ಮುಗಿದ 2ನೇ ಹಂತದ ಮತದಾನ ಯಾವ ಪಕ್ಷದ ನೀತಿಗೆ ಜನಮನ್ನಣೆ ಸಿಗಲಿದೆ?
ವಿಶ್ಲೇಷಣೆಗಳು ಹೇಳುವಂತೆ, ಕಳೆದ ಲೋಕಸಭೆ ಚುನಾವಣೆ ವೇಳೆ ಪುಲ್ವಾಮಾ ವಿಚಾರ ಮತದಾರರನ್ನು ಬಹಳ ಪ್ರಭಾವಿಸಿತ್ತು. ಆದರೆ ಈ ಬಾರಿ ಅಂಥ ಯಾವುದೇ ದೊಡ್ಡ ರಾಷ್ಟ್ರೀಯ ವಿಷಯ ಮತದಾರರ ಮುಂದೆ ಇಲ್ಲ ಎಂಬುದು ಸ್ಪಷ್ಟ. ಕರ್ನಾಟಕದಲ್ಲಿ ಬಿಜೆಪಿಯಿಂದ ಈ ಬಾರಿ ಕಾಂಗ್ರೆಸ್ ನಿಜವಾಗಿಯೂ ಸ್ಥಾನಗಳನ್ನು ವಶಪಡಿಸಿಕೊಂಡೀತೇ ಎಂಬುದು ಪ್ರಶ್ನೆ. ಸಫಲವಾದರೆ ಬಿಜೆಪಿಯ ಎಷ್ಟು ಸೀಟುಗಳನ್ನು, ಜೆಡಿಎಸ್‌ನ ಎಷ್ಟು ಸೀಟುಗಳನ್ನು ತನ್ನದಾಗಿಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಯಿತು ಎಂಬುದನ್ನು ನೋಡಬೇಕಾಗುತ್ತದೆ.
ದೇಶದಲ್ಲಿ 2ನೇ ಹಂತದ ಮತದಾನ ಮೊನ್ನೆ ಮುಗಿದಿದೆ.
2ನೇ ಹಂತದಲ್ಲಿ 88 ಸ್ಥಾನಗಳಿಗೆ ಮತದಾನವಾಗಿದೆ. ಅಲ್ಲಿಗೆ ಒಟ್ಟು 543 ಸ್ಥಾನಗಳಲ್ಲಿ 190 ಸ್ಥಾನಗಳಿಗೆ ಈವರೆಗೆ ಮತದಾನ ನಡೆದಂತಾಗಿದೆ.
ಈ ಸಲದ ಚುನಾವಣೆಯಲ್ಲಿ ಎದ್ದು ಕಾಣುವುದು ಬಿಜೆಪಿ ಮತ್ತು ‘ಇಂಡಿಯಾ’ ವಿಪಕ್ಷ ಒಕ್ಕೂಟದ ನಡುವಿನ ಕದನ.
ರಾಜಸ್ಥಾನದ ಹದಿಮೂರು ಕ್ಷೇತ್ರಗಳಿಗೆ ಮೊನ್ನೆ ಮತದಾನ ನಡೆದಿದೆ. ಈ ಹಂತದೊಂದಿಗೆ ರಾಜಸ್ಥಾನದ ಎಲ್ಲ ಕ್ಷೇತ್ರಗಳಲ್ಲಿ ಚುನಾವಣೆ ಮುಗಿದಂತಾಗಿದೆ.
ಕಳೆದ 10 ವರ್ಷಗಳಲ್ಲಿ ಈ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಒಂದೇ ಒಂದು ಲೋಕಸಭಾ ಸ್ಥಾನವನ್ನೂ ಗೆಲ್ಲುವುದು ಸಾಧ್ಯವಾಗಿಲ್ಲ. ಎಲ್ಲ 25 ಕ್ಷೇತ್ರಗಳೂ ಬಿಜೆಪಿಯ ಪಾಲಾಗುತ್ತಲೇ ಬಂದಿವೆ. ಈ ಸಲವಾದರೂ ಕಾಂಗ್ರೆಸ್‌ಗೆ ಅಲ್ಲಿ ಗೆಲ್ಲಲು ಸಾಧ್ಯವಾಗುವುದೇ ಎಂಬುದು ಅತ್ಯಂತ ಕುತೂಹಲದ ವಿಚಾರ. ಒಂದು ವೇಳೆ ಹಾಗಾದರೆ ಅದು ನಿಜಕ್ಕೂ ದೊಡ್ಡ ವಿಚಾರವಾಗಲಿದೆ.
