಸ್ಯೆ ಬಗೆಹರಿಸಬೇಕು ಎಂದರೆ ಸಮಸ್ಯೆ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಅಲ್ಲವೇ? ‘ಸಮಸ್ಯೆ ಏನು?’ ಎಂದರೆ ರಾಜ್ಯದಲ್ಲಿ ಯಾವ್ಯಾವ ಜಾತಿಯ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಏನು ಎಂಬುದನ್ನು ಅರಿತುಕೊಳ್ಳುವುದು. ಅದಕ್ಕಾಗಿಯೇ 2013ರಲ್ಲಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯದಲ್ಲಿರುವ ಜಾತಿಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು. ಆಗಲೇ ಅದು ಯಾವ ಸ್ವರೂಪದಲ್ಲಿರಲಿದೆ ಎಂಬ ಯಾವ ಅಂದಾಜೂ ಇಲ್ಲದಿದ್ದರೂ ‘ಇದು ಜಾತಿಗಳನ್ನು ಒಡೆಯುವ ಹುನ್ನಾರ’ ಎಂಬ ಕೂಗೆಬ್ಬಿಸಲಾಯಿತು.

ಈಗಲೂ ಜಾತಿಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷಾವರದಿಯನ್ನು ರಾಜ್ಯ ಸರಕಾರ ಒಪ್ಪಿಕೊಂಡಿಲ್ಲ ಮತ್ತು ಬಿಡುಗಡೆ ಮಾಡಿಲ್ಲ. ಅದಕ್ಕೂ ಮೊದಲೇ ‘ಅದು ಅವೈಜ್ಞಾನಿಕ ವರದಿ’ ಎಂದು ಬಿಂಬಿಸುವ ಪ್ರಯತ್ನವಾಗುತ್ತಿದೆ. 2015ರಲ್ಲಿ ಆರಂಭವಾದ ಸಮೀಕ್ಷೆ 2019ರ ವೇಳೆಗೆ ಮುಗಿದು ಇನ್ನೇನು ಸರಕಾರಕ್ಕೆ ಸಲ್ಲಿಸಬೇಕು ಎನ್ನುವಷ್ಟರಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಯಿತು. ನಂತರ ಮುಖ್ಯಮಂತ್ರಿಯಾದ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಹಿರಿಯ ನ್ಯಾಯವಾದಿ ಕಾಂತರಾಜು ನೇತೃತ್ವದ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ವರದಿ ಸಲ್ಲಿಸಿತು. ಜೊತೆಗೆ ತಾವು ಸಮೀಕ್ಷೆಗೆ ಅಂಕಿ-ಅಂಶಗಳನ್ನೂ ಸಂಗ್ರಹಿಸಿದ ವಿಧಾನವನ್ನು ತಜ್ಞರ ಸಮಿತಿ ಮತ್ತು ಐಐಎಂ ಸಂಸ್ಥೆಗಳು ದೃಢೀಕರಿಸಿವೆ ಎಂದು ಆಯೋಗ ಹೇಳಿತ್ತು. ಆದರೂ ಎಚ್.ಡಿ. ಕುಮಾರಸ್ವಾಮಿ ಜಾತಿ ಗಣತಿ ವರದಿಯನ್ನು ಕಣ್ಣೆತ್ತಿಯೂ ನೋಡಲಿಲ್ಲ. ನಂತರ ಬಂದ ಬಿ.ಎಸ್. ಯಡಿಯೂರಪ್ಪ ಕೂಡ ವರದಿ ಬಗ್ಗೆ ಯಾವ ಕ್ರಮವನ್ನು ಕೈಗೊಳ್ಳಲಿಲ್ಲ.

ಎಚ್.ಡಿ. ಕುಮಾರಸ್ವಾಮಿ ಮತ್ತು ಬಿ.ಎಸ್. ಯಡಿಯೂರಪ್ಪ ಜಾತಿ ಜನಗಣತಿಯ ಸಮೀಕ್ಷಾವರದಿಯನ್ನು ಒಪ್ಪಿಕೊಂಡು ಬಿಡುಗಡೆ ಮಾಡದೆ ಇರುವುದಕ್ಕೆ ಮೇಲ್ಜಾತಿಗಳ ಹಿತಕಾಯುವ ಉದ್ದೇಶ ಬಿಟ್ಟು ಬೇರಾವ ತೊಡಕೂ ಇರಲಿಲ್ಲ. ಈಗ ಸದಾ ಸಮಸಮಾಜದ ಬಗ್ಗೆ ಮಾತನಾಡುವ ಮತ್ತು ಹಿಂದೆ ತಾವು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಇಡೀ ದೇಶಕ್ಕೆ ಮಾದರಿ ಎನ್ನುವಂತೆ ಜಾತಿಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಅಧ್ಯಯನ ಆಗಬೇಕು ಎಂದು ನಿರ್ಧರಿಸಿದ್ದ ಸಿದ್ದರಾಮಯ್ಯ ಅವರೇ ಮತ್ತೆ ಮುಖ್ಯಮಂತ್ರಿ ಸ್ಥಾನದಲ್ಲಿ ಇರುವುದರಿಂದ ಅವರ ಮೇಲೆ ಅಪಾರವಾದ ನಿರೀಕ್ಷೆಗಳಿವೆ.

