ಮೋದಿಯವರ ‘ಬೃಹತ್ ಯೋಜನೆ’ ಎಲ್ಲಿ ಹೋಯಿತು?

ಕೋಟಿ ಜನರಿಂದ ಪಡೆದ ಸಲಹೆಗಳು ರೆಕಾರ್ಡಿಂಗ್, ಡಾಕ್ಯುಮೆಂಟ್ ಹೀಗೆ ಯಾವುದಾದರೊಂದು ರೂಪದಲ್ಲಿಯೇ ಇರಬೇಕಿತ್ತಲ್ಲವೇ? ಇನ್ನು ಅಧಿಕಾರಿಗಳೊಂದಿಗಿನ ಸಭೆಯ ವಿವರಗಳ ದಾಖಲೆಯಾದರೂ ಇರಬೇಕಲ್ಲವೇ? ಸಭೆಯಲ್ಲಿ ಏನೆಲ್ಲ ಚರ್ಚೆಯಾಯಿತು ಎನ್ನುವುದರ ವಿವರಗಳನ್ನು ದಾಖಲಿಸಿಕೊಳ್ಳಲಾಗುತ್ತದೆಯಲ್ಲವೇ? 100 ದಿನಗಳದ್ದಲ್ಲ, 5 ವರ್ಷಗಳದ್ದಲ್ಲ, 25 ವರ್ಷಗಳದ್ದಲ್ಲ, 1,000 ವರ್ಷಗಳದ್ದು ಎಂದರೆ ಅದರ ಬಗೆಗಿನ ಚರ್ಚೆ ಮತ್ತು ಪ್ಲ್ಯಾನ್‌ನ ವಿವರಗಳು ಮತ್ತು ಮಾಹಿತಿಯೇ ಇಲ್ಲವೆಂದರೆ ಏನರ್ಥ?

Update: 2024-10-30 06:24 GMT

‘‘ಮೂರನೇ ಅವಧಿಯಲ್ಲಿ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು. ಬಡತನವನ್ನು ತೊಡೆದುಹಾಕಲು ಮತ್ತು ಭಾರತದ ಅಭಿವೃದ್ಧಿಗೆ ಹೊಸ ವೇಗ ನೀಡಲು, ನಾನು ಕಳೆದ ಒಂದೂವರೆ ವರ್ಷಗಳಿಂದ ಹೊಸ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದೇನೆ.

ಯಾವ ಕ್ಷೇತ್ರದಲ್ಲಿ ಯಾವ ಕಾಮಗಾರಿ ಕೈಗೊಳ್ಳಬೇಕು ಎಂಬ ಬಗ್ಗೆ ಸಂಪೂರ್ಣ ಮಾರ್ಗಸೂಚಿ ತಯಾರಿಸುತ್ತಿದ್ದೇನೆ.ಇದಕ್ಕಾಗಿ 15 ಲಕ್ಷಕ್ಕೂ ಹೆಚ್ಚು ಜನರಿಂದ ಸಲಹೆಗಳನ್ನು ಕೇಳಿದ್ದೇನೆ.

ಈ ಬಗ್ಗೆ ನಾನು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿಲ್ಲ. ಇದೇ ಮೊದಲ ಬಾರಿಗೆ ಈ ಬಗ್ಗೆ ಮಾತನಾಡುತ್ತಿದ್ದೇನೆ. ಕೆಲಸ ನಡೆಯುತ್ತಿದೆ ಮತ್ತು ಮುಂದಿನ 20-30 ದಿನಗಳಲ್ಲಿ ಈ ಮಾರ್ಗಸೂಚಿ ತಯಾರಾಗಲಿದೆ. ಇದು ಮೋದಿ ಗ್ಯಾರಂಟಿ.’’

ಇದು ಪ್ರಧಾನಿ ನರೇಂದ್ರ ಮೋದಿ 2024ರ ಫೆಬ್ರವರಿಯಲ್ಲಿ ವಿಶ್ವ ಉದ್ಯಮ ಶೃಂಗಸಭೆಯಲ್ಲಿ ಆಡಿದ್ದ ಮಾತು.

