ಇಸ್ರೇಲ್ ಕ್ರೌರ್ಯದಲ್ಲಿ ಮಾಧ್ಯಮಗಳ ಪಾಲೆಷ್ಟು?
ಗಾಝಾ ಮೇಲೆ ಇಸ್ರೇಲ್ ನಡೆಸುತ್ತಿರುವ ನಿರಂತರ ದಾಳಿಯನ್ನು ವಿವರಿಸುವ ಮಾಧ್ಯಮದ ಭಾಷೆಯಲ್ಲಿ ಹೀಗೆ ವ್ಯವಸ್ಥಿತ ಇಸ್ರೇಲಿ ಪರ ನಿಲುವೇ ಇರುತ್ತದೆ. ಆದರೆ ಗಾಝಾವನ್ನು ಪ್ರತೀ ಹಂತದಲ್ಲೂ ಅನುಮಾನದ ಕಣ್ಣಿನಿಂದಲೇ ನೋಡಲಾಗುತ್ತದೆ. ಅಲ್ಲಿನ ಎಲ್ಲರೂ ಉಗ್ರರೇ ಆಗಿದ್ದಾರೆ ಎನ್ನುವಂತೆ ಗ್ರಹಿಸಲಾಗುತ್ತದೆ. ಫೆಲೆಸ್ತೀನ್ ಪರ ಪ್ರತಿಭಟನೆಗಳನ್ನು ರಾಜಕೀಯ ಪ್ರೇರಿತ ಎಂದು ಆರೋಪಿಸಲಾಗುತ್ತದೆ. ಗಾಝಾದಲ್ಲಿ ಇಸ್ರೇಲ್‌ನ ಬಾಂಬ್‌ಗೆ ಬಲಿಯಾಗುವ ಪುಟ್ಟ ಹಸುಳೆಗಳನ್ನೂ ಉಗ್ರರು ಎಂಬಂತೆಯೇ ಚಿತ್ರಿಸುವ ಉಗ್ರ ಮನೋಭಾವವನ್ನು ಜಾಗತಿಕ ಹಾಗೂ ಬಹುತೇಕ ಭಾರತೀಯ ಮಾಧ್ಯಮಗಳು ತೋರಿಸುತ್ತಲೇ ಬಂದಿವೆ. ಈ ಹೊತ್ತಿನಲ್ಲಿ ಫೆಲೆಸ್ತೀನ್‌ನಲ್ಲಿ ನಡೆಯುತ್ತಿರುವ ನರಮೇಧದ ಬಗ್ಗೆ ವರದಿ ಮಾಡುವಾಗ ಮಾಧ್ಯಮಗಳು ಎಷ್ಟು ಪಕ್ಷಪಾತಿಯಾಗಿವೆ ಎಂಬುದನ್ನು ನೋಡುತ್ತ ಹೋದರೆ, ಅದು ಯುದ್ಧದ ಕರಾಳತೆಗಿಂತಲೂ ಕಡಿಮೆ ಎಂದೆನ್ನಿಸಲು ಸಾಧ್ಯವೇ ಇಲ್ಲ.
ಅಮೆರಿಕದ ‘ದಿ ಅಟ್ಲಾಂಟಿಕ್’ ಮಾಧ್ಯಮದಲ್ಲಿ 2023ರ ಅಕ್ಟೋಬರ್ 27ರಂದು ಫೆಲೆಸ್ತೀನ್ ಪರ ಪ್ರತಿಭಟನೆಗಳ ಬಗ್ಗೆ ವಿಶ್ಲೇಷಕರೊಬ್ಬರು ಬರೆಯುತ್ತಾರೆ:
ಇದರಲ್ಲಿ ಕೆಲವು ಬಹಿರಂಗವಾಗಿ ನಡೆಯುತ್ತ್ತವೆ. ಮತ್ತೆ ಕೆಲವು ಮಾನವೀಯತೆ ಮತ್ತು ನ್ಯಾಯ ಎಂಬ ಮುಖವಾಡಗಳ ಹಿಂದೆ ನಡೆಯುತ್ತವೆ. ಇನ್ನೂ ಕೆಲವು ಪ್ರತಿಭಟನೆಗಳು ಲಕ್ಷಾಂತರ ಇಸ್ರೇಲಿಗಳನ್ನು ಕೊಲ್ಲುವುದು ಅಥವಾ ಗಡಿಪಾರು ಮಾಡಬೇಕೆಂಬುದನ್ನು ಸೂಚಿಸುವ ಕೋಡ್ ಮೂಲಕ ನಡೆಯುತ್ತಿವೆ.
ಇದು, ಯುರೋಪ್ ಮತ್ತು ಅಮೆರಿಕದ ಅನೇಕ ಕಡೆಗಳಲ್ಲಿನ ಫೆಲೆಸ್ತೀನ್ ಪರ ಪ್ರತಿಭಟನಾ ರ್ಯಾಲಿಗಳು ಮತ್ತು ಮೆರವಣಿಗೆಗಳನ್ನು ಯಹೂದ್ಯ ವಿರೋಧಿಗಳ ಹುನ್ನಾರವೆಂಬಂತೆ ಪಾಶ್ಚಿಮಾತ್ಯ ಮಾಧ್ಯಮಗಳು ಹೇಗೆ ಚಿತ್ರಿಸುತ್ತಿವೆ ಎಂಬುದಕ್ಕೆ ಒಂದು ಉದಾಹರಣೆ ಮಾತ್ರ.