ಸಿದ್ದರಾಮಯ್ಯ ಇತ್ತೀಚೆಗೆ ಮೂರ್ನಾಲ್ಕು ಬಾರಿ ‘‘ನಾನು ಜಾತಿ ಜನಗಣತಿಯ ಸಮೀಕ್ಷಾವರದಿ ಜಾರಿಗೊಳಿಸುವುದರ ಪರ’’ ಎಂದಿದ್ದಾರೆ. ಇದೇ ಅಕ್ಟೊಬರ್ 18ನೇ ತಾರೀಕು ನಡೆಯುವ ಸಚಿವ ಸಂಪುಟದಲ್ಲಿ ಜಾತಿ ಜನಗಣತಿಯ ಸಮೀಕ್ಷಾವರದಿಯನ್ನು ಮಂಡಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ. ಜೊತೆಗೆ ತಾವು ಜಾತಿ ಜನಗಣತಿಯ ಸಮೀಕ್ಷಾವರದಿಯನ್ನು ಸಚಿವ ಸಂಪುಟ ಸಭೆಗೆ ಮಂಡಿಸುವುದಾಗಿಯೂ, ಸಂಪುಟ ಸಭೆ ಅಂತಿಮ ತೀರ್ಮಾನ ಮಾಡುತ್ತದೆ ಎಂಬ ಅಡ್ಡಗೋಡೆ ಮೇಲೆ ದೀಪವಿಟ್ಟಂತಹ ಮಾತನ್ನೂ ಆಡಿದ್ದಾರೆ.

ಇಲ್ಲಿ ಸಮೀಕ್ಷಾವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವುದು, ಅದನ್ನು ವಿಧಾನ ಮಂಡಲದ ಅಧಿವೇಶನಕ್ಕೆ ತರಬೇಕೋ-ಬೇಡವೋ ಎಂದು ನಿರ್ಧರಿಸುವುದು ಅಥವಾ ಅಧಿವೇಶನಕ್ಕೆ ತಂದು ಶಾಸನಸಭೆಯ ಅಂಗೀಕಾರ ಪಡೆಯುವುದೆಲ್ಲವೂ ತಾಂತ್ರಿಕ ಸಂಗತಿಗಳು. ಅದಕ್ಕೂ ಮೀರಿ ಸಿದ್ದರಾಮಯ್ಯ ಸಾಬೀತುಪಡಿಸಬೇಕಾಗಿರುವುದು ರಾಜಕೀಯ ಇಚ್ಛಾಸಕ್ತಿಯನ್ನು, ತಮ್ಮನ್ನು ಅಪಾರವಾಗಿ ನಂಬಿರುವ ಅಹಿಂದ ವರ್ಗಗಳೆಡೆಗಿನ ಬದ್ಧತೆಯನ್ನು.

ಜಾತಿ ಜನಗಣತಿ ವರದಿ ಬಿಡುಗಡೆ ಮಾಡದಂತೆ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರುತ್ತಿರುವುದು ಜೆಡಿಎಸ್ ಮತ್ತು ಬಿಜೆಪಿಗಿಂತ ಜಾಸ್ತಿ ಕಾಂಗ್ರೆಸ್ ಪಕ್ಷದ ಬ್ರಾಹ್ಮಣ, ಒಕ್ಕಲಿಗ ಮತ್ತು ಲಿಂಗಾಯತ ಶಾಸಕರು. ಸಿದ್ದರಾಮಯ್ಯ ಮೊದಲು ವಿಚಾರ ಸ್ಪಷ್ಟತೆ ಇಲ್ಲದ, ಪಕ್ಷದ ಚಿಹ್ನೆ ಮತ್ತು ಪಕ್ಷದ ಮತಗಳಿಂದ ಮಾತ್ರವೇ ಗೆದ್ದು ಬರುತ್ತಿರುವ ಕಾಂಗ್ರೆಸಿನ ಬ್ರಾಹ್ಮಣ, ಒಕ್ಕಲಿಗ ಮತ್ತು ಲಿಂಗಾಯತ ಶಾಸಕರಿಗೆ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು. ‘ನಾವು ನುಡಿದಂತೆ ನಡೆಯುವವರು ಎಂಬ ಭರವಸೆ ನೀಡಿ, ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿಯೇ ಜಾತಿ ಜನಗಣತಿ ಒಪ್ಪಿ ಅನುಷ್ಠಾನಕ್ಕೆ ತರುವ ವಾಗ್ದಾನ ನೀಡಿ ಗೆದ್ದು ಬಂದಿದ್ದೇವೆ ಎಂಬುದನ್ನು ಸ್ವಪಕ್ಷೀಯರಿಗೆ ತಿಳಿಹೇಳಬೇಕು. ಆ ಜವಾಬ್ದಾರಿ ಸಿದ್ದರಾಮಯ್ಯ ಅವರದ್ದೇ.