ಯಾಕೆಂದರೆ ಪ್ರಧಾನಿ ಮೋದಿ, ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಟೀಕಿಸುತ್ತ, ಮಂಗಲಸೂತ್ರ ಕಸಿಯಲಿದ್ದಾರೆ ಎಂದು ಆರೋಪಿಸಿದ್ದು, ಹಿಂದೂ-ಮುಸ್ಲಿಮ್ ವಿಚಾರ ತೆಗೆದದ್ದು ರಾಜಸ್ಥಾನದಲ್ಲಿಯೇ.
ಅಲ್ಲಿ ಮೊದಲ ಹಂತದ ಮತದಾನದ ನಂತರ ಬಿಜೆಪಿಗೆ ಏಟು ಬೀಳುವ ಒಂದು ಅಂದಾಜು ಮೋದಿಗೆ ಸಿಕ್ಕಿರುವ ಹಾಗಿದೆ. ಹಾಗಾಗಿಯೇ 2ನೇ ಹಂತದ ಮತದಾನಕ್ಕೆ ಮೊದಲಿನ ಅವರ ಭಾಷಣದ ಧಾಟಿಯೇ ಸಂಪೂರ್ಣ ಬದಲಾಗಿ ಹೋಗಿತ್ತು. ಸುಳ್ಳುಗಳಿಗೆ ಸುಳ್ಳುಗಳನ್ನು ಜೋಡಿಸಿ ದ್ವೇಷವನ್ನೂ ಬೆರೆಸಿ ಮಾತಾಡುವುದು ಹೆಚ್ಚಿತ್ತು.
ಕಾಂಗ್ರೆಸ್ ನಿಮ್ಮ ಮಂಗಲಸೂತ್ರ ಕಸಿದು ಮುಸ್ಲಿಮರಿಗೆ ಕೊಡಲಿದೆ ಎಂಬ ಪ್ರಧಾನಿ ಮೋದಿ ಹೇಳಿಕೆ ಖಂಡಿಸಿದ್ದ ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಸ್ಮಾನ್ ಘನಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಯಿತು.
ಮೋದಿ ಹೇಳಿಕೆಯಿಂದ ಬಿಜೆಪಿ ರಾಜಸ್ಥಾನದಲ್ಲಿ ಕೆಲವು ಸೀಟುಗಳನ್ನು ಕಳೆದುಕೊಳ್ಳಲಿದೆ ಎಂದು ಅವರು ಹೇಳಿದ್ದರು.
ದ್ವೇಷ ಮತ್ತು ಸುಳ್ಳುಗಳ ಮೋದಿ ಭಾಷಣ ರಾಜಸ್ಥಾನದಲ್ಲಿ ಎಲ್ಲ 25 ಸೀಟುಗಳನ್ನೂ ಬಿಜೆಪಿಗೆ ತಂದುಕೊಡಲಿದೆಯೇ? ಅಥವಾ ಅದು ಕೆಲವನ್ನು ಕಳೆದುಕೊಳ್ಳಲಿದೆಯೇ? ಅಲ್ಲಿಂದ ಬರುತ್ತಿರುವ ವರದಿಗಳ ಪ್ರಕಾರ ಅಲ್ಲಿ 15 ಸೀಟುಗಳನ್ನು ಗೆಲ್ಲುವುದೂ ಬಿಜೆಪಿಗೆ ಕಷ್ಟವಾದೀತು.
ಇನ್ನು ಬಿಹಾರದ 5 ಕ್ಷೇತ್ರಗಳಿಗೆ ಮೊನ್ನೆ ಮತದಾನ ನಡೆದಿದೆ.
ಬಿಹಾರದಲ್ಲಿ ಸಾಲಿನಲ್ಲಿ ನಿಂತಿದ್ದ ಮತದಾರರನ್ನು ನೋಡಿಯೇ ರಾಜ್ಯದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬಹುದಿತ್ತು. ಅಲ್ಲಿ ಜನರು ಬಡತನ ದಾಟುವುದಿರಲಿ, ಅಂಥ ಕನಸುಗಳಿಂದ ಕೂಡ ಬಹು ದೂರ ಇರುವ ಹಾಗಿದೆ.
