ಮಧ್ಯಂತರ ಆಯವ್ಯಯದಲ್ಲಿ ಶಾಲಾ ಶಿಕ್ಷಣ ಎಲ್ಲಿದೆ!
ಒಕ್ಕೂಟ ಸರಕಾರವು 2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಮಧ್ಯಂತರ ಬಜೆಟನ್ನು ಮಂಡಿಸಿದೆ. ಸಾಮಾನ್ಯವಾಗಿ ಚುನಾವಣೆಗೆ ಮುನ್ನ ಮಂಡಿಸುವ ಬಜೆಟ್ ಮಧ್ಯಂತರ ಬಜೆಟ್ ಆಗಿದ್ದು ಹೆಚ್ಚಿನ ನಿರೀಕ್ಷೆಗಳಿರುವುದಿಲ್ಲ ಎಂಬುದನ್ನೂ ಒಪ್ಪುತ್ತಲೇ, ಈ ಬಜೆಟ್ ಕನಿಷ್ಠ ಅಲ್ಪಾವಧಿಯ ಮುನ್ನೋಟ ಮತ್ತು ಮುಂಗಾಣ್ಕೆ ದೂರದೃಷ್ಟಿ ತೋರುವಲ್ಲಿಯೂ ಸೋತಿದೆ ಎಂಬುದನ್ನು ಮನಗಾಣಬೇಕಿದೆ. ಈ ಹಿನ್ನೆಲೆಯಲ್ಲಿ, ದೇಶದ ಭದ್ರ ಬುನಾದಿ ಎನಿಸಿರುವ ಶಾಲಾ ಶಿಕ್ಷಣಕ್ಕೆ ಮಧ್ಯಂತರ ಬಜೆಟ್‌ನಲ್ಲಿ ಏನು ದೊರೆತಿದೆ ಎಂಬುದರ ಬಗ್ಗೆ ಸಂಕ್ಷಿಪ್ತವಾಗಿ ವಿಶ್ಲೇಷಿಸುವ ಆಶಯ ಈ ಲೇಖನದ್ದಾಗಿದೆ.
ಹೆಸರೇ ಸೂಚಿಸುವಂತೆ, ಮಧ್ಯಂತರ ಬಜೆಟ್ ತಾತ್ಕಾಲಿಕ ಹಣಕಾಸು ಆಯವ್ಯಯ. ಮುಂದಿನ ಸಾರ್ವತ್ರಿಕ ಚುನಾವಣೆಗಳ ನಂತರ ಆಸ್ತಿತ್ವಕ್ಕೆ ಬರುವ ಹೊಸ ಸರಕಾರ ಪೂರ್ಣ ಪ್ರಮಾಣದ ಆಯವ್ಯಯವನ್ನು ಮಂಡಿಸಲಿದೆ. ಇದು ಹೊಸ ಸರಕಾರದ ರಚನೆಗೆ ಮುನ್ನ , ಸರಕಾರದ ಆರ್ಥಿಕ ವೆಚ್ಚವನ್ನು ಪೂರೈಸುವ ಒಂದು ತಾತ್ಕಾಲಿಕ ವ್ಯವಸ್ಥೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಸಂಕ್ಷಿಪ್ತ ವಿಶ್ಲೇಷಣೆ ಮಾಡುತ್ತಿದ್ದೇನೆ.