ಭಾರತದ ಮಾಧ್ಯಮಗಳಲ್ಲೂ ಇದಕ್ಕಿಂತ ಭಿನ್ನ ಧೋರಣೆ ಇಲ್ಲ. ‘‘ಇಸ್ರೇಲ್ ಮೇಲೆ ಜಿಹಾದಿಗಳ, ಭಯೋತ್ಪಾದಕರ ದಾಳಿಯಾಗಿದ್ದು, ಇಸ್ರೇಲ್ ಮತ್ತು ನಾವೆಲ್ಲರೂ ಇದರ ಬಲಿಪಶುವಾಗಿದ್ದೇವೆ ಮತ್ತು ಇಸ್ರೇಲ್ ನಮ್ಮೆಲ್ಲರ ಪರವಾಗಿ ಹೋರಾಡುತ್ತಿದೆ’’ ಎಂದು ರಿಪಬ್ಲಿಕ್ ವಾಹಿನಿ ವ್ಯಾಖ್ಯಾನಿಸುತ್ತದೆ.
ಇಸ್ರೇಲ್‌ನ ಒಂದು ಸಾವಿರ ಮಕ್ಕಳು ಯುದ್ಧದಲ್ಲಿ ಬಲಿಯಾದರೆ, ಅದಕ್ಕೆ ಪ್ರತಿಯಾಗಿ ಫೆಲೆಸ್ತೀನ್‌ನ ಹತ್ತು ಲಕ್ಷ ಮಕ್ಕಳು ಸಾಯಬೇಕು ಎಂಬ ಅತಿ ಕ್ರೂರ ವಾದವು ಝೀ ನ್ಯೂಸ್‌ನ ಡಿಬೇಟ್‌ನಲ್ಲಿ ವ್ಯಕ್ತವಾಗುತ್ತದೆ. ಹೀಗೆ ಸಾವಿರಾರು ಉದಾಹರಣೆಗಳನ್ನು ಫೆಲೆಸ್ತೀನ್ ವಿರೋಧಿ ನಿಲುವು ಮಾಧ್ಯಮಗಳಲ್ಲಿ ಹೇಗೆ ವ್ಯಕ್ತವಾಗುತ್ತಲೇ ಇದೆ ಎಂಬುದಕ್ಕೆ ಕೊಡಬಹುದು.
ಗಾಝಾ ಮೇಲೆ ಇಸ್ರೇಲ್ ನಡೆಸುತ್ತಿರುವ ನಿರಂತರ ದಾಳಿಯನ್ನು ವಿವರಿಸುವ ಮಾಧ್ಯಮದ ಭಾಷೆಯಲ್ಲಿ ಹೀಗೆ ವ್ಯವಸ್ಥಿತ ಇಸ್ರೇಲಿ ಪರ ನಿಲುವೇ ಇರುತ್ತದೆ. ಆದರೆ ಗಾಝಾವನ್ನು ಪ್ರತೀ ಹಂತದಲ್ಲೂ ಅನುಮಾನದ ಕಣ್ಣಿನಿಂದಲೇ ನೋಡಲಾಗುತ್ತದೆ. ಅಲ್ಲಿನ ಎಲ್ಲರೂ ಉಗ್ರರೇ ಆಗಿದ್ದಾರೆ ಎನ್ನುವಂತೆ ಗ್ರಹಿಸಲಾಗುತ್ತದೆ. ಫೆಲೆಸ್ತೀನ್ ಪರ ಪ್ರತಿಭಟನೆಗಳನ್ನು ರಾಜಕೀಯ ಪ್ರೇರಿತ ಎಂದು ಆರೋಪಿಸಲಾಗುತ್ತದೆ.
ಗಾಝಾದಲ್ಲಿ ಇಸ್ರೇಲ್‌ನ ಬಾಂಬ್‌ಗೆ ಬಲಿಯಾಗುವ ಪುಟ್ಟ ಹಸುಳೆಗಳನ್ನೂ ಉಗ್ರರು ಎಂಬಂತೆಯೇ ಚಿತ್ರಿಸುವ ಉಗ್ರ ಮನೋಭಾವವನ್ನು ಜಾಗತಿಕ ಹಾಗೂ ಬಹುತೇಕ ಭಾರತೀಯ ಮಾಧ್ಯಮಗಳು ತೋರಿಸುತ್ತಲೇ ಬಂದಿವೆ.
ಈ ಹೊತ್ತಿನಲ್ಲಿ ಫೆಲೆಸ್ತೀನ್‌ನಲ್ಲಿ ನಡೆಯುತ್ತಿರುವ ನರಮೇಧದ ಬಗ್ಗೆ ವರದಿ ಮಾಡುವಾಗ ಮಾಧ್ಯಮಗಳು ಎಷ್ಟು ಪಕ್ಷಪಾತಿಯಾಗಿವೆ ಎಂಬುದನ್ನು ನೋಡುತ್ತ ಹೋದರೆ, ಅದು ಯುದ್ಧದ ಕರಾಳತೆಗಿಂತಲೂ ಕಡಿಮೆ ಎಂದೆನ್ನಿಸಲು ಸಾಧ್ಯವೇ ಇಲ್ಲ.
ಮಾಧ್ಯಮಗಳಿಗೆ ಹಸಿ ಸುಳ್ಳನ್ನು ಸತ್ಯವಾಗಿಸುವ ಮತ್ತು ಹಗಲಿನಷ್ಟೇ ಸತ್ಯವನ್ನು ಸುಳ್ಳಾಗಿಸುವ ಸಾಮರ್ಥ್ಯವಿದೆ. ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲೀಗ ಮಾಹಿತಿ ನಮ್ಮ ಬೆರಳ ತುದಿಯಲ್ಲಿದೆ. ಒಂದು ಮಾಹಿತಿ ತಲುಪಬೇಕಿದ್ದರೆ ದಿನಗಳ, ತಿಂಗಳ ಕಾಲ ಕಾಯಬೇಕಿದ್ದ ಕಾಲವೂ ಇತ್ತು ಎಂದು ಯೋಚಿಸುವುದೇ ಈಗ ಕಷ್ಟ. ಇಂದು ಎಲ್ಲವೂ ಸೆಕೆಂಡುಗಳಲ್ಲಿ ನಡೆಯುತ್ತವೆ. ಮಾಹಿತಿ, ಸುದ್ದಿ ಎಲ್ಲವೂ ಹಾಗೆಯೇ. ಎಲ್ಲವೂ ನೇರ ಪ್ರಸಾರ.
