ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟ್ಟ ಯಾರಿಗೆ ?
ಮಡಿಕೇರಿ: ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಅಧ್ಯಕ್ಷ ಪಟ್ಟ ಯಾರಿಗೆ ಒಲಿಯಲಿದೆ ಎಂಬುದು ಕುತೂಹಲವಾಗಿದೆ.
ಮುಡಾ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಅಂತಿಮ ಹಂತದ ಕಸರತ್ತು ನಡೆಸುತ್ತಿದ್ದು, ಆಪ್ತರ ಮೂಲಕ ಮಡಿಕೇರಿ ಕ್ಷೇತ್ರದ ಶಾಸಕರಿಗೆ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ.
ಬಹುತೇಕ ಅವಧಿಯಲ್ಲಿ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಜಿಲ್ಲಾಧಿಕಾರಿಯೇ ನಿರ್ವಹಿಸಿದ್ದಾರೆ. 2020ರಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಮುಡಾ ಅಧ್ಯಕ್ಷರಾಗಿ ಬಿಜೆಪಿ ಹಿರಿಯ ಮುಖಂಡ ರಮೇಶ್ ಹೊಳ್ಳ ಅವರನ್ನು ನೇಮಕ ಮಾಡಲಾಗಿತ್ತು. ನಂತರ 2022ರಲ್ಲಿ ರಾಜ್ಯದ ಎಲ್ಲ ನಗರಾಭಿವೃದ್ಧಿ ಪ್ರಾಧಿಕಾರಗಳ ನಾಮನಿರ್ದೇಶಿತ ಸ್ಥಾನವನ್ನು ಬಿಜೆಪಿ ಸರಕಾರ ರದ್ದುಗೊಳಿಸಿತ್ತು. ಇದೀಗ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ಮುಡಾ ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ ಎಂಬುದು ಕುತೂಹಲವಾಗಿವೆ.
ಅಧ್ಯಕ್ಷ ಸ್ಥಾನಕ್ಕೆ ಅಂತಿಮ ಹಂತದ ಕಸರತ್ತು!
ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕಾಗಿ ಮಡಿಕೇರಿ ನಗರದ ಪ್ರಮುಖ ಕಾಂಗ್ರೆಸ್ ನಾಯಕರು ಅಂತಿಮ ಹಂತದ ಕಸರತ್ತು ನಡೆಸುತ್ತಿದ್ದಾರೆ. ಲೋಕಸಭಾ ಚುನಾವಣೆ ಘೋಷಣೆಗೂ ಮುನ್ನ ಮುಡಾ ಅಧ್ಯಕ್ಷರ ನೇಮಕ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಕಳೆದ ನಗರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು, ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ನಾಯಕರ ಮಾತಿನಂತೆ ಬಿ.ಫಾರಮ್ ಹಿಂತಿರುಗಿಸಿದ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಜಿ. ಮೋಹನ್‌ಕುಮಾರ್, ಮಡಿಕೇರಿ ನಗರಸಭಾ ಸದಸ್ಯ ರಾಜೇಶ್ ಯಲ್ಲಪ್ಪ, ನಗರಸಭಾ ಮಾಜಿ ಉಪಾಧ್ಯಕ್ಷ ಟಿ.ಎಂ. ಅಯ್ಯಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುನೀರ್ ಅಹ್ಮದ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್ ಕುಮಾರ್, ಮಡಿಕೇರಿ ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಬ್ದುಲ್ ರಝಾಕ್, ಪ್ರಕಾಶ್ ಆಚಾರ್ಯ, ಕೆ.ನಿಡುಗಣೆ ಗ್ರಾಪಂ ಸದಸ್ಯ ಜಾನ್ಸನ್ ಪಿಂಟೋ ಮುಡಾ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ ಎನ್ನಲಾಗಿದೆ.
ಮುಡಾ ಮಾಜಿ ಅಧ್ಯಕ್ಷ ಎ.ಸಿ. ಚುಮ್ಮಿ ದೇವಯ್ಯ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಂ ನಂದಕುಮಾರ್ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಅಸಮಾಧಾನಿತ ಸಭೆಯಲ್ಲಿ ಮುಡಾ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದ ಪ್ರಮುಖರು ಅಧ್ಯಕ್ಷ ಸ್ಥಾನದ ರೇಸ್‌ನಿಂದ ಸರಿದಿದ್ದಾರೆ ಎಂದು ಬಹಿರಂಗವಾಗಿ ಸಭೆಯಲ್ಲಿ ಹೇಳಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಎ.ಜಿ. ಮೋಹನ್ ಕುಮಾರ್ ಮತ್ತು ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಮುಡಾ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗಿದೆ.
ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಎಂ.ಜಿ. ಮೋಹನ್‌ಕುಮಾರ್, ನಗರಸಭಾ ಸದಸ್ಯ ರಾಜೇಶ್ ಯಲ್ಲಪ್ಪ, ನಗರಸಭಾ ಮಾಜಿ ಉಪಾಧ್ಯಕ್ಷ ಟಿ.ಎಂ. ಈ ಮೂವರಲ್ಲಿ ಒಬ್ಬರಿಗೆ ಮುಡ ಅಧ್ಯಕ್ಷ ಪಟ್ಟ ಸಿಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಮುಡಾ ಅಧ್ಯಕ್ಷ ಸ್ಥಾನದ ಮೇಲೆ ಹಿರಿಯ ಮುಖಂಡರ ಕಣ್ಣು!
ಮಡಿಕೇರಿ ನಗರ, ಕಳಗೇರಿ ನಿಡುಗಣೆ, ಹೆಬ್ಬೆಟ್ಟಗೇರಿ, ಮಕ್ಕಂದೂರು, ಕರ್ಣಂಗೇರಿ, ಕಾಟಕೇರಿ,ಕಡಗಾದಳು,ಇಬ್ನಿವಳವಾಡಿ, ಮೇಕೇರಿ ಕೇಂದ್ರೀಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದ ಮೇಲೆ ಜಿಲ್ಲಾ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಣ್ಣಿಟ್ಟಿದ್ದರು. ಹಿರಿತನ,ಪಕ್ಷಕ್ಕಾಗಿ ದುಡಿರುವ ಸೇವೆಯನ್ನು ಪರಿಗಣಿಸಿ ಮುಡಾ ಅಧ್ಯಕ್ಷ ಸ್ಥಾನವನ್ನು ನೀಡಬೇಕೆಂದು ಒತ್ತಾಯ ಮಾಡಿದ್ದರು.
ಅವರ ನೇತೃತ್ವದಲ್ಲೇ ಇತ್ತೀಚೆಗೆ ಮಡಿಕೇರಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಅಸಮಾಧಾನಿತರ ಸಭೆಯೂ ನಡೆದಿತ್ತು. ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಜಿಲ್ಲಾ ಕಾಂಗ್ರೆಸ್ ಹಿರಿಯ ನಾಯಕರು ನಿಗಮ ಮಂಡಳಿ ಸಿಗಲ್ಲ ಎಂಬ ಮಾಹಿತಿ ಲಭ್ಯವಾಗುತ್ತಿದ್ದಂತೆ, ಜಿಲ್ಲಾ ಮಟ್ಟಕ್ಕೆ ಸೀಮಿತವಾಗಿರುವ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.
ಅಸಮಾಧಾನಿತರ ಸಭೆಯಲ್ಲಿ ಮಡಿಕೇರಿ ನಗರದವರಿಗೆ ಮಾತ್ರ ಮುಡಾ ಅಧ್ಯಕ್ಷ ಸ್ಥಾನ ನೀಡಬೇಕೆಂಬ ತೀರ್ಮಾನಕ್ಕೂ ಬರಲಾಗಿದೆ. ಕೆಲವರು ಎರಡ್ಮೂರು ವರ್ಷದ ಹಿಂದೆ ಪಕ್ಷಕ್ಕೆ ಬಂದವರಿಗೆ ಮುಡಾ ಅಧ್ಯಕ್ಷ ಸ್ಥಾನ ನೀಡಬಾರದೆಂದು ಶಾಸಕರಿಗೆ ಒತ್ತಡ ಹಾಕಬೇಕೆಂದು ಕೂಡ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಮಡಿಕೇರಿ ಮುಡ ಅಧ್ಯಕ್ಷ ಸ್ಥಾನ ಕೈ ತಪ್ಪುವ ಆಕಾಂಕ್ಷಿಗಳಿಗೆ ಮಡಿಕೇರಿ ನಗರಸಭೆ ನಾಮನಿರ್ದೇಶನ ಸದಸ್ಯ ಸ್ಥಾನ ನೀಡಿ ಸಮಾಧಾನಪಡಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಮುಡ ಅಧ್ಯಕ್ಷ ಸ್ಥಾನ ನನಗೆ ನೀಡುವ ವಿಶ್ವಾಸವಿದೆ. ಮಡಿಕೇರಿ ಕ್ಷೇತ್ರದ ಶಾಸಕರು ಯುವಕರಿಗೆ ಹೆಚ್ಚು ಆದ್ಯತೆ ನೀಡುವ ವಿಶ್ವಾಸವಿದೆ. ಕಳೆದ ಬಾರಿಯ ನಗರಸಭಾ ಚುನಾವಣೆಯಲ್ಲಿ ಪಕ್ಷದ ಸೂಚನೆಯಂತೆ ಬಿ.ಫಾರಮ್ ಹಿಂತಿರುಗಿಸಿ ನಾನು ಬೇರೆಯವರ ಸ್ಪರ್ಧೆಗೆ ಅವಕಾಶ ನೀಡಿದ್ದೆ. ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದೇನೆ.
- ವಿ.ಜಿ. ಮೋಹನ್ ಕುಮಾರ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