ಲೋಕಸಭಾ ಚುನಾವಣೆಗೆ 3 ತಿಂಗಳ ಮೊದಲು ಮೋದಿ ಈ ಮಾತನ್ನು ಹೇಳಿದ್ದರು. ಅದಾಗಿ ಮುಕ್ಕಾಲು ವರ್ಷವೇ ಆಯಿತು. ಈಗ ಅಕ್ಟೋಬರ್ ಮುಗಿಯುತ್ತಿದ್ದರೂ ಮೋದಿ ಮಾಸ್ಟರ್‌ಪ್ಲ್ಯಾನ್ ಬಗ್ಗೆ ಏನೇನೂ ಮಾಹಿತಿ ಇಲ್ಲ. ಅವರು ಹೇಳಿದ್ದ ವಿವರವಾದ ರೋಡ್ ಮ್ಯಾಪ್ ಕೂಡ ಇಲ್ಲ.

ಫೆಬ್ರವರಿ 9ರಂದು ಆ ಹೇಳಿಕೆ ನೀಡಿದ ಎರಡು ತಿಂಗಳ ನಂತರ ಎಪ್ರಿಲ್‌ನಲ್ಲಿ ಒಂದು ಇಂಟರ್‌ವ್ಯೆನಲ್ಲಿ ಸುಪ್ರೀಂ ಲೀಡರ್ ಮೋದಿಯವರು ಮತ್ತೂ ಒಂದು ಹೇಳಿಕೆ ಕೊಟ್ಟಿದ್ದರು.

‘‘ನಾನು ಕಳೆದ ಎರಡು ವರ್ಷಗಳಿಂದ 2047ನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ ಮತ್ತು ಅದಕ್ಕಾಗಿ, ಎಲ್ಲ ವಿಶ್ವವಿದ್ಯಾನಿಲಯಗಳನ್ನು, ಬೇರೆ ಬೇರೆ ಎನ್‌ಜಿಒಗಳನ್ನು ಸಂಪರ್ಕಿಸಿದ್ದೇನೆ.

ಮುಂಬರುವ 25 ವರ್ಷಗಳಲ್ಲಿ ಭಾರತವನ್ನು ಹೇಗೆ ನೋಡಬೇಕೆಂಬ ಬಗ್ಗೆ ನಾನು 15 ಲಕ್ಷಕ್ಕೂ ಹೆಚ್ಚು ಜನರಿಂದ ಸಲಹೆಗಳನ್ನು ತೆಗೆದುಕೊಂಡಿದ್ದೇನೆ.

ನಂತರ ಎಐ ನೆರವಿನಿಂದ ಅದನ್ನೆಲ್ಲ ವಿಷಯವಾರು ವಿಂಗಡಿಸಿದ್ದೇನೆ. ಇದಕ್ಕೆಂದೇ ಪ್ರತೀ ಇಲಾಖೆಗಳಲ್ಲಿ ಪ್ರತ್ಯೇಕ ತಂಡಗಳಿವೆ. ಯೋಜನೆಯ ನಕ್ಷೆ ಮೂರು ಭಾಗಗಳಲ್ಲಿದೆ.

25 ವರ್ಷ, 5 ವರ್ಷ ಮತ್ತು 100 ದಿನಗಳು.

ಒಂದು ನಿಮಿಷವನ್ನೂ ವ್ಯರ್ಥ ಮಾಡುವುದು ನನಗೆ ಇಷ್ಟವಿಲ್ಲ.’’

ಅಲ್ಲಿಗೇ ನಿಂತಿಲ್ಲ.

ಮೇ ತಿಂಗಳಲ್ಲಿ ಅವರ ಮತ್ತೊಂದು ಹೇಳಿಕೆ ಪ್ರಕಾರ,

‘‘ಮುಂದಿನ 1000 ವರ್ಷಗಳ ಪ್ರಖರ ಭವಿಷ್ಯದೆಡೆಗೆ ಭಾರತವನ್ನು ಕೊಂಡೊಯ್ಯುವಂಥ ಸನ್ನಿವೇಶ ನಿರ್ಮಾಣವಾಗಿದೆ. ಇದು ನಮ್ಮ ಸಮಯ, ಇದು ಭಾರತದ ಸಮಯ ಎನ್ನುವುದು ನನಗಂತೂ ಖಾತ್ರಿಯಾಗಿದೆ. ಈ ಅವಕಾಶವನ್ನು ನಾವು ಕಳೆದುಕೊಳ್ಳಕೂಡದು.’’