ಆದರೆ ಈ ವೇಗದ ಬೆಳವಣಿಗೆಯ ನಡುವೆ ಸಾಮಾನ್ಯವಾಗಿ ಗಮನಕ್ಕೆ ಬರದ ವಿಷಯವೊಂದಿದೆ. ಅದೇನೆಂದರೆ, ಇಂದಿನ ಮಾಹಿತಿ ಹೆಚ್ಚಾಗಿ ನಿಯಂತ್ರಿತ ಮಾಹಿತಿಯಾಗಿದೆ ಎಂಬುದು. ಮುಖ್ಯವಾಹಿನಿಯ ಮಾಧ್ಯಮಗಳು ಏನನ್ನು ಜನರಿಗೆ ತಲುಪಿಸಬೇಕೆಂದು ಒಂದು ನಿರ್ದಿಷ್ಟ ಗುಂಪು ಬಯಸುತ್ತದೋ ಅವು ಮಾತ್ರ ನಮಗೆ ತಲುಪುತ್ತಿವೆೆ. ಮುಖ್ಯವಾಹಿನಿಯ ಮಾಧ್ಯಮಗಳು ಉದ್ದೇಶಪೂರ್ವಕ ವಾಗಿಯೇ ಬದಿಗೆ ಸರಿಸುವ ಅದೆಷ್ಟೋ ಕಟು ಸತ್ಯಗಳು ನಮಗೆ ತಲುಪುವುದೇ ಇಲ್ಲ.
ಯಾವುದೇ ಘಟನೆಯ ಬಗ್ಗೆ ನಮ್ಮ ಗ್ರಹಿಕೆಯನ್ನು ಹೆಚ್ಚಾಗಿ ಮಾಧ್ಯಮಗಳು ನಿಯಂತ್ರಿಸುತ್ತವೆ. ಅವು ನಮಗೆ ಏನನ್ನು ತಿಳಿಸಲು ಬಯಸುತ್ತವೆಯೋ ಅದು ಮಾತ್ರ ನಮಗೆ ತಿಳಿಯುತ್ತಿದೆ. ಫೆಲೆಸ್ತೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ಅಮಾನುಷ ದಾಳಿಯ ಕುರಿತಿರುವ ಸುದ್ದಿಗಳದ್ದೂ ಇದೇ ಪರಿಸ್ಥಿತಿ. ಮಾಧ್ಯಮಗಳು ಹೀಗೆ ಮಾಹಿತಿಯನ್ನು ನಿಯಂತ್ರಿಸುವ ಈ ವಿದ್ಯಮಾನದಲ್ಲಿ ಆಗುತ್ತಿರುವುದು ಹಲವಾರು ಕಹಿ ಸತ್ಯಗಳ ಕಗ್ಗೊಲೆ.
ಫೆಲೆಸ್ತೀನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯನ್ನು ವರದಿ ಮಾಡುವಾಗ ಪಾಶ್ಚಿಮಾತ್ಯ ಮಾಧ್ಯಮಗಳು ಮತ್ತು ಭಾರತೀಯ ಮಾಧ್ಯಮಗಳು ಘೋರ ಪಕ್ಷಪಾತವನ್ನೇ ತೋರಿಸಿವೆ. ಅಮಾಯಕ ಮಕ್ಕಳು ಸೇರಿದಂತೆ ಲಕ್ಷಾಂತರ ಜನರ ಮೇಲೆ ಇಸ್ರೇಲ್ ನಡೆಸುತ್ತಿರುವ ಬಾಂಬ್ ದಾಳಿಗಳ ಗಂಭೀರತೆ ಮತ್ತು ವಿವರಗಳನ್ನು ಅನೇಕ ಮಾಧ್ಯಮ ಸಂಸ್ಥೆಗಳು ಯಾವ ಕಳವಳವೂ ಇಲ್ಲದೆ ಬದಿಗೆ ಸರಿಸಿವೆ. ಅದರ ಬಗ್ಗೆ ಚರ್ಚೆಯನ್ನೇ ಮಾಡದೆ ಬಿಟ್ಟು ಬಿಟ್ಟಿವೆ.
ಮಾಧ್ಯಮಗಳು ಉದ್ದೇಶಪೂರ್ವಕವಾಗಿಯೇ ವಿಷಯಗಳನ್ನು ತಮ್ಮ ನಿಲುವಿಗೆ ತಕ್ಕಂತೆ ತಿರುಚುತ್ತಾ, ಇಸ್ರೇಲ್ ಪರ ಗ್ರಹಿಕೆ ಮೂಡಿಸಲು ಯತ್ನಿಸಿವೆ. ಅತಿ ಕ್ರೂರಿ ಇಸ್ರೇಲ್ ಅನ್ನು ಬಲಿಪಶು ಎಂಬಂತೆ ಮುಖ್ಯವಾಹಿನಿಯ ಮಾಧ್ಯಮಗಳು ಚಿತ್ರಿಸುತ್ತಲೇ ಬಂದಿವೆ. ಅದರ ಜೊತೆ ಜೊತೆಗೆ ಭಯೋತ್ಪಾದಕರನ್ನು ಸದೆ ಬಡಿಯುವ ದಿಟ್ಟ ದೇಶ ಎಂಬ ಇಮೇಜ್ ಅನ್ನೂ ಇಸ್ರೇಲ್‌ಗೆ ದಯಪಾಲಿಸುತ್ತಲೇ ಬಂದಿವೆ.