ಮತದಾನದ ಬಗೆಗೂ ಅಲ್ಲಿನ ಜನರಲ್ಲಿ ಅಂತಹ ಉತ್ಸಾಹ ಇರಲಿಲ್ಲ. ಈ 2 ಹಂತಗಳಲ್ಲಿ ಅಲ್ಲಿ ಒಟ್ಟು 9 ಸ್ಥಾನಗಳಿಗೆ ಮತದಾನ ಮುಗಿದಿದೆ. ಈ ರಾಜ್ಯದಲ್ಲಿ 7 ಹಂತಗಳ ಸುದೀರ್ಘ ಚುನಾವಣೆ ನಡೆಸುವ ಅಗತ್ಯ ಏನಿತ್ತೋ ಗೊತ್ತಿಲ್ಲ. ಅದಕ್ಕೆ ಏನಾದರೂ ಅರ್ಥವಿದೆಯೇ?
ಕರ್ನಾಟಕದ 28 ಸೀಟುಗಳಲ್ಲಿ 14 ಸ್ಥಾನಗಳಿಗೆ ಮೊನ್ನೆ ಮತದಾನ ಮುಗಿದಿದೆ. ಕರ್ನಾಟಕದ 14 ಕ್ಷೇತ್ರಗಳಲ್ಲಿ ಶೇ.69.23ರಷ್ಟು ಮತದಾನ ಆಗಿರುವುದಾಗಿ ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಕಳೆದ ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ಕೂಡ ಮುಸ್ಲಿಮ್ ಮೀಸಲಾತಿ ತೆಗೆದುಹಾಕಿದ್ದು, ಹಿಜಾಬ್, ಹಲಾಲ್, ಬಜರಂಗಬಲಿ ವಿಚಾರ ಎತ್ತಿಕೊಂಡಿದ್ದು ಬಿಜೆಪಿ ತಂತ್ರವಾಗಿತ್ತು.
ಭಾವನಾತ್ಮಕ ವಿಚಾರಗಳನ್ನೇ ವೈಭವೀಕರಿಸಿ ಅದು ಅಷ್ಟೊಂದು ರಂಪ ರಗಳೆ ಮಾಡಿದ ನಂತರವೂ ಸೋತುಹೋಯಿತು. ಭ್ರಷ್ಟಾಚಾರ ವಿಚಾರ ಕೂಡ ಆಗ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿತ್ತು.
ಈ ಸಲ ಬಿಜೆಪಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದೆ. ಜೆಡಿಎಸ್ ವರಿಷ್ಠ ದೇವೇಗೌಡ ತನ್ನ ಕಾಲದಲ್ಲಿಯೇ ಮುಸ್ಲಿಮರಿಗೆ ಮೀಸಲಾತಿ ಸಿಕ್ಕಿದ್ದು ಎಂದು ಹೆಮ್ಮೆಯಿಂದ ಹೇಳಿಕೊಂಡು ಬಂದಿದ್ದಾರೆ. ಈಗ ಮೋದಿ ಕರ್ನಾಟಕದ ಮುಸ್ಲಿಮ್ ಮೀಸಲಾತಿ ವಿಚಾರವನ್ನು ಬೇರೆ ರಾಜ್ಯಗಳಲ್ಲಿ ದೊಡ್ಡ ವಿಷಯವಾಗಿ ಎತ್ತಿದ್ದಾರೆ.
ಗುಜರಾತಿನಲ್ಲಿ ಮುಸ್ಲಿಮರಿಗೆ ಮೀಸಲಾತಿ ಇದೆ. ಬಿಹಾರದಲ್ಲಿಯೂ ಒಬಿಸಿಗಳೊಂದಿಗೆ ಮುಸ್ಲಿಮರಿಗೆ ಮೀಸಲಾತಿ ಇದೆ.
ಕರ್ಪೂರಿ ಠಾಕೂರ್ ಕಾಲದಲ್ಲಿಯೇ ಅಲ್ಲಿ ಮೀಸಲಾತಿ ನೀಡಲಾಗಿತ್ತು. ಅವರಿಗೆ ಈ ಬಾರಿ ಮರಣೋತ್ತರವಾಗಿ ಭಾರತ ರತ್ನವನ್ನೂ ಮೋದಿ ಸರಕಾರವೇ ನೀಡಿದೆ. ಕರ್ಪೂರಿ ಠಾಕೂರ್ ವಿಚಾರದಲ್ಲಿ ಮೋದಿ ಎದುರಾಡುವುದು ಸಾಧ್ಯವಿದೆಯೆ? ಪ್ರಶ್ನೆ ಎತ್ತುವುದು ಸಾಧ್ಯವಿದೆಯೇ?