ಫೆಬ್ರವರಿಯಿಂದ ಮೇ ವರೆಗೆ ಮೋದಿ ಹೇಗೆ ಮಾತಿನಲ್ಲೇ ಅರಮನೆ ಕಟ್ಟಿದರು ಎನ್ನುವುದನ್ನು ಅವರ ಈ ಹೇಳಿಕೆಗಳ ಮೂಲಕ ನೋಡಬಹುದು.

ಅವರು ಅಂಗೈಯಲ್ಲೇ ಬ್ರಹ್ಮಾಂಡ ತೋರಿಸಿಬಿಟ್ಟರು. ಅವರ ಈ ಮೂರೂ ಹೇಳಿಕೆಗಳ ಬಗ್ಗೆ ಯಾರೊಬ್ಬರೂ ಪ್ರಶ್ನೆ ಮಾಡಲಿಲ್ಲ.

ಆದರೆ, ಏನು ನಿಮ್ಮ ಬೃಹತ್ ಯೋಜನೆ ಎಂಬ ಒಂದು ಪ್ರಶ್ನೆ ಮೋದಿಗೆ ಎದುರಾಯಿತು. ತಾನು ಕೆಲಸ ಮಾಡುವ ರೀತಿಯೇ ಗಾಡ್ ಗಿಫ್ಟೆಡ್ ಎಂದೆಲ್ಲ ಅದಕ್ಕೆ ಮೋದಿ ಉತ್ತರಿಸಿದ್ದೂ ಆಯಿತು. ಆದರೆ ಆ ಉತ್ತರದಲ್ಲಿ, ಅವರ ಗ್ರ್ಯಾಂಡ್ ಪ್ಲ್ಯಾನ್ ಏನು ಎನ್ನುವುದು ಮಾತ್ರ ಇರಲೇ ಇಲ್ಲ. 2047ರ ಆ ಪ್ಲ್ಯಾನ್ ಬಗ್ಗೆ ಅವರು ಯಾವ ಕಲ್ಪನೆಯೂ ಇಲ್ಲದೆ ಮಾತಾಡಲು ಶುರು ಮಾಡಿಬಿಟ್ಟಿದ್ದರು ಎಂದೆನ್ನಿಸುತ್ತದೆ.

‘ದಿ ವೈರ್’ನಲ್ಲಿ ಕುನಾಲ್ ಪುರೋಹಿತ್ ಒಂದು ವರದಿ ಪ್ರಕಟಿಸಿದ್ದರು. ಅವರ ಆ ವರದಿಗೆ ಆರ್‌ಟಿಐನಿಂದ ಪಡೆದ ಉತ್ತರಗಳ ಆಧಾರವಿತ್ತು.

ಮೋದಿಯವರ ಬಹು ವರ್ಷಗಳ, ಸಾವಿರ ವರ್ಷಗಳ ಪ್ಲ್ಯಾನ್ ಬಗ್ಗೆ ಸತ್ಯ ತಿಳಿಯುವ ಯತ್ನ ಅದರಲ್ಲಿತ್ತು.

ಮೋದಿ ಲಕ್ಷಗಟ್ಟಲೆ ಜನರಿಂದ, ಆಮೇಲೆ ಒಂದು ಕೋಟಿ ಜನರಿಂದ ಪಡೆದ ಸಲಹೆಗಳು ಏನು?, ಮತ್ತವನ್ನು ವಿಷಯದ ಪ್ರಕಾರ ಹೇಗೆ ವಿಂಗಡಿಸಿದ್ದಾರೆ ಎಂಬುದನ್ನೆಲ್ಲ ತಿಳಿದುಕೊಳ್ಳುವ ನಿಟ್ಟಿನ ಪ್ರಯತ್ನ ಆ ವರದಿಯಲ್ಲಿತ್ತು.

ಆ ಪತ್ರಕರ್ತರ ಆರ್‌ಟಿಐ ಪ್ರಶ್ನೆಗಳಿಗೆ ಉತ್ತರಿಸಿದ್ದ ಪಿಎಂಒ, ಈ ವಿಚಾರವಾಗಿ ಯಾವುದೇ ಮಾಹಿತಿ ಕೊಡಲು ಸಾಧ್ಯವಿಲ್ಲ ಎಂದುಬಿಟ್ಟಿತ್ತು.