ಸಾಮಾನ್ಯ ಸುದ್ದಿಯನ್ನೂ ಹೇಗೆ ವರದಿ ಮಾಡಲಾಗುತ್ತದೆ ಎಂಬುದೂ ಬಹುಮುಖ್ಯ. ವರದಿಗಾರ ಅವನಿಗೆ ಬೇಕಾದದ್ದನ್ನು ತೋರಿಸುತ್ತಾನೆ ಮತ್ತು ಯಾವುದನ್ನು ಮರೆಮಾಚಲು ಬಯಸುತ್ತಾನೋ ಅದನ್ನು ಮರೆಮಾಚುತ್ತಾನೆ. ಒಂದೇ ಸುದ್ದಿ ಜನರಲ್ಲಿ ಎರಡು ರೀತಿಯ ಗ್ರಹಿಕೆಗಳನ್ನು ಉಂಟುಮಾಡಬಹುದು. ಸುದ್ದಿಯನ್ನು ವರದಿ ಮಾಡಲು ಬಳಸುವ ಭಾಷೆಯಂತೂ ಅಭಿಪ್ರಾಯ ರೂಪಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತವೆ. ಯಾವುದೇ ಅಭಿಪ್ರಾಯವನ್ನು ನೇರವಾಗಿ ವ್ಯಕ್ತಪಡಿಸದೆಯೇ ಒಂದು ಸುದ್ದಿ ಬಲವಾಗಿ ಒಂದು ಅಭಿಪ್ರಾಯವನ್ನು ರೂಪಿಸಬಹುದು. ಕೊಡುವ ಟೈಟಲ್‌ಗಳು, ಬಳಸುವ ಚಿತ್ರಗಳು, ಇವೆಲ್ಲಾ ಜನರಲ್ಲಿ ಗ್ರಹಿಕೆಗಳು ಮೂಡುವುದಕ್ಕೆ ಬಹಳ ಪ್ರಮುಖ ಪಾತ್ರ ವಹಿಸುತ್ತವೆ. ಅದನ್ನೇ ಮಾಧ್ಯಮಗಳು ಇಸ್ರೇಲ್ ಹಾಗೂ ಫೆಲೆಸ್ತೀನ್ ವಿಷಯದಲ್ಲಿ ಮಾಡುತ್ತಿವೆ. ಅವು ತಮ್ಮ ಟೈಟಲ್‌ಗಳು, ಫೋಟೊಗಳು, ಭಾಷೆಯ ಮೂಲಕ ಇಸ್ರೇಲ್ ಅನ್ನು ಬಲಿಪಶು, ಹೋರಾಟಗಾರ, ಧೈರ್ಯಶಾಲಿ ಎಂದು ಬಿಂಬಿಸಿದರೆ, ಫೆಲೆಸ್ತೀನ್ ಅನ್ನು ಭಯೋತ್ಪಾದಕರ ನಾಡು ಎಂಬಂತೆ ತೋರಿಸುತ್ತವೆ.
ಹೆಚ್ಚಿನ ಪಾಶ್ಚಿಮಾತ್ಯ ಮಾಧ್ಯಮಗಳು ಮತ್ತು ಭಾರತೀಯ ಮಾಧ್ಯಮಗಳು ಮುದ್ರಣ ಮತ್ತು ಪ್ರಸಾರ ಎರಡರಲ್ಲೂ, ಗಾಝಾದಲ್ಲಿನ ಘಟನೆಗಳ ಕುರಿತು ವರದಿ ಮಾಡಲು ಕೆಲವು ಬೇರೆಯದೇ ನಿಯಮಗಳನ್ನು ಅನುಸರಿಸಿದವು. ಅದನ್ನು ಕೆಲ ಉದಾಹರಣೆಗಳೊಂದಿಗೆ ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ.
ವೆಸ್ಟ್‌ಬ್ಯಾಂಕ್ ಮತ್ತು ಗಾಝಾ ಪಟ್ಟಿಯ ಬಗ್ಗೆ ವಿವಾದಿತ ಪ್ರದೇಶಗಳು ಮತ್ತು ಆಕ್ರಮಿತ ಪ್ರದೇಶಗಳು ಎಂಬ ಪದಗಳನ್ನು ಬಳಸಲಾಗುತ್ತಿದೆ. ಐತಿಹಾಸಿಕವಾಗಿ ಫೆಲೆಸ್ತೀನ್‌ಗೆ ಸೇರಿರುವ ಮತ್ತು ಫೆಲೆಸ್ತೀನ್‌ಗೆ ಸೇರಿದೆ ಎಂದು ಎಲ್ಲಾ ಅಂತರ್‌ರಾಷ್ಟ್ರೀಯ ಸಂಸ್ಥೆಗಳಿಂದ ಗುರುತಿಸಲ್ಪಟ್ಟ ಪ್ರದೇಶಗಳನ್ನು ಮುಖ್ಯವಾಹಿನಿಯ ಪಾಶ್ಚಿಮಾತ್ಯ ಮಾಧ್ಯಮಗಳು ‘ವಿವಾದಿತ ಪ್ರದೇಶಗಳು’ ಎಂದು ಕರೆಯುತ್ತವೆ.