ಹಾಗಾದರೆ ಕರ್ನಾಟಕದ ಮುಸ್ಲಿಮ್ ಮೀಸಲಾತಿ ವಿಚಾರವನ್ನೇ ಎತ್ತಿಕೊಂಡು ಯಾಕೆ ಪ್ರಧಾನಿ ಮೋದಿ ಅಷ್ಟೊಂದು ಸುಳ್ಳು ಹೇಳಿದ್ದಾರೆ? ಯಾಕೆ ಸುಖಾಸುಮ್ಮನೆ ದ್ವೇಷ ಹರಡುತ್ತಿದ್ದಾರೆ?
ವರದಿಗಳ ಪ್ರಕಾರ ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್ ಅವರ ಆಪ್ತರಿಂದ 4.8 ಕೋಟಿ ರೂ. ನಗದು ಸೀಝ್ ಮಾಡಲಾಗಿದ್ದು ಅವರ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಧರ್ಮದ ಹೆಸರಿನಲ್ಲಿ ಮತ ಕೇಳಿದ್ದಕ್ಕಾಗಿ ಕೇಸ್ ದಾಖಲಿಸಿರುವುದು ವರದಿಯಾಗಿದೆ. ತೇಜಸ್ವಿ ಸೂರ್ಯ ವೀಡಿಯೊವೊಂದರಲ್ಲಿ ರಾಮಮಂದಿರದ ಹೆಸರಿನಲ್ಲಿ ಮತ ಯಾಚಿಸಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಇದರೊಂದಿಗೆ ಬಿಜೆಪಿಗೆ ಹತ್ತು ವರ್ಷಗಳ ಆಡಳಿತದ ಬಳಿಕವೂ ಧರ್ಮ, ಹಿಂದೂ-ಮುಸ್ಲಿಮ್ ವಿಚಾರ ಬಿಟ್ಟು ಮತ ಕೇಳಲು ಬೇರೆ ವಿಚಾರವೇ ಇಲ್ಲ ಎಂಬುದು ಸಾಬೀತಾಗಿದೆ. ಒಂದು ಧರ್ಮದವರನ್ನು ಗುರಿ ಮಾಡಿ ಚುನಾವಣೆ ಗೆಲ್ಲುವುದು ಎಂಥ ದುರ್ದೆಸೆ ಅಲ್ಲವೆ?
ಸಂಸದರಾಗಿ ಇಂಥವರು ಏನೂ ಕೆಲಸ ಮಾಡದಿದ್ದರೂ ದ್ವೇಷದ ಬೆಂಕಿ ಹಚ್ಚುವಲ್ಲಿ ಯಾವತ್ತೂ ಹಿಂದೆ ಬಿದ್ದದ್ದಿಲ್ಲ.
ಹೀಗೆಯೇ ಚುನಾವಣೆ ಗೆಲ್ಲುವವರು ಜನರ ಸಮಸ್ಯೆಗಳತ್ತ ಗಮನ ಯಾಕೆ ಕೊಡುತ್ತಾರೆ?
ದೇವೇಗೌಡರಂತೂ ಕಾಂಗ್ರೆಸ್ ಅನ್ನು ಸೋಲಿಸುವುದಕ್ಕಾಗಿಯೇ ಬಿಜೆಪಿ ಜೊತೆ ಸೇರಿದ್ದೇವೆ ಎನ್ನುತ್ತಾ ಬಂದಿದ್ದಾರೆ. ಅವರು ಹೇಳುತ್ತಿರುವ ಪ್ರಕಾರ ಚುನಾವಣೆ ನಡೆದ ಎಲ್ಲಾ 14 ಸೀಟುಗಳನ್ನು ಮೈತ್ರಿ ಕೂಟವೇ ಗೆಲ್ಲಲಿದೆ.
ವಿಶ್ಲೇಷಣೆಗಳು ಹೇಳುವಂತೆ, ಕಳೆದ ಲೋಕಸಭೆ ಚುನಾವಣೆ ವೇಳೆ ಪುಲ್ವಾಮಾ ವಿಚಾರ ಮತದಾರರನ್ನು ಬಹಳ ಪ್ರಭಾವಿಸಿತ್ತು. ಆದರೆ ಈ ಬಾರಿ ಅಂಥ ಯಾವುದೇ ದೊಡ್ಡ ರಾಷ್ಟ್ರೀಯ ವಿಷಯ ಮತದಾರರ ಮುಂದೆ ಇಲ್ಲ ಎಂಬುದು ಸ್ಪಷ್ಟ.