ಯಾಕೆ ಹೀಗೆ?

ಮಡಿಲ ಮೀಡಿಯಾಗಳಂತೂ ಮೋದಿ ಪ್ಲ್ಯಾನ್ ಬಗ್ಗೆ ಯಾವ ಪ್ರತಿ ಪ್ರಶ್ನೆಗಳನ್ನೂ ಕೇಳದೆ, ಅದರ ಬಗ್ಗೆ ಎಷ್ಟು ಸಾಧ್ಯವೋ ಅಷ್ಟು ದೊಡ್ಡ ದನಿಯಲ್ಲಿ ಗುಲ್ಲೆಬ್ಬಿಸಿದವು.

ತನ್ನನ್ನು ತಾನು ನಾನ್ ಬಯಾಲಜಿಕಲ್ ಎನ್ನುವ ಮೋದಿ ಎದುರು ಪ್ರಶ್ನೆ ಮಾಡುವ ಧೈರ್ಯವನ್ನಂತೂ ಮಡಿಲ ಮೀಡಿಯಾಗಳು ತೋರಿಸುವುದು ಸಾಧ್ಯವೇ ಇಲ್ಲ.

ನಾಗರಿಕರಾದ ಎಲ್ಲರ ಪಾಲಿಗೂ ಮಾಹಿತಿಯೇ ಶಕ್ತಿ.

ಹೆಚ್ಚು ಹೆಚ್ಚು ಮಾಹಿತಿಗಳು ಸಿಗಬೇಕು.

ಆರ್‌ಟಿಐ ಮಾಹಿತಿ ಎನ್ನುವುದು ಒಂದು ಶಕ್ತಿ. ಅದರ ಪ್ರಕಾರ, ಯಾವುದೇ ಪ್ರಶ್ನೆಗೆ ಸರಕಾರ ಸಕಾಲದಲ್ಲಿ ಉತ್ತರ ಕೊಡಬೇಕಾಗುತ್ತದೆ. ನಿಮ್ಮ ಬಳಿ ಸರಿಯಾದ ಮಾಹಿತಿ ಇದ್ದಷ್ಟೂ ನೀವು ಹೆಚ್ಚು ಶಕ್ತಿಯುತರಾಗುತ್ತೀರಿ. ಆಗ ಆಳುವವರ ಉತ್ತರದಾಯಿತ್ವಕ್ಕೆ ಒತ್ತಾಯಿಸುವುದು ಸಾಧ್ಯ.

ಮಾಹಿತಿ ಹಕ್ಕು ಕಾಯ್ದೆ 2005ರ ಪ್ರಕಾರ, ಮಾಹಿತಿ ಎಂದರೆ, ಅದು ಯಾವುದೇ ರೂಪದಲ್ಲಿ ಇರಬಹುದು. ಅದರಲ್ಲಿ ದಾಖಲೆಗಳು, ಇಮೇಲ್‌ಗಳು, ಅಭಿಪ್ರಾಯಗಳು, ಪತ್ರಿಕಾ ಪ್ರಕಟಣೆಗಳು, ಆದೇಶಗಳು, ಯಾವುದೇ ಇಲೆಕ್ಟ್ರಾನಿಕ್ ರೂಪದಲ್ಲಿ ಇರುವ ದತ್ತಾಂಶ ಸಾಮಗ್ರಿಗಳು ಸೇರಿವೆ.

ಅದು ಯಾವುದೇ ಖಾಸಗಿ ಸಂಸ್ಥೆಗೆ ಸಂಬಂಧಿಸಿದ ಮಾಹಿತಿಯನ್ನು ಸಹ ಒಳಗೊಂಡಿದೆ ಮತ್ತು ಆ ಮಾಹಿತಿಯನ್ನು ಪಡೆಯುವ ಅವಕಾಶ ಇರುತ್ತದೆ.

ಹಾಗಾಗಿ, ಮೋದಿ ಹೇಳಿದ ಕೋಟಿ ಜನ ಕೊಟ್ಟ ಸಲಹೆಗಳು, ಆನಂತರ ಅವನ್ನೆಲ್ಲ ಎಐ ಬಳಸಿ ಮಾಡಲಾದ ವಿಂಗಡಣೆ ಎಲ್ಲವೂ ನಾಗರಿಕರಿಗೆ ಲಭ್ಯವಿರಬೇಕಿತ್ತಲ್ಲವೆ?