ಇಸ್ರೇಲ್ ಕಬಳಿಸಿಕೊಂಡಿರುವ ನೆಲವನ್ನು ವಿವಾದಿತ ಪ್ರದೇಶಗಳು ಎನ್ನುವ ಮೂಲಕ ಇಸ್ರೇಲ್ ಪರವಾಗಿ ತಮ್ಮ ಮುಕ್ತ ಪಕ್ಷಪಾತವನ್ನು ಈ ಮಾಧ್ಯಮಗಳು ಪ್ರದರ್ಶಿಸುತ್ತವೆ. ಈ ನಾಚಿಕೆಯಿಲ್ಲದ ಮಾಧ್ಯಮಗಳು ವಿವಾದಾತ್ಮಕ ಎಂದುಕೊಳ್ಳುವ ಪ್ರದೇಶಗಳು, ವಿವಾದಾತ್ಮಕವಲ್ಲ. ಬದಲಿಗೆ ಇಸ್ರೇಲಿ ಸೈನ್ಯ ವರ್ಷಗಳಿಂದ ಆಕ್ರಮಿಸಿಕೊಂಡಿರುವ ಪ್ರದೇಶಗಳಾಗಿವೆ ಎಂಬುದು ಎಲ್ಲರಿಗೂ ತಿಳಿದಿರುವ ಸ್ಪಷ್ಟ ಇತಿಹಾಸವಾಗಿದೆ.
ಇಡೀ ಜಗತ್ತೇ ನೋಡುತ್ತಿರುವಂತೆ ಮುಗ್ಧ ಮಕ್ಕಳನ್ನು ಹತ್ಯೆಗೈಯುತ್ತಿರುವಾಗ ಅದಕ್ಕೆ ಪ್ರತಿರೋಧ ಒಡ್ಡುವುದು ಈ ಮಾಧ್ಯಮಗಳ ಪ್ರಕಾರ ಭಯೋತ್ಪಾದನೆ. ಬಹುತೇಕ ಮುಖ್ಯವಾಹಿನಿಯ ಮಾಧ್ಯಮಗಳು ತುಳಿತಕ್ಕೊಳಗಾದವರ ಜೊತೆ ನಿಲ್ಲುವ ಬದಲು ದಬ್ಬಾಳಿಕೆ ಮಾಡುವವರ ಜೊತೆ ನಿಲ್ಲುವುದನ್ನೇ ಆಯ್ಕೆ ಮಾಡಿಕೊಂಡಿವೆ.
ಯಾವುದೇ ಪ್ರಜ್ಞಾವಂತ ಪತ್ರಕರ್ತ ಫೆಲೆಸ್ತೀನ್‌ನಲ್ಲಿ ಇಸ್ರೇಲ್ ನಿರ್ಮಿಸಿರುವ ಗೋಡೆಗಳನ್ನು ಭದ್ರತಾ ಬೇಲಿ ಎಂದು ಹೇಳಲು ಸಾಧ್ಯವಿಲ್ಲ. ಮನುಷ್ಯರ ನಡುವೆ ವರ್ಣಭೇದ ಸೃಷ್ಟಿಸುವ ಗೋಡೆಯನ್ನು ಭದ್ರತಾ ಬೇಲಿ ಎಂದು, ಅದೂ ಮಾಧ್ಯಮಗಳು ಕರೆಯಲು ಹೇಗೆ ಸಾಧ್ಯ? ಅಂತರ್‌ರಾಷ್ಟ್ರೀಯ ನ್ಯಾಯಾಲಯವೇ ಕಾನೂನುಬಾಹಿರ ಎಂದು ಕರೆದಿರುವ ಗೋಡೆಯನ್ನು ಮುಖ್ಯವಾಹಿನಿಯ ಮಾಧ್ಯಮಗಳು ‘ಭದ್ರತಾ ಬೇಲಿ’ ಎಂದು ಕರೆಯುತ್ತವೆ ಎಂದರೆ ಇದಕ್ಕೆ ಏನೆನ್ನಬೇಕು? ಅತ್ಯಂತ ಕಡಿಮೆ ಸಂಪನ್ಮೂಲಗಳೊಂದಿಗೆ ತೀರಾ ಸಣ್ಣ ಪುಟ್ಟ ಅಸ್ತ್ರಗಳೊಂದಿಗೆ ತಮ್ಮ ತಾಯ್ನಾಡನ್ನು ರಕ್ಷಿಸಿಕೊಳ್ಳಲು ಹೋರಾಡುತ್ತಿರುವ ಜನರನ್ನು ಭಯೋತ್ಪಾದಕರು ಎಂದು ಕರೆಯುವುದಂತೂ ನಾಚಿಕೆಗೇಡಿನ ಸಂಗತಿ. ಆದರೆ ಮುಖ್ಯವಾಹಿನಿಯ ಮಾಧ್ಯಮಗಳು ಇದನ್ನೇ ಮಾಡುತ್ತಾ ಬಂದಿವೆ. ಈ ಮೂಲಕ ಇಸ್ರೇಲ್ ಪರವಾದ ಗ್ರಹಿಕೆಯನ್ನೇ ಮಾಧ್ಯಮಗಳು ಸೃಷ್ಟಿಸುತ್ತಾ ಬಂದಿವೆ.
ಇಸ್ರೇಲ್ ಆಕ್ರಮಿತ ಫೆಲೆಸ್ತೀನಿ ಭೂಮಿಯಲ್ಲಿ ನಿರ್ಮಿಸಿದ ವಸಾಹತುಗಳನ್ನು ಮುಖ್ಯವಾಹಿನಿಯ ಮಾಧ್ಯಮಗಳು ಸಾಮಾನ್ಯವಾಗಿ ‘ನೆರೆಹೊರೆಗಳು’ ಎಂದು ಕರೆಯುತ್ತವೆ. ಹಮಾಸ್ ಅಥವಾ ಇತರ ಯಾವುದೇ ಫೆಲೆಸ್ತೀನಿ ಗುಂಪಿನ ದಾಳಿಯನ್ನು ‘ಭಯೋತ್ಪಾದಕ ದಾಳಿ’ ಎಂದು ಕರೆಯಲಾಗುತ್ತದೆ. ಆದರೆ ಇಸ್ರೇಲ್ ದಾಳಿಯನ್ನು ಪ್ರತಿಕ್ರಿಯೆ ಅಥವಾ ಪ್ರತೀಕಾರ ಎಂದು ಕರೆಯಲಾಗುತ್ತದೆ.