ಕರ್ನಾಟಕದಲ್ಲಿ ಬಿಜೆಪಿಯಿಂದ ಈ ಬಾರಿ ಕಾಂಗ್ರೆಸ್ ನಿಜವಾಗಿಯೂ ಸ್ಥಾನಗಳನ್ನು ವಶಪಡಿಸಿಕೊಂಡೀತೇ ಎಂಬುದು ಪ್ರಶ್ನೆ. ಸಫಲವಾದರೆ ಬಿಜೆಪಿಯ ಎಷ್ಟು ಸೀಟುಗಳನ್ನು, ಜೆಡಿಎಸ್‌ನ ಎಷ್ಟು ಸೀಟುಗಳನ್ನು ತನ್ನದಾಗಿಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಯಿತು ಎಂಬುದನ್ನು ನೋಡಬೇಕಾಗುತ್ತದೆ.
ರಾಜಸ್ಥಾನದಲ್ಲಿಯ ಹಾಗೆ ಇಲ್ಲಿಯೂ ಕಾಂಗ್ರೆಸ್ ತನ್ನ ಅಸ್ತಿತ್ವ ತೋರಿಸಬೇಕಾದ ಅನಿವಾರ್ಯತೆ ಇದೆ.
ಕಾಂಗ್ರೆಸ್‌ನ ಐದು ಗ್ಯಾರಂಟಿ ಯೋಜನೆಗಳಿಂದ ಪ್ರಭಾವಿತರಾದ ರಾಜ್ಯದ ಜನತೆ ಕಾಂಗ್ರೆಸ್ ‘ಕೈ’ ಹಿಡಿದರೆ ಅದರ ಫಲ ಫಲಿತಾಂಶದಲ್ಲಿ ಕಾಣಬಹುದು.
ಕಳೆದ ಬಾರಿಯ ಬಿಜೆಪಿ ಯಶಸ್ಸಿನಲ್ಲಿ ಕರ್ನಾಟಕದಲ್ಲಿ ಬಿಜೆಪಿ ಗೆದ್ದಿದ್ದ ಸೀಟುಗಳ ಪಾಲಿನದ್ದು ಕೂಡ ದೊಡ್ಡ ಭಾಗವಾಗಿತ್ತು.
ಹಾಗಾಗಿಯೇ ಈ ಬಾರಿ ಇದು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಎದುರಿನ ಸವಾಲು ಮತ್ತು ಪ್ರತಿಷ್ಠೆಯ ಪ್ರಶ್ನೆಯೂ ಆಗಿದೆ.
ಬಿಜೆಪಿ ಬಳಿ ಸಾವಿರಾರು ಕೋಟಿ ದೇಣಿಗೆ ಹಣವಿದೆ. ಮಾನವ ಸಂಪನ್ಮೂಲ ಅಪಾರವಾಗಿದೆ. ತನಿಖಾ ಏಜನ್ಸಿಗಳ ತಾಕತ್ತು, ಮಡಿಲ ಮೀಡಿಯಾಗಳ ತುತ್ತೂರಿ ಎಲ್ಲವೂ ಬಿಜೆಪಿ ಪರವೇ ಇದೆ. ಆದರೂ ದಕ್ಷಿಣ ಕನ್ನಡ ಜಿಲ್ಲೆಯಂತಹ ಹಿಂದುತ್ವ ಭದ್ರಕೋಟೆಯಲ್ಲೂ ಈ ಬಾರಿ ಕಾಂಗ್ರೆಸ್ ಬಿಜೆಪಿಯ ಬೆವರಿಳಿಸಿದೆ. ಇಲ್ಲಿಂದ ಕಾಂಗ್ರೆಸ್ ಗೆದ್ದರೂ ಗೆಲ್ಲಬಹುದು ಎಂಬಂತಹ ವಾತಾವರಣ ಸೃಷ್ಟಿಯಾಗಿದೆ.
ಆದರೆ ಮೋದಿಯ 10 ವರ್ಷಗಳ ಆಡಳಿತದಲ್ಲೂ ಕೇರಳದಲ್ಲಿ ಬಿಜೆಪಿ ಇವತ್ತಿಗೂ ಗೆಲ್ಲಲು ಆಗಲಿಲ್ಲ.
ಕೇರಳದ ಎಲ್ಲ 20 ಸ್ಥಾನಗಳಿಗೆ ಮೊನ್ನೆ ಮತದಾನ ನಡೆದಿದೆ.
ಈ ಬಾರಿ ಕೇರಳದಲ್ಲಿ ಬಿಜೆಪಿ ಖಾತೆ ತೆರೆಯುವುದೇ ಎಂಬುದು ಮತ್ತೊಂದು ಕುತೂಹಲ.