ನಾಳೆ ‘ನಮ್ಮವರೇ ಒಪ್ಪಲಿಲ್ಲ, ಸ್ವಪಕ್ಷೀಯರಿಂದಲೇ ಅಪಸ್ವರವಿತ್ತು’ ಎಂಬ ಸಬೂಬು ಹೇಳಬಾರದು ಸಿದ್ದರಾಮಯ್ಯ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಡೀ ದೇಶಾದ್ಯಂತ ‘ಜಾತಿ ಜನಗಣತಿ ಆಗಲೇಬೇಕು’ ಎಂದು ಭಾಷಣ ಮಾಡುತ್ತಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ಮೀಸಲಾತಿಯ ಮಿತಿ ಹೆಚ್ಚಳವಾಗಬೇಕು’ ಎಂದು ಪ್ರತಿಪಾದಿಸುತ್ತಿದ್ದಾರೆ. ‘ಇಂಡಿಯಾ’ ಮೈತ್ರಿಕೂಟದ ಇತರ ನಾಯಕರೂ ಜಾತಿಗಣತಿ ಮತ್ತು ಮೀಸಲಾತಿಯ ಮಿತಿ ಹೆಚ್ಚಳವಾಗಬೇಕು ಎನ್ನುವುದರ ಪರ ಇದ್ದಾರೆ.

ಮೀಸಲಾತಿಯ ಮಿತಿ ಹೆಚ್ಚಳ ಮಾಡಬೇಕಾದರೆ ಮೊದಲಿಗಿರುವ ತೊಡಕೇ ದತ್ತಾಂಶ. ಮೀಸಲಾತಿಗೆ ಸಂಬಂಧಿಸಿದಂತೆ ಆಯೋಗಗಳ ಜಾತಿ ಗಣತಿಯ ವೈಜ್ಞಾನಿಕತೆಯನ್ನು ಬೇರೆ ಬೇರೆ ರಾಜ್ಯಗಳ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಹಲವು ಬಾರಿ ಪ್ರಶ್ನಿಸಿದೆ. 1993ರಲ್ಲಿ ಅಂದಿನ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅವರ ರಾಜ್ಯ ಸರಕಾರ ಮೀಸಲಾತಿ ಮಿತಿಯನ್ನು ಶೇ. 73ಕ್ಕೆ ಏರಿಸಬೇಕು ಎಂದು ನಿರ್ಣಯ ಮಾಡಿತ್ತು. ಆಗ ‘ಯಾವುದಾದರೂ ಆಯೋಗದ ಸಮಗ್ರ ಅಧ್ಯಯನ ವರದಿಯ ದತ್ತಾಂಶ ಇಲ್ಲದೆ ಮೀಸಲಾತಿ ಹೆಚ್ಚಳ ಮಾಡಲು ಸಾಧ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್ ರಾಜ್ಯ ಸರಕಾರದ ತೀರ್ಮಾನವನ್ನು ವಜಾಗೊಳಿಸಿತ್ತು.

ಕರ್ನಾಟಕದಲ್ಲಿ ಆಗ ಹಿಂದುಳಿದ ವರ್ಗಗಳ ಕಾಯ್ದೆ ಇರಲಿಲ್ಲ. ಅದು ಬಂದದ್ದು ಮಂಡಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ‘ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಾಯ್ದೆ ರೂಪಿಸಿ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗಗಳನ್ನು ರಚಿಸಬೇಕು, ಆಯೋಗಗಳು ವೈಜ್ಞಾನಿಕವಾಗಿ ಜಾತಿ ಗಣತಿ ನಡೆಸಿ ಹಿಂದುಳಿದ ವರ್ಗಗಳ ಗುಂಪಿಗೆ ಯಾವ ಜಾತಿ ಸೇರ್ಪಡೆಯಾಗಬೇಕು, ಯಾವುದು ಬೇರ್ಪಡೆಯಾಗಬೇಕು ಎಂಬುದನ್ನು ತೀರ್ಮಾನಿಸಬೇಕು’ ಎಂದು ನಿರ್ದೇಶನ ನೀಡಿದ ಮೇಲೆ- 1995ರಲ್ಲಿ.