ಪಾಶ್ಚಿಮಾತ್ಯ ಮಾಧ್ಯಮಗಳ ಪ್ರಕಾರ ಫೆಲೆಸ್ತೀನಿಯರು ಕೊಲ್ಲಲ್ಪಡುವುದಿಲ್ಲ, ಬದಲಿಗೆ ಅವರು ಘರ್ಷಣೆಯಲ್ಲಿ ಸಾಯುತ್ತಾರೆ ಅಥವಾ ಗುಂಡಿನ ಚಕಮಕಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಫೆಲೆಸ್ತೀನಿ ಮಗು ಕೂಡ ಅವುಗಳ ದೃಷ್ಟಿಯಲ್ಲಿ ಮಗುವಲ್ಲ. ಇಸ್ರೇಲಿ ಮಿಲಿಟರಿ ಸೃಷ್ಟಿಸಿದ ಊಹಿಸಲಾಗದ ಪರಿಸ್ಥಿತಿಗಳಿಂದಾಗಿ ಸಾಯುತ್ತಿರುವ ಶಿಶುಗಳ ಕುರಿತು, ‘ದುರ್ಬಲವಾದ ಜೀವಗಳು ಕೊನೆಗೊಂಡಿವೆ’ ಎಂದು ಮಾತ್ರ ಮುಖ್ಯವಾಹಿನಿಯ ಮಾಧ್ಯಮಗಳು ವರದಿ ಮಾಡುತ್ತವೆ.
ಮುಖ್ಯವಾಹಿನಿಯ ಮಾಧ್ಯಮದವರ ಪ್ರಕಾರ ಫೆಲೆಸ್ತೀನಿ ಜನರು ಕೇವಲ ಸಂಖ್ಯೆಯಷ್ಟೇ. ಅವರ ನೋವು ಸಂಕಷ್ಟ ಸಾಮಾನ್ಯವಾಗಿ ವರದಿಯಾಗುವುದೇ ಇಲ್ಲ. ಸಾವಿರಾರು ಅಮಾಯಕರನ್ನು ಕೊಂದ ಇಸ್ರೇಲ್ ಸೈನ್ಯದ ಬಗ್ಗೆ, ‘ನಾಗರಿಕ ಸಾವುನೋವುಗಳನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ’ ಎಂದು ಈ ಮಾಧ್ಯಮಗಳು ಸರ್ಟಿಫಿಕೇಟ್ ಕೊಡುತ್ತವೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೇನಾದರೂ ಇದೆಯೇ?
ಅಮೆರಿಕದ ಮುಖ್ಯವಾಹಿನಿ ಮಾಧ್ಯಮಗಳ ಪದ ಬಳಕೆ ಕುರಿತು ಈ ವರ್ಷದ ಆರಂಭದಲ್ಲಿ ನಡೆಸಿದ್ದ ಅಧ್ಯಯನವೊಂದು ಅಮೆರಿಕ ಮಾಧ್ಯಮಗಳು ತೋರಿಸುತ್ತಿರುವ ಪಕ್ಷಪಾತವನ್ನು ಬಯಲು ಮಾಡಿತ್ತು. ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿಯನ್ನು ವಿವರಿಸಲು ‘ಸ್ಲಾಟರ್’ ಅಂದರೆ ‘ಹತ್ಯೆ’ ಎಂಬ ಪದವನ್ನು 60 ಬಾರಿ ಬಳಸಲಾಗಿದ್ದರೆ, ಇಸ್ರೇಲ್ ಗಾಝಾ ಮೇಲೆ ನಡೆಸಿದ ದಾಳಿಗಳನ್ನು ವಿವರಿಸಲು ಇದೇ ಸ್ಲಾಟರ್ ಪದವನ್ನು ಕೇವಲ ಒಂದು ಬಾರಿ ಬಳಸಲಾಗಿದೆ.
ಇನ್ನು ಹಮಾಸ್ ನಡೆಸಿದ ದಾಳಿಯನ್ನು ವಿವರಿಸಲು ‘ಮಸಾಕರ್’ ಅಂದರೆ ‘ಹತ್ಯಾಕಾಂಡ’ ಎಂಬ ಪದವನ್ನು 125 ಬಾರಿ ಬಳಸಲಾಗಿದ್ದರೆ, ಇಸ್ರೇಲ್ ಗಾಝಾ ಮೇಲೆ ನಡೆಸಿದ ದಾಳಿಗಳನ್ನು ವಿವರಿಸಲು ಇದೇ ಪದವನ್ನು ಕೇವಲ ಎರಡು ಬಾರಿ ಮಾತ್ರ ಬಳಸಲಾಗಿದೆ.
ಹಮಾಸ್ ನಡೆಸಿದ ದಾಳಿಯನ್ನು ವಿವರಿಸಲು ‘ಹಾರಿಫಿಕ್’ ಅಂದರೆ ‘ಭಯಾನಕ’ ಎಂಬ ಪದವನ್ನು 36 ಬಾರಿ ಬಳಸಲಾಗಿದ್ದರೆ, ಇಸ್ರೇಲ್ ಗಾಝಾ ಮೇಲೆ ನಡೆಸಿದ ದಾಳಿಗಳನ್ನು ವಿವರಿಸಲು ಇದೇ ಪದವನ್ನು ಕೇವಲ ನಾಲ್ಕು ಬಾರಿ ಬಳಸಲಾಗಿದೆ. ಇದನ್ನೆಲ್ಲಾ ನೋಡಿದರೆ ಮಾಧ್ಯಮಗಳ ಪಕ್ಷಪಾತ ಅದೆಷ್ಟು ಸ್ಪಷ್ಟವಾಗಿದೆ ಎಂಬುದು ಅರ್ಥವಾಗುತ್ತದೆ.