2024-25ರ ಆಯವ್ಯಯದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ 71,523.07 ಕೋಟಿ ಹಣವನ್ನು ಒದಗಿಸಲಾಗಿದೆ. ಇದು 2023-24ರ ಅಂದಾಜು ಆಯವ್ಯಯಕ್ಕೆ ಹೋಲಿಸಿ ನೋಡಿದರೆ (67,290.34) ರೂ.4,232.73 ಕೋಟಿ ಹೆಚ್ಚಳವಾಗಿದೆ. ಅಂದರೆ, ಶೇಕಡಾವಾರು 5.9ರಷ್ಟು ಹೆಚ್ಚಳವಾಗಿದೆ. ಇದು ಅತ್ಯಲ್ಪ ಎಂಬುದನ್ನು ಒತ್ತಿ ಹೇಳಬೇಕಾಗಿಲ್ಲ. ಗಮನಿಸಬೇಕಾದ ಅಂಶವೆಂದರೆ, ರಾಷ್ಟ್ರೀಯ ಶಿಕ್ಷಣ ನೀತಿ (2020) ದೇಶದಲ್ಲಿ ಕ್ರಾಂತಿಯನ್ನೇ ಉಂಟುಮಾಡುತ್ತದೆ ಎಂದು ಹೇಳುತ್ತಿರುವ ಈ ಸಂದರ್ಭದಲ್ಲಿ ಸರಕಾರ, ಶಿಕ್ಷಣದ ಬುನಾದಿಯಾಗಿರುವ ಶಿಕ್ಷಣದ ಮೂಲಭೂತ ಹಕ್ಕನ್ನು ಜಾರಿಗೊಳಿಸಲು ಇರುವ ರಾಷ್ಟ್ರೀಯ ಮಹತ್ವದ ಯೋಜನೆಯಾದ ಸಮಗ್ರ ಶಿಕ್ಷಣ ಅಭಿಯಾನಕ್ಕೆ 2024-25ರ ಆಯವ್ಯಯದಲ್ಲಿ ಮೀಸಲಿರಿಸಿದ ಹಣ ಕೇವಲ ರೂ.37,500 ಕೋಟಿ. 2023-24ರ (37,453.47) ಆಯವ್ಯಯಕ್ಕೆ ಹೋಲಿಸಿ ನೋಡಿದರೆ ಹೆಚ್ಚಳವಾಗಿರುವುದು ಕೇವಲ ರೂ.46.53 ಕೋಟಿ. ಶೇಕಡವಾರು ಲೆಕ್ಕದಲ್ಲಿ ಕೇವಲ 0.12 ರಷ್ಟು ಹೆಚ್ಚಳವಾಗಿದೆ. ಸಮಗ್ರ ಶಿಕ್ಷಣ ಅಭಿಯಾನವನ್ನು ರಾಷ್ಟ್ರೀಯ ಶಿಕ್ಷಣ ನೀತಿ, 2020 ಅನುಷ್ಠಾನದ ಉದ್ದೇಶಕ್ಕಾಗಿ ಮರುವಿನ್ಯಾಸಗೊಳಿಸಲಾಗಿದ್ದಾಗ್ಯೂ, 2024-25ರ ಮಧ್ಯಂತರ ಬಜೆಟ್‌ನಲ್ಲಿ ಸಮಗ್ರ ಶಿಕ್ಷಣ ಅಭಿಯಾನಕ್ಕೆ ನಿರೀಕ್ಷಿತ ಗಮನ ನೀಡಲಾಗದಿರುವುದು ನೋವಿನ ಸಂಗತಿ.
ನಮಗೆಲ್ಲ ತಿಳಿದಿರುವಂತೆ, ಭಾರತದಲ್ಲಿ ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿದ್ದು ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಶಿಕ್ಷಣದ ಕೊಡಮಾಡುವ ಜವಾಬ್ದಾರಿಯನ್ನು ಹೊಂದಿವೆ. ರಾಜ್ಯ ಸರಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಶಾಲೆ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸುತ್ತವೆ. ಉದಾಹರಣೆಗೆ, ಪ್ರಸಕ್ತ ಬಜೆಟ್‌ನಲ್ಲಿ ಕೇಂದ್ರ ಸರಕಾರವು ಸಮಗ್ರ ಶಿಕ್ಷಾ ಅಭಿಯಾನಕ್ಕೆ ಒದಗಿಸಿರುವ ರೂ.37,500 ಕೋಟಿಗಳನ್ನು 28 ರಾಜ್ಯ ಮತ್ತು 8 ಕೇಂದ್ರಾಡಳಿತ ಪ್ರದೇಶಗಳಿಗೆ ಯೋಜನಾ ಪ್ರಸ್ತಾವನೆಯ ಆಧಾರದಲ್ಲಿ ವಿತರಿಸಲಾಗುವುದು. ಈ ಅತ್ಯಲ್ಪ ಹಣದಿಂದ ಶಿಕ್ಷಣದ ಮೂಲಭೂತ ಹಕ್ಕನ್ನು ಜಾರಿಗೊಳಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಯಾವ ಬಗೆಯ ದುಸ್ಥಿತಿಯನ್ನು ಎದುರಿಸಬಹುದೆಂದು ಯಾರು ಬೇಕಾದರೂ ಊಹಿಸಬಹುದು.