ದೂರದರ್ಶನದಲ್ಲಿ ಕೇರಳ ಸ್ಟೋರಿಯನ್ನು ಎರಡೆರಡು ಬಾರಿ ಪ್ರಸಾರ ಮಾಡಲಾಗಿದೆ. ಬಿಜೆಪಿ ಗೆಲ್ಲಲು ಏನನ್ನೂ ಮಾಡೀತು ಎಂಬುದಕ್ಕೆ ಇದು ಸಾಕ್ಷಿ. ಒಂದು ಪ್ರಾಪಗಂಡಾ ಸಿನೆಮಾವನ್ನು ದೂರದರ್ಶನ ಬಳಸಿ ಎರಡೆರಡು ಸಲ ಪ್ರಸಾರ ಮಾಡಲೂ ಅದು ಹಿಂಜರಿಯುವುದಿಲ್ಲ ಎಂಬುದು ಅದರ ನಿರ್ಲಜ್ಜ ರಾಜಕಾರಣಕ್ಕೆ ಉದಾಹರಣೆ.
ತಮಿಳುನಾಡಿನಲ್ಲಿ ಕೂಡ ಬಿಜೆಪಿಗೆ ಖಾತೆ ತೆರೆಯುವ ಸವಾಲೇ ಇದೆ.
ತಮಿಳುನಾಡಿನಲ್ಲಿ ಬಿಜೆಪಿ ಆಟ ಏನಾಗಲಿದೆ? ಅಲ್ಲಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆದರೂ ಗೆಲ್ಲುತ್ತಾರೋ ಇಲ್ಲವೋ ಎಂಬುದಕ್ಕೆ ಜೂನ್ 4ರಂದು ಉತ್ತರ ಸಿಗಲಿದೆ.
ಕರ್ನಾಟಕದಲ್ಲಿಯೂ ಬಿಜೆಪಿ ಪಾಲಿಗೆ ಕಳೆದ ಸಲದಂತಹ ಫಲಿತಾಂಶ ಸಿಗದೆ ಹೋದರೆ, ದಕ್ಷಿಣ ರಾಜ್ಯಗಳು ಬಿಜೆಪಿಯನ್ನು ತಿರಸ್ಕರಿಸಿವೆ ಎಂಬುದಕ್ಕೆ ಸಾಕ್ಷಿಯಾಗಲಿದೆ.
ಇನ್ನು ಉತ್ತರ ಪ್ರದೇಶದಲ್ಲಿ 8 ಸ್ಥಾನಗಳಿಗೆ 2ನೇ ಹಂತದಲ್ಲಿ ಮತದಾನ ನಡೆದಿದೆ.
ಈ ದೇಶದಲ್ಲಿ ಏನೂ ಕೆಲಸ ಮಾಡದೆಯೂ ಚುನಾವಣೆ ಗೆಲ್ಲಬಹುದು ಮತ್ತು ತುಂಬಾ ಕೆಲಸ ಮಾಡಿಯೂ ಸೋತುಹೋಗಬಹುದು ಎಂಬುದಕ್ಕೆ ನಿದರ್ಶನಗಳು ಸಿಗುತ್ತಲೇ ಇವೆ. ಈ ದೇಶದ ರಾಜಕಾರಣದಲ್ಲಿ ಸೋಲು ಗೆಲುವಿನ ಫಾರ್ಮುಲಾ ನಿರ್ದಿಷ್ಟವಾದುದೇನೂ ಅಲ್ಲ.
ಯುಪಿಯಲ್ಲಿ ಹೇಮಾಮಾಲಿನಿ 10 ವರ್ಷಗಳಿಂದ ಸಂಸದೆಯಾಗಿರುವವರು. ಅವರ ಸಂದರ್ಶನವೇನೋ ಬರುತ್ತಿದೆ. ಆದರೆ ಅವರು ಮಾಡಿದ ಕೆಲಸವೇನೆಂಬುದು ಯಾರಿಗೂ ಗೊತ್ತಾಗುತ್ತಿಲ್ಲ. ಈ ಸಲವೂ ಹೇಮಾಮಾಲಿನಿ ಗೆದ್ದರೆ ಮೋದಿ ಅಲೆ ಎಂಬುದರ ಹೊರತಾದ ದೃಷ್ಟಿಕೋನದಿಂದಲೂ ಅದನ್ನು ನೋಡಬೇಕಾಗುತ್ತದೆ.