ಆದರೆ ಆರ್‌ಟಿಐ ಪ್ರಶ್ನೆ ಕೇಳಿದ್ದ ಪತ್ರಕರ್ತ ಕುನಾಲ್ ಪುರೋಹಿತ್ ಅವರಿಗೆ ಆ ಮಾಹಿತಿಯೇ ಸಿಗಲಿಲ್ಲ.ಬದಲಿಗೆ, ಆ ವಿವರಗಳು ಮಾಹಿತಿ ಹಕ್ಕು ಕಾಯ್ದೆಯಲ್ಲಿನ ಮಾಹಿತಿ ಕುರಿತ ವ್ಯಾಖ್ಯೆಯ ವ್ಯಾಪ್ತಿಗೆ ಬರುವುದಿಲ್ಲ ಎಂಬ ಉತ್ತರ ಬಂದಿತ್ತು.

ಕೋಟಿ ಜನರಿಂದ ಪಡೆದ ಸಲಹೆಗಳು ರೆಕಾರ್ಡಿಂಗ್, ಡಾಕ್ಯುಮೆಂಟ್ ಹೀಗೆ ಯಾವುದಾದರೊಂದು ರೂಪದಲ್ಲಿಯೇ ಇರಬೇಕಿತ್ತಲ್ಲವೇ?

ಇನ್ನು ಅಧಿಕಾರಿಗಳೊಂದಿಗಿನ ಸಭೆಯ ವಿವರಗಳ ದಾಖಲೆಯಾದರೂ ಇರಬೇಕಲ್ಲವೇ? ಸಭೆಯಲ್ಲಿ ಏನೆಲ್ಲ ಚರ್ಚೆಯಾಯಿತು ಎನ್ನುವುದರ ವಿವರಗಳನ್ನು ದಾಖಲಿಸಿಕೊಳ್ಳಲಾಗುತ್ತದೆಯಲ್ಲವೇ?

100 ದಿನಗಳದ್ದಲ್ಲ, 5 ವರ್ಷಗಳದ್ದಲ್ಲ, 25 ವರ್ಷಗಳದ್ದಲ್ಲ, 1,000 ವರ್ಷಗಳದ್ದು ಎಂದರೆ ಅದರ ಬಗೆಗಿನ ಚರ್ಚೆ ಮತ್ತು ಪ್ಲ್ಯಾನ್‌ನ ವಿವರಗಳು ಮತ್ತು ಮಾಹಿತಿಯೇ ಇಲ್ಲವೆಂದರೆ ಏನರ್ಥ?

ನಾಯಕನಾದವನಿಗೆ, ಸರಕಾರಕ್ಕೆ ತಾನೇನು ಮಾಡಬೇಕೆಂಬ ದೂರದೃಷ್ಟಿ, ಯೋಜನೆ ಇರಬೇಕಾಗುತ್ತದೆ. ಜನರು ಮತ್ತು ಭವಿಷ್ಯವನ್ನು ಯೋಚಿಸಿ ಯೋಜನೆಗಳು ರೂಪುಗೊಳ್ಳಬೇಕಿರುತ್ತದೆ.

ವಾಯುಮಾಲಿನ್ಯ ಎಂಬುದನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ಅದರ ಪ್ರಮಾಣ, ಕಾರಣಗಳು ಎಲ್ಲವನ್ನೂ ಗಮನಿಸಿ, ಹೇಗೆ ಅದನ್ನು ನಿಯಂತ್ರಣಕ್ಕೆ ತರಬಹುದು, ನಿವಾರಿಸಬಹುದು ಎಂಬುದಕ್ಕೆ ಯೋಜನೆ ರೂಪಿಸಬೇಕಾಗುತ್ತದೆ.

ಅಂತಹ ಯೋಜನೆ ಸಿದ್ಧಪಡಿಸಲು ಪರಿಣಿತರನ್ನು ಕೇಳಬೇಕಾಗುತ್ತದೆ. ಅವರ ಸಲಹೆಗಳು ಬೇಕಾಗುತ್ತವೆ. ನಾಯಕನಾದವನಿಗೇ ಇದೆಲ್ಲವೂ ತಿಳಿದಿರುವುದು ಸಾಧ್ಯವಿಲ್ಲ.