ಆಶ್ಚರ್ಯದ ಸಂಗತಿಯೆಂದರೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಅನುಷ್ಠಾನಗೊಳಿಸುವ ಮತ್ತೊಂದು ರಾಷ್ಟ್ರೀಯ ಪ್ರಮುಖ ಯೋಜನೆಯಾದ ಪಿಎಂ ಸ್ಕೂಲ್ ಫಾರ್ ರೈಸಿಂಗ್ ಇಂಡಿಯಾ (ಪಿಎಂ ಶ್ರೀ) ಯೋಜನೆಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 48.15ರಷ್ಟು ಹೆಚ್ಚಿಸಲಾಗಿದೆ. ಇಲ್ಲಿ ಒಂದು ಪ್ರಮುಖ ಅಂಶವನ್ನು ಬಿಡಿಸಿ ಹೇಳುವ ಅಗತ್ಯವಿದೆ. ಮಾನ್ಯ ಪ್ರಧಾನ ಮಂತ್ರಿ ಹೆಸರಿನ ರಾಷ್ಟ್ರೀಯ ಕಾರ್ಯಕ್ರಮಗಳಾದ ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ್ (ಪಿಎಮ್‌ಪೋಷಣ್) ಮತ್ತು ಪಿಎಮ್ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ (ಪಿಎಮ್‌ಶ್ರೀ) ಯೋಜನೆಗಳಿಗೆ ಕ್ರಮವಾಗಿ ರೂ. 867.39 ಮತ್ತು ರೂ. 2,050 ಕೋಟಿಯನ್ನು ಹೆಚ್ಚಿಸಲಾಗಿದೆ. ಕುತೂಹಲದ ಅಂಶವೆಂದರೆ, ಪ್ರಧಾನ ಮಂತ್ರಿ ಕೇಂದ್ರಿತ ಒಕ್ಕೂಟ ಯೋಜನೆಗಳಿಗೆ ಒದಗಿಸಿರುವ ಹಣನ್ನು ದೇಶದ ಎಲ್ಲಾ ಮಕ್ಕಳಿಗೆ ಸಿಗಲೇಬೇಕಾದ ಶಿಕ್ಷಣದ ಮೂಲಭೂತ ಹಕ್ಕನ್ನು ಜಾರಿಗೊಳಿಸುವ ಸಮಗ್ರ ಶಿಕ್ಷಣ ಅಭಿಯಾನಕ್ಕೆ ಒದಗಿಸಿರುವ ಮೊತ್ತಕ್ಕೆ ಹೋಲಿಸಿ ನೋಡಿದರೆ ಅತೀ ಕಡಿಮೆ ಹಣವನ್ನು ಹೆಚ್ಚಿಸಲಾಗಿದೆ. ಇದು ನ್ಯಾಯಸಮ್ಮತ ಸಂವಿಧಾನ ಬದ್ಧ ಹಕ್ಕನ್ನು ದುರ್ಬಲಗೊಳಿಸಿ ಕಸಿಯುವ ಸ್ಪಷ್ಟ ಸೂಚನೆಯಾಗಿದೆ. ಮತ್ತೊಂದೆಡೆ, ಪ್ರಧಾನ ಮಂತ್ರಿಯವರ ವೈಯಕ್ತಿಕ ವರ್ಚಸ್ಸನ್ನು ಹೆಚ್ಚಿಸುವ ಯೋಜನೆಗಳು ಬಜೆಟ್‌ನಲ್ಲಿ ಹೆಚ್ಚಳವನ್ನು ಪಡೆದಿವೆ ಎಂಬುದು ಗಮನಿಸಬೇಕಾದ ಅಂಶ.