ಈಗ ಈ ಸಮಸ್ಯೆ ಇಲ್ಲ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದಲ್ಲಿರುವ ಎಲ್ಲಾ ಜಾತಿಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮಗ್ರವಾದ ಅಧ್ಯಯನ ನಡೆಸಿ ಸಮೀಕ್ಷಾವರದಿಯನ್ನು ಸಿದ್ಧಪಡಿಸಿ ರಾಜ್ಯ ಸರಕಾರಕ್ಕೆ ಕೊಟ್ಟಿದೆ. ಈ ವರದಿಯನ್ನು ಒಪ್ಪಿಕೊಳ್ಳುವುದರಿಂದ ಅದರ ದತ್ತಾಂಶದ ಪ್ರಕಾರ ರಾಜಕೀಯ ಪ್ರಾತಿನಿಧ್ಯದ ಐತಿಹಾಸಿಕ ಪ್ರಮಾದವನ್ನು ಸರಿಮಾಡಿಕೊಳ್ಳಬಹುದು. ಅಷ್ಟು ಮಾತ್ರವಲ್ಲದೆ ಮೀಸಲಾತಿಯ ಮಿತಿಯನ್ನು ಹೆಚ್ಚಿಸಿಕೊಳ್ಳಬಹುದು. ಇದು ವಿದ್ಯಾಭಾಸ ಮತ್ತು ಉದ್ಯೋಗದ ವಿಷಯದಲ್ಲೂ ಕ್ರಾಂತಿಕಾರಕ ಪಾತ್ರವಹಿಸಲಿದೆ. ಜೊತೆಗೆ ರಾಜ್ಯದಲ್ಲಿ ಈಗ ಚರ್ಚಿತವಾಗುತ್ತಿರುವ ಒಳಮೀಸಲಾತಿಯನ್ನು ಜಾರಿಗೊಳಿಸಲು ಉಂಟಾಗಿದ್ದ ತೊಡಕನ್ನೂ ನಿವಾರಿಸಲಿದೆ.

ಎಲ್ಲವೂ ಸಿದ್ದರಾಮಯ್ಯ ಅವರ ಕೈಯಲ್ಲಿದೆ. ಮೊನ್ನೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಕೆ.ಎನ್. ಲಿಂಗಪ್ಪ ಅವರ ‘ಮೀಸಲಾತಿಯ ಒಳಮುಖ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ರಾಜ್ಯದ ಮತ್ತೋರ್ವ ಹಿಂದುಳಿದ ವರ್ಗಗಳ ಹಿರಿಯ ನಾಯಕ, ಅನುಭವಿ, ಕಾಂಗ್ರೆಸ್ ಪಕ್ಷದ ಕಟ್ಟಾಳು ಬಿ.ಕೆ. ಹರಿಪ್ರಸಾದ್ ಅವರು ‘ಸರಕಾರ ಬಿದ್ದು ಹೋದರೂ ಚಿಂತೆಯಿಲ್ಲ, ಜಾತಿ ಜನಗಣತಿ ವರದಿಯನ್ನು ಒಪ್ಪಲೇಬೇಕು’ ಎಂದು ಹೇಳಿದರು. ಕಾಂಗ್ರೆಸ್ ನಾಯಕರೀಗ ಇಂಥ ಬದ್ಧತೆಯನ್ನು ತೋರಿ, ಸಿದ್ದರಾಮಯ್ಯ ಅವರ ಕೈ ಬಲಪಡಿಸಬೇಕಾಗಿದೆ. ಏಕೆಂದರೆ ಸದ್ಯಕ್ಕೆ ಜಾತಿ ಜನಗಣತಿ-ಮೀಸಲಾತಿ ವಿಚಾರದಲ್ಲಿ ಅಹಿಂದ ವರ್ಗಕ್ಕೆ ಸಿದ್ದರಾಮಯ್ಯ ಅವರನ್ನು ಬಿಟ್ಟರೆ ಬೇರಾರಿದ್ದಾರೆ ಗತಿ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಧರಣೀಶ್ ಬೂಕನಕೆರೆ

contributor

Similar News