ಯುಪಿಯಲ್ಲಿ ಕಡಿಮೆ ಮತದಾನ ದಾಖಲಾದ ವರದಿಯಿದೆ. ಹಿಂದಿ ಭಾಷಿಕ ಪ್ರದೇಶಗಳಲ್ಲಿ ಯುವಕರನ್ನು ಮೋದಿ ಸರಕಾರ ಧರ್ಮದ ಅಮಲಿನಲ್ಲಿಯೇ ಮುಳುಗಿಸಿರುವ ಹಾಗಿದೆ.
ಯಾಕೆಂದರೆ ಅಲ್ಲಿ ಬಿಜೆಪಿಯ ರ್ಯಾಲಿಗಳಲ್ಲಿನ ಭಾಷಣಗಳನ್ನು ಕೇಳಿಸಿಕೊಂಡರೆ,
ಮೊದಲ ಸಾಲಿನಲ್ಲಿ ಮುಸ್ಲಿಮರ ವಿಚಾರ ಬರುತ್ತದೆ.
ಎರಡನೇ ಸಾಲಿನಲ್ಲಿ ಮಂದಿರದ ಪ್ರಸ್ತಾಪವಾಗುತ್ತದೆ.
ಮೂರನೇ ಸಾಲಿನಲ್ಲಿ ಮಾಫಿಯಾ ವಿಚಾರ ಬರುತ್ತದೆ.
ನಾಲ್ಕನೇ ಸಾಲಿನಲ್ಲಿ ಮಂಗಲಸೂತ್ರದ ಮಾತು ಬರುತ್ತದೆ.
ಐದನೇ ಸಾಲಿನಲ್ಲಿ ಲೌಡ್ ಸ್ಪೀಕರ್ ಬರುತ್ತದೆ.
ಆರನೇ ಸಾಲಿನಲ್ಲಿ ಬುಲ್ಡೋಜರ್ ಬರುತ್ತದೆ.
ಏಳನೇ ಸಾಲಿನಲ್ಲಿ ಮತ್ತೆ ಮಂದಿರ ಬರುತ್ತದೆ.
ಎಂಟನೇ ಸಾಲಿನಲ್ಲಿ ಮುಸ್ಲಿಮರ ವಿಚಾರ ಪುನರಾವರ್ತನೆ ಯಾಗುತ್ತದೆ.
ಆದರೆ ಎಲ್ಲೂ ನಿರುದ್ಯೋಗದ ವಿಚಾರ ಬರುವುದೇ ಇಲ್ಲ, ಶಿಕ್ಷಣದ ವಿಚಾರ ಬರುವುದಿಲ್ಲ. ಇದು ಬಿಜೆಪಿ ರಾಜಕೀಯದ ಕತೆ. ಮತ್ತದರ ಅಮಲಿನಲ್ಲಿ ಬಿದ್ದಿರುವವರ ಎದುರು ಇರುವ ಕತೆ.
ಇನ್ನು ಮಹಾರಾಷ್ಟ್ರದಲ್ಲಿ 8 ಸ್ಥಾನಗಳಿಗೆ ಮೊನ್ನೆ ಮತದಾನವಾಗಿದೆ. ಈ ಬಾರಿ ಎರಡು ಪಕ್ಷಗಳು ಎರಡು ಬಣಗಳಾಗಿ ಕಾದಾಡುತ್ತಿವೆ.
ಎನ್‌ಸಿಪಿ ಎರಡು ಹೋಳಾಗಿದೆ. ಶರದ್ ಪವಾರ್ ಎನ್‌ಸಿಪಿ ಮತ್ತು ಅಜಿತ್ ಪವಾರ್ ಎನ್‌ಸಿಪಿ.
ಶಿವಸೇನೆಯಲ್ಲಿಯೂ ಎರಡು ಬಣಗಳಾಗಿವೆ. ಶಿವಸೇನಾ ಉದ್ಧವ್ ಠಾಕ್ರೆ, ಶಿವಸೇನಾ ಶಿಂದೆ.
ವಿಶೇಷ ಅನ್ನಿ, ವಿಪರ್ಯಾಸ ಅನ್ನಿ, ಈ ಎರಡೂ ಪ್ರಮುಖ ಪ್ರಾದೇಶಿಕ ಪಕ್ಷಗಳನ್ನು ಒಡೆದು ಹಾಕಿದ್ದೂ ಇದೇ ಬಿಜೆಪಿ.