ಮಧ್ಯಂತರ ಆಯವ್ಯಯದಲ್ಲಿನ ಮತ್ತೊಂದು ಗಮನಾರ್ಹ ಕ್ಷೇತ್ರವೆಂದರೆ, ಏಕಲವ್ಯ ಮಾದರಿ ವಸತಿ ಶಾಲೆಗಳು (ಇಎಂಆರ್‌ಎಸ್). ಈ ಯೋಜನೆಗೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 7.89 ರಷ್ಟು ಹೆಚ್ಚಿನ ಹಂಚಿಕೆಯನ್ನು ಮಾಡಲಾಗಿದೆ. ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಪ್ರಕಾರ, ಒಟ್ಟು 690 ಇಎಂಆರ್‌ಎಸ್ ಗಳನ್ನು ಮಂಜೂರು ಮಾಡಲಾಗಿದೆ. ಅವುಗಳಲ್ಲಿ ಕೇವಲ 401 ಇಎಂಆರ್ ಎಸ್ ಗಳು ಮಾತ್ರ ಸಕ್ರಿಯ ಕಾರ್ಯನಿರ್ವಹಿಸುತ್ತಿವೆ. ನ್ಯಾಷನಲ್ ಎಜುಕೇಶನ್ ಸೊಸೈಟಿ ಫಾರ್ ಟ್ರೈಬಲ್ ವಾರ್ಷಿಕ ವರದಿ 2021-22 ಪ್ರಕಾರ 378 ಕ್ರಿಯಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿದ್ದು ಉಳಿದ 303 ಶಾಲೆಗಳು ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸದೆ ನಿಷ್ಕ್ರಿಯವಾಗಿವೆ. ಈ ಅಂಶ ಗೊಂದಲಕ್ಕೆ ಕಾರಣವಾಗಿದ್ದು ಕ್ರಿಯಾತ್ಮಕ ಶಾಲೆಗಳ ಸಂಖ್ಯೆ ಎಷ್ಟು ಎಂಬ ಸ್ಪಷ್ಟತೆ ಇಲ್ಲವಾಗಿದೆ.
ಚರ್ಚಿಸಬೇಕಾದ ಮತ್ತೊಂದು ಮಹತ್ವದ ಅಂಶವೆಂದರೆ ಶಿಕ್ಷಣಕ್ಕೆ ಪೂರಕವಾಗುವ ಹಾಗೂ ಉತ್ತೇಜಕವಾಗುವ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ವಿವಿಧ ಯೋಜನೆಗಳಿಗೆ 2024-25ರ ಮಧ್ಯಂತರ ಆಯವ್ಯಯದಲ್ಲಿ ಮೀಸಲಿಟ್ಟಿರುವ ಹಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹಿಂದಿನ ವರ್ಷದ ಹಂಚಿಕೆಗೆ ಹೋಲಿಸಿದರೆ ಶೇ. 4.09ರಷ್ಟು ಕಡಿಮೆಯಾಗಿದೆ. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಆಶ್ರಯದಲ್ಲಿ ಕೆಲವು ಮಹತ್ವದ ಯೋಜನೆಗಳಿಗೆ ಪ್ರಸಕ್ತ ಮಧ್ಯಂತರ ಬಜೆಟ್ ನಲ್ಲಿ ಕಡಿತಗೊಳಿಸಲಾಗಿರುವ ವಿವರಗಳನ್ನು ಕೊಟ್ಟಿರುವ ಕೋಷ್ಟಕದಲ್ಲಿ ನೋಡಬಹುದಾಗಿದೆ.(ಕೋಟಿಗಳಲ್ಲಿ ಮೊತ್ತ)
ಈ ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿದಾಗ ವರ್ಷದಿಂದ ವರ್ಷಕ್ಕೆ ಒಕ್ಕೂಟ ಸರಕಾರ ಮೂಲ ಶಿಕ್ಷಣಕ್ಕೆ ತನ್ನ ಹೂಡಿಕೆಯನ್ನು ಕಡಿಮೆಗೊಳಿಸುತ್ತಿದ್ದು , ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಮಕ್ಕಳ ಶಿಕ್ಷಣದ ಮೂಲಭೂತ ಹಕ್ಕನ್ನು ಜಾರಿಗೆ ತರಲು ಸಾಧ್ಯವಾಗದ ರೀತಿಯಲ್ಲಿ ರಾಜ್ಯಗಳನ್ನು ಆರ್ಥಿಕವಾಗಿ ದುರ್ಬಲಗೊಳಿಸಿ ಒಕ್ಕೂಟ ವ್ಯವಸ್ಥೆಯನ್ನೇ ದುರ್ಬಲಗೊಳಿಸುವ ಆತಂಕ ಮೂಡುತ್ತದೆ. ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿದ್ದರೂ, ಒಕ್ಕೂಟ ಸರಕಾರವು ತನ್ನ ಆರ್ಥಿಕ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದು ಸ್ಪಷ್ಟವಾಗುತ್ತದೆ. ಒಟ್ಟಾರೆ, ಸಾಂವಿಧಾನಿಕ ಹಕ್ಕುಗಳನ್ನು ಜಾರಿಗೊಳಿಸುವಲ್ಲಿ ರಾಜ್ಯ ಸರಕಾರಗಳನ್ನು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಒಂದು ಬಗೆಯ ಅಸಹಾಯಕ ಸ್ಥಿತಿಗೆ ತಳ್ಳುತ್ತಿದೆ.