ಭಾರತೀಯ ಮುಖ್ಯವಾಹಿನಿಯ ಮಾಧ್ಯಮಗಳೂ ಈ ಕಾಪಟ್ಯದಲ್ಲಿ ಹಿಂದೆ ಬಿದ್ದಿಲ್ಲ. ಇದೇ ರೀತಿಯ ತೀರಾ ಏಕಪಕ್ಷೀಯ ವರದಿಗಳನ್ನು ಭಾರತೀಯ ಮಾಧ್ಯಮಗಳ ವರದಿಗಳಲ್ಲಿಯೂ ಕಾಣಬಹುದು. ಭಾರತೀಯ ಮಾಧ್ಯಮಗಳಲ್ಲಿ ತುಂಬಿರುವ ಮುಸ್ಲಿಮ್ ದ್ವೇಷದಿಂದಾಗಿ ಗಾಝಾದಲ್ಲಿ ನಡೆಯುತ್ತಿರುವ ನರಮೇಧ ಹೆಚ್ಚಾಗಿ ವರದಿಯೇ ಆಗದೇ ಹೋಗಿದೆ.
ಭಾರತೀಯ ಮಾಧ್ಯಮಗಳು ‘ನ್ಯೂಯಾರ್ಕ್ ಟೈಮ್ಸ್’ ಅಥವಾ ಇತರ ಯಾವುದೇ ಪಾಶ್ಚಿಮಾತ್ಯ ಏಜೆನ್ಸಿಗಳಿಂದ ಸುದ್ದಿ ವರದಿಗಳನ್ನು ಹೆಚ್ಚಾಗಿ ವರದಿ ಮಾಡಿವೆ. ಆದರೆ ಫೆಲೆಸ್ತೀನ್‌ನಿಂದ ಸಾಕಷ್ಟು ಚೆನ್ನಾಗಿ ವರದಿ ಮಾಡಿದ ‘ಅಲ್ ಜಝೀರಾ’ ದಂತಹ ಮಾಧ್ಯಮ ಸಂಸ್ಥೆಗಳನ್ನು ಭಾರತದ ಮಾಧ್ಯಮಗಳು ಪೂರ್ತಿ ನಿರ್ಲಕ್ಷಿಸಿವೆ.
ಇಸ್ರೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದಾಗ, ಭಾರತೀಯ ಮಾಧ್ಯಮ ಸಂಸ್ಥೆಗಳ ಪ್ರಸಾರದಲ್ಲಿ ಅವರ ಪ್ರತಿಕ್ರಿಯೆಗಳೇ ತುಂಬಿದ್ದವು. ಆದರೆ ಇಸ್ರೇಲಿ ಜೈಲುಗಳಲ್ಲಿ ನರಕವನ್ನು ಅನುಭವಿಸಿದ ಯುವ ಫೆಲೆಸ್ತೀನಿಯರ ಅನುಭವಗಳ ಕುರಿತು ನಮ್ಮ ಮಾಧ್ಯಮಗಳು ತೋರಿಸಲೂ ಇಲ್ಲ, ಚರ್ಚಿಸಲೂ ಇಲ್ಲ.
ಭಾರತದ ಮುಖ್ಯವಾಹಿನಿಯ ಮಾಧ್ಯಮಗಳ ಮೂಲಕ ಭಾರತೀಯರು ತಿಳಿದಿರುವುದು ಇಸ್ರೇಲ್ ನಡೆಸುತ್ತಿರುವ ದಾಳಿಗಳ ಒಂದು ಭಾಗ ಮಾತ್ರ. ಭಾರತದ ಮಾಧ್ಯಮಗಳ ಈ ರೀತಿಯ ವರದಿಗಾರಿಕೆಯನ್ನು ದೂರದ ಗಾಝಾ ವಿಷಯದಲ್ಲಿ ಮಾತ್ರವಲ್ಲ, ನಮ್ಮದೇ ಆದ ಕಾಶ್ಮೀರ ಮತ್ತು ಮಣಿಪುರದ ಕುರಿತಾಗಿಯೂ ಕಾಣಬಹುದು.
ಮಣಿಪುರ ಮತ್ತು ಕಾಶ್ಮೀರದ ಜನರ ನೋವನ್ನು ತೋರಿಸಲು ವಿಫಲವಾದ ಮಾಧ್ಯಮ ಸಂಸ್ಥೆಗಳು ಗಾಝಾದ ಜನರ ನೋವು ಮತ್ತು ಸಂಕಟಗಳನ್ನು ತೋರಿಸಬಹುದು ಎಂದು ನಿರೀಕ್ಷಿಸುವುದೇ ಮೂರ್ಖತನ ಎಂದು ಅನ್ನಿಸುತ್ತದೆ. ಈ ರೀತಿ ಪಕ್ಷಪಾತದ ವರದಿಗಳ ಕುರಿತು ಪಾಶ್ಚಿಮಾತ್ಯ ಮಾಧ್ಯಮ ಸಂಸ್ಥೆಗಳ ಪತ್ರಕರ್ತರೇ ವಿರೋಧ ವ್ಯಕ್ತಪಡಿಸಿದ್ದಿದೆ.