ತಮಾಷೆಯೆಂದರೆ ಬಿಜೆಪಿ ದೇಶದಲ್ಲಿ ಕನಿಷ್ಠ ಬೆಂಬಲ ಬೆಲೆ ಕಾನೂನು ಬದ್ಧತೆಗೆ ತಯಾರಿಲ್ಲ. ಆದರೆ ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರದ ಭಾಗವಾಗಿರುವ ಅಜಿತ್ ಪವಾರ್ ತಮ್ಮ ಪ್ರಣಾಳಿಕೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಕಾನೂನು ಖಾತ್ರಿಯ ಭರವಸೆ ನೀಡಿದ್ದಾರೆ.
ಇದನ್ನಾದರೂ ಎತ್ತಿಕೊಂಡು ಮಡಿಲ ಮೀಡಿಯಾಗಳು ಗಂಭೀರ ಚರ್ಚೆ ಮಾಡಿಯಾವು ಎಂದರೆ ಇಲ್ಲವೇ ಇಲ್ಲ.
ಮಹಾರಾಷ್ಟ್ರದಲ್ಲಿಯೂ ಮತದಾನ ಹೇಳಿಕೊಳ್ಳುವಷ್ಟು ಆಗಿಲ್ಲ.
ಪ.ಬಂಗಾಳದಲ್ಲಿ 3 ಸ್ಥಾನಗಳಿಗೆ 2ನೇ ಹಂತದಲ್ಲಿ ಮತದಾನವಾಗಿದೆ. ಕಳೆದ ಹಂತದಲ್ಲೂ 3 ಸ್ಥಾನಗಳಿಗೆ ಮತದಾನ ನಡೆದಿತ್ತು.
ಇದ್ಯಾವ ರೀತಿಯೊ ಗೊತ್ತಿಲ್ಲ. ಒಂದೊಂದು ಹಂತದಲ್ಲಿ ಒಂದು ದೊಡ್ಡ ರಾಜ್ಯದ ಮೂರೇ ಸ್ಥಾನಗಳಿಗೆ ಚುನಾವಣೆ ನಡೆಸಬೇಕಾದ ಅನಿವಾರ್ಯತೆ ಏನಿದೆಯೊ?
ಛತ್ತೀಸ್‌ಗಡದ ಮೂರು, ಜಮ್ಮು-ಕಾಶ್ಮೀರದ ಒಂದು, ಮಧ್ಯ ಪ್ರದೇಶದ ಆರು, ಮಣಿಪುರದ ಒಂದು, ತ್ರಿಪುರಾದ ಒಂದು ಕ್ಷೇತ್ರಗಳಿಗೂ ಮೊನ್ನೆ ಮತದಾನ ನಡೆದಿದೆ.
ಮತದಾನದ ಬಳಿಕ ಸಿಗುವ ಶೇಕಡಾವಾರು ಮತದಾನದ ವಿವರಗಳಿಂದ ಯಾರು ಗೆಲ್ಲುತ್ತಾರೆ ಮತ್ತು ಯಾರು ಸೋಲುತ್ತಾರೆ ಎಂದು ತೀರಾ ಅಂದಾಜು ಮಾಡಲು ಸಾಧ್ಯವಿಲ್ಲ.
ವಿವಿಧ ಮತಗಟ್ಟೆಗಳ ಡೇಟಾ, ಅಭ್ಯರ್ಥಿ ಮುನ್ನಡೆ ಸಾಧಿಸುತ್ತಿರುವುದು ಎಲ್ಲಿ ಎಂಬುದನ್ನಷ್ಟೇ ತೋರಿಸುತ್ತದೆ.
ಎರಡನೇ ಹಂತದ ಮತದಾನದಲ್ಲಿ ಯಾವ ಪಕ್ಷದ ನಾಯಕರ ಮಾತು ಯಾವ ಪರಿಣಾಮ ಬೀರಿದೆ ಎಂಬುದನ್ನು ನೋಡಬೇಕಾಗಿದೆ.
ಬಿಜೆಪಿಯವರಂತೂ ಹಿಂದೂ-ಮುಸ್ಲಿಮ್, ಮಂದಿರ, ಈಗ ಮಂಗಳಸೂತ್ರ ಇಂತಹ ವಿಚಾರವನ್ನೇ ತರುತ್ತಾ, ಗೆಲ್ಲುವ ಆಟಕ್ಕೆ ತಯಾರಿ ನಡೆಸುತ್ತಾರೆ.
ಆದರೆ ಮತದಾರ ತನಗೇನು ಬೇಕಾಗಿದೆ ಎಂಬುದನ್ನು ಯೋಚಿಸುವುದು ಅಗತ್ಯವಾಗಿದೆ.