ನಂತರದ ಹಂತದಲ್ಲಿ ಮಾಲಿನ್ಯದಿಂದ ತೊಂದರೆಗೆ ಒಳಗಾಗಿರುವವರ ಸ್ಥಿತಿ ಏನು, ಅವರ ಅನುಭವವೇನು, ಅಭಿಪ್ರಾಯವೇನು ಎಂಬುದನ್ನೆಲ್ಲ ಸಂಗ್ರಹಿಸಬೇಕಾಗುತ್ತದೆ.ಅವೆಲ್ಲವನ್ನೂ ದಾಖಲಿಸಿಕೊಳ್ಳಬೇಕಾಗುತ್ತದೆ. ಅದಕ್ಕೆ ತಕ್ಕಂತೆ ಪರಿಹಾರ ಕಂಡುಕೊಳ್ಳಲು ಪರಿಣಿತರ ನೆರವು ಬೇಕಾಗುತ್ತದೆ.

ಎಲ್ಲರ ಸಹಯೋಗದ ಮೂಲಕ ಒಂದು ಸದೃಢ ಯೋಜನೆಯೊಂದಿಗೆ ಮಾತ್ರ ಮುನ್ನಡೆಯಲು ಸಾಧ್ಯ.

ಆಗ, ಪ್ಲ್ಯಾನ್ ಏನು ಎಂಬ ಪ್ರಶ್ನೆಗೆ ಉತ್ತರ ಸಿದ್ಧವಿರಲು ಸಾಧ್ಯ. ಆ ಪ್ಲ್ಯಾನ್ ಅನ್ನು ಜನರೆದುರು ಮಂಡಿಸಲು ಸಾಧ್ಯ.

ಮೋದಿಯವರು ಪ್ಲ್ಯಾನ್ ಇದೆ ಎನ್ನುತ್ತಾರೆ, ಏನು ಮಾಡಬೇಕೆಂಬುದೆಲ್ಲ ತಯಾರಾಗಿದೆ ಎನ್ನುತ್ತಾರೆ.

ಆದರೆ ಮಾಹಿತಿ ಕೇಳಿದರೆ ತೋರಿಸಲು ಅವರ ಬಳಿ ಏನೂ ಇಲ್ಲ.

1,000 ದಿನಗಳದ್ದು ಹಾಗಿರಲಿ, 100 ದಿನಗಳ ಪ್ಲ್ಯಾನ್ ಕೂಡ ಪಿಎಂಒ ಬಳಿ ಇಲ್ಲ. ಬಹುಶಃ ಅವರು ಯಾರನ್ನೂ ಸಂಪರ್ಕಿಸಿಯೇ ಇಲ್ಲ, ಯಾರಲ್ಲೂ ಮಾತನಾಡಿಯೇ ಇಲ್ಲ.

ಹಾಗಾದರೆ ಅವರು ಸುಳ್ಳನ್ನೇ ಹೇಳಿದರೇ?

ಈವರೆಗೆ ಹೇಳಿದ್ದೆಲ್ಲವೂ ಬರಿ ಬಡಾಯಿಯೇ?

ಮೋದಿಯವರೇ, ನೀವು 2047ರ ಮಾಸ್ಟರ್ ಪ್ಲ್ಯಾನ್ ಕೊಡುವ ಮೊದಲು ಈಗ ಹತ್ತು ವರ್ಷಗಳ ಅಧಿಕಾರದಲ್ಲಿ ಏನೇನು ಮಾಡಿದ್ದೀರಿ ಅನ್ನುವುದನ್ನು ಮೊದಲು ದೇಶದ ಮುಂದಿಡಿ ಎಂದು ಕೇಳುವ ಮೀಡಿಯಾಗಳೇ ಇಲ್ಲಿ ಇಲ್ಲ.ಇನ್ನು ಮೋದಿಯವರ ಪ್ಲ್ಯಾನ್ ಬಗ್ಗೆ ಪ್ರಶ್ನೆ ಕೇಳುವವರು ಯಾರು?

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ಚಂದ್ರಕಾಂತ್ ಎನ್.

contributor

Similar News