2023ರ ನವೆಂಬರ್‌ನಲ್ಲಿ ಫೆಲೆಸ್ತೀನಿ ಜನರ ವಿರುದ್ಧ ಇಸ್ರೇಲ್‌ನ ದೌರ್ಜನ್ಯಗಳ ಪಾಶ್ಚಿಮಾತ್ಯ ಮಾಧ್ಯಮದ ಪ್ರಸಾರವನ್ನು ಪ್ರತಿಭಟಿಸಿ ಹಲವಾರು ಅಮೆರಿಕನ್ ಸುದ್ದಿಸಂಸ್ಥೆಗಳ 1,500ಕ್ಕೂ ಹೆಚ್ಚು ಪತ್ರಕರ್ತರು ಬಹಿರಂಗ ಪತ್ರಕ್ಕೆ ಸಹಿ ಹಾಕಿದ್ದರು. ಎಂಟು ಬಿಬಿಸಿ ಪತ್ರಕರ್ತರು ಅಲ್ ಜಝೀರಾಗೆ ಈ ಕುರಿತು ಬಹಿರಂಗ ಪತ್ರವನ್ನೂ ಬರೆದಿದ್ದರು. ಬಿಬಿಸಿ ಇಸ್ರೇಲ್-ಫೆಲೆಸ್ತೀನ್ ಬಗ್ಗೆ ನಿಖರವಾಗಿ ವರದಿ ಮಾಡಲು ವಿಫಲವಾಗಿದೆ ಎಂದು ಅವರು ಆರೋಪಿಸಿದ್ದರು. ಸಿಎನ್‌ಎನ್ ಮತ್ತು ಬಿಬಿಸಿಗಾಗಿ ವರದಿ ಮಾಡಿದ ಹತ್ತು ಪತ್ರಕರ್ತರು ಸಿಎನ್‌ಎನ್ ಮತ್ತು ಬಿಬಿಸಿ ಕವರೇಜ್‌ನಲ್ಲಿ ಇಸ್ರೇಲ್ ಪರ ಪಕ್ಷಪಾತವಿತ್ತು ಎಂದು ಆರೋಪಿಸಿರುವುದಾಗಿ ಅಲ್ ಜಝೀರಾ ವರದಿ ಹೇಳಿದೆ.
ಆಸ್ಪತ್ರೆಗಳಂತಹ ಸಂರಕ್ಷಿತ ಸೈಟ್‌ಗಳ ಮೇಲಿನ ದಾಳಿಗಳು ಸೇರಿದಂತೆ ಫೆಲೆಸ್ತೀನಿ ನಾಗರಿಕರ ಮೇಲೆ ಇಸ್ರೇಲ್‌ನ ದಾಳಿಗಳನ್ನು ಭಯೋತ್ಪಾದನೆ ಎಂದು ಲೇಬಲ್ ಮಾಡದಂತೆ ನ್ಯೂಯಾರ್ಕ್ ಟೈಮ್ಸ್ ತನ್ನ ಪತ್ರಕರ್ತರಿಗೆ ಸಲಹೆ ನೀಡಿದ್ದಾಗಿಯೂ ವರದಿಯಾಗಿತ್ತು.
ಸಾರ್ವಜನಿಕರಿಗೆ ನ್ಯಾಯಯುತ, ನಿಖರ ಮತ್ತು ಪಕ್ಷಪಾತವಿಲ್ಲದ ರೀತಿಯಲ್ಲಿ ಸತ್ಯವನ್ನು ತಲುಪಿಸುವುದೇ ಓರ್ವ ಪತ್ರಕರ್ತನ ಮುಖ್ಯ ಜವಾಬ್ದಾರಿ. ಆದರೆ ಫೆಲೆಸ್ತೀನ್ ವಿಷಯಕ್ಕೆ ಬಂದಾಗ, ವಿಶ್ವದ ಮುಖ್ಯವಾಹಿನಿಯ ಮಾಧ್ಯಮ ಇದಕ್ಕೆ ಪೂರ್ತಿ ವಿರುದ್ಧವಾಗಿ ವರ್ತಿಸಿದೆ. ಇಷ್ಟೆಲ್ಲಾ ಹೇಳಿದ ಬಳಿಕ ಕೊನೆಗೆ ಒಂದು ವಿಷಯವನ್ನು ಇಲ್ಲಿ ಪ್ರಸ್ತಾಪಿಸಲೇಬೇಕು.ತುಳಿತಕ್ಕೊಳಗಾದವರ ಜೊತೆ ನಿಂತು ಸತ್ಯವನ್ನು ಜಗತ್ತಿಗೆ ತೋರಿಸಲು ದಿಟ್ಟತನದಿಂದ ಮುಂದಾದ ಪತ್ರಕರ್ತರಿಗೆ ಧನ್ಯವಾದಗಳು.
ಗಾಝಾದಲ್ಲೇ ಅದೆಷ್ಟೋ ದಿಟ್ಟ ವರದಿಗಾರರು ಅಲ್ಲಿನ ಚಿಂತಾಜನಕ ಸ್ಥಿತಿ ಕುರಿತು ವರದಿ ಮಾಡುತ್ತಲೇ ಇಸ್ರೇಲ್‌ನ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. ಗಾಯಾಳುಗಳಾಗಿದ್ದಾರೆ. ಹಲವಾರು ಯಹೂದಿ ಪತ್ರಕರ್ತರೇ ಇಸ್ರೇಲ್ ಮಾಡುತ್ತಿರುವುದು ಘೋರ ಅನ್ಯಾಯ, ನಮ್ಮ ಹೆಸರಲ್ಲಿ ಹೀಗೆ ಮಾಡಬೇಡಿ ಎಂದು ಬರೆದಿದ್ದಾರೆ. ಅಮೆರಿಕ, ಬ್ರಿಟನ್ ಸಹಿತ ಹಲವು ದೇಶಗಳ ಹಲವು ಸ್ವತಂತ್ರ ಪತ್ರಕರ್ತರೂ ಗಾಝಾದ ಮೇಲಾಗುತ್ತಿರುವ ಆಕ್ರಮಣವನ್ನು ಜಗತ್ತಿಗೆ ತಿಳಿಸಲು ಶ್ರಮಿಸಿದ್ದಾರೆ. ಕಡೆಗೂ ಉಳಿಯುವುದು ಅವರು ನಮ್ಮೆದುರು ಇಟ್ಟ ಸತ್ಯಗಳು ಮಾತ್ರ.